ಸಾರ್ವಜನಿಕ ಪ್ರಜ್ಞೆ ಕಳೆದುಕೊಂಡ ಮಾಧ್ಯಮಗಳು ಪ್ರಜಾತಂತ್ರವನ್ನು ಶಿಥಿಲಗೊಳಿಸುತ್ತವೆ.
ನಾ.ದಿವಾಕರ
ಕರ್ನಾಟಕದ ರಾಜಕೀಯ ಚಟುವಟಿಕೆಗಳನ್ನು ಹಾಗೂ ಅದರ ಸುತ್ತ ನಡೆಯುತ್ತಿರುವ ಸಾರ್ವಜನಿಕ ಚರ್ಚೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಇರುವ ಯಾರಿಗೇ ಆದರೂ ಆತಂಕ ಮೂಡುವಂತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮೂರು ಉಪಚುನಾವಣೆಗಳು ಮುಖ್ಯವಾಹಿನಿ ರಾಜಕೀಯ ಪಕ್ಷಗಳ ಒಳಗೆ ಹುದುಗಿರಬಹುದಾದ ಕೊಳಕುಗಳನ್ನೆಲ್ಲಾ ಹೊರಹಾಕಿಬಿಟ್ಟಿವೆ. ಅಧಿಕಾರದ ರಾಜಕಾರಣ ಮತ್ತು ಆಡಳಿತ ಭ್ರಷ್ಠಾಚಾರ ಈ ಎರಡೂ ವಿದ್ಯಮಾನಗಳು ಪೂರಕವಾಗಿ ಕಾರ್ಯನಿರ್ವಹಿಸುತ್ತಾ, ಜನಸಾಮಾನ್ಯರ ಮೂಲಭೂತ ಅವಶ್ಯಕತೆಗಳನ್ನು ಮೂಲೆಗುಂಪು ಮಾಡುವ ರಾಜಕೀಯ ಪರಂಪರೆಗೆ ಈ ಚರ್ಚೆಗಳು ಸಾಕ್ಷಿಯಾಗಿ ಕಾಣುತ್ತಿವೆ. ಈ ಸಾಂಸ್ಥಿಕ ಭ್ರಷ್ಟಾಚಾರ ಪ್ರಜಾತಂತ್ರದ ಮೂಲ ತಳಹದಿಯನ್ನೇ ಸಡಿಲಗೊಳಿಸುವಂತಾಗಿರುವುದು ಆತಂಕಕಾರಿಯಾಗಿ ಕಾಣುತ್ತದೆ.
ಕಳೆದ ಮೂರು ದಶಕಗಳ ರಾಜಕೀಯ ಬೆಳವಣಿಗೆಗಳಲ್ಲಿ ಪ್ರಧಾನವಾಗಿ ಗುರುತಿಸಬಹುದಾದ ಒಂದು ಅಂಶ ಎಂದರೆ ಅಧಿಕಾರ ವಲಯದಲ್ಲಿ ಕೇಂದ್ರ ಸ್ಥಾನ ಪಡೆದಿರುವ ಮಾರುಕಟ್ಟೆ ಮತ್ತು ಬಂಡವಾಳದ ಪ್ರಭಾವ, ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಹಣಕಾಸು ಭ್ರಷ್ಟಾಚಾರ ಸಹಜ ಪ್ರಕ್ರಿಯೆಯೇ ಆದರೂ, ಇದರ ಸಾಂಸ್ಥೀಕರಣವ ಪ್ರಜಾತಂತ್ರವನ್ನು ಮತ್ತಷ್ಟು ಶಿಥಿಲಗೊಳಿಸುತ್ತದೆ. ರಾಜ್ಯ ರಾಜಕಾರಣವನ್ನು ಆವರಿಸಿರುವ ಭ್ರಷ್ಟಾಚಾರ ಹಗರಣಗಳು ಈ ಸಾಂಸ್ಥಿಕರಣದ ಒಂದು ನಿದರ್ಶನ.
ಭ್ರಷ್ಟಬೇರುಗಳ ರಾಜಕೀಯ ವ್ಯಾಪ್ತಿ: ಯಾರು ಹೆಚ್ಚು ಭ್ರಷ್ಟರು ಅಥವಾ ಯಾರ ಆಳ್ವಿಕೆಯಲ್ಲಿ ಭ್ರಷ್ಟಾಚಾರದ ವ್ಯಾಪ್ತಿ ಮತ್ತು ಹರವು ಆಳವಾಗಿತ್ತು ಎನ್ನುವುದೇ ಮುಖ್ಯ ಚರ್ಚೆಯಾಗುತ್ತದೆ. ಚುನಾವಣಾ ಬಾಂಡ್‌ಗಳಿಂದ ಹಿಡಿದು ಮುಡಾ ಹಗರಣದವರೆಗೂ ವ್ಯಾಪಿಸುವ ಆಡಳಿತ ಭ್ರಷ್ಟತೆಯನ್ನು ಗಮನಿಸಿದಾಗ ಇದು ಇನ್ನೂ ಸ್ಪಷ್ಟವಾಗುತ್ತದೆ. ಈ ವಿದ್ಯಮಾನದ ಮೂಲವನ್ನು ನವ ಉದಾರವಾದ ಪೋಷಿಸುತ್ತಿರುವ ಔದ್ಯಮಿಕ ಮಾರುಕಟ್ಟೆ ಆರ್ಥಿಕತೆಯಲ್ಲಿ ಗುರುತಿಸಬಹುದು. ಚುನಾವಣಾ ಬಾಂಡ್‌ಗಳ ಹಗರಣದಲ್ಲಿ ಇದರ ಸಾಂಸ್ಥಿಕ ಆಯಾಮವನ್ನು ಕಾಣಬಹುದು. ಬಂಡವಾಳ ಮತ್ತು ಮಾರುಕಟ್ಟೆ ನಿರ್ದೇಶಿಸುವ ಭ್ರಷ್ಟ ಮಾರ್ಗಗಳು ರಾಜಕೀಯ ಪಕ್ಷಗಳನ್ನು ಚುನಾವಣೆಗಳ ಹಂತದಿಂದಲೇ ಆವರಿಸುವುದರಿಂದ, ಅಧಿಕಾರ ಗಳಿಸದೆ ಇದ್ದರೂ, ಪಕ್ಷಗಳು ತಮ್ಮ ರಾಜಕೀಯ ಚಟುವಟಿಕೆಗಳಿಗಾಗಿ, ಚುನಾವಣಾ ವೆಚ್ಚಗಳಿಗಾಗಿ ಹಾಗೂ ಅಧಿಕಾರ ಗಳಿಸುವ ಪ್ರಯತ್ನಗಳಿಗಾಗಿ ಈ ಕೇಂದ್ರವನ್ನೇ ಅವಲಂಬಿಸುತ್ತವೆ.
ಕರ್ನಾಟಕದ ರಾಜಕೀಯ ಸಂಕಥನಗಳಲ್ಲಿ ಇತ್ತೀಚಿಗೆ ಸದ್ದು ಮಾಡುತ್ತಿರುವ 50 ಕೋಟಿ ರೂ. 100 ಕೋಟಿ ರೂ.ಗಳ ಮಾರುಕಟ್ಟೆ ದರಗಳು ಇದನ್ನೇ ಸೂಚಿಸುತ್ತದೆ. ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ರಾಜಕೀಯ
ಪಕ್ಷವೊಂದನ್ನು ಪದಚ್ಯುತಗೊಳಿಸುವವರೆಗೂ ವಿರಮಿಸುವುದಿಲ್ಲ ಎಂಬ ರಾಜಕೀಯ ಘೋಷಣೆಗಳು ಅಪ್ರಜಾತಾಂತ್ರಿಕವಾಗಿದ್ದು, ವಿರೋಧ ಪಕ್ಷಗಳ ಈ ಅಪಾರ ವಿಶ್ವಾಸದ ಮೂಲವನ್ನು ನಾವು ಔದ್ಯಮಿಕ ಬಂಡವಾಳ ಮತ್ತು ಮಾರುಕಟ್ಟೆ ಶಕ್ತಿಗಳಲ್ಲಿ ಗುರುತಿಸಬಹುದು. ಮೇ 2023ರಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನಗಳೊಂದಿಗೆ ಅಧಿಕಾರ ವಹಿಸಿಕೊಂಡ ದಿನದಿಂದಲೂ ಬಿಜೆಪಿ-ಜಾ.ದಳ ನಾಯಕರು ಸರ್ಕಾರವನ್ನು ಪದಚ್ಯುತಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಜಾ.ದಳ ವರಿಷ್ಠ ನಾಯಕರು ಸರ್ಕಾರದ ಪತನಕ್ಕೆ ಜನವರಿ 2025ರ ಕಾಲಮಿತಿಯನ್ನೂ ನಿಗದಿಪಡಿಸಿದ್ದಾರೆ. ಸಾಂವಿಧಾನಿಕ ನೈತಿಕತೆಯ ನೆಲೆಯಲ್ಲಿ ಈ ವಿದ್ಯಮಾನವನ್ನು ಗಮನಿಸಿದರೆ, ಒಂದು ವಿರೋಧ ಪಕ್ಷದ ಆದ್ಯತೆ ಅಧಿಕಾರಾರೂಢ ಸರ್ಕಾರವನ್ನು ಪಲ್ಲಟಗೊಳಿಸುವುದೋ ಅಥವಾ ಸರ್ಕಾರದ ಲೋಪಗಳನ್ನು ಜನತೆಯ ಮುಂದಿಡುವುದೋ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಶಾಸಕರ ಖರೀದಿ ಮತ್ತು ಅದರ ಸುತ್ತಲಿನ ಮಾರುಕಟ್ಟೆ ಪರಿಸರವನ್ನು ಸೃಷ್ಟಿಸಿ ಚುನಾಯಿತ ಶಾಸಕರನ್ನು ಬಿಕರಿಯ ಸರಕುಗಳನ್ನಾಗಿ ಪರಿಗಣಿಸುವ ಒಂದು ಪರಂಪರೆಯನ್ನು ಹುಟ್ಟುಹಾಕಿದ್ದು ಕರ್ನಾಟಕವೇ, ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾಗಿದ್ದ ರಾಜ್ಯದಲ್ಲಿ ಜನಪ್ರತಿನಿಧಿಗಳನ್ನು ಮಾರುಕಟ್ಟೆ ಮೌಲ್ಯಾಂಕಣದ ವಸ್ತುಗಳನ್ನಾಗಿ ಮಾಡಿದ (ಅಪ)ಕೀರ್ತಿ ಕರ್ನಾಟಕಕ್ಕೆ ಸಲ್ಲಬೇಕಿದೆ. ಇದನ್ನು ಆಪರೇಷನ್ ಕಮಲ, `ಆಪರೇಷನ್ ಹಸ್ತ’ ಎಂಬ ಸುಂದರ ಪದಗಳ ಮೂಲಕ ಬಣ್ಣಿಸಲಾಗುತ್ತದೆ. ಪ್ರಸ್ತುತ ರಾಜಕೀಯ ಚರ್ಚೆಯನ್ನು ಆವರಿಸಿರುವ ಶಾಸಕರ ದರಪಟ್ಟಿ ಇದರ ಒಂದು ವಿಕೃತ ರೂಪ ಎಂದು ಹೇಳಬಹುದು. ಪಕ್ಷ ನಿಷ್ಠೆ ಬದಲಿಸುವ ಜನಪ್ರತಿನಿಧಿಗಳಿಗೆ ವೈಯಕ್ತಿಕ ಲಾಭ ಮತ್ತು ಭವಿಷ್ಯದ ರಾಜಕೀಯ ಅಧಿಕಾರ ಎರಡೂ ಮುಖ್ಯವಾಗುತ್ತದೆ. ಪಕ್ಷಾಂತರ” ಎಂಬ ಋಣಾತ್ಮಕ ರಾಜಕೀಯ ಪ್ರಕ್ರಿಯೆಯೂ ರೂಪಾಂತರಗೊಂಡಿರುವ ವರ್ತಮಾನದ ರಾಜಕಾರಣದಲ್ಲಿ ರಾಜಕೀಯ ನಾಯಕರ ಬೇಲಿ ಜಿಗಿತವನ್ನು ಮೂಲತಃ ನಿರ್ದೇಶಿಸುವುದು ಬಂಡವಾಳ ಮತ್ತು ಮಾರುಕಟ್ಟೆಯ ಹಿತಾಸಕ್ತಿ,
ಮಾಧ್ಯಮ ಮತ್ತು ಮಾರುಕಟ್ಟೆ ಹಿತಾಸಕ್ತಿ: ಮಾರುಕಟ್ಟೆ-ಔದ್ಯಮಿಕ, ಬಂಡವಾಳ-ರಾಜಕಾರಣ ಮತ್ತು ರಾಜಕೀಯ ಪಕ್ಷಗಳ ನಡುವ ಇರುವ ಅವಿನಾಭಾವ ಸಂಬಂಧಗಳನ್ನು ಮತ್ತು ಅದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಗಬಹುದಾದ ಅಪಾಯಗಳನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡುವ ಜವಾಬ್ದಾರಿ ವಿಶೇಷವಾಗಿ ವಿದ್ಯುಸ್ಥಾನ ಮಾಧ್ಯಮ-ಸುದ್ದಿಮನೆಗಳ ಮೇಲಿದೆ. ಏಕೆಂದರೆ ಇವು ಕ್ಷಣಮಾತ್ರದಲ್ಲಿ ಜನಸಂಪರ್ಕ ಸಾಧಿಸುತ್ತವೆ. ಕನ್ನಡದ ವಿದ್ಯುನ್ಮಾನ ಮಾಧ್ಯಮಗಳು ಈ ಜವಾಬ್ದಾರಿಯನ್ನು ನಿಭಾಯಿಸುತ್ತಿವೆಯೇ? ಹೌದು ಎನ್ನಲು ಯಾವುದೇ ಪುರಾವೆಗಳಿಲ್ಲ, ಯಾರು ಹೆಚ್ಚು ಭ್ರಷ್ಟರು ಎಂಬ ವಾದ ವಿವಾದಗಳನ್ನೇ ಕೇಂದ್ರೀಕರಿಸುವ ಮೂಲಕ ಸುದ್ದಿಮನೆಗಳು ಕೋಟ್ಯಂತರ ರೂ.ಗಳ ಅಕ್ರಮ ವ್ಯವಹಾರಗಳ ಮೂಲ ಇರುವುದು ಔದ್ಯಮಿಕ ಮಾರುಕಟ್ಟೆ ಆರ್ಥಿಕತೆಯಲ್ಲಿ ಎಂಬ ವಾಸ್ತವವನ್ನೇ ಜನಸಾಮಾನ್ಯರಿಂದ ಮರೆಮಾಡುತ್ತವೆ. ಇದಕ್ಕೆ ಕಾರಣ ಈ ಮಾಧ್ಯಮ ಸಮೂಹಗಳಿಗೂ ಔದ್ಯಮಿಕ ಮಾರುಕಟ್ಟೆ ಮತ್ತು ಬಂಡವಾಳಕ್ಕೂ ಇರುವ ಸೂಕ್ಷ್ಮಸಂಬಂಧಗಳು.
ಈ ವಾಹಿನಿಗಳಲ್ಲಿ ನಡೆಯುವ ‘ಬಿಸಿ ಬಿಸಿ ಚರ್ಚೆಗಳಲ್ಲೂ ರಾಜಕೀಯ ಪಕ್ಷಗಳಿಂದಾಚೆಗೆ ಇರಬಹುದಾದ ಭ್ರಷ್ಟಾಚಾರದ ಮೂಲಗಳನ್ನು ಶೋಧಿಸುವ ಲಕ್ಷಣಗಳು ಕಾಣುವುದಿಲ್ಲ, ಪರ-ವಿರೋಧದ ಚೌಕಟ್ಟಿನಲ್ಲೇ ನಡೆಯುವ ಈ ಸಂವಾದಗಳಲ್ಲಿ ಆಡಳಿತ ಭ್ರಷ್ಟಾಚಾರಕ್ಕೆ ಇರಬಹುದಾದ ಮಾರುಕಟ್ಟೆ ಸಂಬಂಧಗಳು ಚರ್ಚೆಗೇ ಬರುವುದಿಲ್ಲ, ಕಾರಣ ಈ ಮಾಧ್ಯಮ ಸಮೂಹ ಗಳೇ ಮಾರುಕಟ್ಟೆ ಶಕ್ತಿಗಳ ಹಿಡಿತದಲ್ಲಿರುತ್ತವೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ವಿದ್ಯುವಾನ ಮಾಧ್ಯಮಗಳು ತಮ್ಮ ಜವಾಬ್ದಾರಿಯಲ್ಲಿ ಸೋಲುತ್ತಿರುವುದು ಇಲ್ಲೇ. ತನಿಖಾ ಪತ್ರಿಕೋದ್ಯಮ (Investigative Journalism) ತನ್ನ ಅಂತಃಸತ್ವವನ್ನು ಕಳೆದುಕೊಂಡು ರಾಜಕೀಯವಾಗಿ ಸಾಪೇಕ್ಷತೆಯನ್ನು ಪಡೆದುಕೊಂಡಿರುವ ವರ್ತಮಾನದ ಸವೇಶದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಮಾಧ್ಯಮಗಳ ಜವಾಬ್ದಾರಿ: ತಮ್ಮ ಅಸ್ತಿತ್ವವಾದಿ ಔದ್ಯಮಿಕ ಜವಾಬ್ದಾರಿಯನ್ನೂ ಮೀರಿದಂತೆ ವಿಶಾಲ ಸಮಾಜಕ್ಕೆ ವಾಸ್ತವ ಪರಿಸ್ಥಿತಿಗಳನ್ನು ಮನದಟ್ಟು ಮಾಡುವ ಮೂಲಕ, ಸಮಾಜದ ಓರೆಕೋರೆಗಳನ್ನು ಸರಿಪಡಿಸುವ ಸಾಂವಿಧಾನಿಕ ಜವಾಬ್ದಾರಿಯೂ ಮಾಧ್ಯಮಗಳ ಮೇಲಿದೆ ಅಲ್ಲವೇ? ರಾಜಕಾರಣವನ್ನು ಆವರಿಸಿರುವ ಭ್ರಷ್ಟ ಪರಂಪರೆಯ ಹಿಂದಿರುವ ಮಾರುಕಟ್ಟೆ-ಬಂಡವಾಳ ಮತ್ತು ಔದ್ಯಮಿಕ ಹಿತಾಸಕ್ತಿಯ ಬಗ್ಗೆ ಮತ್ತು ಅದರಿಂದ ಪ್ರಜಾಪ್ರಭುತ್ವಕ್ಕೆ ಉಂಟಾಗುತ್ತಿರುವ ಅಪಾಯಗಳ ಬಗ್ಗೆ, ಇದೇ ಭ್ರಷ್ಟ ರಾಜಕಾರಣಿಗಳನ್ನು ಆಯ್ಕೆ ಮಾಡುವ ಸಾರ್ವಜನಿಕರಲ್ಲಿ ಅರಿವು ಉಂಟುಮಾಡಬಹುದಲ್ಲವೇ? ಜನಸಾಮಾನ್ಯರಲ್ಲಿ ನಾಗರಿಕ ಪ್ರಜ್ಞೆ ಅಥವಾ ಜಾಗೃತಿಯನ್ನು ಉಂಟುಮಾಡುವ ಅವಕಾಶ ಮತ್ತು ಕ್ಷಮತ ಎರಡನ್ನೂ ಎಂದೋ ಕಳೆದುಕೊಂಡಿರುವ ವಿದ್ಯುನ್ಮಾನ ಮಾಧ್ಯಮಗಳು ಕನಿಷ್ಠ ಈ ಕರಾಳ ಜಗತ್ತನ್ನು ಕುರಿತು ಅರಿವು ಮೂಡಿಸಬಹುದಲ್ಲವೇ? ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಹ ಗಂಭೀರ ವಿಚಾರಗಳನ್ನೂ ರೋಚಕ ಸುದ್ದಿಗಳಂತ ಬಿತ್ತರಿಸುವ ಮೂಲಕ ಕನ್ನಡ ಸುದ್ದಿಮನೆಗಳು, ಭ್ರಷ್ಟಾಚಾರದಂತಹ ಅನೈತಿಕ-ಆಸಾಂವಿಧಾನಿಕ ವಿದ್ಯಮಾನಗಳನ್ನೂ ಮನರಂಜನೆಯ ವಸ್ತುಗಳನ್ನಾಗಿಸಿರುವುದು ದುರಂತ.
ಆಡಳಿತ ಭ್ರಷ್ಟಾಚಾರ ಭಾರತದ ಪ್ರಜಾಪ್ರಭುತ್ವವನ್ನು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಒಳಗಿನಿಂದಲೇ ತಿನ್ನುತ್ತಿರುವ ಒಂದು ಗಂಭೀರ ವ್ಯಾದಿ ರಾಜಕೀಯವಾಗಿ ಇಂದು ಇದರ ವಿರುದ್ಧ ದನಿ ಎತ್ತುವ ಅರ್ಹತೆಯಾಗಲೀ, ನೈತಿಕತೆಯಾಗಲೀ ಮುಖ್ಯವಾಹಿನಿಯ ಪಕ್ಷಗಳಲ್ಲಿ ಉಳಿದಿಲ್ಲ. ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿರುವ ನಾಗರಿಕ ಸಂಘಟನೆಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿ ಜನಜಾಗೃತಿ ಮೂಡಿಸುತ್ತಿವೆ. ಈ ನಾಗರಿಕ ಪ್ರಜ್ಞೆಯನ್ನು ಮತ್ತಷ್ಟು ಮೊನಚುಗೊಳಿಸಿ, ನಮ್ಮ ಸಮಾಜ ಸಂಸ್ಕೃತಿ ರಾಜಕೀಯ ಮತ್ತು ವ್ಯವಸ್ಥೆಯನ್ನು ಮೌಲಿಕವಾಗಿ ಶಿಥಿಲಗೊಳಿಸುತ್ತಿರುವ ಮಾರುಕಟ್ಟೆ ಬಂಡವಾಳ ಹಾಗೂ ಅಧಿಕಾರ ರಾಜಕಾರಣದ ಹಿತಾಸಕ್ತಿಗಳನ್ನು ಸಾರ್ವಜನಿಕ ನ್ಯಾಯಸ್ಥಾನದ ನ್ಯಾಯ ಕಟಕಟೆಯಲ್ಲಿ ನಿಲ್ಲಿಸುವ ದೊಡ್ಡ ಜವಾಬ್ದಾರಿ ವಿದ್ಯುನ್ಮಾನ ಮಾಧ್ಯಮಗಳ ಮೇಲಿದೆ.
ಈ ಜವಾಬ್ದಾರಿಯನ್ನು ಮನಗಂಡೇ ವ್ಯಕ್ತಿಗತ ರಾಜಕೀಯ ಒಲವು-ನಿಷ್ಠೆಗಳನ್ನು ಬದಿಗೊತ್ತಿ, ಸಮಾಜದ ಒಳತಿಗಾಗಿ ವಸ್ತುನಿಷ್ಠ ಸುದ್ದಿಗಳನ್ನು ಬಿತ್ತರಿಸುವುದೇ ಅಲ್ಲದೆ, ವಿಶಾಲ ಸಮಾಜಕ್ಕೆ ವ್ಯವಸ್ಥೆಯೊಳಗಿನ ಅಪಸವ್ಯಗಳನ್ನು ತಿಳಿಯಪಡಿಸುವ ನೈತಿಕ ಹೊಣೆಯನ್ನು ವಿದ್ಯುನ್ಮಾನ ಮಾಧ್ಯಮಗಳು ಹೊರಬೇಕಿದೆ. ತಮ್ಮ ಸಾಂಸ್ಥಿಕ ಅಸ್ತಿತ್ವ ಮತ್ತು ಔದ್ಯಮಿಕ ಹಿತಾಸಕ್ತಿಯನ್ನು ಕಾಪಾಡಿಕೊಂಡೇ ವಿದ್ಯುನ್ಮಾನ ಸುದ್ದಿಮನೆಗಳು ಈ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುವ ನಿಟ್ಟಿನಲ್ಲಿ ಯೋಚಿಸಬೇಕಿದೆ. ಬಂಡವಾಳ ಮತ್ತು ಮಾರುಕಟ್ಟೆಯ ಹಿಡಿತದಲ್ಲಿರುವ ಮಾಧ್ಯಮ ಲೋಕ ಅಂತಿಮವಾಗಿ ತಮ್ಮ ಅಸ್ತಿತ್ವ ಇರುವುದು ನಾಗರಿಕರ ನಡುವೆ ಎಂಬ ವಾಸ್ತವವನ್ನು ಅರ್ಥಮಾಡಿಕೊಳ್ಳುವುದು ಅತ್ಯವಶ್ಯ.
ಈ ವಾಹಿನಿಗಳಲ್ಲಿ ನಡೆಯುವ ‘ಬಿಸಿ ಬಿಸಿ’ ಚರ್ಚೆಗಳಲ್ಲೂ ರಾಜಕೀಯ ಪಕ್ಷಗಳಿಂದಾಚೆಗೆ ಇರಬಹುದಾದ ಭ್ರಷ್ಟಾಚಾರದ ಮೂಲಗಳನ್ನು ಶೋಧಿಸುವ ಲಕ್ಷಣಗಳು ಕಾಣುವುದಿಲ್ಲ. ಪರ-ವಿರೋಧದ ಚೌಕಟ್ಟಿನಲ್ಲೇ ನಡೆಯುವ ಈ ಸಂವಾದಗಳಲ್ಲಿ ಆಡಳಿತ ಭ್ರಷ್ಟಾಚಾರಕ್ಕೆ ಇರಬಹುದಾದ ಮಾರುಕಟ್ಟೆ ಸಂಬಂಧಗಳು ಚರ್ಚೆಗೇ ಬರುವುದಿಲ್ಲ. ಕಾರಣ ಈ ಮಾಧ್ಯಮ ಸಮೂಹಗಳೇ ಮಾರುಕಟ್ಟೆ ಶಕ್ತಿಗಳ ಹಿಡಿತದಲ್ಲಿರುತ್ತವೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಜವಾಬ್ದಾರಿಯಲ್ಲಿ ಸೋಲುತ್ತಿರುವುದು ಇಲ್ಲೇ. ತನಿಖಾ ಪತ್ರಿಕೋದ್ಯಮ (Investigative Journalism) ತನ್ನ ಅಂತಃಸತ್ವವನ್ನು ಕಳೆದುಕೊಂಡು ರಾಜಕೀಯವಾಗಿ ಸಾಪೇಕ್ಷತೆಯನ್ನು ಪಡೆದುಕೊಂಡಿರುವ ವರ್ತಮಾನದ ಸನ್ನಿವೇಶದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.