Mysore
27
few clouds

Social Media

ಶನಿವಾರ, 03 ಜನವರಿ 2026
Light
Dark

ಗಂಡು ಮಕ್ಕಳನ್ನು ಸಂವೇದನಾಶೀಲರನ್ನಾಗಿಸುವ ಇಕ್ವಲ್‌ ಕಮ್ಯುನಿಟಿ ಫೌಂಡೇಶನ್‌

ಪಂಜು ಗಂಗೊಳ್ಳಿ 

೨೦೧೨ರ ಒಂದು ದಿನ ಅಂಜನಾ ಗೋಸ್ವಾಮಿ ಎಂಬ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಮಹಾರಾಷ್ಟ್ರದ ಪೂನಾದಲ್ಲಿ ಕೌಟುಂಬಿಕ ದೌರ್ಜನ್ಯದ ಬಗ್ಗೆ ಒಂದು ಅಧಿವೇಶನ ನಡೆಸುತ್ತಿದ್ದರು. ಅಲ್ಲಿ ನೆರೆದಿದ್ದವರೆಲ್ಲರೂ ಆರ್ಥಿಕವಾಗಿ ಬಡ ಕುಟುಂಬಗಳಿಂದ ಬಂದ ಮಹಿಳೆಯರು. ಅವರಲ್ಲೊಬ್ಬಾಕೆ ಎದ್ದು ನಿಂತು, ‘ನೀವು ಕೌಟುಂಬಿಕ ದೌರ್ಜನ್ಯದ ಬಗ್ಗೆ ಹೇಗೆ ನಡೆದುಕೊಳ್ಳಬೇಕು ಅಂತ ನನಗೆ ಹೇಳುವ ಬದಲು ನೀವು ನೇರವಾಗಿ ನನ್ನ ಗಂಡನಿಗೆ ಇಂತಹ ದೌರ್ಜನ್ಯ ನಡೆಸಬಾರದು ಅಂತ ಏಕೆ ಹೇಳಬಾರದು?’ ಎಂದು ಕೇಳಿದರು. ಅದನ್ನು ಕೇಳಿದ ಅಂಜನಾ ಗೋಸ್ವಾಮಿಗೆ ಆಕೆಯ ಪ್ರಶ್ನೆಗೆ ಹೇಗೆ ಉತ್ತರಿಸುವುದು ಎಂಬುದೇ ತಿಳಿಯಲಿಲ್ಲ! ಆ ಮಹಿಳೆ ಮತ್ತೂ ಮುಂದುವರಿಸಿ, ‘ಕೌಟುಂಬಿಕ ದೌರ್ಜನ್ಯದ ಬಗ್ಗೆ ನೀವು ಕೊಡುವ ಎಲ್ಲ ಮಾಹಿತಿಗಳು ನಮ್ಮ ಮೇಲೆ ದೌರ್ಜನ್ಯ ಎಸಗುವವರಿಂದ ಪಾರಾಗಲು ನಮನ್ನು ಪ್ರಚೋದಿಸುತ್ತವೆ. ಆದರೆ, ಒಂದು ವೇಳೆ ನನ್ನ ಗಂಡ ನಡುರಾತ್ರಿ ಹೊತ್ತಲ್ಲಿ ನನ್ನ ಮೇಲೆ ದೌರ್ಜನ್ಯ ನಡೆಸಿದರೆ ಆಗ ಏನು ಮಾಡಬೇಕು? ಆ ಹೊತ್ತಲ್ಲಿ ನಾನು ಮನೆಯಿಂದ ಪಾರಾಗಿ ರಸ್ತೆಗೆ ಬಂದರೆ ನಮ್ಮ ರಸ್ತೆಗಳು ಅಷ್ಟು ಸುರಕ್ಷಿತವೇ? ಆ ಹೊತ್ತಲ್ಲಿ ನಾನು ಕರೆ ಮಾಡಿದರೆ ಯಾರಾದರೂ ನನಗೆ ಸಹಾಯ ಮಾಡುವರೇ?’ ಎಂದು ಕೇಳಿದಾಗ ಅಂಜನಾ ಗೋಸ್ವಾಮಿಯರ ಬಾಯಿ ಕಟ್ಟಿ ಹೋಯಿತು!

ಚಾರಿತ್ರಿಕವಾಗಿ ಪುರುಷ ಪ್ರಧಾನ ಭಾರತೀಯ ಸಮಾಜದಲ್ಲಿ ಮಹಿಳೆಯನ್ನು ಯಾವತ್ತೂ ಮುಖ್ಯವಾಹಿನಿಯಿಂದ ಬದಿಯಲ್ಲಿರಿಸಲಾಗಿದೆ. ಅವಳ ಮೇಲೆ ಯಾವುದೇ ರೀತಿಯ ಶೋಷಣೆ, ದೌರ್ಜನ್ಯಗಳು ನಡೆದರೆ ಅವುಗಳನ್ನು ಸಹಿಸಿಕೊಂಡು ಬರುವಂತೆ ಆಕೆಯ ಜೀವನ ಕ್ರಮ ಹಾಗೂ ಆಲೋಚನಾ ಕ್ರಮವನ್ನು ರೂಪಿಸಲಾಗಿದೆ. ಆದರೆ, ಮಹಿಳೆಯ ಮೇಲೆ ಇಂತಹ ಶೋಷಣೆ, ದೌರ್ಜನ್ಯಗಳನ್ನು ಮಾಡದಂತೆ ಪುರುಷನ ನಡವಳಿಕೆ ಮತ್ತು ಆಲೋಚನಾ ಕ್ರಮವನ್ನು ತಿದ್ದುವ ಪ್ರಯತ್ನಗಳು ಏಕೆ ನಡೆಯುತ್ತಿಲ್ಲ? ಅಂಜನಾ ಯುವತಿಯಾಗಿದ್ದಾಗ ಅವರು ಹೊರಗೆಲ್ಲಾದರೂ ಹೋಗುವ ಪ್ರಸಂಗಗಳು ಬಂದಾಗಲೆಲ್ಲಾ, ‘ಎದೆ ಮೇಲೆ ದುಪ್ಪಟ್ಟಾ ಇಲ್ಲದೆ ಹೊರ ಹೋಗಬೇಡ’, ಕಾಲೇಜು ಸೇರುವ ಸಮಯದಲ್ಲಿ, ‘ಹತ್ತಿರದಲ್ಲಿರುವ ಯಾವುದಾದರೂ ಕಾಲೇಜನ್ನು ಆಯ್ಕೆ ಮಾಡಿಕೊ’ ಎಂಬ ಸಲಹೆಗಳನ್ನು ಕೇಳಬೇಕಾಗುತ್ತಿತ್ತು. ಅಂಜನಾ, ‘ಏಕೆ?’ ಎಂದು ಪ್ರಶ್ನಿಸಿದಾಗ. ‘ಏಕೆಂದರೆ, ನೀನು ಹೆಣ್ಣು’ ಎಂಬ ಬಿರುಸಿನ ಉತ್ತರ ಕೇಳಬೇಕಾಗುತ್ತಿತ್ತು. ಹೆಣ್ಣು ಮಕ್ಕಳು ಹೇಗಿರಬಾರದು ಎಂದು ಹೇಳುವ ಬದಲು ಅಥವಾ ಜೊತೆಯಲ್ಲಿ ಗಂಡು ಮಕ್ಕಳು ತಮ್ಮ ವರ್ತನೆಯನ್ನು ಹೆಣ್ಣು ಮಕ್ಕಳಲ್ಲಿ ಅಸುರಕ್ಷಿತ ಭಾವನೆ ಹುಟ್ಟದಂತೆ ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಯಾರೂ ಏಕೆ ಏನೂ ಹೇಳುವುದಿಲ್ಲ? ಎಂಬ ಪ್ರಶ್ನೆ ಅಂಜನಾರ ಮನಸ್ಸಲ್ಲಿ ಹುಟ್ಟುತ್ತಿತ್ತಾದರೂ ಅದಕ್ಕೆ ಉತ್ತರ ಎಲ್ಲಿಯೂ ಸಿಗುತ್ತಿರಲಿಲ್ಲ. ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕೆಂಬ ತುಡಿತವೇ ಅಂಜನಾ ಗೋಸ್ವಾಮಿ ‘ಇಕ್ವಲ್ ಕಮ್ಯುನಿಟಿ ಫೌಂಡೇಶನ್’ ಸೇರಲು ಕಾರಣವಾಯಿತು.

ಪೂನಾ ಮೂಲದ, ೨೦೦೯ರಲ್ಲಿ ಹುಟ್ಟಿದ ‘ಇಕ್ವಲ್ ಕಮ್ಯುನಿಟಿ ಫೌಂಡೇಶನ್’ ಸಮಾಜದಲ್ಲಿ ಇಂತಹ ಬದಲಾವಣೆ ತರುವ ಉದ್ದೇಶದಿಂದ ಹುಟ್ಟಿಕೊಂಡ ಒಂದು ಸರ್ಕಾರೇತರ ಸಂಸ್ಥೆ.

ಈ ಸಂಸ್ಥೆಯು ತನ್ನ ವಿನೂತನ ಕಾರ್ಯಕ್ರಮಗಳ ಮೂಲಕ ಗಂಡು ಮಕ್ಕಳು ತಮ್ಮ ಎಳವೆಯಿಂದಲೇ ಹೆಣ್ಣು ಮಕ್ಕಳನ್ನು ತಮ್ಮ ಸಮಾನ ಜೀವಿಯಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಅದರ ಕಾರ್ಯಕ್ರಮಗಳಲ್ಲಿ ‘ಸೋಲಾರ್ ಸಿನಿಮಾ’ ಎಂಬುದೊಂದು.

ಸೋಲಾರ್ ಸಿನಿಮಾ ಕಾರ್ಯಕ್ರಮದಲ್ಲಿ ಯಾವುದಾದರೂ ಜನಪ್ರಿಯ ಸಿನಿಮಾಗಳಲ್ಲಿರುವ ಪುರುಷ ಪಾತ್ರಗಳು ಮಹಿಳೆಯರನ್ನು ಚೇಡಿಸುವ, ಪೀಡಿಸುವ ದೃಶ್ಯಗಳನ್ನು ತೋರಿಸಿ, ಹಾಗೆ ಮಾಡುವುದು ಸರಿಯೇ ತಪ್ಪೇ ಎಂದು ನೆರೆದ ಜನರ ನಡುವೆ, ಮುಖ್ಯವಾಗಿ ಗಂಡು ಮಕ್ಕಳು, ಪುರುಷರ ನಡುವೆ, ಚರ್ಚೆಯನ್ನು ಹುಟ್ಟು ಹಾಕಿ, ಗಂಡು ಮಕ್ಕಳಲ್ಲಿ ಬಾಲ್ಯದಲ್ಲೇ ಮಹಿಳಾ ಪರ ಸಂವೇದನೆಗಳನ್ನು ಹುಟ್ಟು ಹಾಕಲು ಪ್ರಯತ್ನಿಸಲಾಗುತ್ತದೆ. ಹೆಣ್ಣು ಮಕ್ಕಳಿಗೆ ಲೈಂಗಿಕ ಸೂಚಕ ಹೆಸರುಗಳಿಂದ ಕರೆಯುವುದು, ಲೈಂಗಿಕ ಕಿರುಕುಳ ಕೊಡುವುದು, ಚುಡಾಯಿಸುವಿಕೆ ಹಾಗೂ ಅವರೊಂದಿಗೆ ಅಗೌರವಯುತವಾಗಿ ನಡೆದುಕೊಳ್ಳುವುದು ಮೊದಲಾದವುಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಚರ್ಚಿಸಲಾಗುತ್ತದೆ.

ಶಿವರಾಜ್ ಎನ್ನುವ ಒಬ್ಬ ಹುಡುಗ ತನ್ನ ಹದಿಹರೆಯದಲ್ಲಿ ಒಬ್ಬ ಟಪೋರಿ ಹುಡುಗನಾಗಿದ್ದ. ತನ್ನ ಸ್ಲಮ್ಮಿನ ದಾರಿಯಲ್ಲಿ ಕುಳಿತು ಆಚೀಚೆ ಹೋಗಿ ಬರುವ ಹೆಣ್ಣುಮಕ್ಕಳನ್ನು ಚುಡಾಯಿಸುವುದು, ಅವರತ್ತ ಶಿಳ್ಳೆ ಹೊಡೆಯುವುದು ಅವನ ದಿನನಿತ್ಯದ ಪುಂಡಾಟಿಕೆಯಾಗಿತ್ತು. ಕೆಲವು ವರ್ಷಗಳಿಂದ ಇಕ್ವಲ್ ಕಮ್ಯುನಿಟಿ ಫೌಂಡೇಶನ್ ನಡೆಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಶಿವರಾಜ್ ಇಂದು ಎಷ್ಟು ಬದಲಾಗಿದ್ದಾನೆಂದರೆ, ತನ್ನ ಓರಗೆಯ ಗಂಡುಮಕ್ಕಳಿಗೆ ಹೆಣ್ಣು ಮಕ್ಕಳನ್ನು ಏಕೆ ಮತ್ತು ಹೇಗೆ ತಮ್ಮ ಸಮಾನ ಸಹಜೀವಿಗಳಾಗಿ ನೋಡಿಕೊಳ್ಳಬೇಕು ಎಂಬುದನ್ನು ತಿಳಿ ಹೇಳುತ್ತಿದ್ದಾನೆ.

ಇಕ್ವಲ್ ಕಮ್ಯುನಿಟಿ ಫೌಂಡೇಶನ್ ದೇಶದಾದ್ಯಂತ ಗಂಡು ಮಕ್ಕಳ ನಡವಳಿಕೆಯ ಬಗ್ಗೆ ಒಂದು ಸಮೀಕ್ಷೆ ನಡೆಸಿ ಕೆಲವು ಅಂಕಿಅಂಶಗಳನ್ನು ಪತ್ತೆ ಹಚ್ಚಿತು. ಅದರ ಪ್ರಕಾರ, ದೇಶದಲ್ಲಿರುವ ೧೮ ವರ್ಷಕ್ಕಿಂತ ಕಡಿಮೆ ಪ್ರಾಯದ ಗಂಡು ಮಕ್ಕಳ ಅಂದಾಜು ಸಂಖ್ಯೆ ೨೩೦ ಮಿಲಿಯನ್. ಅದರಲ್ಲಿ ಶೇ.೫೭ ಗಂಡು ಮಕ್ಕಳು ಮಹಿಳೆಯರ ಮೇಲೆ ನಡೆಸುವ ಕ್ರೌರ್ಯವನ್ನು ಸಮರ್ಥಿಸುತ್ತಾರೆ. ಶೇ.೫೦ ಗಂಡು ಮಕ್ಕಳು ಮುಂದೆ ತಾವೇ ಸ್ವತಃ ಮಹಿಳೆಯರ ಮೇಲೆ ಕ್ರೌರ್ಯ ಎಸಗಬಹುದು ಎಂಬ ಸೂಚನೆ ನೀಡಿದರೆ, ಶೇ.೨೫ ಗಂಡು ಮಕ್ಕಳು ಅತ್ಯಾಚಾರ ಎಸಗಬಹುದು ಎಂಬ ಸೂಚನೆ ಕೊಟ್ಟರು! ಇಕ್ವಲ್ ಕಮ್ಯುನಿಟಿ ಫೌಂಡೇಶನ್ ಈವರೆಗೆ ನೂರಾರು ಶಿವರಾಜ್‌ರನ್ನು ಸೃಷ್ಟಿಸಿದೆ. ಅಂಜನಾ ಗೋಸ್ವಾಮಿಯವರು ‘ಎಲ್ಲ ಹುಡುಗರು ಈ ಸಮಸ್ಯೆಯ ಪಾಲುದಾರರಲ್ಲ. ಆದರೆ, ಎಲ್ಲ ಹುಡುಗರೂ ಈ ಸಮಸ್ಯೆಯ ಪರಿಹಾರದಲ್ಲಿ ಪಾಲುದಾರರಾಗಬಹುದು’ ಎಂದು ಹೇಳುತ್ತಾರೆ.

ಚಾರಿತ್ರಿಕವಾಗಿ ಪುರುಷ ಪ್ರಧಾನ ಭಾರತೀಯ ಸಮಾಜದಲ್ಲಿ ಮಹಿಳೆಯನ್ನು ಯಾವತ್ತೂ ಮುಖ್ಯವಾಹಿನಿಯಿಂದ ಬದಿಯಲ್ಲಿರಿಸಲಾಗಿದೆ. ಅವಳ ಮೇಲೆ ಯಾವುದೇ ರೀತಿಯ ಶೋಷಣೆ, ದೌರ್ಜನ್ಯಗಳು ನಡೆದರೆ ಅವುಗಳನ್ನು ಸಹಿಸಿಕೊಂಡು ಬರುವಂತೆ ಆಕೆಯ ಜೀವನ ಕ್ರಮ ಹಾಗೂ ಆಲೋಚನಾ ಕ್ರಮವನ್ನು ರೂಪಿಸಲಾಗಿದೆ. ಆದರೆ, ಮಹಿಳೆಯ ಮೇಲೆ ಇಂತಹ ಶೋಷಣೆ, ದೌರ್ಜನ್ಯಗಳನ್ನು ಮಾಡದಂತೆ ಪುರುಷನ ನಡವಳಿಕೆ ಮತ್ತು ಆಲೋಚನಾ ಕ್ರಮವನ್ನು ತಿದ್ದುವ ಪ್ರಯತ್ನಗಳು ಏಕೆ ನಡೆಯುತ್ತಿಲ್ಲ?

Tags:
error: Content is protected !!