Mysore
21
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಪ್ರೊ.ಆರ್.ಎಂ.ಚಿಂತಾಮಣಿ ಅವರ ವಾರದ ಅಂಕಣ: ಸಮರ್ಥ ಕಾಯ್ದೆ ಪಾಲನಾ ವ್ಯವಸ್ಥೆ ಮುಖ್ಯ

ಪ್ರೊ.ಆರ್.ಎಂ.ಚಿಂತಾಮಣಿ

ನುರಿತ ಹಣಕಾಸು ಆಡಳಿತಗಾರ ಮತ್ತು ದೇಶದ ಹಣಕಾಸು ಮತ್ತು ಬಂಡವಾಳ ಪೇಟೆಗಳ ಬೆಳವಣಿಗೆ ಮತ್ತು ನಿಯಂತ್ರಣದ ಉನ್ನತಾಧಿಕಾರವುಳ್ಳ ಭಾರತೀಯ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜಸ್ ಬೋರ್ಡಿನ (Securities and Exchanges Board of India -ಸೆಬಿ) ಹಿಂದಿನ ಅಧ್ಯಕ್ಷರಾದ ಅಜಯ್ ತ್ಯಾಗಿಯವರು ‘ಬಿಜಿನೆಸ್ ಸ್ಟ್ಯಾಂಡರ್ಡ್’ ಆರ್ಥಿಕ ದೈನಿಕದಲ್ಲಿ (೮-೧-೨೦೨೬) ಒಂದು ಲೇಖನ ’’Enforcement: Real Reformʼ  ಬರೆದಿದ್ದಾರೆ. ಹೊಸ ಕಾನೂನುಗಳು ಮತ್ತು ನಿಯಮಗಳನ್ನು ಜಾರಿಗೆ ತರುತ್ತ ಹೋಗುವ ಬದಲು ಇರುವ ಕಾನೂನುಗಳ ಪಾಲನೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು ನಿಜವಾದ ಸುಧಾರಣೆ ಎನಿಸುತ್ತದೆ ಎನ್ನುವುದು ಈ ಲೇಖನದ ಸಾರಾಂಶ.

ನಮ್ಮಂತಹ ತೀವ್ರವಾಗಿ ಬೆಳೆಯುತ್ತಿರುವ ಅಭಿವೃದ್ಧಿಶೀಲ ದೇಶದಲ್ಲಿ ಸರ್ಕಾರದ ಇಂಥ ಸ್ವಾಯತ್ತ ಸಂಸ್ಥೆಗಳು ಎರಡು ರೀತಿಯ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಒಂದು ಅಭಿವೃದ್ಧಿ ಕಾರ್ಯಗಳಾದರೆ ಇನ್ನೊಂದು  ದಿನ ನಿತ್ಯದ ಆಡಳಿತ, ಕಾಯ್ದೆ ಪಾಲನೆ, ಮೇಲುಸ್ತುವಾರಿ, ಪರಿವೀಕ್ಷಣೆ (Inspection), ತಪ್ಪುಗಳನ್ನು ಕಂಡು ಹಿಡಿದು ತಿದ್ದುವುದು ಮತ್ತು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು. ಅಭಿವೃದ್ಧಿ ಕಾರ್ಯಗಳು ಸಮಾಜದ ಕಣ್ಣಿಗೆ ಕಾಣಸಿಗುತ್ತವೆ ಮತ್ತು ಹೆಚ್ಚಿನ ಪ್ರಚಾರ ದೊರೆತು ಆಡಳಿತಗಾರರಿಗೆ ಉತ್ತಮ ಹೆಸರು ಬರುವಂತಾಗುತ್ತದೆ. ಇದರಿಂದ ಇನ್ನೊಂದು ಗುಂಪಿನ ಮಹತ್ವದ ಕಾರ್ಯಗಳಿಗಾಗಿ ಹೆಚ್ಚಿನ ಆದ್ಯತೆ ಕೊಡದೆ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ತಪ್ಪುಗಳಾಗಿದ್ದರೆ ಅವುಗಳನ್ನು ಕಂಡು ಹಿಡಿದು ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸ ಸಮರ್ಪಕವಾಗಿ ನಡೆಯದೇ ಇರಬಹುದು. ಈ ಸಮಸ್ಯೆ ಇಂಥ ಸ್ವಾಯತ್ತ ಸಂಸ್ಥೆಗಳಲ್ಲದೆ ಸರ್ಕಾರ ಮತ್ತು ಸಮಾಜದ ಇತರ ಚಟುವಟಿಕೆಗಳಲ್ಲೂ ಇರುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗದಿದ್ದರೆ ಅಥವಾ ತಡವಾದರೆ ಇತರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ.

ನ್ಯಾಯ ತಡವಾದರೂ ನ್ಯಾಯ ಸಿಗದೇ ಇರುವಷ್ಟೇ(ಅನ್ಯಾಯ ವಾದಷ್ಟೇ) ಕೆಟ್ಟ ಪರಿಣಾಮಗಳಾಗುತ್ತವೆ. ನ್ಯಾಯ ನಿರ್ಣಯ ಸೂಕ್ತ ಸಮಯದಲ್ಲಿಯೇ ಆಗಬೇಕು. ಅಂದರೆ ಅನ್ಯಾಯಕ್ಕೊಳಗಾದವರಿಗೆ ಸಮಾಧಾನ ದೊರೆತು ಅಪರಾಧ ಎಸಗಿದವರಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂಬ ಸಂದೇಶ ಸಮಾಜಕ್ಕೆ ಹೋಗುತ್ತದೆ. ಮುಂದೆ ಯಾರೂ ಇಂಥ ತಪ್ಪು ಅಥವಾ ಅಪರಾಧ ಮಾಡಲಾರರು. ಆದರೆ ನಮ್ಮಲ್ಲಿ ನಿರ್ಣಯ ಆಗದೇ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಗಾಬರಿಯಾಗುವಂತಿದೆ. ತ್ಯಾಗಿಯವರೇ ಹೇಳುವಂತೆ ನಮ್ಮ ಉಚ್ಚ ನ್ಯಾಯಾಲಯಗಳಲ್ಲಿ ೫೦೦ಕ್ಕೂ ಹೆಚ್ಚು ಪ್ರಕರಣಗಳು ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ೮೫೦ ಪ್ರಕರಣಗಳು ನ್ಯಾಯ ನಿರ್ಣಯಕ್ಕಾಗಿ ಕಾಯುತ್ತಿವೆ.

ಇವುಗಳಲ್ಲಿ ಅನುಕ್ರಮವಾಗಿ ೩೦೦ ಮತ್ತು ೬೦೦ ಪ್ರಕರಣಗಳು ಮೂರು ವರ್ಷಗಳಿಗಿಂತ ಹೆಚ್ಚು ಹಳೆಯವು. ಇವುಗಳಲ್ಲದೆ ಸೆಕ್ಯುರಿಟೀಸ್ ಅಪಿಲೆಟ್ ಟ್ರಿಬ್ಯೂನಲ್ ನ್ಯಾಯ ಪೀಠದಲ್ಲಿ ೨೦೨೫ರ ಕೊನೆಯ ಹೊತ್ತಿಗೆ ೪೫೦ ಕ್ಕೂ ಹೆಚ್ಚು ಪ್ರಕರಣಗಳು ನ್ಯಾಯಕ್ಕಾಗಿ ಕಾಯುತ್ತಿರುವುದು ವರದಿಯಾಗಿದೆ. ಇವೆಲ್ಲ ಹಣಕಾಸು ಪೇಟೆಗಳು ಮತ್ತು ಬಂಡವಾಳ ಪೇಟೆಗಳಿಗೆ ಸಂಬಂಧಿಸಿವೆ. ‘ಸೆಬಿ’ಯಂತಹ ಸ್ವಾಯತ್ತ ಅಭಿವೃದ್ಧಿ ಮತ್ತು ನಿಯಂತ್ರಣ ಸಂಸ್ಥೆಗಳಿಗೆ ಹಣಕಾಸು ಮತ್ತು ಮಾನವ ಸಂಪನ್ಮೂಲಗಳ ಕೊರತೆಯೂ ಕಾಡುತ್ತಿದೆ ಎಂದೂತ್ಯಾಗಿ ಹೇಳುತ್ತಾರೆ. ಇದರಿಂದಾಗಿ ಈ ಸಂಸ್ಥೆಗಳು ತಮ್ಮ ವಿಶಾಲವಾದ ವ್ಯಾಪ್ತಿಯುಳ್ಳ ಎಲ್ಲ ಕರ್ತವ್ಯಗಳ ಕಡೆಗೆ ಪೂರ್ಣ ಪ್ರಮಾಣದಲ್ಲಿ ಗಮನ ಹರಿಸುವುದು ಕಷ್ಟವಾಗುತ್ತದೆ. ತಪ್ಪು ಮಾಡಿದವರ ಮೇಲೆ ಕೈಗೊಳ್ಳುವ ಕ್ರಮಗಳು ನಿಧಾನವಾಗಿ ಪೂರ್ಣ ಪ್ರಮಾಣದಲ್ಲಿ ಪರಿಣಾಮ ಕಾಣಲಿಕ್ಕಿಲ್ಲ, ಅಥವಾ ತಡವಾಗಬಹುದು.

ಅಂತರಂಗಿಗಳ ಖರೀದಿ, ಮಾರಾಟ ಒಳಗಿನವರು(ಅಂತರಂಗಿಗಳು) ಎಂದರೆ ಅಲ್ಪಾವಧಿ ಹಣಕಾಸು ಮತ್ತು ಶೇರು ಹಾಗೂ ಸಾಲ ಪತ್ರಗಳ ಪೇಟೆಗಳಲ್ಲಿ ಖರೀದಿ ಮತ್ತು ಮಾರಾಟ ಮಾಡುವವರು ಸಂಬಂಧಪಟ್ಟ ಕಂಪೆನಿಗಳ ಸೂಕ್ಷ್ಮ ಮಹತ್ವದ ಮಾಹಿತಿ ಹೊಂದಿರುವವರು ಎಂದರ್ಥ. ಇದು ಒಂದು ಮಾರುಕಟ್ಟೆ ಅಪರಾಧ. ಇದನ್ನು ಸಿವಿಲ್ ಮತ್ತು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಬೆಲೆ ಸೂಕ್ಷ್ಮ ಮಾಹಿತಿಯನ್ನು ಕಂಪೆನಿಯ ಆಯಕಟ್ಟಿನ ಸ್ಥಾನಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ನೌಕರರು ಹೊಂದಿರುತ್ತಾರೆ. ಇಂಥವರು ಆಯಾ ಕಂಪೆನಿಗಳ ಶೇರು ಮತ್ತು ಸಾಲ ಪತ್ರಗಳ ಖರೀದಿ ಮತ್ತು ಮಾರಾಟ ಮಾಡಿದರೆ ಅವರು ಅಂತಹವರು ಅಂತರಂಗಿ ವ್ಯವಹಾರಿಗಳಾಗುತ್ತಾರೆ (Inside Traders). ಇದನ್ನು ನಿಷೇಧಿಸಲಾಗಿದೆ. ಏಕೆಂದರೆ ಇಂಥವರಿಗೆ ಪೇಟೆಯಲ್ಲಿಯ ಬೆಲೆಗಳು ಏರಬಹುದಾದ ಅಥವಾ ಇಳಿಯಬಹುದಾದ ಸೂಕ್ಷ್ಮ ಮಾಹಿತಿ ಗೊತ್ತಿರುತ್ತದೆ. ಇವರು ಇದರ ದುರ್ಲಾಭ ಪಡೆಯಲು ಖರೀದಿ ಮತ್ತು ಮಾರಾಟ ಮಾಡಿ ಬೆಲೆಗಳ ಮೇಲೆ ಪರಿಣಾಮ ಬೀರುತ್ತಾರೆ. ಇದು ನಿಯಮಗಳಿಗೆ ವಿರುದ್ಧ. ತ್ಯಾಗಿಯವರೇ ಹೇಳುವಂತೆ ಇಲ್ಲಿಯವರೆಗೆ ಸಾಕಷ್ಟು ಈ ಅಪರಾಧ ಪ್ರಕರಣಗಳು ದಾಖಲಾಗಿದ್ದರೂ ಯಾರಿಗೂ ದಂಡವಾಗಲೀ, ಶಿಕ್ಷೆಯಾಗಲೀ ಆಗಿಲ್ಲ. ಹೀಗಾಗಿ ಪೇಟೆಗಳಲ್ಲಿ ಇಂತಹ ಅಪರಾಧಗಳು ನಡೆಯುತ್ತಲೇ ಇರುತ್ತವೆ.

ಇದನ್ನು ತಪ್ಪಿಸಲು ಕಾಯ್ದೆ ಪಾಲನೆಯು ಕಟ್ಟುನಿಟ್ಟಾಗಿ ನಡೆಯುವಂತೆ ಎಲ್ಲ ದಿಕ್ಕುಗಳಿಂದಲೂ ನಡೆಯಬೇಕು. ಅಪರಾಧಿಗಳು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಲು ಅವಕಾಶ ಇರಬಾರದು. ಸರ್ಕಾರ ಎಲ್ಲ ವಲಯಗಳಲ್ಲಿಯ ಸ್ವಾಯತ್ತ ಸಂಸ್ಥೆಗಳಿಗೆ ಸಾಕಷ್ಟು ಹಣಕಾಸು ಒದಗಿಸುವುದಲ್ಲದೇ ಸೂಕ್ತ ತರಬೇತಿ ಹೊಂದಿದ ಮಾನವ ಸಂಪನ್ಮೂಲವನ್ನೂ ಒದಗಿಸಬೇಕು. ರಾಜಕೀಯ ಹಸ್ತಕ್ಷೇಪ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮತ್ತು ವಿಳಂಬ ನೀತಿಯಂತಹ ಅವ್ಯವಹಾರಗಳು ಇರಬಾರದು. ಆಗ ಆರ್ಥಿಕ ಸುಧಾರಣೆ ತಾನಾಗಿ ಆಗುತ್ತದೆ.

ಸರ್ಕಾರವು ಬದಲಾವಣೆಯ ಹೆಸರಿನಲ್ಲಿ ಇರುವ ಕಾಯಿದೆಗಳನ್ನು ಮತ್ತು ಯೋಜನೆ/ ಕಾರ್ಯಕ್ರಮಗಳನ್ನು ಬದಲಿಸಿ ಹೊಸ ಹೆಸರಿನಲ್ಲಿ ಮತ್ತು ಹೊಸ ರೂಪದಲ್ಲಿ ತರುವುದರಿಂದ ವೆಚ್ಚಗಳು ಹೆಚ್ಚಾಗುತ್ತವೆಯೇ ಹೊರತು ನೈಜ ಸುಧಾರಣೆಯಾಗಲಾರದು. ಬದಲಾಗಿ ಇರುವ ಕಾಯ್ದೆ ಮತ್ತು ಯೋಜನೆಗಳಲ್ಲಿಯ ಲೋಪದೋಷಗಳನ್ನು ತಿದ್ದಿ ಮತ್ತಷ್ಟು ಕಾರ್ಯಯೋಗ್ಯ ಮಾಡಿದರೆ ಅದೇ ದೊಡ್ಡ ಆರ್ಥಿಕ ಸುಧಾರಣೆಯಾಗಿ ಯಶಸ್ವಿಯಾಗುತ್ತದೆ.

” ಸೆಬಿಯಂತಹ ಸ್ವಾಯತ್ತ ಅಭಿವೃದ್ಧಿ ಮತ್ತು ನಿಯಂತ್ರಣ ಸಂಸ್ಥೆಗಳಿಗೆ ಹಣಕಾಸು ಮತ್ತು ಮಾನವ ಸಂಪನ್ಮೂಲಗಳ ಕೊರತೆಯೂ ಕಾಡುತ್ತಿದೆ. ಇದರಿಂದಾಗಿ ಈ ಸಂಸ್ಥೆಗಳು ತಮ್ಮ ವಿಶಾಲವಾದ ವ್ಯಾಪ್ತಿಯುಳ್ಳ ಎಲ್ಲ ಕರ್ತವ್ಯಗಳ ಕಡೆಗೆ ಪೂರ್ಣ ಪ್ರಮಾಣದಲ್ಲಿ ಗಮನ ಹರಿಸುವುದು ಕಷ್ಟವಾಗುತ್ತದೆ.”

Tags:
error: Content is protected !!