Mysore
22
overcast clouds
Light
Dark

ಸಂಪಾದಕೀಯ : ಸೌಲಭ್ಯವಂಚಿತ ಅರಣ್ಯವಾಸಿಗಳಿಗೆ ಆಶಾಕಿರಣವಾದ ಜನ-ವನ ಸೇತುವೆ ಸಾರಿಗೆ

ಚಾಮರಾಜನಗರ ಜಿಲ್ಲೆಯ ಪವಿತ್ರ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಸಂರಕ್ಷಿತ ವನ್ಯಧಾಮದೊಳಗೆ ಮೂಲ ಸೌಲಭ್ಯಗಳ ಕೊರತೆಯಿರುವ ಗ್ರಾಮಗಳಿಗೆ ಜನ- ವನ ಸೇತುವೆ ಸಾರಿಗೆ ವಾಹನಗಳ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಇದೊಂದು ಅತ್ಯುತ್ತಮ ಹಾಗೂ ಜನಪರ ಕಾರ್ಯಕ್ರಮ. ದೇಶದಲ್ಲೇ ಅಪರೂಪದ ಸೇವೆ ಇದಾಗಿದೆ.
ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಜೊತೆಗೂಡಿ ಈ ಸಂಚಾರ ಸೇವೆಯನ್ನು ಆರಂಭಿಸಿ ಅರಣ್ಯದೊಳಗಿನ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಇಂತಹ ಉತ್ತಮ ಸೇವೆ ಹಿಂದೆಯೇ ಆಗಬೇಕಿತ್ತು. ಸದ್ಯ ತಡವಾಗಿಯಾದರೂ ಪ್ರಾರಂಭವಾಯಿತು ಎಂಬುದು ಸಮಾಧಾನಕರ ಸಂಗತಿ.
ಈ ಸೇವೆಯ ಹಿಂದೆ ಜನಪರ ಕಾಳಜಿ ಹೊಂದಿರುವ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲು ಮತ್ತು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಶ್ರಮವಿದೆ.

೭೭ಕ್ಕೂ ಹೆಚ್ಚು ಬೆಟ್ಟ ಗುಡ್ಡಗಳನ್ನು ಹೊಂದಿರುವ ಮಲೆ ಮಹದೇಶ್ವರ ಬೆಟ್ಟ ಪ್ರದೇಶವು ಪವಾಡ ಪುರುಷ ಮತ್ತು ಸಂತರಾದ ಮಲೆ ಮಹದೇಶ್ವರರು ಐಕ್ಯರಾದ ಸ್ಥಳ. ಮೈಸೂರು ಪ್ರಾಂತ್ಯದ ಜನರಿಗೆ ಇದೊಂದು ಪವಿತ್ರ ಯಾತ್ರಾಸ್ಥಳ. ರಾಜ್ಯ ಸರ್ಕಾರಕ್ಕೆ ವಾರ್ಷಿಕವಾಗಿ ೬೦ ಕೋಟಿ ರೂ.ಗಳಿಗೂ ಹೆಚ್ಚು ಆದಾಯ ತಂದುಕೊಡುವ ಎ-ದರ್ಜೆಯ ಮಹದೇಶ್ವರರ ದೇವಾಲಯ ಇಲ್ಲಿದೆ. ಇದೊಂದು ಪ್ರಮುಖ ಅವೈದಿಕರ ನೇತೃತ್ವದ ಶ್ರದ್ಧಾ ಭಕ್ತಿ ಕೇಂದ್ರ ಎಂಬುದು ಗಮನಾರ್ಹ.
ಈ ಬೆಟ್ಟಗಳ ವ್ಯಾಪ್ತಿಯಲ್ಲಿ ಸುಮಾರು ೨೩ ಕ್ಕೂ ಗ್ರಾಮಗಳಿದ್ದು ಬೇಡಗಂಪಣರು ಮತ್ತು ಆದಿವಾಸಿಗಳು ವಾಸವಾಗಿದ್ದಾರೆ. ಇವರೆಲ್ಲ ಸಂರಕ್ಷಿತ ಮಲೆ ಮಹದೇಶ್ವರ ವನ್ಯಜೀವಿಧಾಮದೊಳಗಿವೆ. ಹಾಗಾಗಿ ಈ ಗ್ರಾಮಗಳಿಗೆ ನಾಗರೀಕ ಸೌಲಭ್ಯಗಳಾದ ಬಸ್ ಹಾಗೂ ಡಾಂಬರು ರಸ್ತೆ ಸೌಕರ್ಯವಿಲ್ಲ. ಅಗತ್ಯ ವಸ್ತುಗಳನ್ನು ಸಾಗಿಸಲು ಈಗಲೂ ಕತ್ತೆಗಳನ್ನು ಬಳಸುತ್ತಾರೆ. ಅನಾರೋಗ್ಯಕ್ಕೆ ಈಡಾದವರನ್ನು ಬಟ್ಟೆಯ ಡೋಲಿಯಲ್ಲಿ ಹೊತ್ತುಕೊಂಡು ಮಲೆ ಮಹದೇಶ್ವರ ಬೆಟ್ಟದ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಇಲ್ಲವೇ ಇಲ್ಲಿಂದ ೪೦ ಕಿ.ಮೀ. ದೂರದ ಕೊಳ್ಳೇಗಾಲ, ಹನೂರು, ತಮಿಳುನಾಡಿನ ಕೊಳತ್ತೂರು ಪಟ್ಟಣಗಳ ಆಸ್ಪತ್ರೆಗೆ ವಾಹನಗಳ ಮೂಲಕ ಕರೆದೊಯ್ಯುತ್ತಿದ್ದರು. ೧೦೮ ಆಂಬುಲೆನ್ಸ್ ಸೇವೆ ಆರಂಭವಾದ ನಂತರ ಕಡಿಮೆಯಾಗಿದೆ. ಈ ನಡುವೆ ರೋಗಿಗಳು ಮತ್ತು ಜನರನ್ನು ಕರೆತರುವ ವಾಹನಗಳ ಮೇಲೆ ಕಾಡಾನೆಗಳು ದಾಳಿ ನಡೆಸಿದ ಉದಾಹರಣೆಗಳಿವೆ. ಹಲವು ಗ್ರಾಮಸ್ಥರು ಆನೆ ದಾಳಿಯಿಂದ ಸತ್ತುಹೋದ ಘಟನೆಗಳು ನಡೆದಿವೆ.

ನಾಗಮಲೆಗೆ ತೆರಳುವ ಮಾರ್ಗದಲ್ಲಿ ಸಿಗುವ ಇಂಡಿಗನತ್ತ ಗ್ರಾಮದ ಬಳಿ, ಗೊರಸಾಣೆ, ಪಡಸಲನತ್ತ, ದೊಡ್ಡಾಣೆ ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಕಾಟವಿದೆ. ಈ ಎಲ್ಲ ಸಮಸ್ಯೆಗಳನ್ನು ಜನರು ಶತಮಾನಗಳಿಂದ ಅನುಭವಿಸುತ್ತ ಬಂದಿದ್ದರು. ಇಂತಹ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ನಡೆಸುತ್ತಿದ್ದ ಗ್ರಾಮ ವಾಸ್ತವ್ಯದಲ್ಲಿ ಪ್ರಸ್ತಾಪವಾಗುತ್ತಿದ್ದವು. ಇದನ್ನು ಗಂಭೀರವಾಗಿ ಗಮನಿಸಿದ ಜಿಲ್ಲಾಡಳಿತವು ಜನವನ ಸಂಚಾರ ಸೇವೆ ಆರಂಭಿಸಿದೆ.
ಅರಣ್ಯದೊಳಗಿನ ಗ್ರಾಮಗಳ ಜನರಿಗೆ ಆರೋಗ್ಯದ ತುರ್ತು ಸಂದರ್ಭಗಳಲ್ಲಿ, ಮಕ್ಕಳು ಶಾಲೆಗೆ ಹೋಗಿ ಬರಲು, ಜನರು ಪಡಿತರ ತರಲು ಸೇರಿದಂತೆ ಇತರೆ ಉದ್ದೇಶಗಳಿಗಾಗಿ ದಿನದ ಇಪ್ಪತ್ನಾಲ್ಕು ಗಂಟೆಗಳೂ ಜನವನ ಸೇವೆಯ ನಾಲ್ಕು ವಾಹನಗಳು ಸೇವೆಗೆ ಲಭ್ಯವಾಗಿವೆ.
ಅರಣ್ಯ ಇಲಾಖೆ ವತಿಯಿಂದ ವಾಹನಗಳ ನಿರ್ವಹಣೆ ಮಾಡಲಾಗುತ್ತದೆ. ನಾಲ್ಕು ವಾಹನಗಳಿಗೆ ನಾಲ್ಕು ಮಾರ್ಗಗಳನ್ನು ನಿಗದಿ ಮಾಡಲಾಗಿದೆ. ಮೊದಲನೇ ಮಾರ್ಗವು ಮೆದಗನಾಣೆ, ಮಲೆ ಮಹದೇಶ್ವರಬೆಟ್ಟ, ತುಳಸಿಕೆರೆ, ಇಂಡಿಗನತ್ತವಾಗಿದೆ. ಎರಡನೇ ಮಾರ್ಗವು ಪಡಸಲನತ್ತ, ಪಾಲಾರ್, ಮಲೆ ಮಹದೇಶ್ವರ ಬೆಟ್ಟವಾಗಿದೆ. ಮೂರನೇ ಮಾರ್ಗವು ಕೊಕ್ಕಬೆರೆ, ತೋಕೆರೆ, ದೊಡ್ಡಾಣೆ, ಮಲೆ ಮಹದೇಶ್ವರಬೆಟ್ಟವಾಗಿದೆ. ನಾಲ್ಕನೇ ಮಾರ್ಗವು ಪಚ್ಚೆದೊಡ್ಡಿ, ಕಾಂಚಳ್ಳಿ, ಅಜ್ಜೀಪುರಗಳಾಗಿದೆ.
ನಮ್ಮ ಗ್ರಾಮಗಳಿಗೂ ಮಿನಿ ಬಸ್ ಸಂಚಾರ ಆರಂಭಿಸಿ ಸೂಕ್ತ ರಸ್ತೆ ನಿರ್ಮಿಸಿ ಎಂದು ಬೆಟ್ಟದ ವ್ಯಾಪ್ತಿಯ ೨೩ ಗ್ರಾಮಗಳ ಜನರು ಸ್ಥಳೀಯ ಹನೂರು ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೂ ಮನವಿ ಸಲ್ಲಿಸಿದ್ದರು. ಆದರೆ, ಗ್ರಾಮಗಳು ಸಂರಕ್ಷಿತ ಅರಣ್ಯದೊಳಗೆ ಇರುವುದರಿಂದ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಅರಣ್ಯ ಸಂರಕ್ಷಣಾ ಕಾನೂನು ತೊಡರುಗಾಲು ಆಗಿತ್ತು. ಒಂದು ವೇಳೆ ನಾಗರೀಕ ಸೌಲಭ್ಯಗಳನ್ನು ಕಲ್ಪಿಸಿದರೆ ವಾಹನಗಳ ಸಂಚಾರ ಹೆಚ್ಚಾಗಿ ಪ್ರಾಣಿಗಳು ಸ್ವಚ್ಛಂದ ಬದುಕಿಗೆ ಅಡಚಣೆಯಾಗಲಿದೆ ಅಲ್ಲದೆ ವಾಣಿಜ್ಯ ಚಟುವಟಿಕೆಗಳು ಹೆಚ್ಚಾದರೆ ಸಂರಕ್ಷಿತ ಅರಣ್ಯ ಎಂಬುದಕ್ಕೆ ಅರ್ಥವೇ ಇರುವುದಿಲ್ಲ ಎಂಬ ಕಾರಣಗಳಿಂದ ಮೂಲ ಸೌಲಭ್ಯಗಳು ದೊರಕಲಿಲ್ಲ.

ಬೆಟ್ಟದ ಆಸುಪಾಸಿನ ೪ ಗ್ರಾಮಗಳನ್ನು ವನ್ಯಧಾಮದಿಂದ ಸ್ಥಳಾಂತರಿಸಲು ಸ್ಥಳೀಯ ಶಾಸಕರಾದ ಆರ್.ನರೇಂದ್ರ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದು ಧೂಳು ತಿನ್ನುತ್ತ ಬಿದ್ದಿದೆ. ಇದರಲ್ಲಿ ಒಂದು ಗ್ರಾಮವಾದ ಚಂಗಡಿಯನ್ನು ಹನೂರು ಸಮೀಪ ವೈಶಂಪಾಳ್ಯ ಎಂಬ ಪ್ರದೇಶಕ್ಕೆ ಸ್ಥಳಾಂತರಿಸಲು ಎಲ್ಲ ಸಿದ್ದತೆ ನಡೆದಿದೆ. ಸರ್ಕಾರದ ಅನುಮೋದನೆ ಬಾಕಿಯಿದೆ. ೨೦೦೬ರಲ್ಲಿ ಜಾರಿಗೊಂಡ ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ಅರಣ್ಯದೊಳಗೆ ಇರುವ ಆದಿವಾಸಿಗಳು ಹಾಗೂ ಇತರರನ್ನು ಬಲವಂತವಾಗಿ ಒಕ್ಕಲೆಬ್ಬಿಸುವಂತಿಲ್ಲ. ಜನಪರ ಕಾಳಜಿ ಇರುವ ಅರಣ್ಯಾಧಿಕಾರಿಗಳು ಇದ್ದರೆ ಇಂತಹ ಸೇವೆ ಆರಂಭವಾಗುತ್ತವೆ ಎಂಬುದಕ್ಕೆ ಜನವನ ಸೇವೆ ಉದಾಹರಣೆ.