ಪಂಜುಗಂಗೊಳ್ಳಿ
ಊಟವಿಲ್ಲದೆ ಪರದಾಡಿದ ಘಟನೆಯೇ ನಿರಂತರ ದಾಸೋಹಕ್ಕೆ ಪ್ರೇರಣೆ
ಇತ್ತೀಚಿನ ದಿನಗಳಲ್ಲಿ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಉಚಿತ ಊಟ ನೀಡಲಾಗುತ್ತದೆ. ಆದರೆ, ಅವರೊಂದಿಗೆ ಅವರ ಜೊತೆಗಾರರಾಗಿ ಬರುವ ಅವರ ಸಂಬಂಧಿಕರಿಗೆ ಅಂತಹ ಸೌಲಭ್ಯ ಸಿಗುವುದಿಲ್ಲ. ಅವರು ತಮ್ಮದೇ ಖರ್ಚಿನಲ್ಲಿ ಆಸ್ಪತ್ರೆಯ ಕ್ಯಾಂಟೀನ್ ಅಥವಾ ಹೊರಗೆ ಊಟಮಾಡಬೇಕಾಗುತ್ತದೆ. ಆದರೆ, ಅಂತಹ ಆರ್ಥಿಕ ಅನುಕೂಲವಿಲ್ಲದವರು ಹೊರಗಡೆ ಉಣ್ಣಲು ಸಾಧ್ಯವಾಗದೆ ಅರೆ ಹೊಟ್ಟೆಯಲ್ಲೋ ಅಥವಾ ಹಸಿವೆಯಲ್ಲೊ ಇರಬೇಕಾಗುತ್ತದೆ.
ಉತ್ತರ ಪ್ರದೇಶದ ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿ, ಬಲರಾಮ್‌ಪುರ್ ಸರ್ಕಾರಿ ಆಸ್ಪತ್ರೆ ಮತ್ತು ರಾಮ್ ಮನೋಹರ್ ಲೋಹಿಯಾ ಸರ್ಕಾರಿ ಆಸ್ಪತ್ರೆಗಳಲ್ಲೂ ಹಿಂದೆ ಇದೇ ಪರಿಸ್ಥಿತಿ ಇತ್ತು. ಆದರೆ, ಈಗ ಅಲ್ಲಿ ಬಡರೋಗಿಗಳ ಜೊತೆಗಾರರಾಗಿ ಬರುವ ಅವರ ಸಂಬಂಧಿಕರು ಒಂದು ದಿನವೂ ಉಪವಾಸ ಇರಬೇಕಾದ ಪ್ರಸಂಗವಿಲ್ಲ. ಅವರಿಗೆ ಮಧ್ಯಾಹ್ನ ಮತ್ತು ರಾತ್ರಿ ಎರಡು ಹೊತ್ತು ಹೊಟ್ಟೆ ತುಂಬಾ ರುಚಿಯಾದ, ಶುಚಿಯಾದ ಊಟ ಸಿಗುತ್ತದೆ, ಉಚಿತವಾಗಿ! ಅದಕ್ಕೆ ಕಾರಣ ರೂರ್ಕಿಯ ೪೬ ವರ್ಷ ಪ್ರಾಯದ ವಿಶಾಲ್ ಸಿಂಗ್ ಎಂಬ ಒಬ್ಬ ಸಣ್ಣ ಉದ್ಯಮಿ. ಕಳೆದ ೧೪ ವರ್ಷಗಳಿಂದ ವಿಶಾಲ್ ಸಿಂಗ್ ಈ ಮೂರು ಆಸ್ಪತ್ರೆಗಳಿಗೂ ಬರುವ ಬಡ ರೋಗಿಗಳ ಜೊತೆಗಾರರಿಗೆ ಉಚಿತ ಊಟವನ್ನು ಒದಗಿಸುತ್ತಿದ್ದಾರೆ. ಪ್ರತಿ ದಿನ ಈ ಮೂರು ಆಸ್ಪತ್ರೆಗಳ ಸಾವಿರಾರು ಬಡರೋಗಿಗಳ ಸಂಬಂಧಿಕರು ವಿಶಾಲ್ ಸಿಂಗ್‌ರ ಈ ಔದಾರ್ಯದ ಪ್ರಯೋಜನ ಪಡೆಯುತ್ತಿದ್ದಾರೆ. ಈ ಮೂರು ಆಸ್ಪತ್ರೆಗಳಲ್ಲದೆ ಮುಂದಿನ ವರ್ಷಗಳಲ್ಲಿ ಅವರು ಲಕ್ನೋದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೂ ತಮ್ಮ ಉಚಿತ ಊಟದ ಸೇವೆಯನ್ನು ವಿಸ್ತರಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ವಿಶಾಲ್ ಸಿಂಗ್ ಒಂದು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಅವರು ಈ ಉಚಿತ ಊಟದ ಯೋಜನೆಯನ್ನು ಶುರು ಮಾಡಲು ಕಾರಣವೇ ಅವರು ಅನುಭವಿಸಿದ ಹಸಿವು. ೨೩ ವರ್ಷಗಳ ಹಿಂದೆ ವಿಶಾಲ್ ಸಿಂಗ್‌ರ ತಂದೆ ವಿಜಯ್ ಬಹದ್ದೂರ್ ಸಿಂಗ್ ತೀವ್ರವಾಗಿ ಕಾಯಿಲೆ ಬಿದ್ದು, ಗುರ್ಗಾಂವ್‌ನ ಒಂದು ಖಾಸಗಿ ಆಸ್ಪತ್ರೆ ಸೇರಬೇಕಾಯಿತು. ಅವರಿಗೆ ಅಸ್ತಮಾ ಸಮಸ್ಯೆ ಇತ್ತು. ಮುಂದೆ, ಅವರಿಗೆ ಶ್ವಾಸಕೋಶದ ಸೋಂಕು ತಗಲಿತು. ವಾರಗಟ್ಟಲೆ ಅವರು ಆಸ್ಪತ್ರೆಯಲ್ಲಿರಬೇಕಾಗಿ ಬಂದಿತು. ಆಗ ನಡೆದ ಒಂದು ಘಟನೆ ವಿಶಾಲ್ ಸಿಂಗ್ ರ ಬದುಕಿನ ದೃಷ್ಟಿಕೋನವನ್ನೇ ಬದಲಿಸಿತು. ವಾರಗಳ ಕಾಲ ಅವರ ತಂದೆ ಆಸ್ಪತ್ರೆಯಲ್ಲಿದ್ದ ಕಾರಣ ಆಸ್ಪತ್ರೆ ವಾಸ ಹಾಗೂ ಔಷಧಿಗಾಗಿ ಅವರಲ್ಲಿದ್ದ ಹಣವೆಲ್ಲ ಖಾಲಿಯಾಗಿ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಯಿತು. ಎಷ್ಟೆಂದರೆ, ಒಮ್ಮೆ ಅವರಿಗೆ ಕೆಲವು ದಿನಗಳ ಕಾಲ ತಿನ್ನಲು ಏನೂ ಸಿಗದೆ ತಿಪ್ಪೆಗುಂಡಿಯಲ್ಲಿ ಎಸೆಯಲ್ಪಟ್ಟ ಆಹಾರ ಪದಾರ್ಥಗಳನ್ನು ಹೆಕ್ಕಿ ತಂದು ತಿಂದರು!
ಅಷ್ಟೆಲ್ಲ ಹಣ ಖರ್ಚು ಮಾಡಿಯೂ, ಅಷ್ಟೆಲ್ಲ ಒದ್ದಾಟ ಅನುಭವಿಸಿಯೂ ವಿಶಾಲ್ ಸಿಂಗ್‌ಗೆ ತಮ್ಮ ತಂದೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ತಂದೆಯನ್ನು ಕಳೆದುಕೊಂಡ ನೋವಿನ ಜೊತೆಗೆ ತಾನು ಅನುಭವಿಸಿದ ಹಸಿವಿನ ನೋವನ್ನೂ ಅವರು ಮರೆಯದಾದರು. ಅಷ್ಟೇ ಅಲ್ಲ, ತಾನು ಮುಂದೆ ಯಾವಾಗಲಾದರೂ ಸಾಕಷ್ಟು ಹಣ ಸಂಪಾದಿಸಿ ಅನುಕೂಲಸ್ಥನಾದರೆ ತಾನು ಅನುಭವಿಸಿದ ಹಸಿವಿನ ನೋವನ್ನು ಇನ್ನಾರಿಗೂ ಬಾರದಂತೆ ನೋಡಿಕೊಳ್ಳುವೆ ಎಂದು ಮನಸ್ಸಿನಲ್ಲೇ ಪ್ರತಿಜ್ಞೆ ಮಾಡಿದರು.
