Mysore
30
clear sky

Social Media

ಬುಧವಾರ, 04 ಮಾರ್ಚ್ 2026
Light
Dark

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಸಫುರಾ ಖಾನ್ ಎಂಬ ಆಟೋ ಓಡಿಸುವ ಕನಸುಗಾರ್ತಿ  

೩೦ ವರ್ಷ ಪ್ರಾಯದ ಸಫುರಾ ಖಾನ್‌ರ ತಂದೆ ತಾಯಿ ಚೆನ್ನೆ ಯಿಂದ ಕರ್ನಾಟಕಕ್ಕೆ ವಲಸೆ ಬಂದಾಗ ಆಕೆ ಇನ್ನೂ ಮಗುವಾಗಿದ್ದರು. ಅವರದ್ದು ಒಂದು ಸಾಂಪ್ರದಾಯಸ್ಥ ಸಾಧಾರಣ ಕುಟುಂಬ. ಆಕೆಯ ನೆರೆಹೊರೆಯ ಆನೇಕ ಮನೆಗಳಂತೆ ಸ-ರಾರ ಮನೆಯಲ್ಲೂ ಶಿಕ್ಷಣವೆಂಬುದು ಪ್ರಧಾನ ಆದ್ಯತೆಯಾಗಿರಲಿಲ್ಲ. ಹಾಗಾಗಿ ಸಫುರಾ ಹೆಚ್ಚು ಓದಲಿಲ್ಲ. ಸಫುರಾ ದೊಡ್ಡವಳಾದಂತೆ ದ್ವಿಚಕ್ರ ವಾಹನ ಓಡಿಸುವುದರಲ್ಲಿ ಆಸಕ್ತಿ ಬೆಳೆಸಿಕೊಂಡರು. ಪ್ರಾರಂಭದಲ್ಲಿ ಒಂದು ಚಿಕ್ಕ ಸ್ಕೂಟಿ ಓಡಿಸುವುದನ್ನು ಕಲಿತರು. ಅದನ್ನು ನಡೆಸುತ್ತಿರುವಾಗ ಅವರಿಗೆ ಬಹಳ ಸಂತೋಷವಾಯಿತು. ಸಫುರಾ ಮುಂದೆ ತನ್ನದೇ ಒಂದು ಸ್ವಂತದ ದ್ವಿಚಕ್ರ ವಾಹನವನ್ನು ಖರೀದಿಸಬೇಕು ಎಂದು ತೀರ್ಮಾನಿಸಿ, ಅದಕ್ಕಾಗಿ ಹಣ ಉಳಿತಾಯ ಮಾಡಲು ಶುರು ಮಾಡಿ, ೨೦೨೦ರಲ್ಲಿ ಒಂದು ಸೆಕೆಂಡ್ ಹ್ಯಾಂಡ್ ಸಿಟಿ ೧೦೦ ಬೈಕ್ ಖರೀದಿಸಿದರು.

