Mysore
21
mist

Social Media

ಬುಧವಾರ, 14 ಜನವರಿ 2026
Light
Dark

ಪಂಜುಗಂಗೊಳ್ಳಿ ಅವರ ವಾರದ ಅಂಕಣ: 10ನೇ ವಯಸ್ಸಿನಲ್ಲೇ ಹೆಡ್ ಮಾಸ್ಟರಾಗಿ ವಿಶ್ವ ದಾಖಲೆ ಬರೆದ ಬಾಬರ್ ಅಲಿ !

ಪಂಜುಗಂಗೊಳ್ಳಿ 

೭,೫೦೦ಕ್ಕೂ ಹೆಚ್ಚು ಮಕ್ಕಳ ಬದುಕಿಗೆ ಆಸರೆಯಾದ ಆನಂದ ಶಿಕ್ಷಾ ನಿಕೇತನ

ಪಶ್ಚಿಮ ಬಂಗಾಳದ ಮುರ್ಷಿದಾಬಾದಿನ ಶಂಕರಪಾದ ಗ್ರಾಮದ ಒಂಬತ್ತು ವರ್ಷದ ಬಾಬರ್ ಅಲಿ ಎಂದಿನಂತೆ ಶಾಲೆಯಿಂದ ಮನೆಗೆ ಬರುವಾಗ ಅವನದೇ ಪ್ರಾಯದ ಕೆಲವು ಮಕ್ಕಳು ಹೊಲದಲ್ಲಿ ಆಡುತ್ತಿರುವುದು ಕಾಣಿಸಿತು. ಮರುದಿನವೂ ಕೂಡಾ ಆ ಮಕ್ಕಳು ಅದೇ ಹೊಲದಲ್ಲಿ ಕಾಣಿಸಿದವು. ಆದರೆ, ಈ ಬಾರಿ ಆ ಮಕ್ಕಳು ತಮ್ಮ ಹೆತ್ತವರೊಂದಿಗೆ ಆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಅದರಿಂದ ಬಾಬರ್‌ಗೆ ಆ ಮಕ್ಕಳು ತನ್ನಂತೆ ಶಾಲೆಗೆ ಹೋಗುತ್ತಿಲ್ಲವೆಂದು ಖಾತರಿಯಾಯಿತು. ವಾಸ್ತವದಲ್ಲಿ, ಬಾಬರ್ ಶಾಲೆಗೆ ಹೋಗುತ್ತಿರುವುದೂ ಒಂದು ದೊಡ್ಡ ಸಾಹಸದ ಮಾತಾಗಿತ್ತು. ಅವನ ತಂದೆ ಎಳೆವೆಯಲ್ಲಿ ಶಾಲೆ ಬಿಟ್ಟಿದ್ದರೂ ತನ್ನ ಮಗ ವಿದ್ಯಾವಂತನಾಗಬೇಕೆಂದು ಅವನನ್ನು ಶಾಲೆಗೆ ಸೇರಿಸಿದ್ದನು. ಆ ಶಾಲೆ ಅವನ ಮನೆಯಿಂದ ಹತ್ತು ಕಿ. ಮೀ.ದೂರದಲ್ಲಿತ್ತು. ಅಂದರೆ, ಬಾಬರ್ ಪ್ರತೀದಿನ ಶಾಲೆಗೆ ಹೋಗಿ ಬರಲು ಒಟ್ಟು ಇಪ್ಪತ್ತು ಕಿ.ಮೀ. ಪ್ರಯಾಣಿಸಬೇಕಾಗಿತ್ತು.

ಆಗ ಐದನೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಬರ್ ಅಲಿ ಆ ಮಕ್ಕಳು  ತನ್ನಂತೆ ಶಾಲೆಗೆ ಹೋಗದಿದ್ದುದನ್ನು ತಿಳಿದು ವ್ಯಥೆಗೊಂಡನು. ಅವರಿಗೆ ಅವರಿದ್ದಲ್ಲೇ ತಾನೇ ಕಲಿಸುತ್ತೇನೆ ಎಂದು ತೀರ್ಮಾನಿಸಿ, ಸುಮಾರು ಎಂಟು ಮಕ್ಕಳನ್ನು ಒಟ್ಟುಗೂಡಿಸಿ, ಶಾಲೆಯಿಂದ ವಾಪಸ್ ಬರುವಾಗ ತಾನು ಶಾಲೆಯಲ್ಲಿ ಕಲಿತದ್ದನ್ನು ಅವರಿಗೆ ಕಲಿಸಲು ಶುರು ಮಾಡಿದನು. ಕಲಿಕೆಯಲ್ಲಿ ಬಹಳ ಆಸಕ್ತಿಯಿದ್ದ ಆ ಮಕ್ಕಳೂ ಪ್ರತೀದಿನ ಬಾಬರ್ ಶಾಲೆಯಿಂದ ವಾಪಸ್ ಬರುವುದನ್ನು ಕಾಯುತ್ತ ಅವನ ಮನೆಯ ಹಿಂಭಾಗದಲ್ಲಿದ್ದ ಒಂದು ಪೇರಲೆ ಮರದಡಿ ಕುಳಿತಿರುತ್ತಿದ್ದರು. ಬಾಬರ್ ಶಾಲೆ ಬಿಟ್ಟ ಕೂಡಲೇ ಮನೆಗೆ ಬಂದು, ಆ ಪೇರಲೆ ಮರದಡಿ ಹೋಗಿ ಒಬ್ಬ ಅರ್ಪಣಾ ಮನೋಭಾವದ ಶಿಕ್ಷಕನಂತೆ ಅವರಿಗೆ ಕಲಿಸುತ್ತಿದ್ದನು.

ಬಾಬರ್ ಶಾಲೆಯಿಂದ ಬರುವಾಗ ಶಾಲೆಯಲ್ಲಿ ಶಿಕ್ಷಕರು ಕರಿ ಹಲಗೆಯ ಮೇಲೆ ಬರೆಯುವಾಗ ತುಂಡಾಗಿ ಬಿದ್ದ ಚಾಕ್ ಪೀಸ್‌ಗಳನ್ನು ಒಟ್ಟು ಮಾಡಿ ತರುತ್ತಿದ್ದನು. ಅದರಿಂದ ಮಣ್ಣಿನ ಹೆಂಚುಗಳ ಮೇಲೆ ಬರೆದು ಆ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದನು. ಮನೆ ಮನೆಗಳಿಗೆ ಹೋಗಿ ಅಕ್ಕಿ ಬೇಡಿ, ಅದನ್ನು ಮಾರಿ ಬಂದ ೨೦ ರೂಪಾಯಿಯಿಂದ ೨೦ ಬೆಂಗಾಲಿ ವರ್ಣಮಾಲೆಯ ಪುಸ್ತಕಗಳನ್ನು ಖರೀದಿಸಿ ತಂದು ಮಕ್ಕಳಿಗೆ ಕೊಟ್ಟನು. ಚಿಂದಿ ಆಯುವವರಿಂದ ಬೇಡಿ ಪಡೆದ ಅರ್ಧ ಬರೆದ ನೋಟ್ ಪುಸ್ತಕಗಳನ್ನು ಆ ಮಕ್ಕಳಿಗೆ ಕೊಡುತ್ತಿದ್ದನು. ಆ ಮಕ್ಕಳೂ ಕೂಡ ವಿಧೇಯ ಶಿಷ್ಯರಂತೆ ಕಡ್ಡಿ, ಸ್ಲೇಟು, ಪೆನ್ಸಿಲು, ಪುಸ್ತಕ ಏನೂ ಇಲ್ಲದಿದ್ದರೂ ಬಹಳ ಆಸಕ್ತಿಯಿಂದ ಕಲಿಯುತ್ತಿದ್ದರು. ಕಲಿಕೆಯಲ್ಲಿ ಮಕ್ಕಳ ಆಸಕ್ತಿ ಕುಂದದೇ ದಿನ ತಪ್ಪದೆ ಶಾಲೆಗೆ ಬರಲೆಂದು ಏನಾದರೂ ಸಿಹಿ ತಿಂಡಿಗಳನ್ನು ಕೊಡುತ್ತಿದ್ದನು. ಹಾಗೆಯೇ, ನಡುನಡುವೆ ಕ್ರೀಡೆ, ನೃತ್ಯ, ಸಂಗೀತ ಮೊದಲಾದ ಚಟುವಟಿಕೆಗಳನ್ನು ನಡೆಸಿ, ಮಕ್ಕಳ ಹುಮ್ಮಸ್ಸನ್ನು ಹೆಚ್ಚಿಸುತ್ತಿದ್ದನು.

