Mysore
31
few clouds

Social Media

ಸೋಮವಾರ, 02 ಮಾರ್ಚ್ 2026
Light
Dark

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಬಿಜೆಪಿ-ಜಾ.ದಳ ಪಾಳೆಯಗಳಿಗೆ  ಹರ್ಷ ತಂದಿರುವ ರಾಜ್ಯ ರಾಜಕಾರಣ

Leadership Change: Setback for D.K. Shivakumar

ಜಾ.ದಳ ಸಮಾವೇಶ, ಯಡಿಯೂರೋತ್ಸವದ ಮೂಲಕ ಮತದಾರರ ಗಮನ ಸೆಳೆಯಲು ಯತ್ನ

ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಬಿಜೆಪಿ-ಜಾ.ದಳ ಪಾಳೆಯಗಳಿಗೆ ಹರ್ಷ ತಂದಿರುವುದು ಸಹಜ.

ಅಂದ ಹಾಗೆ ಈ ಬೆಳವಣಿಗೆಗಳು ಆಡಳಿತಾರೂಢ ಕಾಂಗ್ರೆಸ್ ಪಾಳೆಯಕ್ಕೆ ಸಂಬಂಧಿಸಿದ್ದು ಎಂಬುದು ರಹಸ್ಯವಲ್ಲ. ೨೦೨೩ರ ಮೇ ೨೦ರಂದು ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎಂಬ ರಥವನ್ನು ಮುನ್ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಸಾಹಸ ನಡೆಸಿದರೆಂಬುದೇನೋ ನಿಜ.ಆದರೆ ಅವರು ಯಾವಾಗ ರಥ ಎಳೆಯಲು ಆರಂಭಿಸಿದರೋ?ಅಲ್ಲಿಂದಲೇ ಆ ರಥದ ದಾರಿಗೆ ಅಡ್ಡಲಾಗಿ ಕಲ್ಲುಗಳನ್ನಿಡುವ ಕೆಲಸ ಆರಂಭವಾಯಿತು. ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆ ಎಂಬುದು ಇಂತಹ ಕಲ್ಲುಗಳ ಪೈಕಿ ಗಟ್ಟಿಯಾದುದು.

ಒಂದು ವೇಳೆ ಮುಖ್ಯಮಂತ್ರಿ ಹುದ್ದೆಯ ಅವಧಿಯನ್ನು ಇಬ್ಬರ ನಡುವೆ ಹಂಚುವುದೇ ಆಗಿದ್ದರೆ ಅದು ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರ ಉಪಸ್ಥಿತಿಯಲ್ಲಿ  ಆಗಬೇಕಿತ್ತು. ಎರಡನೆಯದಾಗಿ ಹೀಗೆ ಮಾಡುವ ಒಪ್ಪಂದದ ಬಗ್ಗೆ ಸಾರ್ವಜನಿಕ ಚರ್ಚೆ ಆಗದಂತೆ ನೋಡಿಕೊಳ್ಳುವ ಮುನ್ನೆಚ್ಚರಿಕೆ ಬೇಕಿತ್ತು. ಅದರೆ ಇಂತಹ ನಿಯಮಗಳನ್ನು ಪಾಲಿಸುವ ಬದಲು ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳಿತ ಕೆಲವೇ ದಿನಗಳಲ್ಲಿ ಅಧಿಕಾರ ಹಂಚಿಕೆಯ ಒಪ್ಪಂದದ ವಿಷಯವನ್ನು ಜನತಾ ನ್ಯಾಯಾಲಯಕ್ಕೆ ತಂದು ಬಿಡಲಾಯಿತು.