ಸಿಟಿ ೧೦೦ ಬೈಕ್ ಓಡಿಸಲು ಶುರು ಮಾಡಿದ ಸಫುರಾ ತಾನೇಕೆ ವಾಹನ ಓಡಿಸುವುದನ್ನು ತನ್ನ ವೃತ್ತಿಯನ್ನಾಗಿ ಏಕೆ ಮಾಡಿಕೊಳ್ಳಬಾರದು? ಎಂದು ತನಗೆ ತಾನೇ ಕೇಳಿಕೊಂಡರು. ಆದರೆ, ಅದು ಅಷ್ಟು ಸುಲಭವಲ್ಲ ಎಂಬುದು ಅವರಿಗೆ ತಿಳಿದಿತ್ತು. ಒಂದು ಸಾಂಪ್ರದಾಯಸ್ಥ ಕುಟುಂಬದಲ್ಲಿ ಹೆಣ್ಣು ಮಕ್ಕಳು ವಾಹನ ಓಡಿಸಿ ಬದುಕು ನಡೆಸಲು ಮುಂದಾದರೆ ಏನೆಲ್ಲ ಅಡೆತಡೆಗಳು ಎದುರಾಗಬಹುದು ಎಂಬುದನ್ನು ಆಕೆ ಅರಿತಿದ್ದರು. ನಿರೀಕ್ಷಿಸಿದಂತೆ, ಮೊದಲ ವಿರೋಧ ಆಕೆಯ ತಾಯಿಯಿಂದಲೇ ಬಂದಿತು. ಜನ ನಿನ್ನ ಬಗ್ಗೆ ಏನೇನು ಮಾತಾಡಿಕೊಂಡಾರು? ಎಂದು ಅವರು ಮಗಳನ್ನು ಹಿಂದಕ್ಕೆಳೆಯಲು ಪ್ರಯತ್ನಿಸಿದರು. ಆದರೆ, ಸಫುರಾ ಅಷ್ಟಕ್ಕೇ ತನ್ನ ಪ್ರಯತ್ನವನ್ನು ನಿಲ್ಲಿಸಲಿಲ್ಲ. ತಾಯಿಯನ್ನು ಕೇಳುತ್ತಲೇ ಇದ್ದರು. ಒಂದು ದಿನ ಆಕೆ ಮಗಳ ಆಲೋಚನೆಗೆ ಸಮ್ಮತಿ ನೀಡಿದರು. ಅದರೊಂದಿಗೆ ಸಫುರಾ ಖಾನ್‌ರ ಬದುಕಿನ ಮುಂದಿನ ಅಧ್ಯಾಯ ಬೆಂಗಳೂರಿನ ರಸ್ತೆಗಳಲ್ಲಿ ತೆರೆದುಕೊಂಡಿತು.

ಸಫುರಾ ವಾಹನ ಓಡಿಸಿ ತನ್ನ ಬದುಕನ್ನು ನಡೆಸಲು ಮುಂದಾಗುವ ಮೊದಲು ಅವರು ಹಲವಾರು ಕಡೆ ಬೇರೆ ಬೇರೆ ಉದ್ಯೋಗಗಳನ್ನು ಮಾಡಿದರು. ಶೆಲ್ ಕಂಪೆನಿಯ ಒಂದು ಪೆಟ್ರೋಲ್ ಪಂಪಿನಲ್ಲಿ ಕೆಲಸ ಮಾಡಿದರು. ಕೆಲಕಾಲ ಹೋಮ್ ನರ್ಸಿಂಗ್ ಮಾಡಿದರು. ಸ್ವಿಗ್ಗಿ ಮತ್ತು ಅಮೆಜಾನ್ ಡೆಲಿವರಿ ಕೆಲಸ ಮಾಡಿದರು. ಈ ಕೆಲಸಗಳೆಲ್ಲ ಶ್ರಮದಾಯಕವಾಗಿದ್ದರೂ ಸಫುರಾ ಆ ಕೆಲಸಗಳನ್ನೆಲ್ಲ ಸಂತೋಷದಿಂದಲೇ ಮಾಡಿದರು. ಆದರೆ, ಅವರ ದುಡಿಮೆಯಿಂದ ಬಂದ ಗಳಿಕೆಯೆಲ್ಲ ಗಾಡಿಯ ಪೆಟ್ರೋಲ್ ಹಾಗೂ ಮನೆ ಬಾಡಿಗೆಗೆ ಹೋಗಿ ಕೈಯಲ್ಲೇನೂ ಉಳಿಯುತ್ತಿರಲಿಲ್ಲ. ಸ್ವಲ್ಪ ಸಮಯದ ನಂತರ ಸಫುರಾ ಕಂತಿನ ಮೇಲೆ ಒಂದು ಎಲೆಕ್ಟ್ರಿಕ್ ಆಟೋರಿಕ್ಷಾವನ್ನು ಖರೀದಿಸಿದರು. ವಾಸ್ತವದಲ್ಲಿ, ಅವರಿಗೆ ಕಾರು ಖರೀದಿಸುವ ಬಯಕೆಯಿತ್ತು. ಆದರೆ ಅಷ್ಟು ಆರ್ಥಿಕ ಅನುಕೂಲತೆ ಇಲ್ಲದ ಕಾರಣ ಸಫುರಾ ಆಟೋರಿಕ್ಷಾಕ್ಕೆ ತೃಪ್ತಿ ಪಡಬೇಕಾಯಿತು. ಆಟೋ ಖರೀದಿಗೆ ಅವರ ತಾಯಿಯೇ ಅದರ ‘ಡೌನ್ ಪೇಮೆಂಟ್’ ಮಾಡಿದರು. ಉಳಿದಂತೆ ಕಂತುಗಳ ಮೂಲಕ ಸಾಲವನ್ನು ಮರು ಪಾವತಿ ಮಾಡುವುದು ಸ-ರಾರ ಜವಾಬ್ದಾರಿಯಾಯಿತು.

ಬೆಳಿಗ್ಗೆ ಐದು ಗಂಟೆಗೆ ಸಫುರಾರ ದಿನಚರಿ ಶುರುವಾಗುತ್ತದೆ. ಮಧ್ಯಾಹ್ನದ ತನಕ ಮೊದಲ ಶಿಫ್ಟ್ ನಡೆಸುತ್ತಾರೆ. ನಂತರ ಮನೆಗೆ ಬಂದು ಊಟ, ವಿಶ್ರಾಂತಿ ಮುಗಿಸಿ ಸಂಜೆಯಿಂದ ತಡ ರಾತ್ರಿ ತನಕ ಎರಡನೇ ಶಿಫ್ಟನ್ನು ನಡೆಸುತ್ತಾರೆ. ಎರಡು ಶಿಫ್ಟ್ ಪ್ರಕಾರ ಪ್ರತೀ ದಿನ ಸುಮಾರು ಹದಿನಾಲ್ಕು ಗಂಟೆ ರಿಕ್ಷಾ ಓಡಿಸುತ್ತಾರೆ. ನಡುವೆ ಸಮಯ ಸಿಕ್ಕಾಗಲೆಲ್ಲ ತಮ್ಮನಿಗೆ ಟ್ಯೂಷನ್ ಹೇಳಿ ಕೊಡುತ್ತಾರೆ. ತಡ ರಾತ್ರಿ ಹೊತ್ತು ಮಹಿಳೆಯರು ಆಟೋ ಚಲಾಯಿಸುವುದು ಅಸುರಕ್ಷಿತ ಅನ್ನುವುದು ಸಾಮಾನ್ಯ ಮಾತು. ಆದರೆ, ಸಫುರಾ ಅದನ್ನು ಒಪ್ಪುವುದಿಲ್ಲ. ‘ಬೆಂಗಳೂರು ನನ್ನ ನಗರ. ನನಗಿಲ್ಲಿ ಯಾವತ್ತೂ ಅಸುರಕ್ಷತೆಯ ಭಾವನೆ ಹುಟ್ಟಿಯೇ ಇಲ್ಲ. ಬಹುಶಃ ಎಂಟ್ಹತ್ತು ವರ್ಷಗಳ ಹಿಂದೆ ಈ ಅಸುರಕ್ಷತೆಯ ಮಾತು ನಿಜವಾಗಿತ್ತೋ ಏನೋ. ಆದರೆ ಈಗ ಬೆಂಗಳೂರು ಮಹಿಳೆಯರಿಗೆ ಸುರಕ್ಷಿತ ನಗರ ಅಂತ ಧೈರ್ಯವಾಗಿ ಹೇಳಬಲ್ಲೆ’ ಎಂದು ಆಕೆ ಹೇಳುತ್ತಾರೆ.

ಒಮ್ಮೆ ಸಫುರಾರ ರಿಕ್ಷಾ ಹತ್ತಿದವರು ಯಾವತ್ತೂ ಅವರನ್ನು ಮರೆಯಲಾರರು. ತಮ್ಮ ಜಾಲಿ ನಡವಳಿಕೆಯಿಂದ ಸಫುರಾ ಅವರನ್ನು ಸೆಳೆದು ಬಿಡುತ್ತಾರೆ. ಒಂದು ರಾತ್ರಿ ಒಬ್ಬಳು ಮಹಿಳೆ ಅವರ ಆಟೋದಲ್ಲಿ ಕುಳಿತರು. ಆಕೆ ತನ್ನ ಗಂಡನೊಂದಿಗೆ ಜಗಳ ಮಾಡಿಕೊಂಡು ಬಂದಿದ್ದರು. ಆಟೋ ಪ್ರಯಾಣ ಮುಗಿದಾಗ ಆ ಮಹಿಳೆ ಸಂಪೂರ್ಣವಾಗಿ ಬದಲಾಗಿದ್ದರು. ಅಳುತ್ತ ಆಟೋ ಹತ್ತಿದ್ದ ಅವರು ನಗುತ್ತ ಕೆಳಗಿಳಿದರು. ಅವರು ಹೋಗುವಾಗ ಸಫುರಾರಿಗೆ ‘ಯೂ ಆರ್ ಗ್ರೇಟ್. ನಿನ್ನ ಬಗ್ಗೆ ನನಗೆ ಹೆಮ್ಮೆಯಾಗುತ್ತದೆ’ ಎಂದು ಹೇಳಿ ಹೋದರು. ಐಟಿ ಕಂಪೆನಿಗಳಲ್ಲಿ ಉದ್ಯೋಗ ಮಾಡುವ ಅನೇಕ ಮಹಿಳಾ ಉದ್ಯೋಗಿಗಳು ಪ್ರತೀದಿನ ತಮ್ಮನ್ನು ಮನೆಯಿಂದ ಆಫೀಸಿಗೆ ಹಾಗೂ ಆಫೀಸಿನಿಂದ ಮನೆಗೆ ಕರೆದುಕೊಂಡು ಹೋಗಲು ಸಫುರಾರನ್ನು ಕೇಳಿಕೊಳ್ಳುತ್ತಾರೆ. ಹೀಗೆ, ರಸ್ತೆಯಲ್ಲಿ ರಿಕ್ಷಾ ನಡೆಸುವ ಮೂಲಕವೇ ಸಫುರಾ ಜಗತ್ತು ಹಾಗೂ ಬದುಕನ್ನು ಎದುರಿಸಲು ಕಲಿಯುತ್ತಿದ್ದಾರೆ.

ಅದೊಂದು ದಿನ ತಮನ್ನಾ ತನ್ವೀರ್ ಎಂಬ ಒಬ್ಬರು ಡಿಜಿಟಲ್ ಕ್ರಿಯೇಟರ್ ಎಲ್ಲಿಗೋ ಹೋಗಬೇಕಿದ್ದು ಅದಕ್ಕಾಗಿ ಓಲಾ, ಊಬರ್ ಮತ್ತು ರ‍್ಯಾಪಿಡೋ ಬುಕ್ ಮಾಡಲು ಪ್ರಯತ್ನಿಸಿದರೆ ಅವು ಯಾವುದೂ ಸಿಗಲಿಲ್ಲ. ಆಗ ಪಕ್ಕದಲ್ಲಿ ಹಾದು ಹೋಗುತ್ತಿದ್ದ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿದರು. ಅದು ಸಫುರಾರ ರಿಕ್ಷಾವಾಗಿತ್ತು. ನಗು ನಗುತ್ತ, ಬಹಳ ಖುಷಿಯಿಂದ ರಿಕ್ಷಾ ಓಡಿಸುತ್ತಿದ್ದ ಸಫುರಾರನ್ನು ನೋಡಿ ಕುತೂಹಲಗೊಂಡ ತಮನ್ನಾ ಅವರೊಂದಿಗೆ ಮಾತುಶುರು ಮಾಡಿದರು. ಸಫುರಾ ಆಟೋ ಓಡಿಸುವ ತನ್ನ ಖುಷಿಯ ಬಗ್ಗೆ ಹೇಳುತ್ತ ಹೋದಂತೆ ತಮನ್ನಾ ಅದನ್ನು ತನ್ನ ಡಿಜಿಟಲ್ ಅಕೌಂಟಲ್ಲಿ ಶೇರ್ ಮಾಡಿದರು. ಮುಂದಾದನ್ನು ಇಬ್ಬರೂ ನಿರೀಕ್ಷಿಸಿರಲಿಲ್ಲ- ಆ ವಿಡಿಯೋ ಎಷ್ಟು ವೈರಲ್ ಆಯಿತೆಂದರೆ, ಕೆಲವೇ ಗಂಟೆಗಳಲ್ಲಿ ೨.೮ ಮಿಲಿಯನ್ ಜನ ಆ ವಿಡಿಯೋವನ್ನು ಲೈಕ್ ಮಾಡಿದರು! ೩೦೦೦ ಕಮೆಂಟ್‌ಗಳು ಬಂದವು! ಅಭಿನಂದನೆ, ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತು! ಅಷ್ಟೊಂದು ಜನ ತನ್ನ ಕತೆಯನ್ನು ಮೆಚ್ಚಿಕೊಂಡುದು ನೋಡಿ ಸಫುರಾಗೆ ಆಶ್ಚರ್ಯವೂ ಆಯಿತು, ಸಂತೋಷವೂ ಆಯಿತು. ‘ಗೆಟ್ ಎ ಕಾರ್’ ಅನ್ನುವ ಒಂದು ಸ್ಟಾರ್ಟ್‌ಅಪ್ ಕಂಪೆನಿ ಸಫುರಾಗೆ ಒಂದು ಕಾರು ಕೊಡಿಸುವ ಭರವಸೆಯನ್ನು ನೀಡಿತು.

