Mysore
23
overcast clouds
Light
Dark

ವಂಶಪಾರಂಪರ್ಯ ರಾಜಕಾರಣಕ್ಕೆ ರತ್ನಗಂಬಳಿ; ಅಪಾಯಕಾರಿ

ಮುಂಬರುವ ಲೋಕಸಭಾ ಚುನಾವಣೆಯ ನಂತರ ಕರ್ನಾಟಕ ವಂಶಪಾರಂಪರ್ಯ ರಾಜಕಾರಣದ ನೆಲೆಬೀಡಾಗಲಿದೆ. ಇದು ಒಂದು ರೀತಿಯಲ್ಲಿ ವೈರುಧ್ಯವೂ ಹೌದು, ವಿಪರ್ಯಾಸವೂಹೌದು. ಕಾರಣ ದೇಶದಮೊದಲಪ್ರಧಾನಿ ಜವಾಹರಲಾಲ್ ನೆಹರೂ ಅವರು ತಮ್ಮಪುತ್ರಿ ಇಂದಿರಾಗಾಂಧಿ ಅವರನ್ನು ರಾಷ್ಟ್ರ ರಾಜಕಾರಣದ ಮುನ್ನೆಲೆಗೆ ತರಲು ಹೊರಟಾಗ ಇಡೀ ದೇಶದಲ್ಲಿ ಒಂದು ಬಗೆಯ ಸಂಚಲನವುಂಟಾಗಿತ್ತು.

ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವಾಗ ದೇಶದಲ್ಲಿ ರಾಜಸತ್ತೆಯನ್ನು ವಿರೋಧಿಸುವ ಮನಸ್ಸುಗಳು ಹೆಚ್ಚಾಗಿದ್ದವು. ತಂದೆಯಿಂದ ಮಗನಿಗೆ ಹಸ್ತಾಂತರವಾಗುವ ಅಧಿಕಾರ ಜನರನ್ನು ಯಾವತ್ತೂ ಗುಲಾಮಗಿರಿಯಲ್ಲಿ ಇಡುತ್ತದೆ ಎಂಬುದು ಅಂತಹ ಮನಸ್ಸುಗಳ ಭಾವನೆಯಾಗಿತ್ತು. ವಸ್ತುಸ್ಥಿತಿ ಎಂದರೆ ಬ್ರಿಟಿಷರು ಭಾರತಕ್ಕೆ ಕಾಲಿಡುವ ಮುನ್ನ ಇಲ್ಲಿ ಆರು ನೂರಕ್ಕೂ ಹೆಚ್ಚು ರಾಜಸತ್ತೆಗಳು ಅಸ್ತಿತ್ವದಲ್ಲಿದ್ದವು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಇಂತಹ ರಾಜಸತ್ತೆಗಳ ಶಕ್ತಿಯನ್ನು ಕಸಿದುಕೊಳ್ಳಲಾಯಿತು. ಆ ಮೂಲಕ ಅಸ್ತಿತ್ವಕ್ಕೆ ಬಂದ ಪ್ರಜಾಸತ್ತೆಯಿಂದ ಮಾತ್ರ ದೇಶಕ್ಕೆ ಸಾಮಾಜಿಕ ನ್ಯಾಯ ಒದಗಿಸಿಕೊಡಲು ಸಾಧ್ಯ ಎಂಬುದು ಅವತ್ತು ಸಾರ್ವತ್ರಿಕ ಭಾವನೆಯೇ ಆಗಿತ್ತು. ಇಂತಹ ಆದರ್ಶದ ಮೇಲೆ ದೇಶ ಮುನ್ನಡೆಯುವ ಕಾಲದಲ್ಲಿ ಪ್ರಧಾನಿ ನೆಹರೂ ತಮ್ಮ ಪುತ್ರಿಯನ್ನು ಅಧಿಕಾರದ ಮುಂಚೂಣಿಗೆ ತರಲು ಹೊರಟಿದ್ದು ವಿವಾದಕ್ಕೆ ಕಾರಣವಾಯಿತು.

