Hilliard
49
clear sky
Light
Dark

ಬದುಕಿರುವ ಕಾಲದ ರೂಪುರೇಖೆ ಮನದಟ್ಟು ಮಾಡಿಕೊಳ್ಳಲು ನೆರವು

• ಓ.ಎಲ್. ನಾಗಭೂಷಣ ಸ್ವಾಮಿ
ಸತ್ಯ-ಸುಳ್ಳುಗಳ ನಡುವೆ ವ್ಯತ್ಯಾಸವೇ ತಿಳಿಯದಂಥ ಕಾಲದಲ್ಲಿ ಬದುಕುತಿದ್ದೇವೆ. ಶಿಕ್ಷಣ, ಧರ್ಮ, ಸಂಸ್ಕೃತಿ, ಅಧಿಕಾರ ಎಲ್ಲವೂ ಜನರನ್ನು ಕೊಲ್ಲುವ ಆಯುಧ, ಮನಸನ್ನು ವಿಕೃತಗೊಳಿಸುವ ವಿಷವಾಗಿ, ಬದಲಾಗಿರುವ ದುರಂತ ಪ್ರತಿಕ್ಷಣ ಅನುಭವಕ್ಕೆ ಬರುತ್ತಿದೆ. ಇಂಥ ಹೊತ್ತಿನಲ್ಲಿ ಡಿ. ಉಮಾಪತಿಯವರ ಅಂಕಣ ನಾವು ಬದುಕಿರುವ ಕಾಲದ ರೂಪುರೇಖೆಗಳನ್ನು ಮನದಟ್ಟು ಮಾಡಿಕೊಳ್ಳಲು ನೆರವಾಗುತ್ತವೆ.

‘ಆಂದೋಲನ’ದಲ್ಲಿ ಉಮಾಪತಿಯವರ ಬರಹವನ್ನು ತಪ್ಪದೇ ಓದುತ್ತಾ ಬಂದಿದ್ದೇನೆ. ದೇಶದ ರಾಜಧಾನಿಯಲ್ಲಿ ಕೂತು ದೇಶ, ರಾಜ್ಯ, ಸಂಸ್ಕೃತಿ, ಬಹುಜನರ ಬಗ್ಗೆ ಧ್ಯಾನಿಸಿ ಬರೆದ ಈ ಬರಹಗಳು ಕನ್ನಡವನ್ನು ಮಾತ್ರಬಲ್ಲ ಓದುಗರ ತಿಳಿವಳಿಕೆಗೆ ಅಗತ್ಯವಾದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಯಾಮವನ್ನು ಒದಗಿಸಿ ಕೊಡುತ್ತವೆ.

ಯಾವ ನೆನಪುಗಳನ್ನು ಯಾಕೆ ಉಳಿಸಿಕೊಳ್ಳಬೇಕು ಎಂಬ ಪ್ರಶ್ನೆ ಮತ್ತು ಎಚ್ಚರ ಉಮಾಪತಿಯವರ ಬರಹಗಳಲ್ಲಿ ಶ್ರುತಿಯಾಗಿ ಕೇಳುತ್ತದೆ. “ಮನುಸ್ಮೃತಿ ಮತ್ತೊಮ್ಮೆ ಭಾರತದ ಸಂವಿಧಾನ ಆದೀತು!” ಎಂಬ ಬರಹದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು 1928ರ ಫೆಬ್ರವರಿ ಮೂರರ ಬಹಿಷ್ಕೃತ ಭಾರತ ಸಂಚಿಕೆಯಲ್ಲಿ ತಾವು ಮನುಸ್ಮೃತಿಯನ್ನು ಸುಟ್ಟದ್ದನ್ನು, ಸಮರ್ಥಿಸಿದ ಬಗೆಯನ್ನು ನೆನಪಿಸುತ್ತಾರೆ. ಗೋಲ್ವಾಲ್ಕರ್ ಅವರು “ಹೊಸ ಸಂವಿಧಾನದಲ್ಲಿ ಭಾರತೀಯವೆಂಬ ಅಂಶವೇನೇನೂ ಇಲ್ಲ. ಹಿಂದೂಗಳು ಪಾಲಿಸುವ ಮನುವಿನ ಕಾನೂನುಗಳು ಲೆಕ್ಕಕ್ಕೇ ಇಲ್ಲ’ ಎಂದು ಹೇಳಿದ್ದನ್ನು ಉಲ್ಲೇಖಿಸಿಸಮಾನತೆಯ ಪ್ರತಿಪಾದನೆಯೇ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣ, ಈ ನೆನಪನ್ನು ನಿರ್ಲಕ್ಷ್ಯ ಮಾಡಿದರೆ ಮನುಸ್ಮೃತಿಯೇ ದಿನನಿತ್ಯದ ಬದುಕನ್ನು ಆಳೀತು ಎಂದು ಎಚ್ಚರಿಸಿದ್ದಾರೆ.

