ಶೋಷಿತ ಸಮುದಾಯಗಳ ನಾಯಕರ ಬಲ, ಯಾರಿಗೆ ದೊರೆಯಲಿದೆ ಬೆಂಬಲ? ಇದು ೧೯೬೮ರಲ್ಲಿ ನಡೆದ ಘಟನೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ತಮ್ಮ ಸಂಪುಟದಲ್ಲಿ ಸಚಿವರಾಗಿದ್ದ ಬಿ.ರಾಚಯ್ಯ ಅವರನ್ನು ನೋಡಲು ಬಯಸಿದರು.
ಹೀಗೆ ಅವರು ತಮ್ಮನ್ನು ನೋಡಲು ಬಯಸಿದಾಗ ರಾಚಯ್ಯನವರು ತಡ ಮಾಡಲಿಲ್ಲ. ಹೀಗಾಗಿ ತಕ್ಷಣವೇ ಅವರು ನಿಜಲಿಂಗಪ್ಪ ಅವರ ನಿವಾಸಕ್ಕೆ ಧಾವಿಸಿದರು.
ಆದರೆ ಹೀಗೆ ನಿಜಲಿಂಗಪ್ಪನವರನ್ನು ಭೇಟಿ ಮಾಡಲು ಹೋದ ಸಂದರ್ಭದಲ್ಲಿ ಏನು ನಡೆಯುತ್ತದೆ ಎಂಬುದು ಬಿ.ರಾಚಯ್ಯನವರಿಗೆ ಗೊತ್ತಿತ್ತು. ಏಕೆಂದರೆ, ನಿಜಲಿಂಗಪ್ಪ ಅವರ ಪಾಳೆಯದ ಹಲವು ಶಾಸಕರು ಅಲ್ಲಲ್ಲಿ ತಮ್ಮ ದುಗುಡವನ್ನು ತೋಡಿಕೊಂಡಿದ್ದರು.
ಅದರ ಪ್ರಕಾರ, ಅಂದು ಎಐಸಿಸಿ ಅಧ್ಯಕ್ಷರಾಗಿದ್ದ ಎಸ್. ನಿಜಲಿಂಗಪ್ಪನವರು ತಮ್ಮ ಉತ್ತರಾಽಕಾರಿಯ ಆಯ್ಕೆಗೆ ಕಸರತ್ತು ನಡೆಸುತ್ತಿದ್ದರು. ಹೀಗೆ ಕಸರತ್ತು ನಡೆಸುವಾಗ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಬಿ.ರಾಚಯ್ಯ ಅವರನ್ನು ತರುವ ಲೆಕ್ಕಾಚಾರವೂ ಇತ್ತು. ಅಂದ ಹಾಗೆ ದಿಲ್ಲಿಗೆ ಹೋಗುವ ಮುನ್ನ ಅವರು ತಮ್ಮ ಪಾಲಿನ ಲವ-ಕುಶ ಎಂದೇ ಹೆಸರಾಗಿದ್ದ ವೀರೇಂದ್ರ ಪಾಟೀಲ್ ಮತ್ತು ರಾಮಕೃಷ್ಣ ಹೆಗಡೆ ಅವರ ಹೆಸರುಗಳನ್ನೂ ಸಿಎಂ ಹುದ್ದೆಗೆ ಪರಿಶೀಲಿಸುತ್ತಿದ್ದರು ಎಂಬುದು ನಿಜವೇ. ಆದರೆ ಇದರ ಮಧ್ಯೆ ತಮ್ಮ ಸಂಪುಟದಲ್ಲಿ ಕಂದಾಯ ಮತ್ತು ಅರಣ್ಯ ಸಚಿವರಾಗಿದ್ದ ಬಿ.ರಾಚಯ್ಯ ಅವರ ಹೆಸರೂ ಮುಖ್ಯವಾಗಿ ಕಾಣಿಸಿತ್ತು. ಹೀಗೆ ನಿಜಲಿಂಗಪ್ಪನವರಿಗೆ ರಾಚಯ್ಯನವರ ಹೆಸರು ಮುಖ್ಯವಾಗಿ ಕಾಣಿಸಿಕೊಳ್ಳಲು ಹಲವು ಕಾರಣಗಳಿದ್ದವು. ರಾಚಯ್ಯ ಅವರು ಆಡಳಿತಾತ್ಮಕವಾಗಿ ದಕ್ಷರು ಎಂಬುದು ಒಂದು ಕಾರಣವಾಗಿತ್ತಾದರೂ, ಇದಕ್ಕಿಂತ ಮುಖ್ಯವಾದ ಮತ್ತೊಂದು ಕಾರಣ ಅವರ ತಲೆಯಲ್ಲಿತ್ತು.
ಅದೆಂದರೆ, ಬಿ.ರಾಚಯ್ಯ ಅವರು ದಲಿತ ಸಮುದಾಯದಿಂದ ಬಂದವರು. ಇವತ್ತು ಎಐಸಿಸಿ ಅಧ್ಯಕ್ಷರಾಗಿ ತಾವು ದಿಲ್ಲಿಗೆ ಹೋಗುವ ಸಂದರ್ಭದಲ್ಲಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತಂದರೆ ದೇಶಕ್ಕೆ ಒಂದು ಸಂದೇಶ ನೀಡಿದಂತಾಗುತ್ತದೆ ಎಂಬುದು ನಿಜಲಿಂಗಪ್ಪನವರ ಲೆಕ್ಕಾಚಾರವಾಗಿತ್ತು. ಏಕೆಂದರೆ ದೇಶದ ಜನಸಂಖ್ಯೆಯಲ್ಲಿ ದಲಿತರು ನಂಬರ್ ಒನ್. ಹೀಗಾಗಿ ರಾಜ್ಯದಲ್ಲಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತಂದರೆ ಭಾರತದ ರಾಜಕಾರಣದಲ್ಲಿ ತಮಗೆ ಶಕ್ತಿ ಹೆಚ್ಚಾಗುತ್ತದೆ ಎಂಬುದು ನಿಜಲಿಂಗಪ್ಪನವರ ಲೆಕ್ಕಾಚಾರ ಆಗಿತ್ತು.
ಹೀಗೆ ದಲಿತ ಸಮುದಾಯದ ಶಕ್ತಿ ತಮ್ಮ ಬೆನ್ನಿಗಿದೆ ಎಂದರೆ ಸಹಜವಾಗಿಯೇ ಭವಿಷ್ಯದಲ್ಲಿ ಅದು ತಮ್ಮನ್ನು ಮತ್ತಷ್ಟು ಉನ್ನತ ಜಾಗಕ್ಕೆ ಕರೆದೊಯ್ಯುತ್ತದೆ ಎಂಬ ದೂರಗಾಮಿ ಯೋಚನೆ ಅವರಲ್ಲಿತ್ತು. ಹೀಗಾಗಿಯೇ ಮುಖ್ಯಮಂತ್ರಿ ಹುದ್ದೆಯ ಆಯ್ಕೆ ಕಸರತ್ತು ಆರಂಭಿಸಿದ ನಂತರ ಅವರು ಬಿ.ರಾಚಯ್ಯನವರನ್ನು ನೋಡಲು ಬಯಸಿದರು. ಆದರೆ ಅವರ ಈ ಲೆಕ್ಕಾಚಾರದ ಸುಳಿವು ಕಾಂಗ್ರೆಸ್ ಪಕ್ಷದ ಹಲವು ಶಾಸಕರ ಕಿವಿಗೆ ಬಿದ್ದಿದ್ದರಿಂದ ಅಪಸ್ವರವೂ ಶುರುವಾಗಿತ್ತು. ಏಕೆಂದರೆ ಅವತ್ತು ಪಕ್ಷದ ಶಾಸಕಾಂಗದಲ್ಲಿ ಲಿಂಗಾಯತ ಶಾಸಕರ ಸಂಖ್ಯೆ ಹೆಚ್ಚಿತ್ತು. ಮತ್ತು ಸಹಜವಾಗಿಯೇ ಅವರು ತಮ್ಮ ಸಮುದಾಯದ ಒಬ್ಬ ನಾಯಕ ನಿಜಲಿಂಗಪ್ಪನವರ ಉತ್ತರಾಧಿಕಾರಿಯಾಗಬೇಕು ಎಂದು ಬಯಸಿದ್ದರು. ಶಾಸಕರ ಈ ಭಾವನೆ ಗೊತ್ತಿದ್ದುದರಿಂದ ಅವತ್ತು ರೇಸಿನಲ್ಲಿದ್ದರೂ ರಾಮಕೃಷ್ಣ ಹೆಗಡೆಯವರು ವೀರೇಂದ್ರ ಪಾಟೀಲರ ಬೆನ್ನಿಗೆ ನಿಂತಿದ್ದು ಮತ್ತು ವೀರೇಂದ್ರ ಪಾಟೀಲರ ಪರವಾಗಿ ಲಾಬಿ ಆರಂಭಿಸಿದ್ದು. ಹೀಗಾಗಿ ಈ ಎಲ್ಲವನ್ನೂ ಅರಿತಿದ್ದ ಬಿ.ರಾಚಯ್ಯನವರು ನಿಜಲಿಂಗಪ್ಪನವರನ್ನು ಭೇಟಿ ಮಾಡುವ ಹೊತ್ತಿಗಾಗಲೇ ಒಂದು ಸ್ಪಷ್ಟತೆಗೆ ಬಂದಿದ್ದರು. ಮುಂದೆ ನಿಜಲಿಂಗಪ್ಪನವರನ್ನು ಭೇಟಿ ಮಾಡಿದಾಗ ಸಹಜವಾಗಿಯೇ ಅವರ ಮುಂದೆ ಸಿಎಂ ಆಗುವ ಪ್ರಪೋಸಲ್ಲು ಮಂಡನೆಯಾಯಿತು.
ರಾಚಯ್ಯನವರೇ ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವ ಮುನ್ನ ನೀವು ರಾಜ್ಯದ ಸಿಎಂ ಆಗಬೇಕು ಎಂಬುದು ನನ್ನ ಬಯಕೆ ಅಂತ ಈ ಸಂದರ್ಭದಲ್ಲಿ ನಿಜಲಿಂಗಪ್ಪನವರು ಹೇಳಿದಾಗ ರಾಚಯ್ಯನವರು ಸ್ಪಷ್ಟ ಮಾತುಗಳಲ್ಲಿ ಅದನ್ನು ನಿರಾಕರಿಸಿದರು. ಸಾರ್, ಇವತ್ತು ನಿಮ್ಮ ಜಾಗಕ್ಕೆ ಬರಲು ನಾನು ಮುಂದಾದರೆ ಸಹಜವಾಗಿಯೇ ಶಾಸಕಾಂಗ ಪಕ್ಷದಲ್ಲಿ ವಿರೋಧ ವ್ಯಕ್ತವಾಗುತ್ತದೆ. ನೀವು ದಿಲ್ಲಿಗೆ ಹೋಗುವ ಸಂದರ್ಭದಲ್ಲಿ ಇಂತಹ ಗೊಂದಲಗಳು ನಡೆಯುವುದು ಗೌರವವಲ್ಲ. ನೀವು ನನ್ನ ಮೇಲೆ ಇಟ್ಟಿರುವ ಭರವಸೆಗಾಗಿ ನಾನು ಕೃತಜ್ಞ. ಆದರೆ ಇವತ್ತಿನ ಸಂದರ್ಭದಲ್ಲಿ ನಾನು ಅದನ್ನು ಒಪ್ಪಿಕೊಳ್ಳಲಾರೆ ಎಂದರು.
ಹೀಗೆ ರಾಚಯ್ಯನವರು ಸ್ಪಷ್ಟವಾಗಿ ನಕಾರ ಸೂಚಿಸಿದ ನಂತರ ನಿಜಲಿಂಗಪ್ಪನವರಿಗೆ ಬೇರೆ ದಾರಿ ಉಳಿಯಲಿಲ್ಲ. ಅದೇ ರೀತಿ ಅವರಿಗೆ ಪಕ್ಷದಲ್ಲಿ ತಮ್ಮ ಎದುರಾಳಿಯಾಗಿದ್ದ ಬಿ.ಡಿ.ಜತ್ತಿಯವರು ಮರಳಿ ಮುಖ್ಯಮಂತ್ರಿಯಾಗುವುದು ಇಷ್ಟವಿರಲಿಲ್ಲ. ಹೀಗಾಗಿ ಲಿಂಗಾಯತ ನಾಯಕರಾಗಿ ಬೆಳೆದಿದ್ದ ವೀರೇಂದ್ರ ಪಾಟೀಲರನ್ನೇ ಮುಖ್ಯಮಂತ್ರಿ ಹುದ್ದೆಗೆ ಏರಿಸಿ ಅವರು ದಿಲ್ಲಿಯ ದಾರಿ ಹಿಡಿದರು. ಮುಂದೆ ನಿಜಲಿಂಗಪ್ಪವರ ರೀತಿಯಲ್ಲೇ ಮುಖ್ಯಮಂತ್ರಿ ಹುದ್ದೆಗೆ ದಲಿತರನ್ನು ತರಬೇಕು ಎಂಬ ಯೋಚನೆ ಮೊಳೆತಿದ್ದು ಅವರ ಶಿಷ್ಯ ರಾಮಕೃಷ್ಣ ಹೆಗಡೆ ಅವರಲ್ಲಿ. ಇಂತಹ ಯೋಚನೆ ಮೊಳೆಯುವ ಕಾಲಕ್ಕಾಗಲೇ ರಾಮಕೃಷ್ಣ ಹೆಗಡೆಯವರಿಗೆ ರಾಷ್ಟ್ರ ರಾಜಕಾರಣದ ಕನಸು ಬಿದ್ದಿತ್ತು. ಯಥಾ ಪ್ರಕಾರ ಅವರ ಮನಸ್ಸಿನಲ್ಲಿದ್ದ ಸಿಎಂ ಕ್ಯಾಂಡಿಡೇಟ್ ಬಿ.ರಾಚಯ್ಯನವರು.
ಅಂದ ಹಾಗೆ ತಾವು ರಾಷ್ಟ್ರ ರಾಜಕಾರಣಕ್ಕೆ ಹೋದರೆ ಇಲ್ಲಿ ದಲಿತರೊಬ್ಬರನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸುವುದು ಹೆಗಡೆಯವರ ಲೆಕ್ಕಾಚಾರವಾಗಿತ್ತು. ಕಾರಣ ದಲಿತರು ದೇಶದ ಜನಸಂಖ್ಯೆಯಲ್ಲಿ ನಂಬರ್ ಒನ್. ಹೀಗಾಗಿ ದಲಿತರೊಬ್ಬರನ್ನು ತಾವು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸಿದರೆ ಸಹಜವಾಗಿಯೇ ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಶಕ್ತಿ ಹೆಚ್ಚುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಅರ್ಥಾತ್, ಅವರಿಗೆ ದೇಶದ ಪ್ರಧಾನಿ ಹುದ್ದೆಗೇರುವ ಕನಸಿತ್ತು. ಇಂತಹ ಕನಸಿಗೆ ಪುಷ್ಟಿ ದೊರೆಯಬೇಕು ಎಂದರೆ ದೇಶದ ನಂಬರ್ ಒನ್ ಆಗಿದ್ದ ದಲಿತ ಮತ ಬ್ಯಾಂಕ್ ಮೇಲೆ ಪ್ರಭಾವ ಬೀರಬೇಕು ಎಂಬುದು ಅವರ ಯೋಚನೆಯಾಗಿತ್ತು. ಆದರೆ ಮುಂದೆ ಹಗರಣಗಳ ಮೇಲೆ ಹಗರಣಗಳನ್ನು ಮಾಡಿಕೊಂಡ ರಾಮಕೃಷ್ಣ ಹೆಗಡೆಯವರು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿರಲಿ, ಮುಖ್ಯಮಂತ್ರಿ ಹುದ್ದೆಯಿಂದ ಕುಸಿದು ಬಿದ್ದರು. ಇದನ್ನೆಲ್ಲ ಇವತ್ತು ಏಕೆ ನೆನಪಿಸಿಕೊಳ್ಳಬೇಕೆಂದರೆ, ಕರ್ನಾಟಕದ ರಾಜಕಾರಣದಲ್ಲಿ ಪುನಃ ದಲಿತ ಸಿಎಂ ಕೂಗು ಮೇಲೆದ್ದಿದೆ. ಆದರೆ ಈ ಬಾರಿ ರಾಷ್ಟ್ರ ರಾಜಕಾರಣದ ಕನಸಿರುವವರು ದಲಿತ ನಾಯಕರ ಬೆನ್ನಿಗೆ ನಿಂತಿಲ್ಲ. ಬದಲಿಗೆ ಶೋಷಿತ ಸಮುದಾಯಗಳಿಂದ ಬಂದ ನಾಯಕರು ನಿಂತಿದ್ದಾರೆ. ಆದರೆ ಇದು ಎಲ್ಲಿಗೆ ತಲುಪುತ್ತದೋ ಗೊತ್ತಿಲ್ಲ.
” ದೇಶದ ಜನಸಂಖ್ಯೆಯಲ್ಲಿ ದಲಿತರು ನಂಬರ್ ಒನ್. ಹೀಗಾಗಿ ರಾಜ್ಯದಲ್ಲಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತಂದರೆ ಭಾರತದ ರಾಜಕಾರಣದಲ್ಲಿ ತಮಗೆ ಶಕ್ತಿ ಹೆಚ್ಚಾಗುತ್ತದೆ ಎಂಬುದು ನಿಜಲಿಂಗಪ್ಪನವರ ಲೆಕ್ಕಾಚಾರ ಆಗಿತು”
-ಬೆಂಗಳೂರು ಡೈರಿ
-ಆರ್.ಟಿ.ವಿಠ್ಠಲಮೂರ್ತಿ





