ಪ್ರೊ. ಆರ್.ಎಂ. ಚಿಂತಾಮಣಿ
ನಾವು ೨೦೪೭ರ ಹೊತ್ತಿಗೆ ‘ವಿಕಸಿತ ಭಾರತ’ವಾಗುತ್ತದೆ ಎಂದು ಹೇಳುತ್ತಿದ್ದೇವೆ. ಬಹುಬೇಗನೆ ನಮ್ಮ ದೇಶವು ರಾಷ್ಟ್ರೀಯ ಒಟ್ಟಾದಾಯದ ಗಾತ್ರದಲ್ಲಿ (Gross domestic product ಜಿಡಿಪಿ) ಜಗತ್ತಿನ ಮೂರನೆಯ ಅತಿ ದೊಡ್ಡ ದೇಶವಾಗಿ ಹೊರ ಹೊಮ್ಮಲಿದೆ ಎಂದು ನಮ್ಮ ನಾಯಕರು ಹೇಳುತ್ತಲೇ ಇದ್ದಾರೆ. ಆದರೆ ವಾರ್ಷಿಕ ಸರಾಸರಿ ತಲಾ ಆದಾಯದ (Annual National Average Per capita Income) ದೃಷ್ಟಿಯಿಂದ ನಮ್ಮ ದೇಶ ಬಹಳ ಹಿಂದಿದೆ. ಹಾಗೆ ನೋಡಿದರೆ ನಾವೀಗ ಅಭಿವೃದ್ಧಿ ಮಾನದಂಡದಂತೆ ಕೆಳ ಮಧ್ಯಮ ಗುಂಪಿನ ದೇಶಗಳಿಗಿಂತ ಮೇಲೆ ಇದ್ದೇವೆ. ವಿಕಸಿತ (ಅಭಿವೃದ್ಧಿ ಹೊಂದಿದ ಶ್ರೀಮಂತ ) ದೇಶವಾಗಬೇಕಾದರೆ ಮೇಲ್ಮಧ್ಯಮ ಗುಂಪಿನ ಅಭಿವೃದ್ಧಿ ಹೊಂದುತ್ತಿರುವ( Developing) ದೇಶಗಳ ಹಂತವನ್ನು ದಾಟಿ ಮುಂದೆ ಹೋಗಬೇಕು. ಅದಕ್ಕಾಗಿ ಸಾಕಷ್ಟು ಶ್ರಮಪಡಬೇಕು.
ಈ ಗುರಿ ಸಾಧಿಸಲು ಮುಂದಿನ ೨೨ ವರ್ಷಗಳಲ್ಲಿ ನಮ್ಮ ಜಿ.ಡಿ.ಪಿ. ವಾರ್ಷಿಕ ಶೇ.೯.೫ರಿಂದ ಶೇ. ೧೦.೦ ರಷ್ಟಾದರೂ ಬೆಳವಣಿಗೆ ಕಾಣಬೇಕು. ಸರಾಸರಿ ತಲಾ ಆದಾಯವೂ ಇದೇ ಪ್ರಮಾಣದಲ್ಲಿ ಬೆಳೆಯಬೇಕಾಗುತ್ತದೆ. ಇವೆರಡಕ್ಕಿಂತ ಹೆಚ್ಚಾಗಿ ಅತಿ ಹೆಚ್ಚು ಆದಾಯದವರ ಮತ್ತು ಅತಿ ಕಡಿಮೆ ಆದಾಯದವರ ನಡುವಿನ ಅಂತರ ತೀರಾ ಕಡಿಮೆ ಇರಬೇಕು. ಅತಿ ಕಡಿಮೆ ವಾರ್ಷಿಕ ಆದಾಯದ ಕುಟುಂಬಗಳೂ ತಮ್ಮ ಕುಟುಂಬದ ಎಲ್ಲ ಸುಖ ಜೀವನದ ಅವಶ್ಯಕತೆಗಳನ್ನು ಖರೀದಿಸುವ ಸಾಮರ್ಥ್ಯ ಹೊಂದಿರಬೇಕು. ಎಲ್ಲರ ಜೀವನ ಮಟ್ಟ ಹೆಚ್ಚುತ್ತಿರಬೇಕು.
ಉದ್ಯೋಗಾವಕಾಶಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿರಬೇಕು. ಈಗಲೂ ಕೃಷಿ ವಲಯದಲ್ಲಿ ಅವಶ್ಯಕತೆಗಿಂತ ಹೆಚ್ಚು ಮಾನವ ಸಂಪನ್ಮೂಲ
ದುಡಿಯುತ್ತಿದೆ ಎಂಬುದು ವರದಿಗಳಿಂದ ತಿಳಿಯುತ್ತದೆ. ಅವರೆಲ್ಲರೂ ಹೊರಗೆ ಬಂದರೆ ಉದ್ಯೋಗಾವಕಾಶ ಒದಗಿಸುವ ಕೆಲಸವಾಗಬೇಕಾಗುತ್ತದೆ. ಉತ್ಪಾದಕ ಉದ್ದಿಮೆಗಳು ದೊಡ್ಡ ಸಂಖ್ಯೆಯಲ್ಲಿ ಬೆಳೆದರೆ ಉದ್ಯೋಗಾವಕಾಶಗಳೂ ಹೆಚ್ಚುತ್ತವೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯೂ ಸೇರಿದಂತೆ ಅನೇಕ ಉತ್ಪಾದಕ ಉದ್ದಿಮೆಗಳಿಗೆ (Manufacturing) ಸಣ್ಣ ನಗರ, ಹಳ್ಳಿಗಳಲ್ಲಿ ಹೆಚ್ಚು ಅವಕಾಶಗಳಿವೆ.
ಉತ್ಪಾದಕ ಉದ್ದಿಮೆಗಳ ಸ್ಪರ್ಧಾತ್ಮಕತೆಗಾಗಿ ಏನು ಮಾಡಬೇಕು:
ಈ ವರೆಗಿನ ಅಭಿವೃದ್ಧಿ ಯೋಜನೆಗಳು ಮತ್ತು ಉತ್ತೇಜಕಗಳ ಕೊಡುವಿಕೆಯ ನಂತರವೂ ನಮ್ಮ ಜಿ.ಡಿ.ಪಿ.ಯಲ್ಲಿ ಮ್ಯಾನ್ಯು-ಕ್ಚರಿಂಗ್ ಉದ್ದಿಮೆಗಳ ಪಾಲು ತೀರಾ ಕಡಿಮೆ ಇದೆ. ಅಧಿಕೃತ ವರದಿಗಳಂತೆ ಇದ್ದು, ೨೦೧೪-೧೫ರಲ್ಲಿ ಶೇ.೧೬ರಷ್ಟಿದ್ದದ್ದು ೨೦೨೨-೨೩ರಲ್ಲಿ ಶೇ.೧೩ಕ್ಕೆ ಇಳಿದಿತ್ತು. ಇದಕ್ಕೆ ಕೋವಿಡ್ -೧೯ ಸಾಂಕ್ರಾಮಿಕ ರೋಗದ ಕಾರಣದಿಂದ ತಾತ್ಕಾಲಿಕ ಲಾಕ್‌ಡೌನ್‌ಗಳೂ ಕಾರಣವಾಗಿರಬಹುದು. ಆದರೂ ಮುಂದಿನ ದಿನಗಳಲ್ಲಿ ನಿರೀಕ್ಷಿತ ಬೆಳವಣಿಗೆ ಕಾಣುತ್ತಿಲ್ಲ. ನಮ್ಮ ಕೈಗಾರಿಕಾ ಉತ್ಪನ್ನಗಳ ಸ್ಥಳೀಯ ಉಪಭೋಗಕ್ಕಲ್ಲದೇ ವಿದೇಶಗಳಿಗೆ ಹೆಚ್ಚು ರಫ್ತು ಮಾಡಲ್ಪಡಬೇಕು. ಅದಕ್ಕಾಗಿ ನಮ್ಮ ಉತ್ಪನ್ನಗಳು ವಿದೇಶಿ ಪೇಟೆಗಳಲ್ಲಿ ಸ್ಪರ್ಧಾತ್ಮಕವಾಗಿರಬೇಕು. ಬೆಲೆ, ಗುಣಮಟ್ಟ, ವಿನ್ಯಾಸ ಹೊಸ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಬಳಕೆ ಮತ್ತು ಪೂರೈಕೆಯ ವೇಗ ಮುಂತಾದ ಮಾನದಂಡಗಳಲ್ಲಿ ನಾವು ಮುಂದಿರಬೇಕು.
