Mysore
21
broken clouds

Social Media

ಶುಕ್ರವಾರ, 02 ಜನವರಿ 2026
Light
Dark

೪೦೦ ಮಕ್ಕಳ ‘ತಾಯಿ’ ಭಾರತದ ೨ನೇ ಎಚ್ಐವಿ ಪಾಸಿಟಿವ್ ನೂರಿ

ಪಂಜು ಗಂಗೊಳ್ಳಿ

೧೯೬೩ರಲ್ಲಿ ೧೩ ವರ್ಷ ಪ್ರಾಯದವರಾಗಿದ್ದಾಗ ಮನೆ ಬಿಟ್ಟು ಓಡಿ ಹೋದರು; ೧೯೭೦ರಲ್ಲಿ ಪ್ರೀತಿಸಿದವನನ್ನು ಮದುವೆಯಾದರು; ೧೯೮೬ರಲ್ಲಿ ಒಬ್ಬ ಸೆಕ್ಸ್ ವರ್ಕರ್ ಆದರು; ೧೯೮೭ರಲ್ಲಿ ಭಾರತದ ಎರಡನೇ ಎಚ್ ಐವಿ ರೋಗಿ ಎನಿಸಿಕೊಂಡರು; ೨೦೨೪ರಿಂದ ಅವರು ೪೦೦ಕ್ಕೂ ಹೆಚ್ಚು ಮಕ್ಕಳಿಗೆ ‘ತಾಯಿ’ಯಾಗಿದ್ದಾರೆ! ಇದು ಚೆನ್ನೆ ಯ ಟ್ರಾನ್ಸ್‌ಜೆಂಡರ್ ನೂರಿ ಮೊಹಮ್ಮದ್ ರ ಬದುಕಿನ ಕತೆ…

ನೂರಿ ನಾಲ್ಕು ವರ್ಷ ಪ್ರಾಯದ ಮಗುವಾಗಿದ್ದಾಗ ಅವರ ತಾಯಿ ತೀರಿಕೊಂಡರು. ತಾಯಿ ಸತ್ತ ೪೦ ದಿನಗಳಲ್ಲಿ ಅವರ ತಂದೆ ಸಲೀಂ ಮರು ಮದುವೆಯಾದರು. ಅದರೊಂದಿಗೆ, ಸ್ವಂತ ಮನೆಯೇ ನೂರಿಗೆ ದುಃಸ್ವಪ್ನವಾಗಿ ಬದಲಾಯಿತು. ಅವರ ವಿದ್ಯಾಭ್ಯಾಸ ಮೂರನೇ ತರಗತಿಗೆ ಕಡಿತಗೊಂಡಿತು. ಮನೆಯಲ್ಲಿ ಹಾಗಾದರೆ, ಹೊರಗಡೆ ಬೇರೆ ರೀತಿಯ ಕೀಟಲೆಗಳನ್ನು ಎದುರಿಸಬೇಕಾಗಿ ಬಂದಿತು. ನೂರಿ ಮೊಹಮ್ಮದ್‌ಗೆ ತಾನು ಗಂಡಲ್ಲ, ಹೆಣ್ಣು ಎಂಬ ಭಾವನೆ ಹುಟ್ಟಿ, ಅವರಿಗರಿವಿಲ್ಲದಂತೆಯೇ ಅವರ ದೇಹ ಹೆಣ್ಣಿನಂತೆ ನಡೆಯುವುದು, ಬಳುಕುವುದು ಮಾಡತೊಡಗಿ, ಜನರ ಗೇಲಿಗೆ ಒಳಗಾಗತೊಡಗಿದರು. ಒಂದು ದಿನ, ನೂರಿ ಮೊಹಮ್ಮದ್‌ರ ಹೆಣ್ಣಿನ ನಡವಳಿಕೆಯಿಂದ ಕೋಪಗೊಂಡು ಅವರ ಅಪ್ಪ ಸಲೀಂ ಚೆನ್ನಾಗಿ ಬಾರಿಸಿದರು. ಆವತ್ತು ನೂರಿ ಚೆನ್ನೆ ಯ ತಮ್ಮ ಮನೆ ಬಿಟ್ಟು ಓಡಿ ಹೋದರು.

