ಪಂಜು ಗಂಗೊಳ್ಳಿ
ಸುಂದರ್‌ಬನ್! ಹೆಸರಿನಷ್ಟೇ ಸುಂದರ. ಆದರೆ, ಅಷ್ಟೇ ಭೀಕರ. ಭಾರತದ ಗಂಗಾ, ಬ್ರಹ್ಮಪುತ್ರ ಮತ್ತು ಬಾಂಗ್ಲಾದೇಶದ ಮೇಘನಾ ನದಿಗಳಲ್ಲಿ ಸೃಷ್ಟಿಯಾಗಿರುವ ೧೦,೨೦೦ ಚದರ ಕಿ.ಮೀ.ಗೂ ಅಧಿಕ ವಿಸ್ತೀರ್ಣದ ಸುಂದರಬನ ಪ್ರಪಂಚದ ಅತ್ಯಂತ ದೊಡ್ಡ ಮುಖಜ ಭೂಮಿ. ಇದರಲ್ಲಿ ೪,೨೦೦ ಚ.ಕಿ.ಮೀ. ವಿಸ್ತೀರ್ಣ ಪ. ಬಂಗಾಳದಲ್ಲಿದ್ದರೆ, ಉಳಿದ ೬,೦೦೦ ಚ.ಕಿ.ಮೀ. ಬಾಂಗ್ಲಾದೇಶದಲ್ಲಿದೆ. ಪ್ರಪಂಚದ ಅತಿದೊಡ್ಡ ಕಾಂಡ್ಲವನ (ಮ್ಯಾಂಗ್ರೋವ್ ಫಾರೆಸ್ಟ್) ಇರುವುದು ಕೂಡ ಇದೇಸುಂದರಬನದಲ್ಲಿ. ಭಾರತದ ಆರು ಅತಿ ದೊಡ್ಡ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸುಂದರಬನ ಕೂಡ ಒಂದು. ‘ಸುಂದರಬನ ಹುಲಿ ಸಂರಕ್ಷಿತ ಪ್ರದೇಶ’ದ ವಿಶೇಷತೆ ಏನೆಂದರೆ, ಇಲ್ಲಿರುವ ‘ಕಾಂಡ್ಲ ಹುಲಿ (ಮ್ಯಾಂಗ್ರೋ ಟೈಗರ್)’ಗಳು ವಿಶ್ವದಲ್ಲಿ ಮತ್ತೆಲ್ಲೂ ಇಲ್ಲ. ಹಾಗೆಯೇ, ಈ ಹುಲಿಗಳಿಂದ ಸೃಷ್ಟಿಯಾದ ‘ಹುಲಿ ವಿಧವೆ’ಯರು ಸುಂದರಬನದ ಇನ್ನೊಂದು ವಿಶೇಷತೆ!
ಭೌಗೋಳಿಕ ಕಾರಣಗಳಿಂದಾಗಿ ಸುಂದರಬನದಲ್ಲಿ ಮನುಷ್ಯರು ಮತ್ತು ವನ್ಯ ಜೀವಿಗಳು ಒಬ್ಬರಿಗೊಬ್ಬರು ಅತ್ಯಂತ ಸನಿಹದಲ್ಲಿ ಬದುಕಬೇಕಾಗಿದೆ. ಹಾಗಾಗಿ, ಇಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಸಾಮಾನ್ಯ. ಇಲ್ಲಿನ ಬಡವರಿಗೆ ಹೊಟ್ಟೆಪಾಡಿನ ಗಳಿಕೆಗಾಗಿ ಜೇನು ಕೀಳಲು, ಏಡಿ ಹಿಡಿಯಲು ಮತ್ತು ಮೀನು ಹಿಡಿಯಲು ಕಾಂಡ್ಲವನದೊಳಗೆ ಹೋಗುವ ಅನಿವಾರ್ಯತೆಯಿದೆ. ಹೀಗೆ ಕಾಂಡ್ಲವನಕ್ಕೆ ಹೋಗುವವರು ಮೊಸಳೆ ಬಾಯಿಗೆ ಸಿಕ್ಕಿ, ವಿಷದ ಹಾವುಗಳ ಕಡಿತಕ್ಕೆ ಒಳಗಾಗಿ ಹಾಗೂ, ಎಲ್ಲಕ್ಕೂ ಮಿಗಿಲಾಗಿ, ಹುಲಿ ಬಾಯಿಗೆ ಸಿಕ್ಕಿ ಸಾಯುವುದು ಆಗಾಗ್ಗೆ ನಡೆಯುತ್ತದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಸುಂದರಬನದಲ್ಲಿ ಪ್ರತಿವರ್ಷ ಹುಲಿ ದಾಳಿಗೆ ಸಿಕ್ಕಿ ಸರಾಸರಿ ೩೬ ಜನ ಸಾಯುತ್ತಾರೆ. ಮೊಸಳೆ ಹಾಗೂ ಹಾವು ಕಡಿತಕ್ಕೆ ಬಲಿಯಾಗುವವರ ಸಂಖ್ಯೆ ಬೇರೆ. ಹೆಚ್ಚುತ್ತಿರುವ ಜನಸಂಖ್ಯೆ, ಕಡಿಮೆಯಾಗುತ್ತಿರುವ ಹುಲಿಯ ನೈಸರ್ಗಿಕ ನೆಲೆ ಹಾಗೂ ಏರುತ್ತಿರುವ ಉಪ್ಪು ನೀರಿನ ಪ್ರಮಾಣದಿಂದಾಗಿ ಸುಂದರಬನ ದಲ್ಲಿ ಮನುಷ್ಯ ಮತ್ತು ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ.