‘ದಲಿತ ದ್ವೇಷದ ಬಂಧಿಗಳ ಬಿಡುಗಡೆ ಎಂದಿಗೆ?’ಎಂಬ ಬರಹದಲ್ಲಿ ದಲಿತರ ಮೇಲೆ ನಡೆವ ದೌರ್ಜನ್ಯ ಪ್ರಕರಣಗಳು “ಈ ಸಮಾಜದ ಆತ್ಮಸಾಕ್ಷಿಯನ್ನು ಕಲಕುವುದೇ ಇಲ್ಲ”. ಸವರ್ಣೀಯರು ಬಹುಜನರ ಪಾಲಿಗೆ ಸಮಾಜವನ್ನೇ ಕಾರಾಗೃಹ ಮಾಡಿದ್ದಾರೆ, ದಲಿತರ ಬಿಡುಗಡೆ ತಮ್ಮ ಬಿಡುಗಡೆಯೂ ಹೌದು ಅನ್ನುವುದನ್ನು ಅರಿತಿಲ್ಲವೆಂದು ಉಮಾಪತಿಯವರು ನೋವಿನಿಂದಲೂ ಸಿಟ್ಟಿನಿಂದಲೂ ಹೇಳುತ್ತಾರೆ.

“ಬಡವ ಹೆಚ್ಚು ಬಡವ ಸಾಹುಕಾರ ಹೆಚ್ಚು ಸಾಹುಕಾರ ಆಗುತಿದ್ದಾರೆ” ಎಂಬ ಬರಹದಲ್ಲಿ ಜಗತ್ತಿನ ಅತಿ ಬಡವರ ಸಂಖ್ಯೆಯಲ್ಲಿ ಶೇ.50 ಮಂದಿ ಭಾರತದಲ್ಲೇ ಇದ್ದಾರೆ, ನೋಟುರದ್ದು, ಕೋವಿಡ್… ಇಂಥವು ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ, ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡಿವೆ, ಕೂಲಿಯ ದರ ಏರಿದ್ದಕ್ಕೆ ಹೋಲಿಸಿದರೆ ಊಟದ ದರ ಏರಿಕೆ ಇನ್ನೂ ಹೆಚ್ಚಾಗಿದೆ, ದೇಶದ ಎಲ್ಲ ಮಕ್ಕಳ ಪ್ರೌಢಶಾಲೆಯವರೆಗಿನ ಶಿಕ್ಷಣವನ್ನು ಇನ್ನೂ ಇಪ್ಪತೈದು ವರ್ಷಗಳ ಕಾಲ ನಿರ್ವಹಿಸುವ ಸಂಪತ್ತು ಭಾರತದ ಹತ್ತು ಶ್ರೀಮಂತರ ಬಳಿ ಇದೆ ಎಂದು ದಿನನಿತ್ಯದ ಅಸಮಾನತೆಯ ರಾಕ್ಷಸ ರೂಪವನ್ನು ಉಮಾಪತಿ ಚಿತ್ರಿಸುತ್ತಾರೆ.

ಪ್ಯಾಲೆಸ್ತೀನಿಯರನ್ನು ಕುರಿತ ಬರಹಗಳಂಥವು ಭಾರತದ ಬದುಕನ್ನು ಅಂತಾರಾಷ್ಟ್ರೀಯ ಹಿನ್ನೆಲೆಯಲ್ಲಿ ನೋಡುವಂತೆ ಪ್ರೇರೇಪಿಸುತ್ತವೆ. ಹಿಟ್ಲರ್‌ನ ಯಹೂದಿನಿರ್ನಾಮಯೋಜನೆಯಿಂದ ಬದುಕುಳಿದವರೇಪ್ಯಾಲೆಸ್ತೀನಿಯರ ನೆಲವನ್ನು ದುರಾಕ್ರಮಣ ಮಾಡಿರುವ, ಪ್ರಜಾಪ್ರಭುತ್ವಗಳು ಆಕ್ರಮಣ ಕಾರರನ್ನೇ ಬೆಂಬಲಿಸುವ ವಿಷಾದದ ವಿಪರ್ಯಾಸ, ಭಾರತ ದಲ್ಲಿರುವ ಮುಸ್ಲಿಂ ವಿರೋಧ ನಮ್ಮ ಮಾನವೀಯತೆಯನ್ನೇ ಮರೆ ಮಾಡಿರುವ ದುರಂತವನ್ನು ಉಮಾಪತಿ ಹೇಳಿದ್ದಾರೆ.

ಭಾವ, ತರ್ಕ, ಮಾಹಿತಿ, ಕಳಕಳಿ ಎಲ್ಲವೂ ಮಿಳಿತವಾಗಿರುವ ಉಮಾಪತಿಯವರ ಬರಹಗಳು ಸೂಕ್ಷ್ಮತೆಯನ್ನು ಕಳೆದುಕೊಂಡು, ಜಡವಾಗಿ, ವಾಟ್ಸ್ಆಪ್,ಫೇಸ್‌ಬುಕ್, ಸೀರಿಯಲ್ಲುಗಳಲ್ಲಿ ಕಳೆದುಹೋಗಿರುವ ಕನ್ನಡದ ಸುಶಿಕ್ಷಿತ ಓದುಗರನ್ನು ಅಲುಗಿಸಿತೇ ಎಂಬ ಪ್ರಶ್ನೆಗೆ ನನಗಂತೂ ಉತ್ತರ ತಿಳಿದಿಲ್ಲ.

‘ಆಂದೋಲನ’ದಲ್ಲಿ ಪ್ರಕಟವಾದ ಡಿ.ಉಮಾಪತಿ ಅವರ ಅಂಕಣ ‘ದೆಹಲಿ ಧ್ಯಾನ ಬಹಳಷ್ಟು ಆಳ ಮತ್ತು ವಿಸ್ತಾರವನ್ನು ಹೊಂದಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಆಯ್ಕೆಯಾದ ಸರ್ಕಾರಗಳು ಬಹಳ ನಾಜೂಕಾಗಿ ಜನವಿರೋಧಿ ನಿಲುವು ತೆಗೆದುಕೊಳ್ಳುತ್ತಿರುವುದನ್ನು ಸೂಕ್ತ ಅಂಕಿಅಂಶಗಳೊಂದಿಗೆ ಹೊರಗೆಳೆಯುವ, ಪ್ರಜ್ಞಾವಂತರೆನ್ನಿಸಿಕೊಂಡವರೂ ಸರ್ಕಾರಗಳ ಧೋರಣೆಗೆ ಮೈಮರೆಯುವ ಹೊತ್ತಿನಲ್ಲಿ ಅವರನ್ನು ಎಚ್ಚರಿಸುವ ಕೆಲಸವನ್ನು ‘ದೆಹಲಿ ಧ್ಯಾನ’ ನಿರಂತರ ಮಾಡುತ್ತ ಬಂದಿತು. ನ್ಯಾಯಾಂಗವು ಆಳುವವರ ಕೈಯಲ್ಲಿ ಅಸ್ತ್ರವಾಗುತ್ತಿರುವ ಸಂದರ್ಭದಲ್ಲಿ ಅದರ ಕುರಿತೂ ನಿಷ್ಠುರ ನುಡಿಗಳನ್ನಾಡುತ್ತಿರುವ ‘ದೆಹಲಿ ಧ್ಯಾನ’ ಒಂದು ಉತ್ತಮ ಅಂಕಣ ಮಾಲಿಕೆಯಾಗಿತ್ತು.
-ಡಾ.ಸರ್ಜಾಶಂಕರ್ ಅರಳಿಮಠ.

ನಮ್ಮ ಕನ್ನಡದ ಅತ್ಯಂತ ಹೆಮ್ಮೆಯ ಪ್ರತಿಭಾವಂತ ಮಾಧ್ಯಮ ಮಿತ್ರರಲ್ಲಿ ಡಿ.ಉಮಾಪತಿ ಮುಖ್ಯರಾದವರು. ಸಾಮಾಜಿಕವಾಗಿ ಅವಕಾಶ-ವಿಹೀನ ಹಿನ್ನೆಲೆಯಿಂದ ಮುಂದಿರುವ ಈ ಸಂವೇದನ ಶೀಲ ಲೇಖಕರ ಬದುಕಿನ ಬದ್ಧತೆ ನಿಜಕ್ಕೂ ಆಶ್ಚರ್ಯಕರವಾದದ್ದು. ‘ಆಂದೋಲನ’ದಲ್ಲಿ ಪ್ರಕಟವಾಗುತ್ತಿದ್ದ ಇವರ ‘ದೆಹಲಿ ಧ್ಯಾನ’ ಅಂಕಣದ ಎಲ್ಲಾ ಬರಗಹಳನ್ನೂ ನಾನು ತೀವ್ರಾಸಕ್ತಿಯಿಂದ ಗಮನಿಸಿದ್ದೇನೆ. ಕರ್ನಾಟಕ, ಭಾರತದ ಬೇರೆ ಬೇರೆ ಪ್ರದೇಶಗಳು ಮತ್ತು ವಿಶ್ವಮಟ್ಟದ ಜನಪರ ಆಶಯಗಳ ಬಗ್ಗೆ ಸದಾ ಕಾಲವೂ ಕುತೂಹಲಿಯಾಗಿರುವ ಈ ತೀಕ್ಷ್ಮಮತಿ ಪತ್ರಕರ್ತರು ಜ್ಞಾನಾಕಾಂಕ್ಷಿಯಾಗಿ ರುವ ಉಪಯುಕ್ತ ಲೇಖನಗಳನ್ನು ಬರೆದು ಜನಪ್ರಿಯರಾಗಿರುವುದು ಸಂತೋಷದ
ಸಂಗತಿಯಾಗಿದೆ.
-ಪ್ರೊ.ಕಾಳೇಗೌಡ ನಾಗವಾರ, ಸಾಹಿತಿ, ಪ್ರಗತಿಪರ ಚಿಂತಕರು

ನಿಖರವಾಗಿ ಬರೆಯುತ್ತಿದ್ದ ಶೋಷಣೆಯ ಮುಖ ವನ್ನು ತೆರೆದಿಡುತ್ತಿದ್ದ ಡಿ.ಉಮಾಪತಿ ಅವರ ಲೇಖನವನ್ನು ಆಂದೋಲನ’ದಂಥ ದಿಟ್ಟ ಪತ್ರಿಕೆ ಪ್ರಕಟಿಸುತ್ತಿದ್ದದ್ದೇ ಹೆಮ್ಮೆಯ ವಿಷಯ. ಅವರ ಎಲ್ಲಾ ಲೇಖನಗಳನ್ನೂ ನಾನು ಮೆಚ್ಚಿಕೊಂಡಿದ್ದೇನೆ. ಅವರ ಲೇಖನಗಳು ಪ್ರಸ್ತುತ ಸಾಮಾಜಿಕ ಸಮಸ್ಯೆಗಳ ಹೊಸ ಆಯಾಮವನ್ನು ತೆರೆದಿಡುತ್ತಿದ್ದವು. ಅವರ ಬರಹವನ್ನು ನಾನೂ ಇನ್ನೂ ಹೆಚ್ಚು ನಿರೀಕ್ಷಿಸುತ್ತೇನೆ. ಅವರ ಲೇಖನ ಇನ್ನು ಮುಂದೆಯೂ ಪ್ರಕಟಗೊಳ್ಳಲಿ ಎಂಬುದು ನನ್ನ ಆಶಯ.
-ಡಾ.ಹಿ.ಶಿ.ರಾಮಚಂದ್ರೇಗೌಡ, ಸಾಹಿತಿ