ಆದರೆ ನಮ್ಮ ನೆರೆ ಹೊರೆಯ ಏಷ್ಯಾದ ದೇಶಗಳಾದ ಮಲೇಶಿಯಾ, ಇಂಡೋನೇಶಿಯಾ, ವಿಯೆಟ್ನಾಂ ಮತ್ತು ಥೈಲ್ಯಾಂಡ್‌ಗಳಿಗಿಂತ ನಾವು ಹಿಂದಿದ್ದೇವೆ ಎಂದು ಅಂತಾರಾಷ್ಟ್ರೀಯ ಸ್ಪರ್ಧಾತ್ಮಕತಾ ಸೂಚ್ಯಂಕವು ಹೇಳುತ್ತದೆ. ಇದಕ್ಕೆ ಆರು ಕಾರಣಗಳನ್ನೂ ಕೊಡಲಾಗಿದೆ. ಇವುಗಳನ್ನು ಉತ್ಪಾದಕ ಉದ್ದಿಮೆ ಉತ್ಪನ್ನಗಳ ಅಂತಾರಾಷ್ಟ್ರೀಯ ಸ್ಪರ್ಧಾತ್ಮಕತೆಯ ಆಧಾರ ಸ್ತಂಭಗಳೆಂದೂ ವಿವರಿಸಲಾಗಿದೆ. ಅವುಗಳೆಂದರೆ ಬೇಡಿಕೆ ಸ್ಥಿತಿಗತಿ, ಉತ್ಪಾದನಾ ಮೂಲಗಳ (Factors) ಸ್ಥಿತಿಗತಿ, ಸಂಸ್ಥೆಯ ತಂತ್ರಗಾರಿಕೆಗಳು, ಪೂರಕ ಉದ್ದಿಮೆಗಳು, ಸರ್ಕಾರದ ನಿಯಂತ್ರಣದ ಗುಣಮಟ್ಟ ಮತ್ತು ಜಾಗತಿಕ ವ್ಯಾಪಾರ ವಾತಾವರಣ ಮತ್ತು ದೇಶಗಳ ನೀತಿಗಳು.
ಇವುಗಳಲ್ಲಿ ಕೊನೆಯದು ಬಹುರಾಷ್ಟ್ರೀಯ ವ್ಯವಸ್ಥೆಗೆ ಸಂಬಂಧಿಸಿದ್ದು. ನಮ್ಮಂತೆ ಎಲ್ಲ ದೇಶಗಳೂ ತಮ್ಮ ವಿದೇಶ ವ್ಯಾಪಾರದ ನೀತಿ ಮತ್ತು ದಿಕ್ಕುಗಳ ಬಗ್ಗೆ ಇಂದು ಮರು ಚಿಂತನೆ ಮಾಡಬೇಕಾಗಿದೆ. ದಶಕಗಳಿಂದ ಬೆಳೆಸಿ ಉಳಿಸಿಕೊಂಡು ಬಂದಿದ್ದ ಮುಕ್ತ ವ್ಯಾಪಾರ ವ್ಯವಸ್ಥೆ ಅಥವಾ ಕನಿಷ್ಠ ತೆರಿಗೆ ವ್ಯವಸ್ಥೆಗೆ ಅಮೆರಿಕದ ಅಧ್ಯಕ್ಷರು ಕೊಟ್ಟ ‘ಟ್ರಂಪಾಘಾತ’ವು ದೊಡ್ಡ ಪೆಟ್ಟು ಕೊಟ್ಟಿದೆ. ಎಲ್ಲ ದೇಶಗಳೂ ರಕ್ಷಣಾತ್ಮಕ ನಿಲುವು ತಳೆದರೆ ಮತ್ತು ಅಮೆರಿಕದಂತೆ ಆಮದು ತೆರಿಗೆಗಳನ್ನು ಮನ ಬಂದಂತೆ ಹೆಚ್ಚಿಸಿದರೆ ಮತ್ತು ತೆರಿಗೆಯೇತರ ನಿರ್ಬಂಧಗಳನ್ನು ಹೇರಿದರೆ ಎಲ್ಲ ದೇಶಗಳಿಗೂ ತೊಂದರೆ ಯಾಗುತ್ತದೆ. ಜಾಗತಿಕ ಮಟ್ಟದ ಆರ್ಥಿಕ ಬೆಳವಣಿಗೆಯೇ ಕುಂಠಿತವಾಗಬಹುದು.
ಉಳಿದಂತೆ ನಮ್ಮಲ್ಲಿಯ ಸಂಕೀರ್ಣ ತೆರಿಗೆ ವ್ಯವಸ್ಥೆಯು ಉತ್ಪಾದನಾ ವೆಚ್ಚಗಳನ್ನು ಹೆಚ್ಚಿಸುವುದರಿಂದ ಸ್ಪರ್ಧಾತ್ಮಕ ಬೆಲೆಗಳನ್ನು ನಿರ್ಧರಿಸುವುದು ಕಷ್ಟವಾಗುತ್ತದೆ. ಅಲ್ಲದೇ ವಿದೇಶಿ ಪೇಟೆಗಳಲ್ಲಿ ನಮ್ಮ ಉತ್ಪನ್ನಗಳು ಬೇರೆ ದೇಶಗಳೊಂದಿಗೆ ಸ್ಪರ್ಧಿಸುವುದು ಸಮಸ್ಯೆಯಾಗುತ್ತದೆ. ಸ್ಥಳೀಯ ಉತ್ಪಾದನೆ ಹೆಚ್ಚಿಸಲು ಆಮದು ತೆರಿಗೆ ವಿಧಿಸುವಾಗ ಮತ್ತು ಹೆಚ್ಚಿಸುವಾಗ ಸರ್ಕಾರ ಎಲ್ಲ ದೃಷ್ಟಿಕೋನಗಳಿಂದಲೂ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಉತ್ಪಾದನೆಯಲ್ಲಿ ಉಪಯೋಗಿಸುವ ಮಧ್ಯಂತರ ಸರಕುಗಳ ಆಮದು ಸುಂಕ ಹೆಚ್ಚಿದ್ದರೆ ಅಂತಿಮ ಉತ್ಪನ್ನದ ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ. ಇಂಥದ್ದನ್ನು ತಪ್ಪಿಸಬೇಕು. ನಮ್ಮ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಇನ್ನೂ ಸರಳಗೊಳ್ಳಬೇಕು. ಬಿಡಿ ಭಾಗಗಳು ಮತ್ತು ಅಂತಿಮ ಉತ್ಪನ್ನಗಳ ಮೇಲಿನ ತೆರಿಗೆ ದರ ಒಂದೇ ಆಗಿರಬೇಕು. ಜಿಎಸ್‌ಟಿ ದರಗಳು ಸಂಖ್ಯೆಯಲ್ಲಿ ಇನ್ನೂ ಕಡಿಮೆಯಾಗಿ ಮೂರು ದರಗಳಿದ್ದರೆ ಸಾಕು. ಉತ್ಪಾದಕರಿಗೆ ಲೆಕ್ಕ ಹಾಕಲು ಸರಳವಾಗಿರಬೇಕು. ವಿದೇಶಗಳಲ್ಲಿ ಸ್ಪರ್ಧಾತ್ಮಕವಾಗುವಂತಿರಬೇಕು.
ನಿತ್ಯೋಪಯೋಗಿ ಉತ್ಪನ್ನಗಳನ್ನು ತೆರಿಗೆ ಮುಕ್ತಗೊಳಿಸಬೇಕು. ನಮ್ಮ ಖಾಸಗಿ ಉತ್ಪಾದಕ ಕಂಪೆನಿಗಳು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಸಾಕಷ್ಟು ವೆಚ್ಚ ಮಾಡುತ್ತಿಲ್ಲವೆಂಬುದೂ ಸಮಸ್ಯೆಯೇ. ಹೊಸ ತಂತ್ರಜ್ಞಾನ ಅಳವಡಿಕೆ ಮತ್ತು ನಾವೀನ್ಯತೆಗಾಗಿ ಹೊರಗಿನ ಕಂಪೆನಿಗಳ ತಂತ್ರಜ್ಞಾನ ಖರೀದಿಸಬೇಕಾಗುತ್ತದೆ. ಆ ದುಬಾರಿ ವೆಚ್ಚದಿಂದ ಉತ್ಪಾದನಾ ವೆಚ್ಚಗಳು ವಿಪರೀತ ಹೆಚ್ಚಾಗಿ ಉತ್ಪನ್ನಗಳು ಸ್ಪರ್ಧಾತ್ಮಕವಾಗಲಾರವು. ತಾವೇ ಹೊಸ ತಂತ್ರಜ್ಞಾನ ಕಂಡು ಹಿಡಿದು ಅಳವಡಿಸಿಕೊಂಡರೆ ಒಳ್ಳೆಯದಲ್ಲವೇ? ಸರ್ಕಾರವು ಕಂಪೆನಿಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚಗಳನ್ನು ಒಂದು ಮಿತಿಯಲ್ಲಿ ಕಡ್ಡಾಯಗೊಳಿಸಬೇಕು ಮತ್ತು ತೆರಿಗೆ ವಿನಾಯಿತಿಗಳನ್ನೂ ಹೆಚ್ಚಿಸಬೇಕು. ಈಗಾಗಲೇ ಇರುವ ನಮ್ಮ ವ್ಯಾಪಾರ ಪಾಲುದಾರ ದೇಶಗಳೊಡನೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದಗಳ (Free Trade Agreements) ಪೂರ್ಣ ಪ್ರಮಾಣದ ಉಪಯೋಗ ವಾಗುತ್ತಿಲ್ಲವೆಂಬ ಕೂಗು ಕೇಳಿ ಬರುತ್ತಿದೆ. ಒಪ್ಪಂದಗಳಲ್ಲಿ ಲೋಪದೋಷಗಳಿದ್ದರೆ ಅವು ಗಳನ್ನು ಸರ್ಕಾರ ಚರ್ಚಿಸಿ ಸರಿಪಡಿಸಬೇಕು. ಕಂಪೆನಿಗಳೂ ಪೂರ್ಣಪ್ರಮಾಣದಲ್ಲಿ ಒಪ್ಪಂದಗಳ ಸದುಪಯೋಗ ಮಾಡಿಕೊಂಡು ತಾವು ಬೆಳೆಯಬೇಕು, ದೇಶದ ಅಭಿವೃದ್ಧಿಗೂ ಕಾರಣವಾಗಬೇಕು. ಇಂದಿನ ಸ್ಥಿತಿಯಲ್ಲಿ ಇನ್ನಷ್ಟು ಇಂಥ ಒಪ್ಪಂದಗಳ ಅವಶ್ಯಕತೆ ಇದೆ. ಸರ್ಕಾರ ಈಗಿರುವ ಉತ್ತೇಜಕಗಳೊಡನೆ ಕಾಯ್ದೆಗಳನ್ನು ಸರಳಗೊಳಿಸಿ ಉತ್ಪಾದಕ ಉದ್ದಿಮೆಗಳನ್ನು ಪ್ರೋತ್ಸಾಹಿಸಬೇಕು.
” ಈಗಲೂ ಕೃಷಿ ವಲಯದಲ್ಲಿ ಅವಶ್ಯಕತೆಗಿಂತ ಹೆಚ್ಚು ಮಾನವ ಸಂಪನ್ಮೂಲ ದುಡಿಯುತ್ತಿದೆ ಎಂಬುದು ವರದಿಗಳಿಂದ ತಿಳಿಯುತ್ತದೆ. ಅವರೆಲ್ಲರೂ ಹೊರಗೆ ಬಂದರೆ ಉದ್ಯೋಗಾವಕಾಶ ಒದಗಿಸುವ ಕೆಲಸವಾಗಬೇಕಾಗುತ್ತದೆ. ಉತ್ಪಾದಕ ಉದ್ದಿಮೆಗಳು ದೊಡ್ಡ ಸಂಖ್ಯೆಯಲ್ಲಿ ಬೆಳೆದರೆ ಉದ್ಯೋಗಾವಕಾಶಗಳೂ ಹೆಚ್ಚುತ್ತವೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯೂ ಸೇರಿದಂತೆ ಅನೇಕ ಉತ್ಪಾದಕ ಉದ್ದಿಮೆಗಳಿಗೆ (Manufacturing) ಸಣ್ಣ ನಗರ, ಹಳ್ಳಿಗಳಲ್ಲಿ ಹೆಚ್ಚು ಅವಕಾಶಗಳಿವೆ.”





