Mysore
26
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಇ-ಕಾಮರ್ಸ್ ದಾಳಿಯನ್ನು ಎದುರಿಸಬಲ್ಲವೆ ಕಿರಾಣಾಗಳು?

• ಪ್ರೊ.ಆರ್.ಎಂ.ಚಿಂತಾಮಣಿ

ಇತ್ತೀಚೆಗೆ ನಗರ, ಪಟ್ಟಣಗಳಲ್ಲಿ ದ್ವಿಚಕ್ರ ವಾಹನಗಳ ಹಿಂದಿನ ಕ್ಯಾರಿಯರ್ ಗಳಲ್ಲಿ ದೊಡ್ಡ ಕಪ್ಪು ಬಾಕ್ಸ್ ಇಟ್ಟುಕೊಂಡು ಸವಾರರು ವಿಳಾಸದಾರರ ಮನೆಗಳಿಗೆ ಊಟ, ತಿಂಡಿಗಳೂ ಸೇರಿದಂತೆ ವಿವಿಧ ಉತ್ಪನ್ನಗಳ ಪಾರ್ಸೆಲ್ ಗಳನ್ನು ವಿಲೇವಾರಿ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಇವರೆಲ್ಲ ಕೊರಿಯರ್ ಅಥವಾ ಇ-ಕಾಮರ್ಸ್ (ಆನ್‌ಲೈನ್ ಮಾರಾಟ) ಕಂಪೆನಿಗಳ ಡೆಲಿವರಿ ಬಾಯ್ಸ್. ಇವರು ಕಂಪೆನಿಗಳ ಆದೇಶದಂತೆ ಪೂರೈಕೆದಾರರು ಅಥವಾ ಸ್ಥಳೀಯ ಸರಕು ಸಾಗಾಣಿಕೆ ಕಂಪೆನಿಗಳ ಕಚೇರಿಗಳಿಂದ ಪಾರ್ಸೆಲ್ ಗಳನ್ನು ಸಂಗ್ರಹಿಸಿ ವಿಳಾಸದಾರರಿಗೆ ತಲುಪಿಸುತ್ತಾರೆ. ಇವರಿಗೆ ಕಂಪೆನಿಗಳು ಒಪ್ಪಂದದಂತೆ ಸಂಬಳ ಮತ್ತು ಇತರ ಭತ್ಯೆ ಮತ್ತು ಸೌಲಭ್ಯಗಳನ್ನು ಕೊಡುತ್ತವೆ.

ನಮ್ಮಲ್ಲಿ ದಶಕದಿಂದ ಆಮೆರಿಕದ ಅಮೆಜಾನ್ ಆನ್‌ಲೈನ್ ಮಾರಾಟದಲ್ಲಿ ತೊಡಗಿದೆ. ನಂತರ ನಮ್ಮದೇ ಪ್ಲಿಪ್ ಕಾರ್ಟ್ ಆರಂಭವಾಯಿತು. ಈಗ ರಿಲಯನ್ಸ್ ಜಿಯೋ ರಿಟೇಲ್ ಡಾಟ್ ಕಾಂ ನಂತಹ ದೊಡ್ಡ ಕಂಪೆನಿಗಳೊಡನೆ ಲಕ್ಷಾಂತರ ಸಣ್ಣ ದೊಡ್ಡ ಆನ್‌ಲೈನ್ ಮಾರಾಟ ಕಂಪೆನಿಗಳು ಕಾರ್ಯನಿರತವಾಗಿವೆ. ಸ್ವಿಗ್ಗಿ ಮತ್ತು ಜೊಮಾಟೊದಂತಹ ತಾಜಾ ಊಟ, ತಿಂಡಿ ಸಮಯಕ್ಕೆ ಸರಿಯಾಗಿ ಪೂರೈಸುವ ಕಂಪೆನಿಗಳೂ ಇವೆ. ಈಚಿನ ದಿನಗಳಲ್ಲಿ ಕ್ಲಿಕ್ ಕಾಮರ್ಸ್ ಹೆಸರಿನಲ್ಲಿ ತಮ್ಮದೇ ಆದ ಸಾಗಾಣಿಕೆ ವ್ಯವಸ್ಥೆ ಇರುವ ಬ್ಲಿಂಕಿಟ್ ಮತ್ತು ಝಡ್ನಂತಹ ಶೀಘ್ರ ಡಿಲಿವರಿ ಕಂಪೆನಿಗಳೂ ಬಂದಿವೆ.

