ಕೆಲ ಮೂಲಗಳಿಂದ ದೊರೆತ ಅಂಕಿ ಅಂಶಗಳ ಪ್ರಕಾರ 2050ರ ವೇಳೆಗೆ, ಹಿರಿಯ ನಾಗರಿಕರ ಸಂಖ್ಯೆಯು ಒಟ್ಟು ಜನಸಂಖ್ಯೆಯ ಕಾಲು ಭಾಗದಷ್ಟು ಇರುತ್ತದೆ ಎಂದು ಅಂದಾಜಿಸಲಾಗಿದೆ.
ನಿವೃತ್ತಿಯ ನಂತರ ಕುಟುಂಬದಲ್ಲಿ ಒಬ್ಬರ ಆದಾಯವು ಕಡಿಮೆಯಾಗುವುದರಿಂದ, ವೈದ್ಯಕೀಯ ಖರ್ಚು ವೆಚ್ಚಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಹಾಗಾಗಿ ಹಿರಿಯ ನಾಗರಿಕರ ಹಕ್ಕುಗಳನ್ನು ರಕ್ಷಿಸಲೆಂದೇ ಭಾರತ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.
ಹಿರಿಯ ನಾಗರಿಕರು ಮಾಡುವ ಹೂಡಿಕೆಗೆ ವಾರ್ಷಿಕ ಶೇ.8ರ ದರವನ್ನು ನೀಡುವುದರ ಜೊತೆಗೆ ಆರ್ಥಿಕ ಭದ್ರತೆ ಒದಗಿಸುವ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ, ವಿಶೇಷ ವೈದ್ಯಕೀಯ ಆರೈಕೆಯನ್ನು ನೀಡುವ ಗರಿಷ್ಠ ಮೆಡಿಕ್ಲೈಮ್ ಯೋಜನೆಗಳನ್ನು ಆರಂಭಿಸಿದೆ. ಇದರಲ್ಲಿ ದೈಹಿಕ ನೆರವಿನ ಅಗತ್ಯವಿರುವ ಹಿರಿಯ ನಾಗರಿಕರಿಗಾಗಿ ರಾಷ್ಟ್ರೀಯ ವಯೋಶ್ರೀ ಯೋಜನೆ, ಹಿರಿಯ ನಾಗರಿಕರ ಕಲ್ಯಾಣ ನಿಧಿ ಮುಖ್ಯವಾದವುಗಳು.
ಅಂತೆಯೇ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನುಪಮ ಸೇವೆ ಸಲ್ಲಿಸುವ ಹಿರಿಯ ನಾಗರಿಕರನ್ನು ಗುರುತಿಸಿ, ಗೌರವಿಸುವುದಕ್ಕಾಗಿ 2012ರಿಂದ ‘ವಯೋಶ್ರೇಷ್ಠ ಸಮ್ಹಾನ್’ ಪ್ರಶಸ್ತಿಯನ್ನು ನೀಡುತ್ತಿದೆ. ಕೇವಲ ಹಿರಿಯರಿಗೆ ಮಾತ್ರವಲ್ಲದೆ, ಹಿರಿಯ ನಾಗರಿಕರಿಗೆ ಸೇವೆ, ಸೌಲಭ್ಯಗಳನ್ನು ನೀಡುತ್ತಿರುವ ಜಿಲ್ಲಾ ಪಂಚಾಯಿತಿಗಳು ಹಾಗೂ ಈ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವ ಸಂಘ ಸಂಸ್ಥೆಗಳಿಗೂ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗುತ್ತಿದೆ.