ತಂದೆಯನ್ನು ಕಳೆದುಕೊಂಡ ನಂತರ ವಿಶಾಲ್ ಸಿಂಗ್ ಹೊಟ್ಟೆಪಾಡಿನ ದಾರಿಯನ್ನು ಅರಸುತ್ತ ಲಕ್ನೋಗೆ ಬಂದರು. ಮೊದಲಿಗೆ ಅವರು ಹಝ್ರತ್ ಗಂಜ್‌ನ ಒಂದು ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ಅಟೆಂಡರ್ ಆಗಿ ಕೆಲಸ ಮಾಡಿದರು. ನಂತರ ಒಂದು ಹೋಟೆಲ್‌ನಲ್ಲಿ ಪಾತ್ರೆ ತೊಳೆದರು. ಅದರ ನಂತರ ತಮ್ಮದೇ ಒಂದು ಚಿಕ್ಕ ಚಹದಂಗಡಿ ತೆರೆದರು. ಅಲ್ಲಿ ಅವರು ಬಡ ಗಿರಾಕಿಗಳಿಗೆ ಉಚಿತವಾಗಿ ಚಹ, ಬನ್ ಕೊಡುತ್ತಿದ್ದರು. ಅದರ ನಂತರ ಸೀತಾಪುರ್ ಎಂಬಲ್ಲಿ ಎಲೆಕ್ಟ್ರೋಡ್ ವ್ಯಾಪಾರವನ್ನು ಪ್ರಾರಂಭಿಸಿದರು. ಅದು ಅವರಿಗೆ ಬಹಳಷ್ಟು ಲಾಭ ತಂದು ಕೊಟ್ಟಿತು. ನಂತರ ಅವರು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಇಳಿದರು. ಅಲ್ಲಿಂದ ಮುಂದೆ ಅವರು ಹಿಂದೆ ನೋಡುವ ಪ್ರಸಂಗವೇ ಬರಲಿಲ್ಲ. ತನ್ನ ೨೫ರ ಪ್ರಾಯದಲ್ಲಿ ವಿಶಾಲ್ ಸಿಂಗ್ ಒಬ್ಬ ಕೋಟ್ಯಧಿಶರಾದರು. ಬದುಕಿನಲ್ಲಿ ಬೇಕಾದುದನ್ನೆಲ್ಲ ಪಡೆಯುವಂತಾದರು. ಆದರೆ, ಅವರು ತನ್ನ ಹಸಿವಿನ ಆ ಅನುಭವವನ್ನು ಮರೆಯಲಿಲ್ಲ. ತಾನು ಅಂದು ಪ್ರತಿಜ್ಞೆ ಮಾಡಿದಂತೆ ಬಡಬಗ್ಗರ ಹಸಿವನ್ನು ನೀಗಿಸಲು ೨೦೦೭ರಲ್ಲಿ ತನ್ನ ತಂದೆಯ ಹೆಸರಿನಲ್ಲಿ ‘ವಿಜಯ್ ಶ್ರೀ ಫೌಂಡೇಶನ್’ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಮೂಲಕ ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾದರು. ಅದರ ಮೊದಲ ಹೆಜ್ಜೆಯಾಗಿ ಲಕ್ನೋ ಸರ್ಕಾರೀ ಆಸ್ಪತ್ರೆಯಲ್ಲಿ ಅಲ್ಲಿನ ೧೦೦ ಬಡರೋಗಿಗಳಿಗೆ ಪ್ರತಿ ದಿನ ಮೂರು ಹೊತ್ತಿನ ಊಟ ನೀಡುವ ಕಾರ್ಯಕ್ರಮದ ಮೂಲಕ ತನ್ನ ಯೋಜನೆಯನ್ನು ಪ್ರಾರಂಭಿಸಿದರು.
ಮೊದಲಿಗೆ, ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರು ತಮ್ಮಲ್ಲಿನ ಬಡ ರೋಗಿಗಳನ್ನು ಗುರುತಿಸಿ, ಅವರಿಗೆ ಊಟದ ಟೋಕನ್‌ಗಳನ್ನು ಹಂಚುತ್ತಾರೆ. ರೋಗಿಗಳ ಸಂಬಂಧಿಕರು ಆ ಟೋಕನ್‌ಗಳನ್ನು ತೋರಿಸಿ ಉಚಿತ ಊಟಗಳನ್ನು ಪಡೆಯುತ್ತಾರೆ. ಸಾಮಾನ್ಯವಾಗಿ ಉಚಿತ ಊಟಗಳು ಬಹಳ ಸರಳವಾಗಿರುತ್ತವೆ. ಆದರೆ, ವಿಶಾಲ್ ಸಿಂಗ್ ತಮ್ಮ ಊಟವನ್ನು ಮದುವೆ ಮೊದಲಾದ ಸಡಗರದ ಸಮಾರಂಭಗಳಲ್ಲಿನ ಊಟದಂತೆ ಭರ್ಜರಿಯಾಗಿ ತಯಾರಿಸುತ್ತಾರೆ. ಅನ್ನ, ಚಪಾತಿ, ಪೂರಿ, ಸಾರು, ಸಾಂಬಾರು, ಪನೀರ್, ಹಪ್ಪಳ ಮತ್ತು ಮೊಸರು ಮಾತ್ರವಲ್ಲದೆ ಯಾವುದಾದರೂ ಸಿಹಿ ಖಾದ್ಯ ಅದರಲ್ಲಿರುತ್ತದೆ. ತನ್ನ ಉಚಿತ ಊಟದ ಕಾರ್ಯಕ್ರಮವನ್ನು ಅವರು ‘ಪ್ರಸಾದಂ ಸೇವಾ’ ಎಂದು ನಾಮಕರಣ ಮಾಡಿದರು. ಸ್ವಚ್ಛತೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡುತ್ತಾರೆ. ಊಟದ ತಟ್ಟೆಯನ್ನು ಮೊದಲಿಗೆ ಸಾಬೂನು ಮತ್ತು ನೀರಿನಿಂದ ತೊಳೆಯಲಾಗುತ್ತದೆ. ನಂತರ ಪೊಟ್ಯಾಷಿಯಂ ಪರಮಾಂಗನೇಟ್ ದ್ರಾವಣದಲ್ಲಿ ಮುಳುಗಿಸಿ, ನಂತರ ಪುನಃ ನೀರಿನಿಂದ ತೊಳೆದು ಬಳಸಲಾಗುತ್ತದೆ. ಊಟವನ್ನು ಯಾವತ್ತೂ ಬಿಸಿಯಾಗಿ ಬಡಿಸುತ್ತಾರೆ.
ಈ ಉಚಿತ ಊಟ ಕಾರ್ಯಕ್ರಮಕ್ಕೆ ತಗಲುವ ಎಲ್ಲಾ ವೆಚ್ಚವನ್ನು ವಿಶಾಲ್ ಸಿಂಗ್ ತಮ್ಮ ಖರ್ಚಿನಲ್ಲೇ ಭರಿಸುತ್ತಾರೆ. ಯಾರಿಂದಲೂ ಆರ್ಥಿಕ ದೇಣಿಗೆಯನ್ನು ಪಡೆಯುವುದಿಲ್ಲ. ಯಾರಾದರೂ ಆಹಾರ ಪದಾರ್ಥಗಳ ರೂಪದಲ್ಲಿ ದೇಣಿಗೆ ನೀಡಿದರೆ ಸ್ವೀಕರಿಸುತ್ತಾರೆ. ಹಾಗೂ, ಯಾರಾದರೂ ತಮ್ಮ ಅಥವಾ ತಮ್ಮ ಸಂಬಂಧಿಕರ ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವ ಮೊದಲಾದ ಸಂದರ್ಭಗಳಲ್ಲಿ ಆ ದಿನದ ಊಟವನ್ನು ಪ್ರಾಯೋಜಿಸಲು ಮುಂದೆ ಬಂದರೆ ಅದಕ್ಕೊಪ್ಪುತ್ತಾರೆ. ವಿಶಾಲ್ ಸಿಂಗ್ ಉಚಿತ ಊಟ ಕಾರ್ಯಕ್ರಮಕ್ಕಾಗಿ ತಮ್ಮ ಕೆಲವು ಆಸ್ತಿಗಳನ್ನು ಮಾರಿದ್ದರು. ಅದೇ ಕಾರಣಕ್ಕೆ ಅವರ ಕುಟುಂಬದ ಸದಸ್ಯರು ವಿಶಾಲ್ ಸಿಂಗ್‌ರ ಈ ಸಾಮಾಜಿಕ ಕಾರ್ಯವನ್ನು ವಿರೋಧಿಸುತ್ತಾರೆ.
” ಉಚಿತ ಊಟ ಕಾರ್ಯಕ್ರಮಕ್ಕೆ ತಗಲುವ ಎಲ್ಲಾ ವೆಚ್ಚವನ್ನು ವಿಶಾಲ್ ಸಿಂಗ್ ತಮ್ಮ ಖರ್ಚಿನಲ್ಲೇ ಭರಿಸುತ್ತಾರೆ. ಯಾರಿಂದಲೂ ಆರ್ಥಿಕ ದೇಣಿಗೆಯನ್ನು ಪಡೆಯುವುದಿಲ್ಲ. ಯಾರಾದರೂ ಆಹಾರ ಪದಾರ್ಥಗಳ ರೂಪದಲ್ಲಿ ದೇಣಿಗೆ ನೀಡಿದರೆ ಸ್ವೀಕರಿಸುತ್ತಾರೆ.”