೨೦೦೩ರಲ್ಲಿ ತನ್ನ ೧೦ನೇ ವರ್ಷ ಪ್ರಾಯದಲ್ಲಿ ಬಾಬರ್ ಅಲಿ ತನ್ನ ಶಾಲೆಯನ್ನು ಅಧಿಕೃತವಾಗಿ ಪ್ರಾರಂಭಿಸುವ ಮೂಲಕ ವಿಶ್ವದ ಅತ್ಯಂತ ಕಿರಿಯ ಶಿಕ್ಷಕನ ಶಾಲೆ ಎಂಬ ದಾಖಲೆ ಸೃಷ್ಟಿಯಾಯಿತು. ಆ ಶಾಲೆಗೆ ಅವನೇ ಪ್ರಿನ್ಸಿಪಾಲ್, ಹೆಡ್ ಮಾಸ್ಟರ್, ಶಿಕ್ಷಕ ಮತ್ತು ಅಟೆಂಡರ್ ಎಲ್ಲವೂ ಆಗಿದ್ದನು! ಅದಕ್ಕೊಂದು ಹೆಸರೂ ಕೊಟ್ಟಿದ್ದನು-‘ಆನಂದ ಶಿಕ್ಷಾ ನಿಕೇತನ್’. ಬಾಬರ್ ಅಲಿ ಆ ಮಕ್ಕಳಿಗೆ ಕಲಿಸಲು ಮತ್ತು ಆ ಮಕ್ಕಳು ಕಲಿಯಲು ತಯಾರಿದ್ದರೂ ಆ ಮಕ್ಕಳನ್ನು ತನ್ನ ಶಾಲೆಗೆ ಕಳಿಸಲು ಅವರ ಹೆತ್ತವರನ್ನು ಒಪ್ಪಿಸುವುದು ಅವನ ಅತ್ಯಂತ ದೊಡ್ಡ ಸವಾಲಾಗಿತ್ತು. ಏಕೆಂದರೆ, ಬಡತನದ ಕಾರಣ ಆ ಮಕ್ಕಳ ತಂದೆತಾಯಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಕ್ಕಿಂತ ಕೃಷಿ ಕೂಲಿ ಅಥವಾ ಕಟ್ಟಡ ಕೆಲಸಕ್ಕೆಕಳಿಸುವುದು ಆ ಸಂದರ್ಭದ ಅನಿವಾರ್ಯತೆಯಾಗಿತ್ತು. ಅದನ್ನು ನಿವಾರಿಸಲು ಬಾರ್ ಅಲಿ ತನ್ನದೇ ಒಂದು ಯೋಜನೆಯನ್ನು ರೂಪಿಸಿದನು. ಅವನು ತನ್ನ ಸಂಬಂಧಿಕರಿಂದ ಅಕ್ಕಿಯನ್ನು ಸಂಗ್ರಹಿಸಿ ತಂದು ಅದನ್ನು ಆ ಮಕ್ಕಳ ಹೆತ್ತವರಿಗೆ ಕೊಟ್ಟು ಅವರು ತಮ್ಮ ಮಕ್ಕಳು ತನ್ನ ಶಾಲೆಗೆ ಬರುವುದನ್ನು ನಿಲ್ಲಿಸದಂತೆ ನೋಡಿಕೊಂಡನು.

ಆದರೆ, ಮಗ ಹೀಗೆ ಇತರ ಮಕ್ಕಳಿಗೆ ಕಲಿಸುತ್ತಿದ್ದರೆ ಅವನ ಸ್ವಂತ ಶಿಕ್ಷಣ ಹಾದಿ ತಪ್ಪಬಹುದು ಎಂದು ಬಾಬರ್ ಅಲಿಯ ತಂದೆ ಮೊಹಮ್ಮದ್ ನಸೀರುದ್ದಿನ್ ಚಿಂತೆಗೆ ಒಳಗಾದನು. ಸುತ್ತಮುತ್ತಲಿನ ಜನರೂ ಕೂಡ ಬಾಲಕ ಬಾಬರ್ ಅಲಿ ತಾನು ಶಿಕ್ಷಕನಾಗಿ, ಆ ಮಕ್ಕಳು ವಿದ್ಯಾರ್ಥಿಗಳಾಗಿ ಕಲಿಕೆಯ ಆಟವನ್ನು ಆಡುತ್ತಿದ್ದಾರೆ ಎಂದೇ ತಿಳಿದಿದ್ದರು. ಆದರೆ, ಬಾಬರ್‌ನ ಆಲೋಚನೆ ಬೇರೆ ತೆರನಾಗಿತ್ತು. ತಾನು ಸರಿಯಾಗಿ ಶಾಲೆಗೆ ಹೋಗಿ ಚೆನ್ನಾಗಿ ಕಲಿತರೆ ಮಾತ್ರವೇ ತಾನು ಆ ಮಕ್ಕಳಿಗೆ ಕಲಿಸಲು ಸಾಧ್ಯ ಎಂದು ಮನಗಂಡು ಅವನು ಮಕ್ಕಳಿಗೆ ಕಲಿಸುವುದರ ಜೊತೆಯಲ್ಲಿ ತನ್ನ ಸ್ವಂತ ಶಿಕ್ಷಣವನ್ನೂ ಅಷ್ಟೇ ಮುತುವರ್ಜಿಯಿಂದ ಮಾಡುತ್ತಿದ್ದನು. ಬೆಳಿಗ್ಗೆ ಬೇಗ ಎದ್ದು ತನಗಾಗುವ ಮನೆಗೆಲಸಗಳನ್ನು ಮಾಡಿ, ಶಾಲೆಯ ಓದು ಮತ್ತು ಬರಹವನ್ನು ಮುಗಿಸಿ ಶಾಲೆಗೆ ಹೋಗಿ, ಶಾಲೆಯಿಂದ ವಾಪಸಾದ ನಂತರ ಆ ಮಕ್ಕಳಿಗೆ ಕಲಿಸಲು ಹೋಗುತ್ತಿದ್ದನು. ತನ್ನ ಸಮಯ ಎಲ್ಲಿಯೂ ಹಾಳಾಗದಂತೆ ಇಡೀ ದಿನದ ದಿನಚರಿಯನ್ನು ರೂಪಿಸಿಕೊಳ್ಳುತ್ತಿದ್ದನು. ಮಗನ ಈ ಅಚ್ಚುಕಟ್ಟುತನ ಮತ್ತು  ಅರ್ಪಣಾಮನೋಭಾವನ್ನು ತಿಳಿದ ನಂತರ ಅವನು ನಿಶ್ಚಿಂತನಾದನು. ಅಷ್ಟೇ ಅಲ್ಲ, ಮಗನಿಗೆ ತನ್ನಿಂದ ಆಗುವ ಎಲ್ಲಾ ಸಹಾಯವನ್ನು ನೀಡಲು ಮುಂದಾದನು. ಬಾಬರ್‌ನ ತಾಯಿ ಬನುವಾರ ಬೀಬೀಯೂ ಮಗನ ಕೆಲಸದಲ್ಲಿ ನೆರವಾಗತೊಡಗಿದಳು. ಸುತ್ತಮುತ್ತಲಿನ ಜನರೂ ಅವನ ಸಹಾಯಕ್ಕೆ ಬರತೊಡಗಿದರು. ರಾಮಕೃಷ್ಣ ಮಿಷನ್ ಸಂಸ್ಥೆಯೂ ಅವನ ಸಹಾಯಕ್ಕೆ ಬಂದಿತು.

ಆದರೆ, ಸ್ಥಳೀಯ ಆಡಳಿವು ಬಾಬರ್ ಅಲಿಗೆ ಯಾವ ನೆರವನ್ನೂ ನೀಡಲು ಮುಂದೆ ಬರಲಿಲ್ಲ. ಆಗ ಅವನು ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಸಹಾಯ ಕೇಳಿದನು. ಆಗ ಜಿಲ್ಲಾಧಿಕಾರಿಯಾಗಿದ್ದ ಜಿಬನ್ ಕೃಷ್ಣ ಎಂಬವರು ಹತ್ತು ವರ್ಷದ ಬಾಲಕನೊಬ್ಬ ಶಾಲೆ ನಡೆಸುವುದನ್ನು ಕಂಡು ಆಶ್ಚರ್ಯ ಹಾಗೂ ಸಂತೋಷ ಪಟ್ಟು, ಅವನ ಶಾಲೆಗೆ ಭೇಟಿ ಕೊಟ್ಟು ಅಗತ್ಯ ಸಹಾಯಗಳನ್ನು ಒದಗಿಸಿಕೊಟ್ಟರು. ಬಾಬರ್ ೧೨ ವರ್ಷದವನಾಗಿದ್ದಾಗ ಸಬ್ ಡಿವಿಜಿನಲ್ ಮ್ಯಾಜಿಸ್ಟ್ರೇಟರ ಮುಂದಾಳತ್ವದಲ್ಲಿ ತನ್ನ ಶಾಲೆಗೆ ಒಂದು ಸಮಿತಿಯನ್ನು ರಚಿಸಿದನು. ಇಷ್ಟೆಲ್ಲ ಆದ ಮೇಲೆ ಸ್ಥಳೀಯಾಡಳಿತವು ಅವನ ನೆರವಿಗೆ ಬಂದು, ೩೦ ಮಕ್ಕಳು ಕುಳಿತುಕೊಳ್ಳಬಹುದಾದ ಒಂದು ಕೋಣೆಯನ್ನು ಕಟ್ಟಿಸಿಕೊಟ್ಟಿತು. ಆಗ ಪೇರಳೆ ಮರದಡಿ ನಡೆಯುತ್ತಿದ್ದ ಅವನ ಶಾಲೆ ಆ ಕೋಣೆಗೆ ಸ್ಥಳಾಂತರಗೊಂಡಿತು. ಆಗ ಬಾಬರ್ ಅಲಿಗೆ ೧೩ ವರ್ಷ ಪ್ರಾಯ! ಅಷ್ಟು ಸಣ್ಣ ಪ್ರಾಯದಲ್ಲೂ ಬಾಬರ್ ತನ್ನ ಶಾಲೆಯ ಕೆಲಸದಲ್ಲಿ ಎಷ್ಟು ತಲ್ಲೀನನಾಗಿದ್ದಾನೆಂದರೆ ಅವನು ಕಲಿಯುತ್ತಿದ್ದ ಶಾಲೆಯಲ್ಲಿ ಇತರ ಮಕ್ಕಳು ಊಟದ ನಂತರದ ಮತ್ತು ಆಟದ ಸಮಯದಲ್ಲಿ ಆಟ ಆಡುತ್ತಿದ್ದರೆ ಇವನು ಶಾಲೆಯ ಹೆಡ್ ಮಾಸ್ಟರ್ ಆಫೀಸಿನಲ್ಲಿದ್ದು ಶಾಲಾ ದಾಖಲೆ, ಫೈಲುಗಳನ್ನು ಇಡುವುದು ಹೇಗೆ ಎಂಬುದನ್ನು ಕಲಿತುಕೊಳ್ಳುತ್ತಿದ್ದನು. ೨೦೦೯ರಲ್ಲಿ ಬಿಬಿಸಿ ತನ್ನ ಒಂದು ಕಾರ್ಯಕ್ರಮದಲ್ಲಿ ಬಾಬರ್ ಅಲಿಯನ್ನು ‘ವಿಶ್ವದ ಅತ್ಯಂತ ಕಿರಿಯ ಹೆಡ್ ಮಾಸ್ಟರ್’ ಎಂದು ಬಣ್ಣಿಸಿತ್ತು.

ಬಾಬರ್ ಅಲಿ ಇಂಗ್ಲಿಷ್ ಮತ್ತು ಹಿಸ್ಟರಿಯಲ್ಲಿ ಎಂಎ ಮಾಡಿದ್ದಾನೆ. ‘ಆನಂದ ಶಿಕ್ಷಾ ನಿಕೇತನ’ ಅಧಿಕೃತ ಮಾನ್ಯತೆ ಪಡೆದಿದ್ದು ಅಲ್ಲಿ ಹತ್ತನೇ ತರಗತಿಯ ತನಕ ಪಾಠಗಳು ನಡೆಯುತ್ತವೆ. ಕಲಿಸಲು ವೃತ್ತಿಪರ ಶಿಕ್ಷಕರಿದ್ದಾರೆ. ಬಡ ಕುಟುಂಬಗಳ ಸುಮಾರು ೭,೫೦೦ ಮಕ್ಕಳು ಇಲ್ಲಿ ಉಚಿತ ಶಿಕ್ಷಣ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಅವರಲ್ಲಿ ಅನೇಕರು ಬೇರೆಡೆಗಳಲ್ಲಿ ಉದ್ಯೋಗ ಮಾಡುತ್ತಿದ್ದರೆ ಕೆಲವರು ಆನಂದ ನಿಕೇತನದಲ್ಲೇ ಶಿಕ್ಷಕರಾಗಿದ್ದಾರೆ.

” ೨೦೦೩ರಲ್ಲಿ ತನ್ನ ೧೦ನೇ ವರ್ಷ ಪ್ರಾಯದಲ್ಲಿ ಬಾಬರ್ ಅಲಿ ತನ್ನ ಶಾಲೆಯನ್ನು ಅಧಿಕೃತವಾಗಿ ಪ್ರಾರಂಭಿಸುವ ಮೂಲಕ ವಿಶ್ವದ ಅತ್ಯಂತ ಕಿರಿಯ ಶಿಕ್ಷಕನ ಶಾಲೆ ಎಂಬ ದಾಖಲೆ ಸೃಷ್ಟಿಯಾಯಿತು. ಆ ಶಾಲೆಗೆ ಅವನೇ ಪ್ರಿನ್ಸಿಪಾಲ್, ಹೆಡ್ ಮಾಸ್ಟರ್, ಶಿಕ್ಷಕ ಮತ್ತು ಅಟೆಂಡರ್ ಎಲ್ಲವೂ ಆಗಿದ್ದನು! ಅದಕ್ಕೊಂದು ಹೆಸರೂ ಕೊಟ್ಟಿದ್ದನು-‘ಆನಂದ ಶಿಕ್ಷಾ ನಿಕೇತನ್’.”

Tags:
error: Content is protected !!