Mysore
28
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಎನ್‌ಡಿಎ ಗೆಲುವಿಗೆ ನೆರವಾದ ನಾರಿಶಕ್ತಿ, ಮತದಾರರ ಪಟ್ಟಿ ಪರಿಷ್ಕರಣೆ

ದೆಹಲಿ ಕಣ್ಣೋಟ

ಶಿವಾಜಿ ಗಣೇಶನ್‌ 

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ( ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್) ಅಚ್ಚರಿ ಮತ್ತು ನಿರೀಕ್ಷೆಗೂ ಮೀರಿ ಬಿಹಾರ ವಿಧಾನಸಭೆಯ ಚುನಾವಣೆಯಲ್ಲಿ ಭಾರೀ ಜಯ ಸಾಧಿಸುವ ಮೂಲಕ ರಾಷ್ಟ್ರೀಯ ಜನತಾ ದಳ-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟದ ಕನಸನ್ನು ನುಚ್ಚುನೂರು ಮಾಡಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಅವರ ಉದಾರ ನೆರವಿನಿಂದ ಸುಮಾರು ಒಂದೂವರೆ ಕೋಟಿ ಮಹಿಳೆಯರಿಗೆ ‘ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆ’ ಹೆಸರಿನಲ್ಲಿ ತಲಾ ಹತ್ತು ಸಾವಿರ ರೂಪಾಯಿ ನೆರವು ನೀಡಿದ್ದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ಮೋದಿ ಅವರಿಗೆ ಗೆಲುವು ತಂದುಕೊಟ್ಟಿರುವುದು ಸ್ಪಷ್ಟವಾಗಿ ಕಣ್ಣಿಗೆ ರಾಚುವಂತಿದೆ. ಪ್ರತಿಯೊಬ್ಬ ಮಹಿಳೆಗೂ ತಲಾ ಹತ್ತು ಸಾವಿರ ರೂಪಾಯಿ ನೆರವಿನ ಘೋಷಣೆ ಬಳಿಕ ಚುನಾವಣಾ ಆಯೋಗವು ಚುನಾವಣೆ ದಿನಾಂಕವನ್ನು ಪ್ರಕಟಿಸುವ ಮೂಲಕ ಆಯೋಗವು ಪರೋಕ್ಷವಾಗಿ ಎನ್‌ಡಿಎ ಗೆಲುವಿಗೆ ಹೆಗಲು ನೀಡಿರುವುದಾಗಿ ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿರುವ ಆರೋಪ.

ಈ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ನಿತೀಶ್ ಕುಮಾರ್ ಸರ್ಕಾರದ ಆಡಳಿತ ವಿರೋಽ ಅಲೆ ಎನ್ನುವ ಮಾತು ಮತದಾರರ ಮನಸ್ಸಿನಲ್ಲಿ ಕಂಡು ಬಂದಿಲ್ಲ. ಹಾಗೆಯೇ ಕಳೆದ ಎರಡು ವರ್ಷಗಳ ಹಿಂದೆ ನಡೆಸಿದ ಜಾತಿ ಗಣತಿಯು ಚುನಾವಣೆಯ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ. ಈ ಜಾತಿ ಗಣತಿ ಪ್ರಶ್ನೆ ಈಗ ನ್ಯಾಯಾಲಯದ ಅಂಗಳದಲ್ಲಿರುವುದರಿಂದ ಈ ವಿಷಯ ಚುನಾವಣೆಯಲ್ಲಿ ಸಾರ್ವಜನಿಕವಾಗಿ ಚರ್ಚೆಗೆ ಬರಲೇ ಇಲ್ಲ. ಎನ್‌ಡಿಎ ಮೈತ್ರಿಕೂಟದಲ್ಲಿ ವಿಧಾನಸಭೆಯ ಒಟ್ಟು ೨೪೩ ಸ್ಥಾನಗಳ ಪೈಕಿ ಯಾವುದೇ ಗೊಂದಲಗಳಿಲ್ಲದೆ ಬಿಜೆಪಿ ಮತ್ತು ಸಂಯುಕ್ತ ಜನತಾದಳ ತಲಾ ೧೦೧ ಸ್ಥಾನಗಳನ್ನು ಮತ್ತು ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿಗೆ ೨೯, ರಾಷ್ಟ್ರೀಯ ಲೋಕ್ ಮಂಚ್ ಪಕ್ಷಕ್ಕೆ ೬ ಮತ್ತು ಹಿಂದುಸ್ತಾನಿ ಅವಾ ಮೋರ್ಚಾಗೆ ೬ ಕ್ಷೇತ್ರಗಳನ್ನು ಬಿಟ್ಟುಕೊಡುವ ಮೂಲಕ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಸಮಾಧಾನಕರವಾಗಿಯೇ ನಡೆದುದು ಈಗಿನ ಗೆಲುವಿಗೆ ಸಹಕಾರಿಯಾದಂತಾಗಿದೆ. ಕೇಂದ್ರದಲ್ಲಿ ಸಂಯುಕ್ತ ಜನತಾದಳ ಎನ್‌ಡಿಎ ಸರ್ಕಾರಕ್ಕೆ ಬೆಂಬಲ ನೀಡಿರುವುದರಿಂದ, ಬಿಜೆಪಿ ಸ್ಥಳೀಯವಾಗಿ ಪ್ರಬಲ ನಾಯಕನ ಕೊರತೆ ಎದುರಿಸುತ್ತಿರುವುದರಿಂದ ಈ ಚುನಾವಣೆಯಲ್ಲಿ ಸೀಟು ಹಂಚಿಕೆ ಮತ್ತು ಚುನಾವಣಾ ಪ್ರಚಾರದ ಪ್ರಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆಯಿಂದಲೇ ನಡೆದುಕೊಂಡಿದ್ದಾರೆ. ಆದರೆ ಚುನಾವಣೆಯಲ್ಲಿನಿತೀಶ್ ಕುಮಾರ್ ನೇತೃತ್ವವನ್ನು ಒಪ್ಪಿಕೊಂಡಿತ್ತಾದರೂ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಿಲ್ಲ. ಆದರೆ ಈಗಿನ ಫಲಿತಾಂಶವನ್ನು ನೋಡಿದರೆ ನಿತೀಶ್ ಕುಮಾರ್ ಅವರನ್ನೇ ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡುವುದು ಬಿಜೆಪಿಗೆ ಅನಿವಾರ್ಯ.

ಈ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟದ ಪಕ್ಷಗಳು ತಮ್ಮ ಪಾಲಿಗೆ ಹಂಚಿಕೆಯಾದ ಸೀಟುಗಳಲ್ಲಿಯೇ ಅಚ್ಚರಿ ಮೂಡಿಸುವಂತಹ ಗೆಲುವು ಸಾಧಿಸಿರುವುದನ್ನು ಗಮನಿಸಬೇಕು. ಈ ದಿಕ್ಕಿನಲ್ಲಿ ಪ್ರಧಾನಿ ಮೋದಿ ತಮ್ಮ ವರ್ಚಸ್ಸಿನ ಜೊತೆಗೆ ನಿತೀಶ್ ಕುಮಾರ್ ಮತ್ತು ಚಿರಾಗ್ ಪಾಸ್ವಾನ್ ಅವರ ರಾಜಕೀಯ ಶಕ್ತಿಯನ್ನು ನಿರ್ಲಕ್ಷಿಸುವಂತಿಲ್ಲ ಎನ್ನುವುದು ಸ್ಪಷ್ಟ. ಇಲ್ಲಿ ಬಿಜೆಪಿಯು ಬಲಿಷ್ಠ ಜಾತಿಗಳನ್ನು, ಸಂಯುಕ್ತ ಜನತಾದಳ ಯಾದವರಲ್ಲದ ಇತರೇ ಅತಿ ಹಿಂದುಳಿದ ಜಾತಿಗಳನ್ನು ಮತ್ತು ಎಲ್‌ಜೆಪಿಯು ದಲಿತ ವರ್ಗದ ವಿಶ್ವಾಸವನ್ನು ಗಳಿಸಿರುವುದು ಕಾಣುತ್ತದೆ. ಈ ದಿಕ್ಕಿನಲ್ಲಿ ಬಿಜೆಪಿಯು ಜೆಡಿಯು ಮತ್ತು ಎಲ್‌ಜೆಪಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದೆ. ಇದೇ ರೀತಿಯ ರಾಜಕೀಯ ಮತ್ತು ಜಾತಿ ಲೆಕ್ಕಾಚಾರವನ್ನು ಹಾಕಿದ ಆರ್ ಜೆ ಡಿ -ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಗೆಲುವು ಸಾಧಿಸುವಲ್ಲಿ ಹಳ್ಳ ಹಿಡಿರುವುದು ಎದ್ದು ಕಾಣುತ್ತದೆ. ಆರ್‌ಜೆಡಿಯು ಯಾದವರ ಬೆಂಬಲ ಪಡೆದರೆ, ಕಾಂಗ್ರೆಸ್ ಮುಸ್ಲಿಮರು ಮತ್ತು ಮೂರೂ ಎಡ ಪಕ್ಷಗಳು (ಸಿಪಿಐ ಎಂ ಎಲ್ , ಸಿಪಿಐ -ಎಂ, ಸಿಪಿಐ) ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರ ಬೆಂಬಲ ಪಡೆಯುವ ಲೆಕ್ಕಾಚಾರ ಈ ಚುನಾವಣೆಯಲ್ಲಿ ತಲೆಕೆಳಗಾಗಿದೆ. ಇದೇ ಹಣೆಬರಹ ಮುಸ್ಲಿಮರನ್ನು ತನ್ನ ವೋಟ್ ಬ್ಯಾಂಕ್ ಎಂದು ನಂಬಿರುವ ಓವೈಸಿ ನೇತೃತ್ವದ ಓಐಎಂಐಎಂ ಅಲ್ಪಸಂಖ್ಯಾತರ ಬೆಂಬಲ ಗಳಿಸುವಲ್ಲಿ ಮುಗ್ಗರಿಸಿದೆ.

ಲೋಕಸಭೆ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ‘ಸಂವಿಧಾನ ರಕ್ಷಣೆ’ ವಿಷಯವನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಂಡಿದ್ದ ಕಾಂಗ್ರೆಸ್, ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ‘ಮತಗಳ್ಳತನ’ ಮತ್ತು ಚುನಾವಣಾ ಆಯೋಗ ನಡೆಸಿದ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ’ ವಿಷಯವನ್ನು ಕೈಗೆತ್ತಿಕೊಂಡಿತಾದರೂ ಇದಾವುದನ್ನೂ ಮತದಾರರು ಗಂಭೀರವಾಗಿ ತೆಗೆದುಕೊಂಡಂತೆ ಕಾಣುವುದಿಲ್ಲ. ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ದಲಿತರು ಡಾ.ಅಂಬೇಡ್ಕರ್ ಅವರು ಬರೆದ ಸಂವಿಧಾನ ಇದ್ದರೆ ತಮಗೆ ರಕ್ಷಣೆ ಎನ್ನುವ ಬಲವಾದ ನಂಬಿಕೆಯಿಂದ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದರು. ಆದರೆ ಈ ಬಾರಿ ಸಂವಿಧಾನ ರಕ್ಷಣೆ ಪ್ರಸ್ತಾವವಿಲ್ಲದ ಕಾರಣ ಅವರ ಮತಗಳು ಹರಿದು ಹಂಚಿಹೋಗಿವೆ.

ಚುನಾವಣಾ ಆಯೋಗವು ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸುವ ಮೂಲಕ ಅರ್ಹರಲ್ಲದ, ಬಾಂಗ್ಲಾ ಮತ್ತು ಇತರೆ ದೇಶಗಳಿಂದ ಬಂದು ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಸೇರಿದ್ದರೆನ್ನಲಾದ ಮತ್ತುಕಾಣೆಯಾದವರು, ನಿಧನರಾದವರ ಹಾಗೂ ಹೊಟ್ಟೆ ಬಟ್ಟೆಗಾಗಿ ಕೂಲಿಹುಡುಕಿಕೊಂಡು ಬೇರೆ ರಾಜ್ಯಗಳಿಗೆ ವಲಸೆ ಹೋದ ಸುಮಾರು ೬೪ ಲಕ್ಷಮತದಾರರ ಹೆಸರನ್ನು ತೆಗೆದು ಹಾಕಿದ್ದು ಸಹ ಎನ್‌ಡಿಎಗೆ ಅನುಕೂಲವಾಯಿತು ಎನ್ನುವ ರಾಜಕೀಯ ಲೆಕ್ಕಾಚಾರವು ಈಗಿನ ಫಲಿತಾಂಶದ ಅಚ್ಚರಿಗಳಲ್ಲಿ ಒಂದು ಎಂದೇ ಹೇಳಲಾಗುತ್ತಿದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯವನ್ನು ಆರ್‌ಜೆಡಿ ಮತ್ತು ಕಾಂಗ್ರೆಸ್ ನಿರಂತರವಾಗಿ ವಿರೋಧಿಸಿಕೊಂಡು ಬಂದದ್ದು ಯಾವುದೇ ಲಾಭವನ್ನು ತಂದುಕೊಟ್ಟಂತೆ ಕಾಣುವುದಿಲ್ಲ. ಇನ್ನು ಚುನಾವಣಾ ಕಾರ್ಯತಂತ್ರದಲ್ಲಿ ಎತ್ತಿದ ಕೈ ಎಂದು ಮನೆಮಾತಾಗಿದ್ದ ಪ್ರಶಾಂತ್ ಕಿಶೋರ್ ಸ್ಥಾಪಿಸಿದ ಜನಸ್ವರಾಜ್ ಪಕ್ಷ ಖಾತೆಯನ್ನೂ ತೆರೆಯಲಾಗದಿರುವುದು ವಾಸ್ತವವಾಗಿ ಚುನಾವಣಾ ಅಖಾಡದಲ್ಲಿ ಗೆಲ್ಲುವುದು ಕಷ್ಟ ಎನ್ನುವುದನ್ನು ಸಾಬೀತುಪಡಿಸಿದೆ.

ರಾಹುಲ್ ಗಾಂಧಿ ಪತ್ತೆ ಹಚ್ಚಿದ ಮತಗಳ್ಳತನ ವಿಷಯ ನಮ್ಮ ಚುನಾವಣಾ ವ್ಯವಸ್ಥೆಯ ಅಧ್ಯಯನ ಮತ್ತು ಸಂಶೋಧನೆಗೆ ಸರಿಹೊಂದುವುದೇ ಹೊರತು ಚುನಾವಣಾ ಅಖಾಡದಲ್ಲಿ ಅದರ ಪಾತ್ರ ಯಾವ ಪರಿಣಾಮವನ್ನೂ ಬೀರಿಲ್ಲಎನ್ನುವುದು ಈ ಫಲಿತಾಂಶವನ್ನು ಗಮನಿಸಿದಾಗ ಸ್ಪಷ್ಟವಾಗಿ ಗೋಚರಿಸುತ್ತದೆ. ವಾಸ್ತವವಾಗಿ ಕಾಂಗ್ರೆಸ್ ಉತ್ತರ ಭಾರತದ ರಾಜ್ಯಗಳಲ್ಲಿ ತನ್ನ ನೆಲೆ ಕಳೆದುಕೊಂಡು ನಾಲ್ಕು ದಶಕಗಳೇ ಆಗಿ ಹೋಗಿದೆ. ಈ ರಾಜ್ಯಗಳಲ್ಲಿ ಈ ಪಕ್ಷ ಮರುಜೀವ ಪಡೆಯುವ ಲಕ್ಷಣಗಳು ಇನ್ನೂ ಕಂಡು ಬಂದಿಲ್ಲವಾದ ಕಾರಣ ಕಾಂಗ್ರೆಸ್ ತನ್ನ ಚುನಾವಣಾ ಕಾರ್ಯತಂತ್ರದ ಬಗೆಗೆ ಪುನರಾವಲೋಕನ ಮಾಡಿಕೊಳ್ಳಬೇಕಿದೆ.

ಹತ್ತಾರು ವರ್ಷ ಯಾದವರು ಮತ್ತು ಇತರೆ ಹಿಂದುಳಿದ ಜಾತಿಗಳನ್ನು ತನ್ನ ವೋಟ್ ಬ್ಯಾಂಕ್ ಆಗಿಸಿಕೊಂಡು ಬಿಹಾರ ರಾಜಕಾರಣದಲ್ಲಿ ಅನಭಿಷಕ್ತನಂತೆ ಮೆರೆದ ಲಾಲೂ ಪ್ರಸಾದ್ ಯಾದವ್ ಅವರ ಜಾತಿ ರಾಜಕಾರಣ ಈ ಬಾರಿ ಮಗನ ಕೈಹಿಡಿಯಲಿಲ್ಲ. ಮೇವು ಹಗರಣದ ಭ್ರಷ್ಟಾಚಾರದಿಂದ ಜೈಲು ವಾಸ ಅನುಭವಿಸಿ ಜಾಮೀನಿನ ಮೇಲಿರುವ ಮತ್ತು ವಯೋ ಸಹಜ ಅನಾರೋಗ್ಯ ದಿಂದ ಲಾಲೂ ಚುನಾವಣೆ ಪ್ರಚಾರದಲ್ಲಿ ಕಾಣಿಸಿಕೊಳ್ಳದಿಲ್ಲದಿರುವುದೂ ತೇಜಸ್ವಿ ಯಾದವ್ ಹಿನ್ನಡೆಗೆ ಕಾರಣವಾಗಿದೆ.

ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಎರಡೂವರೆ ವರ್ಷಗಳ ಹಿಂದೆ ಗೆಲುವು ಸಾಧಿಸಿದ್ದನ್ನು ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ನಾಗಾಲೋಟವನ್ನು ತಡೆದದ್ದನ್ನು ಬಿಟ್ಟರೆ ಕಾಂಗ್ರೆಸ್ ನಿರಂತರವಾಗಿ ಸೋಲಿನ ಕಹಿಯನ್ನು ಅನುಭವಿಸುತ್ತಲೇ ಬಂದಿದೆ. ಪ್ರಧಾನಿ ಮೋದಿ ಅವರ ಈ ಹತ್ತು ವರ್ಷಗಳ ಆಡಳಿತದಲ್ಲಿ ಸಿಬಿಐ ಮತ್ತು ಇಡಿಯನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಮೂಲಕ ಭ್ರಷ್ಟಾಚಾರ ಮತ್ತು ಹಲವುಹಗರಣಗಳಲ್ಲಿ ಭಾಗಿಯಾಗಿದ್ದ ಕೆಲವು ಕಾಂಗ್ರೆಸ್ಸಿಗರು ಬಿಜೆಪಿ ಸೇರಿ ಬಚಾವ್ ಆದರು ಎನ್ನುವುದು ನಿಜ. ರಾಜ್ಯಮಟ್ಟದಲ್ಲಿ ಪ್ರಭಾವಿಗಳಾದ ಹಲವು ಹಿರಿಯರ ಪಾತ್ರವನ್ನು ರಾಹುಲ್ ಗಾಂಧಿ ನಿರ್ಲಕ್ಷಿಸಿಕೊಂಡು ಬಂದದ್ದರಿಂದ ಕಾಂಗ್ರೆಸ್ ದುರ್ಬಲವಾಗಲು ಕಾರಣ ಎನ್ನುವ ಸತ್ಯವನ್ನು ಮರೆಮಾಚಲಾಗದು. ಜೊತೆಗೆ ಹೊಸ ಪೀಳಿಗೆಯು ಬಿಜೆಪಿ ಸಿದ್ಧಾಂತ ಮತ್ತು ಪ್ರಧಾನಿ ಮೋದಿ ಅವರ ಮೋಹಕ್ಕೆ ಒಳಗಾಗಿರುವ ಕಾರಣ ಯುವ ಜನತೆ ಕಾಂಗ್ರೆಸ್ಸಿನತ್ತ ಮುಖಮಾಡುತ್ತಿಲ್ಲ ಎನ್ನುವ ಸತ್ಯವನ್ನು ಕಡೆಗಣಿಸಲಾಗದು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ಈಗಿನ ಬಿಹಾರದ ಚುನಾವಣೆ ಸೋಲಿಗೆ ಕಾರಣಗಳನ್ನು ಹುಡುಕಿ ಮುಂದಿನ ಚುನಾವಣೆ ಗೆಲ್ಲುವ ಮಾತಿರಲಿ, ಪಕ್ಷವನ್ನು ಗಟ್ಟಿಯಾಗಿ ಉಳಿಸಿಕೊಳ್ಳುವ ಕಡೆ ಕಾಂಗ್ರೆಸ್ ಹೆಚ್ಚು ಗಮನ ಹರಿಸಬೇಕಿದೆ.

ಮುಂದಿನ ಏಪ್ರಿಲ್- ಮೇ ತಿಂಗಳಲ್ಲಿ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿವಿಧಾನಸಭೆಗಳಿಗೆ ಚುನಾವಣೆ ನಡೆಯಬೇಕಿದೆ. ಈ ರಾಜ್ಯಗಳಲ್ಲಿ  ಕಾಂಗ್ರೆಸ್ ಪ್ರಭಾವ ಇಲ್ಲದಿದ್ದರೂ, ‘ಇಂಡಿಯಾ ಮೈತ್ರಿಕೂಟ’ದಲ್ಲಿ ದೊಡ್ಡಣ್ಣನ ಪಾತ್ರವಹಿಸುವ ಬದಲು ತಮಿಳುನಾಡಿನಲ್ಲಿ ಸ್ಥಳೀಯವಾಗಿ ಪ್ರಭಾವ ಹೊಂದಿರುವ ಡಿಎಂಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ನೆರವಾಗುವುದು ಜಾಣತನವಾದೀತು. ಈ ದಿಕ್ಕಿನಲ್ಲಿ ಬಿಜೆಪಿಯೇತರ ಮಹಾಮೈತ್ರಿ ಕೂಟವನ್ನು ಬಲಪಡಿಸುವತ್ತ ಗಮನಹರಿಸುವುದು ಕಾಂಗ್ರೆಸ್ಸಿಗೆ ಅನಿವಾರ್ಯ. ಬಿಹಾರದ ಫಲಿತಾಂಶದಿಂದ ಕಲಿಯಬೇಕಾದ ಪಾಠವನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಸಹ ಮುಖ್ಯ. ಇಲ್ಲವಾದರೆ ಚುನಾವಣೆಗಳಲ್ಲಿ ಬಿಜೆಪಿಯನ್ನು ಮಣಿಸುವುದು ಸುಲಭದ ಮಾತಲ್ಲ ಎನ್ನುವ ಪಾಠವನ್ನು ಈಗಿನ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಕಲಿಯಬೇಕಿದೆ.

” ರಾಹುಲ್ ಗಾಂಧಿ ಪತ್ತೆ ಹಚ್ಚಿದ ಮತಗಳ್ಳತನ ವಿಷಯ ನಮ್ಮ ಚುನಾವಣಾ ವ್ಯವಸ್ಥೆಯ ಅಧ್ಯಯನ ಮತ್ತು ಸಂಶೋಧನೆಗೆ ಸರಿಹೊಂದುವುದೇ ಹೊರತು ಚುನಾವಣಾ ಅಖಾಡದಲ್ಲಿ ಅದರ ಪಾತ್ರ ಯಾವ ಪರಿಣಾಮವನ್ನೂ ಬೀರಿಲ್ಲ ಎನ್ನುವುದು ಈ ಫಲಿತಾಂಶವನ್ನು ಗಮನಿಸಿದಾಗ ಸ್ವಷ್ಟವಾಗಿಗೋಚರಿಸುತ್ತದೆ. ವಾಸ್ತವವಾಗಿ ಕಾಂಗ್ರೆಸ್ ಉತ್ತರ ಭಾರತದ ರಾಜ್ಯಗಳಲ್ಲಿ ತನ್ನ ನೆಲೆ ಕಳೆದುಕೊಂಡು ನಾಲ್ಕು ದಶಕಗಳೇ ಸರಿದು ಹೋಗಿದೆ. ಈ ರಾಜ್ಯಗಳಲ್ಲಿ ಈ ಪಕ್ಷ ಮರುಜೀವ ಪಡೆಯುವ ಲಕ್ಷಣಗಳು ಇನ್ನೂ ಕಂಡುಬಂದಿಲ್ಲವಾದ ಕಾರಣ ಕಾಂಗ್ರೆಸ್ ತನ್ನ ಚುನಾವಣಾ ಕಾರ್ಯತಂತ್ರದ ಬಗೆಗೆ ಪುನರಾವಲೋಕನ ಮಾಡಿಕೊಳ್ಳಬೇಕಿದೆ.”

Tags:
error: Content is protected !!