Mysore
29
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮುಂಬೈ ಮಂದಿಯತ್ತ ಮುಖಮಾಡುತ್ತಿರುವ ಐಎಫ್‌ ಎಫ್‌ ಐ

  • ಬಾ.ನಾ.ಸುಬ್ರಹ್ಮಣ್ಯ

ಗೋವಾದಲ್ಲಿ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಶಾಶ್ವತ ನೆಲೆ ದೊರಕಿದ ನಂತರ ವರ್ಷದಿಂದ ವರ್ಷಕ್ಕೆ ಅದರ ಬಾಲಿವುಡ್ ಪ್ರೇಮ (ಹಿಂದಿ) ಹೆಚ್ಚುತ್ತಲೇ ಇದೆ. ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಾರ್ತಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು, ಇನ್ನು ಮುಂದೆ ಬಾಲಿವುಡ್, ಟಾಲಿವುಡ್, ಗಾಂಜಿವುಡ್ ಇತ್ಯಾದಿ ಹೆಸರುಗಳಲ್ಲಿ ಬೇರೆ ಬೇರೆ ಭಾಷೆಯ ಚಿತ್ರಗಳನ್ನು ಕರೆಯುವುದಲ್ಲ; ಎಲ್ಲವೂ ಭಾರತೀಯ ಚಿತ್ರಗಳು ಎಂದು ಉದಾರವಾಗಿ ಎಲ್ಲ ಭಾರತೀಯ ಭಾಷೆಗಳ ಚಿತ್ರಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವಂತೆ ಮಾತನಾಡಿದರು.

ಆದರೆ, ಚಿತ್ರೋತ್ಸವದಲ್ಲಿ, ಚಿತ್ರೋತ್ಸವದ ಸಂಘಟನೆಯಲ್ಲಿ ಅಂತಹದೊಂದು ವಾತಾವರಣ ಕಾಣಿಸಲಿಲ್ಲ. ಹಿಂದಿ ಚಿತ್ರಗಳ ಮಂದಿಗೆ ಕೆಂಪುಹಾಸು ಅಲ್ಲಿತ್ತು. ಅತಿಥಿಗಳಾಗಿಯೋ, ವಿಶೇಷ ಆಹ್ವಾನಿತರಾಗಿ ಬಂದವರೋ ಹೆಚ್ಚಿನವರು ಹಿಂದಿ ಚಿತ್ರರಂಗದ ನಟರು, ತಂತ್ರಜ್ಞರು, ನಿರ್ಮಾಪಕರಾಗಿದ್ದರೇ ಹೊರತು ಇತರ ಭಾರತೀಯ ಭಾಷಾ ಚಿತ್ರರಂಗಗಳಿಂದ ಬಂದವರಿರಲಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಹೊರತುಪಡಿಸಿದರೆ, ಬಹುತೇಕ ತಜ್ಞರ ತರಗತಿಗಳಲ್ಲೂ ಅವರದೇ ಕಾರುಬಾರು. ದಕ್ಷಿಣ ಭಾರತದಿಂದ ನಟ ವಿಜಯ್ ಸೇತುಪತಿ ಅವರಿದ್ದರು, ಅದಕ್ಕೆ ಕಾರಣ ಅವರು ಅಭಿನಯಿಸಿದ ಚಿತ್ರವೊಂದು ಪ್ರೀಮಿಯರ್ ವಿಭಾಗದಲ್ಲಿ ಪ್ರದರ್ಶನ ಆಗುವುದಿತ್ತು. ತಾರೆ ಖುಷ್ಬೂ ಅವರೂ ಇದ್ದರು.

ನಾನು ಇದುವರೆಗೆ ಯಾವುದೇ ಚಿತ್ರೋತ್ಸವಕ್ಕೆ ಹೋಗಿಲ್ಲ. ಅಂತಾರಾಷ್ಟ್ರೀಯ ಚಿತ್ರೋತ್ಸವ ಎಂದರೆ ನನಗೆ ಬಹಳ ನಿರೀಕ್ಷೆ, ಕುತೂಹಲ ಇತ್ತು. ಆದರೆ ಇಲ್ಲಿ ನೋಡಿದರೆ, ಇದು ಸೈಮಾ ಪ್ರಶಸ್ತಿ ಇಲ್ಲವೇ ಫಿಲಂ-ರ್ ಪ್ರಶಸ್ತಿ ಪ್ರದಾನ ಸಮಾರಂಭವೋ ಎನಿಸಿತು -ಹೀಗಂತ ಇದುವರೆಗೆ ಯಾವುದೇ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಹೋಗದೆ ಇದ್ದ ವಿಜಯ್ ಸೇತುಪತಿ ಇಡೀ ಸಮಾರಂಭದ ಕುರಿತಂತೆ ಆತ್ಮೀಯರೊಂದಿಗೆ ಆಡಿದರೆನ್ನಲಾದ ಮಾತುಗಳು, ಚಿತ್ರೋತ್ಸವದ ಕುರಿತಂತೆ ತಿಳಿದಿರುವ ಬಹುತೇಕರ ಅಭಿಪ್ರಾಯವೂ ಹೌದು.

ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನಾ ಸಮಾರಂಭವನ್ನು ಖಾಸಗಿ ವಾಹಿನಿಗೆ ಒಪ್ಪಿಸಿದ್ದರಿಂದ ಇತರ ವಾಹಿನಿಗಳಿಗೆ ಪ್ರವೇಶ ಇರಲಿಲ್ಲವೆನ್ನಿ. ವಾಹಿನಿಯ ಪ್ರಸಾರಕ್ಕೆ, ಆ ಸಂದರ್ಭದ ಪ್ರಾಯೋಜಕತ್ವಕ್ಕೆ ಅನುಕೂಲ ಆಗಲಿ ಎನ್ನುವ ಕಾರಣದಿಂದ ಇರಬೇಕು ತಾರೆ ಮಾಧುರಿ ದೀಕ್ಷಿತ್ ಅವರಿಂದ ನೃತ್ಯ ಮಾಡಿಸಲಾಯಿತು! ಅಷ್ಟೇ ಅಲ್ಲ, ಅವರಿಗೆ ವಿಶೇಷ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಯಿತು. ಇನ್ನು ಕಾರ್ಯಕ್ರಮ ನಡೆಸಿಕೊಡುತ್ತಿದ್ದ ನಿರೂಪಕರಿಗಂತೂ, ಅಂತಾರಾಷ್ಟ್ರೀಯ ಚಿತ್ರೋತ್ಸವದ ವೇದಿಕೆಯ ಗೌರವದ ಪ್ರಾಥಮಿಕ ಅರಿವೂ ಇದ್ದಂತಿರಲಿಲ್ಲ. ಚಿತ್ರೋತ್ಸವದ ‘ವಸುಧೈವ ಕುಟುಂಬಕಂ’ – ಅವರಿಗೆ ‘ವಾಸುದೈವ ಕುಟುಂಬಕಂ’ ಆಗಿತ್ತು!

ನಿರೂಪಕರು ಹಾಡು ಹೇಳಿದ ಗಾಯಕಿ, ನೃತ್ಯ ಮಾಡಿದ ನರ್ತಕಿ ಅವರೊಂದಿಗೆ ವೇದಿಕೆಯಲ್ಲಿ ಹರಟೆ ಹೊಡೆಯುವ ಉಮೇದಿನಲ್ಲಿದ್ದರು. ಆದರೆ ಅವರುಗಳೇ ಕೊಂಚ ಹಿಂದೇಟು ಹಾಕಿದರು. ಒಟ್ಟು ಕಾರ್ಯಕ್ರಮ, ವಾಹಿನಿಗಳ ಪ್ರಸಾರಕ್ಕೆ ಅನುವಾಗುವಂತೆ ಇತ್ತೇ ಹೊರತು ಅಂತಾರಾಷ್ಟ್ರೀಯ ಚಿತ್ರೋತ್ಸವದ ಗುಣಮಟ್ಟ ಏರಿಸುವ ಹಾಗೆ ಇರಲಿಲ್ಲ.

ಐದು ಗಂಟೆಗೆ ಆರಂಭವಾಗಬೇಕಾಗಿದ್ದ ಉದ್ಘಾಟನಾ ಸಮಾರಂಭ ೫.೪೫ಕ್ಕೆ ಆರಂಭವಾಯಿತು. ಬಹುಶಃ ಮುಂಬೈಯಿಂದ ಬರಬೇಕಾಗಿದ್ದ ಯಾರೋ ನಟನೋ, ಇನ್ಯಾರೋ ಬರುವುದು ತಡವಾಗಿರಬೇಕು. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಢಾಳಾಗಿ ಕಂಡಿತು. ನಟ ಸಲ್ಮಾನ್ ಖಾನ್ ನಿರ್ಮಿಸಿದ ಚಿತ್ರವೊಂದು ಇಲ್ಲಿ ಪ್ರೀಮಿಯರ್‌ಗೆ ಆಯ್ಕೆಯಾಗಿತ್ತು. ಸಾಮಾನ್ಯವಾಗಿ ಯಾವುದೇ ಚಿತ್ರ ಪ್ರದರ್ಶನಕ್ಕೆ ಮೊದಲು ಅದರ ತಂಡವನ್ನು ಪ್ರೇಕ್ಷಕರಿಗೆ ಪರಿಚಯಿಸುವುದು ವಾಡಿಕೆ.

ಸಂಜೆ ಐದು ಗಂಟೆಗೆ ಆ ಚಿತ್ರದ ಪ್ರದರ್ಶನವಿತ್ತು. 4.30ಕ್ಕೆ ಸಲ್ಮಾನ್ ಖಾನ್‌ಗೆ ರೆಡ್ ಕಾರ್ಪೆಟ್ ಇತ್ತು. ಸಲ್ಮಾನ್ ಖಾನ್ ಅವರಿಗಾಗಿ ಛಾಯಾಗ್ರಾಹಕರು, ಅವರ ಅಭಿಮಾನಿಗಳು ಕಾದದ್ದೇ ಬಂತು. ಚಿತ್ರಮಂದಿರದ ಒಳಗೆ ಪ್ರೇಕ್ಷಕರು ಕೂಡ. ಐದು ಗಂಟೆಯಾದರೂ ಸಲ್ಮಾನ್ ಸುಳಿವಿಲ್ಲ. ಅವರು ಬಂದಾಗ 5.45! ಹಿಂದಿ ಚಿತ್ರಗಳ ಮಂದಿಯನ್ನು ಓಲೈಸುವುದರಲ್ಲೇ ತೃಪ್ತಿ ಕಾಣುವ ಚಿತ್ರೋತ್ಸವದ ಸಂಘಟನೆಯಲ್ಲಿರುವ ಮಂದಿ ಇಂತಹ ಅಬದ್ಧಗಳನ್ನು ಮಾಡಬಾರದು ಎಂದಾದರೂ ಅವರಿಗೆ ಹೇಳಬೇಕಾಗಿತ್ತು. ಹಾಗಾಗಲಿಲ್ಲ. ಜನಪ್ರಿಯ ಚಿತ್ರಗಳ ಮೊದಲ ಪ್ರದರ್ಶನ (ಪ್ರೀಮಿಯರ್) ವಿಭಾಗ ಕಳೆದ ವರ್ಷ ಚಿತ್ರೋತ್ಸವದಲ್ಲಿ ಸೇರ್ಪಡೆಯಾಗಿದೆ. ಇದರ ಅಗತ್ಯವಾದರೂ ಏನು? ಯಾರ ಸಲಹೆ ಇದು? ಎನ್ನುವ ಪ್ರಶ್ನೆಗೆ ಉತ್ತರ ಕಷ್ಟ. ಆರಂಭದ ದಿನಗಳಲ್ಲಿ, ಹಾಲಿವುಡ್ ಚಿತ್ರಗಳ ಹೊರತಾದ ಸಣ್ಣ ಪುಟ್ಟ ದೇಶಗಳ ಚಿತ್ರಮಂದಿರಗಳಲ್ಲಿ ನೋಡಲು ಸಾಧ್ಯವಾಗದ ಚಿತ್ರಗಳ ವೇದಿಕೆಯಾಗಿತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವ. ಆ ದೇಶಗಳ ಭಾಷೆ, ಜೀವನಕ್ರಮ, ರಾಜಕೀಯ ಇತ್ಯಾದಿಗಳನ್ನು ತಿಳಿಯಲು ದೇಶ ವಿದೇಶಗಳಲ್ಲಿ ಚಲನಚಿತ್ರ ಮಾಧ್ಯಮದಲ್ಲಿ ಆಗುತ್ತಿರುವ ಬದಲಾವಣೆ ಪ್ರಗತಿಯ ವಿವರ ತಿಳಿಯಲು ಇದು ಸಹಕಾರಿಯಾಗುತ್ತಿತ್ತು. ‘ದೇಶ ಸುತ್ತು, ಕೋಶ ಓದು’ ಎನ್ನುವುದಕ್ಕೆ ಪರ್ಯಾಯ ‘ಚಿತ್ರೋತ್ಸವಕ್ಕೆ ಹೋಗು’ ಎನ್ನುವುದಾಗಿತ್ತು.

ಪ್ರತಿ ವರ್ಷ ಒಂದೊಂದು ದೇಶವನ್ನು ಕೇಂದ್ರೀಕರಿಸಿ ಆ ದೇಶದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿತ್ತು. ಪುನರವಲೋಕನ ವಿಭಾಗದಲ್ಲಿ ವಿಶ್ವದ ಪ್ರಮುಖ ನಟ ಅಥವಾ ನಿರ್ದೇಶಕ ಅಥವಾ ತಂತ್ರಜ್ಞರೊಬ್ಬರ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿತ್ತು. ಈ ವರ್ಷ ಅವೆರಡೂ ವಿಭಾಗಗಳಿಲ್ಲ. ಕೊನೆಯ ಕ್ಷಣದ ಬದಲಾವಣೆಯೋ ಅಥವಾ ಇನ್ನೇನು ಕಾರಣವೋ ಗೊತ್ತಿಲ್ಲ. ಕಳೆದ ವರ್ಷ ಗತಿಸಿದ ಭಾರತವೂ ಸೇರಿದಂತೆ ವಿಶ್ವ ಚಿತ್ರರಂಗದ ಗಣ್ಯರಿಗೆ ಶ್ರದ್ಧಾಂಜಲಿ, ಶತಮಾನ ಕಂಡ ಚಿತ್ರತಜ್ಞರ ನೆನಪು ಇವುಗಳಿಗೆ ಈ ವರ್ಷ ಅದೇಕೋ ತಿಲಾಂಜಲಿ ನೀಡಲಾಗಿದೆ.

ಸಾಂಪ್ರದಾಯಿಕ ನೆಲೆಯಿಂದ ಬದಲಾಗಲೇ ಬೇಕಾದದ್ದು ಡಿಜಿಟಲ್ ಕ್ರಾಂತಿಯ ನಂತರ ತಾಂತ್ರಿಕ ಬೆಳವಣಿಗೆಗಳಿಗೆ ಸಂಬಂಧಪಟ್ಟಂತೆ. ಆ ನಿಟ್ಟಿನಲ್ಲಿ ಕೆಲಸಗಳೇನೋ ನಡೆದಿವೆ. ಎಂದಿನಂತೆ ಫಿಲಂ ಬಜಾರ್ ತೆರೆದಿದೆ. ಕಳೆದೆರಡು ವರ್ಷಗಳಂತೆ ೭೫ ಮಂದಿ ನವಪ್ರತಿಭಾವಂತರನ್ನು ಆಯ್ಕೆಮಾಡಿ ಅವರಿಗೆ ಸೂಕ್ತ ಅವಕಾಶಗಳ ಬಾಗಿಲು ತೆರೆಯುವ ಪ್ರಯತ್ನ ಈ ಬಾರಿಯೂ ಮುಂದುವರಿದಿದೆ.

ರಾಷ್ಟ್ರೀಯ ಚಲನಚಿತ್ರ ಕೇಂದ್ರದ ಪ್ರದರ್ಶನ ಸಿನಿಮೇಳದ ಪ್ರದರ್ಶನಗಳೇ ಮೊದಲಾದವು ಚಲನಚಿತ್ರ ರಂಗ ನಿನ್ನೆ ಇಂದು ನಾಳೆಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಡುತ್ತಿವೆ. ತಜ್ಞರ ಜೊತೆ ವಿವಿಧ ಸಂವಾದಗಳು ಇವೆ.

ಹ್ಞಾಂ, ಸಾಮಾನ್ಯವಾಗಿ, ಚಿತ್ರೋತ್ಸವ ಉದ್ಘಾಟನೆಯ ಮಾರನೇ ದಿನ ನಡೆಯುವ ಭಾರತೀಯ ಪನೋರಮಾ ವಿಭಾಗದ ಉದ್ಘಾಟನೆಗೆ ಕೇಂದ್ರ ವಾರ್ತಾ ಸಚಿವರು, ಇಲ್ಲವೇ ರಾಜ್ಯ ಸಚಿವರು ಬರುವುದು ವಾಡಿಕೆ. ಚಿತ್ರೋತ್ಸವ ನಡೆಯುವ ಮುನ್ನಾ ವರ್ಷದಲ್ಲಿ ಭಾರತದಲ್ಲಿ ತಯಾರಾದ ಆಯ್ದ ೨೫ ಉತ್ಕ ಷ್ಟ ಕಥಾಚಿತ್ರಗಳನ್ನು ಮತ್ತು ೨೦ ಕಥೇತರ ಚಿತ್ರಗಳನ್ನು ಈ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತಿದ್ದು, ಚಿತ್ರೋತ್ಸವದ ಅತ್ಯಂತ ಮಹತ್ವದ ವಿಭಾಗವಿದು. ಭಾರತದ ಚಿತ್ರೋದ್ಯಮದ ಬೆಳವಣಿಗೆಯನ್ನು ವಿಶ್ವಕ್ಕೆ ಪರಿಚಯಿಸುವ ವಿಭಾಗವಿದು. ಈ ವಿಭಾಗವನ್ನು ಸಚಿವಾಲಯದ ಕಾರ್ಯದರ್ಶಿ ಉದ್ಘಾಟಿಸಿದರು.

ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ವಾರ್ತಾ ಸಚಿವರು ಕೇಂದ್ರ ಸರ್ಕಾರದ ನಿರ್ಧಾರವೊಂದನ್ನು ಪ್ರಕಟಿಸಿದರು. ಅದು ಭಾರತದಲ್ಲಿ ಚಿತ್ರೀಕರಣವಾಗುವ ವಿದೇಶಿ ಚಿತ್ರಗಳಿಗೆ ನೀಡುವ ನೆರವಿನ ಕುರಿತು. ಈ ಹಿಂದೆ ಇಲ್ಲಿ ಚಿತ್ರೀಕರಣವಾಗುವ ವಿದೇಶಿ ಚಿತ್ರಗಳಿಗೆ, ಅದು ಭಾರತದಲ್ಲಿ ಖರ್ಚು ಮಾಡುವ ಮೊತ್ತದ ಪ್ರತಿಶತ 40ರಷ್ಟು, ಗರಿಷ್ಟ 30 ಕೋಟಿ ರೂ. ಅನುದಾನ ನೀಡುವುದಾಗಿ ಅವರು ಹೇಳಿದ್ದಾರೆ. ಚಿತ್ರೀಕರಣ ಮಾತ್ರವಲ್ಲ, ಚಿತ್ರೀಕರಣೋತ್ತರ ಕೆಲಸಗಳಿಗೂ ಇದು ಅನ್ವಯವಾಗುತ್ತದೆ. ಈ ಹಿಂದೆಯೂ ಈ ಯೋಜನೆ ಇತ್ತು. ಆಗ ಅದು ಶೇ.೩೦ ಆಗಿದ್ದು, ಗರಿಷ್ಟ ೨೫ ಕೋಟಿ ರೂ. ಆಗಿತ್ತು.

ಆಗಿನ ಗೋವಾ ಮುಖ್ಯಮಂತ್ರಿಗಳಾಗಿದ್ದ ಮನೋಹರ್ ಪಾರಿಕ್ಕರ್ ಅವರಿಗೆ, ಪಕ್ಷವನ್ನು ಅಧಿಕಾರಕ್ಕೆ ತಂದದ್ದಕ್ಕೆ ಅಂದಿನ ಕೇಂದ್ರ ವಾರ್ತಾ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ನೀಡಿದ ಉಡುಗೊರೆ ಇದು ಎಂದು ಪಾರಿಕ್ಕರ್ ಅವರು 2004ರಲ್ಲಿ ಚಿತ್ರೋತ್ಸವ ಉದ್ಘಾಟನೆಯ ದಿನ ಹೇಳಿದ್ದರಲ್ಲದೆ ಮಾರನೇ ದಿನವೂ ಅದನ್ನು ಪುನರುಚ್ಚರಿಸಿದ್ದರು. ಇದೀಗ ಅವರ ಉತ್ತರಾಧಿಕಾರಿ ಪ್ರಮೋದ್ ಸಾವಂತ್ ಅವರು ಗೋವಾದಲ್ಲಿ ಅತ್ಯಾಧುನಿಕ ಚಿತ್ರನಗರಿ ನಿರ್ಮಿಸುವುದಾಗಿ ಹೇಳಿದ್ದಾರೆ. ಚಿತ್ರೋತ್ಸವ ಗೋವಾದ ಪ್ರವಾಸೋದ್ಯಮಕ್ಕೆ ಒತ್ತಾಸೆಯಾಗುತ್ತಿದೆ. ಚಿತ್ರನಗರಿ ನಿರ್ಮಿಸಲು ಸಾಧ್ಯವಾದದ್ದೇ ಆದರೆ, ಮುಂಬೈ ಮಂದಿಗೆ ಇನ್ನೊಂದು ಚಿತ್ರನಗರಿ ಸಿಕ್ಕಂತಾಗುತ್ತದೆ. ಚಿತ್ರೋತ್ಸವ ಗೋವಾಕ್ಕೆ ನೀಡುವ ಇನ್ನೊಂದು ಕೊಡುಗೆ ಇದಾಗಬಹುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