ತಮಿಳುನಾಡಿನ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸೆಲ್ವಕುಮಾರ್ ಹೊಲಿಗೆ ತರಬೇತಿ
ಯೂಟ್ಯೂಬ್ ತೆರೆದು ಅದರಲ್ಲಿ ‘ಟೈಲರ್ ಬ್ರೋ’ ಎಂದು ಟೈಪಿಸಿದರೆ ನಲವತ್ತೇಳು ವರ್ಷ ಪ್ರಾಯದ ಸೆಲ್ವಕುಮಾರ್ ಹೊಲಿಗೆ ಕಲಿಸುವ ವಿಡಿಯೋವನ್ನು ಕಾಣಬಹುದು. ಯೂ ಟ್ಯೂಬ್‌ನಲ್ಲಿ ಹೊಲಿಗೆ ಕಲಿಸುವ ಇಂತಹ ಸಾವಿರಾರು ಚಾನಲ್‌ಗಳು ಕಾಣ ಸಿಗುತ್ತವೆ. ಹೌದು. ಆದರೆ, ಈ ‘ಟೈಲರ್ ಬ್ರೋ’ ಯೂ ಟ್ಯೂಬ್ ಚಾನಲ್ ಅವೆಲ್ಲ ಚಾನಲ್‌ಗಳಿಗಿಂತ ಭಿನ್ನವಾದುದು.
ಸೆಲ್ವಕುಮಾರ್ ತಮಿಳುನಾಡಿನ ವಿರುದುನಗರ ಜಿಲ್ಲೆಯ ನಿವಾಸಿ. ಅವರು ಚಿಕ್ಕವರಾಗಿದ್ದಾಗ ಅವರ ತಂದೆ ಕುಟುಂಬವನ್ನು ನಡು ದಾರಿಯಲ್ಲಿ ಬಿಟ್ಟು ಹೋಗಿದ್ದ ಕಾರಣ ತಾಯಿ ದೇವಕಿ ಹೊಲಿಗೆ ಕೆಲಸ ಮಾಡುತ್ತ ಸೆಲ್ವಕುಮಾರ್, ಅವರ ಅಣ್ಣ ಹಾಗೂ ಒಬ್ಬಳು ತಂಗಿಯನ್ನು ಸಾಕಿ ಬೆಳೆಸಿದರು. ಸೆಲ್ವಕುಮಾರ್ ಚಿಕ್ಕ ಪ್ರಾಯದಿಂದಲೇ ತಾಯಿಗೆ ಹೊಲಿಗೆ ಕೆಲಸದಲ್ಲಿ ನೆರವಾಗಲು ಶುರು ಮಾಡಿ, ೧೬ ತುಂಬುವ ಹೊತ್ತಿಗೆ ಸ್ವತಃ ಪೂರ್ಣಕಾಲಿಕ ಟೈಲರ್ ಆಗಿ ರೂಪುಗೊಂಡಿದ್ದರು. ತನ್ನ ಹೊಲಿಗೆ ಕೆಲಸದ ಆದಾಯದಲ್ಲಿ ಸೆಲ್ವ ಕುಮಾರ್ ಕುಟುಂಬದ ಖರ್ಚನ್ನು ನಿಭಾಯಿಸುವ ಜೊತೆಯಲ್ಲಿ ಅಣ್ಣ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆಯಲು ನೆರವಾದರು. ತಾನು ಹತ್ತನೇ ತರಗತಿಗೆ ಶಿಕ್ಷಣ ನಿಲ್ಲಿಸಿ, ತಂಗಿಯನ್ನು ೧೨ನೇ ತರಗತಿಯವರೆಗೆ ಕಲಿಸಿ, ಅವಳ ಮದುವೆಯನ್ನೂ ನೆರವೇರಿಸಿದರು. ಅವಳು ತನಗೂ ಹೊಲಿಗೆ ಕಲಿಸಿಕೊಡು ಅಂತ ಹಲವು ಬಾರಿ ಕೇಳಿದ್ದರೂ ಸೆಲ್ವಕುಮಾರ್ ಆಕೆ ಅದಕ್ಕಿಂತ ದೊಡ್ಡದ್ಯಾವುದಾದರೂ ಕೆಲಸ ಮಾಡಲಿ ಎಂದು ಹೇಳಿ ಅವಳಿಗೆ ಹೊಲಿಗೆಯನ್ನು ಕಲಿಸಲಿಲ್ಲ.
ಮದುವೆಯ ನಂತರ ಸೆಲ್ವಕುಮಾರ್‌ರ ತಂಗಿಯ ಬದುಕು ಮೂರಾಬಟ್ಟೆಯಾಯಿತು. ಅವಳನ್ನು ಮದುವೆಯಾದವನು ಕುಡಿತದ ಚಟ ಹಚ್ಚಿಕೊಂಡು, ಸಂಸಾರವನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಅವಳು ಕಡು ಕಷ್ಟದ ದಿನಗಳನ್ನು ಎದುರಿಸಬೇಕಾಯಿತು. ಒಂದು ದಿನ ಅವಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಳು. ಸಾಯುವ ಮೊದಲು ಅವಳು ಅಣ್ಣನಿಗೊಂದು ಕಾಗದ ಬರೆದಿದ್ದು, ಅದರಲ್ಲಿ ಅವಳು ಮದುವೆ ನಂತರ ತಾನು ಅನುಭವಿಸಿದ ಕಷ್ಟ ಕೋಟಲೆ, ಬಡತನವನ್ನು ವಿವರಿಸಿ, ತಾನು ಹೊಲಿಗೆ ಕಲಿತಿದ್ದಿದ್ದರೆ ತನಗೆ ಈ ಗತಿ ಬರುತ್ತಿರಲಿಲ್ಲವೋ ಏನೋ ಎಂದು ಬರೆದಿದ್ದಳು. ತಂಗಿಯ ಮರಣ ಪತ್ರವನ್ನು ಓದಿ ಸೆಲ್ವ ಕುಮಾರ್ ತೀರಾ ದುಃಖಗೊಂಡರು.
ಅವಳಿಗೆ ಹೊಲಿಗೆ ಕಲಿಸದಿದ್ದುದರ ಬಗ್ಗೆ ಬಹಳ ಪಶ್ಚಾತ್ತಾಪಪಟ್ಟರು. ಆ ಪಶ್ಚಾತ್ತಾಪದಲ್ಲಿ ಬೆಂದು ಹೋದ ಅವರು ಇನ್ನು ಮುಂದೆ ಯಾವುದೇ ಹೆಣ್ಣು ಮಗಳು ಬಡತನದ ಕಾರಣಕ್ಕೆ ಸಾಯಬಾರದು; ಗಂಡ ತ್ಯಜಿಸಿದರೂ ಅವಳು ತನ್ನ ಸ್ವಂತ ದುಡಿಮೆಯಿಂದ ಗೌರವಯತವಾದ ಜೀವನ ನಡೆಸಬೇಕು; ಅವಳು ಯಾರ ಮೇಲೂ ಅವಲಂಬಿತವಾಗದೆ ತನ್ನ ಕಾಲ ಮೇಲೆ ತಾನು ನಿಂತು ತನ್ನ ಸಂಸಾರವನ್ನು ತಾನೇ ನಡೆಸಬೇಕು. ಇದಕ್ಕೆ ತನ್ನ ಬದುಕನ್ನೇ ಮೀಸಲಿಡುತ್ತೇನೆ ಎಂದು ತೀರ್ಮಾನಿಸಿ, ಕೇವಲ ಒಂದು ರೂಪಾಯಿಗೆ ಬಡ ಹೆಣ್ಣು ಮಕ್ಕಳಿಗೆ ಹೊಲಿಗೆ ಕಲಿಸುವ ತರಗತಿಗಳನ್ನು ಶುರು ಮಾಡಿದರು.
ಸೆಲ್ವಕುಮಾರ್ ತಮ್ಮ ಅಂಗಡಿಯನ್ನೇ ಹೊಲಿಗೆ ತರಬೇತಿ ಕೇಂದ್ರವನ್ನಾಗಿಸಿ, ಪ್ರತಿ ಬ್ಯಾಚಿನಲ್ಲಿ ೫೦ ಜನ ಮಹಿಳೆಯರಿಗೆ ಹೊಲಿಗೆ ಕಲಿಸಲು ಪ್ರಾರಂಭಿಸಿದರು. ವಾರದ ಆರು ದಿನ ಬೆಳಿಗ್ಗೆ ೧೦ರಿಂದ ಸಂಜೆ ೫ರ ವರೆಗೆ ತರಗತಿಗಳು ನಡೆಯುತ್ತವೆ. ಕಳೆದ ಹದಿನೆಂಟು ವರ್ಷಗಳಲ್ಲಿ ಅವರು ತಮಿಳುನಾಡಿನ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಹೊಲಿಗೆ ಕಲಿಸಿದ್ದಾರೆ. ಆಫ್ ಲೈನ್ ತರಗತಿಗಳಲ್ಲದೆ ‘ಟೈಲರ್ ಬ್ರೋ’ ಎಂಬ ಯೂಟ್ಯೂಬ್ ಚಾನಲ್ ಪ್ರಾರಂಭಿಸಿ ಅಲ್ಲಿಯೂ ಹೊಲಿಗೆ ತರಗತಿಗಳನ್ನು ನಡೆಸಲು ಶುರು ಮಾಡಿದರು. ಈ ಚಾನಲ್‌ನಲ್ಲಿ ಅವರು ಈವರೆಗೆ ದೇಶದ ವಿವಿಧ ಭಾಗಗಳ ೪೦ ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಹೊಲಿಗೆ ಕಲಿಸಿದ್ದಾರೆ.
ಟೈಲರ್ ಬ್ರೋ’ ಚಾನಲ್‌ಗೆ ೧.೫೫ ಮಿಲಿಯನ್ ಸಬ್‌ಸ್ಕ್ರೈಬರ್‌ಗಳಿದ್ದಾರೆ. ಅದರಿಂದ ಬರುವ ಆದಾಯದಿಂದ ತಿಂಗಳಿಗೆ ಎರಡು ಬಾರಿ ಯಾವುದಾದರೂ ಸಮುದಾಯ ಭವನದ ಹಾಲಿನಲ್ಲಿ ನೂರಾರು ಜನರಿಗೆ ಹೊಲಿಗೆ ತರಗತಿ ನಡೆಸುತ್ತಾರೆ. ಕೇವಲ ಒಂದು ರೂಪಾಯಿಗೆ ಹೊಲಿಗೆ ಕಲಿಸುವುದಲ್ಲದೆ ತರಗತಿಗೆ ಬರುವ ಹೆಣ್ಣು ಮಕ್ಕಳಿಗೆ ಉಚಿತವಾಗಿ ಮಧ್ಯಾಹ್ನದ ಊಟ ಮತ್ತು ಚಹ ನೀಡುತ್ತಾರೆ. ಈ ಕಾರಣಕ್ಕಾಗಿಯೇ ಆ ಹೆಣ್ಣು ಮಕ್ಕಳು ಸೆಲ್ವ ಕುಮಾರರನ್ನು ಪ್ರೀತಿಯಿಂದ ‘ಅಣ್ಣ’ ಎಂದು ಕರೆಯುತ್ತಾರೆ. ಮಹಿಳೆಯರಲ್ಲದೆ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೂ ಅವರು ಹೊಲಿಗೆ ಕಲಿಸುತ್ತಿದ್ದಾರೆ. ಹೀಗೆ, ಹಿಂದೆ ಒಬ್ಬಳು ತಂಗಿಗೆ ಅಣ್ಣನಾಗಿದ್ದ ಸೆಲ್ವಕುಮಾರ್ ಅವಳ ಸಾವಿನ ನಂತರ ಈಗ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಅಣ್ಣನಾಗಿದ್ದಾರೆ.
ಸೆಲ್ವಕುಮಾರ್ ಬಳಿ ಹೊಲಿಗೆ ಕಲಿಯಲು ಬರುವ ಹೆಚ್ಚಿನ ಹೆಣ್ಣು ಮಕ್ಕಳು ಬಡ ಕುಟುಂಬದ ಹಿನ್ನೆಲೆಯವರು. ಅವರಲ್ಲಿ ಶೇ.೪೦ರಷ್ಟು ಮಹಿಳೆಯರು ಅಂಗವಿಕಲರು. ಸೆಲ್ವ ಕುಮಾರ್ ಈ ದುರ್ಬಲ ಹೆಣ್ಣು ಮಕ್ಕಳಿಗೆ ಹೊಲಿಗೆಯನ್ನು ಕಲಿಸಿ ಅಷ್ಟಕ್ಕೇ ಸುಮ್ಮನಾಗುವುದಿಲ್ಲ. ಹೊಲಿಗೆ ಕಲಿತ ಅವರಲ್ಲಿ ಯಾರಿಗಾದರೂ ತಮ್ಮ ಸ್ವಂತ ಅಂಗಡಿ ತೆರೆಯಲು ಹಣಕಾಸಿನ ಅನನುಕೂಲತೆ ಎದುರಾದರೆ ಅವರಿಗೆ ಹೊಲಿಗೆ ಯಂತ್ರವನ್ನು ಖರೀದಿಸಿ ಕೊಡುತ್ತಾರೆ. ಒಂದು ಹೊಲಿಗೆ ಯಂತ್ರದ ಬೆಲೆ ೨೨ ಸಾವಿರದಿಂದ ೩೦ ಸಾವಿರ ರೂ.ವರೆಗೆ ಇರುತ್ತದೆ. ಹೀಗೆ ಅವರು ಸುಮಾರು ೫೭ ಜನ ಮಹಿಳೆಯರು ಮತ್ತು ೧೭ ಜನ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಆರ್ಥಿಕವಾಗಿ ನೆರವಾಗಿದ್ದಾರೆ. ಅವರಲ್ಲಿ ಹೊಲಿಗೆ ಕಲಿತವರಲ್ಲಿ ಸುಮಾರು ೪೨,೦೦೦ ಜನ ಮಹಿಳೆಯರು ಸ್ವಂತವಾಗಿ ಹೊಲಿಗೆ ಅಂಗಡಿಗಳನ್ನು ತೆರೆದಿದ್ದಾರೆ.
ಚೆನ್ನೆ ಯ ತರಮಣಿಯ ಜ್ಯೋತಿಕಾಳದ್ದು ಗಂಡ ಹಾಗೂ ಇಬ್ಬರು ಮಕ್ಕಳ ಒಂದು ಕಡು ಬಡತನದ ಕುಟುಂಬ. ಅವಳ ಗಂಡ ದಿನಗೂಲಿ ಕಾರ್ಮಿಕ. ಅವಳ ಕುಟುಂಬ ಸಾರ್ವಜನಿಕ ಸ್ಥಳದಲ್ಲಿ ಒಂದು ಅನಧಿಕೃತ ಜೋಪಡಿ ಕಟ್ಟಿಕೊಂಡು ವಾಸ ಮಾಡುತ್ತಿತ್ತು. ಜ್ಯೋತಿಕಾ ಸೆಲ್ವಕುಮಾರ್ ಬಳಿ ಹೊಲಿಗೆ ಕಲಿತು, ನಂತರ ಅವರ ನೆರವಿನಿಂದ ಸ್ವಂತದ ಒಂದು ಹೊಲಿಗೆ ಅಂಗಡಿ ತೆರೆದಳು. ಈಗ ಅವಳು ತನ್ನ ಅಂಗಡಿಯಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಟ್ಟಿದ್ದಾಳೆ. ಚಿಕ್ಕದೊಂದು ಮನೆಯನ್ನು ಬಾಡಿಗೆಗೆ ಪಡೆದು, ಗಂಡ ಮತ್ತು ಮಕ್ಕಳೊಂದಿಗೆ ಗೌರವಯುತವಾದ ಬದುಕನ್ನು ನಡೆಸುತ್ತಿದ್ದಾಳೆ.
ಕನಿಷ್ಠ ಒಂದು ಕೋಟಿ ಮಹಿಳೆಯರಿಗೆ ಹೊಲಿಗೆ ಕಲಿಸಬೇಕೆನ್ನುವುದು ಸೆಲ್ವ ಕುಮಾರ್‌ರ ಗುರಿ. ಅವರ ತಾಯಿಗೀಗ ೬೮ ವರ್ಷ ಪ್ರಾಯ. ಅವರು, ಸೆಲ್ವ ಕುಮಾರರ ಪತ್ನಿ ಮತ್ತು ಅವರ ಹೆಣ್ಣು ಮಕ್ಕಳೂ ಸೆಲ್ವ ಕುಮಾರರ ಕೆಲಸದಲ್ಲಿ ನೆರವಾಗುತ್ತಿದ್ದಾರೆ.
” ಸೆಲ್ವಕುಮಾರ್ ‘ಟೈಲರ್ ಬ್ರೋ’ ಎಂಬ ಯೂಟ್ಯೂಬ್ ಚಾನಲ್ ಪ್ರಾರಂಭಿಸಿ ಅಲ್ಲಿಯೂ ಹೊಲಿಗೆ ತರಗತಿಗಳನ್ನು ನಡೆಸಲು ಶುರು ಮಾಡಿದರು. ಈ ಚಾನಲ್‌ನಲ್ಲಿ ಅವರು ಈವರೆಗೆ ದೇಶದ ವಿವಿಧ ಭಾಗದ ೪೦ ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಹೊಲಿಗೆ ಕಲಿಸಿದ್ದಾರೆ. ‘ಟೈಲರ್ ಬ್ರೋ’ ಚಾನಲ್‌ಗೆ ೧.೫೫ ಮಿಲಿಯನ್ ಸಬ್‌ಸ್ಕ್ರೈಬರ್‌ಗಳಿದ್ದಾರೆ.




