ಆರ್.ಟಿ.ವಿಠ್ಠಲಮೂರ್ತಿ
ಏ.೨ರಂದು ದಿಲ್ಲಿಗೆ ತೆರಳಲಿರುವ ಸಿಎಂ, ಸಚಿವರು; ಏ.೩ರಂದು ಸಭೆ
ಹನಿಟ್ರ್ಯಾಪ್ ತನಿಖೆ ಮುಗಿಯುವವರೆಗೆ ಹೇಳಿಕೆ ನೀಡದಂತೆ ಸೂಚಿಸುವ ಸಾಧ್ಯತೆ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಹಗರಣ ಸ್ಛೋಟಗೊಂಡ ಬೆನ್ನಲ್ಲೇ ಎಚ್ಚರಿಕೆಯ ನಡೆ ಅನುಸರಿಸುತ್ತಿರುವ ಕಾಂಗ್ರೆಸ್ ವರಿಷ್ಠರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಸಚಿವ ಸಂಪುಟದ ಪ್ರಮುಖ ಸಚಿವರಿಗೆ ದಿಲ್ಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.
ಪಕ್ಷದ ವರಿಷ್ಠರ ಈ ಬುಲಾವ್ ಹಿನ್ನೆಲೆಯಲ್ಲಿ ಏಪ್ರಿಲ್ ೨ರ ಬುಧವಾರ ಸಿದ್ಧರಾಮಯ್ಯ ಮತ್ತವರ ಸಂಪುಟದ ಪ್ರಮುಖ ಸಚಿವರು ದಿಲ್ಲಿಗೆ ದೌಡಾಯಿಸಲಿದ್ದಾರೆ.
ಅಂದ ಹಾಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪೂರ್ವ ನಿರ್ಧರಿತ ಕಾರ್ಯ ಕ್ರಮಗಳಿದ್ದರೂ, ಅದೇ ಕಾಲಕ್ಕೆ ಸರಿಯಾಗಿ ರಾಜ್ಯ ಸಚಿವ ಸಂಪುಟದ ಪ್ರಮುಖ ಸಚಿವರನ್ನೂ ವರಿಷ್ಠರು ಆಹ್ವಾನಿಸಿದ್ದು ಏಪ್ರಿಲ್ ೩ರ ಗುರುವಾರ ಮಹತ್ವದ ಸಭೆ ನಡೆಸಲಿದ್ದಾರೆ.
ತಮ್ಮ ವಿರುದ್ಧ ಹನಿಟ್ರ್ಯಾಪ್ ಯತ್ನ ನಡೆದಿದೆ. ಅಷ್ಟೇ ಅಲ್ಲ, ನನಗಿರುವ ಮಾಹಿತಿಯ ಪ್ರಕಾರ ಇನ್ನೂ ೪೮ ಮಂದಿಯನ್ನು ಹನಿಟ್ರ್ಯಾಪ್ ಬಲೆಗೆ ಸಿಲುಕಿಸಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ವಿಧಾನಸಭೆಯಲ್ಲಿಯೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆ ರಾಜ್ಯದಲ್ಲಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲೂ ಸಂಚಲನವುಂಟು ಮಾಡಿದ್ದಲ್ಲದೆ ಕರ್ನಾಟಕದಲ್ಲಿ ನಡೆಯುತ್ತಿರುವ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಲೋಕಸಭೆಯಲ್ಲೂ ಚರ್ಚೆ ನಡೆದಿತ್ತು.
ಹೀಗೆ ಹನಿಟ್ರ್ಯಾಪ್ ಹಗರಣದ ಬಗ್ಗೆ ಎದ್ದ ವಿವಾದ ಕಾಂಗ್ರೆಸ್ ವರಿಷ್ಠರನ್ನು ವಿವಶಗೊಳಿಸಿತಷ್ಟೇ ಅಲ್ಲದೆ, ಇದರ ಪರಿಣಾಮವಾಗಿ ರಾಜ್ಯ ಸರ್ಕಾರಕ್ಕೆ ಅಪಾಯ ಎದುರಾಗಬಹುದೇ? ಎಂಬ ಆತಂಕ ಕಾಡತೊಡಗಿತ್ತು.
