Mysore
15
overcast clouds

Social Media

ಗುರುವಾರ, 08 ಜನವರಿ 2026
Light
Dark

ಬಿಸಿಲ ಧಗೆಯಿಂದ ರಕ್ಷಿಸಿಕೊಳ್ಳಿ

         ಡಾ.ಟಿ.ರವಿಕುಮಾರ್

ಬೇಸಿಗೆ ಆರಂಭವಾಗಿದ್ದು, ತಾಪಮಾನ ಏರಿಕೆಯಾಗುತ್ತಿದೆ. ಅದರಲ್ಲಿಯೂ ಇತ್ತೀಚೆಗೆ ಬಿದ್ದ ಒಂದೆರಡು ಮಳೆಯು ಭೂಮಿಯ ತಾಪಮಾನವನ್ನು ಮತ್ತಷ್ಟು ಏರಿಕೆ ಮಾಡಿದ್ದು, ಮಕ್ಕಳು, ವಯೋವೃದ್ಧರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಈ ಬಿರು ಬೇಸಿಗೆಯ ಬಿಸಿಯಾದ ಗಾಳಿ ಅಥವಾ ಶಾಖ ತರಂಗಗಳಿಂದ ಹಿರಿಯ ನಾಗರಿಕರು ತಮ್ಮನ್ನು ರಕ್ಷಿಸಿಕೊಳ್ಳಬೇಕಾದರೆ ಒಂದಿಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಅಗತ್ಯವಾಗಿದೆ.

ಅತಿಯಾದ ಉಷ್ಣತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು: ಸಾಮಾನ್ಯವಾಗಿ ಮನುಷ್ಯನ ದೇಹದ ಉಷ್ಣತೆ 36.4 ಡಿಗ್ರಿಯಿಂದ 37.2 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ಒಳಗಿನ ಹಾಗೂ ಹೊರಗಿನ ಪ್ರದೇಶದಲ್ಲಿ ಇದಕ್ಕೂ ಮಿಗಿಲಾದ ಉಷ್ಣಾಂಶ ಹೆಚ್ಚಾದರೆ ಉಷ್ಣತೆಯ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅತಿಯಾದ ಉಷ್ಣತೆಯಿಂದಾಗಿ ಸಾಧಾರಣದಿಂದ ತೀವ್ರ ಜ್ವರ, ಊತಗಳು, (ಕೈ-ಕಾಲುಗಳು ಹಾಗೂ ಮೊಣಕಾಲುಗಳು) ಸೆಳೆತ, ಪ್ರಜ್ಞೆ ತಪ್ಪುವುದು, ಸುಸ್ತಾಗುವುದು ಹಾಗೂ ಪಾರ್ಶ್ವವಾಯು ಉಂಟಾಗಬಹುದು. ಜತೆಗೆ ಹೃದ್ರೋಗ ಸಮಸ್ಯೆಗಳು, ಉಸಿರಾಟದ ಸಮಸ್ಯೆಗಳು ಹಾಗೂ ಕಿಡ್ನಿ ಸಮಸ್ಯೆಗಳು ಅಧಿಕವಾಗುತ್ತದೆ. ಇವುಗಳಿಂದ ವಾಕರಿಕೆ ಅಥವಾ ವಾಂತಿಯಾಗುವುದು, ತಲೆನೋವು, ಅತಿಯಾದ ಬಾಯಾರಿಕೆ, ಮೂತ್ರ ವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಹಾಗೂ ಹಳದಿ ಬಣ್ಣದ ಮೂತ್ರ, ಏರುಗತಿಯ ಉಸಿರಾಟ ಹಾಗೂ ಹೃದಯ ಬಡಿತ ಉಂಟಾಗಬಹುದು.

ಇಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆಯು ಸಾರ್ವಜನಿಕರ ಹಿತ ಕಾಯುವುದಕ್ಕಾಗಿಯೇ ವಿಶೇಷ ರೀತಿಯಲ್ಲಿ ಸನ್ನದ್ಧವಾಗಿದೆ. ವಯಸ್ಕರಾಗಲಿ, ಮಕ್ಕಳಾಗಲಿ, ಹಿರಿಯ ನಾಗರಿಕರಾಗಲಿ ಯಾವುದೇ ವಯಸ್ಸಿನವರಲ್ಲಿ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ತುರ್ತು ಸಹಾಯವಾಣಿ 108 ಅಥವಾ 102ಗೆ ಕರೆ ಮಾಡಿ ಆರೋಗ್ಯ ಸೇವೆ ಪಡೆಯಬಹುದು.