ಸಫುರಾ ಕೂಡಾ ಈಗ ತಮ್ಮದೇ ಒಂದು ಯೂ ಟ್ಯೂಬ್ ಚಾನಲ್ ನಡೆಸುತ್ತಿದ್ದಾರೆ. ಆದರೆ, ಸಫುರಾ ತನಗೆ ಲಭಿಸಿದ ಡಿಜಿಟಲ್ ಖ್ಯಾತಿಯಿಂದ ಖುಷಿ ಪಟ್ಟರೂ, ತನ್ನ ಗುರಿ ಮುಟ್ಟಲು ಬೆಂಗಳೂರಿನ ರಸ್ತೆಗಳೇ ಸರಿಯಾದ ದಾರಿಯೇ ವಿನಾ ಬೇರೆ ಅಡ್ಡ ದಾರಿಗಳಿಲ್ಲ ಎಂದು ತಿಳಿದಿದ್ದಾರೆ. ಹಾಗಾಗಿ, ಅವರು ಈಗಲೂ ಬೆಳಿಗ್ಗೆ ಐದು ಗಂಟೆಗೆ ಎದ್ದು, ದೈನಂದಿನ ಕೆಲಸಗಳನ್ನು ಮುಗಿಸಿ, ಆರು ಗಂಟೆಗೆ ರಸ್ತೆಗಿಳಿಯುತ್ತಾರೆ. ಇನ್ನು ಐದು ವರ್ಷಗಳಲ್ಲಿ ತನ್ನ ಕುಟುಂಬಕ್ಕೊಂದು ಸ್ವಂತ ಮನೆ ಮಾಡುವುದು ಅವರ ಮೊತ್ತ ಮೊದಲ ಆದ್ಯತೆ.

” ಬೆಳಿಗ್ಗೆ ಐದು ಗಂಟೆಗೆ ಸಫುರಾರ ದಿನಚರಿ ಶುರುವಾಗುತ್ತದೆ. ಮಧ್ಯಾಹ್ನದ ತನಕ ಮೊದಲ ಶಿಫ್ಟ್ ನಡೆಸುತ್ತಾರೆ. ನಂತರ ಮನೆಗೆ ಬಂದು ಊಟ, ವಿಶ್ರಾಂತಿ ಮುಗಿಸಿ ಸಂಜೆಯಿಂದ ತಡ ರಾತ್ರಿ ತನಕ ಎರಡನೇ ಶಿಫ್ಟನ್ನು ನಡೆಸುತ್ತಾರೆ.”

 

 

Tags:
error: Content is protected !!