ಈ ಕಂಪೆನಿಗಳೆಲ್ಲ ಆಧುನಿಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿರುತ್ತವೆ. ತಕ್ಕಂತೆ ಸಿಬ್ಬಂದಿಯೂ ಇರುತ್ತಾರೆ. ಪ್ರಸಿದ್ದ ಪೂರೈಕೆದಾರ ಅಂಗಡಿಗಳೊಡನೆ, ಸಾಗಾಣಿಕೆ ಮತ್ತು ಕೊರಿಯರ್ ಕಂಪೆನಿಗಳೊಡನೆ ಒಪ್ಪಂದ ಮಾಡಿಕೊಂಡಿರುತ್ತವೆ. ಈಗ ಇ-ಕಾಮರ್ಸ್ ನೀತಿ ಮತ್ತು ಕಾಯಿದೆ ಪ್ರತ್ಯೇಕವಾಗಿ ಇಲ್ಲದಿದ್ದರೂ ಈಗಿರುವ ಕಾಯ್ದೆಗಳಡಿ ಎಲ್ಲವೂ ನಡೆಯುತ್ತವೆ. ಅತಿ ವೇಗವಾಗಿ ಬೆಳೆಯುತ್ತಿವೆ.

ಗ್ರಾಹಕರು ತಾವಿದ್ದಲ್ಲಿಂದಲೇ ಕಂಪೆನಿಗಳ ಎಲೆಕ್ಟ್ರಾನಿಕ್ ಅಪ್ಲಿಕೇಶನ್‌ಗಳನ್ನು (ಆ್ಯಪ್‌ಗಳನ್ನು) ಬಳಸಿ ಆರ್ಡರ್ ಕೊಡಬಹುದು. ಇದರ ಮೊತ್ತವನ್ನು ಆನ್ ಲೈನ್‌ನಲ್ಲಿಯೇ ಕಟ್ಟಬಹುದು. ಇವುಗಳು ಬೆಳೆಯುತ್ತಿರುವ ವೇಗವನ್ನು ಗಮನಿಸಿದ ಕೆಲವರು ಇದರಿಂದ ನಮ್ಮ ಹಳೆಯ ಕಿರಾಣಾ ಅಂಗಡಿಗಳಿಗೆ ಏಟು ಬೀಳಬಹುದೆಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗುವುದಿಲ್ಲವೆಂಬುದು ತಜ್ಞರ ವಿಶ್ವಾಸ. ಆದರೆ

ಕಿರಾಣಾಗಳು ಮತ್ತು ಇತರೆ ರಿಟೇಲ್ ಅಂಗಡಿಗಳು: ಮೊದಲಿನಿಂದಲೂ ಭಾರತದಾದ್ಯಂತ ಅಂತಿಮ ಉಪಭೋಗಕರ (Consumers) ಅವಶ್ಯಕತೆಗಳನ್ನು ಪೂರೈಸುವ ಸಣ್ಣ ದೊಡ್ಡ ಕಿರಾಣಿ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಸಣ್ಣ ಅಂಗಡಿಗಳು ಹಳ್ಳಿ- ಪಟ್ಟಣಗಳಲ್ಲಿ, ಬೀದಿ-ಬಡಾವಣೆಗಳಲ್ಲಿದ್ದರೆ, ದೊಡ್ಡ ಅಂಗಡಿಗಳು ಕೇಂದ್ರ ಸ್ಥಳಗಳಲ್ಲಿರುತ್ತವೆ. ಇವುಗಳನ್ನೇ ನೆರೆಹೊರೆಯ ಅಂಗಡಿ ಅಥವಾ ಮಮ್ಮಿ ಡ್ಯಾಡಿ ಶಾಪ್ ಎಂದು ಕರೆಯುವುದು. ಇವರಿಗೆ ತಮ್ಮ ಎಲ್ಲ ಗ್ರಾಹಕರ ಪರಿಚಯವಿರುತ್ತದೆ ಮತ್ತು ಪ್ರತಿಯೊಬ್ಬರ ಬೇಕು ಬೇಡಗಳ ಅರಿವು ಇರುತ್ತದೆ. 2022ರ ಅಧಿಕೃತ ಅಂದಾಜಿನಂತೆ ದೇಶದಲ್ಲಿ 12 ಮಿಲಿಯನ್‌ ಗೂ (1.2 ಕೋಟಿ) ಹೆಚ್ಚು ಕಿರಾಣಿ ಅಂಗಡಿಗಳಿದ್ದವು. ದಿನಸಿ ಅಂಗಡಿ, ಪನ್ಸಾರಿ ಅಂಗಡಿ ಎಂದೂ ಕರೆಯಲ್ಪಡುತ್ತವೆ. ಯಾವಾಗಲೂ ಬರುವ ನಿಷ್ಠ ಗ್ರಾಹಕರಿಗೆ ಸೋಡಿ (ಡಿಸೆಂಟ್) ಮತ್ತು ಉದ್ದರಿ (ಸಾಲ) ಸೌಲಭ್ಯಗಳೂ ಇರುತ್ತವೆ.

