Mysore
17
scattered clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಜಂಬೂ ಸವಾರಿಯಲ್ಲಿ ಸೌಹಾರ್ದತೆ ಮೆರೆದ ನಾಲ್ವಡಿ

ಪ್ರೊ.ಎಸ್.ಚಂದ್ರಶೇಖರ್

ನಾಲ್ವಡಿಯವರ ಆಡಳಿತದಲ್ಲಿ ನೇಮಕವಾದ ಕೊನೆಯ ದಿವಾನರು ಮಿರ್ಜಾ ಮೊಹಮ್ಮದ್ ಇಸ್ಮಾಯಿಲ್. ಈಗಾಗಲೇ ಪ್ರಸ್ತಾಪಿಸಿದಂತೆ ಮಿರ್ಜಾ ಮತ್ತು ಒಡೆಯರ್ ಮನೆತನಗಳುಮೂರು ತಲೆಮಾರಿನಿಂದಲೂ ಸ್ನೇಹದಿಂದಿದ್ದವು. ಮಿಗಿಲಾಗಿ ಮಿರ್ಜಾ ಮತ್ತು ನಾಲ್ವಡಿಯವರು ಸುಮಾರು ಆರು ವರ್ಷಗಳ ಕಾಲ ಒಂದೇ ಶಾಲೆಯಲ್ಲಿ-ರಾಯಲ್ ಸ್ಕೂಲ್-ಕಲಿತವರು ಮತ್ತು ಸಹಪಾಠಿಗಳು. ಪರಸ್ಪರ ಅರಿತುಕೊಳ್ಳಲು ಇದು ಸಹಾಯ ಮಾಡಿತು. ನಾಲ್ವಡಿಯವರ ಆಡಳಿತದಲ್ಲಿ ಅತಿ ದೀರ್ಘಕಾಲ ದಿವಾನರಾಗಿದ್ದವರು ಮಿರ್ಜಾ.  ಮಹಾರಾಜರ ೩೮ ವರ್ಷಗಳ ಆಡಳಿತದಲ್ಲಿ ೧೫ ವರ್ಷಕಾಲ ಮುಖ್ಯಮಂತ್ರಿಯಾಗಿದ್ದವರು ಮಿರ್ಜಾ. ೧೯೧೦ ರಿಂದ ಮಹಾರಾಜರ ಕಚೇರಿಯ ವಿವಿಧ ಹುದ್ದೆಗಳನ್ನು ನಿರ್ವಹಿಸಿದರು. ಈ ಅವಧಿ ಮಹಾರಾಜರ ಕಾರ್ಯ ವೈಖರಿಯನ್ನು ವಿವಿಧ ವಿಷಯಗಳ ಬಗ್ಗೆ ಅವರ ನಿಲುವುಗಳನ್ನು, ಸ್ವಭಾವವನ್ನು ಅಭ್ಯಸಿಸಿ, ಅರ್ಥಮಾಡಿ ಕೊಳ್ಳಲು ಸಹಾಯಕವಾಯಿತು. ಹದಿನಾರು ವರ್ಷ ತಮ್ಮ ಸುತ್ತವೇ ಇರುತ್ತಾ ಆಡಳಿತದಲ್ಲಿ ತಮಗೆ ಸಲಹೆ-ಸಹಕಾರ ಕೊಡುತ್ತಾ ಬಂದ ಮಿರ್ಜಾರ ಬಗ್ಗೆ ಮಹಾರಾಜರಿಗೆ ಅಪಾರ ವಿಶ್ವಾಸವಿದ್ದಂತೆ ಕಾಣುತ್ತದೆ. ಆದ್ದರಿಂದಲೇ ೧೯೨೬ರಲ್ಲಿ ಅವರನ್ನು ದಿವಾನರಾಗಿ ನೇಮಕ ಮಾಡಲಾಯಿತು. ಅವರ ನೇಮಕವಾದಾಗ ಹಲವರ ಹುಬ್ಬೇರಿದವು. ಆತ ವಿದೇಶಿ ಮನೆತನಕ್ಕೆ ಸೇರಿದವರು. ಆಡಳಿತದ ಎಲ್ಲ ಮಗ್ಗಲುಗಳನ್ನೂ ಬಲ್ಲವರಲ್ಲ. ಇನ್ನೂ ೪೩ರ ಚಿಕ್ಕ ವಯಸ್ಸು. ಅನುಭವ ಸಾಲದು. ಎಲ್ಲಕ್ಕೂ ಮುಖ್ಯವಾಗಿ ಯಾರೂ ಬಹಿ ರಂಗವಾಗಿ ಹೇಳದಿದ್ದುದು ಅವರು ಮುಸಲ್ಮಾನರು.

೧೯೨೬ರ ಹೊತ್ತಿಗೆ ಭಾರತ, ಮೈಸೂರು ಸಂಸ್ಥಾನ ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆಯ ಸುಳಿಯಲ್ಲಿ ಹಾಯುತ್ತಿದ್ದವು. ವಸಾಹತು ವಿರೋಽ, ರಾಷ್ಟ್ರೀಯ ಸ್ವತಂತ್ರ ಚಳವಳಿ ಸ್ಪಷ್ಟವಾಗಿ ಗಾಂಧಿಜಿಯವರ ನೇತೃತ್ವ ಒಪ್ಪಿಕೊಂಡಿತ್ತು. ಅಲ್ಲಿ ಜನತೆಯ ಆರ್ಥಿಕ-ಸಾಮಾಜಿಕ ಸ್ಥಿತಿಯನ್ನು ಪ್ರಭಾವಿಸಿ, ಅದನ್ನು ರಾಜಕೀಕರಣಗೊಳಿಸಬಲ್ಲ ಅನೇಕ ಕಾರ್ಯ ಕ್ರಮಗಳು ಹೆಣೆಯಲ್ಪಟ್ಟಿದ್ದವು. ಗಾಂಧಿಜಿಯವರ ಅಸಹಕಾರ ಚಳವಳಿ, ರಚನಾತ್ಮಕ ಕಾರ್ಯಕ್ರಮಗಳು ಬಹುಜನರ ಗಮನ ಸೆಳೆಯುತ್ತಿದ್ದವು. ವಸಾಹತುಶಾಹಿ ಬೆದರಿ ಸಾಮಾನ್ಯರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿತು. ವಸಾಹತುಶಾಹಿ ಮತ್ತು ರಾಷ್ಟ್ರೀಯ ಚಳವಳಿಯ ನಡುವಿನ ಸಂಘರ್ಷ ಒಂದು ಶೀತಲ ಸಮರವಾಗಿ ಏರ್ಪಟ್ಟಿತ್ತು.

ಭಾರತ ಮಟ್ಟದಲ್ಲಿ ಸ್ವರಾಜ್ಯ ಮತ್ತು ಬ್ರಿಟನ್ನಿನ ಬೇರೆಲ್ಲಾ ವಸಾಹತು ದೇಶಗಳಂತೆ, ಡೋಮಿನಿಯನ್ ಸ್ಟೇಟಸ್ ಗಾಗಿ (ಬ್ರಿಟಿಷ್ ಚಕ್ರಾಧಿಪತ್ಯದಲ್ಲಿ ಸ್ವಾಯತ್ತತೆ) ಬೇಡಿಕೆ ಇಟ್ಟು ರಾಜಕೀಯ ಚಳವಳಿ ನಡೆದಿದ್ದರೆ, ಮೈಸೂರಿನಲ್ಲೂ, ೧೯೨೨ರಿಂದಲೂ ಮಹಾರಾಜರ ಅಧ್ವರ್ಯದಲ್ಲಿ ಜವಾಬ್ದಾರಿ ಸರ್ಕಾರಕ್ಕೆ ಬೇಡಿಕೆ ಬರಲಾರಂಭಿಸಿತು. ರಾಷ್ಟ್ರೀಯ ಚಳವಳಿಯ ಬಿಸಿ ಮೈಸೂರಿಗೂ ತಟ್ಟಿತು. ಮಿರ್ಜಾ ದಿವಾನರಾದ ಮೇಲಂತೂ, ಯಾವ ವಿಚಾರವಾಗಿಯಾದರೂ ಸರ್ಕಾರಕ್ಕೆ ಮುಜುಗರ ಉಂಟುಮಾಡುವ, ಅವರಿಗೆ ತೊಂದರೆ ಕೊಡಲು ಪ್ರಯತ್ನಗಳೂ ನಡೆದವು. ಮೈಸೂರಿನಲ್ಲಿ ಜಾತ್ಯಾಧಾರಿತ, ಮತಾಧಾರಿತ ಸಮಸ್ಯೆ ಮಿಲ್ಲರ್ ಸಮಿತಿ ನೇಮಕವಾಗುವ ಸಮಯಕ್ಕೆ ಬೀಜಾಂಕುರವಾದಂತೆ ತೋರುತ್ತದೆ. ಪ್ರಜಾಮಿತ್ರ ಮಂಡಳಿಯ ನಾಯಕರಲ್ಲಿ ಒಮ್ಮೆ ಬೆಂಗಳೂರು ನಗರ ಪುರಸಭಾ ಅಧ್ಯಕ್ಷರೂ ಆದ. ಅಬ್ಬಾಸ್ ಖಾನ್‌ರೂ ಒಬ್ಬರು. ಮನುಷ್ಯ ಪಾದರಸದಂಥ ವ್ಯಕ್ತಿತ್ವ ಉಳ್ಳವರು ಮತ್ತು ಒಳ್ಳೆಯ ವಾಗ್ಮಿ. ರಾಜ್ಯದ ಮೂಲೆ-ಮೂಲೆಯೂ ಅವರಿಗೆ ತಿಳಿದಿತ್ತೆಂದು ಹೇಳಲಾಗಿದೆ.

ಅಬ್ಬಾಸ್‌ಖಾನ್, ಮಿರ್ಜಾಗೆ ಚೆನ್ನಾಗಿ ಪರಿಚಿತರು. ಕಾರಣ ಖಾನ್ ಪ್ರತಿನಿಧಿ ಸಭೆಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದುದು. ಬೆಂಗಳೂರು ಪುರಸಭೆಯ ಅಧ್ಯಕ್ಷರಾಗಿ, ದಿವಾನರು ನಗರ ಪ್ರದಕ್ಷಿಣೆ ಹೊರಟಾಗ ಆಗಾಗ ಜೊತೆಗೂಡುತ್ತಿದ್ದರು. ೧೯೨೮ರ ಬೆಂಗಳೂರು ಗಣಪತಿ ಗಲಭೆಗಳಲ್ಲಿ ಇದೇ ನಿಮಿತ್ತವಾಗಿ, ಸರ್ಕಾರದ ವಿರುದ್ಧ, ದೊಡ್ಡ ದೊಂಬಿ ಎಬ್ಬಿಸಲಾಗಿತ್ತು. ಅದಕ್ಕೆ ಸ್ವಲ್ಪ ಮುಂಚೆಯೂ ಚಿಂತಾಮಣಿಯಲ್ಲಿ ಗಲಭೆ ಎಬ್ಬಿಸಲಾಗಿತ್ತು. ಇದೆಲ್ಲಾ ಮುಸಲ್ಮಾನರು ಮತ್ತು ಬ್ರಾಹ್ಮಣೇತರ ಹಿಂದೂಗಳ ನಡುವಿನ ಸಖ್ಯವನ್ನು ಹಾಳು ಗೆಡಹಲು ಎಬ್ಬಿಸಿದ ಗಲಭೆಗಳೆಂದು ಹಲವರು ದೂರಿದರು. ಬೆಂಗಳೂರು ಗಲಭೆಗಳಂತೂ ಪೂರ್ಣವಾಗಿ ಮಿಲ್ಲರ್ ಸಮಿತಿ ವರದಿಯ ಅನುಷ್ಠಾನ, ಮಿರ್ಜಾ ಅವರ ನೇಮಕಾತಿಯ ವಿರುದ್ಧವೇ ನಡೆಯಿತೆಂದು, ಅದಕ್ಕೆ ಕಾರಣರಾದವರು ಬ್ರಾಹ್ಮಣೇತರ ಚಳವಳಿಯ ವಿರೋಧಿಗಳೆಂದು, ಸಾಧ್ಯವಾದರೆ ಮಿರ್ಜಾ ಅವರನ್ನು ಧೃತಿಗೆಡಿಸಿ ಪದವಿ ತ್ಯಜಿಸಿ ಹೋಗುವಂತೆ ಹೂಡಿದ ಹುನ್ನಾರ ಎಂತಲೂ ಚರಿತ್ರಕಾರರಾದ ಜೇಮ್ಸ್ ಮೆನೂರ್ ಮತ್ತು ಹೆಟ್ಟೆ ಅಭಿಪ್ರಾಯಪಟ್ಟರೆ, ಆ ಬಗ್ಗೆ ವಿಚಾರಣೆ ನಡೆಸಿದ ವಿಶ್ವೇಶ್ವರಯ್ಯ ಸಮಿತಿಯೂ ಆ ಬಗ್ಗೆ ಬೊಟ್ಟು ಮಾಡಿದೆ. ಈ ಘಟನೆಗೆ ಹಿನ್ನೆಲೆಯಾಗಿ ಗಹನವಾದ ಇನ್ನೊಂದು ಕಾರಣವೂ ಇತ್ತೆಂದು ಹೇಳಲಾಗುತ್ತದೆ. ಅದಕ್ಕೆ ನೇರವಾಗಿ ಮಹಾರಾಜರೇ ಹೊಣೆ. ಅಕ್ಟೋಬರ್ ೨೭, ೧೯೨೭ರಂದು ನಡೆದ, ದಸರಾ ಮಹೋತ್ಸವದ ಸಂದರ್ಭದಲ್ಲಿ ಮಹಾರಾಜರು, ಮಿರ್ಜಾ ಅವರನ್ನು ಆನೆ ಅಂಬಾರಿಯ ಮೇಲೆ ಕುಳ್ಳಿರಿಸಿಕೊಂಡು ಮೈಸೂರಿನ ರಾಜಮಾರ್ಗಗಳಲ್ಲಿ ಮೆರವಣಿಗೆ ಹೊರಟಿದ್ದು ಸಂಪ್ರದಾಯಕ್ಕೆ, ಧರ್ಮಕ್ಕೆ ಆದ ಅಪಚಾರವೆಂದು ಬಗೆಯಲಾಯಿತು. ಅಲ್ಲಿಯವರೆಗೆ ಯಾರಿಗೂ ಸಿಗದ ಗೌರವ ಒಬ್ಬ ಮುಸಲ್ಮಾನನಿಗೆ ದೊರೆತದ್ದು ಕೆಲವು ಧರ್ಮಾಂಧರಿಗೆ ಸಹಿಸಲಾಗದೆ ಅಂಬಾರಿಯ ಕಡೆಗೆ ಚಪ್ಪಲಿಗಳನ್ನೂ ಎಸೆದು, ಅಂಬಾರಿ ಹೊತ್ತಿದ್ದ ಆನೆಯನ್ನು ಬೆದರಿಸುವಂಥ ಕೃತ್ಯವೂ ನಡೆದಿತ್ತು. ಮತೀಯ ಕಿಡಿ ಹಚ್ಚಲು ಇದೂ ಒಂದು ಕಾರಣವಾಯಿತು. ಆದರೆ ಬೆಂಗಳೂರುಗಲಭೆಗಳು ಆದ ನಂತರ ಅಂದರೆ ಮರು ವರ್ಷವೇ ನಾಲ್ವಡಿಯವರು ಮತ್ತೊಮ್ಮೆ ಮಿರ್ಜಾರನ್ನು ಅಂಬಾರಿ ಮೇಲೆ ಕೂರಿಸಿ ತಮ್ಮ ವಿಶ್ವಾಸವನ್ನು ಮೆರೆದರು. ಮಹಾ ರಾಜರು ಮಿರ್ಜಾ ಅವರಿಗೂ ಧೈರ್ಯ ತುಂಬಿ ತಮ್ಮ ಬೆಂಬಲ ವ್ಯಕ್ತಪಡಿಸಿ, ಒಂದು ಪತ್ರ ವನ್ನೂ ಬರೆದರು.

ನಿಮಗೆ ಕೆಲವು ವಾಕ್ಯಗಳ ಪತ್ರ ಬರೆಯದೆ ನಾನು ಸುಮ್ಮನಿರಲಾರೆ. ಕಳೆದ ಕೆಲವು ದಿನಗಳಿಂದ ನಿಮ್ಮ ಸುತ್ತ ನಡೆದಿರುವ ನಿಮಗೆ ಉಂಟಾಗಿರುವ ತೊಂದರೆಗಳು ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗದಿರಲೆಂದು ಪ್ರಾರ್ಥಿಸುತ್ತೇನೆ. ಇದು ದಿವಾನರ ಬಗ್ಗೆ ಇರಿಸಿಕೊಂಡಿದ್ದ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಯಾರು ನಿಸ್ಪೃಹರಾಗಿ, ರಾಜ್ಯಕ್ಕೆ ಮತ್ತು ತಮಗೆ ವಿಧೇಯರಾಗಿ ಸೇವೆ ಸಲ್ಲಿಸುವರೋ ಅವರಿಗೆ ಮಹಾರಾಜರ ಬೆಂಬಲ, ನಿಷ್ಠೆ ಇದೇ ಪ್ರಮಾಣದಲ್ಲಿ ದೊರೆತವು. ಆದರೆ ಮಿರ್ಜಾ ಈ ಗಲಭೆ- ಗದ್ದಲಗಳಿಂದ ವಿಚಲಿತರಾದುದು ನಿಜ. ಮತ್ತು ಸಂಸ್ಥಾನದ ರಾಜಕೀಯದ ಆಜ್ಞೆ ಮೇಲೂ ಅದು ಪ್ರಭಾವ ಬೀರಿತು. ಮಿರ್ಜಾ ದಿವಾನರಾದುದು, ಗಣಪತಿ ಗಲಭೆಗಳು,ಮಿಲ್ಲರ್ ಆಜ್ಞೆಗೆ ೧೯೨೮ರಲ್ಲಿ ಆದ ತಿದ್ದುಪಡಿ, ಜನಪ್ರತಿನಿಧಿಗಳೊಂದಿಗೆ ಅಧಿಕಾರ ಹಂಚಿಕೊಳ್ಳಲು ಒಪ್ಪದ ಸರ್ಕಾರ, ಬಹುತೇಕ ರಾಜಕೀಯ ನಾಯಕರು ಒಗ್ಗೂಡಲು ಕಾರಣವಾಯಿತು. ಈ ಗಲಭೆ ಮತ್ತು ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಂದ ಗಾಬರಿಯಾದ ಮಿರ್ಜಾ, ಮಹಾ ರಾಜರನ್ನು ಸದ್ಯಕ್ಕೆ ಬೆಂಗಳೂರಿಗೆ ಬರುವುದು ಬೇಡವೆಂದು ವಿನಂತಿ ಮಾಡಿದರು. ಬಹುತೇಕ ಪಟ್ಟಭದ್ರ ಪತ್ರಿಕೆಗಳು ಎಂಥ ಗದ್ದಲ ವೆಬ್ಬಿಸಿದವೆಂದರೆ, ಮಿರ್ಜಾ ಇರಲಿ, ಇಡೀ ಆಡಳಿತದ ಬಗ್ಗೆ ವಿಷಕಾರಲು ಪ್ರಾರಂಭಿಸಿದವು. ಗಲಭೆಗಳು ಮಿರ್ಜಾ ಮತ್ತು ಪ್ರಜಾಮಿತ್ರ ಮಂಡಲಿಯ ನಡುವೆ ಇದ್ದ ಅನ್ಯೋನ್ಯ ತೆಯನ್ನು ಹಾಳುಗೆಡವಿತು. ಹಾಗೆಯೇ ಹಿಂದೂ ಮತ್ತು ಮುಸ್ಲಿಂ ಮತೀಯ ಶಕ್ತಿಗಳು ಚಿಗುರತೊಡಗಿದವು. ಆದರೆ ಮಿರ್ಜಾ ಸಾಮರಸ್ಯದ ಹಾದಿಯಲ್ಲೇ ಮುಂದುವರಿದರು. ಆ ಬಗ್ಗೆ ಹಿರಿಯ ಬುದ್ಧಿಜೀವಿಯೊಬ್ಬರು ಬರೆ ಯುತ್ತಾರೆ:

“ನನ್ನ ಒಟ್ಟಿನ ಗಣನೆಯಲ್ಲಿ, ಮಿರ್ಜಾರವರು ಮಹಮ್ಮದೀಯರ ವಿಷಯದಲ್ಲಿ ಪಕ್ಷಪಾತ ತೋರಿಸಿದರೆಂದೆನಿ ಸುವುದಿಲ್ಲ. ಅವರು ಮಹಮ್ಮದೀಯರಾಗಲಿ, ಹಿಂದೂಗಳಾಗಲಿ, ಕ್ರಿಶ್ಚಿಯನ್ನರಾಗಲಿ ಯಾರಿಗೂ ಬುದ್ಧಿಪೂರ್ವಕವಾಗಿ ಅನ್ಯಾಯ ಮಾಡಿದರೆಂದು ನಾನು ಹೇಳಲಾರೆ. ಸರ್ಕಾರದಚಾಕರಿಗಳನ್ನು ರಿಯಾಯಿತಿಗಳನ್ನು ಹಂಚುವುದರಲ್ಲಿ ಅವರು ಒಂದು ಸಂಕೀರ್ಣ ತತ್ತ್ವವನ್ನು (mixed policy)  ಅನುಸರಿಸಿದರು. ಯಾವ ವಿಷಯದಲ್ಲಿಯೂ, ಯಾವ ಒಂದು ಪಂಗಡಕ್ಕೂ ಇಲ್ಲದೆ ಹೋಗಬಾರದು; ಯಾವ ಒಂದಕ್ಕೂ ಅದು ನಿರೀಕ್ಷಿಸಿದಷ್ಟು ಹೆಚ್ಚಾಗಿ ದೊರೆಯಲಾಗದು. ಒಂದು ಸಾರಿ, ಒಂದು ಪಂಗಡಕ್ಕೆ, ಇನ್ನೊಂದು ಸಾರಿ ಇನ್ನೊಂದು ಪಂಗಡಕ್ಕೆ, ಒಂದು ಕ್ಷೇತ್ರದಲ್ಲಿ ಒಂದು ಪಂಗಡಕ್ಕೆ, ಮತ್ತೊಂದು ಕ್ಷೇತ್ರದಲ್ಲಿ ಮತ್ತೊಂದು ಪಂಗಡಕ್ಕೆ ಅವಕಾಶ ದೊರೆತು, ಈ ಹಂಚಿಕೆಯಲ್ಲಿ ಒಂದು ಸಮತೆಯೂ ನ್ಯಾಯವೂ ನಡೆಯಬೇಕೆಂಬುದು ಅವರ ತಾತ್ಪರ್ಯ” ಇದು ಮಿರ್ಜಾರ ಸಮಕಾಲೀನರೂ, ಆಗ ಪ್ರತಿನಿಧಿ ಸಭೆಗಳ ಸದಸ್ಯರೂ, ಮಿರ್ಜಾ ಅವರ ಟೀಕಾಕಾರರೂ ಆಗಿದ್ದ ಡಿ.ವಿ.ಗುಂಡಪ್ಪನವರ ಬಣ್ಣನೆ: ನಾಲ್ವಡಿಯವರ ಮನದಾಳವನ್ನು, ಮಿರ್ಜಾ ಅವರ ಕಾರ್ಯನೀತಿ – ಪಟುತ್ವವನ್ನು ಈ ಮಾತುಗಳು ಧ್ವನಿಸುತ್ತವೆ. ಅಂದರೆ ಸಾಮಾಜಿಕ ನ್ಯಾಯ  ಎಂದು ನಾವೀಗ ಏನು ಹೇಳುತ್ತೇವೆ ಅದನ್ನು ಮೈಸೂರಿನಲ್ಲಿ ನಾಲ್ವಡಿಯವರು ೧೯೧೮ರಿಂದಲೂ ಹೆಚ್ಚಾಗಿ ಅನುಷ್ಠಾನ ಮಾಡುತ್ತಾ ಬಂದರು. ಮಹಾರಾಜರ ಮನವರಿತು ದಕ್ಷತೆಯಿಂದ ಕಾರ್ಯನಿರ್ವಹಿಸಿದ ದಿವಾನರಲ್ಲಿ ಮಿರ್ಜಾ ಅಗ್ರಗಣ್ಯರು. ಯಾವುದೇ ವಿಚಾರವಿರಲಿ ಅವರಿಬ್ಬರಲ್ಲಿ ಅಭಿಪ್ರಾಯಭೇದವಿದ್ದಂತೆ ಕಾಣುವುದಿಲ್ಲ. ಮಹಾ ರಾಜರ-ಸೋದರಮಾವ ಕಾಂತರಾಜರಲ್ಲಾದರೂ ಅಲ್ಪ- ಸ್ವಲ್ಪ ಭಿನ್ನಾಭಿಪ್ರಾಯ ಗುರುತಿಸಬಹುದು. ಆದರೆ ಮಿರ್ಜಾ ಮತ್ತು ಮಹಾರಾಜರ ನಡುವೆ ಅಲ್ಲ.

ಬ್ರಿಟಿಷರೊಡನೆ ವ್ಯವಹರಿಸುವಲ್ಲಿ ಮಹಾರಾಜರು ೧೯೨೧ರಿಂದಲೇ ಕಟು ನಿಲುವು ತೆಗೆದುಕೊಂಡಿದ್ದು ಕಾಣುತ್ತದೆ. ಅವರಿಗೂ ನಾಲ್ವಡಿಯವರಿಗೂ ಈ ವಿಚಾರದಲ್ಲಿ ವಿಚಾರ ವಿನಿಮಯವಾಗುತ್ತಿದ್ದು, ಯಾರು ಯಾರು ಹೇಗೆ ವರ್ತಿಸ ಬೇಕು, ಬರೆಯಬೇಕೆಂದು ತೀರ್ಮಾನಿಸುತ್ತಿದ್ದಂತೆ ಕಾಣುತ್ತದೆ. ಮಿರ್ಜಾ ಕಾಂಗ್ರೆಸ್ ಗಾಂಽ ಬಗ್ಗೆಯೂ ಬಹಿರಂಗವಾಗಿ, ಪ್ರತಿನಿಧಿ ಸಭೆಗಳಲ್ಲಿ ಅತೀವ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ ದರು. ಮಹಾರಾಜರ ಅನುಮತಿ ಇಲ್ಲದೆ ಈ ಭಾಷಣ ಗಳು ಸಾಧ್ಯವೇ ಇರಲಿಲ್ಲ. ಮಿರ್ಜಾ ಅವರು ಗಾಂಽ ಸ್ವದೇಶಿ ಮತ್ತು ಕಾಂಗ್ರೆಸ್ಸನ್ನು ಹೊಗಳಿ, ವೈಸರಾಯರಿಂದ ಛೇಡಿಸಿ ಕೊಂಡಿದ್ದೂ ಉಂಟು.

ಮತೀಯ ಸೌಹಾರ್ದಕ್ಕೆ ಮೈಸೂರು ಮೊದಲಿನಿಂದಲೂ ಹೆಸರುವಾಸಿ. ನಾಲ್ವಡಿಯವರು ಮತ್ತು ಅವರ ಎಲ್ಲ ದಿವಾನರೂ ಆ ಬಗ್ಗೆ ಗರ್ವಪಡುತ್ತಿದ್ದರು. ಆ ಬಗ್ಗೆ ಮಿರ್ಜಾ ಅವರು ತಮ್ಮ ‘ಸಾರ್ವಜನಿಕ ಜೀವನ’ ಎಂಬ ಆತ್ಮಚರಿತ್ರೆಯಲ್ಲಿ ವಿಪುಲವಾಗಿ ಬರೆದಿರುವರು. ನಾಲ್ವಡಿಯವರು ಎಲ್ಲ ಧರ್ಮೀಯರ-ಸಮುದಾ ಯದವರ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದರು. ಮತ್ತು ಅರ್ಥಪೂರ್ಣವಾದ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದರು.

” ಬೆಂಗಳೂರು ಗಲಭೆಗಳಂತೂ ಪೂರ್ಣವಾಗಿ ಮಿಲ್ಲರ್ ಸಮಿತಿ ವರದಿಯ ಅನುಷ್ಠಾನ, ಮಿರ್ಜಾ ಅವರ ನೇಮಕಾತಿಯ ವಿರುದ್ಧವೇ ನಡೆಯಿತೆಂದು, ಅದಕ್ಕೆ ಕಾರಣರಾದವರು ಬ್ರಾಹ್ಮಣೇತರ ಚಳವಳಿಯ ವಿರೋಧಿಗಳೆಂದು, ಸಾಧ್ಯವಾದರೆ ಮಿರ್ಜಾ ಅವರನ್ನು ಧೃತಿಗೆಡಿಸಿ ಪದವಿ ತ್ಯಜಿಸಿ ಹೋಗುವಂತೆ ಹೂಡಿದ ಹುನ್ನಾರ ಎಂತಲೂ ಚರಿತ್ರಕಾರರಾದ ಜೇಮ್ಸ್ ಮೆನೂರ್ ಮತ್ತು ಹೆಟ್ಟೆ ಅಭಿಪ್ರಾಯಪಟ್ಟರೆ, ಆ ಬಗ್ಗೆ ವಿಚಾರಣೆ ನಡೆಸಿದ ವಿಶ್ವೇಶ್ವರಯ್ಯ ಸಮಿತಿಯೂ ಆ ಬಗ್ಗೆ ಬೊಟ್ಟು ಮಾಡಿದೆ.”

Tags:
error: Content is protected !!