ಸರ್ಕಾರದ ಕಾನೂನಿನ ಪ್ರಕಾರ ಸುಂದರಬನದ ನಿರ್ದಿಷ್ಟ ಪ್ರದೇಶದ ತನಕ ಮಾತ್ರ ಹೋಗಿ ಜೇನು ಕೀಳಲು, ಏಡಿ ಹಾಗೂ ಮೀನು ಹಿಡಿಯಲು ಅನುಮತಿಯಿದೆ. ಈ ಪ್ರದೇಶಗಳಲ್ಲಿ ವನ್ಯಜೀವಿ ದಾಳಿಗೆ ಸಿಕ್ಕಿ ಸಾಯುವವರ ಕುಟುಂಬದವರಿಗೆ ಸರ್ಕಾರ ೫ ಲಕ್ಷ ರೂಪಾಯಿ ಆರ್ಥಿಕ ಪರಿಹಾರ ಕೊಡುತ್ತದೆ. ಅದೂ, ಸೂಕ್ತ ದಾಖಲೆಗಳಿದ್ದರೆ ಮಾತ್ರ. ದಾಖಲೆಗಳಿಲ್ಲದಿದ್ದರೆ ನಯಾ ಪೈಸೆಯ ಪರಿಹಾರವಿಲ್ಲ. ಎಲ್ಲ ದಾಖಲೆಗಳಿದ್ದರೂ ಅಲ್ಲಿನ ಬಡಪಾಯಿಗಳು ಪರಿಹಾರಕ್ಕಾಗಿ ವರ್ಷಗಳ ಕಾಲ ಹೋರಾಡಬೇಕಾಗು ತ್ತದೆ. ಅನುಮತಿಯಿರುವ ಪ್ರದೇಶಗಳಲ್ಲಿ ದಿನೇದಿನೇ ಸಂಪಾದನೆಗಅವಕಾಶಗಳು ಕಡಿಮೆಯಾಗುತ್ತಿರುವುದರಿಂದ ಜನ ನಿಷೇಧಿತ ಅರಣ್ಯ ಪ್ರದೇಶದೊಳಗೆ ಹೋಗುವುದು ಸಾಮಾನ್ಯವಾಗುತ್ತಿದೆ. ಈ ಪ್ರದೇಶಗಳಲ್ಲಿ ಹುಲಿ ದಾಳಿ ಅಥವಾ ಬೇರೆ ರೀತಿಯ ವನ್ಯಜೀವಿ ದಾಳಿಗೆ ಬಲಿಯಾಗು ವವರಿಗೆ ಚಿಕ್ಕಾಸಿನ ಪರಿಹಾರವೂ ದೊರಕದು.
ಭಾರತದಲ್ಲಿ ವಿಧವೆಯರನ್ನು ಇಂದಿಗೂ ಅಮಂಗಳಕರ ಮಹಿಳೆಯರನ್ನಾಗಿ ಭಾವಿಸಲಾಗುತ್ತದೆ. ಅಂತೆಯೇ ಹುಲಿ ದಾಳಿಗೆ ಸಿಕ್ಕಿ ಗಂಡಂದಿರನ್ನು ಕಳೆದುಕೊಂಡು ‘ಬಾಘ್ ಬಿದೋಬಾ(ಹುಲಿ ವಿಧವೆ)’ ಎಂದು ಕರೆಸಿಕೊಳ್ಳುವ ಮಹಿಳೆ ಸುಂದರಬನದಲ್ಲಿ ದಿನ ಬೆಳಗಾಗುವುದರೊಳಗೆ ಒಬ್ಬ ಅಪಶಕುನಿಯಾಗಿ ಮಾರ್ಪಡುತ್ತಾಳೆ. ಅವಳಿಗೆ ‘ಸ್ವಾಮಿ ಖೇಜೋ(ಗಂಡನನ್ನು ತಿಂದವಳು)’ ಎಂಬ ಇನ್ನೊಂದು ಹೆಸರೂ ಇದೆ. ಹುಲಿ ವಿಧವೆಯರು ಸಮಾಜದಿಂದ ಬಹಿಷ್ಕೃತರಾಗಿ, ಸುಂದರಬನದ ಸಾಮಾನ್ಯ ಉದ್ಯೋಗಗಳಾದ ಮೀನು ಹಿಡಿಯುವುದು, ಏಡಿ ಹಿಡಿಯುವುದು, ಜೇನು ಕೀಳುವುದು, ಕೃಷಿ ಚಟುವಟಿಕೆ ನಡೆಸುವುದು ಮೊದಲಾದ ಜೀವನ ನಿರ್ವಹಣೆ ಚಟುವಟಿಕೆಗಳಿಂದ ನಿಷೇಧಿಸಲ್ಪಡುತ್ತಾರೆ. ಇವರ ಗಂಡಂದಿರು ನಿಷೇಧಿತ ಪ್ರದೇಶಗಳಲ್ಲಿ ಹುಲಿ ದಾಳಿಗೆ ಸಿಕ್ಕಿ ಸತ್ತಿದ್ದರಂತೂ ಯಾವುದೇ ಆರ್ಥಿಕ ಪರಿಹಾರ ಸಿಕ್ಕದೆ, ಗಂಡನ ಮನೆಯಿಂದ ಹೊರದಬ್ಬಲ್ಪಟ್ಟು ನಿರ್ಗತಿಕರಾಗುತ್ತಾರೆ. ಈ ವಿಧವೆಯರು ಸುಂದರಬನದಲ್ಲಿ ಯಾವುದೇ ಆಶ್ರಯವಿಲ್ಲದೆ ಹೊಟ್ಟೆಪಾಡಿಗಾಗಿ ಕೊಲ್ಕತ್ತಾ ನಗರಕ್ಕೆ ಹೋಗುತ್ತಾರೆ. ಅಲ್ಲಿ ಮನೆಗೆಲಸ, ಕಟ್ಟಡ ಕೆಲಸ, ಚಿಂದಿ ಹೆಕ್ಕುವುದು, ಭಿಕ್ಷಾಟನೆ ಅಥವಾ ವೇಶ್ಯಾವಾಟಿಕೆ ಮಾಡಿ ಬದುಕು ನಡೆಸಬೇಕಾದ ಅನಿವಾರ್ಯತೆಗೆ ಒಳಗಾಗುತ್ತಾರೆ. ಸುಂದರಬನದಲ್ಲಿ ೩,೦೦೦ಕ್ಕೂ ಹೆಚ್ಚು ಹುಲಿ ವಿಧವೆಯರಿದ್ದಾರೆ.
