ಪ್ರೊ.ಆರ್.ಎಂ.ಚಿಂತಾಮಣಿ
ಇಂದು ನಮ್ಮಲ್ಲಿ ಲಢಾಕ್ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಕಟಣೆಯಾಗಿ ಇನ್ನೂ ಜಾರಿಯಾಗದೇ ಇರುವ ಐದು ಹೊಸ ಜಿಲ್ಲೆಗಳೂ ಸೇರಿ ಒಟ್ಟು ೭೮೩ ಜಿಲ್ಲೆಗಳಿವೆ. ವೈಜ್ಞಾನಿಕವಾಗಿ, ವ್ಯಾವಹಾರಿಕವಾಗಿ ಮತ್ತು ಆಡಳಿತಾತ್ಮಕವಾಗಿ ಅನುಕೂಲವಾಗುವಂತೆ ಒಂದು ರಾಜ್ಯದಲ್ಲಿ ಒಂದು ಭೌಗೋಳಿಕ ಮಿತಿಯಲ್ಲಿ ಜನಸಂಖ್ಯೆಯನ್ನೂ ಗಮನದಲ್ಲಿಟ್ಟುಕೊಂಡು ಸೃಷ್ಟಿಸಲಾದ ಆಡಳಿತಾತ್ಮಕ ಘಟಕವೇ ಜಿಲ್ಲೆ. ಇದು ನಿರ್ದಿಷ್ಟ ಸಂಖ್ಯೆಯ ತಾಲ್ಲೂಕುಗಳನ್ನೂ ಅವುಗಳಲ್ಲಿ ಹಳ್ಳಿ ಪಟ್ಟಣಗಳನ್ನೂ ಒಳಗೊಂಡಿರುತ್ತದೆ. ನಮ್ಮ ಸಂವಿಧಾನದ ಪ್ರಕಾರ ಜಿಲ್ಲೆಗಳನ್ನು ಘೋಷಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ. ಸಾಮಾನ್ಯವಾಗಿ ದಶವಾರ್ಷಿಕ ಜನಗಣತಿಯ ನಂತರ ಆಡಳಿತದಲ್ಲಿ ಸುಸ್ಥಿರತೆ, ಪ್ರಾದೇಶಿಕ ಅಭಿವೃದ್ಧಿ ಮತ್ತು ಜಿಲ್ಲಾ ಆಡಳಿತವನ್ನು ನಾಗರಿಕರಿಗೆ ಇನ್ನಷ್ಟು ಸಮೀಪ ಒಯ್ಯುವುದು ಮುಂತಾದ ಮಾನದಂಡಗಳನ್ನಿಟ್ಟುಕೊಂಡು ಇದ್ದ ಜಿಲ್ಲೆಗಳ ಪುನರ್ವಿಂಗಡಣೆ, ವಿಭಜನೆ ಮತ್ತು ಹೊಸ ಜಿಲ್ಲೆಗಳ ರಚನೆ ಪ್ರಕ್ರಿಯೆಗಳು ನಡೆಯುತ್ತವೆ. ಇದು ಅನಿವಾರ್ಯವೂ ಹೌದು. ಹೊಸ ಜಿಲ್ಲೆಗಳನ್ನು ಅಸ್ತಿತ್ವಕ್ಕೆ ತರುವುದರಿಂದಾಗುವ ಹೆಚ್ಚುವರಿ ವೆಚ್ಚಗಳನ್ನೂ ಅನುಕೂಲತೆಗಳನ್ನೂ ಪರಿಗಣಿಸಲಾಗುತ್ತದೆ. ಹೀಗಿರುವಾಗ ಇಷ್ಟೊಂದು ದೊಡ್ಡ ಸಂಖ್ಯೆಯ ಜಿಲ್ಲೆಗಳ ಅವಶ್ಯಕತೆ ಇತ್ತೇ? ಎಂಬ ಪ್ರಶ್ನೆಯನ್ನೂ ಕೇಳಲಾಗುತ್ತದೆ.
೧೯೬೧ರ ಜನಗಣತಿಯವರೆಗೆ ೩೩೯ ಜಿಲ್ಲೆಗಳಿದ್ದವು. ಸ್ವಾತಂತ್ರ್ಯಾನಂತರವೂ ಜಿಲ್ಲೆಗಳ ಸಂಖ್ಯೆ ಹೆಚ್ಚಿಸಿರಲಿಲ್ಲ. ೧೯೭೧ರ ನಂತರ ಸಂಖ್ಯೆ ೩೫೬ಕ್ಕೇರಿತು. (ಶೇ.೫ ಮಾತ್ರ ಹೆಚ್ಚಳ). ಮುಂದೆ ೧೯೮೧, ೧೯೯೧, ೨೦೦೧ ಮತ್ತು ೨೦೧೧ರ ಗಣತಿಗಳ ನಂತರ ಅನುಕ್ರಮವಾಗಿ ಜಿಲ್ಲೆಗಳ ಸಂಖ್ಯೆ ೪೧೨, ೪೬೬, ೫೯೩ ಮತ್ತು ೬೪೦ಕ್ಕೆ ತಲುಪಿತು. ಆದರೆ ಕೋವಿಡ್-೧೯ ಸಾಂಕ್ರಾಮಿಕ ರೋಗದ ಕಾರಣದಿಂದ ೨೦೨೧ರ ಜನಗಣತಿ ನಡೆಯಲಿಲ್ಲ. ಆದರೂ ಹೊಸ ಜಿಲ್ಲೆಗಳನ್ನು ರೂಪಿಸುವುದು ನಿಂತಿಲ್ಲ. ಈ ಹದಿಮೂರು ವರ್ಷಗಳಲ್ಲಿ ೨೦೧೧ರ ಸಂಖ್ಯೆಗಿಂತ ಶೇ.೨೨.೯೫ರಷ್ಟು ಹೆಚ್ಚಾಗಿದೆ.
ಇದೆಲ್ಲವನ್ನೂ ವೈಜ್ಞಾನಿಕ ಆಧಾರಗಳ ಮೇಲೆ ಮಾಡಲಾಗಿದೆಯೆ? ಎಂಬ ಪ್ರಶ್ನೆಗೆ ಉತ್ತರ ಪೂರ್ಣ ಸತ್ಯವನ್ನು ಹೇಳುವುದಿಲ್ಲ. ಕೆಲವಾದರೂ ಪ್ರಭಾವಿಗಳ ಒತ್ತಡದಿಂದ ಅಸ್ತಿತ್ವಕ್ಕೆ ಬಂದಿದೆ ಎನ್ನುವುದನ್ನು ಅಲ್ಲಗೆಳೆಯುವಂತಿಲ್ಲ. ಇತ್ತೀಚಿನವರೆಗೆ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿದ್ದ ಲಢಾಕ್ ಈಗ ಕೇಂದ್ರಾಡಳಿತ ಪ್ರದೇಶ ಇದರ ವಿಸ್ತೀರ್ಣ ೫೯,೧೯೬ ಚದುರ ಕಿ.ಮೀ. ಮತ್ತು ಜನಸಂಖ್ಯೆ ೨,೭೪,೨೮೯ ಜನರು (೨೦೧೧ರ ಜನಗಣತಿ ಪ್ರಕಾರ). ಇಲ್ಲಿ ಈವರೆಗೆ ಲೆಹ್ ಮತ್ತು ಕಾರ್ಗಿಲ್ ಎರಡು ಜಿಲ್ಲೆಗಳಿವೆ. ಇತ್ತೀಚೆಗೆ ಇನ್ನೂ ಐದು ಹೊಸ ಜಿಲ್ಲೆಗಳನ್ನು ಘೋಷಿಸಿದೆ. ಅಂದರೆ ಸರಾಸರಿ ೩೯,೧೮೪ ಜನಸಂಖ್ಯೆಗೆ ಒಂದು ಜಿಲ್ಲೆಯಾದಂತಾಯಿತು. ಭೌಗೋಳಿಕವಾಗಿಯೂ ೮,೪೫೭ ಚದರ ಕಿ.ಮೀ.ಗೆ ಒಂದು ಜಿಲ್ಲೆಯಾಯಿತು. ಬೆಟ್ಟ ಗುಡ್ಡಗಾಡು ಪ್ರದೇಶವೆಂದು ಪರಿಗಣಿಸಿದರೂ ೩-೪ ಜಿಲ್ಲೆಗಳಿರಬಹುದೇನೊ. ಆದರೆ ಏಳು ಜಿಲ್ಲೆಗಳು ಆಡಳಿತಾತ್ಮಕವಾಗಿ ಮತ್ತು ಆಡಳಿತ ವೆಚ್ಚಗಳ ದೃಷ್ಟಿಯಿಂದ ಬೇಕಿದ್ದವೆ?
ಆಡಳಿತ ವೆಚ್ಚಗಳು ಹೆಚ್ಚಾಗುತ್ತವೆ: ೧೯೬೦ರ ದಶಕದಲ್ಲಿ ಹಿರಿಯ ಪತ್ರಕರ್ತ ಮತ್ತು ಸಾರ್ವಜನಿಕ ಜೀವನ ಶುದ್ಧತೆಗಾಗಿ ಗ್ರಾಹಕ ಚಳವಳಿ ಹುಟ್ಟು ಹಾಕಿದವರಲ್ಲೊಬ್ಬರಾದ ಮುಂಬಾಯಿ ಕನ್ನಡಿಗ ಎಂ.ಆರ್.ಪೈ ಹೇಳುತ್ತಿದ್ದರು ‘ರಾಜಕಾರಣಿಗಳು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದರೂ ಜಾರಿಗೊಳಿಸುವುದು ಆಡಳಿತ ಯಂತ್ರ ತಾನೆ. ಆದ್ದರಿಂದ ನಿಜವಾಗಿ ಆಡಳಿತ ನಡೆಸುತ್ತಿರುವವರು ಎರಡು ಸಾವಿರ ಐಎಎಸ್ ಅಽಕಾರಿಗಳು ಮತ್ತು ಅವರ ಸಿಬ್ಬಂದಿ. ಇವರು ಮನಸ್ಸು ಮಾಡಿದರೆ ಕಡಿಮೆ ಆಡಳಿತ ವೆಚ್ಚಗಳಲ್ಲಿ ಸರ್ಕಾರದ ಕೆಲಸಗಳನ್ನು ನಿರ್ವಹಿಸಿ ಜನರ ಜೀವನ ಮಟ್ಟವನ್ನು ಸುಧಾರಿಸಲು ನೆರವಾಗಬಹುದು. ಆರ್ಥಿಕ ಅಭಿವೃದ್ಧಿ ಚುರುಕುಗೊಳ್ಳಲು ಸಹಕಾರಿಯಾಗಬಹುದು’
ಇದು ಅಕ್ಷರಶಃ ಸತ್ಯ. ಆಗ ಜಿಲ್ಲಾಧಿಕಾರಿಯೊಡನೆ ಇಬ್ಬರೋ ಮೂವರೋ ಐಎಎಸ್ ಅಽಕಾರಿಗಳು ಇರುತ್ತಿದ್ದರು. ತಹಸಿಲ್ದಾರರು ಬ್ಲಾಕ್ ಡೆವಲಪ್ ಮೆಂಟ್ ಆಫೀಸರ್ ಮತ್ತು ಸಿಬ್ಬಂದಿಯೊಡನೆ ಆಡಳಿತ ನಡೆಯುತ್ತಿತ್ತು. ಆಗ ಹಿಂದಿನವರು ಕಟ್ಟಿದ ಕಚೇರಿ ಕಟ್ಟಡಗಳಿದ್ದವು. ತಳ ಮಟ್ಟದಲ್ಲಿಯೇ (ಗ್ರಾಮ ಪಂಚಾಯಿತಿ ಮುಂ.) ಹೆಚ್ಚು ಸಿಬ್ಬಂದಿ ಇರುತ್ತಿತ್ತು. ಆಡಳಿತ ವೆಚ್ಚಗಳ ಮೇಲೆ ತಕ್ಕ ಮಟ್ಟಿಗೆ ಹಿಡಿತವಿತ್ತು.
ಈಗ ಜಿಲ್ಲೆಗಳ ಸಂಖ್ಯೆ ಎರಡು ಪಟ್ಟಿಗಿಂತ ಹೆಚ್ಚಾಗಿದೆ. ಅತಿ ದೊಡ್ಡ ಜಿಲ್ಲೆಗಳನ್ನು ಒಡೆದರೆ ಅದಕ್ಕೆ ಅರ್ಥ ಉಂಟು. ಆದರೆ ಇತ್ತೀಚೆಗೆ ಹೊಸ ಸಣ್ಣ ರಾಜ್ಯಗಳಲ್ಲಿಯೇ ಹೆಚ್ಚು ಜಿಲ್ಲೆಗಳನ್ನು ಘೋಷಿಸುವ ಪ್ರವೃತ್ತಿ ಹೆಚ್ಚಾಗಿದೆ. ತೆಲಂಗಾಣದಲ್ಲಿ ೧೦ ಜಿಲ್ಲೆಗಳಿದ್ದದ್ದು ಈಗ ೩೩ ಆಗಿದೆ. ಹರಿಯಾಣದಲ್ಲಿ ಮೊದಲು ಏಳು ಜಿಲ್ಲೆಗಳಿದ್ದದ್ದು ೨೨ಕ್ಕೇರಿದೆ. ತ್ರಿಪುರಾದಲ್ಲಿ ಡಬಲ್ ಆಗಿದೆ (೪ ರಿಂದ ೮). ಆದರೆ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಪಶ್ಚಿಮ ಬಂಗಾಲದ ಉತ್ತರ ೨೪ ಪರಗಣಾ ಜಿಲ್ಲೆ ಮತ್ತು ೪೫ ಸಾವಿರ ಚದರ ಕಿ.ಮೀ.ಗೂ ಹೆಚ್ಚು ಪ್ರದೇಶ ಹೊಂದಿರುವ ಗುಜರಾತಿನ ಕಛ್ ಜಿಲ್ಲೆ ಹಾಗೂ ೩೫,೦೦೦ಕ್ಕೂ ಹೆಚ್ಚು ಪ್ರದೇಶದಲ್ಲಿರುವ ರಾಜಸ್ತಾನದ ಮೂರು ಜಿಲ್ಲೆಗಳು (ಜೈಸಲ್ಮೇರ್, ಬಿಕಾನೇರ್ ಮತ್ತು ಬಾರ್ಮರ ಜಿಲ್ಲೆಗಳು) ವಿಭಾಗಿಸಲ್ಪಟ್ಟಿಲ್ಲ.