ಇವರೊಡನೆ ಬಟ್ಟೆ, , ಔಷಧಿ, ಪಾದರಕ್ಷೆಗಳು, ಗೃಹೋಪಯೋಗಿ ವಿದ್ಯುನ್ಮಾನ ಉಪಕರಣಗಳು ಮತ್ತು ಪುಸ್ತಕ ಸ್ಟೇಷನರಿ ಮುಂತಾದವುಗಳನ್ನು ಮಾರುವ ರಿಟೇಲ್ (ಚಿಲ್ಲರೆ) ಅಂಗಡಿಗಳೂ ಸಾಕಷ್ಟಿವೆ. ಇವುಗಳಲ್ಲದೆ ಕಿರಾಣಾ ಸೇರಿ ‘ಬ್ರಿಕ್ ಅಂಡ್ ಮಾರ್ಟರ್’ ರಿಟೇಲರ್ಸ್ ಎಂದು ಕರೆಯುವುದು. 2023ರ ಇತ್ತೀಚಿನ ಅಂದಾಜುಗಳಂತೆ ಈ ಎಲ್ಲ ರಿಟೇಲರ್ಸ್ ಸಂಖ್ಯೆ 20 ಮಿಲಿಯನ್ ಇರಬಹುದೆನ್ನಲಾಗಿದೆ. ವಿತರಣಾ ಪ್ರಣಾಲಿಯ ಕೊನೆಯ ಕೊಂಡಿಗಳಾಗಿ ರುವ ಇವರೆಲ್ಲ ಅನೇಕ ಏರಿಳಿತಗಳನ್ನು ಎದುರಿಸಿಯೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬೆಳೆಯುತ್ತಿರುವುದು ಇವರ ಮಹತ್ವವನ್ನು ಹೇಳುತ್ತದೆ.

ಇವರು ಬಹುತೇಕ ಸ್ವಉದ್ಯೋಗಿಗಳು, ಕುಟುಂಬದ ಸದಸ್ಯರೂ ದುಡಿಯುತ್ತಾರೆ. ಒಬ್ಬಿಬ್ಬರು ಯುವಕರಿಗೂ ಕೆಲಸ ಕೊಡುತ್ತಾರೆ. ಅಂಗಡಿ ದೊಡ್ಡದಿದ್ದರೆ ಏಳೆಂಟು ಜನ ಕೆಲಸದವರು ಇರುತ್ತಾರೆ. ಇವರೆಲ್ಲರಿಗೂ ಮಾಸ್ತರನ್ನುತ್ತಾರೆ. ವೃತ್ತಿಯ ಒಳಹೊರಗುಗಳನ್ನು ಕಲಿಯುತ್ತಿರುತ್ತಾರೆ. ಬಹಳಷ್ಟು ಜನ ಮುಂದಿನ ಹೊಸ ವ್ಯಾಪಾರಿಗಳು.