ಮನೆ ಬಿಟ್ಟು ಹೋದ ನೂರಿ ಮೊಹಮ್ಮದ್‌ಗೆ ಚೆನ್ನೆ ಯ ಮನ್ನಾಡಿ ಎಂಬಲ್ಲಿನ ಫುಟ್‌ಪಾತ್ ಹೊಸ ಮನೆಯಾಯಿತು. ಮನ್ನಾಡಿಯ ಫುಟ್‌ಪಾತ್ ಸ್ನೇಹ ಮಯಿಯೇನೂ ಆಗಿರಲಿಲ್ಲ. ರಿಕ್ಷಾ ಚಾಲಕರು, ದಾರಿಹೋಕರು ಹಾಗೂ ಇತರರು ನೂರಿಯ ಹೊಸ ಪೀಡಕರಾದರು. ನೂರಿ ಹೊಟ್ಟೆ ಪಾಡಿಗಾಗಿ ಮತ್ತು ಫುಟ್‌ಪಾತಿನ ಪೀಡಕರಿಂದ ರಕ್ಷಿಸಿಕೊಳ್ಳಲು ಅಕ್ಕಪಕ್ಕದ ಮನೆಗಳಲ್ಲಿ ಮನೆ ಆಳಾಗಿ ಕೆಲಸ ಮಾಡತೊಡಗಿದರು. ೧೯೭೨ರಲ್ಲಿ ತಂದೆ ತೀರಿಕೊಂಡ ವಿಷಯ ತಿಳಿದು ಅವರು ಮನೆಗೆ ಹಿಂತಿರುಗಿದರು. ಆದರೆ, ಅಲ್ಲಿ ಹೆಚ್ಚು ದಿನ ಇರಲು ಸಾಧ್ಯವಾಗಲಿಲ್ಲ. ನೂರಿಯ ಮಲತಾಯಿ ಯಾವುದೋ ಒಂದು ಹೆಣ್ಣಿನೊಂದಿಗೆ ಅವರ ಮದುವೆ ಮಾಡಲು ತಯಾರಿ ಶುರು ಮಾಡಿದರು. ಒಂದು ಶುಕ್ರವಾರ ಮಸೀದಿಗೆ ಹೋಗುತ್ತಿದ್ದೇನೆ ಎಂದು ಮನೆಯಿಂದ ಹೊರ ಬಿದ್ದ ನೂರಿ ಮೊಹಮ್ಮದ್, ಸಂಜೆ ೬.೪೫ರ ರೈಲು ಹತ್ತಿ ಮುಂಬೈಗೆ ಪ್ರಯಾಣಿಸಿದರು.

ನೂರಿ ಹೊಸ ಬದುಕಿನ ನಿರೀಕ್ಷೆಯಲ್ಲಿ ಮುಂಬೈಗೆ ಹೋದರೂ ಅಲ್ಲಿ ಅವರ ಪ್ರಾರಂಭದ ದಿನಗಳು ಸುಖಕರವಾಗಿರಲಿಲ್ಲ. ಮುಂದೊಂದು ದಿನ ಪತ್ತಮ್ಮಾ ಎಂಬ ಒಬ್ಬಳು ಟ್ರಾನ್ಸ್‌ಜೆಂಡರ್ ನೂರಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಮೇಲೆ ಅವರ ಬದುಕಿಗೊಂದು ನೆಲೆ ಸಿಕ್ಕಿತು. ನೂರಿ ತಾನೊಬ್ಬ ಟೀಚರ್ ಆಗಬೇಕೆಂದು ಕನಸು ಕಂಡಿದ್ದರು. ಆದರೆ ಅದಾಗಲಿಲ್ಲ. ಮುಂಬೈಯಲ್ಲಿ ಅವರಿಗೆ ದತ್ತ ಎಂಬ ಒಬ್ಬ ಮಿಲಿಟರಿ ವ್ಯಕ್ತಿಯ ಪರಿಚಯವಾಯಿತು.

ಪರಿಚಯ ಪ್ರೇಮಕ್ಕೆ ತಿರುಗಿತು. ನೂರಿ ನಂತರ ಶಸ್ತ್ರಚಿಕಿತ್ಸೆಯ ಮೂಲಕ ತನ್ನ ದೇಹವನ್ನು ಸಂಪೂರ್ಣವಾಗಿ ಹೆಣ್ಣಾಗಿಸಿಕೊಂಡರು. ಅದು ಟ್ರಾನ್ಸ್‌ಜೆಂಡರ್ ಗಳು ಶಸ್ತ್ರಚಿಕಿತ್ಸೆಗೆ ಒಳಗಾಗಲು ಯಾವುದೇ ರೀತಿಯ ಅರಿವಳಿಕೆಗಳ ಸೌಲಭ್ಯವಿಲ್ಲದಂತಹ ಕಾಲ. ನೂರಿ ದತ್ತರ ಪ್ರೀತಿಗಾಗಿ ಆ ನೋವನ್ನೂ ಅನುಭವಿಸಿದರು. ನಂತರ ಇಬ್ಬರೂ ಮದುವೆಯಾದರು. ಮದುವೆ ನಂತರ ಅವರು ಚೆನ್ನೆ ಗೆ ನೆಲೆ ಬದಲಾಯಿಸಿದರು. ಮುಂದಿನ ೧೬ ವರ್ಷಗಳ ಕಾಲ ಅವರ ದಾಂಪತ್ಯ ಯಾವುದೇ ಅಡೆತಡೆಗಳಿಲ್ಲದೆ ಸಾಗಿತು. ನೂರಿ ತನ್ನ ಬದುಕು ಕೊನೆಗೂ ಭದ್ರ ನೆಲೆ ಕಂಡುಕೊಂಡಿತು ಎಂದು ಸಮಾಧಾನ ಪಡುತ್ತಿರು ವಾಗಲೇ ದುರಂತವೊಂದು ಅಪ್ಪಳಿಸಿತು. ೧೯೮೫ರ ಒಂದು ಜೆಟ್ ಅಪಘಾತದಲ್ಲಿ ದತ್ತ ಸಾವಿಗೀಡಾದರು.

ದತ್ತರ ಸಾವಿನ ನಂತರ ನೂರಿಯ ಬದುಕು ಮತ್ತೆ ಚುಕ್ಕಾಣಿ ಕಳೆದುಕೊಂಡ ದೋಣಿಯಂತಾಯಿತು. ಹೊಟ್ಟೆ ಪಾಡಿಗೆ ಅವರು ಎಷ್ಟೇ ಪ್ರಯತ್ನಪಟ್ಟರೂ ಎಲ್ಲೂ ಅವರಿಗೆ ಬೇರಾವುದೇ ಉದ್ಯೋಗ ಸಿಗದೆ, ವೇಶ್ಯಾವಾಟಿಕೆಗೆ ಇಳಿಯಬೇಕಾಯಿತು. ಮುಂದೆ, ಅದೇ ಅವರ ಬದುಕಿನ ಶಾಶ್ವತ ದಾರಿಯಾಯಿತು. ಆ ದಾರಿಯಲ್ಲಿಯೇ ಸಾಗಿದ ನೂರಿ ಮೊಹಮ್ಮದ್ ೧೯೮೭ರ ಜುಲೈ ೨೨ರಂದು ಭಾರತದ ಎರಡನೇ ಎಚ್‌ಐವಿ ಪಾಸಿಟಿವ್ ವ್ಯಕ್ತಿಯಾದರು.

ವೈದ್ಯರು ಅವರಿಗೆ ಒಂದು ಅಥವಾ ಎರಡು ವರ್ಷಗಳು ಬದುಕಬಹುದು ಎಂದು ಹೇಳಿದರು. ಆಗ ನೂರಿ ಮೊಹಮ್ಮದ್‌ರಿಗೆ ತನ್ನ ಬದುಕು ಕೊನೆಯಾಗುವುದಕ್ಕಿಂತ ಹೆಚ್ಚಾಗಿ ತಾನು ಆಗ ಒಬ್ಬಳು ವೇಶ್ಯೆಯಿಂದ ದತ್ತು ಪಡೆದಿದ್ದ ಮೂವರು ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಕಾಡಿತು. ಮುಂದೇನು ಮಾಡುವುದು ಎಂದು ಅವರು ಚಿಂತಿಸುತ್ತಿದ್ದಾಗ, ಡಾ.ಉಷಾ ರಾಘವನ್ ಎಂಬ ಒಬ್ಬರು ವೈದ್ಯರು ಅವರಿಗೆ ಧೈರ್ಯ ಹೇಳಿ, ಚೆನ್ನೈಯ ಸರ್ಕಾರಿ ಆಸ್ಪತ್ರೆಯಲ್ಲಿ ಸಾಂಕ್ರಾಮಿಕ ರೋಗ ವಿಭಾಗದಲ್ಲಿ ತಿಂಗಳಿಗೆ ೮೦೦ ರೂ. ಸಂಬಳದ ಒಂದು ಕೆಲಸ ಕೊಡಿಸಿದರು. ಅಲ್ಲಿ ಅವರು ರಕ್ತ ಸಂಗ್ರಹಿಸುವುದು, ಗಾಯಕ್ಕೆ ಬ್ಯಾಂಡೇಜ್ ಕಟ್ಟುವುದು, ಔಷಧಗಳನ್ನು ಗುರುತಿಸುವುದು ಮೊದಲಾದ ಕೆಲಸಗಳನ್ನು ಕಲಿತರು. ಡಾ.ಉಷಾ ರಾಘವನ್ ನೂರಿ ಮೊಹಮ್ಮದ್‌ರಿಗೆ ‘ಕಮ್ಯುನಿಟಿ ಆಕ್ಷನ್ ನೆಟ್‌ವರ್ಕ್’ ಎಂಬ ಸಂಘಟನೆಯನ್ನು ಸೇರಿ ಎಚ್‌ಐವಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೂ ಪ್ರೋತ್ಸಾಹಿಸಿದರು.

ಆದರೆ, ನೂರಿ ಮೊಹಮ್ಮದ್‌ಗೆ ಅಲ್ಲಿ ಕೆಲಸ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಅವರು ಟ್ರಾನ್ಸ್‌ಜೆಂಡರ್ ಮತ್ತು ಎಚ್‌ಐವಿ ಪಾಸಿಟಿವ್ ಆಗಿರುವುದನ್ನು ತಿಳಿದ ಜನ ಅವರನ್ನು ಹತ್ತಿರ ಬರಗೊಡುತ್ತಿರಲಿಲ್ಲ. ಅವರನ್ನು ನಾಯಿ, ಹಂದಿಗಳಿಗಿಂತ ಹೆಚ್ಚು ನಿಕೃಷ್ಟವಾಗಿ ನೋಡುತ್ತಿದ್ದರು. ಎಚ್‌ಐವಿ ಕಾಯಿಲೆ ಹರಡುತ್ತಾರೆ ಎಂದು ಅವರತ್ತ ಕಲ್ಲುಗಳನ್ನು ಎಸೆದರು! ‘ಕಮ್ಯುನಿಟಿ ಆಕ್ಷನ್ ನೆಟ್‌ವರ್ಕ್’ನ ಒಂದು ಕಾರ್ಯಕ್ರಮದಲ್ಲಿ ಅವರಿಗೆ ಹಂದಿಗಳಿಗೆ ತಿನ್ನಿಸುವ ಆಹಾರವನ್ನು ಕೊಟ್ಟು ಅವಮಾನಿಸಲಾಯಿತು! ಆದರೆ, ನೂರಿ ಮೊಹಮ್ಮದ್ ಅವ್ಯಾವುದಕ್ಕೂ ಎದೆಗುಂದದೆ, ಎಚ್‌ಐವಿ ಬಗ್ಗೆ ತನ್ನ ಸಮುದಾಯದಲ್ಲಿ ಜಾಗೃತಿ ಹುಟ್ಟಿಸುವುದು ಹಾಗೂ ಆ ಕಾಯಿಲೆ ಪೀಡಿತರನ್ನು ಅನುಕಂಪದಿಂದ ಕಾಣುವ ವಾತಾವರಣವನ್ನು ಸೃಷ್ಟಿಸಲು ತಮ್ಮಿಂದಾದುದನ್ನು ಮಾಡುವ ಪ್ರಯತ್ನವನ್ನು ಮುಂದುವರಿಸಿದರು.

ನೂರಿ ಮೊಹಮ್ಮದ್ ದಕ್ಷತೆಯಿಂದ ‘ಕಮ್ಯುನಿಟಿ ಆಕ್ಷನ್ ನೆಟ್‌ವರ್ಕ್’ನ ಭಾಗವಾಗಿ ಎಚ್‌ಐವಿ ಪೀಡಿತರ ಸಂಘಟನೆ ಮಾಡುತ್ತಿದ್ದುದನ್ನು ನೋಡಿದ ವಿಎಚ್‌ಎಸ್ ಆಸ್ಪತ್ರೆಯ ಡೈರೆಕ್ಟರ್ ಡಾ.ಜೋಸೆಫ್ ವಿಲಿಯಮ್ಸ್ ‘ಸೌತ್ ಇಂಡಿಯಾ ಪಾಸಿಟಿವ್ ನೆಟ್‌ವರ್ಕ್ (ಎಸ್‌ಐಪಿ)’ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿ, ಅದಕ್ಕೆ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದರು. ಅದು ನೂರಿ ಮೊಹಮ್ಮದ್‌ರ ಬದುಕಿಗೆ ಬೇರೊಂದು ತಿರುವು ನೀಡಿತು. ಎಸ್‌ಐಪಿಯನ್ನು ದಕ್ಷತೆಯಿಂದ ನಡೆಸಿದ ನೂರಿ ಮೊಹಮ್ಮದ್, ಮುಂದೆ ‘ಎಸ್‌ಐಪಿ ಮೆಮೊರಿಯಲ್ ಟ್ರಸ್ಟ್’ನ್ನು ರಚಿಸಿ, ಅದರ ಮೂಲಕ ಹೆತ್ತವರನ್ನು ಕಳೆದು ಕೊಂಡೋ ಅಥವಾ ತಮ್ಮ ಮನೆಗಳಿಂದ ಹೊರ ಹಾಕಲ್ಪಟ್ಟೋ ಅನಾಥರಾದ ಎಚ್‌ಐವಿ ಪಾಸಿಟಿವ್ ಮಕ್ಕಳನ್ನು ತಂದು ಸಾಕಿ, ಅವರ ಬದುಕಿಗೊಂದು ಭದ್ರ ನೆಲೆಯನ್ನು ಕಲ್ಪಿಸುವ ಕೆಲಸ ಮಾಡತೊಡಗಿದರು. ನೂರಿ ಮೊಹಮ್ಮದ್ ‘ಎಸ್‌ಐಪಿ ಮೆಮೊರಿಯಲ್ ಟ್ರಸ್ಟ್’ಗೆ ತಂದ ಮೊತ್ತ ಮೊದಲ ಮಗು ಎಚ್‌ಐವಿ ಕಾರಣಕ್ಕೆ ಹೆತ್ತವರೇ ಸರ್ಕಾರಿ ಆಸ್ಪತ್ರೆ ಬಳಿ ತಂದು ಬಿಸಾಕಿ ಹೋದ ಎರಡು ದಿನಗಳ ಒಂದು ಹೆಣ್ಣು ಮಗು. ಈಗ ‘ಎಸ್‌ಐಪಿ ಮೆಮೊರಿಯಲ್ ಟ್ರಸ್ಟ್’ನಲ್ಲಿ ಇಂತಹ ೪೦೦ ಎಚ್‌ಐವಿ ಪೀಡಿತ ಮಕ್ಕಳು ಆಶ್ರಯ ಪಡೆದಿವೆ. ಅವರೆಲ್ಲರಿಗೂ ಅಲ್ಲಿ ಶಿಕ್ಷಣ, ಔಷಽ, ಆಹಾರ ಮತ್ತು ಎಲ್ಲಕ್ಕೂ ಮಿಗಿಲಾಗಿ, ತಾಯಿಯ ಪ್ರೀತಿ ಮತ್ತು ಮಮತೆ ಸಿಗುತ್ತಿದೆ. ‘ಎಚ್‌ಐವಿ ಅಂದರೆ ಮರಣ ದಂಡನೆ ಅಲ್ಲ. ಆ ಮಾತಿಗೆ ನಾನೇ ಸಾಕ್ಷಿ‘ ಎನ್ನುವ ನೂರಿ ಮೊಹಮ್ಮದ್ ಆ ಮಕ್ಕಳಿಗಾಗಿಯೇ ತಮ್ಮ ಇಡೀ ಬದುಕನ್ನು ಮುಡುಪಾಗಿರಿಸಿದ್ದಾರೆ.

” ನೂರಿ ಹೊಸ ಬದುಕಿನ ನಿರೀಕ್ಷೆಯಲ್ಲಿ ಮುಂಬೈಗೆ ಹೋದರೂ ಅಲ್ಲಿ ಅವರ ಪ್ರಾರಂಭದ ದಿನಗಳು ಸುಖಕರವಾಗಿರಲಿಲ್ಲ. ಮುಂದೊಂದು ದಿನ ಪತ್ತಮ್ಮಾ ಎಂಬ ಒಬ್ಬಳು ಟ್ರಾನ್ಸ್‌ಜೆಂಡರ್ ನೂರಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಮೇಲೆ ಅವರ ಬದುಕಿಗೊಂದು ನೆಲೆ ಸಿಕ್ಕಿತು. ನೂರಿ ತಾನೊಬ್ಬ ಟೀಚರ್ ಆಗಬೇಕೆಂದು ಕನಸು ಕಂಡಿದ್ದರು. ಆದರೆ ಅದಾಗಲಿಲ್ಲ. ಮುಂಬೈಯಲ್ಲಿ ಅವರಿಗೆ ದತ್ತ ಎಂಬ ಒಬ್ಬ ಮಿಲಿಟರಿ ವ್ಯಕ್ತಿಯ ಪರಿಚಯವಾಯಿತು. ಪರಿಚಯ ಪ್ರೇಮಕ್ಕೆ ತಿರುಗಿತು. ನೂರಿ ನಂತರ ಶಸ್ತ್ರಚಿಕಿತ್ಸೆಯ ಮೂಲಕ ತನ್ನ ದೇಹವನ್ನು ಸಂಪೂರ್ಣವಾಗಿ ಹೆಣ್ಣಾಗಿಸಿಕೊಂಡರು. ಅದು ಟ್ರಾನ್ಸ್‌ಜೆಂಡರ್ ಗಳು ಶಸ್ತ್ರಚಿಕಿತ್ಸೆಗೆ ಒಳಗಾಗಲು ಯಾವುದೇ ರೀತಿಯ ಅರಿವಳಿಕೆಗಳ ಸೌಲಭ್ಯವಿಲ್ಲದಂತಹ ಕಾಲ. ನೂರಿ ದತ್ತರ ಪ್ರೀತಿಗಾಗಿ ಆ ನೋವನ್ನೂ ಅನುಭವಿಸಿದರು.”

Tags:
error: Content is protected !!