Mysore
20
overcast clouds
Light
Dark

ದ್ರಾವಿಡರ ಅಸ್ಮಿತೆ ಪೆರಿಯಾರ್;‌ ಇಂದು ಪೆರಿಯಾರ್‌ ಜನ್ಮದಿನ

* ಭರತ್‌ರಾಮಸ್ವಾಮಿ, ಪ್ರಕಾಶಕರು, ಸಮಾನತೆ ಪ್ರಕಾಶನ.

ಸಮಾಜದಲ್ಲಿ ಅಸಮಾನತೆ ತಾರಕಕ್ಕೇರಿದಾಗಲೆಲ್ಲಾ ಪ್ರಕೃತಿಯೇ ಒಂದು ಹೋರಾಟದ ಕೂಗನ್ನು ಕಾಲಕಾಲಕ್ಕೆ ಸೃಷ್ಟಿಸುತ್ತಾ ಬಂದಿದೆ. ಅಂತೆಯೇ ೧೯ನೇ ಶತಮಾನದ ಅಂತ್ಯಕಾಲ ಮತ್ತು ೨೦ನೇ ಶತಮಾನದ ಆದಿಕಾಲದಲ್ಲಿ ಸಮಾಜದಲ್ಲಿ ಯಾವುದೂ ಸರಿಯಿಲ್ಲವೆಂದು ಶೋಷಿತರ ಪರ ಮೊಳಗಿದ ಈ ನೆಲದ ಧ್ವನಿ “ಪೆರಿಯಾರ್”.

ತಮಿಳು ಭಾಷೆಯಲ್ಲಿ ಪೆರಿಯಾರ್ ಎಂದರೆ “ದೊಡ್ಡವರು” ಅಥವಾ “ಹಿರೀಕರು” ಎಂದರ್ಥ. ಅದು ಲಕ್ಷಾಂತರ ಜನ ಅವರ ಅಭಿಮಾನಿಗಳು ಪ್ರೀತಿಯಿಂದ ಅವರನ್ನು ಕರೆಯುತ್ತಿದ್ದ ಹೆಸರು. ಅವರ ಪೂರ್ಣ ಹೆಸರು ‘ಈರೋಡ್ ವೆಂಕಟಪ್ಪ ರಾಮಸ್ವಾಮಿ ನಾಯ್ಕರ್’ ಎಂದು. ಅವರು ಜನಿಸಿದ್ದು ೧೮೭೯ನೇ ಇಸವಿ ಸೆಪ್ಟೆಂಬರ್ ೧೭ರಂದು. ಅವರು ಜನಿಸಿದ್ದು ಅಂದಿನ ಮದ್ರಾಸ್ ರಾಜ್ಯದ ಕೊಯಮತ್ತೂರು ಜಿಲ್ಲೆಯ ಈರೋಡ್‌ನ ಒಂದು ಶ್ರೀಮಂತ ಕುಟುಂಬದಲ್ಲಿ. ಅವರದ್ದು ಬಹಳ ಸಂಪ್ರಾದಯಸ್ಥ ಕುಟುಂಬ.

ಅವರ ಮನೆಯಲ್ಲಿ ನಿತ್ಯವು ಪೂಜೆ, ಪುನಸ್ಕಾರ, ಪುರಾಣ ಪ್ರವಚನಗಳು ಎಗ್ಗಿಲ್ಲದೆ ಸಾಗುತ್ತಿದ್ದವು. ಚಿಕ್ಕ ವಯಸ್ಸಿನಿಂದಲೇ ಅಸಾಧಾರಣ ಹಟ, ತಪ್ಪು ಎಲ್ಲೆ ಕಂಡರೂ ಅದನ್ನು ಪ್ರಶ್ನೆ ಮಾಡುವ ಸ್ವಭಾವ ಅವರಿಗೆ ಮೈಗೂಡಿತ್ತು. ತಮ್ಮ ಮನೆಗೆ ಬರುತ್ತಿದ್ದ ಪ್ರವಚನಕಾರರು ಹೇಳುತ್ತಿದ್ದ ಕಥೆಗಳಲ್ಲಿ ತಮಗೆ ವೈರುಧ್ಯ ಎನಿಸಿದ ಅಂಶಗಳನ್ನು ಪ್ರಶ್ನಿಸಿ ತಮ್ಮ ತಂದೆಯವರಿಂದ ಬಯ್ಯಿಸಿಕೊಳ್ಳುತ್ತಿದ್ದರು. ಇದು ಅವರ ಮನೆಯಲ್ಲಿ ನಡೆಯುತ್ತಿದ್ದ ಸಹಜ ವಿಚಾರವಾಗಿತ್ತು. ತಮ್ಮ ೧೯ನೇ ವಯಸ್ಸಿನಲ್ಲಿ ಸಂಬಂಽಕರ ಮಗಳಾದ ನಾಗಮ್ಮ ಆಯಿಯವರನ್ನು ತಮ್ಮಇಚ್ಛೆಯಂತೆ ಮದುವೆಯಾಗಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು.

ವಿಚಾರ ಕ್ರಾಂತಿಗೆ ಹಿನ್ನೆಲೆ : ಕೌಟುಂಬಿಕ ಜೀವನಕ್ಕೆ ಕಾಲಿಟ್ಟ ಕೆಲವು ವರ್ಷಗಳು ಕಳೆದ ನಂತರ ೧೯೦೪ರಲ್ಲಿ ಯಾವುದೋ ಒಂದು ವಿಚಾರಕ್ಕೆ ಪೆರಿಯಾರ್ ಮತ್ತು ಅವರ ತಂದೆಯ ನಡುವೆ ಕಲಹವಾಗಿ ಪೆರಿಯಾರ್‌ರವರು ಮನೆ ಬಿಟ್ಟು ಹೊರಟು ಹೋಗುತ್ತಾರೆ. ಎಲ್ಲಿಗೆ ಹೋಗಬೇಕೆಂದು ತಿಳಿಯದ ಅವರು ಸಿಕ್ಕ ಸಿಕ್ಕಕಡೆ ಸಂಚರಿಸಿ ಹೈದರಾಬಾದ್‌ಗೆ ಹೋಗಿ ಕೊನೆಗೆ ವಾರಣಾಸಿ(ಕಾಶಿ) ತಲುಪುತ್ತಾರೆ. ಅದೊಂದು ದಿನ ವಿಪರೀತವಾದ ಹಸಿವಿನಿಂದ ಬಳಲುತ್ತಿದ್ದ ಅವರು ಧರ್ಮಛತ್ರ ಒಂದನ್ನು ಕಂಡು ಊಟ ಮಾಡಲು ಒಳಹೋಗಲು ಪ್ರಯತ್ನಿಸುತ್ತಾರೆ. ಆದರೆ ನೋಡಲು ಬ್ರಾಹ್ಮಣನಲ್ಲದಂತೆ ಕಂಡ ಇವರನ್ನು ಹಿಡಿದು ಇಲ್ಲಿ ಬ್ರಾಹ್ಮಣರಿಗೆ ಮಾತ್ರ ಊಟ ಹಾಕುವುದೆಂದು ಹೊರಗೆ ತಳ್ಳಿಬಿಡುತ್ತಾರೆ. ವಾಸ್ತವವಾಗಿ ಅದು ದ್ರಾವಿಡ ಮುಖಂಡರೊಬ್ಬರು ಕಟ್ಟಿಸಿದ ಛತ್ರ. ಇವರು ಎಷ್ಟೇ ಬೇಡಿಕೊಂಡರೂ ಅಲ್ಲಿ ಪ್ರವೇಶ ಸಿಗಲಿಲ್ಲ. ಕೊನೆಗೆ ಅವರೆಲ್ಲರೂ ತಿಂದು ಬಿಸಾಡಿದ ಊಟವನ್ನೇ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕಾಗುತ್ತದೆ. ಈ ಪ್ರಸಂಗ ಅವರಿಗೆ ಅತೀವ ನೋವನ್ನು ಉಂಟು ಮಾಡಿತ್ತು. ಮತ್ತು ಹಿಂದೂ ಧರ್ಮದಲ್ಲಿಇರುವ ತಾರತಮ್ಯ ನೀತಿಯು ಅವರಿಗೆ ಆ ಧರ್ಮದ ಮೇಲೆ ತಿರಸ್ಕಾರ ಭಾವನೆಯನ್ನು ಹುಟ್ಟುವಂತೆ ಮಾಡಿತು. ಅಷ್ಟೊತ್ತಿಗಾಗಲೇ ಮನೆ ಬಿಟ್ಟು ಹೋಗಿದ ಪೆರಿಯಾರ್ ಅವರನ್ನು, ಅವರ ತಂದೆಯೇ ಹುಡುಕಿ ಮನೆಗೆ ಕರೆತರುತ್ತಾರೆ. ನಂತರ ಪೆರಿಯಾರ್ ತಮ್ಮ ವ್ಯಾಪಾರವನ್ನು ಉತ್ತಮವಾಗಿ ನಡೆಸುವುದರ ಜೊತೆಗೆ ಸಾರ್ವಜನಿಕ ಜೀವನವನ್ನು ಪ್ರವೇಶಿಸಿ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಕಾಂಗ್ರೆಸ್ ಸೇರ್ಪಡೆ: ಇದೇ ಸಮಯದಲ್ಲಿ ಅಂದಿನ ಭಾರತದ ಪ್ರಥಮ ಗವರ್ನರ್ ಆಗಿದ್ದ ವಿ. ರಾಜಗೋಪಾಲಚಾರಿಯವರ ಸಂಪರ್ಕ ಬೆಳೆಯಿತು. ರಾಜಗೋಪಾಲಚಾರಿಯವರು ಮಹಾತ್ಮಗಾಂಽ ನೇತೃತ್ವದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಲು ಕಾಂಗ್ರೆಸ್ ಪಕ್ಷವನ್ನು ಸೇರಲು ಪ್ರೇರೇಪಿಸುತ್ತಾರೆ. ಅದರಂತೆ ಪೆರಿಯಾರ್ ಅವರು ೧೯೧೯ರಲ್ಲಿ ತಮ್ಮ ಈರೋಡ್ ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ. ೧೯೨೨ರಲ್ಲಿ ತಮಿಳುನಾಡಿನ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ೧೯೨೪ರಲ್ಲಿ ಜಸ್ಟೀಸ್ ಪಾರ್ಟಿಯ ಸರ್ಕಾರ ಆದೇಶದ ಮೂಲಕ ಜಾತಿ ಆಧಾರಿತ ಮೀಸಲಾತಿ ನೀತಿಯನ್ನು ಘೋಷಿಸಿದ್ದನ್ನು ಸ್ವಾಗತಿಸಿದರು. ಸರ್ಕಾರಿ ನೌಕರಿಯಲ್ಲಿ ಜಾತಿವಾರು ಮೀಸಲಾತಿಗಾಗಿ ಆಗ್ರಹಿಸಿದರು.

೧೯೨೫ ರಲ್ಲಿ ಕಾಂಚೀಪುರಂನಲ್ಲಿ ನಡೆದ ಕಾಂಗ್ರೆಸ್ ಅಽವೇಶನದಲ್ಲಿ ಬ್ರಾಹ್ಮಣೇತರರಿಗೆ ಶೇ. ೫೦ ರಷ್ಟು ಮೀಸಲಾತಿ ನೀಡಬೇಕೆಂದು ನಿರ್ಣಯ ಮಂಡಿಸಿದರು. ಆದರೆ ಕಾಂಗ್ರೆಸ್ ಪಕ್ಷದ ಬ್ರಾಹ್ಮಣ ಸದಸ್ಯರು ಇದನ್ನು ವಿರೋಽಸಿದರು. ಅದರಿಂದ ಸಿಡಿದೆದ್ದ ಪೆರಿಯಾರ್ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದರು. ಬೌದ್ಧ ಧರ್ಮದ ಬಗ್ಗೆ ಅವರಿಗೆ ವಿಶೇಷವಾದ ಆಸಕ್ತಿ ಇತ್ತು. ೧೯೫೪ರಲ್ಲಿ ಬರ್ಮಾ ದೇಶಕ್ಕೆ ಭೇಟಿ ನೀಡಿ ವಿಶ್ವ ಬೌದ್ಧ ಸಮ್ಮೇಳನದಲ್ಲಿ ಭಾಗಿಯಾದರು. ಅಲ್ಲಿ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್‌ರವರನ್ನು ಭೇಟಿಯಾದ ಅವರು ಬೌದ್ಧ ಧರ್ಮಕ್ಕೆ ಮತಾಂತರವಾಗುವ ಬಗ್ಗೆ ಚರ್ಚೆ ನಡೆಸಿದರು.

ಈ ವೇಳೆ ಅಂಬೇಡ್ಕರ್‌ರವರು ‘ಪೆರಿಯಾರ್‌ರವರೇ ನಾವಿಬ್ಬರು ಕೂಡ ಶೋಷಿತರ ವಿಮೋಚನೆಗಾಗಿ ಹೋರಾಟ ಮಾಡುತ್ತಿದ್ದೇವೆ. ಈಗ ನಾನು ಬೌದ್ಧ ಧರ್ಮಕ್ಕೆ ಸೇರಲು ಬಯಸಿದ್ದೇನೆ, ನೀವು ಕೂಡ ಏಕೆ ಬೌದ್ಧ ಧರ್ಮಕ್ಕೆ ಸೇರಬಾರದು? ’ ಎನ್ನುತ್ತಾರೆ. ಅದಕ್ಕೆ ಪೆರಿಯಾರ್ ‘ನಿಮ್ಮ ನಿಲುವನ್ನು ಕೇಳಿ ನನಗೆ ಬಹಳ ಸಂತೋಷವಾಯಿತು. ಆದರೆ ನಾನು ಹಿಂದೂ ಧರ್ಮದಲ್ಲೇ ಉಳಿದುಕೊಂಡು ಅದನ್ನು ಕಟುವಾಗಿ ಟೀಕಿಸಬೇಕಿದೆ. ಇದರಿಂದ ಹೊರಬಂದರೆ ನಮ್ಮ ಧರ್ಮವನ್ನು ಟೀಕಿಸಲು ಇವನು ಯಾರು? ಎಂದು ನನ್ನನ್ನು ಪ್ರಶ್ನಿಸುತ್ತಾರೆ. ಹಾಗಾಗಿ ನಾನು ಇಲ್ಲೇ ಉಳಿದುಕೊಳ್ಳುವುದು ಸೂಕ್ತ’ ಎಂದು ವಿವರಿಸುತ್ತಾರೆ. ಪೆರಿಯಾರ್ ಅವರು ತಮ್ಮ ಇಡೀ ಜೀವನವನ್ನೇ ವೈಚಾರಿಕ ಪ್ರಜ್ಞೆಯನ್ನು ಮೂಡಿಸುತ್ತಾ ದ್ರಾವಿಡರ ಉದ್ಧಾರಕ್ಕಾಗಿ ಮುಡಿಪಿಟ್ಟರು. ಅವರು ಈ ದೇಶಕಂಡ ಉತ್ಕೃಷ್ಟ ಜನನಾಯಕರೆಂಬುದು ಒಂದು ಚಾರಿತ್ರಿಕ ಸತ್ಯ