Mysore
24
broken clouds

Social Media

ಬುಧವಾರ, 03 ಜೂನ್ 2026
Light
Dark

ಪಂಜು ಗಂಗೊಳ್ಳಿ ಅವರ ವಾರದ ಅಂಕಣ | ನೀರಿಲ್ಲದ ನೀರಿನ ಟ್ಯಾಂಕಿನಲ್ಲಿ ಕಲಿಯುವ ಮಕ್ಕಳ ಕಲರವ!

90ರ ದಶಕದಲ್ಲಿ ಪೊತುಕುಚಿ ಶ್ರೀನಿವಾಸ್ ಹೈದರಾಬಾದಿನ ಮಿಯಾಪುರದಲ್ಲಿದ್ದ ಒಂದು ಜರ್ಮನ್ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಅವರ ಕಂಪೆನಿಯ ಪಕ್ಕದಲ್ಲಿ ಒಂದು ಸರ್ಕಾರಿ ಶಾಲೆಯಿತ್ತು. ಆ ಶಾಲೆಯಲ್ಲಿ ಸುಮಾರು 300 ಮಕ್ಕಳು ಕಲಿಯುತ್ತಿದ್ದರು. ಆದರೆ, ಆ ಶಾಲೆಯಲ್ಲಿ ಇದ್ದದ್ದು ಇಬ್ಬರೇ ಇಬ್ಬರು ಶಿಕ್ಷಕರು. ಒಂದು ದಿನ ಆ ಶಿಕ್ಷಕರಲ್ಲೊಬ್ಬರು ಶ್ರೀನಿವಾಸರ ಬಳಿ ಬಂದು ಮಕ್ಕಳಿಗೆ ಕಲಿಸಲು ತನಗೆ ನೆರವಾಗುವಂತೆ ಕೇಳಿಕೊಂಡರು. ಅದರಂತೆ ಶ್ರೀನಿವಾಸ್ ಕಂಪೆನಿಯಲ್ಲಿ ತನ್ನ ಶಿಫ್ಟ್ ಮುಗಿದ ನಂತರ ಆ ಶಾಲೆಗೆ ಹೋಗಿ ಮಕ್ಕಳಿಗೆ ಕಲಿಸತೊಡಗಿದರು. ‌

ಹೀಗೆ ಕಲಿಸುವಾಗ ಒಂದು ದಿನ ಆ ಶಾಲೆಯಲ್ಲಿ ನಡೆದ ಒಂದು ಘಟನೆ ಶ್ರೀನಿವಾಸರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಆ ದಿನ ಒಬ್ಬ ವಿದ್ಯಾರ್ಥಿ ತನ್ನ ಹೋಮ್ ವರ್ಕನ್ನು ಪೂರ್ತಿ ಮಾಡಿಕೊಂಡು ಬಂದಿರಲಿಲ್ಲ. ಏಕೆ ಎಂದು ಶ್ರೀನಿವಾಸ್ ಆ ಹುಡುಗನನ್ನು ಕೇಳಿದಾಗ ಅವನು, ತಾನು ಪ್ರತೀದಿನ ಸಂಜೆ ಹೊತ್ತು ಫುಟ್‌ಪಾತಲ್ಲಿ ಚಹ ಮಾರುವ ಮೂರು ಗಾಡಿಗಳಲ್ಲಿ ಸ್ವಚ್ಚ ಮಾಡುವ ಕೆಲಸ ಮಾಡುತ್ತೇನೆ. ಮತ್ತು, ತನ್ನ ಮನೆಗೆ ವಿದ್ಯುತ್ ಸಂಪರ್ಕವಿಲ್ಲದಿರುವುದರಿಂದ ರಾತ್ರಿ ಹೊತ್ತು ಅಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಉತ್ತರಿಸಿದನು. ಆ ಘಟನೆಯ ನಂತರ ಶ್ರೀನಿವಾಸ್ ಆ ಶಾಲೆಯ ಮಕ್ಕಳ ಮನೆಗೆ ಭೇಟಿ ಕೊಡಲು ಶುರು ಮಾಡಿದರು. ಆ ಮಕ್ಕಳ ಮನೆಗಳ ಪರಿಸ್ಥಿತಿ ಶ್ರೀನಿವಾಸರನ್ನು ಆಲೋಚನೆಗೀಡು ಮಾಡಿತು. ಆ ಮಕ್ಕಳಲ್ಲಿ ಹೆಚ್ಚಿನವರ ಹೆತ್ತವರು ಆಟೋ ಚಾಲಕರು, ವಾಚ್ ಮ್ಯಾನ್‌ಗಳು ಹಾಗೂ ಮನೆಗೆಲಸ ಮಾಡುವವರಾಗಿದ್ದರು.

ಶ್ರೀನಿವಾಸರಿಗೆ ಏನನ್ನಿಸಿತೋ. ಒಂದು ದಿನ ಅವರು ತಮ್ಮ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು, ತನ್ನ ಮನೆಯಲ್ಲೇ ಆ ಮಕ್ಕಳಿಗೆ ಪಾಠ ಹೇಳಿ ಕೊಡಲು ಪ್ರಾರಂಭಿಸಿದರು. ಅದರ ನಂತರ 2003ರಲ್ಲಿ ರಾಷ್ಟ್ರಪ್ರಶಸ್ತಿ ವಿಜೇತರಾದ ತನ್ನ ತಂದೆ ಪಿ ಸೋಮಸುಂದರ ಶಾಸ್ತ್ರೀಯವರ ಹೆಸರಲ್ಲಿ ‘ಪೊತುಕುಚಿ ಸೋಮಸುಂದರ ಸೋಶಿಯಲ್ ವೆಲೇರ್ ಆಂಡ್ ಚಾರಿಟಬಲ್ ಟ್ರಸ್ಟ್ (ಪಿಎಸ್‌ಎಸ್ ಟ್ರಸ್ಟ್)’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು.

ಶ್ರೀನಿವಾಸ್ ತಮ್ಮ ಮನೆಯಲ್ಲಿ ಪಾಠ ಹೇಳಿ ಕೊಡಲು ಪ್ರಾರಂಭಿಸಿದಾಗ ಕೇವಲ 24 ಮಕ್ಕಳಿದ್ದರು. ಆದರೆ ದಿನ ಹೋದಂತೆ ಮಕ್ಕಳ ಸಂಖ್ಯೆ ಹೆಚ್ಚುತ್ತ ಹೋಗಿ, ಮನೆ ಜಗ ಸಾಲದಾಯಿತು. ಆಗ ಅವರು ಏನು ಮಾಡುವುದೆಂದು ಆಲೋಚಿಸುತ್ತಿದ್ದಾಗ 2008ರಲ್ಲಿ ಒಬ್ಬ ಸ್ಥಳೀಯ ಬಿಲ್ಡರ್ ಉಪಯೋಗದಲ್ಲಿಲ್ಲದ ತಮ್ಮ ಒಂದು ಓವರ್ ಹೆಡ್ ನೀರಿನ ಟ್ಯಾಂಕನ್ನು ಅವರಿಗೆ ನೀಡಿದರು. ಶ್ರೀನಿವಾಸ್ ಅದನ್ನು ತರಗತಿ ಕೋಣೆಯನ್ನಾಗಿ ಪರಿವರ್ತಿಸಿದರು. ತಳ ಅಂತಸ್ತಿನಲ್ಲಿ ಶಾಲಾ ಮಕ್ಕಳಿಗೆ ದೈನಂದಿನ ತರಗತಿ ಮತ್ತು ಪಾಲಿಟೆಕ್ನಿಕ್ ಪ್ರವೇಶ ಪರೀಕ್ಷೆಗಳಿಗೆ ಕುಳಿತುಕೊಳ್ಳುವವರಿಗೆ ವಿಶೇಷ ತರಗತಿಗಳು ನಡೆಯುತ್ತವೆ. ಮೊದಲ ಅಂತಸ್ತಿನಲ್ಲಿ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ತರಗತಿಗಳು ನಡೆದರೆ, ಎರಡನೇ ಅಂತಸ್ತಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯುತ್ತವೆ. ಹೀಗೆ ನೀರಿಲ್ಲದ ಒಂದು ನೀರಿನ ಟ್ಯಾಂಕು ಕಲಿಯುವ ಮಕ್ಕಳಿಂದ ತುಂಬಿ ತುಳುಕತೊಡಗಿತು!

ಈ ನೀರಿನ ಟ್ಯಾಂಕ್ ತರಗತಿಗೆ ಬರುವ ಮಕ್ಕಳೆಲ್ಲ ಸೆಕ್ಯುರಿಟಿ ಗಾರ್ಡ್, ಆಟೋ ಚಾಲಕರು ಹಾಗೂ ಮನೆಗೆಲಸದಾಳುಗಳು ಮೊದಲಾಗಿ ಸಮಾಜದ ದುರ್ಬಲ ಸ್ತರದ ಕುಟುಂಬಗಳಿಗೆ ಸೇರಿದವರು. 2003 ರಿಂದ ಈವರೆಗೆ ಪಿಎಸ್‌ಎಸ್ ಟ್ರಸ್ಟ್ ಆ ನೀರಿನ ಟ್ಯಾಂಕ್ ತರಗತಿಯಲ್ಲಿ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಿಸಿದ್ದು, ಅವರಲ್ಲಿ 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಿಪ್ಲೊಮಾ ಪದವೀಧರರಾಗಿದ್ದಾರೆ. 200ಕ್ಕೂ ಹೆಚ್ಚು ಮಕ್ಕಳು ಎಂಜಿನಿಯರ್ ಗಳಾಗಿದ್ದಾರೆ. ಪಿಎಸ್‌ಎಸ್ ಟ್ರಸ್ಟ್ ಈ ಮಕ್ಕಳಿಗೆ ಅವರ ಶಾಲಾ ಕಾಲೇಜು ಫೀಸು, ಸೆಮಿಸ್ಟರ್ ಫೀಸು, ಲೈಬ್ರರಿ ಫೀಸ್, ಪಠ್ಯ ಪುಸ್ತಕ, ನೋಟ್ ಪುಸ್ತಕ, ಸಮವಸ್ತ್ರ ಹಾಗೂ ಸಾರಿಗೆ ಖರ್ಚು ನೀಡುತ್ತದೆ. ಎಂಜಿನಿಯರಿಂಗ್ ಹಂತದಲ್ಲಿದ್ದರೆ ಅವರಿಗೆ ಬೇಕಾಗುವ ಕೋಚಿಂಗ್ ಕ್ಲಾಸ್ ಫೀಸನ್ನೂ ನೀಡುತ್ತದೆ. ಸಂಜೆ ಸಮಯದ ತರಗತಿಗೆ ಬರುವ ಹೆಣ್ಣು ಮಕ್ಕಳಿಗೆ ಅವರ ಮನೆಗಳಿಗೆ ವಾಪಸ್ ಆಗಲು ವಾಹನ ವ್ಯವಸ್ಥೆಯನ್ನು ಮಾಡುತ್ತದೆ.

ಅಕುಲಾ ಕಲ್ಯಾಣಿಯ ತಂದೆ ಒಬ್ಬ ಸೆಕ್ಯುರಿಟಿ ಗಾರ್ಡ್. ಅಕುಲಾ ಇದೇ ಟ್ಯಾಂಕ್ ತರಗತಿಯಲ್ಲಿ ಕಲಿತು, ಪಿಎಸ್ ಎಸ್ ಟ್ರಸ್ಟಿನ ಸಹಕಾರದಿಂದ ಎಂಜಿನಿಯರಿಂಗ್ ಮುಗಿಸಿ ಈಗ ಸಾಫ್ಟ್ ವೇರ್ ಎಂಜಿನಿಯರ್ ಆಗಿ ವರ್ಷಕ್ಕೆ 20 ಲಕ್ಷ ರುಪಾಯಿ ಸಂಬಳ ಪಡೆಯುತ್ತಿದ್ದಾಳೆ. ಟೈಲರ್ ಒಬ್ಬನ ಮಗಳು ಇಲ್ಲಿಯೇ ಕಲಿತು ಈಗ ಒಂದು ಅಮೆರಿಕನ್ ಬ್ಯಾಂಕಲ್ಲಿ ಉದ್ಯೋಗಿಯಾಗಿ 10 ಲಕ್ಷ ರುಪಾಯಿ ಸಂಬಳ ಪಡೆಯುತ್ತಿದ್ದಾಳೆ. ಇಲ್ಲಿಯೇ ಕಲಿತ ದಿನಗೂಲಿಯ ಮಗನೊಬ್ಬ ಈಗ -ಫ್ರೆಂಚ್ ಬಹುರಾಷ್ಟ್ರೀಯ ಐಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾನೆ.

ಪಿ ಎಸ್ ಎಸ್ ಟ್ರಸ್ಟ್‌ನ ಇನ್ನೊಂದು ವಿಶೇಷತೆಯೇನೆಂದರೆ ನೀರಿನ ಟ್ಯಾಂಕ್ ತರಗತಿಯಲ್ಲಿ ಕಲಿತ ಮಕ್ಕಳಲ್ಲಿ ಅನೇಕರು ಉನ್ನತ ಪದವಿ ಅಥವಾ ಉದ್ಯೋಗ ಪಡೆದ ನಂತರ ತರಗತಿಗೆ ವಾಪಸ್ ಬಂದು ಇತರ ಮಕ್ಕಳಿಗೆ ಕಲಿಸುತ್ತಾರೆ. ಎಂಜಿನಿಯರಿಂಗ್ ಓದುವ ಮಕ್ಕಳು ಚಿಕ್ಕ ತರಗತಿಗಳಲ್ಲಿನ ಮಕ್ಕಳಿಗೆ ಪಾಠ ಹೇಳುತ್ತಾರೆ. ಉದಾಹರಣೆಗೆ, ಸೌಮ್ಯ ಈಗ ಬಿ. ಟೆಕ್ ಮಾಡುತ್ತಿದ್ದಾಳೆ. ಅವಳು 9ನೇ ತರಗತಿಯಲ್ಲಿರುವಾಗ ಪಿ ಎಸ್‌ಎಸ್ ಟ್ರಸ್ಟನ್ನು ಸೇರಿದಳು. ಮುಂದೆ ಅವಳು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸೇರಿ, 9.1 ಜಿಜಿಪಿಎ ಯೊಂದಿಗೆ ಪಾಸು ಮಾಡಿ ಇನಾರ್ಮೇಶನ್ ಟೆಕ್ನಾಲಾಜಿಯಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದಾಳೆ. ಪಿಎಸ್‌ಎಸ್ ಟ್ರಸ್ಟ್ ಅವಳಿಗೆ ಪುಸ್ತಕ, ಕಾಲೇಜು ಫೀಸು, ಕೋಚಿಂಗ್ ತರಗತಿ ಫೀಸು ಹಾಗೂ ಒಂದು ಲ್ಯಾಪ್ ಟಾಪ್ ಕೊಟ್ಟು ಅವಳ ಕಲಿಕೆಯಲ್ಲಿ ಬೆಂಬಲವಾಗಿ ನಿಂತಿತು. ಸೌಮ್ಯ ಆ ಋಣವನ್ನು ನೀರಿನ ಟ್ಯಾಂಕ್ ತರಗತಿಯಲ್ಲಿ ಇತರ ಮಕ್ಕಳಿಗೆ ಕಲಿಸುವ ಮೂಲಕ ತೀರಿಸುತ್ತಿದ್ದಾಳೆ.

 

Tags:
error: Content is protected !!