ಹುಲಿ ವಿಧವೆಯರು ಅಮಂಗಲೆಯರು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಸುಂದರಬನದ ಜನ ನಂಬುವ ಒಂದು ಕತೆ ಇದೆ. ‘ಬೋನ್‌ಬಿರ್ ಜೊಹು ರನ್ಮಾ’ ಎಂಬುದು ಸುಂದರಬನದ ಧಾರ್ಮಿಕ ಗ್ರಂಥ. ಇದನ್ನು ಅಲ್ಲಿನ ಹಿಂದೂಗಳು ಹಾಗೂ ಮುಸ್ಲಿಮರು ಇಬ್ಬರೂ ನಂಬುತ್ತಾರೆ. ಅದರ ಪ್ರಕಾರ, ಸುಂದರಬನದ ಕಾಂಡ್ಲ ಹುಲಿ ರೂಪ ಬದಲಾಯಿಸುವ ‘ದೊಕ್ಕಿಣ್ ರಾಯ್’ ಎಂಬ ದೇವತೆ. ಸುಂದರಬನದ ಕಾಡು ದೊಕ್ಕಿಣ್ ರಾಯ್‌ಗೆ ಸೇರಿದ್ದು, ಅವನ ಅನುಮತಿಯಿಲ್ಲದೆ ಯಾರೇ ಕಾಡೊಳಕ್ಕೆ ನುಗ್ಗಿದರೂ ಹುಲಿಗಳು ಅವರ ಮೇಲೆ ಆಕ್ರಮಣ ಮಾಡುತ್ತವೆ. ಹೀಗೆ ಸುಂದರಬನದ ಮನುಷ್ಯರು ಹಾಗೂ ದೊಕ್ಕಿಣ್ ರಾಯ್ ನಡುವೆ ಆಗಾಗ್ಗೆ ಸಂಘರ್ಷ ನಡೆಯುವುದನ್ನು ಗಮನಿಸಿದ ಅಲ್ಲಾ, ಅದನ್ನು ತಪ್ಪಿಸಲು ಮಾ ಬೋನ್ ಬೀಬೀ ಮತ್ತು ಅವಳ ಸಹೋದರ ಶಾಹ್ಜೋಂಗೋಳಿಯನ್ನು ಕಳಿಸಿಕೊಡುತ್ತಾನೆ. ಮಾ ಬೋನ್‌ಬೀಬೀ ದೊಕ್ಕಿಣ್ ರಾಯ್ ನೊಂದಿಗೆ ದೀರ್ಘ ಹೋರಾಟ ನಡೆಸಿ, ಅವನನ್ನು ಸೋಲಿಸಿ, ಸುಂದರಬನದ ಕಾಡನ್ನು ಮನುಷ್ಯರು ಮತ್ತು ದೊಕ್ಕಿಣ್ ರಾಯ್ ನಡುವೆ ವಿಭಾಗಿಸುತ್ತಾಳೆ. ಹಾಗೂ, ಮನುಷ್ಯರು ತಮ್ಮ ದುರಾಸೆಯಿಂದ ದೊಕ್ಕಿಣ್ ರಾಯ್‌ಗೆ ಸೇರಿದ ಅರಣ್ಯ ಪ್ರದೇಶಕ್ಕೆ ಪ್ರವೇಶಿಸ ಬಾರದು, ಹಾಗೆ ಪ್ರವೇಶಿಸುವವರನ್ನು ತಾನು ಕಾಪಾಡುವುದಿಲ್ಲ ಎಂದು ಷರತ್ತು ವಿಧಿಸುತ್ತಾಳೆ.
ಮಾ ಬೋನ್ ಬೀಬೀ ಸುಂದರಬನದ ಹುಲಿ ವಿಧವೆಯರ ಕೈಬಿಟ್ಟರೂ, ದೂರದ ಮುಂಬೈಯ ನೀತಿ ಗೋಯೆಲ್ ಎಂಬವರು ಆಪದ್ಬಾಂಧವರಾಗಿ ಬಂದು ಇವರ ಕೈ ಹಿಡಿದಿದ್ದಾರೆ. ಹುಲಿ ವಿಧವೆಯರ ಗೋಳಿನ ಬದುಕನ್ನು ತಿಳಿದ ನೀತಿ ಗೋಯೆಲ್ ಅವರ ಬದುಕನ್ನು ಪುನಃ ಕಟ್ಟಿ ಕೊಡುವ ಸಲುವಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಹಸಿದವನಿಗೆ ಮೀನು ಕೊಡುವ ಬದಲು ಮೀನು ಹಿಡಿಯುವುದನ್ನು ಕಲಿಸಿದರೆ ಅವನ ಬದುಕಿನುದ್ದಕ್ಕೂ ಪ್ರಯೋಜನಕ್ಕೆ ಬರುತ್ತದೆ ಎಂಬ ಮಾತಿನಂತೆ, ನೀತಿ ಗೋಯೆಲ್ ಹುಲಿ ವಿಧವೆಯರಿಗೆ ಅಕ್ಷರಶಃ ಮೀನು ಸಾಕುವುದನ್ನು ಕಲಿಸಿ ಕೊಡುತ್ತಿದ್ದಾರೆ. ಆ ಮೂಲಕ ಈ ನತದೃಷ್ಟ ಹುಲಿ ವಿಧವೆಯರು ತಮ್ಮ ಬದುಕಿಗೊಂದು ಸಂಪಾದನೆಯ ದಾರಿಯನ್ನು ಕಂಡುಕೊಂಡು, ತಮ್ಮ ಆತ್ಮಗೌರವವನ್ನು ಮರಳಿ ಪಡೆಯಲು ಸಹಾಯ ಮಾಡುತ್ತಿದ್ದಾರೆ.
೨೦೦೭ರಲ್ಲಿ ೫೦ ವರ್ಷ ಪ್ರಾಯದ ಸೌರವಿ ಮೊಂಡಲ್ ಎಂಬ ಒಬ್ಬಳು ಗಂಡ ಮತ್ತು ಮಗ ಹುಲಿ ದಾಳಿಗೆ ಸಿಕ್ಕಿ ಮತ್ತು ಮಗಳು ಮೊಸಳೆ ಬಾಯಿಗೆ ಸಿಕ್ಕಿ ಸತ್ತಾಗ, ಅಕ್ಷರಶಃ ಅನಾಥಳಾಗಿದ್ದಳು. ಈಗ ಸೌರವಿ ಮೊಂಡಲ್ ನೀತಿ ಗೋಯೆಲ್‌ರ ಸಹಾಯದಿಂದ ತನ್ನ ಮನೆಯೆದುರು ಒಂದು ಮೀನಿನ ಹೊಂಡವನ್ನು ತೋಡಿ, ಅದರಲ್ಲಿ ಮೀನುಗಳನ್ನು ಸಾಕಿ, ಮಾರಿ ಗಳಿಸುವ ಸಂಪಾದನೆಯಲ್ಲಿ ತನ್ನ ಬದುಕನ್ನು ಪುನಃ ಕಟ್ಟಿಕೊಂಡಿದ್ದಾಳೆ. ಸೌರವಿಯಂತೆ ಸುಂದರಬನದ ಸುಮಾರು ೫೦೦ಕ್ಕೂ ಹೆಚ್ಚು ಜನ ಬಹಿಷ್ಕೃತ ಹುಲಿ ವಿಧವೆಯರು ನೀತಿ ಗೋಯೆಲ್‌ರ ನೆರವಿನಿಂದ ಮೀನು ಸಾಕುವ ಮತ್ತು ಆಡು ಸಾಕಣೆ ಉದ್ಯೋಗ ಮಾಡಿ ಸಮಾಜದಲ್ಲಿ ಪುನಃ ತಲೆ ಎತ್ತಿ ನಡೆಯಲು ಶಕ್ತರಾಗಿದ್ದಾರೆ.
ಮಾ ಬೋನ್ ಬೀಬೀ ಸುಂದರಬನದ ಹುಲಿ ವಿಧವೆಯರ ಕೈಬಿಟ್ಟರೂ, ದೂರದ ಮುಂಬೈಯ ನೀತಿ ಗೋಯೆಲ್ ಎಂಬವರು ಆಪದ್ಬಾಂಧವರಾಗಿ ಬಂದು ಇವರ ಕೈ ಹಿಡಿದಿದ್ದಾರೆ. ಹುಲಿ ವಿಧವೆಯರ ಗೋಳಿನ ಬದುಕನ್ನು ತಿಳಿದ ನೀತಿ ಗೋಯೆಲ್ ಅವರ ಬದುಕನ್ನು ಪುನಃ ಕಟ್ಟಿ ಕೊಡುವ ಸಲುವಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ನೀತಿ ಗೋಯೆಲ್ ಹುಲಿ ವಿಧವೆಯರಿಗೆ ಅಕ್ಷರಶಃ ಮೀನು ಸಾಕುವುದನ್ನು ಕಲಿಸಿ ಕೊಡುತ್ತಿದ್ದಾರೆ. ಆ ಮೂಲಕ ಈ ನತದೃಷ್ಟ ಹುಲಿ ವಿಧವೆಯರು ತಮ್ಮ ಬದುಕಿಗೊಂದು ಸಂಪಾದನೆಯ ದಾರಿಯನ್ನು ಕಂಡುಕೊಂಡು, ತಮ್ಮ ಆತ್ಮಗೌರವವನ್ನು ಮರಳಿ ಪಡೆಯಲು ಸಹಾಯ ಮಾಡುತ್ತಿದ್ದಾರೆ.





