Mysore
29
scattered clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಇಳಿಗಾಲದಲ್ಲಿ ಆರೋಗ್ಯ ರಕ್ಷಣೆ

ಡಾ.ದುಷ್ಯಂತ್ ಪಿ.

ವಯಸ್ಸಾಗುತ್ತಿದ್ದಂತೆಯೇ ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಇದರಿಂದಾಗಿ ಅವರಿಗೆ ಬಹುಬೇಗನೆ ಸೋಂಕು ತಗುಲುವ ಸಾಧ್ಯತೆಗಳಿರುತ್ತವೆ. ಸೋಂಕು ರೋಗಗಳಿಂದ ಬಹುಬೇಗ ಗುಣಮುಖರಾಗಲು ಸಾಧ್ಯವಾಗದೆ ಅವರು ಅನಾರೋಗ್ಯದಿಂದ ಬಳಲುವ ಸ್ಥಿತಿ ನಿರ್ಮಾಣ ವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿ ರುವ ಹವಾಮಾನ, ಹದಗೆಟ್ಟ ವಾತಾವರಣದಿಂದಾಗಿ ಸೋಂಕು ರೋಗಗಳು ಹೆಚ್ಚುತ್ತಿವೆ. ಈ ರೋಗಗಳಿಂದ ವಯೋವೃದ್ಧರು ರಕ್ಷಣೆ ಪಡೆಯುವುದು ಅಗತ್ಯ. ಇದಕ್ಕಾಗಿ ಅವರು ಕೆಲವು ಮಾರ್ಗಗಳನ್ನು ಅನುಸರಿಸುವುದು ಅತ್ಯವಶ್ಯ.

1) ವೈಯಕ್ತಿಕ ನೈರ್ಮಲ್ಯ:  ವೃದ್ಧರ ಆರೋಗ್ಯ ರಕ್ಷಣೆಯಲ್ಲಿ ವೈಯಕ್ತಿಕ ಆರೋಗ್ಯ ಪ್ರಮುಖ ಪಾತ್ರವಹಿಸುತ್ತದೆ. ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ನಿಯಮಿತವಾಗಿ ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು. ಇದರಿಂದ ಆಹಾರ, ಗಾಳಿ ಮತ್ತು ಚರ್ಮದಿಂದ ಉಂಟಾಗುವ ಸೋಂಕುಗಳನ್ನು ತಡೆಗಟ್ಟಬಹುದು. ಇವುಗಳೊಂದಿಗೆ ಬಾಯಿ ಮತ್ತು ಹಲ್ಲುಗಳ ಸ್ವಚ್ಛತೆ ಕಾಪಾಡುವುದು ಅಷ್ಟೇ ಮುಖ್ಯ ವಯೋವೃದ್ಧರು ಸಾಮಾನ್ಯವಾಗಿ ಇವುಗಳ ಬಗ್ಗೆ ನಿರ್ಲಕ್ಷ  ತೋರುವುದರಿಂದ ಕುಟುಂಬಸ್ಥರು ಇವುಗಳ ಬಗ್ಗೆ ಅವರಿಗೆ ಎಚ್ಚರಿಕೆ ನೀಡಬೇಕು. ಅಲ್ಲದೆ ವೃದ್ಧರ ಚರ್ಮ ಮೃದುವಾಗಿರುವುದರಿಂದ ಗಾಯ ಮತ್ತು ಸೋಂಕು ಉಂಟಾಗಬಹುದು. ಹಾಗಾಗಿ ಲೋಷನ್, ಕೊಬ್ಬರಿ ಎಣ್ಣೆ ಬಳಸಿ ಚರ್ಮ ಒಣಗದಂತೆ ತೇವಾಂಶ ಕಾಪಾಡಿಕೊಳ್ಳಬೇಕು.

೨) ಮನೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು:  ಮನೆಯ ವಾತಾವರಣದಲ್ಲಿ ಯಾವುದೇ ರೀತಿಯ ಮಾಲಿನ್ಯತೆ ಇರದಂತೆ ನೋಡಿಕೊಳ್ಳಬೇಕು. ಹೆಚ್ಚು ಗಾಳಿ ಸಂಚಾರ ಮತ್ತು ಬೆಳಕು ಇರುವಂತೆ ಮಾಡಬೇಕು. ಇದರಿಂದ ವಾತಾವರಣದಲ್ಲಿ ರೋಗಾಣುಗಳು ಕಡಿಮೆಯಾಗುತ್ತವೆ. ವೃದ್ಧರು ಉಪಯೋಗಿಸುವ ಹಾಸಿಗೆ, ಬಟ್ಟೆ ಮತ್ತು ಸಲಕರಣೆಗಳನ್ನು ಆಗಾಗ್ಗೆ ಸೋಂಕುನಿವಾರಕಗಳನ್ನು ಬಳಸಿ ಶುಚಿಗೊಳಿಸಬೇಕು.

೩) ಆರೋಗ್ಯಕರ ಜೀವನಶೈಲಿ:  ವಯಸ್ಸು ೬೦ ವರ್ಷ ದಾಟುತ್ತಿದ್ದಂತೆಯೇ ಆರೋಗ್ಯಕರ ಜೀವನಶೈಲಿ ಅತಿಮುಖ್ಯವಾಗುತ್ತದೆ. ಸಮತೋಲನ ಆಹಾರ ಸೇವನೆ ಮಾಡುವುದು, ನಿಯಮಿತವಾಗಿ ದೈಹಿಕ ವ್ಯಾಯಾಮದಂತಹ ಚಟುವಟಿಕೆಗಳು, ಹೆಚ್ಚು ನೀರು ಕುಡಿಯುವುದು, ಆರೋಗ್ಯಕರ ನಿದ್ರೆ ಮಾಡಬೇಕು. ಇವು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

೪) ಮಾನಸಿಕ ಆರೋಗ್ಯ:  ಹಿರಿಯರಿಗೆ ಮುಖ್ಯವಾಗಿ ಬೇಕಾದದ್ದು ಮಾನಸಿಕ ಆರೋಗ್ಯ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದೂ ಸಹಕಾರಿಯಾಗಿದೆ. ಒತ್ತಡವಿಲ್ಲದ ಜೀವನ, ಉತ್ತಮ ಹವ್ಯಾಸಗಳು, ಯೋಗ, ಧ್ಯಾನ, ಹಿತಕರ ಸಾಮಾಜಿಕ ಬಾಂಧವ್ಯಗಳ ಮೂಲಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

೫) ಸಮರ್ಪಕ ವೈದ್ಯಕೀಯ ಆರೈಕೆ:  ವೃದ್ಧರಲ್ಲಿ ಜ್ವರ, ಕೆಮ್ಮು, ಮೂತ್ರ ವಿಸರ್ಜನೆಯಲ್ಲಿ ನೋವು, ಭೇದಿ ಮುಂತಾದ ಸೋಂಕಿನ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಅವುಗಳಿಗೆ ತಕ್ಷಣ ವೈದ್ಯಕೀಯ ಸಲಹೆ ಪಡೆದು ಔಷಽಗಳನ್ನು ಸೇವಿಸಬೇಕು.

೬ ರೋಗನಿರೋಧಕ ಲಸಿಕೆ:  ಮಕ್ಕಳಿಗೆ ಅಷ್ಟೇ ಅಲ್ಲದೆ ವೃದ್ಧರಿಗೂ ಕೆಲವು ಬಗೆಯ ಲಸಿಕೆಗಳನ್ನು ನೀಡಲಾಗುತ್ತದೆ. ಶೀತಜ್ವರ, ನ್ಯುಮೋನಿಯಾ ಮತ್ತು ಸರ್ಪ ಸುತ್ತು ಈ ರೋಗಗಳನ್ನು ತಡೆಯಲು ಮತ್ತು ಅದರ ಪ್ರಭಾವವನ್ನು ಕಡಿಮೆ ಮಾಡಲು ಲಸಿಕೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ವೈದ್ಯರ ಸಲಹೆ ಅನುಸಾರ ಲಸಿಕೆ ತೆಗೆದುಕೊಳ್ಳುವುದರಿಂದ ನಿರ್ದಿಷ್ಟ ಸೋಂಕು ಗಳಿಂದ ರಕ್ಷಣೆ ಪಡೆಯಬಹುದು. ಚಿಕಿತ್ಸೆಗಿಂತ ತಡೆಗಟ್ಟುವಿಕೆಯೇ ಉತ್ತಮ ಎನ್ನುವಂತೆ ವೃದ್ಧರು ಈ ಸುಲಭ ಕ್ರಮಗಳನ್ನು ಅನುಸರಿಸುವ ಮೂಲಕ ಸೋಂಕು ರೋಗಗಳಿಂದ ರಕ್ಷಣೆ ಪಡೆದು ಉತ್ತಮ ಜೀವನ ನಡೆಸಬಹುದು.

Tags:
error: Content is protected !!