ಡಿ.ಉಮಾಪತಿ ಅವರು ತಮ್ಮ ‘ದೆಹಲಿ ಧ್ಯಾನ’ ಅಂಕಣದ ಮೂಲಕ ರಾಷ್ಟ್ರಮಟ್ಟದ ವಿಷಯಗಳನ್ನು ವಿಮರ್ಶಾತ್ಮಕವಾಗಿ ಜನಸಮುದಾಯದ ನಡುವೆ ಇಡುತ್ತಿದ್ದರು. ಆ ಮೂಲಕ ಆ ವಿಷಯಗಳನ್ನು ಕುರಿತು ಹೆಚ್ಚು ಚರ್ಚೆಗೆ ಅವಕಾಶ ಮಾಡಿಕೊಡುತ್ತಿ ದ್ದರು. ನಮಗೆ ತಿಳಿಯದ ಅದೆಷ್ಟೋ ವಿಚಾರಗಳು ಅವರ ಲೇಖನಗಳಿಂದ ಸಿಗುತ್ತಿತ್ತು. ಸರ್ಕಾರ ತನ್ನ ಅಧಿಕಾರವನ್ನು ಬಳಸಿ ಸಾಂವಿಧಾನಿಕ ಪ್ರಾಧಿಕಾರಗಳನ್ನು ಹೇಗೆ ದುರ್ಬಳಕೆ ಮಾಡಿಕೊಂಡಿತು ಎಂಬುದನ್ನು ಕೆಲ ತಿಂಗಳ ಹಿಂದೆ ವಿಕೃತವಾಗಿ ತಿಳಿಸಿಕೊಟ್ಟಿದ್ದರು. ಕೊಲಿಜಿ ಯಂನಿಂದ ನ್ಯಾಯಮೂರ್ತಿಗಳನ್ನೇ ಹೊರಗಿಟ್ಟ ಸರ್ಕಾರದ ತೀರ್ಮಾನವನ್ನು ತಮ್ಮದೇ ಶೈಲಿಯಲ್ಲಿ ವಿಮರ್ಶಾತ್ಮಕವಾಗಿ ತಿಳಿಸಿಕೊಟ್ಟಿದ್ದರು.ಅಂಥ ಲೇಖನಗಳನ್ನು ಆಂದೋಲನ’ದಿನಪತ್ರಿಕೆ ಪ್ರಕಟಿಸಿ ನಮಗೆ ಹೆಚ್ಚು ಜ್ಞಾನ ತುಂಬಿದೆ. ಅಂಥ ಲೇಖನಗಳನ್ನು ನಾನು ಇನ್ನೂ ಹೆಚ್ಚು ನಿರೀಕ್ಷಿಸುತ್ತೇನೆ.
– ಸಿ.ಹರಕುಮಾರ್, ಪ್ರಧಾನ ವ್ಯವಸ್ಥಾಪಕರು, ಮೈಸೂರ್ ಪೇಂಟ್ಸ್ ಅಂಡ್ ವಾರ್ನಿಷ್.

ವಸ್ತುನಿಷ್ಠತೆ, ನಿರ್ಭೀತತೆ ಹಾಗೂ ನಿರ್ಮಲತೆಯಿಂದ ಚಿಂತನೆಗಳು ದೊರೆಯುವುದು ಅಪರೂಪವೇ ಸರಿ. ಚಿಂತಕನೊಬ್ಬ ಕಾಲ, ದೇಶ, ಕ್ರಿಯಾಸೀಮೆಗಳನ್ನು ದಾಟಿ ಸಮಕಾಲೀನವೂ ಸಾರ್ವಕಾಲಿಕವೂ ಆಗುವಂತೆ ಬರೆದಾಗ ಲೋಕದ ಬೆಳಗು ಪರಿಣಾಮಕಾರಿಯಾಗಿರುತ್ತದೆ. ನಮ್ಮ ನಡುವಿನ ಅಂತಹ ಚಿಂತಕರಲ್ಲಿ ಡಿ.ಉಮಾಪತಿಯವರು ಕಾಲಕ್ಕೆ ತಕ್ಕ ಕನ್ನಡಿ ಹಿಡಿದು, ಲೋಕ ತಿಳಿವನ್ನು ನಿತ್ಯವೂ ಬೆಳಗುತ್ತಿರುವ ನುಡಿಯೋಗಿಯಾಗಿದ್ದಾರೆ.
‘ಆಂದೋಲನ’ ಪತ್ರಿಕೆಯಲ್ಲಿ ‘ದೆಹಲಿ ಧ್ಯಾನ’ ಕಾಲಂನಲ್ಲಿ ಅವರು ಬರೆಯುತ್ತಿದ್ದ ಲೇಖನಗಳೇ ಇದಕ್ಕೆ ಸಾಕ್ಷಿಯಾಗಿವೆ. ‘ಆಂದೋಲನ’ದೊಳಗಣ ಆ ಲೇಖನಗಳನ್ನು ಓದುತ್ತಾ ಹೋದಂತೆ ನಮ್ಮೊಳಗೂ ಅರಿವಿನ ಆಂದೋಲನವಾಗುತ್ತಿದ್ದ ಬಗೆಯು ಅವಿಸ್ಮರಣೀಯ.
– ಡಾ.ಕುಪ್ಪಳ್ಳಿ ಎಂ.ಭೈರಪ್ಪ, ಕನ್ನಡ ಸಹಾಯಕ ಪ್ರಾಧ್ಯಾಪಕರು, ಕ್ರಿಸ್ತು ಜಯಂತಿ ಕಾಲೇಜು(ಸ್ವಾಯತ್ತ) ಕೆ.ನಾರಾಯಣಪುರ, ಬೆಂಗಳೂರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