Mysore
29
few clouds

Social Media

ಗುರುವಾರ, 15 ಜನವರಿ 2026
Light
Dark

ಇವರ ಕೈಯಲ್ಲಿ ಲಂಟಾನ ಕಡ್ಡಿಗಳು ಕಲಾಕೃತಿಗಳು

ಪ್ರಶಾಂತ್ ಎಸ್.

ಲಂಟಾನ ಕಾಡಿನಲ್ಲಿ ಬೆಳೆಯುವ ಒಂದು ಕಳೆ ಸಸ್ಯ. ಈ ಸಸ್ಯವನ್ನು ಬ್ರಿಟಿಷರು ಭಾರತಕ್ಕೆ ಪರಿಚಯಿಸಿದರು. ನಿರುಪಯುಕ್ತ ಸಸ್ಯ ಎಂದು ಬೀಸಾಡಿದ್ದ ಲಂಟಾನ ಪ್ರಸ್ತುತ ದೇಶದಲ್ಲಿ ಶೇ. ೭೫ ರಷ್ಟು ಅರಣ್ಯ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಈ ಸಸ್ಯ ಬೆಳೆದ ಜಾಗದಲ್ಲಿ ಇತರೆ ಸಸ್ಯವರ್ಗ ಗಳನ್ನು ಬೆಳೆಯಲು ಬಿಡದಿರುವ ಪರಿಣಾಮ ಪ್ರತಿವರ್ಷ ಲಂಟಾನವನ್ನು ಅರಣ್ಯ ಇಲಾಖೆಯು ಬುಡಸಮೇತ ಕಿತ್ತು ಹಾಕಲು ಶ್ರಮಿಸುತ್ತಿದೆ.

ಹೀಗೆ ಅರಣ್ಯಕ್ಕೆ, ಇತರೆ ಸಸ್ಯವರ್ಗಗಳಿಗೆ, ಪ್ರಾಣಿಗಳಿಗೆ ಬೇಡವಾದ ಲಂಟಾನವನ್ನು ಕರಕುಶಲಕರ್ಮಿಗಳು ಬಳಸಿಕೊಂಡು ಸುಂದರವಾದ ಕಲಾಕೃತಿಗಳನ್ನು ತಯಾರು ಮಾಡುತ್ತಿದ್ದು, ಈ ಕಲಾಕೃತಿಗಳು ಬಹುರೂಪಿಯ ವಸ್ತುಪ್ರದರ್ಶನದಲ್ಲಿ ಮಾರಾಟವಾಗಿದ್ದು ವಿಶೇಷ. ನಿರುಪಯುಕ್ತ ಅನಿಸಿದ್ದ ಲಂಟಾನದಿಂದ ಬೃಹದಾ ಕಾರದ ಆನೆಯ ಕಲಾಕೃತಿ, ಪೀಠೋಪಕರಣಗಳು ಹಾಗೂ ಇತರೆ ಕಲಾಕೃತಿಗಳನ್ನು ತಮ್ಮ ಕೈಚಳಕದ ಮೂಲಕ ಸುಂದರವಾಗಿ ರಚಿಸಿ, ತಮ್ಮ ಮನೆಯ ಸಮೀಪವೇ ಅಂಗಡಿಯೊಂದನ್ನು ತೆರೆದು ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ ಹಿರಿಯ ಕರಕುಶಲ ಕಲಾವಿದ ಸುರೇಶ್.

ಸುರೇಶ್ ಮೂಲತಃ ಕುಶಾಲನಗರದವರು. ಚಿಕ್ಕ ವಯಸ್ಸಿನಿಂದಲೂ ಕರಕುಶಲಕರ್ಮಿಯಾಗಿ ಕೆಲಸ ಮಾಡುತ್ತಿರುವ ಇವರು, ಲಂಟಾನ ಕಡ್ಡಿಯಿಂದ ಆನೆ ಹಾಗೂ ಇತರೆ ಕಲಾಕೃತಿಗಳನ್ನು ಸುಂದರ ವಾಗಿ ತಯಾರಿಸುತ್ತಿದ್ದು, ಇವರ ಕೈಚಳಕದಲ್ಲಿ ಮೂಡಿದ ಕಲಾಕೃತಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಇತ್ತೀಚೆಗೆ ನಡೆದ ಬಹುರೂಪಿಯಲ್ಲಿ ಮಳಿಗೆ ತೆರೆದು ಅಲ್ಲಿಯೂ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಉತ್ತಮವಾಗಿ ಮಾರಾಟ ಮಾಡಿದ್ದಾರೆ.

ಕುರ್ಚಿ, ಮೇಜು, ಕೀ ನೇತು ಹಾಕುವ ಬೋರ್ಡ್, ಪೀಠೋಪಕರಣಗಳನ್ನು ಸುಂದರವಾಗಿ ತಯಾರಿಸುವ ಇವರ ಕೈಚಳಕ ಬಹುರೂಪಿ ನಾಟ ಕೋತ್ಸವದಲ್ಲಿ ಆಯೋಜನೆಗೊಂಡಿದ್ದ ವಸ್ತು ಪ್ರದ ರ್ಶನದಲ್ಲಿ ಎಲ್ಲರ ಗಮನ ಸೆಳೆದಿದ್ದಂತೂ ನಿಜ.

ಅರಣ್ಯ ಇಲಾಖೆ ಹಾಗೂ ಅನೇಕ ಎನ್ ಜಿಒಗಳ ಸಹಕಾರದಿಂದ ನಾಗರಹೊಳೆ, ಬಂಡೀಪುರ ಹಾಗೂ ಬಿಆರ್‌ಟಿಯ ಕೆಲ ಗ್ರಾಮಗಳಲ್ಲಿನ ಜನರು ಸ್ವಸಹಾಯ ಸಂಘಗಳನ್ನು ಸೇರಿಕೊಂಡು ಲಂಟಾನ ಕಡ್ಡಿಗಳಿಂದ ಕಲಾಕೃತಿಗಳನ್ನು ತಯಾರಿಸುವ ತರಬೇತಿ ಪಡೆಯುತ್ತಿದ್ದಾರೆ. ಆದಿವಾಸಿ ಹಾಡಿಗಳ ಜನರು ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಪ್ಪಿಸುವುದರ ಜತೆಗೆ ಅರಣ್ಯಕ್ಕೆ ಹಾನಿಕಾರಕವಾದ ಲಂಟಾನವನ್ನು ತೆರವುಗೊಳಿಸಲು ಒಂದು ಪರ್ಯಾಯ ಮಾರ್ಗವಾಗಲಿದೆ. ಅಲ್ಲದೆ ಮನೆಯ ಮುಂದೆಯೇ ಕೆಲಸ ದೊರೆಯುವುದರಿಂದ ಆರ್ಥಿಕವಾಗಿಯೂ ತಮ್ಮ ಕುಟುಂಬದ ಸ್ಥಿರತೆಯನ್ನು ಕಾಪಾಡಿಕೊಳ್ಳುವಂತಾಗಿದೆ. ಹೀಗಾಗಿ ಹಾಡಿಯ ಮಕ್ಕಳಿಗೆ ಎಂದಿನಂತೆ ವಿದ್ಯಾಭ್ಯಾಸ ದೊರೆಯಲು ಅನುಕೂಲವಾಗಿದೆ ಎಂಬುದು ಕುಶಲಕರ್ಮಿ ಸುರೇಶ್ ಅವರ ಅಭಿಪ್ರಾಯ.

ಲಂಟಾನ ತೆರವು ಅನಿವಾರ್ಯ: ಬಂಡೀಪುರ, ನಾಗರಹೊಳೆ ಸೇರಿದಂತೆ ಹಲವು ಅರಣ್ಯ ಪ್ರದೇಶಗಳನ್ನು ಆವರಿಸಿರುವ ಲಂಟಾನ ತೆರವಿಗೆ ಇದೊಂದು ಪರ್ಯಾಯ ಮಾರ್ಗವೆಂದರೆ ತಪ್ಪಾಗಲಾರದು. ಸ್ವದೇಶಿ ಸಸ್ಯಗಳನ್ನು ಬೆಳೆಸಲು ಲಂಟಾನಗಳ ತೆರವು ಈಗ ಅನಿವಾರ್ಯವಾಗಿದ್ದು, ಲಂಟಾನ ಕಡ್ಡಿಗಳಿಂದ ಕರಕುಶಲ ವಸ್ತುಗಳನ್ನು ತಯಾರಿಸಿ ಕರಕುಶಲಕರ್ಮಿಗಳನ್ನೂ ಆರ್ಥಿಕವಾಗಿ ಸಬಲರನ್ನಾಗಿಸಬಹುದಾಗಿದೆ.

Tags:
error: Content is protected !!