Mysore
31
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

 ಅರಣ್ಯ ಸಾಕ್ಷರತೆಯನ್ನು ಪ್ರಸರಿಸುತ್ತಿರುವ ಬೀಜೋತ್ಸವ ‘ನಿತ್ಯೋತ್ಸವ’ವಾಗಲಿ! 

ಕೊಡಗು ಅಂದರೇನೆ ಹಾಗೆ. ಹಚ್ಚ ಹಸಿರಿನ ಪರಿಸರದಿಂದಲೇ ನೋಡುಗರನ್ನು ತನ್ನತ್ತ ಸೆಳೆಯುವ ಪುಟ್ಟ ಜಿಲ್ಲೆ. ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಪಟ್ಟಿಯಲ್ಲಿ ರಾಜ್ಯದಲ್ಲೇ ಗಮನಸೆಳೆಯುವ ಕೊಡಗಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದರೂ ಬಹುತೇಕ ಮಂದಿಗೆ ಇಷ್ಟವಾಗುವುದು ಇಲ್ಲಿನ ಹಚ್ಚ ಹಸಿರಿನ ಪರಿಸರ. ಅಪಾರ ಪ್ರಕೃತಿ ಸಂಪತ್ತನ್ನು ಹೊಂದಿರುವ ಕೊಡಗು, ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಿಧಾನವಾಗಿ ತನ್ನ ಅತ್ಯಮೂಲ್ಯ ಸಂಪತ್ತನ್ನು ಕಳೆದುಕೊಳ್ಳಲಾರಂಭಿಸಿದೆ. ಪ್ರಕೃತಿ ಮೇಲಿನ ಮಾನವನ ಹಸ್ತಕ್ಷೇಪಗಳಿಂದ ಈಗಾಗಲೇ ಪ್ರಕೃತಿ ಮುನಿಸಿಕೊಂಡು ಒಂದಷ್ಟು ಪ್ರತಿಫಲ ಕೂಡ ನೀಡಿದೆ. ವನ್ಯಮೃಗಗಳು ಕೂಡ ಮಾನವನ ವಿರುದ್ಧ ಸಂಘರ್ಷ ಹೆಚ್ಚಿಸುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೊಡಗಿನಲ್ಲಿ ಪ್ರಕೃತಿಯನ್ನು ಉಳಿಸುವ ಒಂದಷ್ಟು ಪ್ರಯತ್ನಗಳೂ ನಡೆಯುತ್ತಿದೆ. ಆ ಸಾಲಿನಲ್ಲಿ ಬೀಜೋತ್ಸವ ಕೊಡಗಿನಲ್ಲಿ ಗಮನ ಸೆಳೆಯುತ್ತಿದೆ.

ಹೌದು. ಕೊಡಗಿನಲ್ಲಿ ಅರಣ್ಯ ಪ್ರದೇಶ ವಿಸ್ತರಿಸುವ ನಿಟ್ಟಿನಲ್ಲಿ ’ಬೀಜೋತ್ಸವ’ ಹೆಸರಿನ ಚಿಕ್ಕದೊಂದು ಕ್ರಾಂತಿ ಶುರುವಾಗಿದೆ. ಬಿದಿರಿನಿಂದ ಹಣ್ಣಿನ ಮರದ ತನಕ ವೈವಿಧ್ಯಮಯ ಬೀಜಗಳನ್ನು ಕಾಡೊಳಗೆ ಬಿತ್ತುವ ಕಾರ್ಯ ಭರದಿಂದ ಸಾಗಿದೆ. ಅರಣ್ಯ ಇಲಾಖೆ ನೇತತ್ವದಲ್ಲಿ ನಡೆಯುತ್ತಿರುವ ಈ ಮಹತ್ವದ ಕಾರ್ಯಕ್ರಮಕ್ಕೆ ಪರಿಸರಾಸಕ್ತ ಸಂಘಟನೆಗಳೂ ಕೈ ಜೋಡಿಸಿದ್ದು ವಿಶೇಷವಾಗಿದೆ.

