ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್
ಈ ಎರಡೂ ರಾಜ್ಯಗಳ ಚುನಾವಣೆಯ ಫಲಿತಾಂಶದ ನೆರಳು ನವೆಂಬರ್‌ನಲ್ಲಿ ನಡೆಯುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆಯೇ ನೋಡಬೇಕು. ಅದರೆ ಒಡೆದು ಹೋಳಾಗಿರುವ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಎರಡು ಬಣಗಳಾಗಿರುವ ಶಿವಸೇನೆ, ಜೊತೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಹೀಗೆ ಹಲವು ಪಕ್ಷಗಳ ರಾಜಕೀಯ ಚಟುವಟಿಕೆಯ ಜೊತೆಗೆ ಚುನಾವಣೆ ಹೊಂದಾಣಿಕೆ ಪ್ರಕ್ರಿಯೆ ನಡೆಯುತ್ತಿದ್ದರೂ ಚುನಾವಣಾ ಪೂರ್ವದಲ್ಲಿ ಎಲ್ಲವೂ ಗೊಂದಲಕಾರಿಯಾಗಿ ಕಾಣುತ್ತಿರುವುದು ವಿಚಿತ್ರ ಬೆಳವಣಿಗೆ.
ಲೋಕಸಭೆ ಚುನಾವಣೆ ಮುಗಿದ ನಾಲ್ಕು ತಿಂಗಳಲ್ಲೇ ಎದುರಾಗಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತೆ ದೇಶದ ಜನರ ಚಿತ್ತ ಎತ್ತ ಸಾಗುತ್ತಿದೆ ಎನ್ನುವ ಸ್ಪಷ್ಟ ಸೂಚನೆಯನ್ನು ಕೊಡಲಿದೆಯೇ? ಇಂತಹದೊಂದು ಪ್ರಶ್ನೆ ಈಗ ರಾಷ್ಟ್ರದ ಮುಂದಿದೆ.
ಈ ಚುನಾವಣೆ ಮುಗಿಯುತ್ತಿದ್ದಂತೆ ಮತ್ತೊಂದು ದೊಡ್ಡ ರಾಜ್ಯ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಮತ್ತು ಜಾರ್ಖಂಡ್ ವಿಧಾನ ಸಭೆ ಚುನಾವಣೆ ಸಾಲು ಸಾಲಾಗಿ ಬರುತ್ತಿರುವುದು ರಾಜಕೀಯ ಪಕ್ಷಗಳನ್ನು ವಿಶೇಷವಾಗಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷ ಮತ್ತು ಹತ್ತು ವರ್ಷಗಳ ನಂತರ ಚೇತರಿಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮಹತ್ವದ ಸಂಗತಿಯಾಗಿದೆ. ಸದ್ಯಕ್ಕೆ ಜಮ್ಮು-ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆ ಗಳಿಗೆ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿದ್ದು, ಪ್ರಚಾರ ಕಾರ್ಯ ನಡೆದಿದೆ. ಜಮ್ಮು – ಕಾಶ್ಮೀರವನ್ನು ಮೂರು ತುಂಡು ಮಾಡಿ ಆ ರಾಜ್ಯಕ್ಕೆ ಸಂವಿಧಾನದ ವಿಧಿ ೩೭೦ರ ಅನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಿತ್ತು ಹಾಕಿದ ನಂತರ ಇದು ಮೊದಲ ವಿಧಾನಸಭೆ ಚುನಾವಣೆ. ಹತ್ತಾರು ವರ್ಷಗಳಿಂದ ಪಾಕ್ ಪ್ರಚೋದಿತ ಉಗ್ರಗಾಮಿಗಳ ಉಪಟಳದಿಂದ ತತ್ತರಿಸಿ ಹೋಗಿದ್ದ ಕಾಶ್ಮೀರದ ಗಡಿ ಭಾಗಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಡಿಮೆ ಆಗಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇತ್ತೀಚೆಗೆ ಮತ್ತೆ ಅಲ್ಲಲ್ಲಿ ಉಗ್ರಗಾಮಿಗಳು ಕಾಣಿಸಿಕೊಳ್ಳುತ್ತಿರುವುದು ಆತಂಕದ ಸಂಗತಿ.
ಉಗ್ರರನ್ನು ನಿಯಂತ್ರಿಸುವಲ್ಲಿ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಕೈಗೊಂಡ ಗಟ್ಟಿ ನಿಲುವು, ಗಡಿ ಕಾಯುವ ಭಾರತೀಯ ಯೋಧರಿಗೆ ನೀಡಿದ ಮುಕ್ತ ಸ್ವಾತಂತ್ರ್ಯ ಕಾರಣ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಲೇಬೇಕು. ಜೊತೆಗೆ ಕಾಕತಾಳೀಯ ಎನ್ನುವಂತೆ ಭಾರತದ ಮೇಲೆ ಸದಾ ಸಂಚು, ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವುದು ಮತ್ತು ಉಗ್ರಾವತಾರ ತಾಳುತ್ತಿದ್ದ ಪಾಕಿಸ್ತಾನದಲ್ಲಿ ಕುಸಿದಿರುವ ಆಂತರಿಕ ಆಡಳಿತ ವ್ಯವಸ್ಥೆ, ಆರ್ಥಿಕ ದುಸ್ಥಿತಿ ಮತ್ತು ರಾಜಕೀಯ ಅರಾಜಕತೆಯೂ ಭಾರತಕ್ಕೆ ವರದಾನ ಆಗಿರುವುದು ವಾಸ್ತವ ಸತ್ಯ. ಈ ಬೆಳವಣಿಗೆಯಿಂದ ಕಾಶ್ಮೀರ ಭಾಗದಲ್ಲಿ ಶಾಂತ ಪರಿಸ್ಥಿತಿ ನೆಲೆಸಿರುವುದನ್ನು ಇಲ್ಲ ಎನ್ನಲಾಗದು.
ಆದರೆ ಜನಸಾಮಾನ್ಯರಿಗಲ್ಲದಿದ್ದರೂ ರಾಜಕೀಯ ಧುರೀಣರಿಗೆ ಮತ್ತು ಅವರಿಗೆ ರಾಜಾಶ್ರಯ ನೀಡುತ್ತಿರುವ ರಾಜಕೀಯ ಪಕ್ಷಗಳಿಗೆ ಸಂವಿಧಾನದ ೩೭೦ನೇ ವಿಧಿಯಿಂದ ಲಭ್ಯವಾಗಿದ್ದ ವಿಶೇಷ ಸ್ಥಾನಮಾನ ಹೋದುದು ಮತ್ತು ರಾಜ್ಯವನ್ನು ಮೂರು ಭಾಗಗಳನ್ನಾಗಿ ಮಾಡಿದ್ದು ಮಾತ್ರ ಸಹಿಸಲಾಗದ ಸಂಗತಿ. ಕಾಶ್ಮೀರದ ಜೊತೆ ಹೊಂದಾಣಿಕೆ ಆಗದಿದ್ದ ಲಡಾಖ್ ಪ್ರದೇಶವನ್ನು ಪ್ರತ್ಯೇಕಗೊಳಿಸಿದ್ದು, ಒಟ್ಟಾರೆಯಾಗಿ ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಲಡಾಕ್ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ್ದರಿಂದ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕಿದ್ದ ಗರಿಮೆಯನ್ನು ಸಹಜವಾಗಿ ಕುಬ್ಜಗೊಳಿಸಿರುವುದು ಬಹುತೇಕವಾಗಿ ಅಲ್ಲಿನ ನಾಯಕರ ಬಾಲವನ್ನು ಕತ್ತರಿಸಿದಂತಾಗಿದೆ. ಕೇಂದ್ರ ಸರ್ಕಾರವು ದೆಹಲಿ ಮಾದರಿಯಲ್ಲಿ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ ಕೊಡುವ ಮೂಲಕ ಬಹುತೇಕ ಅಧಿಕಾರವನ್ನೆಲ್ಲ ತನ್ನ ಬಳಿ ಇರಿಸಿಕೊಂಡಿದೆ. ಹಾಗಾಗಿ ವಿಧಾನಸಭೆ ಅಸ್ತಿತ್ವಕ್ಕೆ ಬಂದರೂ ಬೇರೆ ರಾಜ್ಯಗಳಂತೆ ಪೂರ್ಣ ಪ್ರಮಾಣದ ರಾಜ್ಯಾಽಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಇರಲಾರದು ಎಂದು ಈಗಾಗಲೇ ಕಾನೂನು ತಜ್ಞರು ವ್ಯಾಖ್ಯಾನಿಸುತ್ತಿದ್ದಾರೆ.
ಸುಪ್ರೀಂ ಕೋರ್ಟಿನ ಆದೇಶದಂತೆ ಈ ಸೆಪ್ಟೆಂಬರ್ ೩೦ರೊಳಗೆ ಚುನಾವಣೆ ನಡೆಸಬೇಕಾದುದರಿಂದ ಚುನಾವಣಾ ಆಯೋಗ ಮೂರು ಹಂತಗಳಲ್ಲಿ ಈಗ ಚುನಾವಣೆ ನಡೆಸುತ್ತಿದೆ. ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವ ಪ್ರತಿಯೊಂದು ಚುನಾವಣೆಯ ಮೇಲೆ ಉಗ್ರರ ಉಪಟಳವಿರುತ್ತಿತ್ತು. ಚುನಾವಣೆ ಬಹಿಷ್ಕಾರ, ಮತಗಟ್ಟೆಗಳಿಗೆ ಬಂದು ಮತದಾನ ಮಾಡದಂತೆ ಮತದಾರರಿಗೆ ಎಚ್ಚರಿಕೆ ನೀಡುವುದು ಸಹಜ ಎನ್ನುವಷ್ಟರಮಟ್ಟಿಗೆ ನಡೆಯುತ್ತಿತ್ತು. ಈ ಕಣಿವೆ ರಾಜ್ಯ ದಲ್ಲಿ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಗೆ ಉಗ್ರರು ಅಡ್ಡಗಾಲು ಹಾಕುತ್ತಲೇ ಬಂದಿದ್ದಾರೆ. ಆದರೆ ನಾಲ್ಕು ತಿಂಗಳ ಹಿಂದೆ ನಡೆದ ಲೋಕಸಭೆ ಚುನಾವಣೆ ಈ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನೇ ಬದಲಾಯಿಸಿಬಿಟ್ಟಿದೆ. ಸದಾ ಕಾಲ ಅಽಕಾರವನ್ನೆಲ್ಲ ತಮ್ಮ ಬಳಿಯೇ ಇರುವಂತೆ ರಾಜ್ಯಾಽಕಾರ ನಡೆಸುತ್ತಾ ಬಂದಿದ್ದ ಫಾರೂಕ್ ಅಬ್ದುಲ್ಲಾ ಅವರ ಮಗ ಒಮರ್ ಅಬ್ದುಲ್ಲಾ ಮತ್ತು ಮುಫ್ತಿ ಮಹಮದ್ ಸಯೀದ್ ಪುತ್ರಿ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಸೋಲಿಸುವ ಮೂಲಕ ಮತದಾರರು ಅವರನ್ನು ತಿರಸ್ಕರಿಸಿದ್ದಾರೆ.
ದುರದೃಷ್ಟಕರ ಸಂಗತಿ ಎಂದರೆ ಉಗ್ರರಿಗೆ ಹಣಕಾಸು ನೆರವು ನೀಡುತ್ತಿದ್ದರೆನ್ನಲಾದ ಎಂಜಿನಿಯರ್ ರಶೀದ್ ಅವರನ್ನು ಗೆಲ್ಲಿಸಲಾಗಿದೆ. ಕಾಶ್ಮೀರದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮಾಡಿದ್ದ ಅತಿಯಾದ ಬಿಗಿ ಕ್ರಮದಿಂದ ಶೇ. ೫೮. ೬ರಷ್ಟು ಮತದಾನವಾಗಿರುವುದು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆ ಹುಟ್ಟಿಸಿದೆ. ತೊಂಬತ್ತು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಈ ಕಣಿವೆ ರಾಜ್ಯದಲ್ಲಿ ಕಾಶ್ಮೀರ ಭಾಗದಲ್ಲಿ ೪೭ ಮತ್ತು ಜಮ್ಮು ಭಾಗದಲ್ಲಿ ೪೩ ಕ್ಷೇತ್ರಗಳಿವೆ. ಭಯೋತ್ಪಾದನೆ ಮತ್ತು ಉಗ್ರರ ನಿರಂತರ ಚಟುವಟಿಕೆಯಿಂದ ಮತದಾನಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಸೆಪ್ಟೆಂಬರ್ ೧೮, ೨೫ ಮತ್ತು ಅಕ್ಯೋಬರ್ ೧ರಂದು ಮತದಾನ ನಡೆಯಲಿದೆ. ಮೆಹಬೂಬಾ ಮುಫ್ತಿ ಮಹಮದ್ ನೇತೃತ್ವದ ಪಿಡಿಪಿ ಮತ್ತು ಬಿಜೆಪಿ ಯಾವುದೇ ಮೈತ್ರಿ ಇಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದರೆ ಫಾರೂಕ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಛರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಕ್ರಮವಾಗಿ ೫೧ ಮತ್ತು ೩೨ ಸ್ಥಾನಗಳಿಗೆ ಸ್ಪರ್ಧಿಸುತ್ತಿವೆ.
ಲೋಕಸಭೆ ಚುನಾವಣೆಯಲ್ಲಿ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಅವರಿಗೆ ಮಣ್ಣು ಮುಕ್ಕಿಸಿದ ಮತದಾರರು ವಿಧಾನಸಭೆ ಚುನಾವಣೆಯಲ್ಲಿ ಏನು ಮಾಡುವರೋ ನೋಡಬೇಕು. ನ್ಯಾಷನಲ್ ಕಾನ್ಛರೆನ್ಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ವಿಧಾನಸಭೆ ಮತ್ತು ವಿಧಾನ ಪರಿಷತ್ ವ್ಯವಸ್ಥೆಯನ್ನು ಮರುಸ್ಥಾಪಿಸಲಾಗುವುದು, ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ ೩,೦೦೦ ಸಾವಿರ ರೂಪಾಯಿ ಮತ್ತು ಪ್ರತಿ ಕುಟುಂಬದ ಸದಸ್ಯರಿಗೆ ತಲಾ ಹತ್ತು ಕೆ. ಜಿ. ಅಕ್ಕಿ ನೀಡುವುದೂ ಸೇರಿದಂತೆ ಐದು ಗ್ಯಾರಂಟಿಗಳನ್ನು ಘೋಷಿಸಿದೆ. ಕಾಂಗ್ರೆಸ್ ಗ್ಯಾರಂಟಿಗಳ ಬಗೆಗೆ ನ್ಯಾಷನಲ್ ಕಾನ್ಛರೆನ್ಸ್ ತುಟಿಪಿಟಿಕ್ ಎಂದಿಲ್ಲ.
ಈ ಗ್ಯಾರಂಟಿ ಯೋಜನೆಗಳಿಂದ ಈಗಾಗಲೇ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಯಾವುದೇ ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗದೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಹಿಮಾಚಲ ಪ್ರದೇಶದಲ್ಲಿ ನೌಕರರಿಗೆ ವೇತನ ಕೊಡಲು ಕೂಡ ಸಾಧ್ಯವಾಗುತ್ತಿಲ್ಲ. ಹೇಗಾದರೂ ಜನರಿಗೆ ಆಮಿಷ ತೋರಿಸಿ ಚುನಾವಣೆ ಗೆದ್ದುಬಿಟ್ಟರೆ ಸಾಕು ಎನ್ನುವ ಮನಃಸ್ಥಿತಿಯಿಂದ ಕಾಂಗ್ರೆಸ್ ಹೊರಬರಬೇಕಿದೆ. ಜಮ್ಮು ಮತ್ತು ಕಾಶ್ಮೀರದ ಸಂಪನ್ಮೂಲ ಅವಲಂಬಿಸಿರು ವುದು ಮುಖ್ಯವಾಗಿ ಪ್ರವಾಸೋದ್ಯಮವನ್ನು ಮತ್ತು ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಎನ್ನುವುದನ್ನು ಕಾಂಗ್ರೆಸ್ ಗಮನದಲ್ಲಿ ಟ್ಟುಕೊಳ್ಳಬೇಕಿತ್ತು ಎನ್ನುವುದು ಬಹುತೇಕ ಆರ್ಥಿಕ ತಜ್ಞರ ಮಾತು. ಇತ್ತ ಜಮ್ಮುವಿನಲ್ಲಿ ತನ್ನ ಹೆಚ್ಚಿನ ಪ್ರಭಾವವನ್ನು ಹೊಂದಿರುವ ಬಿಜೆಪಿ ಕಾಶ್ಮೀರದಲ್ಲಿ ಭದ್ರತೆ ಕಾಪಾಡುವುದು, ಪಾಕ್ ಉಗ್ರರನ್ನು ಮಟ್ಟ ಹಾಕಿ ಅವರು ಮತ್ತೆ ತಲೆ ಎತ್ತದಂತೆ ನೋಡಿಕೊಳ್ಳುವುದು ಹಾಗೂ ಎಲ್ಲ ರಾಜ್ಯಗಳಂತೆಯೇ ಜಮ್ಮು-ಕಾಶ್ಮೀರವೂ ಒಂದಾಗಿ ಇರಬೇಕೆನ್ನುವುದಕ್ಕೆ ಆದ್ಯತೆ ನೀಡಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಐದು ಲೋಕಸಭೆ ಕ್ಷೇತ್ರಗಳ ಪೈಕಿ ನ್ಯಾಷನಲ್ ಕಾನ್ಛರೆನ್ಸ್ ಶ್ರೀನಗರ, ಅನಂತನಾಗ್ ರಜೌರಿ ಕ್ಷೇತ್ರಗಳನ್ನು ಗೆದ್ದುಕೊಂಡರೆ, ಬಾರಾಮುಲ್ಲಾ ಕ್ಷೇತ್ರದಲ್ಲಿ ಒಮರ್ ಅಬ್ದುಲ್ಲಾರನ್ನು ಸೋಲಿಸಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಅಬ್ದುಲ್ ರಶೀದ್ ಗೆಲುವು ಪಡೆದಿದ್ದರು. ಜಮ್ಮು ಭಾಗದಲ್ಲಿನ ಉಧಾಂಪುರ ಮತ್ತು ಜಮ್ಮುವಿನಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಈ ವಿಧಾನಸಭೆ ಚುನಾವಣೆಯಲ್ಲಿ ಮತದಾರ ಯಾರಿಗೆ ಜಯದ ಮಾಲೆ ಹಾಕುತ್ತಾನೋ ನೋಡಬೇಕು. ಲೋಕಸಭೆ ಚುನಾವಣೆಯನ್ನು ಗಮನಿಸಿದರೆ ಕಾಶ್ಮೀರ ಭಾಗದಲ್ಲಿ ನ್ಯಾಷನಲ್ ಕಾನ್ಛರೆನ್ಸ್ ಮತ್ತು ಜಮ್ಮು ಭಾಗದಲ್ಲಿ ಬಿಜೆಪಿ ಬಲ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. ನ್ಯಾಷನಲ್ ಕಾನ್ಛರೆನ್ಸ್‌ಗೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಕೈಜೋಡಿಸಿರುವುದರಿಂದ ಆಗುವ ಲಾಭ ಎಷ್ಟು ಎನ್ನುವುದನ್ನು ಚುನಾವಣೆ ಫಲಿತಾಂಶವೇ ಹೇಳಬೇಕಿದೆ. ಪಿಡಿಪಿಯು ಕೇವಲ ಮೆಹಬೂಬಾ ಮುಫ್ತಿಯ ಬಲವನ್ನೇ ಅವಲಂಬಿಸಿದೆ. ಒಂದು ವೇಳೆ ಅತಂತ್ರ ವಿಧಾನಸಭೆ ಫಲಿತಾಂಶ ಬಂದರೆ ಬಿಜೆಪಿ ಮತ್ತು ಪಿಡಿಪಿ ಸೇರಿ ಮೈತ್ರಿ ಸರ್ಕಾರ ರಚಿಸಬಹುದೆನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಚಾಲ್ತಿಯಲ್ಲಿವೆ.
ಈ ಹಿಂದೆ ೨೦೧೪ರ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಪೀಪಲ್ಸ್ ಡೆಮೊಕ್ರಟಿಕ್ ಪಕ್ಷಕ್ಕೆ ಬಿಜೆಪಿ ಬೆಂಬಲ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅದೇ ರಾಜಕೀಯ ಪರಿಸ್ಥಿತಿ ಈಗ ಬಂದರೆ ಅಚ್ಚರಿ ಏನಿಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ವ್ಯಾಖ್ಯಾನ. ಎಲ್ಲದಕ್ಕೂ ಅಕ್ಟೋಬರ್ ೪ರವರೆಗೆ ಕಾಯಲೇಬೇಕಿದೆ. ಹರಿಯಾಣ: ಇನ್ನು ಪಕ್ಷಾಂತರ ಪಿಡುಗಿಗೆ ಹೆಸರಾದ ಹರಿಯಾಣದಲ್ಲಿಯೂ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ೧೯೭೭ರಿಂದ ಶುರುವಾದ ಆಯಾರಾಂ ಗಯಾರಾಂ ಪಕ್ಷಾಂತರ ಈ ರಾಜ್ಯದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದೆ. ಇಲ್ಲಿ ನಡೆಯುತ್ತಿದ್ದ ಪಕ್ಷಾಂತರ ಪಿಡುಗಿನ ಹಿನ್ನೆಲೆಯಲ್ಲಿ ೧೯೮೪ರಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಽ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರು. ಆದರೂ ಒಂದಲ್ಲ ಒಂದು ರೀತಿ ಯಲ್ಲಿ ಲೋಕಸಭೆಯಿಂದ ಹಿಡಿದು ಎಲ್ಲ ರಾಜ್ಯಗಳಲ್ಲೂ ಪಕ್ಷಾಂತರ ಮುಂದುವರಿದ ಕಾರಣ ಈ ಕಾಯ್ದೆಗೆ ಹಲವು ಬಾರಿ ತಿದ್ದುಪಡಿ ತರಲಾ ಯಿತು. ಆದರೂ ಆಪರೇಷನ್ ಕಮಲ ಮುಂತಾದ ಹೆಸರಿನಲ್ಲಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಮೂಲಕ ಸರ್ಕಾರವನ್ನು ಉರುಳಿಸುವ ಹಾಗೂ ಮತ್ತೊಂದು ಸರ್ಕಾರವನ್ನು ರಚಿಸುವ ಕೆಟ್ಟ ಪರಂಪರೆ ಮುಂದುವರಿದೇ ಇದೆ.
ಹರಿಯಾಣದಲ್ಲಿಯೂ ೯೦ ವಿಧಾನಸಭೆ ಕ್ಷೇತ್ರಗಳಿದ್ದು ಕಾಂಗ್ರೆಸ್, ಬಿಜೆಪಿ ಮತ್ತು ಸ್ಥಳೀಯ ಮತ್ತು ದೇವಿಲಾಲ್ ಮೊಮ್ಮಗ ದುಷ್ಯಂತ ಚೌಟಾಲ ನೇತೃತ್ವದ ಜನನಾಯಕ ಜನತಾ ದಳ ಬಲಿಷ್ಠವಾಗಿವೆ. ದೆಹಲಿಗೆ ಹೊಂದಿಕೊಂಡಂತಿರುವ ಹರಿಯಾಣ ಬಲಿಷ್ಠ ಜಾಟ್ ಜಾತಿಯ ಪ್ರಭಾವ ಹೊಂದಿರುವ ರಾಜ್ಯ. ನಂತರ ಪರಿಶಿಷ್ಟರು ಮತ್ತು ಸಿಖ್ಖರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಪರಿಶಿಷ್ಟರು ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. ೨೦ರಷ್ಟು ಇರುವ ಕಾರಣ ಹೋರಾಟಗಾರ ಚಂದ್ರಶೇಖರ ಆಜಾದ್ ನೇತೃತ್ವದ ಆಜಾದ್ ಸಮಾಜ ಪಾರ್ಟಿ (ಕಾನ್ಷಿರಾಂ) ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವು ಕಣಕ್ಕಿಳಿದಿವೆ. ಕಳೆದ ಹತ್ತು ವರ್ಷಗಳಲ್ಲಿ ಮೊದಲ ಐದು ವರ್ಷ ಬಿಜೆಪಿ ಸ್ವಂತ ಬಲದಿಂದ ಮತ್ತು ಕಳೆದ ಐದು ವರ್ಷಗಳಿಂದ ದುಷ್ಯಂತ್ ಚೌಟಾಲ ನೇತೃತ್ವದ ಜೆಜೆಪಿ ನೆರವಿನಿಂದ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರೂ ಈ ಬಾರಿ ಚುನಾವಣಾ ಕಣದಲ್ಲಿ ಇರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಮತದಾನವು ಅಕ್ಟೋಬರ್ ೧ರಂದು ನಡೆಯಲಿದ್ದು , ಕಾಶ್ಮೀರ ಮತ್ತು ಹರಿಯಾಣದ ವಿಧಾನಸಭಾ ಚುನಾವಣೆಯ ಫಲಿತಾಂಶವು ೪ರಂದು ಪ್ರಕಟವಾಗಲಿದೆ.