Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮಹಾರಾಷ್ಟ್ರ ಚುನಾವಣೆ ಕಾಂಗ್ರೆಸ್‌ಗೆ ಎಚ್ಚರಿಕೆಯ ಘಂಟೆ

ದೆಹಲಿ ಕಣ್ಣೋಟ 
ಶಿವಾಜಿ ಗಣೇಶನ್

ರಾಜಕೀಯ ವಲಯದಲ್ಲಿ ಹೆಚ್ಚು ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮುಗಿದು ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತಿದೆ. ಇತ್ತ ಕಾಂಗ್ರೆಸ್ ನೇತೃತ್ವದ ‘ಮಹಾರಾಷ್ಟ್ರ ವಿಕಾಸ ಅಘಾಡಿ’ ಮೈತ್ರಿಕೂಟ ದಯನೀಯವಾಗಿ ಸೋಲು ಅನುಭವಿಸಿ ಮುಜುಗರಕ್ಕೆ ಒಳಗಾಗಿದೆ. ಇದೇ ನಿರೀಕ್ಷೆ ಹರಿಯಾಣ ವಿಧಾನಸಭೆ ಚುನಾವಣೆಯಲ್ಲೂ ನಿರಾಸೆ ತಂದಿತು. ಈಗ ಈ ನಿರಾಸೆ ಮಹಾರಾಷ್ಟ್ರದ ಚುನಾವಣೆಯಲ್ಲಿ ಮರುಕಳಿಸಿರುವುದರಿಂದ ಕಾಂಗ್ರೆಸ್ ಚುನಾವಣೆ ವಿಷಯದಲ್ಲಿ ಮತ್ತಷ್ಟು ಎಚ್ಚರವಹಿಸಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳಿದೆ.

ಈ ನಿರಾಸೆಗೆ ಕಾರಣ ಏಪ್ರಿಲ್‌ನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ ಜಯಭೇರಿ. 2019ರಲ್ಲಿ ಕೇವಲ ಒಂದು ಸ್ಥಾನ ಪಡೆದಿದ್ದ ಕಾಂಗ್ರೆಸ್ 2024ರ ಚುನಾವಣೆಯಲ್ಲಿ 13 ಸ್ಥಾನಗಳನ್ನು ಗಳಿಸಿತು. 2019ರಲ್ಲಿ 23 ಸ್ಥಾನಗಳಿಸಿದ್ದ ಬಿಜೆಪಿ 2024ರಲ್ಲಿ ಕೇವಲ 9 ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದರ ಪರಿಣಾದು ಬಿಜೆಪಿಯು ಸರ್ಕಾರ ರಚನೆಗೆ ಲೋಕಸಭೆಯಲ್ಲಿ ಬೇಕಾಗಿದ್ದ 271 ಸ್ಥಾನಗಳನ್ನು ಗಳಿಸಲಾಗದೆ ಕೇವಲ 232 ಸ್ಥಾನಗಳನ್ನು ಪಡೆದು ತೆಲುಗು ದೇಶಂ ಮತ್ತು ಜನತಾದಳ (ಯು) ಬೆಂಬಲದಿಂದ ಮೂರನೇ ಬಾರಿ ಅಧಿಕಾರ ಹಿಡಿಯಬೇಕಾಯಿತು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸೋಲಿನಿಂದ ಕಾಂಗ್ರೆಸ್, ಉದ್ದವ್‌ ಠಾಕ್ರೆ ಶಿವಸೇನೆ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಕಂಗೆಟ್ಟು ಈ ಸೋಲಿಗೆ ವಿದ್ಯುನ್ಮಾನ ಮತಯಂತ್ರದಿಂದ ನಡೆದಿರುವ ಮೋಸ ಎನ್ನುತ್ತಿವೆ. ಕಾಂಗ್ರೆಸ್ ಅಂತೂ ಈ ವಿಷಯವನ್ನು ತೀರಾ ಗಂಭೀರವಾಗಿ ತೆಗೆದುಕೊಂಡು ಮತ್ತೆ ಹಳೆಯ ಮತಪತ್ರದ ಪದ್ದತಿಯನ್ನೇ ಅನುಸರಿಸಬೇಕೆಂದು, ಇದಕ್ಕಾಗಿ ಜನಾಭಿಪ್ರಾಯ ಸಂಗ್ರಹ ಮಾಡುವುದಾಗಿಯೂ ಮತ್ತು ಕಳೆದ ವರ್ಷ ರಾಹುಲ್ ಗಾಂಧಿ ನಡೆಸಿದ ಭಾರತ ಜೋಡೋ ಯಾತ್ರೆಯಂತೆಯೇ ದೇಶದಾದ್ಯಂತ ಪ್ರಚಾರ ನಡೆಸುವುದಾಗಿಯೂ ಘೋಷಿಸಿದೆ.

2006ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ತನ್ನ ಸೋಲಿಗೆ ಮತಯಂತ್ರದ ದೋಷ ಕಾರಣ ಎಂದು ಬೆರಳು ಮಾಡಿತ್ತು. ನಂತರ ಅಲ್ಲಲ್ಲಿ ಕಂಡು ಬಂದ ದೋಷದಿಂದ ಎಚ್ಚೆತ್ತ ಚುನಾವಣಾ ಆಯೋಗ ಮತದಾರ ಮತ ಚಲಾಯಿಸಿದ ಕೂಡಲೇ ಯಾರಿಗೆ ಮತ ಹಾಕಲಾಯಿತು ಎನ್ನುವುದನ್ನು ಖಾತರಿ ಪಡಿಸುವ ವಿವಿಪ್ಯಾಟ್ ಪದ್ಧತಿ ಜಾರಿಗೆ ತಂದಿತು. ತಾನು ಚಲಾಯಿಸಿದ ಮತ ಯಾರಿಗೆ ಬಿದ್ದಿದೆ ಎನ್ನುವುದನ್ನು ಮತದಾರ ಕೂಡಲೇ ನೋಡುವ ಅವಕಾಶ ಬಂದಿತು. ಆದರೂ ಸೋಲು ಉಂಟಾದಾಗ ಮತಯಂತ್ರದಲ್ಲಿ ದೋಷವಿದೆ ಎನ್ನುವ ಆರೋಪವನ್ನು ಸೋತ ಪಕ್ಷಗಳು ಮಾಡುತ್ತಲೇ ಇವೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ನಿಜಕ್ಕೂ ವಿದ್ಯುನ್ಮಾನ ಯಂತ್ರದ ದೋಷ ಕಾರಣವೇ? ಇಲ್ಲ ತನಗೆ ಹೆಚ್ಚು ಮತ ಬಿದ್ದಿಲ್ಲ ಎನ್ನುವ ಪ್ರಶ್ನೆ ಮತ್ತು ಜಿಜ್ಞಾಸೆ ಕಾಂಗ್ರೆಸ್ಸನ್ನು ಕಾಡುತ್ತಿದೆ. ಏಪ್ರಿಲ್ ನಲ್ಲಿ ತನ್ನ ಪರ ಇದ್ದ ಜನಮತ ನವೆಂಬರ್‌ನಲ್ಲಿ ಹೇಗೆ ಬದಲಾಯಿತು ಎನ್ನುವ ಕಡೆ ಗಂಭೀರವಾಗಿ ಚಿಂತಿಸುವ ಬದಲು ಏನೋ ಕಸರತ್ತು ನಡೆದಿದೆ ಎನ್ನುವುದೇ ಕಾಂಗ್ರೆಸ್ಸಿನ ಅನುಮಾನ, ನವೆಂಬರ್ 26ರಂದು ಸುಪ್ರೀಂಕೋರ್ಟ್‌ ನಡೆಸಿದ ವಿಚಾರಣೆ ವೇಳೆ ತಾನು ಸೋತರೆ ಇವಿಎಂ ಕಾರಣ ತಾನು ಗೆದ್ದರೆ ಇವಿಎಂ ಸರಿ’ ಎನ್ನುವ ಧೋರಣೆ ಸರಿಯಲ್ಲ ಎಂದು ಇವಿಎಂ ಬದಲು ಮತ್ತೆ ಮತಪತ್ರ ಪದ್ಧತಿಯನ್ನು ಜಾರಿಗೆ ತರಬೇಕೆಂದು ಮತದಾರರು ಕೋರಿದ್ದ 40 ತಕರಾರು ಅರ್ಜಿಗಳನ್ನು ನ್ಯಾಯಾಲಯ ತಳ್ಳಿಹಾಕಿದೆ. ವಿದ್ಯುನ್ಮಾನ ಮತಯಂತ್ರ ಜಾರಿಗೆ ತಂದ ಕ್ರಮವನ್ನು ಕಳೆದ ಏಪ್ರಿಲ್‌ನಲ್ಲಿಯೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನೀಡುತ್ತಿರುವ ಬಲವಾದ ಕಾರಣವೆಂದರೆ ಸಂಜೆ ಐದು ಗಂಟೆ ಹೊತ್ತಿಗೆ ಶೇ.58ರಷ್ಟು ಮತದಾನ ಆಗಿದ್ದರೆ ಮತದಾನ ಮುಗಿಯುವ ಹೊತ್ತಿಗೆ ಅದು ಶೇ.56 ಹೇಗೆ ಆಯಿತು ಎನ್ನುವ ಸಂಶಯ. ಮಹಾರಾಷ್ಟ ವಿಕಾಸ ಅಘಾಡಿಯ ಉದ್ಧವ್ ಠಾಕ್ರೆ ಇನ್ನೂ ಮುಂದೆ ಹೋಗಿ ಏಕನಾಥ್ ಶಿಂಧೆ ಶಿವಸೇನೆಯನ್ನು ಒಡೆದು ಬಿಜೆಪಿ ಜೊತೆಸೇರಿ ಮುಖ್ಯಮಂತ್ರಿ ಆದ ಪ್ರಕರಣದಲ್ಲಿ ಪಕ್ಷ ವಿಘಟನೆ ಸಂಬಂಧ ಸುಪ್ರೀಂ ಕೋರ್ಟಿನ ಅಂದಿನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ತೀರ್ಪು ಕಾರಣ. ಪಕ್ಷವನ್ನು ಒಡೆದು ಹೋದ ಬಣದ ಸಂಖ್ಯೆಯನ್ನಾಧರಿಸಿ ಅದೇ ನಿಜವಾದ ಶಿವಸೇನೆ ಎಂದು ನೀಡಿದ ತೀರ್ಪು ಪಕ್ಷಾಂತರವನ್ನೇ ಎತ್ತಿಹಿಡಿದಂತಾಯಿತು. ಇದು ಜನರ ಮೇಲೆ ಪರಿಣಾಮ ಬೀರಲು ಸಾಧ್ಯವಾಯಿತೆಂದು ಆರೋಪಿಸಿದ್ದಾರೆ.

ಶುಕ್ರವಾರ ಕಾಂಗ್ರೆಸ್ ಪಕ್ಷವು ಕಾರ್ಯಕಾರಿಣಿಯಲ್ಲಿ ಚುನಾವಣಾ ಫಲಿತಾಂಶದ ಬಗೆಗೆ ಆತ್ಮಾವಲೋಕನ ನಡೆಸಿ, ಪಕ್ಷದಲ್ಲಿ ಪರಸ್ಪರ ಹೊಂದಾಣಿಕೆಯ ಕೊರತೆಯನ್ನು ಗುರುತಿಸಿ ಒಗ್ಗಟ್ಟಿನಿಂದ ಕೆಲಸ ಮಾಡುವ ಅವಶ್ಯಕತೆಯನ್ನು ಒತ್ತಿ ಹೇಳಿದೆ. ಆದರೆ ಹರಿಯಾಣ ಮತ್ತು ಮಹಾರಾಷ್ಟ್ರದ ಸೋಲಿಗೆ ವಿದ್ಯುನ್ಮಾನ ಯಂತ್ರದ ದೋಷವೇ ಕಾರಣ ಎನ್ನುವುದನ್ನು ಪುನರುಚ್ಚರಿಸಿ ಈ ಲೋಪವನ್ನು ಸರಿಪಡಿಸಬೇಕಾದರೆ ಚುನಾವಣಾ ವ್ಯವಸ್ಥೆ ಮತ್ತೆ ಮತಪತ್ರ ಪದ್ಧತಿಯ ಕಡೆಗೇ ಹೋಗಬೇಕೆನ್ನುವ ತೀರ್ಮಾನಕ್ಕೆ ಬಂದಿದೆ.