ಕಾವೇರಿ ಸೇರಿದಂತೆ ಪ್ರಮುಖ ನದಿಗಳ ಉಗಮ ಸ್ಥಾನ ಹೊಂದಿರುವ ಕೊಡಗಿನ ಬಹುಭಾಗ ದಟ್ಟ ಅರಣ್ಯದಿಂದ ಕೂಡಿರುವುದರಿಂದ ಶ್ರೀಮಂತ ಪ್ರಾಕೃತಿಕ ಸಂಪತ್ತನ್ನು ಹೊಂದಿದೆ. ೪,೧೦,೭೭೫ ಹೆಕ್ಟೇರ್ ಭೂ ಪ್ರದೇಶ ಹೊಂದಿರುವ ಜಿಲ್ಲೆಯಲ್ಲಿ ೧,೩೪,೬೧೫ ಹೆಕ್ಟೇರ್‌ಗಳಷ್ಟು ಅರಣ್ಯ ಪ್ರದೇಶ ಇದೆ. ಭೂ ಪ್ರದೇಶದ ಸುಮಾರು ಶೇ.೩೩ರಷ್ಟು ಕಾಡು ಇರುವ ಕೊಡಗಿನಲ್ಲಿ ಮತ್ತಷ್ಟು ಅರಣ್ಯ ವಿಸ್ತರಿಸುವ ಉದ್ದೇಶದಿಂದ ವಿಶ್ವ ಪರಿಸರ ದಿನದಂದು ಬೀಜೋತ್ಸವಕ್ಕೆ ಚಾಲನೆ ನೀಡಲಾಗಿದೆ.

ಸಗಣಿ, ಹಟ್ಟಿಗೊಬ್ಬರ ಅಥವಾ ಸಾವಯವ ಗೊಬ್ಬರದ ಜತೆಗೆ ಕೆಂಪು ಅಥವಾ ಜೇಡಿ ಮಣ್ಣಿನೊಂದಿಗೆ ನೀರನ್ನು ಹದವಾಗಿ ಮಿಶ್ರಣ ಮಾಡಿ ಉಂಡೆ ಮಾಡಲಾಗುತ್ತದೆ. ಈ ಉಂಡೆ ಮಧ್ಯ ಬೀಜಗಳನ್ನು ಇಟ್ಟು ಒಣಗಿಸಿದರೆ ಬೀಜದುಂಡೆ ತಯಾರಾಗುತ್ತದೆ. ಮಳೆಗಾಲದ ಸಂದರ್ಭ ಭೂಮಿಯಲ್ಲಿ ೧ ಅಥವಾ ೨ ಇಂಚು ಗುಂಡಿ ತೆಗೆದು ಇದನ್ನು ಬಿತ್ತಲಾಗುತ್ತದೆ. ಮಳೆಗಾಲದಲ್ಲಿ ಬೀಜದುಂಡೆಯೊಳಗೆ ನೀರು ಹೀರಿಕೊಂಡು ಒಳಗಿನ ಬೀಜಗಳು ಮೊಳಕೆಯೊಡೆಯುತ್ತದೆ. ಈ ವೇಳೆ ಉಂಡೆಯಲ್ಲಿರುವ ಪೌಷ್ಟಿಕಾಂಶ ಬಳಸಿಕೊಂಡು ಭೂಮಿಯೊಳಗೆ ತನ್ನ ಬೇರುಗಳನ್ನು ಇಳಿಸುತ್ತದೆ. ನಂತರ ಆಳವಾಗಿ ಬೇರೂರುವ ಸಸಿಗಳು ಮುಂದೆ ದೊಡ್ಡ ಮರವಾಗಿ ಬೆಳೆಯುತ್ತದೆ. ಮತ್ತಿ, ತಾರೆ, ಮಹಾಗಣಿ, ಅಳಲೆ, ನೆಲ್ಲಿ, ಬೇವು, ಮಾವು, ಬಿದಿರು ಹಾಗೂ ವಿವಿಧ ರೀತಿಯ ಹಣ್ಣಿನ ಬೀಜಗಳನ್ನೂ ಬಿತ್ತಲಾಗುತ್ತಿದೆ.

ಕಾಡು ಪ್ರದೇಶ ಮಾತ್ರವಲ್ಲದೆ ಖಾಲಿ ಜಾಗದಲ್ಲೂ ಬೀಜ ಬಿತ್ತಲಾಗುತ್ತಿದೆ. ಕಾರ್ಯಕ್ರಮದಲ್ಲಿ ಬಹುತೇಕ ಬೀಜದುಂಡೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಹಸಿರು ಪಡೆ, ಇಕೋ ಕ್ಲಬ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತಿತರ ಸಂಘ-ಸಂಸ್ಥೆಗಳು ಅರಣ್ಯ ಇಲಾಖೆಯ ಮಹತ್ವದ ಕಾರ್ಯಕ್ರಮಕ್ಕೆ ಕೈ ಜೋಡಿಸಿವೆ. ವಿದ್ಯಾರ್ಥಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ.

