ಪ್ರೊ.ಆರ್.ಎಂ.ಚಿಂತಾಮಣಿ
೧೯೫೦ ಮತ್ತು ೬೦ರ ದಶಕಗಳಲ್ಲಿ ಸಣ್ಣ ರೈತರೂ ಸೇರಿದಂತೆ ಬಡವರು ಮತ್ತು ಕೆಳಮಧ್ಯಮ ವರ್ಗದವರು ಸಾಂಸ್ಥಿಕ ಹಣಕಾಸು ಸೌಲಭ್ಯಗಳು ದೊರೆಯದೇ ಲೇವಾದೇವಿದಾರರು ಮತ್ತು ಹಳ್ಳಿಯ ಸಾಹುಕಾರರ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡು ನರಳುತ್ತಿದ್ದಾರೆಂಬ ಕೂಗು ಕೇಳಿಬರುತ್ತಿತ್ತು. ಹಲವು ಸಮಿತಿಗಳ ವರದಿಗಳು ಇದನ್ನು ಪುಷ್ಟೀಕರಿಸುತ್ತಿದ್ದವು. ಜುಲೈ ೧೯, ೧೯೬೯ರ ಹದಿನಾಲ್ಕು ದೊಡ್ಡ ಬ್ಯಾಂಕ್‌ಗಳ ರಾಷ್ಟ್ರೀಕರಣದ ಉದ್ದೇಶಗಳಲ್ಲಿ ಈ ಹಣಕಾಸು ಒಳಗೊಳ್ಳುವಿಕೆಯೂ ಒಂದು ಪ್ರಮುಖ ಉದ್ದೇಶವಾಗಿತ್ತು.
ಅಂದಿನಿಂದ ಬ್ಯಾಂಕ್‌ಗಳು ಹಳ್ಳಿಗಳಲ್ಲಿ ಹೆಚ್ಚು ಶಾಖೆಗಳನ್ನು ತೆರೆಯಲಾರಂಭಿಸಿದವು. ಎಲ್ಲ ವರ್ಗದವರಿಗೂ ಸಾಲ ಸೌಲಭ್ಯಗಳೂ ಸೇರಿ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸು ವುದು ಹೆಚ್ಚಾಯಿತು. ೧೯೭೫ರಲ್ಲಿ ಗ್ರಾಮೀಣ ಬ್ಯಾಂಕ್‌ಗಳು ಬಹುತೇಕ ಜಿಲ್ಲೆಗಳಲ್ಲಿ ಆರಂಭವಾದವು. ಆಗಲೇ ಕೃಷಿ, ರಫ್ತು ವ್ಯಾಪಾರ ಮತ್ತು ಸಣ್ಣ ವ್ಯವಹಾರಗಳು ಬ್ಯಾಂಕ್ ಸಾಲ ಒದಗಿಸಲು ‘ಆದ್ಯತೆಯ ವಲಯಗಳು’ ಎಂದು ಘೋಷಿಸಲಾ ಯಿತು. ಈ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವ ಉದ್ಯೋಗಿಗಳೂ ಸೇರಿ ಎಲ್ಲರಿಗೂ ಆದ್ಯತೆಯ ಮೇಲೆ ಸಾಲಗಳು ದೊರೆಯುವಂತಾಯಿತು. ಅಲ್ಲದೆ, ಅದೇ ಸಮಯದಲ್ಲಿ ವಿಭಿನ್ನ ಬಡ್ಡಿ ದರ (Differential Interest Rate) ಯೋಜನೆಯಡಿಯಲ್ಲಿ ದುಡಿಯುವ ಬಂಡವಾಳಕ್ಕಾಗಿ ಪರದಾಡುತ್ತಿದ್ದ ಗೃಹ ಕೈಗಾರಿಕೆಗಳು ಬೀದಿಬದಿ ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳು, ಸಂಚಾರ ವ್ಯಾಪಾರಸ್ಥರಾದ (ತಲೆಯ ಮೇಲೆ ಹೊತ್ತು ಮತ್ತು ತಳ್ಳುಗಾಡಿಗಳಲ್ಲಿ) ಮಹಿಳೆಯರು ಮತ್ತು ಪುರುಷರಿಗೆ ಯಾವುದೇ ಆಧಾರವಿಲ್ಲದೆ ೫,೦೦೦ ರೂ.ಗಳ (ಅಂದಿನ ಮಾನದಂಡದಂತೆ) ಸಾಲವನ್ನು ಶೇ.೪.೦ ಬಡ್ಡಿದರದಲ್ಲಿ ಬ್ಯಾಂಕ್‌ಗಳು ಕೊಡಬೇಕೆಂದು ಸರ್ಕಾರ ಆದೇಶಿಸಿತು. ಇಷ್ಟೇ ಅಲ್ಲ ಪ್ರತಿಯೊಂದು ಬ್ಯಾಂಕಿನ ಶಾಖೆಗೂ ಈ ಸಾಲಗಳ ಗುರಿಗಳನ್ನು ನಿಗದಿ ಮಾಡಲಾಗಿತ್ತು.
ಮುಂದೆ ಲಘು ಹಣಕಾಸು ಸಂಸ್ಥೆಗಳು (Micro Finance Institutions) ಬಂದವು. ಅವು ಸಣ್ಣ ಸಾಲಗಳನ್ನು ದೊಡ್ಡ ಪ್ರಮಾಣದಲ್ಲಿ ಕೊಡಲಾರಂಭಿಸಿದವು. ಹಳ್ಳಿ ಪಟ್ಟಣಗಳಲ್ಲಿ ಸ್ವಸಹಾಯ ಸಂಘಗಳು (ಮಹಿಳೆಯರೂ ಸೇರಿ) ಸ್ಥಾಪಿಸಲ್ಪಟ್ಟವು. ಇತ್ತೀಚೆಗೆ ಸಣ್ಣ ಹಣಕಾಸು ಬ್ಯಾಂಕ್‌ಗಳು ಮತ್ತು ಫಿನ್-ಟೆಕ್ (Financial Technology) ಕಂಪೆನಿಗಳು ಸಾಲಗಳನ್ನು ಒದಗಿಸುತ್ತಿವೆ. ಬ್ಯಾಂಕೇತರ ಹಣಕಾಸು ಕಂಪೆನಿಗಳೂ ಹಣಕಾಸು ಸೇವೆಗಳನ್ನು ಒದಗಿಸುತ್ತಿವೆ. ಹೀಗೆ ಎಲ್ಲ ಹಣಕಾಸು ಸಂಸ್ಥೆಗಳು ಹೊರಗುಳಿದವರ ಖಾತೆಗಳನ್ನು ಆರಂಭಿಸುವುದು (ಒಮ್ಮೊಮ್ಮೆ ಝೀರೊ ಬ್ಯಾಲೆನ್ಸ್ ಖಾತೆಗಳನ್ನು ತೆರೆಯುವುದು) ಮತ್ತು ಅವರಿಗೆ ಸಾಲ ಕೊಡುವುದು ಮುಂದುವರಿಯಿತು. ಸರ್ಕಾರದ ನೀತಿಯೂ ಇದಕ್ಕೆ ಪೂರಕವಾಗಿತ್ತು. ಮುಂದಿನ ದಶಕಗಳಲ್ಲಿ ಒಳಗೊಳ್ಳುವಿಕೆಯ ವೇಗ ಹೆಚ್ಚಾಗುತ್ತಾ ಹೋಯಿತು. ಈ ಕಾರ್ಯದಲ್ಲಿ ಲಘು ಹಣಕಾಸು ಸಂಸ್ಥೆಗಳ ಪಾತ್ರ ಮಹತ್ವದ್ದಾಯಿತು. ದೂರದ ಹಳ್ಳಿ ಪಟ್ಟಣಗಳಲ್ಲಿ ಸಹಕಾರಿ ಬ್ಯಾಂಕ್ ಗಳು ಈ ಕೆಲಸದಲ್ಲಿ ಹೆಚ್ಚು ಆಸಕ್ತಿ ವಹಿಸಿ ದುಡಿಯುತ್ತಿರುವುದನ್ನೂ ಇಲ್ಲಿ ಗಮನಿಸಬಹುದು. ಇವೆಲ್ಲದರ ಪರಿಣಾಮವಾಗಿ ಮಾರ್ಚ್ ೩೧, ೨೦೨೪ರ ಹೊತ್ತಿಗೆ ಇಂಥ ಸಾಲ ಖಾತೆಗಳ ಸಂಖ್ಯೆ ೮.೭೦ ಕೋಟಿಗೆ ಏರಿರುವುದು ಕಂಡುಬರುತ್ತದೆ.
