Mysore
24
light intensity drizzle

Social Media

ಗುರುವಾರ, 12 ಡಿಸೆಂಬರ್ 2024
Light
Dark

ಬಿಲ್ಕಿಸ್ ತೀರ್ಪು-ಕಲ್ಲಿನಲ್ಲಿ ಕೆತ್ತಿಡಬೇಕಾದ ಸತ್ಯ ನ್ಯಾಯ ಪ್ರೀತಿ

ಡಿ. ಉಮಾಪತಿ

ಶಾಸಕಾಂಗ, ಕಾರ್ಯಾಂಗ ಹಾಗೂ ಪತ್ರಿಕಾಂಗಗಳು ಅವನತಿ ಹೊಂದಿರುವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ನಿರ್ವೀಯ್ರಗೊಳಿಸಿರುವ ಕಾಲವಿದು. ಕಟ್ಟಕಡೆಯ ಆಸರೆ ಅನಿಸಿದ್ದ ನ್ಯಾಯಾಂಗ ಖುದ್ದು ಜನತಾ ಜನಾರ್ದನನ ಕಟಕಟೆಯಲ್ಲಿ ನಿಲ್ಲತೊಡಗಿದೆ.

ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಮತ್ತು ಹತ್ಯೆಗಳ ನಡೆಸಿದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿಕೆಯನ್ನು ಸುಪ್ರೀಂ ಕೋರ್ಟು ರದ್ದು ಮಾಡಿದೆ. ಎರಡು ವಾರಗಳ ಒಳಗಾಗಿ ಪುನಃ ಜೈಲು ಸೇರಬೇಕೆಂದು ಅಪರಾಧಿಗಳಿಗೆ ನಿರ್ದೇಶನ ನೀಡಿರುವ ಈ ತೀರ್ಪು ದೇಶದ ಆತ್ಮಸಾಕ್ಷಿಯ ಎದೆಬಡಿತ ಇನ್ನೂ ಇಡಿಯಾಗಿ ನಿಂತು ಹೋಗಿಲ್ಲ ಎಂಬ ಚೇತೋಹಾರಿ ಸಂದೇಶ ರವಾನಿಸಿದೆ.

‘ಮಹಿಳೆಯೊಬ್ಬಳನ್ನು ಸಮಾಜವು ಎಷ್ಟೇ ಮೇಲ್ಮಟ್ಟದಲ್ಲಿ ಅಥವಾ ಕೆಳಮಟ್ಟದಲ್ಲಿ ಇಟ್ಟಿದ್ದರೂ, ಆಕೆಯ ನಂಬಿಕೆ ಯಾವುದೇ ಇದ್ದರೂ, ಆಕೆ ಯಾವುದೇ ಮತಕ್ಕೆ ಸೇರಿದ್ದರೂ ಆಕೆ ಗೌರವಕ್ಕೆ ಅರ್ಹಳು’ ಎಂಬ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ನ್ಯಾಯಪೀಠದ ತೀರ್ಪಿನ ನುಡಿಗಳು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಸಾಂವಿಧಾನಿಕ ಆಶಯದ ಅನುರಣನ. ಎಲ್ಲಿ ಹೆಣ್ಣನ್ನು ಗೌರವಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಗೊಳ್ಳುತ್ತಾರೆ ಎನ್ನುವ ಜನ ನುಡಿದಂತೆ ನಡೆಯಬೇಕು ಎಂಬುದನ್ನು ನೆನಪಿಸುತ್ತವೆ.

ಕಡುದ್ವೇಷ ಮತ್ತು ದುಷ್ಟ ಧರ್ಮಾಂಧತೆಯ ಕತ್ತಲಯುಗದಲ್ಲಿ ಬೆಳಕಿನ ಕಿರಣ ಈ ನ್ಯಾಯದಾನ. ಈ ತೀರ್ಪಿನಲ್ಲಿ ಅಡಗಿರುವ ಮತ್ತು ಅಡಗಿಸಿ ಅದುಮಿ ಇಡಲಾಗುತ್ತಿರುವ ಅತಿ ಮಹತ್ವದ ಮತ್ತೊಂದು ಅಂಶವಿದೆ. ಸುಪ್ರೀಂ ಕೋರ್ಟಿನ ಆದೇಶವನ್ನು ಕಾನೂನಿನ ಉಲ್ಲಂಘನೆಗೆ ದುರುಪಯೋಗ ಮಾಡಿಕೊಂಡಿರುವ ಉತ್ಕೃಷ್ಟ ಉದಾಹರಣೆಯಿದು ಎಂದು ಗುಜರಾತ್ ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸಲಾಗಿದೆ. ಈ ಕ್ಷಮಾದಾನಕ್ಕೆ ಸಂಬಂಧಿಸಿದ ಹಲವು ವಾಸ್ತವಾಂಶಗಳನ್ನು ತನ್ನಿಂದ ಮುಚ್ಚಿಟ್ಟು ಮೋಸ ಎಸಗಲಾಗಿದೆ ಎಂದು ಗುಜರಾತ್ ಮತ್ತು ಕೇಂದ್ರ ಸರ್ಕಾರಗಳೆರಡರ ಮೇಲೂ ನಿಷ್ಠುರ ನುಡಿಗಳ ನ್ಯಾಯದಂಡ ಬೀಸಿದೆ. ಈ ಕ್ಷಮಾದಾನದ ಹಿಂದಿದ್ದುದು ಕೇವಲ ಗುಜರಾತ್ ಸರ್ಕಾರವಲ್ಲ, ಮೋದಿ-ಶಾ ಅವರ ಕೇಂದ್ರ ಸರ್ಕಾರದ ಪಾತ್ರವೂ ಇತ್ತು ಎಂಬುದನ್ನು ಮರೆಯುವಂತಿಲ್ಲ.

ದೇಶದ ಅತ್ಯುನ್ನತ ನ್ಯಾಯಾಲಯ ಗುಜರಾತ್ ಮತ್ತು ಕೇಂದ್ರದ ಮೇಲೆ ಮಾಡಿರುವ ಘನಗಂಭೀರ ನುಡಿದಂಡನೆಯಿದು. ಲಾಲ್ ಬಹಾದ್ದೂರ್ ಶಾಸ್ತ್ರಿಯವರಂತಹ ಸೂಕ್ಷ್ಮಸಂವೇದನೆಯ ಸರ್ಕಾರಗಳಿದ್ದಿದ್ದರೆ ರಾಜೀನಾಮೆ ನೀಡುತ್ತಿದ್ದವು. ಅಂತಹ ಬರೆ ಎಳೆದು ಮೈಮನಗಳ ಮೇಲೆ ಬೊಬ್ಬೆ ಏಳಿಸಿ ಗಾಯಗೊಳಿಸುವ ತೀವ್ರತರ ವಾಕ್ ಪ್ರಹಾರ. ಆದರೆ ಪ್ರಸಕ್ತ ರಾಜಕೀಯ ಬಲು ದಪ್ಪಚರ್ಮದ ಮೊಂಡುಯುಗ, ಗರ್ಭಿಣಿ ಬಿಲಿಸ್ ಮತ್ತು ಆಕೆಯ ಕುಟುಂಬದ ಇತರೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿ, ಏಳು ಮಂದಿಯನ್ನು ಕೊಂದು ಹಾಕಿದ್ದ ಪ್ರಕರಣವನ್ನು ಸಿಬಿಐ ತನಿಖೆ ಮಾಡಿತ್ತು. ಈ ಹನ್ನೊಂದು ಮಂದಿ ಅಪರಾಧಿಗಳನ್ನು ಶಿಕ್ಷೆಯ ಅವಧಿ ಪೂರ್ಣಗೊಳಿಸುವ ಮುನ್ನವೇ ಬಿಡುಗಡೆ ಮಾಡುವ ಕುರಿತು 2019ರಲ್ಲೇ ಸಿಬಿಐ ಅಭಿಪ್ರಾಯ ಕೇಳಲಾಗಿತ್ತು. ಇಂತಹ ಬಿಡುಗಡೆಗೆ ಅವಕಾಶವೇ ಇಲ್ಲವೆಂದು ಸಿಬಿಐ ತನ್ನ ಅನಿಸಿಕೆಯನ್ನು ತಿಳಿಸಿತ್ತು. ಈ ಸಿಬಿಐ ಮೋದಿ-ಶಾ ಕಾಲದ ಸಿಬಿಐ ಎಂಬುದು ಇಲ್ಲಿ ಗಮನಾರ್ಹ. ‘ಕಾನೂನಿನ ಆಡಳಿತದ ಅರ್ಥ ಕೆಲ ಅದೃಷ್ಟವಂತರಿಗೆ ಮಾತ್ರವೇ ರಕ್ಷಣೆ ಎಂದು ಅಲ್ಲ, ಕಾನೂನನ್ನು ಮುರಿದು ಗಳಿಸಿಕೊಳ್ಳುವ ವ್ಯಕ್ತಿಗತ ಸ್ವಾತಂತ್ರ್ಯವನ್ನು ರಕ್ಷಿಸಲು ಬರುವುದಿಲ್ಲ. ಯಾವುದೇ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯ ಉಳಿದು ಬೆಳೆಯಬೇಕಿದ್ದರೆ ಕಾನೂನಿನ ಆಡಳಿತ ನಿರ್ಣಾಯಕ.

ಕಾನೂನಿನ ಆಡಳಿತದ ಕುರಿತು ಕಳಕಳಿ ಹೊಂದಿರುವವರು, ಅದು ಎಬ್ಬಿಸಬಹುದಾದ ತರಂಗಗಳ ಕುರಿತು ತಲೆ ಕೆಡಿಸಿಕೊಳ್ಳಬಾರದು. ತಮ್ಮ ಗುರಿ ಸಾಧನೆಗೆ ಅನುಕೂಲ ಎನಿಸಿದರೆ ಇತರರ ಹತ್ಯೆಗೂ ಹೇಸದವರಿರುತ್ತಾರೆ. ಅಂತಹವರಿಗೆ ಕೇಸಿನ ಭಯ ಹುಟ್ಟಿಸಿ, ಅವರ ಕುಕೃತ್ಯಗಳಿಗೆ ತಡೆಯೊಡ್ಡುವುದು ಕಾನೂನಿನ ಆಡಳಿತವೇ.

ನ್ಯಾಯಾಲಯಗಳು ನ್ಯಾಯದಾನ ಮಾಡಬೇಕೇ ವಿನಾ ನ್ಯಾಯವನ್ನು ತ್ಯಾಗ ಮಾಡುವಂತಿಲ್ಲ. ಭಾರತದ ನ್ಯಾಯಾಲಯಗಳ ಬಲ ಮತ್ತು ಅಧಿಕಾರದ ಮೂಲ ಅವುಗಳು ನ್ಯಾಯದಾನ ಮಾಡುತ್ತವೆಂಬುದೇ ಆಗಿದೆ. ನ್ಯಾಯದಾನ ಅವುಗಳ ಜೀವಿತದ ಗುರಿಯಾಗಿರಬೇಕು. ಕಾನೂನಿನ ಆಡಳಿತವನ್ನು ಜಾರಿಗೊಳಿಸುವಾಗ ಸಹಾನುಭೂತಿ ಇಲ್ಲವೇ ಕರುಣೆಗೆ ಅವಕಾಶವೇ ಇಲ್ಲ. ನ್ಯಾಯಾಲಯಗಳು ನಿರ್ಭಾವುಕ, ವಸ್ತುನಿಷ್ಠ ಹಾಗೂ ವಿಶ್ಲೇಷಣಾತ್ಮಕ ಆಗಿರಬೇಕು. ಕಾನೂನಿನ ಆಡಳಿತದ ಚೌಕಟ್ಟಿಗೆ ಒಳಪಡುವವರೆಲ್ಲರೂ ಈ ವ್ಯವಸ್ಥೆಯನ್ನು ಒಪ್ಪಿಕೊಳ್ಳಬೇಕು. ನೀಡಲಾಗುವ ಆಣತಿ ಆದೇಶಗಳಿಗೆ ವಿಧೇಯರಾಗಿರಬೇಕು. ಇವುಗಳನ್ನು ಪಾಲಿಸಲು ವಿಫಲರಾದವರನ್ನು ನ್ಯಾಯದಂಡವು ಶಿಕ್ಷಿಸಬೇಕು’ ಎಂಬ ವಿಭಾಗೀಯ ನ್ಯಾಯಪೀಠದ ತೀರ್ಪಿನ ಮಾತುಗಳು ಕಲ್ಲಿನಲ್ಲಿ ಕೆತ್ತಿಡಬೇಕಿರುವ ಸತ್ಯ ನ್ಯಾಯ ಪ್ರೀತಿಗಳು. ಹಬ್ಬ ಉತ್ಸವಗಳ ಹಿನ್ನೆಲೆಯಲ್ಲಿ ಕೇಸುಗಳ ವ್ಯಕ್ತಿಶಃ ವಾಸ್ತವಾಂಶಗಳು ಮತ್ತು ಸಂದರ್ಭ ಸನ್ನಿವೇಶಗಳನ್ನು ಕಡೆಗಣಿಸಿ ಸಾಮೂಹಿಕ ಕ್ಷಮಾದಾನ ಮಾಡುವ ಇಲ್ಲವೇ ಶಿಕ್ಷೆಯನ್ನು ತಗ್ಗಿಸುವ ಸರ್ಕಾರಗಳ ಪ್ರವೃತ್ತಿಯು ಕಾನೂನಿನ ಪ್ರಕಾರ ಕೆಟ್ಟದ್ದು. ಪ್ರತಿಯೊಂದು ಬಿಡುಗಡೆಯನ್ನೂ ಆಯಾ ಪ್ರಕರಣದ ಪ್ರಕಾರವೇ ಪರಿಗಣಿಸಬೇಕು (ಬಿಲಿಸ್ ಬಾನೊ ಪ್ರಕರಣದ ಹನ್ನೊಂದು ಮಂದಿ ಅಪರಾಧಿಗಳಿಗೆ ಗುಜರಾತ್ ಸರ್ಕಾರ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಶಿಕ್ಷೆಯ ಅವಧಿ ತಗ್ಗಿಸಿ ಮಾಡಿ ಬಿಡುಗಡೆ ಮಾಡಿತ್ತು).

ಕ್ಷಮಾದಾನದ ಅಧಿಕಾರವನ್ನು ಸರ್ಕಾರಗಳು ಮನಸೇಚ್ಛೆ ಬಳಸುವಂತಿಲ್ಲ. ಶಿಕ್ಷೆಯ ಅವಧಿ ತಗ್ಗಿಸುವ ಕ್ರಮವು ಮಾಹಿತಿಪೂರ್ಣವಾಗಿರಬೇಕು ಮತ್ತು ಆಯಾ ಕೇಸಿಗೆ ಸಂಬಂಧಪಟ್ಟವರೆಲ್ಲರ ಪಾಲಿಗೂ ನ್ಯಾಯಯುತ ಅನಿಸಿರಬೇಕು. ಕ್ಷಮಾದಾನ ಕುರಿತು ವಿಚಾರಣೆ ನಡೆಸಿದ ಅಧೀನ ನ್ಯಾಯಾಲಯದ ನ್ಯಾಯಾಧೀಶರ ಅಭಿಪ್ರಾಯವನ್ನು ಕಡ್ಡಾಯವಾಗಿ ಕೇಳಬೇಕು. ಯಾವ ರಾಜ್ಯದಲ್ಲಿ ಅಪರಾಧಿಗೆ ಶಿಕ್ಷೆ ವಿಧಿಸಲಾಗಿರುತ್ತದೆಯೋ, ಆ ರಾಜ್ಯಕ್ಕೆ ಮಾತ್ರವೇ ಕ್ಷಮಾದಾನ ಮಾಡಬೇಕೇ ಬೇಡವೇ ಎಂಬ ವಿವೇಚನಾಧಿಕಾರ ಹೊಂದಿರುತ್ತದೆ. ಜೀವಾವಧಿ ಶಿಕ್ಷೆಯ ಪ್ರಕಾರ 14 ವರ್ಷಗಳ ಸೆರೆವಾಸ ಪೂರ್ಣಗೊಳಿಸಿರುವ ವ್ಯಕ್ತಿಗೆ ಮಾತ್ರವೇ ಕ್ಷಮಾದಾನ ಕೋರುವ ಅರ್ಹತೆ ಇರುತ್ತದೆ’

ಈ ತೀರ್ಪಿನಿಂದ ಬಿಲ್ಕಿಸ್ ಅವರ ಮನಸ್ಸು ಹಗುರವಾಗಿದೆ. ‘ಎದೆಯ ಮೇಲಿನ ಬಂಡೆ ಭಾರವನ್ನು ಕೆಳಗಿಳಿಸಿದಂತಾಗಿದೆ. ನ್ಯಾಯಕ್ಕಾಗಿ ಹೋರಾಟದ ಇಂತಹ ಪಯಣಗಳನ್ನು ಒಬ್ಬೊಂಟಿಯಾಗಿ ಮುಗಿಸುವುದು ಅಸಾಧ್ಯ. ಪ್ರತಿಯೊಂದು ಪ್ರಮುಖ ತಿರುವಿನಲ್ಲಿಯೂ ನನ್ನ ಪತಿ ಮತ್ತು ಮಕ್ಕಳೊಂದಿಗೆ ಈ ದೇಶದ ನೂರಾರು, ಸಾವಿರಾರು ಒಳ್ಳೆಯ ಮನಸ್ಸುಗಳು ನನ್ನ ಕೈ ಹಿಡಿದಿವೆ. ನ್ಯಾಯವೆಂದರೇ ಇದು… ಇದೇ ಆಗಿದೆ’ ಎಂಬ ಆಕೆಯ ಒಡಲಾಳದ ದನಿ ಈ ದೇಶದ ನಿಜದನಿಯೂ ಹೌದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