ಪಂಜುಗಂಗೊಳ್ಳಿ
ನಸೀಮಾ ಖಾಟೂನ್ ಬಿಹಾರದ ಮುಝಾಫರ್‌ಪುರದ ಚತುರ್ಭುಜ ಆಸ್ಥಾನ ಎಂಬ ರೆಡ್‌ಲೈಟ್ ಪ್ರದೇಶದಲ್ಲಿ ಹುಟ್ಟಿ ಬೆಳೆದ ಒಬ್ಬ ವೇಶ್ಯೆಯ ಮಗಳು. ಪೊಲೀಸರು ಮಧ್ಯರಾತ್ರಿ ಹೊತ್ತು ವೇಶ್ಯಾವಾಟಿಕೆಯ ಅಡ್ಡೆಗಳ ಮೇಲೆ ದಾಳಿ ಮಾಡಿದಾಗ ಅಲ್ಲಿರುವ ದೊಡ್ಡವರು ಗೋಡೆಗಳನ್ನು ಹಾರಿ ಓಡಿ ಹೋಗುತ್ತಿದ್ದರು. ನಸೀಮಾಳ ಅಜ್ಜಿ ಪೊಲೀಸರನ್ನು ದಾರಿ ತಪ್ಪಿಸಲು ಅಲ್ಲಿರುವ ಚಿಕ್ಕ ಮಕ್ಕಳನ್ನೆಲ್ಲ ಒಂದೆಡೆ ಒಟ್ಟಿಗೆ ಕುಳ್ಳಿರಿಸಿ, ಜೋರಾಗಿ ಪುಸ್ತಕಗಳನ್ನು ಓದಲು ಹೇಳುತ್ತಿದ್ದಳು. ಓದುವ ಮಕ್ಕಳನ್ನು ನೋಡಿ ಪೊಲೀಸರು ಅಲ್ಲಿ ಶಾಲೆಗೆ ಹೋಗುವ ಮಕ್ಕಳು ವಾಸಿಸುತ್ತಿವೆ ಎಂದು ತಿಳಿದು ಹೆಚ್ಚು ತೊಂದರೆ ಕೊಡದೆ ವಾಪಸ್ ಹೋಗುತ್ತಿದ್ದರು. ಆ ದೃಶ್ಯವನ್ನು ನೋಡಿದಾಗಲೆಲ್ಲ ಬಾಲಕಿ ನಸೀಮಾಳಿಗೆ ತಮ್ಮ ಅಮ್ಮ, ಅಕ್ಕಂದಿರು ಪೊಲೀಸರ ಕಣ್ಣು ತಪ್ಪಿಸಿ ಅಡಗಿಕೊಳ್ಳುವಂತಹ ಅಥವಾ ಅವರ ಕೈಯಿಂದ ತಪ್ಪಿಸಿಕೊಳ್ಳಬೇಕಾದಂತಹ ಅಪರಾಧ ಏನು ಮಾಡುತ್ತಿದ್ದರು? ಎಂದು ಆಶ್ಚರ್ಯ ಪಡುತ್ತಿದ್ದಳು.
ಮುಂದೆ, ನಸೀಮಾ ತುಸು ದೊಡ್ಡವಳಾಗಿ ನಿಜಕ್ಕೂ ಶಾಲೆಗೆ ಹೋಗಲು ಶುರು ಮಾಡಿದ ನಂತರ ಅವಳಿಗೆ ತನ್ನ ಅಸ್ತಿತ್ವದ ಬಗ್ಗೆ ಹಾಗೂ ತಾನು ಎಲ್ಲಿ ವಾಸಿಸುತ್ತಿದ್ದೇನೆ ಎಂಬುದರ ಬಗ್ಗೆ ಅರಿವು ಮೂಡತೊಡಗಿತು. ಆದರೆ, ಅವಳ ಅಜ್ಜಿ ಮತ್ತು ಅಮ್ಮ ‘ಯಾರಾದರೂ ನೀನೆಲ್ಲಿ ವಾಸಿಸುತ್ತೀ?’ ಎಂದು ಕೇಳಿದರೆ ಚತುರ್ಭುಜ ಆಸ್ಥಾನದಲ್ಲಿ ಎಂದು ಹೇಳಬಾರದೆಂದು ಆಕೆಗೆ ಹೇಳುತ್ತಿದ್ದರು. ಬಾಲಕಿ ನಸೀಮಾ, ನನ್ನನ್ನು ನೀನು ಎಲ್ಲಿ ವಾಸಿಸುತ್ತೀಯಾ ಎಂದು ಕೇಳಿದಾಗ ನಿಜ ಹೇಳಬಾರದೇಕೆ?’ ಎಂದು ತಂದೆಯನ್ನು ಕೇಳಿದಾಗ ಆತ ಏನೂ ಉತ್ತರ ಹೇಳದೆ ಸುಮ್ಮನೆ ಬಾಯಿ ಮುಚ್ಚು ಎಂದು ಹೇಳುತ್ತಿದ್ದನು. ನಸೀಮಾ ತನ್ನ ಸಹಪಾಠಿ ಶಾಲಾ ಮಕ್ಕಳ ಜೊತೆ ಶಾಲೆಗೆ ಹೋಗಿ ಬರುವಾಗೆಲ್ಲ ಅವಳ ಮನೆಯ ಗಲ್ಲಿ ಸಮೀಪಿಸುತ್ತಿದ್ದಂತೆ ಆ ಮಕ್ಕಳು ದೂರ ಹಾಯಿಸಿ ನಡೆದು ಹೋಗುತ್ತಿದ್ದರು. ನಸೀಮಾ ಒಬ್ಬಳೇ ಆ ದಾರಿಯಲ್ಲಿ ನಡೆದು ತನ್ನ ಮನೆಗೆ ಬರುತ್ತಿದ್ದಳು. ಚತುರ್ಭುಜ ಆಸ್ಥಾನ ಎಂಬುದು ಹತ್ತಿರದಲ್ಲಿರುವ ವಿಷ್ಣು ಮಂದಿರದಿಂದ ಆ ಪ್ರದೇಶಕ್ಕೆ ಬಂದ ಹೆಸರಾಗಿದ್ದರೂ ಅದಕ್ಕೆ ಕುಖ್ಯಾತಿ ಅಂಟಿಕೊಂಡಿತ್ತು.
೧೯೯೫ರಲ್ಲಿ, ಆ ಪ್ರದೇಶಕ್ಕೆ ಜಿಲ್ಲಾಽಕಾರಿಯಾಗಿ ಬಂದ ರಾಜಬಾಲಾ ವರ್ಮಾ ಎಂಬವರು ವೇಶ್ಯೆಯರಿಗೆ ಸಹಾಯ ಮಾಡುವ ಸಲುವಾಗಿ ಹೊಲಿಗೆ, ಎಂಬ್ರಾಯಡರಿ ಮೊದಲಾದವುಗಳ ತರಬೇತಿಯ ಜೊತೆ ಕೆಲವು ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರು. ತನ್ನ ತಾಯಿಯಿಂದ ಈ ಮೊದಲೇ ಇವುಗಳನ್ನು ಕಲಿತ್ತಿದ್ದ ನಸೀಮಾ ಈ ತರಬೇತಿ ಕೇಂದ್ರಗಳಲ್ಲಿ ಇನ್ನೂ ಹೆಚ್ಚಿನ ಪ್ರಾವೀಣ್ಯತೆಯನ್ನು ಪಡೆದಳು. ಆದರೆ, ಅವಳಿಗೆ ಅಲ್ಲಿಯೂ ಯಾರಾದರೂ ತನ್ನ ಇಹಪರಗಳನ್ನು ವಿಚಾರಿಸಿದರೆ ಏನು ಉತ್ತರ ಹೇಳುವುದು ಎಂಬ ಭಯ ಕಾಡುತ್ತಿದ್ದುದರಿಂದ ಯಾರೊಂದಿಗೂ ಹೆಚ್ಚು ಮಾತಾಡುತ್ತಿರಲಿಲ್ಲ.
ನಸೀಮಾಳಿಗೆ ೧೩ ವರ್ಷ ಪ್ರಾಯವಾಗಿದ್ದಾಗ ಅವಳನ್ನು ಶಾಲೆಯಿಂದ ಬಲವಂತವಾಗಿ ಬಿಡಿಸಿ, ಸೀತಾಮಾರಿ ಎಂಬಲ್ಲಿ ವಾಸಿಸುತ್ತಿದ್ದ ಅವಳ ಅಜ್ಜಿಯ ಮನೆಗೆ ಕಳುಹಿಸಿಕೊಡಲಾಯಿತು. ಆದರೆ, ಆ ಹೊತ್ತಿಗಾಗಲೇ ನಸೀಮಾ ತನ್ನ ಹೆತ್ತವರಿಗಿಂತ ಭಿನ್ನವಾದ ಹಾಗೂ ಪ್ರತ್ಯೇಕವಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ನಿರ್ಧಾರ ಮಾಡಿದ್ದಳು. ಅವಳು ಅದು ಹೇಗೋ, ತನ್ನಂತಹ ಹೆಣ್ಣು ಮಕ್ಕಳಿಗೆ ಸಹಾಯ ಮಾಡುವ ‘ಅಽತಿ’ ಎಂಬ ಒಂದು ಸರ್ಕಾರೇತರ ಸಂಸ್ಥೆಯ ಬಗ್ಗೆ ತಿಳಿದು, ಅದರ ಸಂಪರ್ಕ ಪಡೆಯಲು ಯೋಜನೆ ರೂಪಿಸಿದಳು. ಅದರಂತೆ, ಅವಳು ತನ್ನನ್ನು ಕೋಣೆಯಲ್ಲಿ ಬಂದಿಯಾಗಿರಿಸಿಕೊಂಡು, ತನ್ನನ್ನುಆ ಸಂಸ್ಥೆಗೆ ಕರೆದುಕೊಂಡು ಹೋದರೆ ಮಾತ್ರ ಹೊರಗೆ ಬರುವುದಾಗಿ ಹಟ ಮಾಡುವವಳಂತೆ ನಾಟಕವಾಡಿದಳು. ಅವಳ ತಂದೆ ಅವಳ ಹಟಕ್ಕೆ ಮಣಿದು, ಆ ಸಂಸ್ಥೆಯನ್ನು ಸಂಪರ್ಕಿಸಿದನು.
ಮರುದಿನವೇ ಅಧಿತಿ ಸಂಸ್ಥೆಯ ಕೆಲವು ಸದಸ್ಯರು ನಸೀಮಾಳ ಮನೆಗೆ ಬಂದರು. ಅವರು ಅವಳ ತಂದೆಯನ್ನು ಒಪ್ಪಿಸಿ ನಸೀಮಾಳನ್ನು ತಮ್ಮೊಂದಿಗೆ ಕರೆದೊಯ್ದರು. ಕೆಲವು ವರ್ಷ ಅಽತಿ ಸಂಸ್ಥೆಯಲ್ಲಿ ತರಬೇತಿ ಪಡೆದ ನಸೀಮಾ ಕಾನೂನು, ಮಕ್ಕಳ ಹಕ್ಕು ಮತ್ತು ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ನೀಡುವ ರಕ್ಷಣೆ ಮೊದಲಾದವುಗಳ ಬಗ್ಗೆ ತಿಳಿದುಕೊಂಡಳು. ೨೦೦೨ರಲ್ಲಿ ನಸೀಮಾ ಸೀತಾಮಾರಿಯಿಂದ ತನ್ನ ಮನೆ ಇರುವ ಚತುರ್ಭುಜ ಆಸ್ಥಾನಕ್ಕೆ ಬಂದಾಗ ಅವಳು ತನ್ನ ಸಮುದಾಯದ ಜನರನ್ನು ನೋಡುವ ದೃಷ್ಟಿ ಕೋನವೇ ಬದಲಾಗಿತ್ತು. ಹಿಂದೆ ಪೊಲೀಸರು ದಾಳಿ ಮಾಡಿದಾಗ ಭಯದಿಂದ ಮುದುಡಿ ಅಡಗಿಕೊಳ್ಳುತ್ತಿದ್ದ ನಸೀಮಾ ಈಗ ಪೊಲೀಸರು ಹಾಗೆ ದಾಳಿ ಮಾಡಿ ಕುಟುಂಬದ ದುಡಿಯುವ ಸದಸ್ಯರಾದ ಮಹಿಳೆಯರನ್ನು ಬಂಧಿಸಿ ಕರೆದುಕೊಂಡು ಹೋಗುವಾಗ ಮನೆಯಲ್ಲಿ ಉಳಿಯುವ ಚಿಕ್ಕ ಮಕ್ಕಳ ಯೋಗಕ್ಷೇಮ ಹೇಗೆ ನಡೆಯುತ್ತದೆ? ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಳು.
ಮಾಧ್ಯಮಗಳ ವರದಿಗಾರರೂ ತಮ್ಮ ಸುದ್ದಿಯನ್ನು ಹೆಚ್ಚು ರೋಚಕಗೊಳಿಸಲು ವೇಶ್ಯೆಯರ ಮಕ್ಕಳನ್ನು ಅವರ ಮಕ್ಕಳು ಎಂದು ವರದಿ ಮಾಡದೆ ಅವರೂ ವೇಶ್ಯೆಯರು ಎಂದು ತೋರಿಸುತ್ತಿದ್ದರು. ಅದನ್ನು ನೋಡಿದ ನಸೀಮಾ ತನ್ನ ಸಮುದಾಯದ್ದೇ ಆದ ಒಂದು ಪತ್ರಿಕೆಯಿದ್ದರೆ ಜನರಿಗೆ ತನ್ನ ಸಮುದಾಯದ ವಾಸ್ತವ ಚಿತ್ರಣವನ್ನು ಕೊಡಲು ಸಾಧ್ಯ ಎಂದು ಆಲೋಚಿಸಿ, ೨೦೦೪ರಲ್ಲಿ ‘ಜುಗ್ನು (ಮಿಂಚುಳ)’ ಎಂಬ ಒಂದು ಕೈಬರಹದ ಪತ್ರಿಕೆಯನ್ನು ಪ್ರಾರಂಭಿಸಿದಳು.
ಜುಗ್ನು ಪತ್ರಿಕೆಯ ಪ್ರಪ್ರಥಮ ಸಂಚಿಕೆಯಲ್ಲಿ ‘ನಮ್ಮ ಕನಸುಗಳೇನು?’ ಎಂಬುದು ಪ್ರಧಾನ ವಿಚಾರವಾಗಿತ್ತು. ಅದಕ್ಕೆ ಉತ್ತರವಾಗಿ ವೇಶ್ಯೆಯರ ಮಕ್ಕಳು ತಮ್ಮ ಕನಸುಗಳೇನೆಂದು ಬರೆದು ಪತ್ರಿಕೆಯನ್ನು ರೂಪಿಸಿದ್ದರು. ಅದರಲ್ಲಿ ಅರೀಫ್ ಎಂಬ ಹುಡುಗ ಮುಂದೆ ತಾನೊಬ್ಬ ಪೊಲೀಸ್ ಅಧಿಕಾರಿಯಾಗುವ ಕನಸಿನ ಬಗ್ಗೆ ಬರೆದಿದ್ದನು. ಅಂದು ಆ ಮುಝಾಫರ್ ಪುರದ ಚುತುರ್ಭುಜ ಆಸ್ಥಾನದ ವೇಶ್ಯೆಯರ ಮಕ್ಕಳ ಕನಸುಗಳೊಂದಿಗೆ ಪ್ರಾರಂಭವಾದ ಜುಗ್ನು ಇಂದು ಮುಂಬೈ, ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ತಾನವನ್ನು ವ್ಯಾಪಿಸಿದೆ. ಜುಗ್ನುನಿಂದ ಪ್ರಭಾವಿತರಾದ ಮುಝಾಫರ್ ಪುರದ ಪೊಲೀಸರು ರೆಡ್‌ಲೈಟ್ ಪ್ರದೇಶದ ಮಕ್ಕಳಿಗಾಗಿ ‘ಪೊಲೀಸ್ ಪಾಠಶಾಲಾ’ ಎಂಬ ಒಂದು ಕಾರ್ಯಕ್ರಮವನ್ನು ಪ್ರಾರಂಭಿಸಿ ಆ ಮಕ್ಕಳಿಗೆ ಪಾಠ ಕಲಿಸುವುದು, ಅವರೊಂದಿಗೆ ಆಡುವುದು, ಆ ಮಕ್ಕಳಿಗೆ ಕೇಕುಗಳನ್ನು ತಂದು ಕೊಡುವುದು ಮಾಡುತ್ತಾರೆ.
ಹಾಗೆಂದು, ಚತುರ್ಭುಜ ಆಸ್ಥಾನದ ವೇಶ್ಯಾವಾಟಿಕೆ ಅಡ್ಡಗಳ ಮೇಲೆ ಪೊಲೀಸ್ ದಾಳಿಗಳು ನಡೆಯುವುದು ನಿಂತಿಲ್ಲ. ಆದರೆ, ಈಗ ಅಲ್ಲಿನ ಮಕ್ಕಳು ಪೊಲೀಸ್ ದಾಳಿಗೆ ಹೆದರಿ ಅಡಗಿ ಕೂರುವುದಿಲ್ಲ. ಬದಲಿಗೆ, ಜುಗ್ನುವಿನಿಂದ ಆತ್ಮವಿಶ್ವಾಸವನ್ನು ಬೆಳೆಸಿಕೊಂಡಿರುವ ಆ ಮಕ್ಕಳು ಪೊಲೀಸರು ಬರುತ್ತಿದ್ದಂತೆ ಅವರನ್ನು ಧೈರ್ಯವಾಗಿ ಎದುರುಗೊಳ್ಳುತ್ತಾರೆ; ಅವರನ್ನು ಮಾತಾಡಿಸುತ್ತಾರೆ; ಅವರಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಪೊಲೀಸನಾಗುವ ಗುರಿ ಹಾಕಿಕೊಂಡಿರುವ ಅರೀಫ್ ಆ ಪೊಲೀಸರೊಂದಿಗೆ ಸಹಕರಿಸುತ್ತ ಅವರ ಕಾರ್ಯವಿಧಾನಗಳನ್ನು ಹತ್ತಿರದಿಂದ ವೀಕ್ಷಿಸುತ್ತಾನೆ. ಪೊಲೀಸರೂ ಆ ಮಕ್ಕಳೊಂದಿಗೆ ಆದಷ್ಟು ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಪ್ರಾರಂಭದಲ್ಲಿ ರೆಡ್‌ಲೈಟ್ ಪ್ರದೇಶಗಳ ವೇಶ್ಯೆಯರ ಪತ್ರಿಕೆಯಾಗಿದ್ದ ಜುಗ್ನು ಇಂದು ಸಮಾಜದ ಅಂಚಿಗೆ ತಳ್ಳಲ್ಪಟ್ಟಿರುವ ಎಲ್ಲ ದುರ್ಬಲ ವರ್ಗಗಳ ದನಿಯಾಗಿದೆ. ನಸೀಮಾ ಖಾಟೂನ್ ಈಗ ಒಬ್ಬಳು ಮಾನವ ಹಕ್ಕು ಸಂರಕ್ಷಕಿ ಮತ್ತು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸರ್ಕಾರೇತರ ಸಂಸ್ಥೆಗಳ ಸಮಿತಿಯ ಸದಸ್ಯೆಯಾಗಿದ್ದಾಳೆ.
” ಮಾಧ್ಯಮಗಳ ವರದಿಗಾರರೂ ತಮ್ಮ ಸುದ್ದಿಯನ್ನು ಹೆಚ್ಚು ರೋಚಕಗೊಳಿಸಲು ವೇಶ್ಯೆಯರ ಮಕ್ಕಳನ್ನು ಅವರ ಮಕ್ಕಳು ಎಂದು ವರದಿ ಮಾಡದೆ ಅವರೂ ವೇಶ್ಯೆಯರು ಎಂದು ತೋರಿಸುತ್ತಿದ್ದರು. ಅದನ್ನು ನೋಡಿದ ನಸೀಮಾ ತನ್ನ ಸಮುದಾಯದ್ದೇ ಆದ ಒಂದು ಪತ್ರಿಕೆಯಿದ್ದರೆ ಜನರಿಗೆ ತನ್ನ ಸಮುದಾಯದ ವಾಸ್ತವ ಚಿತ್ರಣವನ್ನು ಕೊಡಲು ಸಾಧ್ಯ ಎಂದು ಆಲೋಚಿಸಿ, ೨೦೦೪ರಲ್ಲಿ ‘ಜುಗ್ನು (ಮಿಂಚುಳ)’ ಎಂಬ ಒಂದು ಕೈಬರಹದ ಪತ್ರಿಕೆಯನ್ನು ಪ್ರಾರಂಭಿಸಿದಳು.”