 

ಮುನ್ನೆಚ್ಚರಿಕೆ ಕ್ರಮಗಳು

ಹೆಚ್ಚು ನೀರು ಕುಡಿಯಬೇಕು
ಬೇಸಿಗೆಯ ಸಂದರ್ಭದಲ್ಲಿ ಬಾಯಾರಿಕೆ ಇಲ್ಲದಿದ್ದರೂ ಆಗಾಗ್ಗೆ ಹೆಚ್ಚು ನೀರನ್ನು ಕುಡಿಯುತ್ತಿರಬೇಕು. ಪ್ರಯಾಣ ಮಾಡುವಾಗಲೂ ನೀರನ್ನು ಜತೆಗೆ ತೆಗೆದುಕೊಂಡು ಹೋಗುವುದು ಉತ್ತಮ. ಇದರೊಂದಿಗೆ ಮಧ್ಯಾಹ್ನದ ವೇಳೆ ಓಆರ್‌ಎಸ್, ಮನೆಯಲ್ಲಿಯೇ ಸಿದ್ಧಪಡಿಸಿದ ನಿಂಬೆಹಣ್ಣಿನ ಶರಬತ್ತು, ಮಜ್ಜಿಗೆ /ಲಸಿ, ಹಣ್ಣಿನ ರಸಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸಬೇಕು. ಆಗಾಗ್ಗೆ ನೀರಿನ ಅಂಶವನ್ನು ಹೊಂದಿರುವ ಕಲ್ಲಂಗಡಿ, ಕರಬೂಜ, ಕಿತ್ತಲೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ಲಟೂಸ್, ಎಳನೀರನ್ನು ಹೆಚ್ಚಾಗಿ ಸೇವಿಸಬೇಕು.

ಶರೀರವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು

ಹಿರಿಯರ ದೇಹ ಹೆಚ್ಚು ಶಾಖವನ್ನು ತಡೆದುಕೊಳ್ಳುವುದಿಲ್ಲ. ಹಾಗಾಗಿ ಬೇಸಿಗೆಯ ಸಂದರ್ಭದಲ್ಲಿ ತಿಳಿ ಬಣ್ಣದ ಆಳಕವಾದ (ಲೂಸ್ ಫಿಟ್ಟಿಂಗ್) ಹತ್ತಿಯ ಬಟ್ಟೆಗಳನ್ನು ಧರಿಸುವುದು ಉತ್ತಮ. ಜತೆಗೆ ಬಿಸಿಲಿನಲ್ಲಿ ಹೊರ ಹೋಗುವಾಗ ಛತ್ರಿ, ಟೋಪಿ, ಟವೆಲ್ ಮೂಲಕ ದೇಹದ ರಕ್ಷಣೆ ಮಾಡಿಕೊಳ್ಳಬೇಕು.

ಹವಾಮಾನದ ಬಗ್ಗೆ ಎಚ್ಚರಿಕೆ ಇರಲಿ
ಈ ಬೇಸಿಗೆಯ ಸಂದರ್ಭದಲ್ಲಿಯೂ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು, ಇಂತಹ ಮಳೆ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆದ್ದರಿಂದ ವಿವಿಧ ಮಾಧ್ಯಮಗಳ ಮೂಲಕ ಹವಾ ಮಾನದ ಮಾಹಿತಿ ತಿಳಿದುಕೊಂಡು ಅದರಂತೆ ಚಟುವಟಿಕೆಗಳನ್ನು ಯೋಜಿಸುವುದು ಉತ್ತಮ.

ಸಾಧ್ಯವಾದಷ್ಟು ಮನೆಯ ಒಳಾಂಗಣದಲ್ಲಿರಬೇಕು
ಹಿರಿಯ ನಾಗರಿಕರು ಉತ್ತಮ ಗಾಳಿ, ಬೆಳಕು ಹಾಗೂ ತಣ್ಣಗಿನ ವಾತಾವರಣದಲ್ಲಿರಬೇಕು. ನೇರವಾಗಿ ಸೂರ್ಯನ ಬೆಳಕು ಹಾಗೂ ಬಿಸಿ ಗಾಳಿಯು ಮನೆಯ ಒಳಗೆ ಬರದಂತೆ ತಡೆಯಲು ಹಗಲು ಹೊತ್ತಿನಲ್ಲಿ ಕಿಟಕಿಗಳನ್ನು ಪರದೆಗಳಿಂದ ಮುಚ್ಚಬೇಕು. ತಣ್ಣನೆಯ ಗಾಳಿಯ ಸಂಚಾರಕ್ಕೆ ಅನುಕೂಲವಾಗುವಂತೆ ರಾತ್ರಿಯ ಹೊತ್ತು ಕಿಟಕಿಗಳನ್ನು ತೆರೆದಿಡಬೇಕು. ಹೊರಗಿನ ಚಟುವಟಿಕೆಗಳನ್ನು ಆದಷ್ಟು ಬೆಳಗಿನ ಸಮಯದಲ್ಲಿಯೇ ಮುಗಿಸುವ ಪ್ರಯತ್ನ ಮಾಡಬೇಕು. 11 ಗಂಟೆಯ ನಂತರ ಮನೆಯ
ಲ್ಲಿಯೇ ವಿಶ್ರಾಂತಿ ಪಡೆಯುವುದು ಒಳ್ಳೆಯದು.

ಆರೋಗ್ಯ ಸಮಸ್ಯೆಗೆ ತುರ್ತು ಸಹಾಯವಾಣಿ : 108, 102

(ಲೇಖಕರು ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕು ಆರೋಗ್ಯಾಧಿಕಾರಿಗಳಾಗಿದ್ದಾರೆ.)

Tags:
error: Content is protected !!