ಈಗ ಆನ್‌ಲೈನ್ ರಿಟೇಲ್ ಜಾಲತಾಣಗಳು: ಹಲವು ದಶಕಗಳ ಹಿಂದೆ ವಿಶಿಷ್ಟ ಹೆಸರನ್ನು ಹೊಂದಿದ (ಬ್ಯಾಂಡೆಡ್) ಪ್ಯಾಕೆಟ್ ಗಳಲ್ಲಿ (ಪ್ಯಾಕೇಜ್) ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡುವ ತೀವ್ರ ಮಾರಾಟವಾಗುವ ಉಪಭೋಗಕರ ಉತ್ಪನ್ನಗಳು (Fast Moving Consumers Goods- ಎಫ್ಎಂಸಿಜಿ) ಕಂಪೆನಿಗಳು ಬಂದವು. ಆಗ ಸಣ್ಣ ರಿಟೇಲರಿಗೆ ತೊಂದರೆಯಾದಿತೆಂಬ ಭಯವಿತ್ತು. ಆದರೆ ಉಪಭೋಗಕರನ್ನು ತಲುಪಲು ಈ ಕಿರಾಣಾಗಳ ಸೇವೆ ಅವಶ್ಯ ಮತ್ತು ಅನಿವಾರ್ಯ ಎಂಬುದು ಕಂಪೆನಿಗಳೂ ಸೇರಿ ಎಲ್ಲರಿಗೂ ಅರ್ಥವಾಗಲು ತಡವಾಗಲಿಲ್ಲ. ಅಲ್ಲದೆ ಈ ರಿಟೇಲರ ಸಲಹೆಯ ಮೇರೆಗೆ ಎರಡು ಕಪ್ಪು ಟೀ ಮಾಡಲು ಬೇಕಾಗುವ ಟೀ ಸೊಪ್ಪು ಹೊಂದಿದ ಸ್ವಾಚೆಗಳಲ್ಲದೆ ಐದು ಹತ್ತು ರೂ. ಬೆಲೆಯ ಪ್ಯಾಕೆಟ್ ಮತ್ತು ಸ್ಯಾಚೆಗಳನ್ನೂ ತರಲಾಯಿತು. ಮಾರಾಟ ಹೆಚ್ಚಿತ್ತು.

3-4 ದಶಕಗಳ ಹಿಂದೆ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಮುಂಬೈಯಂಥ ಮಹಾನಗರಗಳಲ್ಲಿ ಇದ್ದ ಸೂಪರ್ ಮಾರ್ಕೆಟ್ ಗಳು, ಆರ್ಟ್‌ ಮೆಂಟ್ ಸ್ಟೋರ್‌ಗಳು ಮತ್ತು ಮಾಲ್‌ಗಳು ಇತ್ತೀಚೆಗೆ ಸಣ್ಣ ಡಿಪಾರ್ಟ್‌ಮೆಂಟ್ ಪಟ್ಟಣಗಳಿಗೂ ಬಂದಿವೆ. ಇವುಗಳ ಪರಿಣಾಮ ಕಿರಾಣಾಗಳ ಮೇಲೆ ಆದೀತೆ? ಇಲ್ಲ. ಆದರೂ ತೀರಾ ಕಡಿಮೆ. ಏಕೆಂದರೆ ಇಲ್ಲಿ ಖರೀದಿಸುವವರೇ ಬೇರೆ, ಕಿರಾಣಾ ಗ್ರಾಹಕರೇ ಬೇರೆ. ತುರ್ತು ಮತ್ತು ಸಣ್ಣ ಖರೀದಿಗಾಗಿ ಯಾರು ಇಲ್ಲಿಯವರೆಗೂ ಹೋಗುವುದಿಲ್ಲ. ಬಡವರು ಮತ್ತು ಮಧ್ಯಮ ವರ್ಗದವರು ನೋಡಲು ಹೋಗಬಹುದಷ್ಟೇ. ಖರೀದಿಸಲಿಕ್ಕಿಲ್ಲ. ಎರಡು ಚಾಕಲೇಟು ಅಥವಾ ನಾಲ್ಕು ಗುಳಿಗೆಗಳನ್ನು ಇಲ್ಲಿ ಖರೀದಿಸಲಾದೀತೆ? ಕಿರಾಣಾಗಳಂತೆ ಇಲ್ಲಿ ಯಾರನ್ನೂ ಗುರುತಿಸಲಿಕ್ಕಿಲ್ಲ. ಒಟ್ಟಿನಲ್ಲಿ ನೆರೆಹೊರೆಯ ಅಂಗಡಿಗಳೇ ಬಹುಜನರಿಗೆ ಆಸರೆ.

ಆನ್‌ಲೈನ್ ರಿಟೇಲ್ ಅತಿ ವೇಗವಾಗಿ ಬೆಳೆಯುತ್ತಿದೆ. ಅದು ಸದ್ಯ ದೇಶದ ಒಟ್ಟು ರಿಟೇಲ್ ವ್ಯವಹಾರದ ಶೇ.7.8ರಷ್ಟಿದ್ದು, ವಾರ್ಷಿಕ ಶೇ.27ರಷ್ಟು ಬೆಳೆಯುತ್ತಿದೆ ಎಂದು ವಾಣಿಜ್ಯ ಮಂತ್ರಾಲಯದ ಅಂಗಸಂಸ್ಥೆ ಅಂದಾಜಿಸಿದೆ. 2030ರ ಹೊತ್ತಿಗೆ ಒಟ್ಟು ರಿಟೇಲ್ ವ್ಯವಹಾರದ ಶೇ.32ರಷ್ಟಾದೀತೆಂದೂ ಅದು ಅಂದಾಜಿಸಿದೆ. ಆಗಲೂ ಕಿರಾಣಾಗಳು ಭಯಪಡಬೇಕಾಗಿಲ್ಲ. ಆರ್ಥಿಕ ಅಭಿವೃದ್ಧಿಯ ಹೆಚ್ಚುವರಿ ಅನುಕೂಲತೆಯನ್ನು ಕಿರಾಣಾಗಳು ಇವರೊಡನೆ ಹಂಚಿಕೊಳ್ಳುತ್ತವೆ. ಅದರ ಭಾಗ ಅವರಿಗಿದ್ದೇ ಇದೆ. ಕೇಂದ್ರ ಮಂತ್ರಿ ಪಿಯೂಷ್ ಗೋಯಲ್‌ರವರ ಆತಂಕಕ್ಕೆ ಕಾರಣವಿಲ್ಲವೆನ್ನುವುದು ಈ ವಲಯದ ತಜ್ಞರ ಅಭಿಪ್ರಾಯ.

ಇ-ಕಾಮರ್ಸ್ ಕಂಪೆನಿಗಳ ಡಿಸೌಂಟ್‌ಗಳು ಸಾಚಾ ಎಂಬುದನ್ನೂ ಅದರಿಂದ ಮಾರುವವರು ಮತ್ತು ಕೊಳ್ಳುವವರು ಇಬ್ಬರಿಗೂ ಲಾಭವಾಗುತ್ತದೆಯೇ ಎಂಬುದನ್ನೂ ತಿಳಿಯುವುದು ಸರ್ಕಾರದ ಕರ್ತವ್ಯ. ಇವುಗಳು ವಿವಿಧ ಸೇವೆಗಳನ್ನು ಒಪ್ಪಬಹುದಾದರೂ ಕಿರಾಣಾಗಳ ವೈಯಕ್ತಿಕ ಸಂಬಂಧದ ಸೇವೆಗಳನ್ನು ಈ ಕಂಪೆನಿಗಳು ಕೊಡಲಾರವು. ಒಂದು ಮಾತು: ಆರ್ಥಿಕ ಬೆಳವಣಿಗೆ ಮತ್ತು ಜನಸಂಖ್ಯಾ ಬೆಳವಣಿಗೆಗಳಿಂದ

ನಮ್ಮ ರಿಟೇಲ್ ವ್ಯವಹಾರದ ಗಾತ್ರ ತೀವ್ರವಾಗಿ ಬೆಳೆಯುತ್ತಿದೆ. ಇ-ಕಾಮರ್ಸ್ ನೊಡನೆ ಹೊಸ ವ್ಯವಸ್ಥೆಗಳು ಬಂದರೂ ಅವುಗಳನ್ನೂ ಪೋಷಿಸುವ ಶಕ್ತಿ ಅದಕ್ಕಿದೆ.

Tags: