‘ಪಿ.ಆರ್.ಸಿಗ್ನಲ್’ ಕಂಪೆನಿ ಸ್ಥಾಪಿಸಿ ವಿಶೇಷಚೇತನರಿಗೆ ನೆರವು
೩೪ ವರ್ಷ ಪ್ರಾಯದ ಸುಮಿತ್ ಅಗರ್ವಾಲ್ ಏಳನೇ ತಿಂಗಳಲ್ಲಿ ಅವಧಿಗೆ ಮೊದಲೇ ಹುಟ್ಟಿದವರು. ಅದೂ ಸಾಲದೆಂಬಂತೆ ಹುಟ್ಟುವಾಗ ‘ಸೆರೆಬ್ರಲ್ ಪಾಲ್ಸಿ’ ಎಂಬ ನರವ್ಯೂಹ ಸಂಬಂಧಿತ ಸಮಸ್ಯೆಯ ಜೊತೆಯಲ್ಲೇ ಹುಟ್ಟಿದರು. ಈ ಸಮಸ್ಯೆ ಇರುವವರು ಸಾಮಾನ್ಯವಾಗಿ ತಮ್ಮ ಕೈಕಾಲು ಮೊದಲಾದ ಅಂಗಾಂಗಗಳನ್ನು ಸಾಮಾನ್ಯರಂತೆ ಬಳಸಲಾರರು. ಅವರ ನಡಿಗೆ ವಕ್ರವಾಗಿರುತ್ತದೆ. ಅವರ ದೇಹದ ಸ್ನಾಯುಗಳು ಬಿಗಿಯಾಗಿದ್ದು ಮಾತನಾಡುವುದೂ ಸೇರಿದಂತೆ ಯಾವುದೇ ರೀತಿಯ ದೈಹಿಕ ಚಲನೆಯನ್ನು ಮಾಡಬೇಕಿದ್ದರೂ ತೀರಾ ಶ್ರಮಪಡಬೇಕಾಗುತ್ತದೆ.
ಚಿಕ್ಕ ಪ್ರಾಯದಲ್ಲೇ ಸುಮಿತ್ ಅಗರ್ವಾಲ್ ನಾಲ್ಕು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು. ಅದಕ್ಕಾಗಿ ತಿಂಗಳುಗಳ ಕಾಲ ಅವರು ಆಸ್ಪತ್ರೆಯಲ್ಲಿರಬೇಕಾಗಿ ಬರುತ್ತಿತ್ತು. ಆದರೂ ಅವರ ಶರೀರ ಶೇ.೭೦ ಊನವಾಗುವುದನ್ನು ತಪ್ಪಿಸಲಾಗಲಿಲ್ಲ. ಪ್ರತೀ ಬಾರಿ ಸುಮಿತ್‌ರನ್ನು ಶಸ್ತ್ರಚಿಕಿತ್ಸೆ ಕೋಣೆಯೊಳಕ್ಕೆ ಕರೆದುಕೊಂಡು ಹೋಗುವಾಗ ಸಾವು ಅವರೊಂದಿಗೇ ಒಳ ಬರುತ್ತಿತ್ತು. ಆ ಕಾರಣಕ್ಕಾಗಿಯೇ ವೈದ್ಯರು ಅವರು ಜೀವಂತ ವಾಪಸ್ ಹೊರ ಬರುವ ಸಾಧ್ಯತೆ ಬಗ್ಗೆ ಯಾವುದೇ ಖಾತರಿ ಕೊಡುತ್ತಿರಲಿಲ್ಲ. ಉಳಿದವರಿಗಿಂತ ಭಿನ್ನವಾಗಿ ಮಾತಾಡುವ, ಭಿನ್ನವಾಗಿ ನಡೆಯುವ ಸುಮಿತ್ರನ್ನು ಬೇರೆ ಮಕ್ಕಳು ಮಾತ್ರವಲ್ಲದೆ ಶಾಲೆಯ ಶಿಕ್ಷಕರೂ ಗೇಲಿ ಮಾಡುತ್ತಿದ್ದರು. ಯಾವ ಮಕ್ಕಳೂ ಅವರೊಂದಿಗೆ ಆಡಲು ಬರುತ್ತಿರಲಿಲ್ಲ. ವಿರಾಮ ಅಥವಾ ಪಿಟಿ ಸಮಯದಲ್ಲಿ ತನ್ನ ಸಹಪಾಠಿ ಮಕ್ಕಳು ಕೇಕೆ ಹೊಡೆಯುತ್ತ, ಸಂತೋಷದಿಂದ ನೆಗೆಯುತ್ತ ಆಡುತ್ತಿದ್ದರೆ ಸುಮಿತ್ ದೂರದಲ್ಲಿ ಆ ಮಕ್ಕಳು ಆಡುವುದನ್ನು ನೋಡುತ್ತ ಕುಳಿತುಕೊಳ್ಳುತ್ತಿದ್ದರು. ಆ ಏಕಾಂಗಿತನ ಸುಮಿತ್‌ರನ್ನು ಓದುವುದರಲ್ಲಿ ಮುಳುಗಿಸಿತು. ಅವರ ತಂದೆ ಯಾವತ್ತೂ ಹಲವಾರು ವಿಷಯಗಳನ್ನು ಚರ್ಚಿಸುತ್ತ ಮಗನ ಅರಿವಿನ ಮಿತಿಯನ್ನು ಹೆಚ್ಚಿಸುತ್ತಿದ್ದರು. ಅವರ ತಾಯಿಯಂತೂ ತಮ್ಮ ಯಶಸ್ವಿ ವಕೀಲಿ ವೃತ್ತಿಯನ್ನು ಬಿಟ್ಟು ಮಗನ ಬದುಕನ್ನು ಕಟ್ಟುವುದನ್ನೇ ತಮ್ಮ ಬದುಕನ್ನಾಗಿ ಮಾಡಿಕೊಂಡರು. ಅವನನ್ನು ವಿಶೇಷಚೇತನ ಮಕ್ಕಳಿಗಾಗಿರುವ ವಿಶೇಷ ಶಾಲೆಗಳಲ್ಲಿ ಶಿಕ್ಷಣಕ್ಕೆ ಸೇರಿಸದೆ ಸಾಮಾನ್ಯ ಮಕ್ಕಳ ಶಾಲೆಗಳಲ್ಲಿಯೇ ಓದಿಸಿದರು. ಅದೂ ಅತ್ಯುತ್ತಮ ಎನಿಸಿಕೊಂಡ ಶಾಲೆಗಳಲ್ಲಿ. ಅದಕ್ಕಾಗಿ ಅವರು ಬಹಳ ಕಷ್ಟಪಡಬೇಕಾಯಿತು. ಏಕೆಂದರೆ, ಹೆಚ್ಚಿನ ಶಾಲೆಗಳು ಸುಮಿತ್‌ರನ್ನು ಸೇರಿಸಿಕೊಳ್ಳಲು ನಿರಾಕರಿಸುತ್ತಿದ್ದವು.
ಸುಮಿತ್ ಮೊದಲು ‘ಟೆಕ್ನೋ ಇಂಡಿಯಾ ಸಾಲ್ಟ್‌ಲೇಕ್’ ಕಾಲೇಜಿನಲ್ಲಿ ಬ್ಯಾಚ್ಯುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ಮುಗಿಸಿದರು. ನಂತರ ಕೊಲ್ಕತ್ತಾದ ‘ಐಸಿಎಫ್‌ಎಐ ಬಿಸಿನೆಸ್’ ನಲ್ಲಿ ಮೇನೇಜ್‌ಮೆಂಟ್ ವಿಷಯದಲ್ಲಿ ಪೋಸ್ಟ್ ಗ್ರ್ತ್ಯಾಜುಯೇಶನ್ ಮಾಡಿದರು. ನಂತರ, ಜಾದವಪುರ ವಿಶ್ವವಿದ್ಯಾಲಯದಲ್ಲಿ ಮಾಸ್ ಕಮ್ಯುನಿಕೇಶನ್‌ನಲ್ಲಿ ಡಿಪ್ಲೊಮಾ ಮಾಡಿದರು. ಅಲ್ಲಿ ಅವರು ತನ್ನ ತರಗತಿಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ಪಾಸಾದರು. ಅದರ ನಂತರವೂ ಸುಮಿತ್ ಇನ್ನೂ ಕೆಲವು ವಿಷಯಗಳಲ್ಲಿ ಡಿಗ್ರಿ ಹಾಗೂ ಸರ್ಟಿಫಿಕೇಟ್‌ಗಳನ್ನು ಪಡೆದರು.
ಇಷ್ಟೆಲ್ಲ ಡಿಗ್ರಿ, ಪ್ರಮಾಣ ಪತ್ರಗಳನ್ನು ಪಡೆದ ಸುಮಿತ್ ಉದ್ಯೋಗಗಳ ಸಂದರ್ಶನಗಳಿಗೆ ಹೋದಾಗ ಅವರಿಗೆ ನಿರಾಶೆ ಕಾದಿರುತ್ತಿತ್ತು. ಸಂದರ್ಶಕರು ಅವರ ಡಿಗ್ರಿ, ಪ್ರಮಾಣ ಪತ್ರಗಳನ್ನು ನೋಡುವ ಮೊದಲು ಅವರ ದೈಹಿಕ ಸ್ಥಿತಿಯನ್ನು ನೋಡಿ ತಮ್ಮ ಮನಸ್ಸಿನಲ್ಲೇ ಪೂರ್ವ ನಿರ್ಧಾರಗಳನ್ನು ಮಾಡಿರುತ್ತಿದ್ದರು. ಸಂದರ್ಶನದ ಮುಂದಿನ ಭಾಗಗಳು ಕೇವಲ ಕಾಟಾಚಾರಕ್ಕಷ್ಟೇ ನಡೆಯುತ್ತಿತ್ತು. ಸುಮಿತ್‌ಗೂ ಕೂಡಾ ಸಂದರ್ಶನದ ಫಲಿತಾಂಶ ಏನೆಂಬುದು ಅರ್ಥವಾಗುತ್ತಿದ್ದವು. ಹೀಗೆ ಹಲವು ಸಂದರ್ಶನಗಳು ನಡೆದು ಎಲ್ಲಿಯೂ ಸುಮಿತ್‌ರಿಗೆ ಉದ್ಯೋಗ ಲಭಿಸಲಿಲ್ಲ.
ಆದರೆ, ಉದ್ಯೋಗ ಸಿಗದ ಕಾರಣಕ್ಕೆ ಸುಮಿತ್ ಅಗರ್ವಾಲ್ ನಿರಾಶರಾಗಲಿಲ್ಲ. ಹಾಗೂ, ಮನುಷ್ಯರ ಬಗ್ಗೆ ಋಣಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಲೂ ಇಲ್ಲ. ಬದಲಿಗೆ, ಮನುಷ್ಯರನ್ನು ಪರೀಕ್ಷಾತ್ಮಕ ರೀತಿಯಲ್ಲಿ ನೋಡಲು ಶುರು ಮಾಡಿದರು. ಎಲ್ಲರೂ ತಮ್ಮ ತಮ್ಮ ದೃಷ್ಟಿಯಲ್ಲಿ ನೋಡುವುದನ್ನೇ ‘ನಾರ್ಮಲ್’ ಎಂದು ಪರಿಗಣಿಸುತ್ತಾರೆ. ಈ ನಾರ್ಮಲ್ ದೃಷ್ಟಿಕೋನದ ಅಳತೆಯ ಪ್ರಕಾರ ತಾನೊಬ್ಬ ‘ಭಿನ್ನ’ವಾದ ವ್ಯಕ್ತಿ. ಹಾಗಾಗಿ, ತಾನು ಇನ್ನು ಮುಂದೆ ಉದ್ಯೋಗವನ್ನು ಹುಡುಕಿಕೊಂಡು ಹೋಗುವುದರ ಬದಲು ತನ್ನ ಉದ್ಯೋಗವನ್ನು ತಾನೇ ಸೃಷ್ಟಿ ಮಾಡಿಕೊಳ್ಳಬೇಕು ಎಂದು ಆಲೋಚಿಸಿದರು. ತಮ್ಮ ಆಸಕ್ತಿ, ಅರ್ಹತೆ ಮತ್ತು ತಮ್ಮ ದೈಹಿಕ ಮಿತಿಯಲ್ಲಿ ತಮಗೆ ಯಾವ ತರಹದ ಉದ್ಯೋಗ ಹೆಚ್ಚು ಸೂಕ್ತವಾದುದು ಎಂದು ಆಲೋಚಿಸಿದಾಗ ಅವರ ಆಲೋಚನೆಗೆ ಬಂದುದು ಸಾರ್ವಜನಿಕ ಸಂಪರ್ಕ ಕ್ಷೇತ್ರ. ಅದರಂತೆ ತಮ್ಮದೇ ಒಡೆತನದ ಒಂದು ಪಿಆರ್ ಕಂಪೆನಿಯನ್ನು ತೆರೆಯಲು ನಿರ್ಧರಿಸಿದರು. ಆ ಮೂಲಕ ಅವರು ತಮ್ಮದು ಇತರ ಸಾಮಾನ್ಯರು ಕೆಲಸ ಮಾಡಲಾಗದ ಅಂಗ ವೈಕಲ್ಯವಲ್ಲ. ಅವಕಾಶ ಸಿಕ್ಕರೆ ತಾನು ಹಾಗೂ ತನ್ನಂತಹವರು ಯಾವ ಕೆಲಸಗಳನ್ನು ಬೇಕಾದರೂ ಮಾಡಬಲ್ಲ ನಾರ್ಮಲ್’ ಮನುಷ್ಯರೇ ಎಂದು ಸಮಾಜಕ್ಕೆ ತೋರಿಸಿ ಕೊಡಲು ಮುಂದಾದರು. ಅಂತೆಯೇ ಅವರು ೨೦೧೮ರಲ್ಲಿ ‘ಪಿ.ಆರ್. ಸಿಗ್ನಲ್’ ಎಂಬ ಹೆಸರಿನಲ್ಲಿ ತಮ್ಮ ಸಾರ್ವಜನಿಕ ಸಂಪರ್ಕ ಕಂಪೆನಿಯನ್ನು ಹುಟ್ಟು ಹಾಕಿದರು.
ಸುಮಿತ್ ಅಗರ್ವಾಲ್‌ರ ಪಿ.ಆರ್. ಸಿಗ್ನಲ್ ಇತರ ಸಾರ್ವಜನಿಕ ಸಂಪರ್ಕ ಸಂಸ್ಥೆಗಳಿಗಿಂತ ಭಿನ್ನವಾಗಿ ಕೆಲಸ ಮಾಡುತ್ತದೆ. ಡಾ.ಮಿಷೆಲಿ ಹ್ಯಾರಿಸನ್ ನಡೆಸುತ್ತಿರುವ ‘ಶಿಶುರ್ ಸೇವೈ’ ಎಂಬ ಅನಾಥ ಮಕ್ಕಳ ಆಶ್ರಮವನ್ನು ನಡೆಸುತ್ತಿರುವ ಸರ್ಕಾರೇತರ ಸಂಸ್ಥೆ ಸುಮಿತ್‌ರ ಪಿ.ಆರ್. ಸಿಗ್ನಲ್‌ನ ಪ್ರಾರಂಭಿಕ ಗ್ರಾಕರಲ್ಲೊಂದು. ಆ ಆಶ್ರಮದಲ್ಲಿದ್ದ ಗಂಗಾ ಎಂಬ ಹೆಣ್ಣು ಮಗುವಿಗೆ ಮಾತು ಬರುತ್ತಿರಲಿಲ್ಲ. ಪಿ.ಆರ್.ಸಿಗ್ನಲ್ ಮೂರು ದಿನಗಳ ಒಂದು ‘ಆರ್ಟ್ ಆಂಡ್ ಕ್ರಾಫ್ಟ್’ ಪ್ರದರ್ಶನ ನಡೆಸಿ, ದೇಣಿಗೆ ಸಂಗ್ರಹಿಸಿತು. ಆ ದೇಣಿಗೆಯಿಂದ ಕಣ್ಣಿನ ಚಲನೆಯನ್ನು ಅನುಸರಿಸಿ ಸ್‌ಸ್ಕ್ರೀನ್ ಮೇಲೆ ಪದಗಳನ್ನು ಮೂಡಿಸಿ ಅಭಿವ್ಯಕ್ತಿಗೆ ಸಹಕರಿಸುವ ‘ಟೋಬಿ ಐ ಟ್ರ್ಯಾಕರ್’ ಎಂಬ ಸಾಧನಗಳನ್ನು ಖರೀದಿಸಿ ‘ಶಿಶುರ್ ಸೇವೈ’ಗೆ ನೀಡಿತು. ಆ ಸಾಧನದ ಮೂಲಕ ಗಂಗಾ ಮತ್ತು ಅವಳಂತಹ ಇತರ ಮೂಕ ಮಕ್ಕಳು ಇತರರೊಂದಿಗೆ ಸಂವಹನ ನಡೆಸಲು ಶಕ್ತರಾಗಿದ್ದಾರೆ.
ಸುಮಿತ್ ಅಗರ್ವಾಲ್ ಈಗ ಒಬ್ಬ ಯಶಸ್ವೀ ಸಾರ್ವಜನಿಕ ಸಂಪರ್ಕೋದ್ಯಮಿಯಾಗಿ ನೆಲೆಯೂರಿದ್ದಾರೆ. ಜೊತೆಗೆ, ತಮ್ಮ ಬದುಕಿನ ಮೂಲಕ ತಮ್ಮಂತಹ ಇತರರಿಗೆ ಸ್ಛೂರ್ತಿ ನೀಡುವ ಭಾಷಣಕಾರರಾಗಿದ್ದಾರೆ. ರೋಟರಿ ಇಂಟರ್‌ನ್ಯಾಷನಲ್, ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಇಂಡಿಯಾ, ಪಬ್ಲಿಕ್ ರಿಲೆಶನ್ಸ್ ಸೊಸಾಯಿಟಿ ಆಫ್ ಇಂಡಿಯಾ, ಇಂಟರ್ನೇಶನಲ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್, ರೋಟರಿ ಮೀನ್ಸ್ ಬುಸಿನೆಸ್ ಮತ್ತು ಇನ್ನೂ ಅನೇಕ ಸಂಘ ಸಂಸ್ಥೆಗಳಿಗೆ ಸಲಹೆಗಾರರಾಗಿದ್ದಾರೆ. ‘ನಾನು ಯಾವುದೇ ರೀತಿಯ ಅಂಗವೈಕಲ್ಯವನ್ನು ಹೊಂದಿಲ್ಲ. ಬದಲಿಗೆ, ಒಂದು ಕೊಡುಗೆಯನ್ನು ಪಡೆದಿದ್ದೇನೆ. ಇತರರು ಅದನ್ನು ಅಂಗವೈಕಲ್ಯವೆಂಬಂತೆ ಕಾಣಬಹುದು. ಆದರೆ, ನಾನು ಅದನ್ನು ಸವಾಲಿನಂತೆ ನೋಡುತ್ತೇನೆ. ಈ ಸವಾಲು ಒಂದು ಕೊಡುಗೆ. ಏಕೆಂದರೆ, ಆ ಸವಾಲನ್ನು ಮೆಟ್ಟಿ ನಿಲ್ಲಲು ನಾನು ಹೆಚ್ಚು ಹೆಚ್ಚು ಬಲಶಾಲಿಯಾಗಬೇಕು. ನಾನು ಮಾಡುತ್ತಿರುವುದು ಅದನ್ನೇ. ಮತ್ತು, ನೀವೂ ಅದನ್ನು ಮಾಡಬಹುದು’ ಎಂದು ಸುಮಿತ್ ಅಗರ್ವಾಲ್ ತನ್ನಂತೆಯೇ ದೈಹಿಕ ಸವಾಲುಗಳನ್ನು ಎದುರಿಸುತ್ತಿರುವ ವಿಶೇಷಚೇತನರಿಗೆ ಧೈರ್ಯ ಹಾಗೂ ಹುಮ್ಮಸ್ಸನ್ನು ತುಂಬುತ್ತಿದ್ದಾರೆ.
” ಸುಮಿತ್ ಅಗರ್ವಾಲ್ ಒಬ್ಬ ಯಶಸ್ವೀ ಸಾರ್ವಜನಿಕ ಸಂಪರ್ಕೋದ್ಯಮಿಯಾಗಿ ನೆಲೆಯೂರಿದ್ದಾರೆ. ಜೊತೆಗೆ, ತಮ್ಮ ಬದುಕಿನ ಮೂಲಕ ತಮ್ಮಂತಹ ಇತರರಿಗೆ ಸ್ಛೂರ್ತಿ ನೀಡುವ ಭಾಷಣಕಾರರಾಗಿದ್ದಾರೆ”





