ಮಂಡ್ಯದಲ್ಲಿ ಜೆಪಿ ಹೆಸರಲ್ಲಿ ಪ್ರಶಸ್ತಿ ಸ್ಥಾಪನೆ
ಡಾ.ಎಂ.ಎಸ್.ಅನಿತ ಮಂಗಲ, ಸಾಹಿತಿ ಮನುಷ್ಯ ಬದುಕಿನ ಘನತೆ ಕಾಣೆಯಾಗುತ್ತಿರುವ ಕಾಲವಿದು. ಅಸಹನೆ, ಸ್ವಾರ್ಥ, ಅಹಂಕಾರ, ಅನಾಥಪ್ರಜೆ ವರ್ತಮಾನದ ಬದುಕನ್ನು ಆವರಿಸಿವೆ. ಮಾತು, ಭಾವನೆ, ಬರವಣಿಗೆ, ಕಲೆ ಸಂಘಟನೆ ಎಲ್ಲವೂ ಮಾರುಕಟ್ಟೆಯ ಸರಕುಗಳಾಗಿರುವ ವರ್ತಮಾನದ ಉರಿಬೇಗೆಯಲ್ಲಿ, ಮುಸ್ಸಂಜೆ ಬೀಸುವ ತಂಪಾದ ಸವಿಗಾಳಿಯ ಹಿತದಂತೆ ಸಮಕಾಲೀನ ಜಗತನ್ನು ಪೊರೆಯುತ್ತಿರುವ ಬೆರಳೆಣಿಕೆಯಷ್ಟು ಮನಸ್ಸುಗಳಲ್ಲಿ ಮಂಡ್ಯ ನೆಲದ ಪ್ರೊ.ಬಿ.ಜಯಪ್ರಕಾಶಗೌಡ (ಜೆಪಿ)ಕೂಡ ಒಬ್ಬರು. ಸಾಹಿತ್ಯ – ಸಾಂಸ್ಕೃತಿಕ ಕೆ ತ್ರಕೆ ಇವರ ಕೊಡುಗೆ ಸ್ಮರಣೀಯ. ನಾಡಿನಾದ್ಯಂತ ಜೆಪಿ ಎಂದೇ ಪ್ರಸಿದ್ಧಿಯಾಗಿರುವ ಜೆಪಿ ಅವರಿಗೆ ಸಂಘಟನೆಯೇ ಬದುಕಿನ ಉಸಿರು. ಸಂಘಟನೆ ಯನ್ನು ಜೀವಪರವಾಗಿಸಿಕೊಂಡು ಕ್ರಿಯಾಶೀಲರಾಗಿರುವ ಜೆಪಿ ಓರ್ವ ಸಂಘಟನೆಯ ಕ್ರಿಯಾತಪಸ್ವಿ.
೧೯೭೪ರಲ್ಲಿ ಪ್ರಾರಂಭವಾದ ಜೆಪಿ ಅವರ ಸಂಸ್ಕೃತಿ – ಸಾಹಿತ್ಯ ಕ್ಷೇತ್ರದ ಬದುಕಿನ ಯಾನ ಮಂಡ್ಯ ಜಿಲ್ಲೆಯ ಚರಿತ್ರೆಯಲ್ಲಿ ಮಹತ್ವದ್ದಾಗಿದೆ. ಮಂಡ್ಯದ ಕರ್ನಾಟಕ ಸಂಘ ಕನ್ನಡ ನಾಡಿನ ಗಮನ ಸೆಳೆದಿರುವ ಮಹತ್ವದ ಸಂಘಟನೆ. ೧೯೩೬ರಲ್ಲಿ ಅರ್ಥಾತ್ ಸ್ವಾತಂತ್ರ್ಯ ಪೂರ್ವದಲ್ಲೇ ಕ್ರಿಯಾಚಟುವಟಿಕೆಯನ್ನು ಪ್ರಾರಂಭಿಸಿ ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಿಸಿದೆ.
ಜೆಪಿಯವರು ೨೦೦೬ರಲ್ಲಿ ಸಂಘಕ್ಕೆ ಪ್ರವೇಶಿಸಿದ ಫಲಿತದಿಂದ ಭೌತಿಕವಾಗಿ, ಬೌದ್ಧಿಕವಾಗಿ ವಿಸ್ತರಣೆ ಗೊಂಡಿದೆ. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದು ಸಂಶೋಧನಾ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ. ಕರ್ನಾಟಕ ಜಾನಪದ ವಿಶ್ವ ವಿದ್ಯಾನಿಲಯದ ಜಾನಪದ ನಿಘಂಟು ಯೋಜನೆಯ ಅನುಷ್ಠಾನ ಕೇಂದ್ರವಾಗಿ ಹಾಗೂ ಕರ್ನಾಟಕ ರಾಜ್ಯ ಗಂಗೂ ಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಮಾನ್ಯತೆಯೊಂದಿಗೆ ಮೂಡಲ ಪಾಯ ಯಕ್ಷಗಾನ, ಡಿಪ್ಲೊಮಾ ತರಗತಿಗಳನ್ನು ನಡೆಸು ತ್ತಿದೆ. ಜಿ+೪ ಅಂತಸ್ತಿನ ಕಟ್ಟಡ ಐದು ವರ್ಷಗಳ ಹಿಂದೆ ಲೋಕಾರ್ಪಣೆಗೊಂಡಿದ್ದು, ಸಂಘದ ಕಾರ್ಯ ಚಟುವಟಿಕೆಗಳ ಕೇಂದ್ರವಾಗಿದೆ. ಇದರ ಜೊತೆಗೆ ಜೆಪಿ ಅವರ ಕನಸಿನ ಕೂಸು ರಂಗಮಂದಿರದ ನಿರ್ಮಾಣ ಪ್ರಗತಿಯ ಹಂತದಲ್ಲಿದೆ. ೩೦೦ ಆಸನಗಳ ವ್ಯವಸ್ಥೆಯುಳ್ಳ ರಂಗ ಮಂದಿರಪೂರ್ಣಗೊಂಡರೆ, ರಂಗ ಚಟುವಟಿಕೆಗಳಿಗೆ ಇಂಬು ದೊರೆಯುತ್ತದೆ. ಇದಕ್ಕೆಲ್ಲ ಮುಖ್ಯ ಕಾರಣ ಜೆಪಿ ಅವರ ಇಚ್ಛಾಶಕ್ತಿ ಮತ್ತು ಸಂಘಟನಾ ಶಕ್ತಿ.
ಜೆಪಿ ಅವರಿಗೆ ಈಗ ೭೬ರ ಹರಯ. ಇವರು ೭೫ನೇ ಹುಟ್ಟುಹಬ್ಬದ ಅಮೃತ ಮಹೋತ್ಸವವನ್ನು ಕಳೆದ ವರ್ಷ ಸಂಭ್ರಮದಿಂದ ಆಚರಿಸಲಾಗಿದೆ. ಜೆಪಿ ಅವರ ಒಡನಾಡಿಗಳು, ಅಭಿಮಾನಿಗಳು ಸೇರಿ ‘ರಂಗಾಭಿನಂದನೆ’ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಿದ್ದಾರೆ.
ಅದೇ ಸಂದರ್ಭದಲ್ಲಿ ಹದಿನೈದು ಲಕ್ಷ ರೂ.ಗಳನ್ನು ಸಂಗ್ರಹಿಸಿ ಇಡುಗಂಟಾಗಿಸಿ ದತ್ತಿನಿಽಯನ್ನು ಪ್ರಾರಂಭಿಸಲಾಗಿದೆ. ರಂಗಭೂಮಿ ಮತ್ತಿತರ ಕ್ಷೇತ್ರಗಳಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಿ ಜೆಪಿ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಕೊಡಮಾಡಬೇಕೆಂಬುದು ಒಡನಾಡಿಗಳ ಅಭೀಪ್ಸೆ.
ಸಂಘಟನೆಯನ್ನೇ ಕ್ರಿಯಾತಪಸ್ಸನ್ನಾಗಿ ಸ್ವೀಕರಿಸಿರುವ ಪ್ರೊ.ಜಯಪ್ರಕಾಶಗೌಡರ ಹೆಸರಿನಲ್ಲಿ ಸಂಘಟನಾ ಪ್ರಶಸ್ತಿ ಕೊಡುತ್ತಿರುವುದು ಸಂಗತವೂ ಔಚಿತ್ಯವೂ ಆಗಿದೆ. “ಪಲ್ಲಕ್ಕಿಯಲ್ಲಿ ಕುಳಿತವರು ಎಲ್ಲರಿಗೂ ಕಾಣಿಸುತ್ತಾರೆ. ಪಲ್ಲಕ್ಕಿಯನ್ನು ಅಣಿಗೊಳಿಸಿ ಸಜ್ಜುಗೊಳಿಸಿದವರು ನೇಪಥ ದಲ್ಲೇ ಇರುತ್ತಾರೆ” ಇದು ಜೆಪಿ ಅವರದ್ದೇ ಮಾತು. ಇದನ್ನೇ ತಾತ್ವೀಕರಿಸಿಕೊಂಡು ‘ರಂಗಭೂಮಿ’ ಮಾತ್ರವಲ್ಲದೆ ಯಾವುದೇ ಕ್ಷೇತ್ರದ ಸಂಘಟನೆಗೂ ಅನ್ವಯ ವಾಗುವಂತೆ ಪ್ರಶಸ್ತಿಯನ್ನು ಕೊಡಮಾಡಬೇಕೆಂಬುದು ಜೆಪಿ ಅವರ ಒಡನಾಡಿಗಳ ಮನದ ಇಂಗಿತ. ನಿವೃತ್ತ ಐಆರ್‌ಎಸ್ ಅಧಿಕಾರಿ ಜಯರಾಮ್ ರಾಯಪುರ ಹಾಗೂ ರಂಗಭೂಮಿ ನಿರ್ದೇಶಕ, ಚಲನಚಿತ್ರ ನಟ ಬಿ. ಸುರೇಶ್ ಅವರು ಪ್ರೊ.ಜಯಪ್ರಕಾಶಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿಯು ೫೦,೦೦೦ ರೂ. ನಗದು ಹಾಗೂ ಫಲಕಗಳ್ನು ಒಳಗೊಂಡಿದೆ.
ಇಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ:
ಪ್ರೊ.ಬಿ. ಜಯಪ್ರಕಾಶ ಗೌಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮ -.೧೫ರಂದು ಸಂಜೆ ೪.೦೦ ಗಂಟೆಗೆ ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆದಿಚುಂಚನಗಿರಿ ಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಜರುಗಲಿದೆ. ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಮತ್ತಿತರರು ಭಾಗಿಯಾಗಲಿದ್ದಾರೆ.





