Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಹೊರಳುಹಾದಿಯಲ್ಲಿದೆಯೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ?

ಬಾ.ನಾ ಸುಬ್ರಹ್ಮಣ್ಯ

ವಿವಿಧ ಸಂದರ್ಭಗಳಲ್ಲಿ ಕೊಡಮಾಡುವ ಚಲನಚಿತ್ರ ಪ್ರಶಸ್ತಿಗಳನ್ನು ಮರುಪರಿಶೀಲಿಸಿ, ಸುಧಾರಣೆ ತರಲು ಕೇಂದ್ರ ಸರ್ಕಾರ ಕಳೆದ ವರ್ಷ ಸಮಿತಿಯೊಂದನ್ನು ರಚಿಸಿತ್ತು. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಹಕಾರ್ಯದರ್ಶಿ ನೀರಜಾ ಶೇಖರ್ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಚಿತ್ರೋದ್ಯಮದಿಂದ ಪ್ರಿಯದರ್ಶನ್, ವಿಪುಲ್ ಜೋಶಿ, ಪ್ರಸೂನ್ ಜೋಶಿ, ಹವೋಬಂ ಪವನ್ ಕುಮಾರ್, ಎಸ್.ನಲ್ಲಮುತ್ತು ಇಲಾಖೆಯ ಪೃಥುಲ್ ಕುಮಾರ್ ಹಾಗೂ ಕಮಲೇಶ್‌ಕುಮಾರ್ ಸಿನ್ಹಾ ಸದಸ್ಯರಾಗಿದ್ದರು. ಈ ಸಮಿತಿಯ ಶಿಫಾರಸಿನಂತೆ ಆಯ್ಕೆ ಪ್ರಕ್ರಿಯೆ ನಡೆಸಿ ಈ ಬಾರಿಯ ಪ್ರಶಸ್ತಿ ಪ್ರಕಟಿಸಲಾಗಿದೆ.

ಈ ಹಿಂದೆ ಒಂದೇ ಸಮಿತಿಯ ಮೂಲಕ ಪ್ರಶಸ್ತಿಗಳ ಆಯ್ಕೆ ನಡೆಯುತ್ತಿತ್ತು. ಸಮಿತಿಯ ಸದಸ್ಯರಲ್ಲಿ ಮೂರು ಮೂರು ಮಂದಿಯ ಉಪಸಮಿತಿಗಳಾಗಿ ಚಿತ್ರಗಳನ್ನು ವೀಕ್ಷಿಸಿ, ಅಂತಿಮ ಹಂತಕ್ಕೆ ಆಯ್ದವನ್ನು ಎಲ್ಲ ಸದಸ್ಯರೂ ವೀಕ್ಷಿಸಿ, ಪ್ರಶಸ್ತಿಗಳನ್ನು ನಿರ್ಧರಿಸುತ್ತಿದ್ದರು. ನಂತರ ವಲಯವಾರು ಆಯ್ಕೆ ಮೊದಲ ಹಂತ, ಅವುಗಳನ್ನು ನೋಡಿ ಪ್ರಶಸ್ತಿ ಆಯ್ಕೆ ಮಾಡುವ ಎರಡನೇ ಹಂತ ಹೀಗೆ ಬದಲಾಯಿತು. ಹಿಂದಿ, ಪಂಜಾಬಿ, ಡೋಗ್ರಿ, ಭೋಜಪುರಿ, ರಾಜಸ್ಥಾನಿ, ಉರ್ದು, ಇಂಗ್ಲಿಷ್ ಹಾಗೂ ಮಧ್ಯ ಭಾರತೀಯ ಭಾಷೆಗಳ ಚಿತ್ರಗಳನ್ನು ವೀಕ್ಷಿಸಲು ಉತ್ತರ, ಕೊಂಕಣಿ, ಮರಾಠಿ ಮತ್ತು ಗುಜರಾಥಿ ಚಿತ್ರಗಳಿಗೆ ಪಶ್ಚಿಮ, ತಮಿಳು, ಮಲಯಾಳ ಚಿತ್ರಗಳಿಗೆ ದಕ್ಷಿಣ -1, ಕನ್ನಡ, ತೆಲುಗು ಮತ್ತು ಇಲ್ಲಿನ ಪ್ರಾದೇಶಿಕ ಭಾಷೆಗಳ ಚಿತ್ರಗಳಿಗೆ ದಕ್ಷಿಣ -2 ಮತ್ತು ಬಂಗಾಲಿ, ಅಸ್ಸಾಮಿ, ಒರಿಯಾ, ಮಣಿಪುರಿ ಹಾಗೂ ಈಶಾನ್ಯ ರಾಜ್ಯಗಳ ಉಪಭಾಷೆಗಳ ಚಿತ್ರಗಳ ವೀಕ್ಷಣೆಗೆ ಪೂರ್ವ- ಹೀಗೆ ಐದು ವಲಯಗಳಾಗಿ ಚಿತ್ರಗಳನ್ನು ವೀಕ್ಷಿಸಿ ಶಿಫಾರಸು ಮಾಡುವುದಿತ್ತು.

