Mysore
15
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಕನ್ನಡ ಚಿತ್ರೋದ್ಯಮ: ಅದ್ಧೂರಿ ಚಿತ್ರಗಳು, ವರ್ಚಸ್ವೀ ತಾರೆಯರು, ಗಲ್ಲಾ ಪೆಟ್ಟಿಗೆ ಗಳಿಕೆ

ಬಾ.ನಾ.ಸುಬ್ರಹ್ಮಣ್ಯ 

೨೦೨೫. ಮೊದಲ ಮೂರು ತಿಂಗಳು ಕಳೆದಿದೆ. ೭೫ ಕನ್ನಡ ಚಿತ್ರಗಳು ತೆರೆ ಕಂಡಿವೆ. ಗನ್ಸ್ -ರೋಸಸ್‌ನಿಂದ ಬ್ಯಾಡ್‌ವರೆಗೆ. ಅದರಲ್ಲಿ ಮೊನ್ನೆ ಮೊನ್ನೆ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದ ತಾಯಿ ಕಸ್ತೂರ್ ಗಾಂಧಿ ಕೂಡ ಸೇರಿದೆ. ತೆರೆಕಂಡ ಈ ಚಿತ್ರಗಳಲ್ಲಿ ಬೆರಳೆಣಿಕೆಯ ಚಿತ್ರಗಳು ಪರವಾಗಿಲ್ಲ ಎನ್ನಿಸಿಕೊಂಡಿವೆ. ಗಳಿಕೆಯಲ್ಲಲ್ಲ. ಮುಂದಿನ ಸಾಲಿನ ವರ್ಚಸ್ವೀ ತಾರೆಯರ ಚಿತ್ರಗಳ ನಿರೀಕ್ಷೆಯಲ್ಲಿದೆ ಉದ್ಯಮ. ಹೆಸರಾಂತ ನಿರ್ದೇಶಕರ ಚಿತ್ರವೂ ನಿರೀಕ್ಷೆಯ ಗಳಿಕೆ ಮಾಡುವಲ್ಲಿ ಸೋಲುತ್ತಿದೆ ಎನ್ನುವ ಮಾತೂ ಕೇಳಿಬರುತ್ತಿದೆ. ಈ ನಡುವೆ, ತೆರೆಕಂಡ ಚಿತ್ರವೊಂದನ್ನು ಹಿಂದಕ್ಕೆ ತೆಗೆದುಕೊಂಡ ಸುದ್ದಿ. ಪ್ರೇಕ್ಷಕ ಇನ್ನು ಹೆಚ್ಚು ನಿರೀಕ್ಷೆ ಮಾಡಿದ್ದ ಕಾರಣ, ಚಿತ್ರದ ಕೆಲವೊಂದು ಭಾಗಗಳನ್ನು ಬದಲಾಯಿಸಲು ಹಿಂತೆಗೆದುಕೊಂಡದ್ದಾಗಿ ಚಿತ್ರತಂಡದ ಅಂಬೋಣ.

ಚಿತ್ರ ಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎನ್ನುವ ವಾದ ಒಂದೆಡೆ. ನಾವು ಒಳ್ಳೆಯ ಚಿತ್ರಗಳನ್ನು ಕೊಡುತ್ತಿಲ್ಲ ಎನ್ನುವ ಆರೋಪ ಇನ್ನೊಂದೆಡೆ. ಸಂತೆಗೆ ಮೂರು ಮೊಳ ಸುತ್ತುವ ವರಸೆಯ ಕುರಿತ ಮಾತು ಮತ್ತೊಂದೆಡೆ. ಸರ್ಕಾರದತ್ತ ಕೈಚಾಚಿದವರೊಂದು ಕಡೆ. ತಮ್ಮ ಪಾಡಿಗೆ ತಾವು ಚಿತ್ರ ಗಳನ್ನು ನಿರ್ಮಿಸುತ್ತಿರುವವರು ಮತ್ತೊಂದೆಡೆ. ಇವೆಲ್ಲವೂ ಹೌದು ಎನ್ನುವವರೂ ಇದ್ದಾರೆ.

ಹಿಂದಿನ ವಾರ ಯೋಗರಾಜ ಭಟ್ಟರ ‘ಮನದಕಡಲು’ ಚಿತ್ರದ ಟ್ರೈಲರ್ ಬಿಡುಗಡೆಗೆ ಯಶ್ ಅತಿಥಿಯಾಗಿ ಬಂದಿದ್ದರು. ತಮಗೆ ಬೆಳ್ಳಿತೆರೆಯಲ್ಲಿ ನಟಿಸಲು ಮೊದಲ ಅವಕಾಶಕೊಟ್ಟ ನಿರ್ಮಾಪಕ ಇ. ಕೃಷ್ಣಪ್ಪ ಅವರಿಗಾಗಿ ತಾವು ಬಂದಿದ್ದನ್ನು ಅವರು ಹೇಳಿದರು; ಅಷ್ಟೇ ಅಲ್ಲ ತಾವು ಬಂದ ಕಾರಣದಿಂದ ಚಿತ್ರ ಗೆಲ್ಲುತ್ತದೆ ಎಂದೇನಿಲ್ಲ, ಚಿತ್ರವನ್ನು ಪ್ರೇಕ್ಷಕರು ಮೆಚ್ಚಿದರೆ ಬಂದೇ ಬರುತ್ತಾರೆ ಎಂದ ಅವರ ಮಾತು ಎಲ್ಲಕಾಲಕ್ಕೂ ಅನ್ವಯವಾಗುತ್ತದೆ. ಅದ್ಧೂರಿ ವೆಚ್ಚದ ಚಿತ್ರಗಳ ಬಿಡುಗಡೆಯ ಪೂರ್ವದಲ್ಲಿ ಪ್ರಚಾರಕ್ಕಾಗಿ ಜನಪ್ರಿಯ ನಟರನ್ನು, ಸೆಲೆಬ್ರಿಟಿಗಳನ್ನು ಕರೆಸುವುದು ಈಗ ರೂಢಿಯಾಗಿ ಬಿಟ್ಟಿದೆ. ಇನ್ನು ಹಾಡುಗಳು, ಟ್ರೈಲರ್‌ಗಳನ್ನು ಎಷ್ಟುಮಂದಿ ನೋಡಿದ್ದಾರೆ ಎನ್ನುವುದರ ಮೇಲೆ ತಮ್ಮ ಚಿತ್ರಗಳು ಗೆಲ್ಲುತ್ತವೆ ಎಂದು ಲೆಕ್ಕಾಚಾರ ಹಾಕುವ ಮಂದಿಗೇನೂ ಕಡಿಮೆ ಇಲ್ಲ. ಕಳೆದ ವರ್ಷ ತೆರೆಕಂಡ, ಅತಿ ಹೆಚ್ಚು ದಿನ ಚಿತ್ರೀಕರಣ ಆದ, ಅತಿ ಹೆಚ್ಚು ನಿರ್ಮಾಣ ವೆಚ್ಚ ಆಗಿದ್ದ ಚಿತ್ರವೊಂದು ಗಲ್ಲಾಪೆಟ್ಟಿಗೆಯಲ್ಲಿ ಇನ್ನಿಲ್ಲದಂತೆ ಮುಗ್ಗರಿಸಿದ್ದು ಎಲ್ಲರಿಗೂ ಗೊತ್ತು.

ಸಾಮಾಜಿಕ ತಾಣಗಳು, ನವ ಮಾಧ್ಯಮಗಳು ತಮ್ಮ ಚಿತ್ರಗಳನ್ನು ಗೆಲ್ಲಿಸುತ್ತವೆ ಎನ್ನುವವರ ಸಂಖ್ಯೆ ಹೆಚ್ಚತೊಡಗಿದೆ. ಸ್ವಯಂ ಪ್ರದರ್ಶನ ಬಯಸುವ ಮಂದಿಗೆ ಇದು ಅಪ್ಯಾಯಮಾನ ಕೂಡ. ಇತ್ತೀಚೆಗೆ ಚಲನ ಚಿತ್ರಗಳನ್ನು ನೋಡುವವರ ಸಂಖ್ಯೆ ಇಳಿಮುಖವಾಗಿದೆ ಎನ್ನುವುದೇನೋ ಹೌದು. ಅದು ಇಂದಿನ ಮಾತಲ್ಲ. ಮೂರ್ಖರ ಪೆಟ್ಟಿಗೆ ಎಂದೇ ಜನಪ್ರಿಯವಾದ ಟಿವಿ ನಡುಮನೆಗೆ ಬರುತ್ತಲೇ ಸಿನಿಮಾ ನೋಡಲು ಬರುತ್ತಿದ್ದ ಬಹುದೊಡ್ಡ ವರ್ಗವೊಂದು ಅದರತ್ತ ಹೊರಳಿತು. ದೈನಿಕ ಧಾರಾವಾಹಿಗಳು ಅದಕ್ಕೆ ಪೂರಕವಾದವು. ವಾರಾಂತ್ಯದಲ್ಲಿ ಪ್ರಸಾರವಾಗುವ ರಿಯಾಲಿಟಿ ಕಾರ್ಯಕ್ರಮಗಳು ಕೂಡ ಸಿನಿಮಾ ಗಳಿಕೆಗೆ ಎರವಾದವು.

ಗಮನಿಸಿ. ಕಿರುತೆರೆಯ ಆರಂಭದ ದಿನಗಳು. ಟಿವಿ ಸಿನಿಮಾ ಕ್ಷೇತ್ರಕ್ಕೆ ಅಪಾಯಕಾರಿ ಎಂದವರಿದ್ದರು. ಜನಪ್ರಿಯನಟರು, ಗಲ್ಲಾಪೆಟ್ಟಿಗೆಯ ಗ್ಯಾರಂಟಿ ಮಂದಿ, ಕಿರುತೆರೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಕೂಡದು ಎಂದು ಉದ್ಯಮ ಹೇಳಿತ್ತು. ಕನ್ನಡದಲ್ಲಿ ಮಾತ್ರವಲ್ಲ, ಇದು ಇತರ ಭಾಷಾ ಚಿತ್ರರಂಗಗಳಲ್ಲೂ ಇತ್ತು. ನೆರೆಯ ಕೇರಳದಲ್ಲಿ ಕಟ್ಟುನಿಟ್ಟಾಗಿ ಇದನ್ನು ಜಾರಿಗೆ ತಂದದ್ದೂ ಆಗಿತ್ತು. ಜನಪ್ರಿಯ ಹಾಸ್ಯಕಲಾವಿದರೊಬ್ಬರು ಧಾರಾವಾಹಿಯೊಂದರಲ್ಲಿ ನಟಿಸಿದರೆಂದು, ಅವರಿಗೆ ಒಂದು ವರ್ಷ ಕಾಲ ಚಲನಚಿತ್ರದಲ್ಲಿ ನಟಿಸಲು ಅವಕಾಶಕೊಟ್ಟಿರಲಿಲ್ಲ. ಕೇರಳದಲ್ಲಿ ಇರುವ ಎಲ್ಲ ಸಂಘಟನೆಗಳೂ ಸಮರ್ಥವಾಗಿ, ಉದ್ಯಮದ ಬೆಳವಣಿಗೆಗೆ ಪೂರಕ ಕೆಲಸಮಾಡುತ್ತಿವೆ. ಅಲ್ಲಿನ ಕಲಾವಿದರ ಸಂಘವಾಗಲಿ, ವಾಣಿಜ್ಯ ಮಂಡಳಿಯಾಗಲಿ, ನಿರ್ಮಾಪಕರ ಸಂಘವಾಗಲಿ, ಕಾರ್ಮಿಕರ ಸಂಘಟನೆಯಾಗಲಿ ಚಿತ್ರೋದ್ಯಮದ ವಿಷಯದಲ್ಲಿ ವಿರುದ್ಧ ನಿಲುವುಗಳನ್ನು ತಾಳಿದ ಉದಾಹರಣೆಗಳಿಲ್ಲ. ತಾತ್ವಿಕ ಭಿನ್ನಾಭಿಪ್ರಾಯಗಳಿರಬಹುದು. ವರ್ಷದ ಹಿಂದೆ ಹೊಸಮಲ್ಟಿಪ್ಲೆಕ್ಸ್ ಒಂದರ ಉದ್ಘಾಟನೆಯ ವೇಳೆ, ಬಾಡಿಗೆಯ ವಿಷಯದಲ್ಲಿ ಎದ್ದ ವಿವಾದ, ಮುಂದೆ ಆ ಮಲ್ಟಿಪ್ಲೆಕ್ಸ್ ಗುಂಪಿಗೆ ಮಲಯಾಳಂ ಚಿತ್ರಗಳನ್ನು ನೀಡದೆ ಇರುವ ನಿರ್ಧಾರದ ತನಕ ಬಂದಾಗ ಎಚ್ಚೆತ್ತ ಆ ಪ್ರದರ್ಶಕವಲಯ ರಾಜಿ ಮಾಡಿಕೊಳ್ಳಬೇಕಾಯಿತು. ಅಂತಹ ನಿಷ್ಠೆ ಇಲ್ಲಿ ಕಾಣುವುದು ಅಪರೂಪ.

ಕಿರು ತೆರೆಯಿಂದ ದೂರವಿರುವ ಮಾತು ದೂರವೇ ಉಳಿಯಿತು. ಹಿಂದಿಯ ಹೆಸರಾಂತ ನಟ ಅಮಿತಾಭ್ ಬಚ್ಚನ್, ‘ಕೌನ್ ಬನೇಗಾ ಕರೋಡ್ ಪತಿ’ ಮೂಲಕ ಕಿರುತೆರೆಗೆ ಕಾಲಿಟ್ಟದ್ದೇ ಇಟ್ಟದ್ದು, ಅದರ ಪರಿಣಾಮ ಎಲ್ಲಕಡೆ ಆಯಿತು. ಹೊಸ ಸಹಸ್ರಮಾನದ ಆರಂಭದಲ್ಲಿ ತಮ್ಮ ಸಂಸ್ಥೆ ಎಬಿಸಿಎಲ್ ನಷ್ಟ, ನಂತರ ಮನೆ ‘ಪ್ರತೀಕ್ಷ’ ಹರಾಜಿಗೆ ಬಂದದ್ದೇ ಮೊದಲ್ಗೊಂಡು ಆರ್ಥಿಕವಾಗಿ ಕುಗ್ಗಿದ್ದ ಅಮಿತಾಭ್ ಅವರನ್ನು ಕಿರುತೆರೆಯ ಈ ಕಾರ್ಯ ಕ್ರಮದ ನಂತರದ ದಿನ ಗಳಲ್ಲಿ ಮತ್ತೆ ಮೇಲೆತ್ತಿದವು.

ಕನ್ನಡದಲ್ಲೀಗ ಬಹುತೇಕ ಜನಪ್ರಿಯ ನಟರು ಒಂದಲ್ಲ ಒಂದು ರಿಯಾಲಿಟಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆ ಅವರಿಗೆ ಆದಾಯದ ಇನ್ನೊಂದು ಮೂಲವೂ ಹೌದು. ಚಿತ್ರೋದ್ಯಮ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರ ಪೈಕಿ ಕಿರುತೆರೆ ಮಂದಿ ಸಂತೃಪ್ತರು ಎನ್ನುವುದು ಅಲ್ಲಿ ಕೆಲಸ ಮಾಡುವವರ ಅನುಭವದ ಮಾತು. ದುಡಿಯುವ ಮಂದಿಗೆ ಸಂಬಳಕ್ಕೆ ತತ್ವಾರ ಇದ್ದಂತಿಲ್ಲ. ಬೆಳ್ಳಿತೆರೆಯಲ್ಲಿ ಹಾಗಿಲ್ಲ ಎನ್ನಲಾಗುತ್ತಿದೆ. ಅದೇನಿದ್ದರೂ ತಾರಾ ವರ್ಚಸ್ಸಿನ ಬೆನ್ನುಬಿದ್ದ ಮಂದಿಯೇ ಹೆಚ್ಚು. ಕಿರುತೆರೆಯ ಮಂದಿ ಈಗ ಇನ್ನೊಂದು ಅಪಾಯದ ಅಂಚಿನಲ್ಲಿರುವ ಮಾತು ಕೇಳಿ ಬರುತ್ತಿದೆ. ಅದೆಂದರೆ ಪರಭಾಷೆಯ ಸರಣಿಗಳು ಕನ್ನಡ ಕಿರುತೆರೆಯನ್ನು ಆವರಿಸತೊಡಗಿದ ಸುದ್ದಿ. ಕನ್ನಡದ ಮನರಂಜನಾ ವಾಹಿನಿಗಳಲ್ಲಿ ಪ್ರಸಾರ ವಾಗುತ್ತಿರುವ ದೈನಿಕ ಧಾರಾವಾಹಿಗಳಲ್ಲಿ ಶೇ.೫೦ಕ್ಕಿಂತ ಹೆಚ್ಚು ಡಬ್ ಆಗಿರುವ ಸರಣಿಗಳಿವೆ ಎನ್ನು ತ್ತಿವೆ ಕಿರುತೆರೆ ಮೂಲಗಳು. ಇದು ಅಲ್ಲಿನ ಮಂದಿ ಯನ್ನು ಆತಂಕಕ್ಕೆ ತಳ್ಳಿದರೆ ಆಶ್ಚರ್ಯವಿಲ್ಲ.

ಕನ್ನಡದ ಬಹುತೇಕ ಹಿರಿಯನಿರ್ಮಾಣಸಂಸ್ಥೆಗಳು, ಹಂಚಿಕಾ ಸಂಸ್ಥೆಗಳು ಈಗ ಕ್ರಿಯಾಶೀಲವಾಗಿಲ್ಲ. ಬಹುತೇಕ ಹೊಸಬರ ಕಾರುಬಾರು. ಹೊಂಬಾಳೆಯಂತಹ ಸಂಸ್ಥೆ ‘ಕೆಜಿಎಫ್’ಗಳೆರಡು ಮತ್ತು‘ಕಾಂತಾರ’ ಚಿತ್ರಗಳ ಮೂಲಕ ಕನ್ನಡ ಚಿತ್ರೋದ್ಯಮದತ್ತ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿತು. ಇದೀಗ ಕನ್ನಡದಲ್ಲಿ ‘ಕಾಂತಾರ ೧’ ನಿರ್ಮಿಸುತ್ತಿದೆ. ಪರ ಭಾಷೆಗಳಲ್ಲೂ ಚಿತ್ರಗಳನ್ನು ನಿರ್ಮಿಸುತ್ತಿದೆ. ಕೆವಿಎನ್ ಸಂಸ್ಥೆ, ಪರಂವಃದಂತಹ ಸಂಸ್ಥೆಗಳಿವೆ. ರಮೇಶ್ ರೆಡ್ಡಿಯವರಂತಹ ನಿರ್ಮಾಪಕ ರಿದ್ದಾರೆ. ಈ ವರ್ಷ ‘ಕೆಡಿ’, ‘೪೫’, ‘ಕಾಂತಾರ’ ಸೇರಿದಂತೆ ಮೂರೋ ನಾಲ್ಕೋ ಅದ್ಧೂರಿ ವೆಚ್ಚದ ಚಿತ್ರಗಳು ಬರಬಹುದು. ಅವು ಅಖಿಲ ಭಾರತ ವ್ಯಾಪ್ತಿಯದೋ, ವಿಶ್ವಾದ್ಯಂತ ಬಿಡುಗಡೆಯ ಚಿತ್ರಗಳೋ ಬಿಡುಗಡೆಯ ವೇಳೆ ತಿಳಿಯಬಹುದು. ಅದಾಗಲೇ ತೆರೆಕಂಡ ೭೫ ಕನ್ನಡಚಿತ್ರಗಳಲ್ಲಿಹಾಕಿದ ಬಂಡವಾಳವನ್ನು

ಎಷ್ಟು ಚಿತ್ರಗಳು ವಾಪಸು ಪಡೆದವೋ ಗೊತ್ತಿಲ್ಲ. ಆದರೆ ೨೫ ದಿನ, ೫೦ ದಿನಪ್ರದರ್ಶನ ಕಂಡದ್ದಾಗಿ ಹೇಳಿದ ಚಿತ್ರಗಳಿದ್ದವು. ಚಿತ್ರ ನಿರ್ಮಾಣ ವೆಚ್ಚಕ್ಕಿಂತ ಅದರ ಬಿಡುಗಡೆಯ ವೇಳೆ ಪ್ರಚಾರಕ್ಕಾಗಿ ಹೂಡಬೇಕಾದ ಮೊತ್ತವೇ ಹೆಚ್ಚು ಎನ್ನುವ ಮಂದಿಯೂ ಇಲ್ಲಿದ್ದಾರೆ. ಅವರಲ್ಲಿ ಕೆಲವರು, ಸಿನಿಮಾದ ಪ್ರಾಥಮಿಕ ತಿಳಿವಳಿಕೆಯೂ ಇಲ್ಲದ, ಯಾರದೋ ಮಾತು ಕೇಳಿ ಇಲ್ಲಿ ಬಂದವರಾಗಿರುತ್ತಾರೆ. ಆಡಿಯೋ ಹಕ್ಕುಗಳು, ಟಿವಿಪ್ರಸಾರದ ರಾಯಧನ, ಒಟಿಟಿ, ಸಹಾಯಧನ, ಇತರ ಡಿಜಿಟಲ್ ಹಕ್ಕುಗಳ ಮೂಲಕ ಹಾಕಿದ ಬಂಡವಾಳದ ಮೂರು ನಾಲ್ಕು ಪಟ್ಟು ಲಾಭ ಮಾಡಬಹುದು ಎಂದು ಅಂಗೈಯಲ್ಲಿ ಆಕಾಶ ತೋರಿಸಿದವರ ಮಾತಿಗೆ ಮರುಳಾಗಿ ಬಂದವರಾಗಿರುತ್ತಾರೆ. ಸ್ವಯಂ ಸಿನಿಮಾ ಆಕರ್ಷಣೆ ಯಿಂದ, ಪ್ರಚಾರದ ಆಸೆಯಿಂದ, ಶೋಕಿಗಾಗಿ ಈ ಕ್ಷೇತ್ರಕ್ಕೆ ಬರುವವರ ಸಂಖ್ಯೆಯೂ ಕಡಿಮೆ ಏನಲ್ಲ. ಹಾಗೆ ನೋಡಿದರೆ ಯಾವುದೇ ಚಿತ್ರೋದ್ಯಮದ ಹಾದಿಯನ್ನು ಗಮನಿಸಿದರೆ, ಅಲ್ಲಿ ಒಂದೋ ಎರಡೋ ಚಿತ್ರಗಳನ್ನು ನಿರ್ಮಿಸಿ, ಸೋತು, ಭ್ರಮನಿರಸನವಾಗಿ ವಾಪಸ್ ಆಗುವ ನಿರ್ಮಾಪಕರದೇ ಮೇಲುಗೈ ಎನ್ನುವುದು ವೇದ್ಯವಾಗುತ್ತದೆ. ಚಿತ್ರವೊಂದುಗೆದ್ದರೆ, ಅದನ್ನೇ ಗೆಲ್ಲುವ ಸೂತ್ರ ಎಂದುಕೊಂಡು ಅಂತಹದೇ ಚಿತ್ರಗಳನ್ನು ನಿರ್ಮಿಸುವವರಿದ್ದಾರೆ. ನಿವೇಶನೋದ್ಯಮಕ್ಕಿಂತ ಚಿತ್ರೋದ್ಯಮ ಲಾಭದಾಯಕ ಎಂದುಕೊಂಡು ಬರುವವರೂ ಇದ್ದಾರೆ.

ಎಲ್ಲ ಭಾರತೀಯ ಭಾಷಾ ಚಿತ್ರೋದ್ಯಮಗಳೂ ಕವಲುದಾರಿಯಲ್ಲಿವೆ. ಡಿಜಿಟಲ್ ಲೋಕ ಮತ್ತು ಕೃತಕ ಬುದ್ಧಿಮತ್ತೆ, ಈ ಮಾಧ್ಯಮವನ್ನು ಮುಂದಿನ ದಿನಗಳಲ್ಲಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿವೆ. ಉದ್ಯಮವಾಗಿ ಇದನ್ನು ಲಾಭದಾಯಕವಾಗಿ ಕಾಣುವವರದೇ ಕಾರುಬಾರು ಇರುತ್ತದೆ. ಇಲ್ಲಿನ ನೆಲ, ಜಲ, ಸಂಸ್ಕೃತಿ, ಜೀವನವನ್ನುಬಿಂಬಿಸುವ ಕಥಾವಸ್ತುಗಳುಅವುಗಳಿಗೆ ಹಾಸು ಹೊಕ್ಕಾಗಬೇಕು. ಸಂಬಂಧಪಟ್ಟವರ ಗಮನಹರಿಯಬೇಕು.ಚಲನಚಿತ್ರ ಡಿಜಿಟಲ್‌ಗೆ ಹೊರಳಿದ ನಂತರ, ವಿಜ್ಞಾನ, ವೈದ್ಯಕೀಯ ಮುಂತಾದ ವಿಷಯಗಳ ಹಾಗೆ ಚಲನಚಿತ್ರ ಶಿಕ್ಷಣವೂ ವ್ಯಾಪಕವಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಚಿತ್ರೋದ್ಯಮಕ್ಕೆ ವರವಾಗಲಿದೆ. ರಾಜ್ಯದಲ್ಲಿ ಹೊಸ ಚಲನ ಚಿತ್ರ ನೀತಿಯ ಅಗತ್ಯಇದೆ. ಸಮಗ್ರ ಚಲನ ಚಿತ್ರನೀತಿ. ಮುಂದಿನ ಐದು ವರ್ಷಗಳಿಗಾಗಿ ಎಂದು, ೨೦೧೧ರಲ್ಲಿ ಬಂದ ಚಲನಚಿತ್ರ ನೀತಿಯ ನಂತರ ಆ ನಿಟ್ಟಿನಲ್ಲಿ ಪ್ರಯತ್ನಗಳಾದರೂ, ಅದು ಜಾರಿಗೆ ಬಂದಿಲ್ಲ.

” ಎಲ್ಲ ಭಾರತೀಯ ಭಾಷಾ ಚಿತ್ರೋದ್ಯಮಗಳೂ ಕವಲುದಾರಿಯಲ್ಲಿವೆ. ಡಿಜಿಟಲ್ ಲೋಕ ಮತ್ತು ಕೃತಕ ಬುದ್ಧಿ ಮತ್ತೆ, ಈ ಮಾಧ್ಯಮವನ್ನು ಮುಂದಿನ ದಿನಗಳಲ್ಲಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿವೆ. ಉದ್ಯಮವಾಗಿ ಇದನ್ನು ಲಾಭದಾಯಕವಾಗಿ ಕಾಣುವವರದ್ದೇ ಕಾರುಬಾರು ಇರುತ್ತದೆ. ಇಲ್ಲಿನ ನೆಲ, ಜಲ, ಸಂಸ್ಕೃತಿ, ಜೀವನವನ್ನು ಬಿಂಬಿಸುವ ಕಥಾ ವಸ್ತುಗಳು ಅವುಗಳಿಗೆ ಹಾಸುಹೊಕ್ಕಾಗಬೇಕು.”

Tags:
error: Content is protected !!