Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ದಾರಿ ತಪ್ಪಿದ ಮಕ್ಕಳನ್ನು ಮನೆ ತಲುಪಿಸುವ ಐಎಎಸ್ ಅಧಿಕಾರಿ

ಪಂಜು ಗಂಗೊಳ್ಳಿ

ಪೋಷಕರಿಂದ ಬೇರ್ಪಟ್ಟ ಮಕ್ಕಳನ್ನು ಮನೆಗೆ ಸೇರಿಸಲು ‘ಮಿಷನ್ ಮುಸ್ಕಾನ್’ ವಿಶೇಷ ಯೋಜನೆ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ೧೨ ವರ್ಷ ಪ್ರಾಯದ ಶೋಯಬ್ ಅಹಮದ್ ಮಾನಸಿಕವಾಗಿ ತುಸು ಅಸ್ವಸ್ಥ. ಸರಿಯಾಗಿ ಮಾತಾಡಲಾರ. ಆದರೂ ಅವನು ತನ್ನ ಹಳ್ಳಿಯ ಒಂದು ಕ್ಷೌರದ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದನು. ೨೦೧೯ರ ಒಂದು ದಿನ ಬೆಳಿಗ್ಗೆ ಎಂದಿನಂತೆ ಅವನು ಕೆಲಸ ಮಾಡಲು ಅಂಗಡಿಗೆ ಹೋದನು. ಆದರೆ, ಆ ದಿನ ಅವನು ಎಂದಿನಂತೆ ಸಂಜೆ ಹೊತ್ತು ತನ್ನ ಮನೆಗೆ ವಾಪಸಾಗಲಿಲ್ಲ. ಅವನ ಮನೆಯವರು ಆ ಕ್ಷೌರದ ಅಂಗಡಿಗೆ ಹೋಗಿ ವಿಚಾರಿಸಿದಾಗ, ಅಂಗಡಿ ಮಾಲೀಕ ಶೋಯಬ್ ಆವತ್ತು ಕೆಲಸಕ್ಕೆ ಬರಲಿಲ್ಲ ಎಂದು ಹೇಳಿದನು. ಅವನ ಅಣ್ಣ ರಹೀದ್ ತನ್ನ ಬೈಕಿನಲ್ಲಿ ಸುಮಾರು ೧೩೦ ಕಿ.ಮೀ. ದೂರ ಹೋಗಿ ಹುಡುಕಿದರೂ ಎಲ್ಲೂ ಶೋಯಬ್ನ ಸುಳಿವು ಸಿಗಲಿಲ್ಲ. ನಂತರ ಮನೆಯವರು ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದರು. ನಾಲ್ಕು ವರ್ಷಗಳ ನಂತರವೂ ಶೋಯಬ್‌ನ ಯಾವುದೇ ಸುಳಿವು ಸಿಗದಿದ್ದಾಗ ಅವನು ಜೀವಂತವಿದ್ದಾನೋ ಇಲ್ಲವೋ ಅನ್ನುವುದೂ ಅವರಿಗೆ ಗೊತ್ತಾಗಲಿಲ್ಲ.

೨೦೨೩ರ ಜನವರಿ ತಿಂಗಳ ಒಂದು ದಿನ ಶೋಯಬ್ ಸಿಕ್ಕಿದ್ದಾನೆ ಎಂದು ಪೊಲೀಸ್ ಠಾಣೆಯಿಂದ ಫೋನ್ ಕರೆ ಬಂದಾಗ ಅವರಿಗಾದ ಸಂತೋಷ ಅಷ್ಟಿಷ್ಟಲ್ಲ. ಅವನ ಮನೆಯವರಲ್ಲದೆ ಅಕ್ಕಪಕ್ಕದ ಮನೆಯವರೂ ಸಂತೋಷಪಟ್ಟರು. ವಿಡಿಯೋ ಕರೆಯಲ್ಲಿ ಅವನ ಮುಖ ನೋಡಿ ಮಾತೂ ಆಡಿದರು. ಮತ್ತು, ಅದಾಗಿ ಕೆಲವು ದಿನಗಳಲ್ಲಿ ಶೋಯಬ್ ಮನೆ ಸೇರಿದನು. ಆವತ್ತು ಏನಾಗಿತ್ತೆಂದರೆ ಕ್ಷೌರದ ಅಂಗಡಿಗೆ ಕೆಲಸಕ್ಕೆ ಹೋದ ಶೋಯಬ್ ಆಕಸ್ಮಿಕವಾಗಿ ಅಂಗಡಿಯ ಹತ್ತಿರದಲ್ಲಿದ್ದ ಬಸ್ ನಿಲ್ದಾಣಕ್ಕೆ ಹೋಗಿ ಒಂದು ಬಸ್ಸಲ್ಲಿ ಕುಳಿತನು. ಆ ಬಸ್ಸು ಹೊರಟು ಅವನನ್ನು ಎಲ್ಲಿಗೋ ಕರೆದುಕೊಂಡು ಹೋಗಿ ಬಿಟ್ಟಿತು. ಏನು ಮಾಡುವುದೆಂದು ತಿಳಿಯದೆ ಗಾಬರಿಯಾದ ಶೋಯಬ್ ಬೇರೆ ಬೇರೆ ಬಸ್ಸು ಹತ್ತಿ, ರೈಲು ಹತ್ತಿ ಎಲ್ಲೆಲ್ಲಿಗೋ ಹೋಗಿ, ಕೊನೆಗೆ ತನ್ನ ಮನೆಯಿಂದ ೧,೦೦೦ ಕಿ.ಮೀ. ದೂರದ ವಾರಣಾಸಿ ತಲುಪಿದನು.

ವಾಪಸ್ ಮನೆಗೆ ಹೋಗುವುದು ಹೇಗೆಂದು ತಿಳಿಯದೆ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಂಡು, ರೈಲ್ವೆ ನಿಲ್ದಾಣದಲ್ಲಿ ಮಲಗುತ್ತಿದ್ದನು. ತಮ್ಮ ಮನೆಗಳಿಂದ ಕಾಣೆಯಾಗಿ ನಂತರ ಹೀಗೆ ತಮ್ಮ ಕುಟುಂಬ ಸೇರಿದಮಕ್ಕಳಲ್ಲಿ ಶೋಯಬ್ ಒಬ್ಬ. ಅವನಂತೆ ೮೦೦ಕ್ಕೂ ಹೆಚ್ಚು ಮಕ್ಕಳು ತಮ್ಮ ಹೆತ್ತವರು, ಕುಟುಂಬಿಕರನ್ನು ಸೇರಿದ್ದಾರೆ. ಇದಕ್ಕೆ ಕಾರಣ ವಾರಣಾಸಿಯ ಹಿಮಾಂಶು ನಾಗ್ಪಾಲ್ ಎಂಬ ಒಬ್ಬ ದಕ್ಷ ಹಾಗೂ ಮಾನವೀಯ ಕಳಕಳಿಯ ಐಎಎಸ್ ಅಧಿಕಾರಿ. ಮೂಲತಃ ಹರ‍್ಯಾಣದ ಹಿಸ್ಸಾರ್ ಜಿಲ್ಲೆಯವರಾದ ಅವರು ೨೦೧೯ರ ಬ್ಯಾಚಿನ ಐಎಎಸ್ ಅಧಿಕಾರಿ. ೨೦೨೨ರಲ್ಲಿ ಅವರು ವಾರಣಾಸಿಯ ಚೀಫ್ ಡೆವಲಪ್ಮೆಂಟ್ ಆಫೀಸರ್ ಆಗಿ ನಿಯುಕ್ತಿಗೊಂಡರು. ಒಂದು ದಿನ ತಮ್ಮ ಫೀಲ್ಡ್ ವಿಸಿಟ್ ಸಮಯದಲ್ಲಿ ಅವರಿಗೆ ಒಂದು ವೃತ್ತದ ಬಳಿ ಕೆಲವು ಮಕ್ಕಳು ಭಿಕ್ಷೆ ಬೇಡುತ್ತಿರುವುದು ಕಾಣಿಸಿತು. ಅವರನ್ನು ಹತ್ತಿರ ಕರೆದು ಮಾತನಾಡಿಸಿದಾಗ ಆ ಮಕ್ಕಳು ನಿರಾಶ್ರಿತರಾಗಿ ಫ್ಲೆ ಓವರ್ ಕೆಳಗೆ ಮಲಗುತ್ತಿರುವುದು ಹಾಗೂ ಆ ಮಕ್ಕಳು ಮೂಲತಃ ವಾರಣಾಸಿಯರಲ್ಲ ಎಂಬುದು ತಿಳಿಯಿತು.

ಪ್ರತೀದಿನ ಸಾವಿರಾರು ಜನ ತೀರ್ಥಯಾತ್ರೆಗಾಗಿ ವಾರಣಾಸಿಗೆ ಬರುತ್ತಾರೆ. ಎಷ್ಟೋ ಸಂದರ್ಭಗಳಲ್ಲಿ ತಮ್ಮ ತಂದೆ ತಾಯಿ ಅಥವಾ ಸಂಬಂಧಿಕರೊಂದಿಗೆ ಬರುವ ಚಿಕ್ಕ ಮಕ್ಕಳು ಏನೇನೋ ಕಾರಣಕ್ಕೆ ಅವರಿಂದ ಬೇರೆಯಾಗಿ, ವಾಪಸ್ ಮನೆಗೆ ಹೋಗಲಾಗದೆ ಕೊನೆಗೆ ಭಿಕ್ಷೆ ಬೇಡಲು ಶುರು ಮಾಡಿ ರೈಲ್ವೇ ನಿಲ್ದಾಣ, ಫ್ಲೆ  ಓವರ್ ಕೆಳಗೆ, ವೃತ್ತಗಳ ಅಕ್ಕಪಕ್ಕ, ದೇವಸ್ಥಾನ ಹಾಗೂ ಘಾಟ್‌ಗಳ ಹತ್ತಿರ ಆಶ್ರಯ ಪಡೆಯುತ್ತಾರೆ. ಕೆಲವು ಮಕ್ಕಳು ತಿಂಗಳುಗಟ್ಟಳೆ ಹೀಗೆ ನಿರಾಶ್ರಿತರಾದರೆ ವರ್ಷಾನುಗಟ್ಟಳೆ ನಿರಾಶ್ರಿತರಾಗುವ ಮಕ್ಕಳೂ ಇದ್ದಾರೆ. ವಾರಣಾಸಿಯ ಅಕ್ಕಪಕ್ಕದ ಜಿಲ್ಲೆಗಳ ಮಕ್ಕಳಲ್ಲದೆ ದೂರದ ಅಸ್ಸಾಂ, ತೆಲಂಗಾಣ, ಕರ್ನಾಟಕ ಹಾಗೂ ನೇಪಾಳದ ಮಕ್ಕಳೂ ಇದ್ದಾರೆ. ಇಂತಹ ಮಕ್ಕಳ ಪರಿಸ್ಥಿತಿಯನ್ನು ಕಂಡು ಮರುಗಿದ ಹಿಮಾಂಶು ನಾಗ್ಪಾಲ್ ಅವರನ್ನು ಅವರವರ ಮನೆಗೆ ಸೇರಿಸಲು ‘ಮಿಷನ್ ಮುಸ್ಕಾನ್’ ಎಂಬ ಒಂದು ವಿಶೇಷ ಯೋಜನೆಯನ್ನು ರೂಪಿಸಿದರು.

ಮಿಷನ್ ಮುಸ್ಕಾನ್‌ನಲ್ಲಿ ಚೈಲ್ಡ್ ಡೆವಲಪ್ಮೆಂಟ್, ಸೋಶಿಯಲ್ ವೆಲ್ಛೇರ್, ಆಂಟಿಹ್ಯೂಮನ್ ಟ್ರಾಫಿಕಿಂಗ್ ಮತ್ತು ಪೊಲೀಸ್ ಮೊದಲಾದ ಇಲಾಖೆಗಳ ೬೦ ಅಧಿಕಾರಿಗಳ ೧೨ ತಂಡಗಳು ಕಾರ್ಯ ನಿರ್ವಹಿಸುತ್ತವೆ. ಈ ಅಧಿಕಾರಿಗಳು ಇಂತಹ ಮಕ್ಕಳನ್ನು ಗುರುತಿಸಿದ ನಂತರ, ಅವರಿಗೆ ಸೂಕ್ತ ಆಶ್ರಯವನ್ನು ಒದಗಿಸುತ್ತಾರೆ. ಅವರಿಂದ ಅವರ ಹೆಸರು, ತಂದೆತಾಯಿಗಳ ಹೆಸರು, ಊರಿನ ಹೆಸರು, ವಿಳಾಸ, ಫೋನ್ ನಂಬರು ಮೊದಲಾದ ವಿವರಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳಿಂದ ಈ ವಿವರಗಳನ್ನು ಪಡೆಯಲು ಹಲವು ದಿನಗಳ ಕಾಲ ಶ್ರಮಪಡಬೇಕಾಗುತ್ತದೆ. ಮಕ್ಕಳು ಮಾನಸಿಕವಾಗಿ ಅಸ್ವಸ್ಥರಾಗಿದ್ದರಂತೂ ಈ ಕೆಲಸ ಇನ್ನೂ ಹೆಚ್ಚು ಶ್ರಮದಾಯಕವಾಗಿರುತ್ತದೆ. ಆಗ ಮಾನಸಿಕ ತಜ್ಞರ ನೆರವು ಪಡೆಯುತ್ತಾರೆ.

ಹೇಗೋ ಮಾಡಿ ಮಕ್ಕಳಿಂದ ಯಾವುದಾರೊಂದು ಸುಳಿವು ಪಡೆಯುವಲ್ಲಿ ಸಫಲರಾದ ಮೇಲೆ ಆ ಮಕ್ಕಳ ಫೋಟೋಗಳನ್ನು ಸ್ಥಳೀಯ ಹಾಗೂ ದೂರದ ಬೇರೆ ಬೇರೆ ಪೊಲೀಸ್ ಠಾಣೆಗಳಿಗೆ ಕಳಿಸುತ್ತಾರೆ. ಅವರ ಸಹಾಯದಿಂದ ಆ ಮಕ್ಕಳ ಊರುಗಳನ್ನು ಗುರುತಿಸಿ, ಅವರ ಕುಟುಂಬಿಕರನ್ನು ಪತ್ತೆ ಹಚ್ಚಿ, ಮಕ್ಕಳು ಸಿಕ್ಕ ಸುದ್ದಿ ತಿಳಿಸುತ್ತಾರೆ. ವಾರಣಾಸಿ ಪೊಲೀಸ್ ಠಾಣೆಗೆ ಹೋಗಿ ಮಕ್ಕಳನ್ನು ಅವರ ವಶಕ್ಕೆ ನೀಡಲಾಗುತ್ತದೆ. ಒಂದು ವೇಳೆ ಕುಟುಂಬಗಳು ವಾರಣಾಸಿಗೆ ಪ್ರಯಾಣ ಮಾಡಲಾಗದಷ್ಟು ಬಡವರಾಗಿದ್ದರೆ ಅಧಿಕಾರಿಗಳೇ ಸ್ವತಃ ಆ ಮಕ್ಕಳನ್ನು ಅವರ ಊರುಗಳಿಗೆ ಕರೆದುಕೊಂಡು ಹೋಗಿ ಅವರ ಕುಟುಂಬಗಳ ವಶಕ್ಕೆ ನೀಡುತ್ತಾರೆ. ದಾಖಲೆಗಾಗಿ ಆ ಮಗುವಿನೊಂದಿಗೆ ಆ ಅಧಿಕಾರಿ ಮತ್ತು ಮನೆಯವರ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳು ಅವರ ಮನೆಗಳನ್ನು ಸೇರಿದ ನಂತರವೂ ಅಧಿಕಾರಿಗಳು ಮನೆಯವರ ಸಂಪರ್ಕದಲ್ಲಿದ್ದು ಫೋನ್ ಕರೆ ಹಾಗೂ ವಿಡಿಯೋ ಕರೆಗಳ ಮೂಲಕ ಮಕ್ಕಳ ಕ್ಷೇಮ ಸಮಾಚಾರವನ್ನು ವಿಚಾರಿಸುತ್ತಿರುತ್ತಾರೆ.

ಮಕ್ಕಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲು ಸಾಮಾನ್ಯವಾಗಿ ವಾರ, ತಿಂಗಳುಗಳು ತಗಲಿದರೆ ಕೆಲವು ಪ್ರಕರಣಗಳಲ್ಲಿ ವರ್ಷಗಳು ಕಳೆಯುವುದೂ ಇದೆ. ಅಂತಹ ಸಂದರ್ಭಗಳಲ್ಲಿ ಅವರನ್ನು ನೋಡಿಕೊಳ್ಳಲು೨೦ ಮಕ್ಕಳ ಆಶ್ರಮಗಳಿವೆ. ಈ ಆಶ್ರಮಗಳಲ್ಲಿ ಮಕ್ಕಳಿಗೆ ಊಟ, ವಸತಿ ಮತ್ತು ವೈದ್ಯಕೀಯ ವ್ಯವಸ್ಥೆ ಮಾತ್ರವಲ್ಲದೆ, ಹೊರಗಿನಿಂದ ಶಿಕ್ಷಕರನ್ನು ಆಹ್ವಾನಿಸಿ, ಅವರಿಗೆ ಮೂಲಭೂತ ಶಿಕ್ಷಣವನ್ನೂ ನೀಡಲಾಗುತ್ತದೆ. ಬೆಳಿಗ್ಗೆ ಯೋಗ ಕಲಿಸಲಾಗುತ್ತದೆ. ವಿವಿಧ ರೀತಿಯ ಆಟೋಟ ಚಟುವಟಿಕೆಗಳಿವೆ. ಚಿತ್ರಕಲೆ ಹಾಗೂ ಕ್ರಾಫ್ಟ್‌ಗಳನ್ನು ಕಲಿಸುತ್ತಾರೆ. ಸ್ವತಃ ಹಿಮಾಂಶು ನಾಗ್ಪಾಲ್ ವಾರಕ್ಕೊಮ್ಮೆಯಾದರೂ ಮಕ್ಕಳ ಆಶ್ರಮಗಳಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸುತ್ತಾರೆ. ಕಳೆದುಕೊಂಡ ಮಕ್ಕಳನ್ನು ಪುನಃ ಪಡೆದಾಗ ತಂದೆ ತಾಯಿಗಳ ಮುಖದಲ್ಲಿ ಮೂಡುವ ಸಂತೋಷವೇ ತಮಗೆ ಸ್ಛೂರ್ತಿ ನೀಡುತ್ತದೆ ಎಂದು ಹಿಮಾಂಶು ನಾಗ್ಪಾಲ್ ಹೇಳುತ್ತಾರೆ.

” ಮಕ್ಕಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲು ಸಾಮಾನ್ಯವಾಗಿ ವಾರ,ತಿಂಗಳುಗಳು ತಗಲಿದರೆ ಕೆಲವು ಪ್ರಕರಣಗಳಲ್ಲಿ ವರ್ಷಗಳು ಕಳೆಯುವುದೂ ಇದೆ. ಅಂತಹಸಂದರ್ಭಗಳಲ್ಲಿ ಅವರನ್ನು ನೋಡಿಕೊಳ್ಳಲು ೨೦ ಮಕ್ಕಳ ಆಶ್ರಮಗಳಿವೆ.”

Tags:
error: Content is protected !!