ಈ ವಲಯಗಳಲ್ಲಿ ಐವರು ಸದಸ್ಯರಿದ್ದು, ಅವರಲ್ಲಿ ಅಧ್ಯಕ್ಷರು ಮತ್ತು ಒಬ್ಬ ಸದಸ್ಯ ಆ ವಲಯದಿಂದ ಹೊರಗಿನವರಾಗಿರುತ್ತಿದ್ದರು. ಪ್ರತಿ ವಲಯದ ಅಧ್ಯಕ್ಷರೂ ಅಂತಿಮ ಆಯ್ಕೆ ಸಮಿತಿಯ ಸದಸ್ಯರಾಗಿರುತ್ತಿದ್ದರು. ಪ್ರತಿ ವಲಯದಿಂದ, ಸ್ಪರ್ಧೆಗೆ ಬಂದ ಚಿತ್ರಗಳಲ್ಲಿ ಗರಿಷ್ಠ ಶೇ.30 ಚಿತ್ರಗ ಚಿತ್ರಗಳನ್ನು ಅಂತಿಮ ವು ಆಯ್ಕೆಗೆ ಕಳುಹಿಸುವುದಿತ್ತು. ಆದರೆ ಹೊಸ ಸಮಿತಿಯ ಶಿಫಾರಸು ಇದರಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಮೊದಲ ಹಂತದ ವಲಯಗಳ ಅಧ್ಯಕರು ಅಂತಿಮ ಹಂತದಲ್ಲಿ ಇರುವುದಿಲ್ಲ. ಅಷ್ಟೇ ಅಲ್ಲ, ಪ್ರತಿ ವಲಯದಿಂದ ಗರಿಷ್ಟ 10 ಚಿತ್ರಗಳನ್ನು ಮಾತ್ರ ಅಂತಿಮ ಆಯ್ಕೆಗೆ ಕಳುಹಿಸಿಕೊಡಬೇಕು. ಅಂತಿಮ ಹಂತದಲ್ಲಿ ಕೇವಲ 50 ಚಿತ್ರಗಳಷ್ಟೇ ಇರಬೇಕು: ಇದರಿಂದ ತೀರ್ಪುಗಾರರಿಗೆ ಸಿನಿಮಾ ವೀಕ್ಷಿಸಿ ಚರ್ಚಿಸಲು ಅವಕಾಶ ಸಿಗುತ್ತದೆ ಎಂದಿತ್ತು ಶಿಫಾರಸು.

ಈಶಾನ್ಯ ರಾಜ್ಯಗಳ ಚಿತ್ರಗಳು, ದಕ್ಷಿಣ ಭಾರತೀಯ ಚಿತ್ರಗಳು ಸಾಕಷ್ಟು ಸಂಖ್ಯೆಯಲ್ಲಿ ತಯಾರಾಗುತ್ತಿದ್ದು, ಪ್ರಶಸ್ತಿಯ ಕಣಕ್ಕೂ ಅವು ಇಳಿಯುತ್ತವೆ. ಆದರೆ ಅಂತಿಮ ಹಂತಕ್ಕೆ ಕಳುಹಿಸುವ ಚಿತ್ರಗಳ ಸಂಖ್ಯೆಗೆ ಇರುವ ಮಿತಿ ಕೆಲವಾದರೂ ಚಿತ್ರಗಳಿಗೆ ಎರವಾಗುತ್ತದೆ ಎನ್ನುವುದು ಸ್ಪಷ್ಟ. ಕನ್ನಡ, ತೆಲುಗು, ತುಳು, ಕೊಡವ, ಕೊಂಕಣಿ, ಬ್ಯಾರಿ, ಬಂಜಾರ, ಅರೆಭಾಷೆ ಈ ಭಾಷೆಗಳಲ್ಲಿ ತಯಾರಾಗಿ ಸ್ಪರ್ಧೆಯಲ್ಲಿರುವ ಚಿತ್ರಗಳಲ್ಲಿ ಒಟ್ಟು ಹತ್ತು ಚಿತ್ರಗಳನ್ನು ಅಂತಿಮ ಹಂತಕ್ಕೆ ಕಳುಹಿಸಬೇಕು. 2022ರ ಸಾಲಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸ್ಪರ್ಧೆ ಒಡ್ಡಬಹುದಾದ ಚಿತ್ರಗಳಿದ್ದವು. ಬಹುಶಃ ಇಂತಹದೊಂದು ಬೆಳೆ ಬಹಳ ವರ್ಷಗಳ ನಂತರ ಇದೇ ಮೊದಲು ಎನ್ನಬಹುದು. ಪ್ರಶಸ್ತಿ ಪಡೆದ ‘ಕಾಂತಾರು, ‘ಕೆಜಿಎಫ್ ಚಾಪ್ಟರ್ 2’, ‘ಪೆದ್ರೋ, ‘ಕೋಳಿಎಸ್ತು’, ‘ಹದಿನೇಳೆಂಟು’, ‘ದ ಗಾರ್ಡ್’, ‘ಫೋಟೋ’, ’19 20 21′, ‘ವಿರಾಟಪುರ ವಿರಾಗಿ’, ‘ನಾನು ಕುಸುಮ’ ಮುಂತಾದ ಚಿತ್ರಗಳಿದ್ದವು. ತುಳು ಚಿತ್ರ ‘ಕೊರು’ ಇತ್ತು. ಅರೆಭಾಷೆಯಲ್ಲಿ ಇದೇ ಮೊದಲಬಾರಿಗೆ ತಯಾರಾದ ಚಿತ್ರ ಮೂಗಜ್ಜನ ಕೋಳಿ’, ಇತರ ಪ್ರಾದೇಶಿಕ ಭಾಷಾ ಚಿತ್ರಗಳಿದ್ದವು. ಹೊಸ ಶಿಫಾರಸು ಸಾಕಷ್ಟು ಚಿತ್ರಗಳನ್ನು ಅಂತಿಮ ಹಂತಕ್ಕೆ ತರಲು ಎದುರಾದಂತಿತ್ತು.

ತೆಲುಗು ಮತ್ತು ಕನ್ನಡ ಇತರ ಪ್ರಾದೇಶಿಕ ಭಾಷೆಗಳಿಂದ ಹತ್ತು ಚಿತ್ರಗಳು ಅಂತಿಮ ಹಂತಕ್ಕೆ ಆಯ್ಕೆಯಾಗುವ ವೇಳೆ ಕನ್ನಡ ಮತ್ತು ಇತರ ಪ್ರಾದೇಶಿಕ ಭಾಷೆಗಳ ಐದು ಚಿತ್ರಗಳು ಹಾಗೂ ತೆಲುಗಿನ ಐದು ಚಿತ್ರಗಳು ಅವಕಾಶ ಪಡೆಯುತ್ತವೆ. ಕನ್ನಡದ ‘ಕಾಂತಾರ’, ‘ಕೆಜಿಎಫ್ ಚಾಪ್ಟರ್ 2′, ಹದಿನೇಳೆಂಟು’, ‘ದಿ ಗಾರ್ಡ್’ ಮತ್ತು ತುಳುವಿನ ‘ಕೊರಮ್ಮ’ ಚಿತ್ರಗಳು ಅಂತಿಮ ಆ ಹಂತದಲ್ಲಿ ಸ್ಪರ್ಧೆಯಲ್ಲಿ ಇದ್ದವು ಎನ್ನಲಾಗಿದೆ. ‘ವಿರಾಟಪುರ ವಿರಾಗಿ’ ಚಿತ್ರ ತಾಂತ್ರಿಕ ಕಾರಣಗಳಿಂದ ಸ್ಪರ್ಧೆಯಿಂದ ಹೊರಗೆ ಉಳಿಯಿತು. ಅಂತಿಮ ಹಂತದಲ್ಲಿ ‘ಹದಿನೇಳೆಂಟು’ ಚಿತ್ರವೂ ಅಂತಹದೇ ಕಾರಣಕ್ಕೆ ಸ್ಪರ್ಧೆಯ ಹೊರಗೆ ಉಳಿಯಿತು ಎನ್ನುತ್ತಿವೆ ಮೂಲಗಳು.

ತೀರ್ಪುಗಾರರು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು, ಒಂದು ವೇಳೆ ಯಾರಾದರೂ ಬಹಿರಂಗಪಡಿಸಿದರೆ, ಮುಂದೆ ಯಾವತ್ತೂ ಅವರನ್ನು ತೀರ್ಪುಗಾರರರಾಗಿ ಪರಿಗಣಿಸುವುದಿಲ್ಲ ಎನ್ನುವುದಿದೆ. ಆದರೂ ಅಲ್ಲಿ ನಡೆದ ಚರ್ಚೆಗಳು ಬೆಳವಣಿಗೆಗಳು ಹೊರಬರುತ್ತಿರುತ್ತವೆ. ಮೂಲಗಳ ಪ್ರಕಾರ, ಈ ಬಾರಿ ತೀರ್ಪುಗಾರ ಸಮಿತಿಯ ಅಧ್ಯಕ್ಷರ ವಿರುದ್ದವೇ ಒಂದಷ್ಟು ಮಂದಿ ತಿರುಗಿ ಬಿದ್ದಿದ್ದರು. ದೂರು ಸಚಿವರ ತನಕ ಹೋಗಿತ್ತು. ಕೊನೆಗೆ ಅವರೇ ಸಂಧಾನ ಮಾಡಿದರಂತೆ. ಜನಪ್ರಿಯ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ನೀಡಬೇಕು ಎನ್ನುವುದು ಅವರ ನಿಲುವು ಎನ್ನಲಾಗಿದ್ದು, ಇದೇ ಕಾರಣಕ್ಕೆ ದೂರು ಹೋಗಿತ್ತೋ ಗೊತ್ತಿಲ್ಲ.

ಈ ಬಾರಿಯ ಪ್ರಶಸ್ತಿಗಳನ್ನು ಬಹುತೇಕ ಮುಖ್ಯವಾಹಿನಿಯ ಚಿತ್ರಗಳೇ ಪಡೆದಿವೆ. ವರ್ಷದ ಅತ್ಯುತ್ತಮ ಚಿತ್ರಕ್ಕಿರುವ ಪ್ರಶಸ್ತಿ ಪಡೆದಿರುವ ‘ಆಟ್ಟಂ’ ಅದಕ್ಕೆ ಅಪವಾದ. ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಚಿತ್ರ ಅತ್ಯುತ್ತಮ ಮನರಂಜನಾತ್ಮಕ ಜನಪ್ರಿಯ ಚಿತ್ರ ಪ್ರಶಸ್ತಿ ಪಡೆದಿದೆ. 1953ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಬಹುತೇಕ ಹಿಂದಿಯೇತರ ಚಿತ್ರಗಳ ಪಾಲಾಗುತ್ತಿತ್ತು. ಜನಪ್ರಿಯ ಜನರಂಜನೆ ನೀಡುವ ಉತ್ತಮ ಚಿತ್ರಗಳನ್ನು ಪರಿಗಣಿಸಲು ಈ ಪ್ರಶಸ್ತಿಯನ್ನು ಹಿಂದಿ ಚಿತ್ರೋದ್ಯಮದ ಒತ್ತಾಯದಿಂದ ಸ್ಥಾಪಿಸಲಾಯಿತು ಎನ್ನಲಾಗಿದೆ. ಕನ್ನಡ ಚಿತ್ರರಂಗಕ್ಕೆ ಇದು ಈ ವಿಭಾಗದಲ್ಲಿ ಎರಡನೇ ಪ್ರಶಸ್ತಿ 1987ರಲ್ಲಿ ಶೃಂಗಾರ್ ನಾಗರಾಜ್ ಅವರಿಗಾಗಿ ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶಿಸಿದ ಮಾತಿಲ್ಲದ ಚಿತ್ರ ‘ಪುಷ್ಪಕ ವಿಮಾನ’ ಈ ಪ್ರಶಸ್ತಿಯನ್ನು ಮೊದಲ ಬಾರಿ ತಂದಿತ್ತು. ಇದೀಗ ಹೊಂಬಾಳೆ ಫಿಲಂಸ್ ಗಾಗಿ ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿದ ‘ಕಾಂತಾರ’ ಈ ಪ್ರಶಸ್ತಿ ಪಡೆದಿದೆ. ತಮ್ಮ ನಿರ್ಮಾಣ, ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರಕ್ಕಿರುವ ಸ್ವರ್ಣಕಮಲ ಪಡೆದಿರುವ ರಿಷಭ್ ಈ ಬಾರಿ ‘ಕಾಂತಾರ’ ಚಿತ್ರಕ್ಕಾಗಿ ಸ್ವರ್ಣಕಮಲ ಪಡೆಯಲಿದ್ದಾರೆ. ಜೊತೆಗೆ ಅದರಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಸ್ವೀಕರಿಸಲಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಾಹಸ ಸಂಯೋಜನೆಗಾಗಿ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಅನ್ವರಿವು ಪಡೆದಿದ್ದಾರೆ. ಅತ್ಯುತ್ತಮ ಕನ್ನಡ ಚಿತ್ರಕ್ಕಿರುವ ಪ್ರಶಸ್ತಿ ಅದೇ ಈ ಚಿತ್ರಕ್ಕೆ ಸಂದಿದೆ. ಈ ಚಿತ್ರದಲ್ಲಿ ಕೆಲವು ವೈಯಕ್ತಿಕ ಪ್ರಶಸ್ತಿಗಳ ನಿರೀಕ್ಷೆ ಇತ್ತು. – ಆದರೆ ಅತ್ಯುತ್ತಮ ಕನ್ನಡ ಚಿತ್ರ ಎಂದು ಪ್ರಶಸ್ತಿ ನೀಡಿರುವುದರ ಕುರಿತಂತೆ ಈಗಾಗಲೇ ಚರ್ಚೆಯಾಗತೊಡಗಿದೆ

ಕಥೇತರ ಚಿತ್ರಗಳ ವಿಭಾಗದಲ್ಲಿ ನಿರ್ದೇಶಕರ ಮೊದಲ ಚಿತ್ರಕ್ಕಿರುವ ಪ್ರಶಸ್ತಿ ‘ಮಧ್ಯಂತರ’ ನಿರ್ದೇಶಿಸಿದ ಬಸ್ತಿ ದಿನೇಶ್ ಶೆಣೈ ಅವರದ್ದಾಗಿದೆ. ಈ ವಿಭಾಗದಲ್ಲಿ ಮೊದಲ ಸ್ವರ್ಣಕಮಲ ಪಡೆಯಲಿದ್ದಾರೆ ಅವರು. ಅದರ ಸಂಕಲನಕ್ಕಾಗಿ ಸುರೇಶ್ ಅರಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುನಿಲ್ ಪುರಾಣಿಕ್ ನಿರ್ಮಿಸಿ, ನಿರ್ದೇಶಿಸಿದ ‘ರಂಗವೈಭೋಗ’ ಚಿತ್ರಕ್ಕೆ ಅತ್ಯುತ್ತಮ ಕಲೆ/ಸಂಸ್ಕೃತಿ ಚಿತ್ರಕ್ಕಿರುವ ಪ್ರಶಸ್ತಿ ಸಂದಿದೆ. ನಟ ಮಮ್ಮುಟಿ ಮತ್ತು ರಿಷಭ್ ಶೆಟ್ಟಿ ಅವರ ನಡುವೆ ಅತ್ಯುತ್ತಮ ನಟ ಪ್ರಶಸ್ತಿಗಾಗಿ ಸ್ಪರ್ಧೆ ಇತ್ತು ಎನ್ನುವುದಾಗಿ ಸಾಕಷ್ಟು ಸುದ್ದಿಗಳಿದ್ದವು. ಮುದ್ರಣ. ಎಲೆಕ್ಟ್ರಾನಿಕ್, ಸಾಮಾಜಿಕ ಮಾಧ್ಯಮಗಳಲ್ಲಿ ಇದು ಸಾಕಷ್ಟು ಪ್ರಚಾರವೂ ಆಗಿತ್ತು. ಮಮ್ಮುಟ ನಿರ್ಮಿಸಿ, ನಟಿಸಿದ್ದ ‘ನನಗಲ್ ನೇರೆಟ್ ಮಯಕ್ಲಂ’ ಚಿತ್ರದ ಅಭಿನಯಕ್ಕಾಗಿ ಈ ಪ್ರಶಸ್ತಿ ಬರುತ್ತದೆ, ಬರಬೇಕಾಗಿತ್ತು ಎನ್ನುವುದು ಜಾಲತಾಣಗಳಲ್ಲಿ ಇತರ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದರೆ ಮಲಯಾಳ ನಿರ್ದೇಶಕ ಪದಕುಮಾರ್ ಈ ಚರ್ಚೆಗೆ ಪೂರ್ಣರಾಮ ಹಾಕಿದ್ದಾರೆ. ಮಮ್ಮುಟಿ ಅವರ ಆ ಚಿತ್ರ ಸ್ಪರ್ಧೆಯ ಕಣದಲ್ಲೇ ಇರಲಿಲ್ಲ ಎಂದು ಸ್ವತಃ ತೀರ್ಪುಗಾರರಾಗಿದ್ದ ಅವರು ಹೇಳಿದ್ದಾರೆ.

‘ಕನ್ನಡದ ಕಿರುಚಿತ್ರಗಳಿಗೆ ಸಂದ ಪ್ರಶಸ್ತಿ ಇನ್ನಷ್ಟು ಮಂದಿಗೆ ಉತ್ತೇಜನ ನೀಡಬಹುದು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಮೂಲೋದ್ದೇಶಗಳನ್ನು ಬದಿಗಿಟ್ಟು ಈ ಬಾರಿಯ ಪ್ರಶಸ್ತಿ ಆಯ್ಕೆ ನಡೆದಿದೆ; ಸಿನಿಮಾ ಸೌಂದರ್ಯ, ತಾಂತ್ರಿರ್ಕ ತಾಂತ್ರಿಕ ಉತ್ಕೃಷ್ಟತೆ, ಸಾಮಾಜಿಕ ಪ್ರಸ್ತುತತೆಗಳ ಜೊತೆಗೆ ದೇಶದ ಸಾಂಸ್ಕೃತಿಕ ವೈವಿಧ್ಯವನ್ನು ಗುರುತಿಸುವ, ದೇಶದ ಏಕತೆ ಮತ್ತು ಸಮಗ್ರತೆಗೆ ನೀಡುವ ಕೊಡುಗೆಯನ್ನು ಗುರುತಿಸುವ ಕೆಲಸ ಈ ಹಿಂದೆ ನಡೆದಿದೆಯೇ ಎನ್ನುವ ಪ್ರಶ್ನೆ ಸಿನಿಮಾ ತಜ್ಞರದು. ರಿಷಬ್ ಶೆಟ್ಟಿ ನಿರ್ಮಿಸಿದ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಹೆಸರಾದ ಪೆದ್ರೋ’ದಂತಹ ಚಿತ್ರ ಪ್ರಶಸ್ತಿ ವಂಚಿತವಾಗಿರುವುದು ಇಂತಹ ಪ್ರಶ್ನೆಗಳು ಏಳಲು ಕಾರಣವಾಗುತ್ತದೆ. ಹಿಂದೆ ರಾಷ್ಟ್ರೀಯ ಸಮಗ್ರತೆಯನ್ನು ಸಾರುವ ಚಿತ್ರ, ಸಾಮಾಜಿಕ ಸಮಸ್ಯೆಗಳ ಕುರಿತು ಹೇಳುವ ಚಿತ್ರ ಮತ್ತು ಪರಿಸರ ಸಂರಕ್ಷಣೆಯ ಚಿತ್ರ- ಹೀಗೆ ಇದ್ದ ಮೂರು ಪ್ರಶಸ್ತಿಗಳನ್ನು ಸೇರಿಸಿ, ಒಂದೇ ಪ್ರಶಸ್ತಿ ನೀಡಲು ಶಿಫಾರಸು ಮಾಡಲಾಗಿದೆ. ಪ್ರಶಸ್ತಿ ಸುಧಾರಣಾ ಸಮಿತಿಯ ಶಿಫಾರಸು ಹಾಗೂ ಈ ಬಾರಿಯ ತೀರ್ಪುಗಾರರು ಮುಖ್ಯವಾಹಿನಿಯ ಕಡೆಗೆ ಹೊರಳಿರುವುದು ಅರ್ಥಪೂರ್ಣ ಚಿತ್ರಪರಂಪರೆಗೆ ಹಾಕಿರುವ ಮೊದಲ ಕೊಡಲಿಯೇಟು ಎನ್ನುವುದು ಅವರ ಅಭಿಪ್ರಾಯ.

Tags: