Mysore
32
few clouds

Social Media

ಸೋಮವಾರ, 13 ಏಪ್ರಿಲ 2026
Light
Dark

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಕಾಂಗ್ರೆಸ್, ಬಿಜೆಪಿ ಪಾಳೆಯದಲ್ಲಿ ಮಿಶ್ರಭಾವನೆ ಹುಟ್ಟು ಹಾಕಿದ ಉಪಚುನಾವಣೆ

ಅಭ್ಯರ್ಥಿಗಳ ಗೆಲುವಿಗಾಗಿ ಸ್ವತಃ ಫೀಲ್ಡಿಗಿಳಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಯ ಪಾಳೆಯಗಳಲ್ಲಿ ಮಿಶ್ರಭಾವನೆಗಳನ್ನು ಹುಟ್ಟು ಹಾಕಿದೆ.

ಅಂದ ಹಾಗೆ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ ೯ರಂದು ನಡೆದ ಉಪಚುನಾವಣೆಯ ಗೆಲುವಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯ ಫ್ರಂಟ್ ಲೈನ್ ನಾಯಕರು ದೊಡ್ಡ ಮಟ್ಟದ ಹೋರಾಟ ನಡೆಸಿದ್ದು ನಿಜ.

ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೇ ತೆಗೆದುಕೊಳ್ಳಿ. ಈ ಉಪಚುನಾವಣೆಯ ಕಣದಲ್ಲಿ ಎಲ್ಲರ ಗಮನ ಸೆಳೆದ ಪ್ರಮುಖ ಕಾಂಗ್ರೆಸ್ ನಾಯಕರೆಂದರೆ ಸಿದ್ದರಾಮಯ್ಯನವರೇ. ಅವರು ತಮ್ಮ ಸ್ವಂತ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗಲೇ ಪದೇ ಪದೇ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋದವರಲ್ಲ. ಆದರೆ ಈ ಉಪಚುನಾವಣೆಯ ಕಣದಲ್ಲಿ ಸಿದ್ದರಾಮಯ್ಯನವರು ಪದೇ ಪದೇ ಕಾಣಿಸಿಕೊಂಡರು. ಬಾಗಲಕೋಟೆ ಕ್ಷೇತ್ರಕ್ಕೆ ಐದಾರು ಬಾರಿ ಭೇಟಿ ನೀಡಿ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರನ್ನು ಗೆಲ್ಲಿಸಲು ಸರ್ವ ಪ್ರಯತ್ನವನ್ನೂ ಮಾಡಿದರು. ದಾವಣಗೆರೆ ದಕ್ಷಿಣ ಕ್ಷೇತ್ರದ ವಿಷಯದಲ್ಲೂ ಅಷ್ಟೇ. ಹೀಗೆ ಎರಡೂ ಕ್ಷೇತ್ರಗಳ ಗೆಲುವಿಗಾಗಿ ಅವರು ಹಾಕಿದ ಶ್ರಮ ನಿಜಕ್ಕೂ ಗಮನ ಸೆಳೆಯುವಂತಹದ್ದು.

ಆದರೆ ಅವರೇಕೆ ಹೀಗೆ ಉಪಚುನಾವಣೆಯ ರಣಾಂಗಣದಲ್ಲಿ ಸರ್ವಪ್ರಯತ್ನಗಳನ್ನೂ ಮಾಡಿದರು ಎಂದು ನೋಡಿದರೆ ಕಾಂಗ್ರೆಸ್ ಪಾಳೆಯದಲ್ಲಿ ಕಾಣಿಸಿಕೊಂಡ ಸಂಶಯದ ವಾಸನೆ ಮೂಗಿಗೆ ರಾಚುತ್ತದೆ. ಅರ್ಥಾತ್, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವನ್ನು ಸ್ವತಃ ಕಾಂಗ್ರೆಸ್ ಪಕ್ಷದ ಹಲವು ನಾಯಕರೇ ಬಯಸಿಲ್ಲ.

ಹೀಗಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಸಮರ್ಥ್, ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಉಮೇಶ್ ಮೇಟಿ ಸೋಲನ್ನು ಬಯಸಿದ ಈ ನಾಯಕರು ಒಳಗಿಂದೊಳಗೆ ಪಕ್ಷದ ದುರ್ಬಲ ಜಾಗಗಳನ್ನು ಗುರುತಿಸಿ ಒಡೆಯಲು ಪ್ರಯತ್ನಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮರ ಮತ ಕೋಟೆ ಒಡೆಯಲಿ ಎಂದು ಇಂತಹ ನಾಯಕರೇ ಬಯಸಿದ್ದರು ಎಂಬುದು ರಹಸ್ಯವಲ್ಲ. ಯಾವಾಗ ಇದು ಗೊತ್ತಾಯಿತೋ ಆಗ ಬೇರೆಯವರನ್ನು ನಂಬುವ ಬದಲು ತಾವೇ ಫೀಲ್ಟಿಗೆ ದುಮುಕಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಣದಲ್ಲಿ ಬಂಡಾಯವಾಗಿ ಸ್ಪರ್ಧಿಸಿದ್ದ ಸಾದಿಕ್ ಪೈಲ್ವಾನ್ ಅವರ ಮನವೊಲಿಸಿ ತಟಸ್ಥರಾಗುವಂತೆ ಮಾಡಿದರು. ಒಂದು ವೇಳೆ ಸಾದಿಕ್ ಪೈಲ್ವಾನ್ ಅವರು ಸ್ಪರ್ಧಿಸಿದ್ದರೆ,ಅವರ ಜತೆಗೆ ಎಸ್.ಡಿ.ಪಿ.ಐ. ನ ಅಪ್ಸರ್ ಮತ್ತು ಪಕ್ಷೇತರ ಮುಸ್ಲಿಮ್ ಅಭ್ಯರ್ಥಿಗಳ ಪೈಕಿ ಖಾದರ್ ಆದಿಲ್ ಪಾಷಾ ಅವರು ಸೇರಿ ಮುಸ್ಲಿಂ ಮತಬ್ಯಾಂಕಿನ ಶೇಕಡಾ ಅರವತ್ತರಷ್ಟು ಮತಗಳನ್ನಾದರೂ ಸೆಳೆದು ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣರಾಗುತ್ತಿದ್ದರು.

ಆದರೆ ಯಾವಾಗ ಸಿದ್ದರಾಮಯ್ಯನವರು ಫೀಲ್ಡಿಗೆ ದುಮುಕಿ ಸಾದಿಕ್ ಪೈಲ್ವಾನ್ ಅವರು ತಟಸ್ಥರಾಗುವಂತೆ ಮಾಡಿದರೋ ಮತ್ತು ಬಾಗಲಕೋಟೆಯಲ್ಲಿ ಅಹಿಂದ ವರ್ಗಗಳ ಮತಗಳು ಒಡೆದು ಹೋಗದಂತೆ ತಡೆದರೋ ಆಗ ಕಾಂಗ್ರೆಸ್ ಪಕ್ಷ ಎದುರಾಳಿ ಬಿಜೆಪಿಯ ವಿರುದ್ಧ ಹೋರಾಡುವ ಸ್ಥಿತಿಗೆ ಬಂತು.

ಹೀಗೆ ಎರಡು ವಿಧಾನಸಭಾ ಕ್ಷೇತ್ರಗಳ ಗೆಲುವಿಗಾಗಿ ತಾವು ಮಾಡಿದ ಪ್ರಯತ್ನ ಯಶಸ್ವಿಯಾಗುತ್ತದೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನಂಬಿಕೆ. ಆದರೆ ಕಾಂಗ್ರೆಸ್ ಪಾಳೆಯದಲ್ಲಿರುವ ಕೆಲ ನಾಯಕರು ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿದಾನಸಭಾ ಕ್ಷೇತ್ರಗಳಲ್ಲಿ ತಾವು ಹಾಕಿದ ಅಡ್ಡೇಟು ವರ್ಕ್ ಔಟ್ ಆಗಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುತ್ತಾರೆ ಎಂದು ನಂಬಿಕೊಂಡಿದ್ದಾರೆ. ಹೀಗೆ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದರೆ ಸಿದ್ದರಾಮಯ್ಯನವರ ನಾಯಕತ್ವದ ವಿರುದ್ಧ ದಿಲ್ಲಿಯಲ್ಲಿ ಧ್ವನಿ ಎತ್ತಬಹುದು ಎಂಬುದು ಇವರ ನಂಬಿಕೆ. ಅರ್ಥಾತ್, ಉಪಚುನಾವಣೆಯ ನಂತರ ಕಾಂಗ್ರೆಸ್ ಪಾಳೆಯದಲ್ಲಿ ಮಿಶ್ರ ಲೆಕ್ಕಾಚಾರಗಳ ಪಾರುಪತ್ಯ ಹೆಚ್ಚಾಗಿ ಫಲಿತಾಂಶದ ಬಗ್ಗೆ ಕುತೂಹಲದಿಂದ ನಿರೀಕ್ಷೆ ಮಾಡುವಂತೆ ಆಗಿದೆ. ಇದು ಕಾಂಗ್ರೆಸ್ ಪಾಳೆಯದ ಕತೆಯಾದರೆ ಪ್ರತಿಪಕ್ಷ ಬಿಜೆಪಿ ಪಾಳೆಯದ ಕತೆಯೂ ಹೀಗೇ ಇದೆ. ಅಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಖಾಡಾಖಾಡಿ ಹೋರಾಟ ನಡೆಸಿದೆ. ಸ್ವತಃ ವಿಜಯೇಂದ್ರ ಅವರು ತಮ್ಮೆಲ್ಲ ಶಕ್ತಿಯನ್ನು ಬಳಸಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಕಣದಲ್ಲಿ ಕೆಲಸ ಮಾಡಿದ್ದಾರೆ.

ಹೀಗೆ ಕೆಲಸ ಮಾಡಿದರೆ, ಪಕ್ಷ ಗಮನಾರ್ಹ ಸಾಧನೆ ಮಾಡಿದರೆ ಭವಿಷ್ಯದಲ್ಲಿ ಅಧಿಕಾರಕ್ಕೆ ಬರುವ ದಾರಿ ಸುಗಮವಾಗುತ್ತದೆ ಎಂಬ ಅವರ ಲೆಕ್ಕಾಚಾರ ಅಸಹಜವೇನಲ್ಲ. ಹೀಗಾಗಿ ಅವರು ತಮ್ಮೆಲ್ಲ ಸಾಮರ್ಥ್ಯವನ್ನು ಕ್ರೋಢೀಕರಿಸಿಕೊಂಡು ಉಭಯ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈಗಿನ ಸ್ಥಿತಿಯಲ್ಲಿ ಅವರ ಲೆಕ್ಕಾಚಾರದ ಪ್ರಕಾರ, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳೆರೆಡರಲ್ಲೂ ಬಿಜೆಪಿ ಗೆಲುವು ಗಳಿಸುತ್ತದೆ. ಹೀಗೆ ಅವರು ಲೆಕ್ಕ ಹಾಕಲು ಅವರು ಚುನಾವಣಾ ರಣರಂಗದಲ್ಲಿ ಹೋರಾಡಿದ ರೀತಿಯೇ ಕಾರಣ.

ಹಾಗೆ ನೋಡಿದರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್ ಪಡೆದ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿರೋಧಿ ಬಣದಲ್ಲಿರುವ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಬಣದವರು. ಇಷ್ಟಾದರೂ ವಿಜಯೇಂದ್ರ ಅವರು ತಮ್ಮ ತಂತ್ರಗಾರಿಕೆಯ ಅನುಭವದಿಂದ ಕಾಂಗ್ರೆಸ್ ಮತಗಳನ್ನು ಒಡೆದು ಹಾಕಲು ಸರ್ವಪ್ರಯತ್ನಗಳನ್ನೂ ಮಾಡಿದರು. ಅವರು ಅಂದುಕೊಂಡಂತೆ ಆಗಿದ್ದರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಅಸಾಧ್ಯದ ಕೆಲಸವಲ್ಲ.

ಇದೇ ರೀತಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ವಿಷಯದಲ್ಲೂ ಅಷ್ಟೇ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ವಿಜಯೇಂದ್ರ ಅವರು ಹಾಕಿದ ಪ್ರಯತ್ನ ಯಶಸ್ವಿಯಾದರೆ ಬಿಜೆಪಿಯ ಅಭ್ಯರ್ಥಿ ವೀರಣ್ಣ ಚರಂತಿಮಠ್ ಅವರು ಗೆಲ್ಲುವುದು ಅಸಹಜವೇನಲ್ಲ. ಆದರೆ ಇಷ್ಟಾದರೂ ವಿಜಯೇಂದ್ರ ಅವರಿಗೆ ಕಾಡುತ್ತಿರುವ ಸಣ್ಣ ಅನುಮಾನವೆಂದರೆ ತಮ್ಮ ಪಕ್ಷದ ಕೆಲ ನಾಯಕರು ಮಾಡಿದ ಕೆಲಸ ತಮ್ಮ ಪಕ್ಷದ ಗೆಲುವಿಗೆ ಅಡ್ಡಿಯಾಗಬಹುದೇ ಎಂಬುದು.

ಉದಾಹರಣೆಗೆ ನೋಡಬೇಕು ಎಂದರೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಪ್ಲಸ್ ಅಹಿಂದ ಮತಗಳನ್ನು ಕ್ರೋಢೀಕರಿಸಲು ವಿಜಯೇಂದ್ರ ಪ್ರಯತ್ನಿಸಿದರಲ್ಲ ಅವರು ಅಂತಹ ಪ್ರಯತ್ನ ನಡೆಸಿದ ಕಾಲದಲ್ಲೇ ಬಿಜೆಪಿಯ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮಾಜಿ ಸಚಿವ ಸಿ.ಸಿ.ಪಾಟೀಲ್ ಅವರು ಲಿಂಗಾಯತ ಒಳಪಂಗಡಗಳ ಸಭೆ ನಡೆಸಿದ ರೀತಿ ವಿಜಯೇಂದ್ರ ಅವರ ಅನುಮಾನಕ್ಕೆ ಕಾರಣವಾಗಿದೆ. ಏಕೆಂದರೆ ಕ್ಷೇತ್ರದಲ್ಲಿ ಒಂದು ಸಮುದಾಯದ ಮತಗಳನ್ನು ಒಗ್ಗೂಡಿಸುವ ಯತ್ನ ಕಣ್ಣಿಗೆ ಕಾಣುವಂತೆ ನಡೆದರೆ ಉಳಿದ ಜಾತಿಗಳ ಮತದಾರರು ಬಿಜೆಪಿಯ ವಿರುದ್ಧ ಮುನಿಸಿಕೊಳ್ಳುತ್ತಾರೆ. ಅಂತಹ ಮುನಿಸು ಕೆಲಸ ಮಾಡಿದ್ದರೆ ಗತಿ ಏನು? ಎಂಬುದು ವಿಜಯೇಂದ್ರ ಅವರ ಶಂಕೆ.

ಇದೇ ರೀತಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮರ ಮತಗಳು ವಿಭಜನೆಯಾಗಿ ಬಿಜೆಪಿ ಗೆಲುವಿಗೆ ಏನು ಮಾಡಬೇಕಿತ್ತೋ ಅದನ್ನು ವಿಜಯೇಂದ್ರ ಅವರು ಮಾಡಿದ್ದರು.ಆದರೆ ಅಲ್ಲಿಯೂ ಬಿಜೆಪಿಯ ವಿಜಯೇಂದ್ರ ವಿರೋಧಿಗಳು ಪಕ್ಷದ ಅಭ್ಯರ್ಥಿಗೆ ಸೋಲುಣಿಸಲು ಏನೆಲ್ಲ ಪ್ರಯತ್ನ ಬೇಕೋ ಅದೆಲ್ಲವನ್ನೂ ಮಾಡಿದ್ದಾರೆ. ಹೀಗಾಗಿ ಉಪಚುನಾವಣೆಯಲ್ಲಿ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಗೆಲುವು ಗ್ಯಾರಂಟಿ ಎಂದು ಭಾವಿಸಿದ್ದರೂ ವಿಜಯೇಂದ್ರ ಅವರಿಗೆ ಪಕ್ಷದಲ್ಲಿರುವ ತಮ್ಮ ವಿರೋಧಿಗಳ ಕೈಚಳಕದ ಬಗ್ಗೆ ಅನುಮಾನ ಉಳಿದೇ ಇದೆ. ಹೀಗೆ ಉಪಚುನಾವಣೆ ಎಂಬುದು ಕಾಂಗ್ರೆಸ್ ಮತ್ತು ಬಿಜೆಪಿ ಪಾಳೆಯಗಳೆರಡರಲ್ಲೂ ಒಳಏಟಿನ ಬಗ್ಗೆ ಚರ್ಚೆ ನಡೆಯುತ್ತದೆ. ಮುಂದೇನಾಗುತ್ತದೋ ನೋಡಬೇಕು.

” ಈ ಉಪಚುನಾವಣೆಯ ಕಣದಲ್ಲಿ ಎಲ್ಲರ ಗಮನ ಸೆಳೆದ ಪ್ರಮುಖ ಕಾಂಗ್ರೆಸ್ ನಾಯಕರೆಂದರೆ ಸಿದ್ದರಾಮಯ್ಯನವರೇ. ಅವರು ತಮ್ಮ ಸ್ವಂತ ಕ್ಷೇತ್ರದಲ್ಲಿ ಸ್ಪಽಸಿದಾಗಲೇ ಪದೇ ಪದೇ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋದವರಲ್ಲ. ಆದರೆ ಈ ಉಪಚುನಾವಣೆಯ ಕಣದಲ್ಲಿ ಸಿದ್ದರಾಮಯ್ಯನವರು ಪದೇ ಪದೇ ಕಾಣಿಸಿಕೊಂಡರು.”

 

 

Tags:
error: Content is protected !!