ಸಾಲ ಮತ್ತು ಮರು ಪಾವತಿ ಇಳಿಮುಖ: ಈ ಸಣ್ಣ ಸಾಲಗಾರರಿಂದ ನಿಯಮಿತವಾಗಿ ಮರುಪಾವತಿ ಸಾಲ ಕೊಟ್ಟ ಸಂಸ್ಥೆಗಳು ಇತ್ತೀಚೆಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ೬೦ ದಿನಗಳಿಗಿಂತ ಹೆಚ್ಚು ಅವಽಯವರೆಗೆ ಕಂತುಗಳನ್ನು ಪಾವತಿಸದಿದ್ದವರಿಗೆ ಮತ್ತು ರೂ. ೩,೦೦೦ಕ್ಕಿಂತ ಹೆಚ್ಚು ಸಾಲ ಬಾಕಿ ಇದ್ದು ಮರುಪಾವತಿ ನಿಯಮಿತವಾಗಿಲ್ಲದವರಿಗೆ ಹೊಸ ಸಾಲ ಕೊಡುವುದನ್ನು ನಿಲ್ಲಿಸಿವೆ. ಮತ್ತು ಹಳೆಯ ಕಟಬಾಕಿಗಳನ್ನು (Bad Debts) ತಮ್ಮ ಖಾತೆ ಪುಸ್ತಕದಿಂದ ತೆಗೆದು ಹಾಕಲಾಗಿದೆ (Written Off). ಅಷ್ಟರಮಟ್ಟಿಗೆ ನಷ್ಟವನ್ನು ಅನುಭವಿಸಲಾಗಿದೆ. ಹೀಗಾಗಿ ದೇಶದ ಜನಸಂಖ್ಯೆಯ ಪಿರ‍್ಯಾಮಿಡ್‌ನಲ್ಲಿ ತಳದಲ್ಲಿರುವ ಅನೇಕರು ೨೦೨೪- ೨೫ ರ ಮೊದಲ ಒಂಬತ್ತು ತಿಂಗಳಲ್ಲಿ ಸಾಂಸ್ಥಿಕ ಸಾಲಗಳಿಂದ ಹೊರಹೋಗಬೇಕಾಗಿದೆ ಎಂದು ವರದಿಗಳು ಹೇಳುತ್ತವೆ.
ಇಲ್ಲಿರುವ ಸಂಖ್ಯಾಪಟ್ಟಿಯಲ್ಲಿ ಇದು ಸ್ಪಷ್ಟವಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯಾವುದೇ ವ್ಯವಸ್ಥೆಯಲ್ಲಿ ತಮ್ಮದೇ ಕಾರಣಗಳಿಂದ ಒಂದು ಅತಿ ಸಣ್ಣ ಸಂಖ್ಯೆಯಲ್ಲಿ ಹೊರಗೆ ಹೋಗುವವರಿರು ತ್ತಾರೆ. ಮತ್ತು ಅಷ್ಟೇ ಸಣ್ಣ ಸಂಖ್ಯೆ ಯಲ್ಲಿ ಒಳಗೆ ಬರುವ ಹೊಸಬರಿರುತ್ತಾರೆ. ಇದು ಸರ್ವೇ ಸಾಮಾನ್ಯ. ಆದರೆ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹೊರಗೆ ಹೋಗುತ್ತಾರೆ ಅಂದರೆ ಅಲ್ಲಿ ಏನೋ ಸಮಸ್ಯೆ ಇದೆ ಎಂದೇ ಅರ್ಥ. ಅದನ್ನು ಕಂಡುಹಿಡಿದು ಪರಿಹರಿಸುವುದು ಅತ್ಯವಶ್ಯ. ಸಾಲ ಮರು ಪಾವತಿ ಮಾಡದೇ ಇರಲು ಹಲವು ಕಾರಣಗಳಿರಬಹುದು. ದುರುದ್ದೇಶದಿಂದ ಬೇಕೆಂದೇ ಪಾವತಿ ಮಾಡದಿದ್ದರೆ ( will ful defaulters) ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಇಂಥವರಿಗೆ ಬೇರೆ ಎಲ್ಲಿಯೂ ಸಾಲ ಸಿಗದಂತೆ ಮಾಹಿತಿ ವಿಸ್ತರಣೆ ಮಾಡಿದರೆ ಬೇರೆಯವರೂ ಪಾಠ ಕಲಿಯುತ್ತಾರೆ. ಸ್ವಲ್ಪ ನಷ್ಟವಾದರೂ ಉತ್ತಮ ಗ್ರಾಹಕರು ಉಳಿಯುತ್ತಾರೆ.
ಹಣಕಾಸು ಪರಿಭಾಷೆಯಲ್ಲಿ ‘ಕೊಟ್ಟ ಸಾಲದ ಮೇಲ್ವಿಚಾರಣೆ ಮತ್ತು ನಿರ್ವಹಣೆ’ ಎಂಬ ಪದ ಗುಚ್ಛವಿದೆ. ಅದರ ಅರ್ಥ ಸಾಲ ಕೊಟ್ಟ ಸಂಸ್ಥೆ ನಿರಂತರವಾಗಿ ಸಾಲಗಾರರೊಡನೆ ಸಂಪರ್ಕ ಹೊಂದಿರಬೇಕು ಮತ್ತು ಸೌಹಾರ್ದ ಸಂಬಂಧ ಹೊಂದಿರಬೇಕು. ಹಿಂದೆ ಬ್ಯಾಂಕ್ ರಾಷ್ಟ್ರೀಕರಣವಾದಾಗ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್, ಬ್ಯಾಂಕ್‌ಗಳಿಗೆ ತಿಳಿಸಿ ಹೇಳಿದ್ದವು. ಸಾಲ ಮರು ಪಾವತಿ ತಡವಾಗಿದ್ದರೆ ವಸೂಲಿಗಾಗಿ ವಾಮ ಮಾರ್ಗಗಳನ್ನು (ವಸೂಲಿ ಏಜೆಂಟರನ್ನು ನೇಮಿಸುವುದು, ಬೆದರಿಸುವುದು, ನಿಂದಿಸುವುದು, ಕಿರುಕುಳ ಕೊಡುವುದು ಮುಂತಾದವುಗಳು) ಬಳಸಬಾರದು. ಇತ್ತೀಚಿನ ವರದಿಗಳಂತೆ ಕರ್ನಾಟಕದಲ್ಲಿ ಕೆಲವು ಲಘು ಹಣಕಾಸು ಸಂಸ್ಥೆಗಳ ಕಿರುಕುಳ ತಾಳಲಾರದೆ ಸಾಲಗಾರರು ಆತ್ಮಹತ್ಯೆ ಮಾಡಿಕೊಂಡ ಮತ್ತು ಊರು ಬಿಟ್ಟು ಹೋದ ಘಟನೆಗಳು ಸಂಭವಿಸಿವೆ. ಇಂಥ ಘಟನೆಗಳಿಗೆ ಆಸ್ಪದ ಕೊಡಬಾರದು.
ಮರುಪಾವತಿ ತಡವಾಗಲು ಬರಬೇಕಿದ್ದ ಹಣ ಸಮಯಕ್ಕೆ ಸರಿಯಾಗಿ ಬಾರದೇ ಇರುವುದು, ತಮ್ಮ ನಿಯಂತ್ರಣ ಮೀರಿದ ಸಾರ್ವತ್ರಿಕ ಘಟನೆಗಳಿಂದ ವ್ಯವಹಾರ ಕುಸಿಯುವುದು, ನೈಸರ್ಗಿಕ ವಿಕೋಪಗಳಿಂದ ತೊಂದರೆ ಮುಂತಾದ ನ್ಯಾಯಯುತ ಕಾರಣಗಳಿದ್ದರೆ ಅವುಗಳಿಂದ ಹೊರಬರಲು ಸಾಲಗಾರರಿಗೆ ಹೆಚ್ಚು ಸಮಯ ಕೊಡಬೇಕು. ಒಂದು ವೇಳೆ ಹೆಚ್ಚುವರಿ ಸಾಲದ ಅನಿವಾರ್ಯತೆ ಇದ್ದರೆ ಎಚ್ಚರಿಕೆಯ ಕರಾರುಗಳೊಡನೆ ಹೆಚ್ಚಿನ ಸಾಲವನ್ನು ಕೊಡಬಹುದು. ಅದರ ಉಪಯೋಗ ಸಮರ್ಪಕವಾಗಿ ಆಗುತ್ತಿರುವ ಬಗ್ಗೆ ಪರಿಶೀಲಿಸುತ್ತಿರಬೇಕು. ಒಟ್ಟಾರೆ ಪ್ರಾಮಾಣಿಕ ಸಾಲಗಾರರ ಹಿತಕಾಪಾಡುವಲ್ಲಿ ತಮ್ಮ ಹಿತ ಅಡಗಿದೆ ಎಂದು ಸಂಸ್ಥೆಗಳು ತಿಳಿದಿರಬೇಕು