ಇಂತಹ ವಿವಾದ ಮೇಲೆದ್ದ ನಂತರ ವಂಶಪಾರಂಪರ್ಯ ರಾಜಕಾರಣವನ್ನು ದೊಡ್ಡ ಮಟ್ಟದಲ್ಲಿ ವಿರೋಧಿಸಿದ ರಾಜ್ಯಗಳಲ್ಲಿ ಕರ್ನಾಟಕ ಪ್ರಮುಖವಾದುದು. ಆದರೆ ಇವತ್ತು ಪರಿಸ್ಥಿತಿ ಯಾವ ಸ್ಥಿತಿಗೆ ಬಂದು ತಲುಪಿದೆ ಎಂದರೆ, ಒಂದು ಕಾಲದಲ್ಲಿ ವಂಶಪಾರಂಪರ್ಯ ರಾಜಕಾರಣವನ್ನು ವಿರೋಧಿಸಿದ್ದ ಕರ್ನಾಟಕ ಇವತ್ತು ಅದೇ ವಂಶಪಾರಂಪರ್ಯ ರಾಜಕಾರಣಕ್ಕೆ ರತ್ನಗಂಬಳಿ ಹಾಸಿಟ್ಟಿದೆ. ಅರ್ಥಾತ್, ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳೂ ಹಂತಹಂತವಾಗಿ ವಂಶಪಾರಂಪರ್ಯರಾಜಕಾರಣಕ್ಕೆ ಟಾನಿಕ್ ಕೊಡುತ್ತಾ,ವಂಶಪಾರಂಪರ್ಯ ರಾಜಕಾರಣ ಎಂಬುದು ದೊಡ್ಡ ಆಲದ ಮರದಂತೆ ಬೆಳೆದು ನಿಲ್ಲಲು ಕಾರಣವಾಗಿವೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯ ನಂತರ ವಂಶಪಾರಂಪರ್ಯ ರಾಜಕಾರಣ ಎಂಬುದು ಕರ್ನಾಟಕದಲ್ಲಿ ಒಂದು ಮೌಲ್ಯವೇ ಆಗಿ ಪರಿಣಮಿಸುವ ಎಲ್ಲ ಅಪಾಯಗಳೂ ಇವೆ.

ಉದಾಹರಣೆಗೆ ಕಾಂಗ್ರೆಸ್ ಪಕ್ಷವನ್ನೇ ತೆಗೆದುಕೊಳ್ಳಿ. ಆ ಪಕ್ಷದಿಂದ ಸ್ಪರ್ಧಿಸಲಿರುವ ಹಲವು ಜನ ತಮ್ಮ ವಂಶ ಪಾರಂಪರ್ಯ ರಾಜಕಾರಣದ ಶಕ್ತಿಯಿಂದಲೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಪಡೆದುಕೊಳ್ಳಲಿದ್ದಾರೆ. ಇದಕ್ಕೆ ಕಾರಣ ಸಂಪತ್ತು, ಅಧಿಕಾರದ ಕೇಂದ್ರೀಕರಣ. ಒಂದು ಮಾಹಿತಿಯ ಪ್ರಕಾರ, ಸದ್ಯದಲ್ಲೇ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬಯಸುವ ಅಭ್ಯರ್ಥಿಗಳು ಕನಿಷ್ಠ ನಲವತ್ತು ಕೋಟಿ ರೂ.ಗಳಿಂದ ನೂರು ಕೋಟಿ ರೂಪಾಯಿಗಳಷ್ಟು ಹಣವನ್ನು ಚುನಾವಣೆಗಾಗಿ ವೆಚ್ಚ ಮಾಡಬೇಕು.

ಇಷ್ಟು ಪ್ರಮಾಣದ ಹಣವನ್ನು ಅವರು ವೆಚ್ಚ ಮಾಡುವುದು ಅನಿವಾರ್ಯ. ಏಕೆಂದರೆ, ಮತದಾರರ ಪೈಕಿ ಬಹುತೇಕರು ತಮ್ಮ ಮತಕ್ಕೆ ಇಂತಿಷ್ಟು ಅಂತ ಮೌಲ್ಯ ನಿಗದಿ ಮಾಡಲಿದ್ದಾರೆ. ಒಂದು ವೇಳೆ ಈ ಮೌಲ್ಯವನ್ನು ನೀಡಲು ಅಭ್ಯರ್ಥಿಗೆ ಸಾಧ್ಯವಾಗದೆ ಹೋದರೆ ಆತ ಸ್ಪರ್ಧಿಸುವುದರಲ್ಲಿ ಅರ್ಥವೂ ಇಲ್ಲ. ತುಂಬ ದೂರ ಹೋಗುವುದೇನೂ ಬೇಡ. ಸಿದ್ದರಾಮಯ್ಯ ಅವರ ಸರ್ಕಾರದ ಗ್ಯಾರಂಟಿ ಯೋಜನೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರಿಗೂ ಗ್ಯಾರಂಟಿ ಸಮಾವೇಶಗಳನ್ನು ನಡೆಸಲು ಇತ್ತೀಚೆಗೆ ಸೂಚಿಸಲಾಗಿತ್ತು. ಇಂತಹ ಸೂಚನೆಯ ಅನುಸಾರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಟಿ.ಬಿ.ಜಯಚಂದ್ರ ಅವರು ತಾವು ಪ್ರತಿನಿಧಿಸಿರುವ ಶಿರಾ ಕ್ಷೇತ್ರದಲ್ಲಿ ಒಂದು ಸಮಾವೇಶ ಏರ್ಪಡಿಸಿದರು. ಹೀಗೆ ಏರ್ಪಾಟಾದ ಸಮಾವೇಶದಲ್ಲಿ ಪಾಲ್ಗೊಂಡವರು ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ತಮಗೆ ತುಂಬ ಅನುಕೂಲವಾಗಿದೆ ಎಂದು ತಾರೀಫ್ತು ಮಾಡಿದರು. ಸರ್ಕಾರವನ್ನು
ಹೊಗಳಿದರು.

ಸಮಾವೇಶದ ನಂತರ ಈ ಜನರಲ್ಲೇ ಕೆಲವರು ಟಿ.ಬಿ.ಜಯಚಂದ್ರ ಅವರನ್ನು ಮುತ್ತಿಕೊಂಡರು. ಅಷ್ಟೇ ಅಲ್ಲ, ಅಷ್ಟೋ, ಈ ಗ್ಯಾರಂಟಿಗಳೆಲ್ಲ ಒಳ್ಳೆಯದೇ. ಆದರೆ ಪಾರ್ಲಿಮೆಂಟ್ ಎಲೆಕ್ಷನ್ ಬಂದಾಗ ನಮ್ಮನ್ನು ಚೆನ್ನಾಗಿ ನೋಡೋಬೇಕು. ಕಳೆದ ಅಸೆಂಬ್ಲಿ ಎಲೆಕ್ಷನ್ನಿನಲ್ಲಿ ಏನು ಕೊಟ್ರೋ ಅದಕ್ಕಿಂತ ಜಾಸ್ತಿ ಕೊಡಬೇಕು ಕಣಣೋ ಎಂದರು. ಹೇಳಲು ಹೋದರೆ ಇವತ್ತು ಬಹುಸಂಖ್ಯಾತ ಮತದಾರರ ಮನಃಸ್ಥಿತಿ ಹೇಗಿದೆ ಅನ್ನುವುದಕ್ಕೆ ಇಂತಹ ಅಸಂಖ್ಯಾತ ಉದಾಹರಣೆಗಳನ್ನು ಕೊಡಬಹುದು. ಆದರೆ ಒಟ್ಟಾರೆಯಾಗಿ ಬಹುಸಂಖ್ಯಾತ ಮತದಾರರ ಮನಃಸ್ಥಿತಿಯನ್ನು ಗಮನಿಸಲು ಇದನ್ನು ಸಾಂಕೇತಿಕವಾಗಿ ಪರಿಗಣಿಸಬೇಕು.

ಹೀಗೆ ಮತದಾರರು ತಮ್ಮ ಮತಗಳಿಗೆ ಮೌಲ್ಯವನ್ನು ನಿಗದಿ ಮಾಡಿದ ಮೇಲೆ ಅಭ್ಯರ್ಥಿ ಅನಿವಾರ್ಯವಾಗಿ ಅದನ್ನು ಒದಗಿಸಲೇಬೇಕು. ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಹುತೇಕ ಮತದಾರರ ಈ ಬೇಡಿಕೆಯನ್ನು ಈಡೇರಿಸಬೇಕು ಎಂದರೆ ಅಭ್ಯರ್ಥಿಯಾದವರು ಕನಿಷ್ಠ ಐವತ್ತು ಕೋಟಿ ರೂಪಾಯಿ ಖರ್ಚು ಮಾಡಲೇಬೇಕು.

ಆದರೆ ಜನನಾಯಕರಾಗಲು ಆಸೆಪಡುವ ಎಲ್ಲರೂ ಹಣವಂತರಾಗಿರುವುದಿಲ್ಲವಲ್ಲ. ಹೀಗಾಗಿ ತಮ್ಮ ಕೆಲಸದಿಂದ ಜನನಾಯಕರಾಗಬಲ್ಲವರು ಪಾರ್ಲಿಮೆಂಟ್ ಚುನಾವಣೆಯ ಕಣದಿಂದ ದೂರ ಉಳಿಯಲೇಬೇಕಾಗುತ್ತದೆ. ಹೀಗೆ ಜನನಾಯಕರಾದವರು ಜನಪ್ರತಿನಿಧಿಗಳಾಗದೆ ಧನವಂತರೇ ಸಂಸದರಾದರೆ ವ್ಯವಸ್ಥೆಗೇನು ಲಾಭ? ಏಕೆಂದರೆ ಈ ಪ್ರಮಾಣದ ಹಣವನ್ನು ಚುನಾವಣೆಗೆ ಬಂಡವಾಳವಾಗಿ ಹೂಡುವವರು ಸಂಸದರಾಗಿ ಬಂದ ನಂತರ ಅದನ್ನು ವಾಪಸ್ ಪಡೆಯಲು ಹವಣಿಸುತ್ತಾರೆ. ಸಮಸ್ಯೆ ಎಂದರೆ ಇವತ್ತು ಸಂಸದರಾದರೆ ಕೇಂದ್ರ ಸರ್ಕಾರದಿಂದ ತುಂಬ ಕೆಲಸ ತೆಗೆಯುವುದಷ್ಟೇ ಅಲ್ಲ, ತುಂಬ ಹಣ ತೆಗೆಯುವುದೂ ಕಷ್ಟ. ಹೀಗಾಗಿ ಇಂತಹವರು ಬೇರೆ ಮಾರ್ಗಗಳ ಮೂಲಕ ತಮ್ಮ ಬಂಡವಾಳವನ್ನು ವಾಪಸ್ ಪಡೆಯುವ ಅನಿವಾರ್ಯತೆಗೆ ಸಿಲುಕುತ್ತಾರೆ.

ಯಾವಾಗ ಅವರು ಇಂತಹಕೆಲಸಕ್ಕೆ ಕೈ ಹಾಕುತ್ತಾರೋಆಗಸಹಜವಾಗಿಯೇ ವ್ಯವಸ್ಥೆಯಲ್ಲಿ ಒಂದು ಅಸಮಾಧಾನ ಹೆಪ್ಪುಗಟ್ಟುತ್ತಾ ಹೋಗುತ್ತದೆ. ಇದು ಮುಂದೆ ವಿಕೋಪಕ್ಕೆ ತಿರುಗುತ್ತದೆ ಎಂಬುದು ಬೇರೆ ವಿಷಯ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಹೀಗೆ ಕನಿಷ್ಠ ಐವತ್ತು ಕೋಟಿ ರೂಪಾಯಿಗಳನ್ನು ಲೋಕಸಭಾ ಚುನಾವಣೆಗೆ ಬಂಡವಾಳ ಹೂಡುವವರು ಒಂದೋ ಉದ್ಯಮಿಯಾಗಿರಬೇಕಾಗುತ್ತದೆ. ಇಲ್ಲವೇ ರಾಜಕಾರಣಿಗಳ ಮಕ್ಕಳೋ, ಕುಟುಂಬಸ್ಥರೋ ಆಗಿರಬೇಕಾಗುತ್ತದೆ.

ಸದ್ಯದ ಅಂದಾಜಿನ ಪ್ರಕಾರ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಇರಲಿ ಅಥವಾ ಬಿಜೆಪಿ-ಜಾ.ದಳ ಮೈತ್ರಿಕೂಟವೇ ಇರಲಿ, ಅಲ್ಲಿ ಪಕ್ಷದ ಟಿಕೆಟ್ ಪಡೆಯುವವರ ಪೈಕಿ ಬಹುತೇಕರು ವಂಶಪಾರಂಪರ್ಯ ರಾಜಕಾರಣದ ಪಕಳೆಗಳೇ ಆಗಿರುತ್ತಾರೆ. ಇಂತಹ ಪಕಳೆಗಳು ಮುಂದಿನ ದಿನಗಳಲ್ಲಿ ತಾವು ಹಾಕಿದ ಬಂಡವಾಳವನ್ನು ವಾಪಸ್ ಪಡೆಯುವ ಯೋಜನೆಗೆ ಕೈ ಹಾಕಿದರು ಎಂದುಕೊಳ್ಳಿ ಅವರು ಜನಪರ ಕೆಲಸಗಳನ್ನು ಮಾಡುವ ತಮ್ಮ ಜವಾಬ್ದಾರಿಯನ್ನು ಮರೆತುಬಿಡುತ್ತಾರೆ.

ಹೀಗೆ ಜನಪರ ಧೋರಣೆಯನ್ನು ಮರೆಯುವ ಪ್ರತಿನಿಧಿಗಳು ವ್ಯವಸ್ಥೆಗೆ ಕಂಟಕಪ್ರಾಯರಾಗುತ್ತಾರೆ ಅಂತ ಪ್ರತ್ಯೇವಾಗಿ ಹೇಳಬೇಕಿಲ್ಲ. ಅಷ್ಟು ಮಾತ್ರವಲ್ಲ, ಅವರು ಗೆದ್ದು ಬಂದ ತಕ್ಷಣ ತಮ್ಮ ವಂಶಪಾರಂಪರ್ಯ ರಾಜಕಾರಣದ ಶಕ್ತಿ ಹಿಗ್ಗುವಂತೆ ನೋಡಿಕೊಳ್ಳುತ್ತಾರೆ.

ಇದು ವಂಶಪಾರಂಪರ್ಯ ರಾಜಕಾರಣ ಯಾವ ಲೆವೆಲ್ಲಿಗೆ ತಿರುಗಿಕೊಳ್ಳಬಹುದು ಎಂಬುದರ ಒಂದು ಝಲಕ್ ಅಷ್ಟೇ. ಮುಂದೆ ಇದೇ ರಾಜಕಾರಣ ತನ್ನ ರೆಕ್ಕೆಗಳನ್ನು ಅಗಲಿಸಿ ಇಡೀ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತದೆ. ಹಾಗೇನಾದರೂ ಆದರೆ ಅನುಮಾನವೇ ಬೇಡ, ಮುಂದಿನ ಕೆಲವೇ ವರ್ಷಗಳಲ್ಲಿ ಸಾಮಾಜಿಕ ನ್ಯಾಯದ ಕಲ್ಪನೆ ಶಿಥಿಲವಾಗುತ್ತದೆ. ಆ ಮೂಲಕ ಬಡತನ ಮತ್ತು ಶ್ರೀಮಂತಿಕೆಯ ಅಂತರ ಅಪಾಯಕಾರಿ ಮಟ್ಟದಲ್ಲಿ ಬೆಳೆದು ನಿಲ್ಲಲಿದೆ. ಇದೇ ಸದ್ಯದ ವಿಪರ್ಯಾಸ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