ಡಾ.ರಾಜೇಂದ್ರ ಚೆನ್ನಿ
ದಲಿತ ಸಾಹಿತ್ಯದ ಮೂಲಕ ನನಗೆ ಅಂಬೇಡ್ಕರ್ ಚಿಂತನೆಯ ಪರಿಚಯವಾಯಿತು. ಆಗ ತಾನೇ ದೇವನೂರರ ಒಡಲಾಳ, ಕುಸುಮಬಾಲೆ, ಸಿದ್ಧಲಿಂಗಯ್ಯ ಅವರ ಕಾವ್ಯಗಳೆಲ್ಲ ಸಾಹಿತ್ಯ ಲೋಕವನ್ನು ಪ್ರವೇಶಿಸಿದ್ದವು. ಬಹಳ ವಿಭಿನ್ನವಾದ ಜೀವನದೃಷ್ಟಿ ಈ ಬರಹಗಾರರಿಗೆ ಹೇಗೆ ಬಂತು ಎನ್ನುವ ನನ್ನ ಕುತೂಹಲ ಅಂಬೇಡ್ಕರ್ ಕುರಿತಾದ ಅಧ್ಯಯನಕ್ಕೆ ಪೂರ್ವಪೀಠಿಕೆಯನ್ನು ಹಾಕಿತು. ಬಹುಶಃ ಇದನ್ನು ಮೊದಲನೆಯ ಹಂತವೆಂದು ಭಾವಿಸುತ್ತೇನೆ.
ಇನ್ನು ಎರಡನೆಯ ಹಂತದಲ್ಲಿ ೧೯೮೦ರ ಕಾಲವದು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಬಂದಿದ್ದೆ. ಆಗ ದಲಿತ ಚಳವಳಿಗಳೆಲ್ಲ ಉಚ್ರಾಯ ಸ್ಥಿತಿಯಲ್ಲಿದ್ದವು. ಬಿ.ಕೃಷ್ಣಪ್ಪ ಅವರು ನಾನು ಪಾಠ ಮಾಡುತ್ತಿದ್ದ ಕಾಲೇಜಿನಲ್ಲಿ ಅನೇಕ ಬಾರಿ ಭಾಷಣಗಳನ್ನು ಮಾಡುತ್ತಿದ್ದಾಗ, ಅಂಬೇಡ್ಕರ್ ತಾತ್ವಿಕತೆ ಎಂದರೆ ಏನು? ಯಾಕೆ ನಾವು ಈ ರೀತಿಯಲ್ಲಿ ಹೋರಾಟ ಮಾಡುತ್ತಿದ್ದೇವೆ? ಇತ್ಯಾದಿ ಸಂಗತಿಗಳನ್ನು ನಮಗೆಲ್ಲ ಅರ್ಥೈಸಿದ್ದರು. ನನ್ನ ಮಟ್ಟಿಗೆ ಅವರ ಮಾತುಗಳೆಲ್ಲ ಗಾಢವಾದ ಪ್ರಭಾವ ಬೀರಿದವು. ಆ ಹೊತ್ತಿಗಾಗಲೇ ನಾವು ಓದಿರುವ, ತಿಳಿದುಕೊಂಡಿರುವ ಸಿದ್ಧಾಂತ ಅಥವಾ ಯೋಚನಾ ರೀತಿಗಳಿಗಿಂತಲೂ ತೀರಾ ವಿಭಿನ್ನವಾಗಿ ಕಂಡಿದ್ದು, ಅಂಬೇಡ್ಕರ್ ಚಿಂತನೆ. ತೀರಾ ಮೂಲಕ್ಕೆ ಹೋಗಿ ಸಾಮಾಜಿಕ ರಚನೆಗಳ ಒಳಗೂ ಪ್ರವೇಶ ಮಾಡಿದ್ದಲ್ಲದೆ, ಇಷ್ಟು ವರ್ಷಗಳ ಚಿಂತನಾ ಪರಂಪರೆಯನ್ನು ಬುಡಮೇಲು ಮಾಡುವ ನಿಟ್ಟಿನಲ್ಲಿ ಅವರು ಆಲೋಚಿಸಿದ ರೀತಿ ರೋಮಾಂಚನವನ್ನು ಉಂಟುಮಾಡಿತ್ತು. ಈವರೆಗಿನ ಚಿಂತನೆಯನ್ನೇ ಇನ್ನೊಂದು ಪರ್ಯಾಯ ಮಾರ್ಗಕ್ಕೆ ಕರೆದುಕೊಂಡು ಹೋಗುವ ಹಾಗೆ ಕಾಣಿಸಿತು.
ಸಮಾನತೆಯ ಕಲ್ಪನೆ, ವೈಚಾರಿಕ ಖಚಿತತೆ, ಇಡೀ ಶಾಸ್ತ್ರ, ಪುರಾಣ, ಇತಿಹಾಸ ಪರಂಪರೆಗಳನ್ನು ಧೈರ್ಯದಿಂದ ಪ್ರಶ್ನೆ ಮಾಡುವುದನ್ನು ಗಮನಿಸುತ್ತಿದ್ದ ನಾನು ಅವರ ಕುರಿತು ತೀವ್ರವಾಗಿ ಓದುವುದಕ್ಕೆ ಆರಂಭಿಸಿದೆ. ಜೊತೆಯಲ್ಲಿ ಚಳವಳಿ ಮತ್ತು ಬೀದಿನಾಟಕಗಳು ನಿರಂತರವಾಗಿ ನಡೆಯುತ್ತಿತ್ತು. ಇದೆಲ್ಲ ಕಂಡಾಗ, ಜಗತ್ತಿನಲ್ಲಿ ಅಂಬೇಡ್ಕರ್ ಚಿಂತನೆ ಬಹಳ ಪ್ರಖರವಾಗಿರುವಂಥದ್ದು ಎಂದು ಅರ್ಥವಾಯಿತು. ಅಂಬೇಡ್ಕರ್ ಚಿಂತನೆಯ ಸತ್ವ ಇರುವುದು, ಅದನ್ನು ಸಾಮಾಜಿಕವಾಗಿ ಅನ್ವಯಗೊಳಿಸಿ ಚಳವಳಿಗಳಿಗೆ ಒಂದು ದಾರಿ ತೋರುವುದಕ್ಕೆ. ಈ ಸಾಧ್ಯತೆಯ ಕಾರಣದಿಂದ ಅವರ ಬರಹಗಳನ್ನು ಓದುತ್ತಾ, ಬರೆಯತೊಡಗಿದೆ. ಇದೇ ಹೊತ್ತಲ್ಲಿ ‘ಪವಿತ್ರವಾದದ್ದು ಸಂವಿಧಾನ ಒಂದೇ’ ಎಂಬ ನನ್ನ ಲೇಖನ ಪ್ರಕಟವಾಯಿತು.
ಸಂವಿಧಾನ ಎಂದರೆ ಅಂಬೇಡ್ಕರ್ ಸಂವಿಧಾನ ಎಂಬುದು ನನ್ನ ಅಭಿಪ್ರಾಯ. ಅಂಬೇಡ್ಕರ್ ಅವರ ಆಶಯ, ಒಟ್ಟು ಚಳವಳಿಗಳಿಗೂ ಮತ್ತು ನಮ್ಮ ಸಂವಿಧಾನ ಆಶಯಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಅಂಬೇಡ್ಕರ್ ಅವರನ್ನೇ ಕೇಂದ್ರೀಕರಿಸಿಕೊಂಡು ಸಾಹಿತ್ಯದಲ್ಲಿ ಅಂಬೇಡ್ಕರ್ ವಾದ ವ್ಯಕ್ತವಾಗಿರುವ ರೀತಿ, ಅವರ ಸಮಾನತೆಯ ಕಲ್ಪನೆ, ಸಂವಿಧಾನದ ಆಶಯದ ಕುರಿತಂತೆ ಬರವಣಿಗೆ ಮಾಡತೊಡಗಿದೆ.
ಮೂರು ಸಂಗತಿಗಳನ್ನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ನಾನು ಪಾಠ ಮಾಡುವಾಗೆಲ್ಲ ವಿದ್ಯಾರ್ಥಿಗಳೊಂದಿಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುವಾಗ ಜಾತಿ ವಿನಾಶದ ಕುರಿತು ಚರ್ಚಿಸಿದ್ದಿದೆ. ಯಾವುದಕ್ಕೆ ನಾವಿಂದು ಎಂಪಿರಿಕಲ್ ಎಂದು ಕರೆಯುತ್ತೇವೊ, ಅದು ಅನುಭವ ಕೇಂದ್ರಿತ ಆಗಿರಬೇಕು. ವಾಸ್ತವಗಳನ್ನು ಎದುರಿಗಿಟ್ಟುಕೊಂಡೇ ಬರೆಯಬೇಕು. ಬರೀ ಹೇಳಿಕೆಗಳನ್ನು ಯಾರಾದರೂ ಹೇಳಬಹುದು; ಭಾವನಾತ್ಮಕವಾಗಿಯೂ ನಮ್ಮನ್ನು ಪ್ರಚೋದಿಸಬಹುದು. ಆದರೆ ಎದೆಯೊಳಗೆ ವ್ಯಗ್ರತೆ, ಕೋಪವಿದ್ದರೂ ವಿದ್ವಾಂಸರಾಗಿದ್ದ ಅಂಬೇಡ್ಕರ್ ಅವರು ಎಷ್ಟು ತಾಳ್ಮೆಯಿಂದ ಬರೆಯುತ್ತಿದ್ದರೆಂದರೆ ದಿನಾಂಕ, ಸ್ಥಳ, ವಿವರ, ನಡೆದ ಘಟನೆಗಳನ್ನು ಪ್ರಸ್ತಾಪಿಸಿ, ಹಳೆಯ ಶಾಸ್ತ್ರಗಳನ್ನು ಉಲ್ಲೇಖಿಸುವ ನಿಖರತೆ ನನಗೆ ಬಹು ಮೆಚ್ಚುಗೆಯಾಯಿತು.
ಕನ್ನಡದಲ್ಲಿಂದು ಬಹಳಷ್ಟು ಯುವ ಬರಹಗಾರರು ಅಂಬೇಡ್ಕರ್ ಪುಸ್ತಕಗಳನ್ನು, ಅವರ ಬಗ್ಗೆ ಈಗಾಗಲೇ ನಡೆದ ಸಂಶೋಧನೆಗಳನ್ನು ಅನುವಾದಿಸುವತ್ತ ಹೆಜ್ಜೆ ಇಡುತ್ತಿದ್ದಾರೆ. ಅವರೆಲ್ಲರಿಗೂ ಖಚಿತವಾದಂತಹ ಒಂದು ಚಿಂತನೆಯಿದೆ. ಆದರೆ ಸಾಮುದಾಯಿಕ ಚಳವಳಿ ಮಾಡುವ ಕ್ರಮದ ಅಗತ್ಯವಿದೆ. ಸಮಾನ ಚಿಂತನೆಗಳಿಗೆ ಅವಕಾಶ ನೀಡುವ ಅಂಬೇಡ್ಕರ್ ಅವರ ಕುರಿತಾದ ಈ ಚಳವಳಿ ಈಗಲೂ ಗರಿಗೆದರಬಹುದೆಂಬ ನಿರೀಕ್ಷೆಯೂ ಇದೆ.
” ಸಂವಿಧಾನ ಎಂದರೆ ಅಂಬೇಡ್ಕರ್ ಸಂವಿಧಾನ ಎಂಬುದು ನನ್ನ ಅಭಿಪ್ರಾಯ. ಅಂಬೇಡ್ಕರ್ ಅವರ ಆಶಯ, ಒಟ್ಟು ಚಳವಳಿಗಳಿಗೂ ಮತ್ತು ನಮ್ಮ ಸಂವಿಧಾನ ಆಶಯಕ್ಕೂ ಯಾವುದೇ ವ್ಯತ್ಯಾಸವಿಲ್ಲ”





