ಪ್ರಸಿದ್ಧ ಬಾಲಿವುಡ್ ತಾರೆಗಳ ಜೊತೆಯಲ್ಲಿ ಕೆಲಸ ಮಾಡಿದ ಅನುಭವ
ಮುಂಬೈ ಎಂಬ ಮಾಯಾನಗರಿಗೆ ಪ್ರತಿ ದಿನ ಬದುಕು ಹುಡುಕಿಕೊಂಡು, ಕನಸುಗಳನ್ನು ಕಟ್ಟಿಕೊಂಡು ನೂರಾರು ಜನ ಬರುತ್ತಾರೆ. ತನ್ನ ಆಶ್ರಯ ಬಯಸಿ ಬಂದವರನ್ನು ಈ ಮುಂಬೈ ಬರಿಗೈಯಲ್ಲಿ ವಾಪಸ್ ಕಳಿಸುವುದು ತೀರಾ ಕಡಿಮೆ. ಈ ಮಾಯಾ ನಗರಿ ಅವರ ಬದುಕಿಗೆ ಏನಾದರೊಂದು ದಾರಿಯನ್ನು ತೋರಿಸಿಯೇ ತೋರಿಸುತ್ತದೆ. ಹೀಗೆ ಮುಂಬೈಗೆ ತನ್ನ ಬದುಕಿನ ದಾರಿ ಹುಡುಕಿಕೊಂಡು ಬಂದ ಮುನ್ನಾ ಠಾಕೂರ್ ಅಂತಹವರ‍್ಲೊಬ್ಬರು.
ಅಂದು ಮುನ್ನಾ ಠಾಕೂರ್ ಮುಂಬೈಗೆ ಬಂದಾಗ ಅವರ ಕಿಸೆಯಲ್ಲಿದ್ದುದು ಬರೇ ೨೪ ರೂ.! ಇಂದು ಅವರು ವರ್ಷಕ್ಕೆ ಕನಿಷ್ಠ ೨೫ ಲಕ್ಷ ರೂ. ಗೂ ಹೆಚ್ಚು ಸಂಪಾದಿಸುತ್ತಾರೆ! ಅವರು ತಮ್ಮ ಕಳೆದ ೨೩ ವರ್ಷಗಳ ವೃತ್ತಿಯಲ್ಲಿ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಸುನಿಲ್ ಶೆಟ್ಟಿ, ತಾಪಸಿ ಪೊನ್ನು, ಇರ್ಫಾನ್ ಖಾನ್ ಮತ್ತು ಸೋನು ಸೂದ್ ಮೊದಲಾದ ಪ್ರಸಿದ್ಧ ಬಾಲಿವುಡ್ ತಾರೆಗಳ ಜೊತೆಯಲ್ಲಿ ಕೆಲಸ ಮಾಡಿ ಒಬ್ಬ ಸೆಲೆಬ್ರಿಟಿ ಫೋಟೋಗ್ರಾಫರ್ ಎನಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಒಂದು ಬಡ ಕುಟುಂಬದಲ್ಲಿ ಹುಟ್ಟಿದವರು. ಅವರ ತಂದೆ ಹತ್ತಿ ಗಿರಣಿಯಲ್ಲಿ ಮಾಡುವ ಕೆಲಸದಿಂದ ಅವರ ಸಂಸಾರ ಉಣ್ಣಲಷ್ಟೇ ಸಾಧ್ಯವಾಗುತ್ತಿತ್ತು. ಮೂವರು ಮಕ್ಕಳಲ್ಲಿ ಮುನ್ನಾನೇ ಹಿರಿಯವರು. ಅವರು ಏಳನೇ ತರಗತಿ ತಲುಪಿದಾಗ ತಂದೆಯಂತೆ ತಾನೂ ಕೆಲಸ ಮಾಡಿ ಸಂಪಾದಿಸುವ ತೀರ್ಮಾನ ಮಾಡಿ ಶಾಲೆ ಬಿಟ್ಟರು. ಶಾಲೆ ಬಿಟ್ಟವರು ೧೯೯೧ರಲ್ಲಿ ೨೪ ರೂ. ಹಿಡಿದುಕೊಂಡು ನಾಲ್ವರು ಸ್ನೇಹಿತರ ಜೊತೆಯಲ್ಲಿ ಮುಂಬೈಗೆ ಬಂದರು.
ಮುಂಬೈಗೆ ಬಂದ ಮುನ್ನಾ ಮೊದಲಿಗೆ ಒಂದು ವೆಲ್ಡಿಂಗ್ ಅಂಗಡಿಯಲ್ಲಿ ಕೈಗಾಡಿ ಎಳೆಯುವ ಕೆಲಸ ಮಾಡಿದರು. ನಂತರ ಒಂದು ವರ್ಷ ವಜ್ರ ಪಾಲೀಶ್ ಮಾಡುವ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ೧೯೯೩ರಲ್ಲಿ ಅವರು ಲೋಕಂಡವಾಲಾ ಎಂಬಲ್ಲಿ ದಿನಪತ್ರಿಕೆ ಹಾಕುವ ಕೆಲಸ ಮಾಡತೊಡಗಿದರು. ಆಗ ಲೋಕಂಡವಾಲಾದಲ್ಲಿದ್ದ ಒಂದು ಫೋಟೋ ಸ್ಟೂಡಿಯೋಗೆ ಜನಪ್ರಿಯ ವ್ಯಕ್ತಿಗಳು, ಗಣ್ಯರು ತಮ್ಮ ಪೋರ್ಟ್‌ಫೋಲಿಯೋಗಾಗಿ ಫೋಟೋ ತೆಗೆಸಿಕೊಳ್ಳಲು ಬರುತ್ತಿದ್ದರು. ಮುನ್ನಾ ಆ ಸ್ಟೂಡಿಯೋಕ್ಕೂ ದಿನಪತ್ರಿಕೆ ಹಾಕುತ್ತಿದ್ದರು. ಮುನ್ನಾ ಆ ಸ್ಟೂಡಿಯೋದ ಮಾಲೀಕರಿಗೆ ತನ್ನನ್ನು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಕೇಳಿಕೊಂಡರು. ಆದರೆ ಅವರು ಒಪ್ಪಲಿಲ್ಲ. ೧೯೯೮ರಲ್ಲಿ ಅವರು ಕೊನೆಗೂ ಮುನ್ನಾನನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಒಪ್ಪಿದರು. ಆಗ ಆ ಸ್ಟುಡಿಯೋದಲ್ಲಿ ಭಿಲಾಲ್ ಎಂಬ ಕಾಶ್ಮೀರಿ ಹುಡುಗ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ. ಮುನ್ನಾ ಮದುವೆ ಮೊದಲಾದ ಕಾರ್ಯಕ್ರಮಗಳಿಗೆ ಭಿಲಾಲ್‌ಗೆ ಸಹಾಯಕನಾಗಿ ಹೋಗುತ್ತಿದ್ದರು. ಭಿಲಾಲ್ ಮುನ್ನಾರಿಗೆ ಕ್ಯಾಮೆರಾಕ್ಕೆ ಫಿಲ್ಮ್ ರೋಲ್ ಅಳವಡಿಸುವುದು ಹೇಗೆ ಎಂಬುದರಿಂದ ಹಿಡಿದು ಫೋಟೋಗ್ರಾಫಿಯ ಪ್ರತಿಯೊಂದನ್ನೂ ಕಲಿಸಿದರು.
ಒಮ್ಮೆ, ‘ಪಾಪ ಕಹ್ತೆ ಹೈಂ’ ಎಂಬ ಸಿನಿಮಾದಲ್ಲಿ ನಟಿಸಿದ್ದ ಮಯೂರಿ ಕಾಂಗೊ ಎಂಬ ನಟಿ ಆ ಸ್ಟೂಡಿಯೋದಲ್ಲಿ ತಮ್ಮ ಪಾಸ್‌ಪೋರ್ಟ್ ಫೋಟೋ ತೆಗೆಸಿಕೊಂಡಿದ್ದು, ಅದನ್ನು ಅವರಿಗೆ ತಲುಪಿಸಲು ಮುನ್ನಾ ಅವರ ಮನೆಗೆ ಹೋಗಿದ್ದರು. ಅಲ್ಲಿ ಅವರು ಮಯೂರಿಯವರ ಕೆಲವು ಫೋಟೋಗಳನ್ನು ತೆಗೆದರು. ಆ ಫೋಟೋಗಳು ‘ಸ್ಟಾರ್ ಡಸ್ಟ್’ ಸಿನಿಮಾ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದು ಪತ್ರಿಕೆಯಲ್ಲಿ ಪ್ರಕಟವಾದ ಮುನ್ನಾರ ಪ್ರಪ್ರಥಮ ಫೋಟೋ.
ಮುನ್ನಾ ಸ್ಟೂಡಿಯೋ ಕೆಲಸಕ್ಕೆ ಸೇರಿದರೂ ದಿನಪತ್ರಿಕೆ ಹಾಕುವ ಕೆಲಸವನ್ನು ಬಿಟ್ಟಿರಲಿಲ್ಲ. ಮಾಡೆಲ್ ಹಾಗೂ ನಟ ಅರ್ಜುನ್ ರಾಂಪಾಲ್ ಮನೆಗೂ ಅವರು ದಿನಪತ್ರಿಕೆ ಹಾಕುತಿದ್ದರು. ಅವರು ರಾಂಪಾಲ್‌ರ ಒಂದು ಫೋಟೋ ಶೂಟ್ ಮಾಡಲು ಆಸೆ ಪಟ್ಟರು. ಆದರೆ, ರಾಂಪಾಲ್‌ರನ್ನು ಕೇಳುವ ಅವಕಾಶವಾಗಲೀ, ಹಾಗೆ ಕೇಳುವ ಧೈರ್ಯವಾಗಲೀ ಅವರಿಗಿರಲಿಲ್ಲ. ೧೯೯೯ರ ಒಂದು ದಿನ ಆದದ್ದಾಗಲಿ ಎಂದು ಧೈರ್ಯ ಮಾಡಿ ರಾಂಪಾಲ್‌ರ ಒಬ್ಬಳು ಮನೆಯಾಳನ್ನು ತನಗೆ ರಾಂಪಾಲ್‌ರೊಂದಿಗೆ ಒಮ್ಮೆ ಮಾತನಾಡುವ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು. ಮುನ್ನಾರ ಅದೃಷ್ಟಕ್ಕೆ ರಾಂಪಾಲ್ ಅದಕ್ಕೆ ಒಪ್ಪಿದರು. ಫೋಟೋಗಳು ಚೆನ್ನಾಗಿ ಬಾರದಿದ್ದರೆ ನೆಗೆಟಿವ್ ರೋಲನ್ನು ಅವರೇ ಇಟ್ಟುಕೊಳ್ಳಬಹುದು ಅಂತ ಮುನ್ನಾ ಅವರಿಗೆ ಹೇಳಿದರು. ಮುನ್ನಾರ ಕೋರಿಕೆಯಂತೆ ರಾಂಪಾಲ್ ಉಚಿತವಾಗಿ ಫೋಟೋ ಶೂಟ್ ನಡೆಸಿಕೊಟ್ಟರು. ಅದು ಮುನ್ನಾ ಅವರ ಪ್ರಪ್ರಥಮ ಸೆಲೆಬ್ರಿಟಿ ಫೋಟೋ ಶೂಟ್. ಅದು ಬಹಳ ಚೆನ್ನಾಗಿಯೂ ಬಂದಿತು. ಅದನ್ನೇ ಮೂಲವಾಗಿಟ್ಟುಕೊಂಡು ಮುನ್ನಾ ನಂತರ ಮುಕುಲ್ ದೇವ್‌ರ ಫೋಟೋ ಶೂಟ್ ನಡೆಸಿದರು. ಅದು ‘ಝೆಡ್’ ಪತ್ರಿಕೆಯಲ್ಲಿ ಪ್ರಕಟವಾಯಿತು. ನಂತರ ಅವರು ಪುಣೆಯಲ್ಲಿ ‘ಮೋಕ್ಷ’ ಎಂಬ ಸಿನಿಮಾದ ಶೂಟಿಂಗ್‌ನಲ್ಲಿ ನಿರತರಾಗಿದ್ದ ಜಾನ್ ಅಬ್ರಾಹಂರ ಒಂದು ಫೋಟೋ ಶೂಟ್ ನಡೆಸಿದರು. ಆ ಚಿತ್ರ ತೆರೆ ಕಾಣಲಿಲ್ಲವಾದರೂ ಮುನ್ನಾ ತೆಗೆದ ಜಾನ್ ಅಬ್ರಾಹಂರ ಚಿತ್ರಗಳು ಹೋರ್ಡಿಂಗ್‌ಗಳಲ್ಲಿ ಬಳಸಲ್ಪಟ್ಟು, ಅವರು ಸಿನಿಮಾ ಇಂಡಸ್ಟ್ರಿಯ ಕೆಲವರ ಗಮನಕ್ಕೆ ಬಂದರು. ಆಗ ಸೋನು ಸೂದ್ ಹಿಂದಿ ಚಿತ್ರರಂಗದಲ್ಲಿ ಕಾಲೂರಲು ಶ್ರಮಿಸುತ್ತಿದ್ದ ದಿನಗಳು. ಅವರು ಒಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮುನ್ನಾ ಠಾಕೂರ್ ಅವರನ್ನು ಕೇಳಿಕೊಂಡು ಅವರ ಜೊತೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ಮನೆ ಬಾಡಿಗೆ ಸೇರಿ ಎಲ್ಲಾ ಖರ್ಚುಗಳನ್ನು ಇಬ್ಬರೂ ಹಂಚಿಕೊಳ್ಳುತ್ತಿದ್ದರು. ಮುಂದಿನ ದಿನಗಳಲ್ಲಿ ಮುನ್ನಾ ಶ್ರದ್ಧಾ ಕಪೂರ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಟೈಗರ್ ಶ್ರಾಫ್ ಮತ್ತು ಇತರ ಹಲವಾರು ಬಾಲಿವುಡ್ ನಟ ನಟಿಯರ ಫೋಟೋ ಶೂಟ್ ನಡೆಸಿದರು.
ಮುನ್ನಾ ಠಾಕೂರ್ ೨೪ ರೂಪಾಯಿ ಹಿಡಿದು ಮುಂಬೈಗೆ ಬಂದದ್ದು ಕೇವಲ ತನ್ನ ಹೊಟ್ಟೆ ಪಾಡಿನ ದಾರಿ ಹುಡುಕಿಕೊಳ್ಳಲು. ಆದರೆ, ಈ ಮಾಯಾ ನಗರಿ ಅವರನ್ನು ಒಬ್ಬ ಸೆಲೆಬ್ರೆಟಿ ಫೋಟೋಗ್ರಾಫರನ್ನಾಗಿ ರೂಪಿಸಿತು.
” ಅಂದು ಮುನ್ನಾ ಠಾಕೂರ್ ಮುಂಬೈಗೆ ಬಂದಾಗ ಅವರ ಕಿಸೆಯಲ್ಲಿದ್ದುದು ಬರೇ ೨೪ ರೂ.! ಇಂದು ಅವರು ವರ್ಷಕ್ಕೆ ಕನಿಷ್ಠ ೨೫ ಲಕ್ಷ ರೂ. ಗೂ ಹೆಚ್ಚು ಸಂಪಾದಿಸುತ್ತಾರೆ!”