ಬೀಜೋತ್ಸವ ಕೇವಲ ಅರಣ್ಯ ಇಲಾಖೆ ಕಾರ್ಯಕ್ರಮವಾಗಿ ಉಳಿದಿಲ್ಲ. ವಿವಿಧ ಸಂಘಟನೆಗಳ ಸಹಭಾಗಿತ್ವದಿಂದಾಗಿ ಉತ್ಸವದ ಮಹತ್ವ ಹೆಚ್ಚಾಗಿದೆ. ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಅವರ ಮೂಲಕ ಪೋಷಕರನ್ನೂ ಕಾರ್ಯಕ್ರಮ ತಲುಪುತ್ತಿದ್ದು, ಸಮಾಜದಲ್ಲಿ ಜಾಗೃತಿ ಮೂಡಿಸಲು ಸಹಕಾರಿ ಆಗುತ್ತಿದೆ.

ವಿದ್ಯಾರ್ಥಿಗಳನ್ನು ಕೇವಲ ಬೀಜ ಮತ್ತು ಬೀಜದುಂಡೆ ಬಿತ್ತಲು ಬಳಸಿಕೊಳ್ಳುತ್ತಿಲ್ಲ. ಕಾಡಿನ ಸಂಕೀರ್ಣತೆ ಮತ್ತು ಅವುಗಳ ಮಹತ್ವದ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಅರಣ್ಯದಲ್ಲಿ ಬಿತ್ತನೆ ಬೀಜ ಬಿತ್ತುವ ವಿಧಾನ, ಮಳೆ ಬಂದಾಗ ಆ ಬೀಜಗಳು ಹೇಗೆ ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತವೆ ಎನ್ನುವುದರ ಮಾಹಿತಿಯನ್ನೂ ನೀಡುವ ಮೂಲಕ ಮಕ್ಕಳನ್ನು ಅರಣ್ಯ ಸಾಕ್ಷರರನ್ನಾಗಿ ಮಾಡುವ ಪ್ರಯತ್ನವೂ ನಡೆದಿರುವುದು ವಿಶೇಷ.

ಬೀಜೋತ್ಸವ ಭವಿಷ್ಯದ ದೃಷ್ಟಿಯಲ್ಲಿ ಅನಿವಾರ್ಯವೂ ಹೌದು. ಗಾಳಿ, ನೀರು, ಹವಾಮಾನದ ವೈಪರಿತ್ಯಗಳನ್ನು ತಡೆಯಲು ಪ್ರಕೃತಿಯನ್ನು ಉಳಿಸುವುದು ಅತ್ಯವಶ್ಯಕವಾಗಿದೆ. ಮರಗಿಡಗಳನ್ನು ಕಡಿದು ಪ್ರಕೃತಿ ನಾಶ ಮಾಡುತ್ತಿರುವ ಈ ಕಾಲದಲ್ಲಿ ಬೀಜೋತ್ಸವ ಕೊಡಗನ್ನೇ ರಕ್ಷಿಸಲು ಸಹಕಾರಿಯಾಗಲಿದೆ ಎಂದರೆ ತಪ್ಪಾಗಲಾರದು. ಸಾರ್ವಜನಿಕರು ಬೀಜೋತ್ಸವಕ್ಕೆ ಅಗತ್ಯ ಸಹಕಾರ ನೀಡಿದರೆ ನಮ್ಮ ಕೊಡಗಿನ ಪ್ರಕೃತಿ ಸಂಪತ್ತನ್ನು ಉಳಿಸಲು ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ನಮ್ಮ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಸ್ವಯಂಪ್ರೇರಿತವಾಗಿ ಬೀಜ ಬಿತ್ತುವ ಮೂಲಕ ಪರಿಸರ ಸಂರಕ್ಷಣೆಗೆ ಕೈ ಜೋಡಿಸಬೇಕಿದೆ.

Tags: