Mysore
20
overcast clouds

Social Media

ಸೋಮವಾರ, 17 ನವೆಂಬರ್ 2025
Light
Dark

ಹಿರಿಯರನ್ನು ಕಾಡುವ ಮಾನಸಿಕ ಕಾಯಿಲೆ ಆತಂಕ

ಡಾ. ದುಷ್ಯಂತ್ ಪಿ.


ವೃದ್ಧರಲ್ಲಿ ಕಾಣುವ ಮಾನಸಿಕ ಕಾಯಿಲೆಗಳಲ್ಲಿ, ಆತಂಕ ( Anxiety) ಪ್ರಮುಖವಾದದ್ದು. ಇತ್ತೀಚಿನ ದಿನಗಳಲ್ಲಿ ವೃದ್ಧರಲ್ಲಿ ಆತಂಕಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ಹೆಚ್ಚಾಗಿ ಕಾಣುತ್ತೇವೆ. ಒಂಟಿಯಾಗಿ ಜೀವಿಸುವ ವೃದ್ಧರಲ್ಲಿ ಮತ್ತು ವೃದ್ಧ ದಂಪತಿಗಳಲ್ಲಿ ಇದು ಸಾಮಾನ್ಯ.

ಆತಂಕ ಇರುವ ವೃದ್ಧರಲ್ಲಿ ಹಲವು ರೀತಿಯ ಲಕ್ಷಣಗಳನ್ನು ಕಾಣಬಹುದು. ಅತಿಯಾಗಿ ಒಂದು ವಿಷಯದ ಬಗ್ಗೆ ಚಿಂತಿಸುವುದು,
ಕೇವಲ ನಕಾರಾತ್ಮಕ ಚಿಂತನೆ ಮಾಡುವುದು, ಸದಾಕಾಲ ಚಡಪಡಿಕೆ (restlessness), ಒಂದು ವಿಷಯದ ಬಗ್ಗೆ ಏಕಾಗ್ರತೆ ಇಲ್ಲದಿರುವುದು, ನೆನಪಿನ ಶಕ್ತಿ ಕುಂಠಿತಗೊಳ್ಳುವುದು, ಸಾಮಾನ್ಯ ವಿಷಯಗಳಿಗೆ ಅತಿಯಾದ ಸಿಡುಕುತನ (irritaility), ಆತಂಕ ಇರುವವರಲ್ಲಿ ನಿದ್ರಾಹೀನತೆ ಒಂದು ಪ್ರಮುಖವಾದ ಲಕ್ಷಣ. ನಿದ್ರೆ ಮಾಡಲು ಆಗದೇ ಇರುವುದು ಮತ್ತು ಮಧ್ಯದಲ್ಲಿ ಎಚ್ಚರವಾಗಿ ಪುನಃ ನಿದ್ರಿಸಲು ಸಾಧ್ಯವಾಗದೆ ಇರುವುದು, ಇವೆರಡೂ ನಿದ್ರಾಹೀನತೆಯ ಲಕ್ಷಣಗಳು. ಆತಂಕದಿಂದ ಕೇವಲ ಮಾನಸಿಕ ತೊಂದರೆ ಅಲ್ಲದೇ ದೈಹಿಕವಾಗಿಯೂ ಸಮಸ್ಯೆ ಉಂಟಾಗಬಹುದು. ಹೃದಯ ಬಡಿತ ಹೆಚ್ಚಾಗುವುದು, ಬಹು ಬೇಗನೆ ಆಯಾಸ
ಉಂಟಾಗುವುದು, ತಲೆ ನೋವು, ರಕ್ತದೊತ್ತಡದಲ್ಲಿ ಏರುಪೇರು ಹೀಗೆ ಹಲವು ರೀತಿಯ ತೊಂದರೆ ಉಂಟಾಗಬಹುದು. ವೃದ್ಧರಲ್ಲಿ ಹಲವು ಕಾರಣಗಳಿಂದ ಆತಂಕ ಉಂಟಾಗುತ್ತದೆ.

1. ವೃದ್ಧರು ಹಲವು ದೀರ್ಘವಾಧಿ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಹೀಗಾಗಿ ತಮ್ಮ ಆರೋಗ್ಯದ ಬಗೆಗಿನ ಭಯ ಮತ್ತು
ಅದರಿಂದ ಇನ್ನೊಬ್ಬರ ಮೇಲೆ ಅವಲಂಬಿಸಬೇಕಾದ ಪರಿಸ್ಥಿತಿಯ ಬಗ್ಗೆ ಚಿಂತಿಸುವುದರಿಂದ ಆತಂಕ ಸಂಭವಿಸಬಹುದು.
2. ಒಂಟಿತನ ಆತಂಕಕ್ಕೆ ಕಾರಣವಾಗಬಹುದು. ಕುಟುಂಬದವರ ಜೊತೆಗಿನ ಒಡನಾಟ ಮತ್ತು ಸಹಕಾರ ಇಲ್ಲದೆ ಇರುವ ಪರಿಸ್ಥಿತಿಯಲ್ಲಿ ಆತಂಕ ಕಾಣಿಸುತ್ತದೆ.
3. ವೃದ್ಧರಲ್ಲಿ ಆರ್ಥಿಕ ಅಭದ್ರತೆಯೂ ಆತಂಕಕ್ಕೆ ಕಾರಣವಾಗಬಹುದು. ಆರ್ಥಿಕ ಸಂಕಷ್ಟ ಮತ್ತು ಅದರ ಒತ್ತಡ ಹೆಚ್ಚಾಗಿ ಆಂತಕ ಉಂಟಾಗಬಹುದು.
4. ಪ್ರೀತಿಪಾತ್ರರ ಅಗಲುವಿಕೆ ವೃದ್ಧರಲ್ಲಿ ಮನಸಿಕೆ ತೊಂದರೆಗೆ ಕಾರಣವಾಗಬಹುದು. ತಮ್ಮ ಸಂಗಾತಿ, ಸ್ನೇಹಿತರು, ಸಂಬಂಧಿಕರು
ಇವರುಗಳ ಅಗಲುವಿಕೆ ಆತಂಕ ಉಂಟುಮಾಡಬಹುದು.
5. ವಯೋಸಹಜವಾಗಿ ನೆನಪಿನಶಕ್ತಿ ಕುಂಠಿತಗೊಳ್ಳುವ ಕಾರಣ ವೃದ್ಧರು ತಮ್ಮ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗದೆ ಅವರಲ್ಲಿ ಆತಂಕ ಉಂಟಾಗಬಹುದು.
6. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ (social media) ಅತಿಯಾದ ಬಳಕೆಯಿಂದ ವೃದ್ಧರಲ್ಲಿ ಆತಂಕದ ಲಕ್ಷಣಗಳನ್ನು ಕಾಣಬಹುದು. ಸಾಮಾಜಿಕ ಜಾಲತಾಣಗಳು ಜನರನ್ನು ಆಕರ್ಷಿಸಲು ನಕಾರಾತ್ಮಕ ವಿಷಯಗಳನ್ನು ಹೆಚ್ಚು ವಿಜೃಂಭಿಸಿ ಪ್ರಸ್ತುತಪಡಿಸುತ್ತವೆ. ಹೀಗೆ ಕೇವಲ ನಕಾರಾತ್ಮಕ ಸುದ್ದಿಗಳನ್ನು ವೀಕ್ಷಿಸುವುದು ಮತ್ತು ಸಾದಾ ಕಾಲ ಅದರ ಬಗ್ಗೆ ಯೋಚಿಸುವುದರಿಂದ ಆತಂಕ ಹೆಚ್ಚಾಗುತ್ತದೆ.

ವೃದ್ಧರಲ್ಲಿ ಆತಂಕ ಮತ್ತು ಅದರಿಂದಾಗುವ ಸಮಸ್ಯೆಗಳನ್ನು ನಿವಾರಿಸಲು ಹಲವು ಮಾರ್ಗಗಳನ್ನು ಅನುಸರಿಸಬಹುದು.

1. ವೃದ್ಧರು ತಮಗೆ ಸಾಧ್ಯವಾದಷ್ಟು ಕೆಲಸ ಮತ್ತು ಚಟುವಟಿಕೆ ಮಾಡಬೇಕು. ಯಾವುದಾದರೂ ಹೊಸ ಕಲಿಕೆ ಅವರ ಮನಸ್ಸಿಗೆ ಸಮಾಧಾನ ನೀಡುತ್ತದೆ. ಓದುವುದು, ಬರವಣಿಗೆ, ಸಂಗೀತ, ತೋಟಗಾರಿಕೆ, ಕರಕುಶಲ ಕಲೆ ಹೀಗೆ ಯಾವುದಾದರೂ ಹೊಸ ಹವ್ಯಾಸ ರೂಢಿಸಿಕೊಳ್ಳುವುದರಿಂದ ಆತಂಕ ಕಡಿಮೆಯಾಗುತ್ತದೆ.
2. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುವುದು, ಸಮಾಜ ಸೇವಾ ಕೆಲಸಗಳನ್ನು ಮಾಡುವುದರಿಂದ ವೃದ್ಧರಲ್ಲಿ
ಸಕಾರಾತ್ಮಕ ಭಾವನೆಗಳನ್ನು ಹೆಚ್ಚಿ ಆತಂಕ ದೂರವಾಗುತ್ತದೆ.
3. ದೈಹಿಕ ವ್ಯಾಯಾಮ, ಯೋಗ, ಪ್ರಾಣಾಯಾಮ, ನಡಿಗೆ ಇವುಗಳು ಮನಸ್ಸಿಗೆ ವಿಶ್ರಾಂತಿ, ನೆಮ್ಮದಿಯನ್ನು ನೀಡುತ್ತವೆ. ದೈಹಿಕ
ಚಟುವಟಿಕೆಯನ್ನು ನಿರಂತರವಾಗಿ ಮಾಡುವುದರಿಂದ ಆತಂಕ ದೂರವಾಗುತ್ತದೆ.
4. ಆತಂಕದ ಲಕ್ಷಣಗಳನ್ನು ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆಯುವುದು ಬಹಳ ಮುಖ್ಯ. ವೈದ್ಯರು ನೀಡುವ ಔಷಧಿಗಳನ್ನು
ನಿಯಮಿತವಾಗಿ ತೆಗೆದುಕೊಳ್ಳಬೇಕು.

ವೃದ್ಧರಲ್ಲಿ ಉಂಟಾಗುವ ಆತಂಕ ಮತ್ತು ಹಲವು ಮಾನಸಿಕ ತೊಂದರೆಗಳನ್ನು ನಿವಾರಿಸುವಲ್ಲಿ ಕುಟುಂಬದವರ ಪಾತ್ರ ಪ್ರಮುಖವಾಗಿರುತ್ತದೆ. ಕುಟುಂಬದವರು ವೃದ್ಧರ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಅದಕ್ಕೆ ಸೂಕ್ತವಾದ ಚಿಕಿತ್ಸೆ ಮತ್ತು ಅವುಗಳನ್ನು
ನಿವಾರಿಸಲು ವೃದ್ಧರಿಗೆ ಸಹಾಯ ಮತ್ತು ಬೆಂಬಲ ನೀಡುವಂತಾದರೆ ವೃದ್ಧರ ಜೀವನದ ಗುಣಮಟ್ಟ ಉತ್ತಮವಾಗಿರುತ್ತದೆ.

 

Tags:
error: Content is protected !!