ಯಾವಾಗ ಈ ವಿಷಯ ಜನತಾ ನ್ಯಾಯಾಲಯಕ್ಕೆ ಬಂತೋ ಇದಾದ ನಂತರ ನಿರಂತರವಾಗಿ ಇದರ ಪರ ಮತ್ತು ವಿರೋಧವಾಗಿ ವಾದಿಸುವವರು ಎದ್ದು ನಿಂತರು. ಹೀಗೆ ಒಂದು ವಿಷಯವನ್ನು ಹಿಡಿದುಕೊಂಡು ಇಬ್ಬರು ಕಕ್ಷಿದಾರರ ಪರವಾಗಿ,  ವಾದ-ಪ್ರತಿವಾದ ಆರಂಭವಾದಾಗ ಕಾಂಗ್ರೆಸ್ ಹೈಕಮಾಂಡ್ ಕಕ್ಕಾಬಿಕ್ಕಿಯಾಯಿತು. ಅಷ್ಟೇ ಅಲ್ಲ,ಈ ಕುರಿತು ಯಾರೂ ವಾದ-ಪ್ರತಿವಾದಗಳಲ್ಲಿ ತೊಡಗಬಾರದು ಎಂದು ಎಚ್ಚರಿಕೆ ನೀಡಿತು.  ಆದರೆ ಅದರ ಎಚ್ಚರಿಕೆ ಕೂಡ ಒಂದು ಪ್ರತಿಕೂಲ ವಾತಾವರಣದ ಸೃಷ್ಟಿಗೆ ಕಾರಣವಾಯಿತು.

ಏಕೆಂದರೆ ಅಧಿಕಾರ ಹಂಚಿಕೆ ಆಗಿದೆ ಎಂದವರಿಗೆ ಮಾತ್ರವಲ್ಲ, ಆಗಿಲ್ಲ ಎಂದು ಪ್ರತಿಪಾದಿಸುವವರಿಗೂ ಬಾಯಿ ಮುಚ್ಚಿಕೊಂಡಿರಲು ವರಿಷ್ಠರು ಸೂಚಿಸಿದ ಮೇಲೆ ಏನೋ ಒಪ್ಪಂದವಾಗಿರಬೇಕು.ಅದಕ್ಕಾಗಿ  ವರಿಷ್ಠರು ಇಂತಹ ಸಂದೇಶ ನೀಡುತ್ತಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಒಂದು ಗೊಂದಲ ಶುರುವಾಯಿತು.

ಈ ಗೊಂದಲ ನೇರವಾಗಿ ಪರಿಣಾಮ ಬೀರಿದ್ದು ಆಡಳಿತ ಯಂತ್ರದ ಮೇಲೆ. ಗೊಂದಲದ ವಾತಾವರಣ ಇದ್ದಾಗ ಆಡಳಿತ ಯಂತ್ರಕ್ಕೆ ಬಹುಬೇಗ ಮಂದಗತಿ ಪ್ರಾಪ್ತವಾಗುತ್ತದೆ. ಏಕೆಂದರೆ ಆ ಯಂತ್ರಕ್ಕೆ ಕೀಲೆಣ್ಣೆ ಹಾಕುವವರು ಸ್ಥಿರವಾಗಿರುತ್ತಾರೋ ಇಲ್ಲವೋ ಎಂಬ ಜಿಜ್ಞಾಸೆ.  ಪರಿಣಾಮ ಕಳೆದ ಎರಡೂವರೆ ವರ್ಷಗಳಲ್ಲಿ ಆಡಳಿತ ಯಂತ್ರದ ವೇಗ ಎಷ್ಟಿರಬೇಕಿತ್ತು ಅಂತ ಸಿದ್ದರಾಮಯ್ಯ ಬಯಸಿದ್ದರೋ ಅಷ್ಟು ವೇಗ ಆದಕ್ಕೆ ದಕ್ಕಲಿಲ್ಲ.

ಇವತ್ತು ಈ ವಿಷಯದಲ್ಲಿ ಸಿದ್ದರಾಮಯ್ಯ ಅವರಿಗೆ ಎಷ್ಟು ಅಸಮಾಧಾನ ಇದೆ ಎಂದರೆ ತಮ್ಮ ಸರ್ಕಾರದ ನಡೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದಾ ಅಡ್ಡಗಾಲು ಹಾಕುತ್ತಲೇ ಬಂದರು.  ಹೀಗಿರುವಾಗ ನಾನೇಕೆ ಅವರಿಗೆ ಅಧಿಕಾರ ಬಿಟ್ಟುಕೊಡಬೇಕು? ಎಂಬ ಹಠ ಬಂದಿದೆ. ಅದೇ ರೀತಿ ಎಲ್ಲವನ್ನೂ ಬುಲ್ಡೋಕ್ ಮಾಡುವ ಅವರ ಧಾಟಿ ಹಲವು ಸಚಿವರು, ಶಾಸಕರಲ್ಲಿ ಮೂಡಿಸಿರುವ ಅತಂಕವೂ ಸಿದ್ದರಾಮಯ್ಯ ಅವರ ಮನಸ್ಸನ್ನು ಕಾಡುತ್ತಿದೆ.  ಹಾಗಂತ ಅವರೇನೂ ಅಧಿಕಾರಕ್ಕೆ ಅಂಟಿಕೊಂಡು ಕೂರಲು ಬಯಸಿಲ್ಲ. ರಾಹುಲ್ ಗಾಂಧಿಯವರು ತಮ್ಮನ್ನು ದಿಲ್ಲಿಗೆ ಕರೆಸಿ: ‘ಸಿದ್ದರಾಮಯ್ಯಾಜೀ ಪಕ್ಷ ನಿಮ್ಮಿಂದ ಒಂದು ತ್ಯಾಗವನ್ನು ಬಯಸಿದೆ. ನೀವು ಸಹಕಾರ ನೀಡಿ.  ಅಧಿಕಾರ ಬಿಟ್ಟುಕೊಡಿ’ ಎಂದರೆ ಸಾಕು. ತಕ್ಷಣವೇ ಸಿದ್ದರಾಮಯ್ಯ ಅಧಿಕಾರ ತ್ಯಾಗಕ್ಕೆ ಸಿದ್ದರಾಗುತ್ತಾರೆ.ಅದರೆ ಈ ಹಂತದಲ್ಲಿ ಅವರು ಒಂದೇ ಒಂದು ಬೇಡಿಕೆಯನ್ನು ಮುಂದಿಡುತ್ತಾರೆ. ತಾವು ಅಧಿಕಾರದಿಂದ ಇಳಿದ ನಂತರ ಪರ್ಯಾಯ ನಾಯಕನ ಆಯ್ಕೆ ಶಾಸಕಾಂಗ ಪಕ್ಷದಲ್ಲೇ ನಡೆಯಬೇಕು ಎಂಬುದು ಅವರ ಬೇಡಿಕೆ.

ಈ ಬೇಡಿಕೆಗೆ ಒಪ್ಪಿಗೆ ಸಿಕ್ಕರೆ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಪರ್ಯಾಯ ನಾಯಕನ ಅಯ್ಕೆಗೆ ವೇದಿಕೆ ಸಜ್ಜಾಗುತ್ತದೆ. ಪರ್ಯಾಯ ನಾಯಕನ ಹುದ್ದೆಗೆ ನಡೆಯುವ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಎದುರಾಗಿ ಗೃಹ ಸಚಿವರಾದ   ಜಿ.ಪರಮೇಶ್ವರ್ ಇಲ್ಲವೇ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸ್ಪರ್ಧಿಸುತ್ತಾರೆ. ಅರ್ಥಾತ್ ಸಿದ್ದರಾಮಯ್ಯ ಅವರ ಬಣದ ಪ್ರತಿನಿಧಿಗಳಾಗಿ ಈ ಇಬ್ಬರ ಪೈಕಿ ಒಬ್ಬರು ಸ್ಪರ್ಧಿಸುತ್ತಾರೆ. ಅಂದ ಹಾಗೆ ಇವರಲ್ಲಿ   ಜಿ.ಪರಮೇಶ್ವರ್ ಅವರು ಉಪಮುಖ್ಯಮಂತ್ರಿಗಳಾಗಿ,  ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಇನ್ನು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪನವರು ಹಲವು ಬಾರಿ ಮಂತ್ರಿಗಳಾದವರು.

ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ನ್ಯಾಯದ ರಥವನ್ನು ಎಳೆಯಲು ಅತ್ಯಂತ ಶಕ್ತರಾದವರು. ಇವತ್ತು ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿಯುವವರಿಗೆ ಇರಬೇಕಾದ ಮುಖ್ಯ ಶಕ್ತಿಯೇ ಇದು. ಈ ವಿಷಯ ಬಂದಾಗ ಇವತ್ತು ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯದ ರಥ ಎಳೆಯುವ ಶಕ್ತಿಯಲ್ಲಿ ಮಹದೇಪ್ಪನವರೇ ಪವರ್ ಪುಲ್ ನಾಯಕ. ಇವತ್ತು ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಹೋರಾಟಗಳಿಗೆ ಕಸುವು ತುಂಬುತ್ತಾ,  ಆ ಹೋರಾಟದ ದೊಂದಿಗಳು ಜೀವಂತವಾಗಿರುವಂತೆ ನೋಡಿಕೊಂಡ ಅಗ್ರಗಣ್ಯ ನಾಯಕರು ಅಂತಿದ್ದರೆ ನಿಸ್ಸಂಶಯವಾಗಿ ಅದು ಎಚ್.ಸಿ.ಮಹದೇವಪ್ಪ.ಹೀಗಾಗಿ ಸಿದ್ದರಾಮಯ್ಯ ಅವರ ನಂತರ ಸಿಎಂ ಹುದ್ದೆಯ ರೇಸಿಗೆ ಮಹದೇವಪ್ಪನವರು ಅತ್ಯುತ್ತಮ ಆಯ್ಕೆ  ಎಂಬ ಭಾವನೆ  ಸಿದ್ದರಾಮಯ್ಯ ಅವರ ಪಾಳೆಯದಲ್ಲಿದೆ.

ಹೀಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಸ್ಪರ್ಧೆ  ಆಗುವುದೇ ಆದರೆ ಸಿದ್ದರಾಮಯ್ಯ ಅವರು ಈ ಇಬ್ಬರು ನಾಯಕರಲ್ಲಿ ಒಬ್ಬರನ್ನು   ಕಣಕ್ಕಿಳಿಸುತ್ತಾರೆ. ಅದರೆ  ಸಿದ್ದರಾಮಯ್ಯ ಅವರ ಮಾತನ್ನು ರಾಹುಲ್ ಗಾಂಧಿ ಒಪ್ಪದೆ ಇದ್ದರೆ ಡಿ.ಕೆ.ಶಿವಕುಮಾರ್ ಅವರನ್ನು ಹೊರತುಪಡಿಸಿ ಬೇರೊಬ್ಬರನ್ನು ಹೈಕಮಾಂಡೇ ಆಯ್ಕೆ ಮಾಡಲಿ ಅಂತ ಸಿದ್ದರಾಮಯ್ಯ ಹೇಳುತ್ತಾರೆ.  ಆಗ ದಲಿತ ನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಾದರೂ ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಲಿ ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ. ಇತ್ತೀಚೆಗೆ ದೆಹಲಿಗೆ ಹೋಗಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ನಿಯೋಗ ಈಗಾಗಲೇ ಅಂಶವನ್ನೇ ಸೂಚ್ಯವಾಗಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಹೇಳಿದೆ.

ಮೂಲಗಳ ಪ್ರಕಾರ, ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೇರುವ ಬಯಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಇದೆ. ಆದರೆ ಅವರನ್ನು ಎಐಸಿಸಿ ಪಟ್ಟದಿಂದ ಬಿಟ್ಟುಕೊಡಲು ಸೋನಿಯಾ  ಗಾಂಽ ಅವರಿಗೆ ಇಷ್ಟವಿಲ್ಲ. ಕಾರಣ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದ ರಾಜಕಾರಣಕ್ಕೆ ಮರಳಿದರೆ ಎಐಸಿಸಿ ಪಟ್ಟದ ಮೇಲೆ ಯಾರನ್ನು ತಂದು ಕೂರಿಸಬೇಕು? ಎಂಬ ಯೋಚನೆ.

ಅಂದ ಹಾಗೆ ಖರ್ಗೆಯವರು ಎಐಸಿಸಿ  ಪಟ್ಟದಿಂದ ಕೆಳಗಿಳಿದರೆ ಅ ಜಾಗಕ್ಕೆ  ಪ್ರಿಯಾಂಕಾಗಾಂಧಿಯವರನ್ನು ತಂದು ಕೂರಿಸಲು ಗಾಂಧಿ ಕುಟುಂಬದ ಪರವಾಗಿರುವ ನಾಯಕರು ಅತುರದಿಂದ ಇದ್ದಾರೆ.  ಆದರೆ ಸೋನಿಯಾ  ಗಾಂಧಿಯವರಿಗೆ ಅದು ಇಷ್ಟವಿಲ್ಲ.  ಮೊದಲನೆಯದಾಗಿ ದಲಿತ ನಾಯಕರೊಬ್ಬರು ಅವಧಿಗಿಂತ ಮುಂಚೆ ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು ಎಂಬ ಭಾವನೆ ಹರಡುವುದು ಅವರಿಗೆ ಬೇಕಿಲ್ಲ.  ಎರಡನೆಯದಾಗಿ ತಮ್ಮ ಪುತ್ರಿಯೇ ಈ ಜಾಗಕ್ಕೆ ಬಂದು ಕುಳಿತರೆ ತಗಲು  ಕುಟುಂಬ ರಾಜಕಾರಣದ ಹಣೆಪಟ್ಟಿಯೂ ಅವರಿಗೆ ಬೇಕಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರ ಬೇಡಿಕೆಯ ಪೈಕಿ ಯಾವುದು ಈಡೇರುತ್ತದೆ  ಎಂಬುದು ಖಚಿತವಾಗುತ್ತಿಲ್ಲ. ಆದರೆ ಏನೇ ಆಗಲಿ ಸಿದ್ದರಾಮಯ್ಯ ಅವರು ಮಾತ್ರ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡಲು ತಯಾರಿಲ್ಲ.

ಗಮನಿಸಬೇಕಾದ ಸಂಗತಿ ಎಂದರೆ ಇದನ್ನೆಲ್ಲ ಬಲ್ಲ ರಾಹುಲ್  ಗಾಂಧಿ ಅವರು ಜೂನ್ ತಿಂಗಳ ತನಕ ಅಧಿಕಾರ ಹಂಚಿಕೆ ಎಂಬ ಕೇಸನ್ನು ವಿಚಾರಣೆಗೆತ್ತಿಕೊಳ್ಳಲು ತಯಾರಿಲ್ಲ. ಪರಿಣಾಮ ಅಽಕಾರ ಹಂಚಿಕೆಯ ಕೇಸಿಗೆ ಸಂಬಂಧಿಸುದಂತೆ ವಿಚಾರಣೆಯ ದಿನಾಂಕಗಳು ಮುಂದೆ ಹೋಗುತ್ತಲೇ ಇವೆ. ಆ ಮೂಲಕ ರಾಜ್ಯದ ಜನರ ಮನಸ್ಸಿನಲ್ಲಿ ಮೂಡಿದ ಗೊಂದಲ ಬಿಜೆಪಿ-ಜಾ.ದಳ ಪಾಳೆಯಗಳಿಗೆ ಹರ್ಷ ತಂದಿದೆ. ಅಷ್ಟೇ ಅಲ್ಲ, ಇದರ ಲಾಭವನ್ನು ಪಡೆಯಲು ಅವೂ ಜನತಾ ನ್ಯಾಯಾಲಯದ ಮೆಟ್ಟಿಲು ಹತ್ತಿವೆ. ಇವತ್ತು ಗರಿಗೆದರಿ ಕುಳಿತಿರುವ ಬಿಜೆಪಿ ಚಿತ್ರದುರ್ಗದಲ್ಲಿ ಯಡಿಯೂರೋತ್ಸವ ಮಾಡಲು ಅಣಿಯಾಗುತ್ತಿರುವುದು  ಇದೇ ಕಾರಣಕ್ಕಾಗಿ.

ಈ ಹಿಂದೆ ಪ್ರತಿಪಕ್ಷದ ಸ್ಥಾನದಲ್ಲಿದ್ದಾಗ ಕಾಂಗ್ರೆಸ್ ಪಕ್ಷ ದಾವಣಗೆರೆಯಲ್ಲಿ ಅದ್ಧೂರಿಯಾಗಿ ಸಿದ್ದರಾಮೋತ್ಸವ ಕಾರ್ಯಕ್ರಮ ನಡೆಸಿತ್ತು. ಸಿದ್ದರಾಮಯ್ಯ ಅವರಿಗೆ ಎಪ್ಪತ್ತೆ ದು ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ಈ ಸಿದ್ದರಾಮೋತ್ಸವ ಕಾಂಗ್ರೆಸ್ ಪಕ್ಷಕ್ಕೆ ಯಾವ ಮಟ್ಟಿನ ಚೈತನ್ಯ ನೀಡಿತ್ತು ಎಂದರೆ ಅವತ್ತಿನಿಂದಲೇ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರ ಗಿಟ್ಟಿಸಿಕೊಳ್ಳಲು ದೊಡ್ಡ ಹೆಜ್ಜೆ ಹಾಕಿತ್ತು. ಇವತ್ತು ಯಡಿಯೂರೋತ್ಸವಕ್ಕೆ ಕೈಹಾಕಿರುವ ಬಿಜೆಪಿ ಉದ್ದೇಶವೂ ಇದೇ ಆಗಿದೆ.ಇನ್ನು ಪಕ್ಷಕ್ಕೆ ಇಪ್ಪತ್ತೆ ದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಜಾ.ದಳ ಪಕ್ಷ ಫೆಬ್ರವರಿ ೨೭ರಂದು ಬಿಜಾಪುರದಲ್ಲಿ ನಡೆಸಿದ ಸಮಾವೇಶ ಕೂಡ ಅದ್ಭುತ ಯಶಸ್ಸು ಕಂಡಿತು. ಕೈ ಪಾಳೆಯದ ಗೊಂದಲಗಳು ಬಿಜೆಪಿ-ಜಾ.ದಳ ಪಾಳೆಯಗಳಿಗೆ ಎಷ್ಟು ಶಕ್ತಿ ತುಂಬಿವೆ ಅನ್ನುವುದಕ್ಕೆ ಇನ್ನೇನು ನಿದರ್ಶನ ಬೇಕು?

” ಅಧಿಕಾರ ಹಂಚಿಕೆಯ ಕೇಸಿಗೆ  ಸಂಬಂಧಿಸಿದಂತೆ ವಿಚಾರಣೆಯ ದಿನಾಂಕಗಳು ಮುಂದೆ ಹೋಗುತ್ತಲೇ ಇವೆ.  ಆ ಮೂಲಕ ರಾಜ್ಯದ ಜನರ ಮನಸ್ಸಿನಲ್ಲಿ ಮೂಡಿದ ಗೊಂದಲ ಬಿಜೆಪಿ-ಜಾ.ದಳ ಪಾಳೆಯಗಳಿಗೆ ಹರ್ಷ ತಂದಿದೆ.”

 

 

Tags:
error: Content is protected !!