ವಿದ್ಯುನ್ಮಾನ ಮತಯಂತ್ರ ದೋಷದಿಂದ ಕೂಡಿದೆ ಹಾಗೂಚುನಾವಣೆಯಲ್ಲಿ ಅಕ್ರಮ ನಡೆಯುತ್ತವೆ ಎಂಬ ಆರೋಪಗಳು ಇತ್ತೀಚೆಗೆ ಸಾಮಾನ್ಯ. ಚುನಾವಣಾ ಆಯೋಗ ಮೌನವಾಗಿರುವ ಬದಲು ಆಗಿಂದ್ದಾಗೆ ಇಂತಹ ಆರೋಪಗಳಿಗೆ ಸೂಕ್ತ ಉತ್ತರ ಮತ್ತು ಸ್ಪಷ್ಟನೆ ನೀಡುವ ಮೂಲಕ ಜನರಲ್ಲಿ ಅಥವಾ ರಾಜಕೀಯ ಪಕ್ಷಗಳಲ್ಲಿ ಇರುವ ಹತ್ತಾರು ಅನುಮಾನಗಳಿಗೆ ಉತ್ತರಿಸುವುದು ಅವಶ್ಯ.

ಇದು ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ವಿಕಾಸ ಘಾಡಿಯ ಕಥೆಯಾದರೆ, ಮಹಾಯುತಿಯು ವಿರೋಧ ಪಕ್ಷದ ಸ್ಥಾನಮಾನವನ್ನೂ ಬಿಟ್ಟುಕೊಡದಂತೆ ಪ್ರಚಂಡ ಗೆಲುವು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಬಲವಾದ ನಾಯಕತ್ವ ಮತ್ತು ಏಕನಾಥ್ ಶಿಂಧೆ ಸರ್ಕಾರದ ಮಹಿಳಾ ಮತದಾರರನ್ನು ಭಾರೀ ಪ್ರಮಾಣದಲ್ಲಿ ಸೆಳೆದ ಲಾಡ್ಕಿ ಬೆಹನ್ ಯೋಜನೆ ಮತ್ತು ಶಿಂಧೆ ಸಾಮಾನ್ಯ ಜನರ ಮುಖ್ಯಮಂತ್ರಿ ಎನ್ನುವಂತೆ ಆಡಳಿತವನ್ನು ಜನರ ಬಳಿಗೆ ತೆಗೆದುಕೊಂಡು ಹೋದದ್ದು ಪ್ರಮುಖ ಕಾರಣ ಎಂಬ ವಾದ ಚಾಲ್ತಿಯಲ್ಲಿದೆ.

ಲೋಕಸಭೆಯ ಚುನಾವಣೆ ಫಲಿತಾಂಶ ಕೇವಲ ಆರು ತಿಂಗಳ ಅವಧಿಯಲ್ಲಿ ಮತದಾರರ ಮನಸ್ಸಿನಲ್ಲಿ ಬದಲಾಗಲು ಸಾಧ್ಯವಿಲ್ಲ ಎನ್ನಲಾಗದು. ಲೋಕಸಭೆ ಚುನಾವಣೆ ಕೇಂದ್ರ ಸರ್ಕಾರದ ರಚನೆಗೆ ಮತ್ತು ವಿಧಾನಸಭೆಯ ಚುನಾವಣೆ ರಾಜ್ಯದ ಆಡಳಿತಕ್ಕೆ ಸಂಬಂಧಿಸಿದ್ದು ಎಂಬ ಮನವರಿಕೆ ಸಹಜವಾಗಿಯೇ ಮತದಾರರಿಗೆ ಇದ್ದೇ ಇರುತ್ತದೆ. ಹಾಗಾಗಿ ಬದಲಾವಣೆ ಸಾಧ್ಯವಿಲ್ಲ ಎನ್ನುವ ವಾದವನ್ನು ಒಪ್ಪುವುದು ಕಷ್ಟ. ಕರ್ನಾಟಕದ ಉದಾಹರಣೆಯನ್ನೇ ತಗೆದುಕೊಳ್ಳುವುದಾದರೆ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ 1984ರಲ್ಲಿ ನಡೆದ ಲೋಕಸಭೆಯ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲಿ ಕಾಂಗ್ರೆಸ್ 24 ಸ್ಥಾನಗಳನ್ನು ಗೆದ್ದರೆ ರಾಜ್ಯದಲ್ಲಿ ಆಡಳಿತ ಮಾಡುತ್ತಿದ್ದ ಜನತಾ ಪಕ್ಷವು ಕೇವಲ 4 ಸ್ಥಾನಗಳನ್ನು ಗಳಿಸಿತ್ತು, ಆಗ ರಾಜ್ಯದಲ್ಲಿ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿದುರು ಚುನಾವಣೆಗೆ ಹೋಗಬೇಕೆನ್ನುವ ಒತ್ತಡ ಆರಂಭವಾಯಿತು. ಆಗ ಹೆಗಡೆ ಅವರು ಹಿಂದು ಮುಂದು ನೋಡದೆ 1965ರಲ್ಲಿ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಸಿದ್ಧರಾದರು. ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜನತಾ ಪಕ್ಷವು 139 ಸ್ಥಾನಗಳನ್ನು ಪಡೆದು ಜಯಭೇರಿ ಬಾರಿಸಿತು. ಹಿಂದಿನ ಚುನಾವಣೆಯಲ್ಲಿ ಗಳಿಸಿದ್ದ 95 ಸ್ಥಾನಗಳನ್ನು 139ಕ್ಕೆ ಹೆಚ್ಚಿಸಿಕೊಂಡು 44 ಸ್ಥಾನಗಳನ್ನು ಹೆಚ್ಚಿಗೆ ಪಡೆಯಿತು. ಆಗ ಕಾಂಗ್ರೆಸ್ 83ರಿಂದ 65ಕ್ಕೆ ಇಳಿಯಿತು. ಇದು ಕೇವಲ ಕೆಲವೇ ತಿಂಗಳಲ್ಲಿ ಆದ ಬದಲಾವಣೆ. ಇದೇ ಪರಿಸ್ಥಿತಿ ಈಗ ಮಹಾರಾಷ್ಟ್ರದಲ್ಲಿಯೂ ಆಗಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಮಹಾರಾಷ್ಟ್ರದ ಚುನಾವಣೆ ವಿಧಾನಸಭೆಯದ್ದಾದರೂ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಲತಂದುಕೊಟ್ಟಿದೆ. ಬಿಜೆಪಿಯ ಚುನಾವಣಾ ಕಾರ್ಯತಂತ್ರ ಮತ್ತು ಮಹಾಯುತಿಯಲ್ಲಿ ಇದ್ದ ಒಗ್ಗಟ್ಟು ಅವರನ್ನು ಗೆಲುವಿನ ದಡ ಮುಟ್ಟಿಸಿದೆ. ಕಾಂಗ್ರೆಸ್ಸಿನಲ್ಲಿ ಇದ್ದ ಅತಿಯಾದ ಆತ್ಮವಿಶ್ವಾಸ ಆ ಪಕ್ಷಕ್ಕೆ ಕೈಕೊಟ್ಟಿತು. ಲೋಕಸಭೆಯ ಚುನಾವಣಾ ಫಲಿತಾಂಶವೇ ಮರುಕಳಿಸಿ ತನ್ನ ನೇತೃತ್ವದ ಮಹಾರಾಷ್ಟ್ರ ವಿಕಾಸ ಅಘಾಡಿ ಅಧಿಕಾರ ಹಿಡಿಯಲಿದೆ ಎನ್ನುವ ಕನಸು ಭಗ್ನವಾಗಿದೆ. ಮಹಾಯುತಿ ಗೆಲುವಿನಲ್ಲಿ ಆರ್ ಎಸ್‌ಎಸ್ ನಡೆಸಿದ ತಳಮಟ್ಟದ ಪ್ರಚಾರ ಕಾರ್ಯ ಕೈಹಿಡಿದಿರುವುದಾಗಿ ಹೇಳಲಾಗುತ್ತಿದೆ. ಈ ಸಾಧ್ಯತೆಯನ್ನೂ ತಳ್ಳಿಹಾಕಲು ಬರುವುದಿಲ್ಲ.

`ಬಿಜೆಪಿಗೆ ಶಕ್ತಿ ಶುಂಬುವ ಇಂತಹ ಕಾರ್ಯಕರ್ತರ ಪಡೆ ಕಾಂಗ್ರೆಸ್ಸಿಗೆ ಇಲ್ಲ. ಅದು ಕೇವಲ ನಾಯಕರನ್ನೇ ಹೊಂದಿದ್ದು ತಳಮಟ್ಟದಲ್ಲಿ ಶಿಸ್ತು ಮತ್ತು ಬದ್ಧತೆಯಿಂದ ಕೆಲಸ ಮಾಡುವವರ ಕೊರತೆಯನ್ನು ದೇಶದಾದ್ಯಂತ ಎದುರಿಸುತ್ತಿದೆ. ಅಧಿಕಾರವಿದ್ದಾಗ ಹಲವು ಹಗರಣಗಳಲ್ಲಿ ಸಿಕ್ಕಿ ಬಿದ್ದಿದ್ದ ನಾಯಕರನ್ನು ಬಿಜೆಪಿ ಸರ್ಕಾರ ಸಿಬಿಐ ಮತ್ತು ಇಡಿ ತನಿಖೆಗಳ ಮೂಲಕ ಬೆದರಿಸಿ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವುದರಿಂದ ಕಾಂಗ್ರೆಸ್ ನಾಯಕರ ಕೊರತೆಯನ್ನೂ ಎದುರಿಸುತ್ತಿರುವ ವಾಸ್ತವ ಕಾಣುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸುವಲ್ಲಿ ಯಶಸ್ವಿಯಾಗುತ್ತಿರುವ ಜತೆಗೆ ಅಲ್ಲಿನ ನಾಯಕರಿಗೆ ಕಾಂಗ್ರೆಸ್‌ನಲ್ಲಿ ಭವಿಷ್ಯ ಇಲ್ಲ ಎನ್ನುವಂತೆ ಮಾಡುತ್ತಿರುವ ರಾಜಕೀಯವೇ ಈಗ ಮೇಲುಗೈ ಸಾಧಿಸಿದೆ. ಹೀಗಾಗಿ ಕಾಂಗ್ರೆಸ್ ತನ್ನ ಕಾರ್ಯವೈಖರಿ, ಪಕ್ಷ ಬೆಳವಣಿಗೆಗೆ ಅನುಸರಿಸಬೇಕಾದ ಹೊಸ ಮಾರ್ಗ ಯುವ ಜನರನ್ನು ಆಕರ್ಷಿಸುವ ಮಾರ್ಗೋಪಾಯಗಳನ್ನು ಹುಡುಕಬೇಕಾಗಿರುವುದನ್ನು ಚುನಾವಣಾ ಫಲಿತಾಂಶದಿಂದ ತಿಳಿದುಕೊಳ್ಳಬೇಕಿದೆ.

ಮಹಾರಾಷ್ಟ್ರದಲ್ಲಿನ ಸೋಲಿನ ನಡುವೆ ವಯನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಿಯಾಂಕಾ ಗಾಂಧಿಯವರ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಉತ್ಸಾಹವನ್ನು ತಂದಿದೆ. ಪ್ರಿಯಾಂಕಾ ಅವರು ಮೊದಲ ಬಾರಿಗೆ ಲೋಕಸಭೆಯನ್ನು ಪ್ರವೇಶಿಸಿರುವುದರಿಂದ ಸಹಜವಾಗಿಯೇ ಸ್ವಲ್ಪಮಟ್ಟಿಗೆ ಬಲತಂದುಕೊಡಲಿದೆ. ಆದರೆ ಅದರ ಚುನಾವಣಾ ಗೆಲುವಿನಿಂದ ಭವಿಷ್ಯ ಸುಧಾರಿಸಿಕೊಳ್ಳುವ ಸಾಧ್ಯತೆಯನ್ನು ಈಗಲೇ ಊಹಿಸಲಾಗದು. ಆದರೆ ರಾಹುಲ್ ಗಾಂಧಿಗಿಂತ ಹೆಚ್ಚು ಆಕರ್ಷಕ ವ್ಯಕ್ತಿತ್ವ ಹೊಂದಿರುವ ಪ್ರಿಯಾಂಕಾ ಅವರ ಬೆಳವಣಿಗೆಗೆ ಪಕ್ಷದಲ್ಲಿ ಬೆಂಬಲ ಸಿಗಬೇಕಿದೆ. ಸದ್ಯ ಪ್ರಿಯಾಂಕಾ ಅವರಿಂದಲಾದರೂ ಕಾಂಗ್ರೆಸ್ ಚೇತರಿಸಿಕೊಂಡರೆ ಪಕ್ಷದಲ್ಲಿ ಗುಣಾತ್ಮಕ ಬೆಳವಣಿಗೆಯನ್ನು ನಿರೀಕ್ಷಿಸಿಬಹುದು. ಇದು ನಿಜವಾದರೆ ಜನಬೆಂಬಲ ಮತ್ತೆ ಕಾಂಗ್ರೆಸ್ಸಿಗೆ ಸಿಗುವ ದಿನಗಳನ್ನು ನೋಡಬಹುದು. ರಾಜ್ಯಮಟ್ಟದಲ್ಲಿ ತಮ್ಮದೇ ಶಕ್ತಿ ವರ್ಚಸ್ಸು ಹೊಂದಿರುವ ಸ್ಥಳೀಯ ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಮನಸ್ಥಿತಿಯನ್ನು ರಾಹುಲ್ ಗಾಂಧಿ ಬೆಳೆಸಿಕೊಳ್ಳಬೇಕಿದೆ. ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮಾತ್ರವಲ್ಲ, ಅವರ ಜೊತೆ ಗೌರವದಿಂದ ನಡೆದುಕೊಳ್ಳುವ ನಡೆಯನ್ನೂ ರೂಪಿಸಿಕೊಳ್ಳಬೇಕಿದೆ ಎನ್ನುವ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ.

ಸಂಸತ್ತಿನಲ್ಲಿ ವಿಶೇಷವಾಗಿ ಲೋಕಸಭೆಯಲ್ಲಿ ವಿಪಕ್ಷ ಕಾಂಗ್ರೆಸ್ ಪಕ್ಷವು ಉದ್ಯಮಿ ಅದಾನಿ ಭ್ರಷ್ಟಾಚಾರ ಆರೋಪ ಪ್ರಕರಣದ ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕೆಂದು ಹಠ ಹಿಡಿದಿರುವುದರಿಂದ ಸಂಸತ್ ಕಲಾಪ ಸುಸೂತ್ರವಾಗಿ ನಡೆಯದಂತೆ ಆಗಿರುವುದು ದುರದೃಷ್ಟಕರ. ಬಿಜೆಪಿ ಸರ್ಕಾರದ ಮೇಲಾಗಲಿ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಾಗಲಿ ಕಾಂಗ್ರೆಸ್‌ ಏನೇ ಆರೋಪ ಮಾಡಿ ಗದ್ದಲ ಮಾಡಿದರೂ ಮೋದಿ ಅವರು ತಾವು ನಡೆದದ್ದೇ ದಾರಿ ಎನ್ನುವಂತೆ ಎಲ್ಲವನ್ನು ನಿರ್ಲಕ್ಷಿಸಿ ಮುನ್ನಡೆಯುವುದು ಅವರ ಜಾಯಮಾನ. ಅದು ಸಂಸತ್ ಸದನವಿರಲಿ, ಬಹಿರಂಗ ಸಭೆಯೇ ಇರಲಿ. ಹೀಗಾಗಿ ಕಾಂಗ್ರೆಸ್‌ ಕೇವಲ ಕೂಗುಮಾರಿ ಪಕ್ಷವಾಗಿ ಉಳಿದುಕೊಳ್ಳುತ್ತಿರುವುದು ದುರದೃಷ್ಟಕರ. ಸದ್ಯದ ವಾಸ್ತವವನ್ನು ಗಮನದಲ್ಲಿಸಿಕೊಂಡು ವಲ್ಡ್ ತಿದ್ದುಪಡಿ ಮಸೂದೆ, ಕಾಶ್ಮೀರದಲ್ಲಿ ರದ್ದಾಗಿರುವ ಪ್ರತೀಕ ಸ್ಥಾನಮಾನದ ಸಂವಿಧಾನದ ವಿಧಿ 370ಯನ್ನು ಮತ್ತೆ ತರಬೇಕೆನ್ನುವ ಕಾಶ್ಮೀರ ವಿಧಾನಸಭೆಯ ನಿರ್ಣಯ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಘಟನೆಯ ಬಗೆಗೆ ವಿಪಕ್ಷ ಕಾಂಗ್ರೆಸ್ ಎಚ್ಚರವಹಿಸುವುದು ಅವಶ್ಯ.

Tags: