Mysore
25
scattered clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ವಿವಾದ : ‘ಕಂದೀಲು’ ಬೆಳಕು.. ಸೂರ್ಯ.. ಕಾಂತಿ

ಕಳೆದ ಶುಕ್ರವಾರ ಕ್ಯಾಲೆಂಡರ್ ವರ್ಷ ೨೦೨೩ರ ಸಾಲಿನ, ೭೧ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರಕಟಣೆ ಆಗಿದೆ. ಸಾಮಾನ್ಯವಾಗಿ ಪ್ರಶಸ್ತಿಗಳು ಪ್ರಕಟವಾದಾಗ ಅಲ್ಲಿ ಇಲ್ಲಿ ಅಪಸ್ವರ ಕೇಳಿಬರುವುದಿದೆ. ಆದರೆ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ವಿರೋಧ ವ್ಯಕ್ತವಾಗುತ್ತಿದೆ. ಐಫಾ ಪ್ರಶಸ್ತಿ, ಸೈಮಾ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿಗಳ ಸಾಲಿಗೆ ರಾಷ್ಟ್ರ ಪ್ರಶಸ್ತಿಯನ್ನು ಸೇರಿಸಿದಂತಿದೆ ಎನ್ನುವುದು ತಕ್ಷಣದ ಪ್ರತಿಕ್ರಿಯೆ. ಇದು ಅತಿಶಯವೇನೂ ಅಲ್ಲ. ಪ್ರಶಸ್ತಿಗಳಲ್ಲಿ ಸಿಂಹಪಾಲು ಹಿಂದಿ ಚಿತ್ರಗಳಿಗೆ ಸಂದಿರುವುದು ಒಂದು ಕಾರಣವಾದರೆ, ಆಯ್ಕೆಯ ಮೂಲಭೂತ ರೀತಿಯನ್ನೇ ಪ್ರಶ್ನಿಸುವ ರೀತಿ ಕೆಲವು ಪ್ರಶಸ್ತಿಗಳಿದ್ದವು. ಕೊಡುಗೆ ತೀರ್ಪುಗಾರರ ಸಮಿತಿಯ ಅಧ್ಯಕ್ಷರಾದ ಅಶುತೋಷ್ ಗಾವರಿಕರ್ ಮತ್ತು ಸದಸ್ಯ ಬಳಗ.

‘ದ ಕೇರಳ ಸ್ಟೋರಿ’ ಚಿತ್ರದ ಛಾಯಾಗ್ರಹಣ ಮತ್ತು ನಿರ್ದೇಶನಕ್ಕೆ ಪ್ರಶಸ್ತಿ ನೀಡಿರುವುದು, ‘ಆಡುಜೀವಿತಂ’ ಚಿತ್ರ ಮತ್ತು ಅದರ ನಟ ಪೃಥ್ವಿರಾಜ್ ಸುಕುಮಾರನ್ ಪ್ರಶಸ್ತಿ ವಂಚಿತರಾಗಿರುವುದು, ನಟ ವಿಜಯ್ ರಾಘವನ್ ಮತ್ತು ನಟಿ ಊರ್ವಶಿ ಅವರಿಗೆ ಸಂದ ಪ್ರಶಸ್ತಿ, ಎಲ್ಲಕ್ಕೂ ಕಿರೀಟವಿಟ್ಟಂತೆ ಹಿಂದಿ ನಟ ಶಾರುಕ್‌ಖಾನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿರುವುದು ಸಾಕಷ್ಟು ವಿವಾದಕ್ಕೆ ಗ್ರಾಸವಾಯಿತು.

‘ದ ಕೇರಳ ಸ್ಟೋರಿ’ ಚಿತ್ರ ಬಿಡುಗಡೆಗೆ ಮೊದಲು ‘ಕೇರಳದ ೩೨, ೦೦೦ ಮಂದಿ ಮಹಿಳೆಯರ ಮನಮಿಡಿಯುವ, ಹೃದಯ ವಿದ್ರಾವಕ ನೈಜ ಕಥಾನಕ’ಎಂದು ಪ್ರಚಾರ ಮಾಡಲಾಗಿತ್ತು. ಈ ಮಹಿಳೆಯರನ್ನು ಇಸ್ಲಾಮಿಕ್ ಉಗ್ರಗಾಮಿಗಳ ಜೊತೆ ಸೇರಿಸುವ ಕಥೆ ಎಂದು ಪ್ರಚಾರವಾಗಿತ್ತು. ಒಂದೆರಡು ರಾಜ್ಯಗಳು ಈ ಹಿಂದಿ ಚಿತ್ರದ ಬಿಡುಗಡೆಗೆ ತಡೆಯೊಡ್ಡಿದ್ದವು. ಸರ್ವೋಚ್ಚ ನ್ಯಾಯಾಲಯದ ವರೆಗೆ ಹೋಗಿದ್ದ ಈ ಚಿತ್ರದ ಪ್ರಚಾರಕ್ಕಾಗಿ ಬಳಸಿದ ಸಾಲನ್ನು ತೆಗೆದುಹಾಕುವಂತೆ ಅದು ಹೇಳಿತ್ತು. ೩೨೦೦೦ದಿಂದ ಅದು ‘ಮೂವರು ಮಹಿಳೆಯರ ಘಟನೆಗಳ ಕಾಲ್ಪನಿಕ ಕಥೆ’ಯಾಗಿ ಬಿಡುಗಡೆ ಯಾಯಿತು! ‘ಕೋಮು ದ್ವೇಷದ ಬೀಜಗಳನ್ನು ಬಿತ್ತುವ ಉದ್ದೇಶದಿಂದ ಸ್ಪಷ್ಟ ತಪ್ಪು ಮಾಹಿತಿಯನ್ನು ಹರಡುವ ಚಲನಚಿತ್ರವನ್ನು ಗೌರವಿಸುವ ಕೆಲಸವನ್ನು ರಾಷ್ಟ್ರಪ್ರಶಸ್ತಿಯ ತೀರ್ಪುಗಾರರು ಮಾಡಿದ್ದಾರೆ. ಕೋಮು ಶಕ್ತಿಗಳ ವಿರುದ್ಧ ಯಾವಾಗಲೂ ಸಾಮರಸ್ಯ ಮತ್ತು ಪ್ರತಿರೋಧದ ದಾರಿದೀಪವಾಗಿ ನಿಂತಿರುವ ಭೂಮಿಯಾದ ಕೇರಳವನ್ನು ಈ ನಿರ್ಧಾರದಿಂದ ತೀವ್ರವಾಗಿ ಅವಮಾನಿಸಲಾಗಿದೆ.’ ಎಂದು ಕೇರಳದ ಮುಖ್ಯಮಂತ್ರಿ ಇದರ ವಿರುದ್ಧ ಪ್ರತಿಕ್ರಿಯಿದರೆ, ಇಂತಹದೇ ಮಾತನ್ನು ಪೂನಾದಲ್ಲಿರುವ ಭಾರತದ ಚಲನ ಚಿತ್ರ ಮತ್ತು ದೂರದರ್ಶನ ಸಂಸ್ಥೆಯ ಹಳೇ ವಿದ್ಯಾರ್ಥಿಗಳ ಸಂಘ ಹೇಳಿದೆ. ಬಹುತೇಕ ಜನಪ್ರಿಯ ಚಿತ್ರಗಳಿಗಷ್ಟೇ ಪ್ರಶಸ್ತಿ ನೀಡುತ್ತಿರುವ ನಿಯತಕಾಲಿಕ ಫಿಲಂಫೇರ್ ಸಂಪಾದಕ ಜಿತೇಶ್ ಪಿಳ್ಳೆ ಕೂಡಾ ಪ್ರಶಸ್ತಿಗಳ ಕುರಿತಂತೆ ಕಟುವಾಗಿ ಟೀಕಿಸಿದ್ದಾರೆ. ‘ದ ಕೇರಳ ಸ್ಟೋರಿ’ ಹಿಂದಿ ಚಿತ್ರ!

ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ತಮ್ಮ ‘ಉಳ್ಳೊಳುಕ್ಕು’ ಚಿತ್ರದ ಅಭಿನಯಕ್ಕಾಗಿ ಪಡೆದಿರುವ ನಟಿ ಊರ್ವಶಿ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಗಳ ಮಾನದಂಡವೇನು ಎಂದು ಪ್ರಶ್ನಿಸಿದ್ದಾರೆ. ಆ ಚಿತ್ರದಲ್ಲಿ ಅವರದು ಮುಖ್ಯಪಾತ್ರವಾಗಿತ್ತು. ಅಂತೆಯೇ ‘ಪೂಕ್ಕಳಂ’ ಚಿತ್ರದ ಮುಖ್ಯಪಾತ್ರಧಾರಿ ನಟ ವಿಜಯ್ ರಾಘವನ್ ಅವರಿಗೂ ಪೋಷಕ ನಟನಿಗಿರುವ ಪ್ರಶಸ್ತಿ ನೀಡಲಾಗಿದೆ! ತಾವು ಪ್ರಶಸ್ತಿ ಸ್ವೀಕರಿಸಬೇಕೋ ಬೇಡವೋ ಎನ್ನುವುದನ್ನು ತೀರ್ಪುಗಾರರು ತಮ್ಮ ಪ್ರಶ್ನೆಗೆ ಉತ್ತರಿಸಿದ ನಂತರ ನಿರ್ಧರಿಸುತ್ತೇನೆ ಎಂದಿದ್ದಾರೆ ಅವರು. ಚೋದ್ಯವೆಂದರೆ, ಈ ಇಬ್ಬರು ಕಲಾವಿದರೂ ಬೇರೆ ಬೇರೆ ಚಿತ್ರಗಳಲ್ಲಿ ಇಳಿವಯಸ್ಸಿನವರಾಗಿ ನಟಿಸಿದ ಕಾರಣ ಪೋಷಕ ನಟ/ನಟಿ ಪ್ರಶಸ್ತಿಗೆ ಆಯ್ಕೆಯಾದರು ಎನ್ನಲಾದ ಸುದ್ದಿ! ಈ ದಿನಗಳಾಗುತ್ತಿದ್ದರೆ, ‘ಚೋಮನ ದುಡಿ’ಯ ಚೋಮ ಪಾತ್ರಧಾರಿ ವಾಸುದೇವರಾವ್ ಅತ್ಯುತ್ತಮ ನಟ ಪ್ರಶಸ್ತಿ ಪಡೆಯುತ್ತಿರಲಿಲ್ಲ!

ಶಾರುಕ್‌ಖಾನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ‘ಜವಾನ್’ ಚಿತ್ರದ ನಟನೆಗೆ ನೀಡಿರುವುದು ಬಹಳಷ್ಟು ಟೀಕೆಗೆ ಒಳಗಾಗಿದೆ. ಹಿಂದೆ ಕೆಲವು ಚಿತ್ರಗಳ ಅವರ ಅಭಿನಯ ಪ್ರಶಸ್ತಿ ಪಡೆಯುವ ತೆರನಿತ್ತು; ಆದರೆ ಇದಲ್ಲ ಎನ್ನುವುದು ಮಾತು. ವಿಶೇಷವಾಗಿ ‘ಸ್ವದೇಶ್’ ಚಿತ್ರ. ‘ಸ್ವದೇಶ್’ ಗೊತ್ತಲ್ಲ. ಶಿವರಾಮ ಕಾರಂತರ ‘ಚಿಗುರಿದ ಕನಸು’ ಆಧರಿಸಿ, ಅದೇ ಹೆಸರಿನಲ್ಲಿ ತಯಾರಾದ ಕನ್ನಡ ಚಿತ್ರದ ಅನಧಿಕೃತ ರಿಮೇಕ್ ಎನ್ನಲಾದ ಚಿತ್ರ! ಆ ಚಿತ್ರದ ಅಭಿನಯಕ್ಕೆ ಪ್ರಶಸ್ತಿ ವಂಚಿತರಾದ ಶಾರುಕ್‌ಗೆ ಅದರ ನಿರ್ದೇಶಕ ತಾವು ಅಧ್ಯಕ್ಷರಾಗಿರುವ ವೇಳೆ ಪ್ರಶಸ್ತಿ ನೀಡಿದ್ದಾರೆ ಎನ್ನುವ ಮಾತಲ್ಲಿ ಹುರುಳಿಲ್ಲದೇನೂ ಇಲ್ಲ. ಮಲಯಾಳ ಚಿತ್ರ ‘ಆಡುಜೀವಿತಂ’ ಕೇರಳದಲ್ಲಿ ಒಂಬತ್ತು ಪ್ರಶಸ್ತಿಗಳನ್ನು ಪಡೆದಿತ್ತು. ಆ ಚಿತ್ರ ಮತ್ತು ಅದರ ಮುಖ್ಯ ಪಾತ್ರಧಾರಿ ರಾಷ್ಟ್ರಪ್ರಶಸ್ತಿ ಪಡೆದೇ ಪಡೆಯುತ್ತಾರೆ ಎಂಬ ನಿರೀಕ್ಷೆ ಇತ್ತು. ಹಾಗಾಗಲಿಲ್ಲ.

ಮೊದಲಿನಿಂದಲೂ ಭಾರತೀಯ ಚಿತ್ರಗಳೆಂದರೆ ಹಿಂದಿ ಚಿತ್ರಗಳು ಎನ್ನುವುದನ್ನು ಬಿಂಬಿಸುವ ಪ್ರಯತ್ನ ನಡೆದೇ ಇದೆ. ಈ ವರ್ಷ ಹಿಂದಿ ಚಿತ್ರರಂಗವನ್ನು ವೈಭವೀಕರಿಸುವ ಕೆಲಸ ಹೆಚ್ಚೇ ಆಗಿದೆ. ದಕ್ಷಿಣದವರ ಅಸ್ತಿತ್ವವನ್ನು ಹತ್ತಿಕ್ಕುವ ಪ್ರಯತ್ನ. ಇದು. ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ ಎನ್ನುತ್ತಾರೆ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು. ಬಾಲಿವುಡ್ ಎಂದು ತನ್ನನ್ನು ಹೇಳಿಕೊಳ್ಳುತ್ತಿದ್ದ ಹಿಂದಿ ಚಿತ್ರರಂಗಕ್ಕೆ ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಭಾರತೀಯ ಭಾಷಾ ಚಿತ್ರರಂಗಗಳು ಸವಾಲಾಗಿವೆ.

‘ಬಾಹುಬಲಿ’, ‘ಕೆಜಿಎಫ್’ ’ಕಾಂತಾರ’ಗಳೂ ಸೇರಿದಂತೆ, ಚಿತ್ರಗಳ ಗಳಿಕೆಯಾಗಲಿ, ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವುದಾಗಲೀ ಅದಕ್ಕೆ ಗಂಟಲಲ್ಲಿ ಸಿಕ್ಕ ಮುಳ್ಳು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಹಿಂದಿಯೇತರ ಚಿತ್ರಗಳದೇ ಸಿಂಹಪಾಲು ಆಗುತ್ತಿತ್ತು. ಆಗಲೇ, ಮುಖ್ಯವಾಹಿನಿ ಚಿತ್ರಗಳನ್ನು ಪರಿಗಣಿಸಲು ಕೋರಿಕೆ ಸಲ್ಲಿಸಿದ ಹಿಂದಿ ಚಿತ್ರರಂಗದ ಒತ್ತಾಯಕ್ಕೆ ಮಣಿದು, ಜನಪ್ರಿಯ ಮನರಂಜನಾ ಚಿತ್ರ’ ಪ್ರಶಸ್ತಿ ಆರಂಭ ಆಯಿತು. ಈ ಬಾರಿ ಪ್ರಮುಖ ಪ್ರಶಸ್ತಿಗಳೆಲ್ಲ ಹಿಂದಿಯ ಪಾಲು, ಮರಾಠಿಗೆ ಕೂಡಾ. ದಕ್ಷಿಣದಲ್ಲಿ ತೆಲುಗು, ಮಲಯಾಳ, ತಮಿಳು ಚಿತ್ರರಂಗಗಳು ನಿರೀಕ್ಷೆಯ ಗೆಲುವು ಕಾಣಲಿಲ್ಲ. ಸಾಕಷ್ಟು ಪ್ರಶಸ್ತಿಗಳನ್ನು ಪಡೆಯುತ್ತಿದ್ದ ಬಂಗಾಲಿ ಚಿತ್ರರಂಗವೂ ಅತ್ಯುತ್ತಮ ಬಂಗಾಲಿ ಚಿತ್ರ ಪ್ರಶಸ್ತಿಯಿಂದ ತೃಪ್ತವಾಗಬೇಯಿತು.

ಕನ್ನಡವೂ ಅದಕ್ಕೆ ಹೊರತಿಲ್ಲ. ಅತ್ಯುತ್ತಮ ಚಿತ್ರಕ್ಕಿರುವ ಪ್ರಶಸ್ತಿ ಮಾತ್ರ. ಕೊಡಗಿನ ಯಶೋಧಾ ಪ್ರಕಾಶ್ ನಿರ್ದೇಶಿಸಿದ ‘ಕಂದೀಲು’ ಚಿತ್ರಕ್ಕೆ ಈ ಪ್ರಶಸ್ತಿಸಂದಿದೆ. ‘ರಂಗಪ್ರವೇಶ’ ಚಿತ್ರದೊಂದಿಗೆ ನಿರ್ದೇಶಕಿಯಾದ ಯಶೋಧಾ ಅವರ ನಿರ್ದೇಶನದ ಈ ಚಿತ್ರ ಕೊಲ್ಕತ್ತಾದಲ್ಲಿ ಸ್ಪರ್ಧೆಯಲ್ಲಿದ್ದರೆ, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಲನಚಿತ್ರ ಸ್ಪರ್ಧೆಯಲ್ಲಿ ಎರಡನೇ ಪ್ರಶಸ್ತಿ ಪಡೆದಿತ್ತು. ಕನ್ನಡದಿಂದ ಸುಮಾರು ೬೦ಕ್ಕೂ ಹೆಚ್ಚು ಚಿತ್ರಗಳು ಸ್ಪರ್ಧೆಯ ಕಣದಲ್ಲಿದ್ದು, ಮೂಲಗಳ ಪ್ರಕಾರ ಅಂತಿಮ ಹಂತಕ್ಕೆ ನಾಲ್ಕು ಚಿತ್ರಗಳಿದ್ದವು ಹೇಮಂತ್ ಅವರ ‘ಸಪ್ತಸಾಗರದಾಚೆ ಎಲ್ಲೋ -ಸೈಡ್ ಎ’, ನಾಗಿಣಿ ಭರಣರ ‘ಜೀನಿಯಸ್ ಮುತ್ತ’ ಮತ್ತು ದೇವೇಂದ್ರ ಬಡಿಗೇರ್‌ರ ‘ಇನ್’,‘ಕಂದೀಲು’ ಜೊತೆಗಿದ್ದ ಇತರ ಕನ್ನಡ ಚಿತ್ರಗಳು. ಸಿಂಧು ಶ್ರೀನಿವಾಸಮೂರ್ತಿಯವರ ‘ಆಚಾರ್ – ಕೋ’ , ರಕ್ಷಿತ್ ತೀರ್ಥಹಳ್ಳಿಯವರ ‘ತಿಮ್ಮನ ಮೊಟ್ಟೆಗಳು’, ಶ್ರೀನಿಧಿಯವರ ‘ಬ್ಲಿಂಕ್’ ನಂತಹ ಚಿತ್ರಗಳು ಅಂತಿಮ ಹಂತಕ್ಕೆ ಬರುವಲ್ಲಿ ವಿಫಲವಾದವು.

ಅಶುತೋಷ್ ಗೋವಾರಿಕರ್ ಪ್ರಶಸ್ತಿ ಪ್ರಕಟಿಸುವ ಮುನ್ನ ಮಾತನಾಡುತ್ತಾ, ‘ಪ್ರತಿಯೊಂದು ಚಲನಚಿತ್ರವನ್ನು ಅದರ ಪ್ರಭಾವ, ಬಾಕ್ಸ್ ಆಫೀಸ್ ಗಳಿಕೆ ಮತ್ತು ವಿಶೇಷವಾಗಿ ವಿವಿಧ ಭಾಷೆಗಳಲ್ಲಿ ಸಾಮಾಜಿಕ ಪ್ರಸ್ತುತತೆಗಾಗಿ ಪರಿಗಣಿಸಬೇಕು’ ಎಂದು ಹೇಳಿದ ಮಾತು ಪ್ರಶಸ್ತಿಯ ಮೂಲ ಉದ್ದೇಶಕ್ಕೂ, ಅವರ ಯೋಚನೆಗೂ ಇರುವ ವಿರೋಧಾಭಾಸಕ್ಕೂ ಕನ್ನಡಿ ಹಿಡಿದಂತಿದೆ. ಇತ್ತೀಚೆಗೆ ಅಲ್ಲೊಂದು ಇಲ್ಲೊಂದು ಅಪವಾದಗಳನ್ನು ಹೊರತುಪಡಿಸಿದರೆ, ಯಾವುದೇ ಸಿನಿಮಾದ ಬಾಕ್ಸಾಫೀಸ್ ಗಳಿಕೆ ಪ್ರಶಸ್ತಿಯ ಮಾನದಂಡಗಳಲ್ಲಿ ಒಂದು ಎಂದೂ ಆಗುವುದಿಲ್ಲ. “The Awards aim at encouraging the production of films of aesthetic & technical excellence and social relevance contributing to the understanding and appreciation of cultures of different regions of the country in cinematic form, thereby also promoting unity and integrity of the nation’’ ರಾಷ್ಟ್ರಪ್ರಶಸ್ತಿ ನೀಡುವುದರ ಈ ಉದ್ದೇಶವನ್ನು ತೀರ್ಪಗಾರರ ಸಮಿತಿಯಲ್ಲಿ ಎಷ್ಟು ಮಂಽ ಅರ್ಥೈಸಿಕೊಂಡಿದ್ದಾರೆ ಎನ್ನುವ ಪ್ರಶ್ನೆ ಎದ್ದಿದೆ. ಇದು ಸಹಜ ಕೂಡ. ಐಕ್ಯತೆ ಮತ್ತು ಸಮಗ್ರತೆಯನ್ನು ಸಾರುವ, ದೇಶದ ವಿವಿಧ ಪ್ರದೇಶಗಳ ಸಂಸ್ಕ ತಿಗಳನ್ನು ಹೇಳುವ ಎಷ್ಟು ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ ಎನ್ನುವುದು ಸ್ಪರ್ಧೆಯಲ್ಲಿದ್ದ ಚಿತ್ರಗಳನ್ನು ಗಮನಿಸಿದಾಗ ತಿಳಿಯಬಹುದು. ಒಟ್ಟಿನಲ್ಲಿ ಹಿಂದಿ ಹೊರತಾದ ಇತರ ಭಾಷಾ ಚಿತ್ರಗಳನ್ನು, ಅದರಲ್ಲೂ ದಕ್ಷಿಣದ ಚಿತ್ರಗಳನ್ನು ತೀರಾ ಅವಗಣಿಸಲಾಗಿದೆ ಎಂದರೆ ತಪ್ಪಾಗಲಾರದು. ಸದಭಿರುಚಿಯ, ಅರ್ಥಪೂರ್ಣ ಚಿತ್ರಪರಂಪರೆಗೆ ಈ ಬೆಳವಣಿಗೆ ಕೊಡಲಿಯೇಟು ನೀಡಿರುವುದರಲ್ಲಿ ಅನುಮಾನವಿಲ್ಲ

೭೧ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ತೀರ್ಪುಗಾರರ ಸಮಿತಿಯ  ಮೂವರು ಅಧ್ಯಕ್ಷರಲ್ಲಿ ಇಬ್ಬರು ಕನ್ನಡಿಗರೇ ಇದ್ದರು. ಕಥೇತರ ಚಿತ್ರಗಳ ತೀರ್ಪುಗಾರರ ಸಮಿತಿಗೆ ನಿರ್ದೇಶಕ ಪಿ.ಶೇಷಾದ್ರಿ, ಸಿನಿಮಾ ಬರವಣಿಗೆಗೆ ಸಾಹಿತಿ, ಚಿತ್ರಕಥಾ ಲೇಖಕ ಗೋಪಾಲಕೃಷ್ಣ ಪೈ ಅವರು ಅಧ್ಯಕ್ಷರಾಗಿದ್ದರು. ಕಥೇತರ ಚಿತ್ರಗಳ ವಿಭಾಗದಲ್ಲಿ ಕಾನ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು’ ಕಿರುಚಿತ್ರ ಹೊರತುಪಡಿಸಿದರೆ, ಬೇರೆ ಕನ್ನಡ ಚಿತ್ರಗಳಿರಲಿಲ್ಲ. ಆ ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಚಿದಾನಂದ ನಾಯಕ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಿನಿಮಾ ಬರವಣಿಗೆ ವಿಭಾಗದಲ್ಲಿ ಅತ್ಯುತ್ತಮ ಪುಸ್ತಕ ಮತ್ತು ಅತ್ಯುತ್ತಮ ವಿಮರ್ಶಕ ಪ್ರಶಸ್ತಿಗಳಿವೆ. ಈ ಬಾರಿ ಯಾವುದೇ ಪುಸ್ತಕಗಳಿಗೆ ಪ್ರಶಸ್ತಿ ನೀಡಿಲ್ಲ. ಅತ್ಯುತ್ತಮ ವಿಮರ್ಶಕ ಪ್ರಶಸ್ತಿ ಮಾತ್ರ ನೀಡಲಾಗಿದೆ.  ಕನ್ನಡದ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ, ಶುಭಾಶಯ

” ಬಾಲಿವುಡ್ ಎಂದು ತನ್ನನ್ನು ಹೇಳಿಕೊಳ್ಳುತ್ತಿದ್ದ ಹಿಂದಿಚಿತ್ರರಂಗಕ್ಕೆ ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಭಾರತೀಯ ಭಾಷಾ ಚಿತ್ರರಂಗಗಳು ಸವಾಲಾಗಿವೆ.  ‘ಬಾಹುಬಲಿ’, ‘ಕೆಜಿಎಫ್’ ’ಕಾಂತಾರ’ಗಳೂಸೇರಿದಂತೆ, ಚಿತ್ರಗಳ ಗಳಿಕೆಯಾಗಲಿ, ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವುದಾಗಲೀ ಅದಕ್ಕೆ ಗಂಟಲಲ್ಲಿ ಸಿಕ್ಕ ಮುಳ್ಳು.”

-ಬಾ.ನಾ.ಸುಬ್ರಹ್ಮಣ್ಯ 

Tags:
error: Content is protected !!