ಅದೇ ರೀತಿ ಪುದುಚೇರಿಯ ಮಾಹೆಯಂತಹ ಅತಿ ಸಣ್ಣ ೯ ಚ.ಕಿ.ಮೀ. ವಿಸ್ತೀರ್ಣ ಹೊಂದಿರುವ ಜಿಲ್ಲೆಗಳೂ ೮೦೦೪ರಷ್ಟು ಅತಿ ಕಡಿಮೆ ಜನಸಂಖ್ಯೆಯುಳ್ಳ ಅರುಣಾಚಲ ಪ್ರದೇಶದ ದಿಬಾಂಗನಂತಹ ಜಿಲ್ಲೆಗಳೂ ಇವೆ. ಇಂತಹ ವೈರುಧ್ಯಗಳನ್ನು ತಪ್ಪಿಸಬೇಕಾದರೆ ಜಿಲ್ಲೆಗಳನ್ನು ಅಸ್ತಿತ್ವಕ್ಕೆ ತರುವ ಸಲುವಾಗಿ ನಿಖರವಾದ ಜನಸ್ನೇಹಿ ನಿಯಮಗಳಿರಬೇಕಾಗುತ್ತದೆ. ನೈಸರ್ಗಿಕ ಸ್ಥಿತಿಗತಿಗಳನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಲು ಕಠಿಣ ನಿರ್ಬಂಧಗಳೂ ಇರಬೇಕು. ಯಾರನ್ನೋ ಮೆಚ್ಚಿಸಲು ಜಿಲ್ಲೆಗಳನ್ನು ಘೋಷಿಸಬಾರದು. ಹೊಸ ಜಿಲ್ಲೆಗಳಿಗೆ ಕಟ್ಟಡ ಮತ್ತು ಇತರೆ ಮೂಲ ಸೌಲಭ್ಯಗಳನ್ನು ಒದಗಿಸಲು ಮಾಡುವ ಬಂಡವಾಳ ವೆಚ್ಚಗಳು ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲ ಕಡಿಮೆಯಾಗಲು ಕಾರಣವಾಗುತ್ತವೆ. ಈಗ ಪಂಚಾಯತ್ ರಾಜ್ಯ ಸಂಸ್ಥೆಗಳೂ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಇರುತ್ತಾರೆ. ಇತರೆ ಅಧಿಕಾರಿಗಳ ಮತ್ತು ಸಿಬ್ಬಂದಿಯ ಸಂಖ್ಯೆಯೂ ಹೆಚ್ಚು. ಆಡಳಿತ ವೆಚ್ಚಗಳೂ ಹೆಚ್ಚಾಗುತ್ತವೆ. ಇದು ಅಭಿವೃದ್ಧಿಗಾಗಿ ಸಂಪನ್ಮೂಲದ ಮೇಲೆ ಬರೆ ಹಾಕುತ್ತದೆ.
ಮುನ್ನೋಟ: ಚುನಾವಣಾ ಆಯೋಗದ ಹಿಂದಿನ ಆಯುಕ್ತ ಮತ್ತು ನಿವೃತ್ತ ಐಎಎಸ್ ಅಽಕಾರಿ ಅಶೋಕ ಲವಾಸಾರವರ ಒಂದು ಅಧ್ಯಯನ ಈ ವಿಷಯದಲ್ಲಿ ಪ್ರಕಟವಾಗಿದೆ. ಅದೇ ರೀತಿ ಪುಣೆಯ ಫ್ಲೇಮ ವಿಶ್ವವಿದ್ಯಾ ನಿಲಯದ ಸಂಶೋಧಕ ಶಿವಕುಮಾರ ಜೋಳದರವರ ಸಂಶೋಧನೆಯೂ ಪ್ರಕಟವಾಗಿದೆ. ಎರಡೂ ಅಧ್ಯಯನಗಳಲ್ಲಿ ಹೊಸ ಜಿಲ್ಲೆಗಳನ್ನು ಪ್ರಕಟಿಸುವಾಗ ಅನುಸರಿಸಲಾದ ವಿಧಾನಗಳನ್ನು ಮತ್ತು ಮಾನದಂಡಗಳನ್ನು ವಿವರವಾಗಿ ವಿಶ್ಲೇಷಿಸಲಾಗಿದೆ ಮತ್ತು ಲೋಪ ದೋಷಗಳನ್ನು ಪಟ್ಟಿ ಮಾಡಲಾಗಿದೆ. ಎರಡೂ ಅಧ್ಯಯನಗಳ ಸಾಮಾನ್ಯ ಅಭಿಪ್ರಾಯವೆಂದರೆ ಮೊದಲು ವಿವರವಾದ ಮತ್ತು ನಿಖರವಾದ ನಿಯಮಗಳನ್ನು ರೂಪಿಸಬೇಕು ಮತ್ತು ವೆಚ್ಚಗಳ (ಬಂಡವಾಳ ವೆಚ್ಚಗಳೂ ಸೇರಿ) ಮತ್ತು ಅನುಕೂಲತೆಗಳ ಅಧ್ಯಯನ ನಡೆಯಬೇಕು. ಎಲ್ಲ ರೀತಿಯಿಂದಲೂ ಅನುಕೂಲವೆಂದು ಕಂಡುಬಂದಾಗ ಮಾತ್ರ ಸಂಬಂಧಪಟ್ಟ ಎಲ್ಲ ವರ್ಗಗಳ ಅಭಿಪ್ರಾಯ ಪರಿಗಣಿಸಿ ನಿರ್ಧರಿಸಬೇಕು.
ಈ ನಿಟ್ಟಿನಲ್ಲಿ ಮಧ್ಯಪ್ರದೇಶ ಸರ್ಕಾರ ಮೊದಲ ಹೆಜ್ಜೆ ಇಟ್ಟಿದ್ದು ಈಗಿರುವ ಜಿಲ್ಲೆಗಳ ವಿಸ್ತೀರ್ಣ ಮತ್ತು ಜನದಟ್ಟಣೆ ಅಧ್ಯಯನ ಮಾಡಲು ಆಡಳಿತಾತ್ಮಕ ಘಟಕಗಳ ಸುಧಾರಣಾ ಆಯೋಗವನ್ನು ನೇಮಿಸಿದೆ. ಇದು ಇತರ ರಾಜ್ಯಗಳಿಗೂ ಮಾದರಿಯಾಗಲಿ.
” ಈಗ ಜಿಲ್ಲೆಗಳ ಸಂಖ್ಯೆ ಎರಡು ಪಟ್ಟಿಗಿಂತ ಹೆಚ್ಚಾಗಿದೆ. ಅತಿ ದೊಡ್ಡ ಜಿಲ್ಲೆಗಳನ್ನು ಒಡೆದರೆ ಅದಕ್ಕೆ ಅರ್ಥ ಉಂಟು. ಆದರೆ ಇತ್ತೀಚೆಗೆ ಹೊಸ ಸಣ್ಣ ರಾಜ್ಯಗಳಲ್ಲಿಯೇ ಹೆಚ್ಚು ಜಿಲ್ಲೆಗಳನ್ನು ಘೋಷಿಸುವ ಪ್ರವೃತ್ತಿ ಹೆಚ್ಚಾಗಿದೆ. ತೆಲಂಗಾಣದಲ್ಲಿ ೧೦ ಜಿಲ್ಲೆಗಳಿದ್ದದ್ದು ೩೩ ಆಗಿದೆ. ಹರಿಯಾಣದಲ್ಲಿ ಮೊದಲು ಏಳು ಜಿಲ್ಲೆಗಳಿದ್ದದ್ದು ಈಗ ೨೨ಕ್ಕೇರಿದೆ. ತ್ರಿಪುರಾದಲ್ಲಿ ಡಬಲ್ ಆಗಿದೆ (೪ ರಿಂದ ೮). ಆದರೆ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಪಶ್ಚಿಮ ಬಂಗಾಲದ ಉತ್ತರ ೨೪ ಪರಗಣಾ ಜಿಲ್ಲೆ ಮತ್ತು ೪೫ ಸಾವಿರ ಚದರ ಕಿ.ಮೀ.ಗೂ ಹೆಚ್ಚು ಪ್ರದೇಶ ಹೊಂದಿರುವ ಗುಜರಾತಿನ ಕಚ್ಛ ಜಿಲ್ಲೆ ಹಾಗೂ ೩೫,೦೦೦ಕ್ಕೂ ಹೆಚ್ಚು ಪ್ರದೇಶದಲ್ಲಿರುವ ರಾಜಸ್ತಾನದ ಮೂರು ಜಿಲ್ಲೆಗಳು (ಜೈಸಲ್ಮೇರ್, ಬಿಕಾನೇರ ಮತ್ತು ಬಾರ್ಮರ ಜಿಲ್ಲೆಗಳು) ವಿಭಾಗಿಸಲ್ಪಟ್ಟಿಲ್ಲ.”