Light
Dark

ಕೆಪಿಎಸ್‌ಸಿ ಟಾಪರ್‌ಗಳಿಗೆ ‘ಶಾದಿ’ಭಾಗ್ಯ ಮತ್ತು ‘ಉದ್ಯೋಗ’ ಭಾಗ್ಯಗಳು!

ಭಾಗ – ಏಳು

ಮೋಸ ವಂಚನೆ ದಗಾಕೋರತನದಲ್ಲೇ ಬಂದವರಿಗೆ ಪ್ರತಿಯೊಂದರಲ್ಲೂ ಅದೇ ಹಳೆ ಮಾರ್ಗಗಳೇ ಗೋಚರಿಸುವುದು ವಿಶೇಷ. ಯಾರಿಗೆ ಎಲ್ಲಿ ಯಾವಾಗ ಗಾಳ ಹಾಕಬೇಕೆಂಬುದು ಇವರಿಗೆ ಗೊತ್ತು. ಒಂದು ಬಾರಿ ಅಪಮಾರ್ಗದಲ್ಲಿ ಮಾರ್ಕ್ಸ್ ಪಡೆಯುವುದು ಗೊತ್ತಾದ ಮೇಲೆ ಉದ್ಯೋಗ ಹೇಗೆ ಪಡೆದುಕೊಳ್ಳಬೇಕು ಎಂಬುದೂ ತಂತಾನೇ ಗೊತ್ತಾಗುತ್ತದೆ.

ಮದುವೆಯಾಗಬೇಕು. ಸರಿಯಾದ ದುಡ್ಡುಳ್ಳ ಮಾವನಿಗಾಗಿ ತಲಾಶ್ ಮಾಡುತ್ತಾರೆ. ಬ್ರೋಕರನ್ನು ಬಿಡುತ್ತಾರೆ. ಸಾವಿರ ಸುಳ್ಳು ಹೇಳುವುದೇ ಬ್ರೋಕರ್ ಗಿರಿ ಎಂದು ತಿಳಿದವರಿಗೂ ಬರವಿಲ್ಲ. ನಕಲಿಗಳ ವೈಭವೋಪೇತ ಡೌಲು ಡಕ್ಕನ್ನು ನೋಡಿ ಬೆರಗಾಗಿ ಹೆಣ್ಣು ಕೊಟ್ಟರೆ, ಈ ಅಲಾಲುಟೋಪಿಯನ್ನು ಜೀವಮಾನವಿಡೀ ಸಾಕಬೇಕಾದ ದುಸ್ಥಿತಿ. ಹೆಣ್ಣು ಹೆತ್ತವರು ಶಾಪ ಯಾರಿಗೆ ಹಾಕಬೇಕು? ಉನ್ನತ ದರ್ಜೆಯಲ್ಲಿ ಪಾಸಾಗಿದ್ದಾನೆ, ಕೆಲಸ ಕೊಡಿಸೋದಿಕ್ಕೆ ನೀವು ಸಪೋರ್ಟ್ ಮಾಡಬೇಕು ಅಷ್ಟೇ ಎಂದು ಮಾರ್ಕ್ಸ್ ಕಾರ್ಡನ್ನೇ ಪ್ರೂಫಾಗಿ ತೋರಿದ್ದ ಬ್ರೋಕರನಿಗೋ? ಅಥವಾ ಅಳಿಯನಿಗೋ?

ನಕಲಿ ಮಾರ್ಕ್ಸ್ ಕಾರ್ಡ್ ಸಿಕ್ಕೊಡನೆ ಅದೆಷ್ಟು ಆನಂದವೋ ಕೆಲ ಪೋಷಕರಿಗೆ. ಉಂಡಾಡಿಯಾಗಿ ತಿರುಗುತ್ತಿದ್ದ ಮಗ ಹೈಸ್ಕೋರ್ ಮಾಡಿ ಫಾರಿನ್ನಿಗೆ ಹೋಗಿದ್ದಾನೆ. ಊರಿಗೆಲ್ಲಾ ಎರಡೆರಡು ಬಾರಿ ಡಂಗೂರ ಹೊಡೆದು ಸಾರುತ್ತಾರೆ.
ಹೆಣ್ಣು ಹೆತ್ತವರಿಗೆ ಇದಕ್ಕಿಂತ ಅಪ್ಯಾಯ ಸುದ್ದಿ ಮತ್ತಾವುದಿದೆ? ಕೇಳಿದ ಕನ್ಯಾಪಿತೃಗಳು ಅನುರೂಪ ಅಳಿಯನತ್ತ ಓಡೋಡಿ ಬರುತ್ತಾರೆ. ಹೇರಳ ವರದಕ್ಷಿಣೆ ಮತ್ತು ಒಬ್ಬಳೇ ಮಗಳಿಗೆ ಅಷ್ಟೂ ಆಸ್ತಿ. ನಕಲಿಗಳು ಒಪ್ಪದೇ ಬಿಡುವುದುಂಟೇ?

ಅಳಿಯ ಫಾರಿನ್ನಿಗೆ ಜಾರಿದ. ಕರೆಸಿ ಕೊಳ್ಳುತ್ತೇನೆಂದು ಹೇಳಿ ಹೋದವನು, ಅಲ್ಲೇ ಇನ್ನೊಬ್ಬಳಿಗೆ ಎರಡು ಮಕ್ಕಳು ಕರುಣಿಸಿದ್ದಾನೆ. ಬರಲೊಲ್ಲೆ ಎನ್ನುತ್ತಾನೆ. ನೋಡಿದರೆ ಅವನು ಅಮೇರಿಕಾಗೆ ಹೋಗಿದ್ದೇ ನಕಲಿ ಮಾರ್ಕ್ಸ್ ಕಾರ್ಡಿನ ಮೇಲೆ. ಪಡೆದಿರುವ ವೀಸಾ ಕೂಡ ನಕಲಿ ಮಾರ್ಗದಲ್ಲೇ. ಅದರ ಅವಧಿ ಮುಗಿಯುವುದರೊಳಗೆ ರಿನ್ಯೂ ಮಾಡಿಸಲು ಅಲ್ಲಿನವಳನ್ನೇ ಕಟ್ಟಿಕೊಂಡಿದ್ದಾನೆ. ಅವಳಿಗೆ ಮೊದಲೇ ಎರಡು ಮಕ್ಕಳಿವೆ! ವೀಸಾ ಸಲುವಾಗಿ ಆ ಮದುವೆ! ತಕ್ಕನಿಗೂ ಮುಕ್ಕನಿಗೂ ಜೋಡಿ! ಆದರೆ ಅದೂ ಬರ್ಕತ್ತಾಗುವುದಿಲ್ಲ.

ಇದು ಕೇವಲ ನಕಲಿ ಮಾರ್ಕ್ಸ್ ಕಾರ್ಡ್, ಪರೀಕ್ಷಾ ಅವ್ಯವಹಾರವಲ್ಲ. ಜೀವನವಿಡೀ ಸಾಗುವ ಅಲಾಲುಟೋಪಿ ಜಾಡು. ಇಂಥವರ ಹೊಡಬಾಳಿನಿಂದಾಗಿ ಹರಿಯುತ್ತದೆ ಅರಿಯದ ಹೆಣ್ಣು ಮಕ್ಕಳ ಕಣ್ಣೀರು .

ನಕಲಿಗಳದ್ದು ಒಂದು ಬಗೆಯ ವಂಚನೆಯಾದರೆ, ಅಸಲಿ ಅಳಿಯಂದರಿಗಾಗಿ ಬಲೆ ಬೀಸುವ ಬೇಟೆಗಾರರಿಗೂ ಬರವಿಲ್ಲ. ಇವರು ಪಕ್ಕಾ ವ್ಯವಹಾರಸ್ಥ ಕನ್ಯಾಪಿತೃಗಳು. ವರ ಬೇಕೆಂದರೆ ತಮ್ಮ ನೆಂಟರಿಷ್ಟರಲ್ಲಿ ವಿಚಾರಿಸುವುದಿಲ್ಲ. ಇವರ ಲೆವೆಲ್ಲೇ ಬೇರೆ. ಇವರ ಲೆಕ್ಕಾಚಾರವೇ ಬೇರೆ!. ಈಗಾಗಲೇ ದೊಡ್ಡ ಹುದ್ದೆಯಲ್ಲಿರುವವನನ್ನು ಹಿಡಿಯುವುದು ಕಷ್ಟ. ಅವನ ಲೆವೆಲ್ಲೇ ಬೇರೆ!
ಕೆಪಿಎಸ್ಸಿ ಏಜಂಟರುಗಳ ಬಳಿ ಎಡತಾಕುತ್ತಾರೆ. ಸೆಲೆಕ್ಷನ್ ಆಗಿದೆ. ರಿಸಲ್ಟ್ ಬರಬೇಕು. ಉನ್ನತ ಮಾರ್ಕ್ಸ್ ಪಡೆದಿರುವ ಮಿಕಗಳು ಪತ್ತೆಯಾಗುತ್ತವೆ. ಅವನನ್ನು ಪುಷ್ ಮಾಡಿಸಿ ಕೆಲಸ ಕೊಡಿಸುವ ಭಾರ ತಮಗಿರಲಿ. ಎಷ್ಟೇ ಖರ್ಚಾಗಲಿ , ಎಂಥದೇ ಇನ್ಫ್ಲೂಯೆನ್ಸ್ ಆಗಲಿ ತಾನು ನಿಭಾಯಿಸುತ್ತೇನೆ ಎಂದು ಮಾತಿಗಿಳಿಯುತ್ತಾರೆ.

ಚಿತ್ರಕೃಪೆ- ಸುನಿಲ್ ಬೊಂಬಾಲ್/ಆರ್ಟ್‌ಮೆಜೂರ್

ಆದರೆ ಒಂದು ಷರತ್ತು. ಹೆಬ್ಬೆರಳನ್ನೇ ಕೊಡು ಎಂದ ದ್ರೋಣರಷ್ಟು ಕಠೋರರಲ್ಲ ಇವರು. ತಮ್ಮ ಮಗಳನ್ನು ಮದುವೆಯಾಗಬೇಕು ಅಷ್ಟೇ. ಕೆಪಿಎಸ್ಸಿಗೆ ಹೋಗಿ ಇನ್ನೇನು ಆಯ್ಕೆಯಾಗುತ್ತಾರೆ ಎಂಬ ಅರ್ಹ ಅಭ್ಯರ್ಥಿಗಳ ಲಿಸ್ಟನ್ನು ಮೊದಲೇ ಗುರ್ತುಹಾಕಿಕೊಂಡಿರುವ ದಲ್ಲಾಳಿಯದೇ ಮುಂದಿನ ಸಾರಥ್ಯ. ಯಾರ್ಯಾರನ್ನು ಹಿಡಿದು ಎಷ್ಟೆಷ್ಟು ತಲುಪಿಸಬೇಕು , ಏನೇನು ಲಗಾಟಿ ಹೊಡೆಯಬೇಕು ಎಂಬುದೆಲ್ಲವೂ ಅವನಿಗೆ ಕರತಲಾಮಲಕ. ಅವೆಲ್ಲವನ್ನೂ ರೆಡಿ ಮಾಡಿಕೊಂಡೇ ಕನ್ಯಾಪಿತೃವನ್ನು ಕಂಡು ಮಾತಾಡುತ್ತಾನೆ. ಇಲ್ಲಿಗೆ ಮೊದಲ ಹಂತ ಮುಗಿಯಿತು.

ಎರಡನೇ ಹಂತದಲ್ಲಿ ಅರ್ಹ ಗಂಡುಗಳ ತಂದೆ ತಾಯಂದಿರನ್ನು ಕಂಡು ನಿಮ್ಮ ಹುಡುಗನಿಗೆ ಮೆರಿಟ್ ಮಾರ್ಕ್ಸ್ ಬಂದಿದೆ. ಇನ್ನಿಬ್ಬರು ಮೂರ್ನಾಲ್ಕು ಅಂಕ ಸ್ವಲ್ಪ ಮುಂದಿದ್ದಾರೆ. ಅದನ್ನು ಕವರಪ್ ಮಾಡಲು ಇಷ್ಟಿಷ್ಟಾಗುತ್ತೆ ಎಂದು ಸೆಲೆಕ್ಷನ್ ಲಿಸ್ಟನ್ನೇ ಮುಂದಿಡುತ್ತಾನೆ. ಅವರು ಆಕಾಶವೇ ಕಳಚಿ ಬಿದ್ದವರಂತೆ ಮುಖ ನೋಡುತ್ತಾರೆ. ಮಗನ ಹೆಸರು ಮೆರಿಟ್ ಲಿಸ್ಟಿನಲ್ಲಿ ಐದನೇ ಸ್ಥಾನದಲ್ಲಿದೆ! ಮೊದಲ ಇಬ್ಬರಿಗೆ ಮಾತ್ರ ಛಾನ್ಸ್. ತಮ್ಮ ಮಗನಿಗೆ ಸಾಧ್ಯವೇ ಇಲ್ಲ.

ಒಂದು ಪ್ಲ್ಯಾನ್ ಹೇಳ್ತೀನಿ ಮಾಡ್ತೀರಾ? ನನಗೆ ಗೊತ್ತಿರೋ ಒಂದಿಬ್ಬರು ದೊಡ್ಡ ಮನುಷ್ಯರಿದ್ದಾರೆ. ಮಗಳಿಗೆ ಗಂಡು ಹುಡುಕುತ್ತಿದ್ದಾರೆ, ಇದೆಲ್ಲಾ ಖರ್ಚು ವಹಿಸಿಕೊಳ್ತೀರಾ ಅಂತ ಕೇಳಿ ನೋಡೋದು. ಅವರು ಹ್ಞೂಂ ಅಂದ್ರೆ ಹೆಣ್ಣು ಹೊನ್ನು ಮಣ್ಣು ಈ ಉದ್ಯೋಗ ಎಲ್ಲಾ ಬರುತ್ತೆ . ರೆಡಿನಾ?

ಗಂಡಿನ ತಂದೆ ತಾಯಿಗಳಿಗೇನು ಗೊತ್ತು ಇವೆಲ್ಲಾ ಹುನ್ನಾರ? ಮಗನಿಗೆ ಸದ್ಯ ಕೆಲಸ ಸಿಕ್ಕರೆ ಸಾಕು. ಮಗ ಕಷ್ಟ ಬಿದ್ದು ಅಷ್ಟೊಂದು ಸ್ಕೋರ್ ಮಾಡಿದ್ದಾನೆ. ಸ್ವಲ್ಪ ಏಮಾರಿದರೂ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗುತ್ತದೆ. ಅಂಥ ದೊಡ್ಡ ಮನುಷ್ಯರು ದೊಡ್ಡ ಹುದ್ದೆ ಕೊಡಿಸುವುದಲ್ಲದೆ ಮಗಳನ್ನೂ ಕೊಟ್ಟು ಭಾಗ್ಯದ ಬಾಗಿಲನ್ನೇ ತೆರೆಯತ್ತೇನೆಂದರೆ ಬೇಡವೆನ್ನುವುದುಂಟೇ? ಒಂದೇ ಷರತ್ತಿಗೆ ಎರಡು ಭಾಗ್ಯಗಳು. ಉದ್ಯೋಗ ಭಾಗ್ಯ , ಶಾದಿಭಾಗ್ಯ. ಅವರೇ ದಲ್ಲಾಳಿಯ ಬಳಿ ಗೋಗರೆಯುತ್ತಾರೆ. ಏನಾದ್ರೂ ಮಾಡಿ ಸಂಬಂಧ ಕುದುರಿಸಿ ಕೊಡಿ.

ದಲ್ಲಾಳಿ ಖುಷಿಗೆ ಪಾರವಿಲ್ಲ. ತಾವು ಬಯಸಿದ್ದೂ ಅದೇ. ಅವರು ಬಯಸ್ತಿರೋದೂ ಅದೇ ! ಗಂಡು ಹೆಣ್ಣಿನ ಸಂದರ್ಶನ ನಡೆಯುತ್ತೆ. ಹೆಣ್ಣಿನವರಿಗೂ ಒಪ್ಪಿಗೆ . ನಯವಾಗಿ ವ್ಯವಹಾರ ಕುದುರುತ್ತದೆ. ಯಾರು ಯಾರಿಂದ ಉಪಕೃತರಾದರು ಎಂಬುದೇ ತಿಳಿಯದು.

ಇದೆಲ್ಲವೂ ಮೊದಲಿನಿಂದ ಹೆಣೆದ ವ್ಯೆಹ ಎಂದು ಕೊನೆಯ ತನಕ ಗಂಡಿನವರಿಗೆ ಗೊತ್ತೇ ಆಗದಂತೆ ಸಾಂಗವಾಗಿ ಪ್ರಹಸನ ಮುಗಿಯುತ್ತದೆ.

ಕೆಪಿಎಸ್ಸಿಗೆ ಅಧ್ಯಕ್ಷರಾಗಿ, ಸದಸ್ಯರಾಗಿ ಅನೇಕರು ಕಡಿದು ಕಟ್ಟೆ ಹಾಕಿದ್ದು ಇಂಥವೇ ಶಾದಿಭಾಗ್ಯ. ಕಾಸು ಮತ್ತು ಕಾಸಿನ ಸರ! ಇನ್ನೇನು ಆಯ್ಕೆಯಾಗಲಿದ್ದ ಅರ್ಹನಿಗೆ ಕೊಂಚ ಪುಶ್ ಕೊಟ್ಟೋ ಎಂಬುದು ಇವರ ಸಮರ್ಥನೆ. ಇವರ ಪುಶ್ ನಿಂದಾಗಿ ಅರ್ಹತೆಯಿದ್ದೂ ಪ್ರಪಾತಕ್ಕೆ ಬಿದ್ದು ಅಂಗವಿಕಲರಾದವರ ಆಕ್ರಂದನ ಕೇಳುವವರಾರು?

ಅನ್ಯಾಯ ಅಕ್ರಮಗಳ ಭ್ರಷ್ಟತೆ ಹೋಗಲಿ ಎನ್ನುವವರೇ ಎಲ್ಲರೂ. ಆದರೆ ಅಧಿಕಾರ ಹಿಡಿದೊಡನೆ ಮಾಡುವ ಮೊದಲ ಕೆಲಸವೇ ಅದು. ಕೆಪಿಎಸ್ಸಿಯಂತೂ ಅಧ್ವಾನದ ಆಗರ. ಉನ್ನತ ಹುದ್ದೆಗಳೆಲ್ಲವೂ ಮೊದಲಿನಿಂದಲೂ ಉಳ್ಳವರ ಅಧಿಕಾರಸ್ಥರ ಪಾಲು. ದುಡ್ಡು ಅಧಿಕಾರವಿದ್ದರೆ ಅಯೋಗ್ಯರಿಗೂ ಅವಕಾಶವಿದೆ. ಯೋಗ್ಯರಲ್ಲಿ ಕಡಿಮೆ ಯೋಗ್ಯರಿಗೆ ಶಾದಿಭಾಗ್ಯ ಕರುಣಿಸಿ ಅರ್ಹರಿಗೆ ಅವಕಾಶ ತಪ್ಪಿಸುತ್ತಾರೆ.

ಕೆಪಿಎಸ್ಸಿಯ ಹಗರಣಗಳು ಒಂದೆರಡಲ್ಲ. ಏನೇನೋ ಸುಧಾರಣೆ ತರುತ್ತಿದ್ದೇವೆ ಎಂಬ ಹೇಳಿಕೆಗಳು ಪ್ರತಿಯೊಂದು ಹಗರಣ ನಡೆದಾಗಲೂ ಬರುತ್ತವೆ. ಆದರೆ ಹೊಸ ಹೊಸ ಅನ್ಯಾಯ ಅಕ್ರಮಗಳು ರಕ್ತಬೀಜಾಸುರನಂತೆ ಮೇಲೇಳುತ್ತಲೇ ಇವೆ. ಒಂದೇ ಮನೆಯವರಿಗೆ ಮೂರ್ನಾಲ್ಕು ರ್ಯಾಂಕುಗಳು ಬರುತ್ತವೆ. ಪಡೆದ ಅಂಕಗಳ ಸ್ಥಾನ ಅದಲು ಬದಲಾಗುತ್ತವೆ. ಯಾರಿಗೂ ಏನೂ ಅನ್ನಿಸುವುದಿಲ್ಲ.

ಕೆಪಿಎಸ್ಸಿಯ ಇನ್ನೊಂದು ಹಗರಣದಲ್ಲಿ ನಲವತ್ತೆಂಟು ಮಂದಿ ಅಕ್ರಮವಾಗಿ ಹುದ್ದೆ ಗಿಟ್ಟಿಸಿದ್ದಾರೆಂಬ ಆರೋಪ ಕೇಳಿಬಂತು. ವಂಚಿತ ಅಭ್ಯರ್ಥಿಗಳು ರ್ಆಟಿಐ ಅಡಿಯಲ್ಲಿ ಉತ್ತರ ಪತ್ರಿಕೆಗಳ ವಿವರ ಕೇಳಿದರು. ಜೋರು ಮಳೆ ಬಂದು ಅವೆಲ್ಲವೂ ನೆಂದು ಹಾಳಾಗಿವೆ ಎಂಬ ನೊಂದ ಉತ್ತರ ಕೆಪಿಎಸ್ಸಿಯಿಂದ ಬಂತು. ಇಂಥ ಹಗರಣಗಳು ಒಂದೇ ಎರಡೇ?
ಇಡೀ ವ್ಯವಸ್ಥೆ ಹಾಳಾಗಿದೆ, ರಿಪೇರಿ ಯಾವ ಕಡೆಯಿಂದಲೋ ತಿಳಿಯದು. ನಿಜವಾಗಿಯೂ ಕಷ್ಟಪಟ್ಟು ಓದಿ ಬರೆದವರು ಈ ವಂಚಕ ಜಾಲದಲ್ಲಿ ಎಲ್ಲೋ ಕಳೆದು ಹೋಗುತ್ತಾರೆ. ಅವರು ಪಡೆದ ಮಾರ್ಕ್ಸ್ ಗಳಿಗೆ ನಕಲಿ ಅಂಕಗಳ ಮುಂದೆ ಮೂರುಕಾಸಿನ ಕಿಮ್ಮತ್ತೂ ಇಲ್ಲ. ಹುದ್ದೆ ಪಡೆಯುವಾಗಲೂ ಗೋಲ್ ಮಾಲ್ ನಡೆದರೆ ಅವರು ಹೋಗುವುದಾದರೂ ಎಲ್ಲಿಗೆ?