ಇದಕ್ಕೆ ಪೂರಕವಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೂಡಾ ಮೂರು ದಿನಗಳ ಹಿಂದೆ ದಿಲ್ಲಿಗೆ ದೌಡಾಯಿಸಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಕಾಂಗ್ರೆಸ್ ಪಾಳೆಯ ಮತ್ತಷ್ಟು ತಲ್ಲಣಗೊಳ್ಳುವಂತೆ ಮಾಡಿತ್ತು.
ಹೀಗಾಗಿಯೇ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾಃಹಿತಿ ಪಡೆಯುತ್ತಿದ್ದ ವರಿಷ್ಠರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪೂರ್ವ ನಿರ್ಧರಿತ ದಿಲ್ಲಿ ಭೇಟಿಯ ಸಮಯದಲ್ಲೇ ಅವರ ಸಂಪುಟದ ಪ್ರಮುಖ ಸಚಿವರಿಗೂ ದಿಲ್ಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.
ಅದರ ಪ್ರಕಾರ ಏಪ್ರಿಲ್ ಮೂರರಂದು ನಡೆಯಲಿರುವ ಸಭೆಯಲ್ಲಿ ಹನಿಟ್ರ್ಯಾಪ್ ಹಗರಣದ ಕುರಿತು ವಿವರವಾಗಿ ಚರ್ಚಿಸಲಿರುವ ವರಿಷ್ಠರು, ಈ ಸಂಬಂಧ ರಾಜ್ಯ ಸರ್ಕಾರ ತನಿಖೆಯ ಮಾರ್ಗ ಹಿಡಿದಿದ್ದು ಅದು ಪೂರ್ಣವಾಗುವವರೆಗೆ ಯಾರೂ ಬಹಿರಂಗ ಹೇಳಿಕೆ ನೀಡದಂತೆ ಸೂಚನೆ ನೀಡುವ ಸಾಧ್ಯತೆಗಳಿವೆ.
” ಮೂಲಗಳ ಪ್ರಕಾರ, ಈ ಸಭೆಯಲ್ಲಿ ಹಲವು ವಿಷಯಗಳ ಕುರಿತು ಮಾತನಾಡಲಿರುವ ವರಿಷ್ಠರು, ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಯ ಕುರಿತ ಚರ್ಚೆಗೂ ಬ್ರೇಕ್ ಹಾಕುವ ಸಾಧ್ಯತೆಗಳಿವೆ. ಪಕ್ಷ ನಿರ್ದಿಷ್ಟ ಸೂಚನೆ ಕೊಡುವವರೆಗೆ ಅಧಿಕಾರ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಯಾರೊಬ್ಬರೂ ಮಾತನಾಡಕೂಡದು. ಹಾಗೆ ಮಾತನಾಡಿದರೆ ಶಿಸ್ತುಕ್ರಮ ಕೈಗೊಳ್ಳುವುದು ಅನಿವಾರ್ಯ ವಾಗಲಿದೆ ಎಂದು ಈ ಸಭೆಯಲ್ಲಿ ವರಿಷ್ಠರು ಎಚ್ಚರಿಕೆ ನೀಡಲಿದ್ದಾರೆ ಎಂಬುದು ಮೂಲಗಳ ಸ್ಪಷ್ಟ ಮಾತು.”
” ಹನಿಟ್ರ್ಯಾಪ್ ಪ್ರಕರಣ ಸದ್ದು ಮಾಡುತ್ತಿದ್ದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಆಗಮಿಸಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದರು. ನಂತರ ದಿಲ್ಲಿಗೆ ತೆರಳಿದ ಅವರು ಸೋನಿಯಾ ಗಾಂಧಿ ಅವರಿಗೆ ವಿವರವಾದ ಮಾಹಿತಿ ನೀಡಿ ದರು. ಈಗ ಸೋನಿಯಾ ಅವರ ಸೂಚನೆಯ ಅನುಸಾರ ಪ್ರಮುಖ ಸಚಿವರ ಜತೆ ಚರ್ಚಿಸಲು ಸಮಯ ನಿಗದಿ ಮಾಡಿದ್ದಾರೆ.”