Mysore
15
broken clouds

Social Media

ಗುರುವಾರ, 02 ಜನವರಿ 2025
Light
Dark

ಕ್ರೀಡಾ ಕ್ಷೇತ್ರದಲ್ಲಿ ಭಾರತೀಯರ ಅತ್ಯುತ್ತಮ ಸಾಧನೆ

ಈ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಅತ್ಯಂತ ಸ್ಮರಣೀಯ ಕ್ಷಣಗಳು, ರೋಮಾಂಚನಕಾರಿ ಘಟನೆಗಳು, ಗಮನಾರ್ಹ ಸಾಧನೆಗಳು, ಅಚ್ಚರಿಯ ಫಲಿತಾಂಶಗಳು ದಾಖಲಾದವು. ೨೦೨೪ರ ವರ್ಷದ ಆರಂಭದಿಂದ ಕೊನೆಯವರೆಗೂ ಹಲವಾರು ಐತಿಹಾಸಿಕ ಘಟನೆಗಳಿಗೆ ಭಾರತೀಯ ಕ್ರೀಡಾ ಕ್ಷೇತ್ರವು ಸಾಕ್ಷಿಯಾಗಿದೆ. ಕ್ರಿಕೆಟ್ ವಿಶ್ವಕಪ್ ತಂಡದಿಂದ ಹಿಡಿದು ವಿಶ್ವ ಚೆಸ್ ಚಾಂಪಿಯನ್‌ಷಿಪ್, ಪ್ಯಾರಾಲಿಂಪಿಕ್ಸ್ ಸೇರಿದಂತೆ ಇನ್ನು ಹಲವಾರು ಕ್ರೀಡಾ ವಲಯದಲ್ಲಾದ ರೋಮಾಂಚನ ಕಾರಿ ಕ್ಷಣಗಳು, ಐತಿಹಾಸಿಕ ಸಾಧನೆಗಳು ಭಾರತೀಯ ಕ್ರೀಡಾ ಅಭಿಮಾನಿಗಳನ್ನು ಭಾವುಕರಾಗಿಸಿದವು

ಒಲಿಂಪಿಕ್ಸ್‌ನಲ್ಲಿ ಡಬಲ್ ಪದಕ ಗೆದ್ದ ಮನು ಭಾಕರ್: 

ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನ ಶೂಟಿಂಗ್‌ನಲ್ಲಿ ಮನು ಭಾಕರ್ ಎರಡು ಪದಕಗಳನ್ನು ಗೆಲ್ಲುವ ಮೂಲಕ ದಾಖಲೆ ಮಾಡಿದ್ದಾರೆ. ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮನು ಭಾಕರ್ ಅವರು, ೧೦ ಮೀಟರ್ ಏರ್ ಪಿಸ್ತೂಲ್ ಸಿಂಗಲ್ಸ್‌ನಲ್ಲಿ ಮೊದಲ ಕಂಚಿನ ಪದಕ ಪಡೆದರು. ನಂತರ ಡಬಲ್ಸ್‌ನಲ್ಲಿ ಸರಬ್ ಜೋತ್ ಸಿಂಗ್ ಜೊತೆಯಲ್ಲಿ ಮತ್ತೊಂದು ಕಂಚಿನ ಪದಕ ಗೆಲ್ಲುವ ಮೂಲಕ ಶೂಟಿಂಗ್‌ನಲ್ಲಿ ಸಾಧನೆ ಮಾಡಿದ್ದಾರೆ

 ಪ್ಯಾರಾಲಿಂಪಿಕ್: ಶೀತಲ್ ದೇವಿ ಸಾಧನೆ: 

ಪ್ಯಾರಿಸ್‌ನ ಪ್ಯಾರಾಲಿಂಪಿಕ್ಸ್‌ನಲ್ಲಿ ರಾಕೇಶ್ ಕುಮಾರ್ ಜತೆಗೂಡಿ ಮಿಶ್ರ ತಂಡದ ಈವೆಂಟ್‌ನಲ್ಲಿ ಕಂಚಿನ ಪದಕ ಸಾಧನೆ ಮಾಡುವ ಮೂಲಕ ಅಂಗಾಂಗಗಳ ವೈಫಲ್ಯದ ನಡುವೆಯೂ ಐತಿಹಾಸಿಕ ಸಾಧನೆ ಮಾಡಿದ ಏಕೈಕ ಅಂತಾರಾಷ್ಟ್ರೀಯ ಮಹಿಳಾ ಪ್ಯಾರಾ-ಆರ್ಚರ್ ಎಂಬ ಹೆಗ್ಗಳಿಕೆಗೆ ಶೀತಲ್ ದೇವಿ ಪಾತ್ರರಾದರು.

ಚೆಸ್ ಒಲಂಪಿಯಾಡ್‌ನಲ್ಲಿ ಐತಿಹಾಸಿಕ ಚಿನ್ನ: 

೪೫ನೇ ಚೆಸ್ ಒಲಂಪಿಯಾಡ್‌ನಲ್ಲಿ ಪುರುಷರು ಮತ್ತು ಮಹಿಳೆಯರ ತಂಡಗಳು ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿವೆ. ಅರ್ಜುನ್, ಗುಕೇಶ್, ವಿದಿತ್ ಗುಜರಾತಿ, ಪ್ರಜ್ಞಾನಂದ ಪತ್ತು ಪೆಂಟಾಲ ಹರಿಕೃಷ್ಣ ಅವರನ್ನೊಳಗೊಂಡ ಭಾರತದ ಪುರುಷರ ತಂಡವು ೧೦ ಗೆಲುವು ಪಡೆದು ೧ ಮಾತ್ರ ಡ್ರಾ ದಾಖಲಿಸಿತು. ಇನ್ನೊಂದೆಡೆ ಹರಿಕಾ ದ್ರೋಣವಲ್ಲಿ, ದಿವ್ಯಾ ದೇಶಮುಖ್, ತಾನಿಯಾ ಸಚದೇವ್, ವಂತಿಕಾ ಅಗರವಾಲ್ ಹಾಗೂ ವೈಶಾಲಿ ರಮೇಶಬಾಬು ಅವರನ್ನೊಳಗೊಂಡ ಮಹಿಳಾ ತಂಡವು ಸ್ಪರ್ಧೆಯಲ್ಲಿ ೧೯/೨೨ ಅಂಕಗಳೊಂದಿಗೆ ಜಯಗಳಿಸಿತು. ಇದರೊಂದಿಗೆ ಚೀನಾ ಮತ್ತು ಸೋವಿಯತ್ ಒಕ್ಕೂಟದ ನಂತರ ಭಾರತ ಡಬಲ್ ಒಲಂಪಿಯಾಡ್ ಚಿನ್ನ ಗೆದ್ದ ೩ನೇ ರಾಷ್ಟ್ರವಾಯಿತು.

ಬ್ರಿಟನ್‌ನ್ನು ಸೋಲಿಸಿದ ಭಾರತದ ೧೦ ಆಟಗಾರರ ಹಾಕಿ ತಂಡ: 

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡವು ೧೦ ಆಟಗಾರರೊಂದಿಗೆ ಕ್ವಾರ್ಟರ್ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಸೋಲಿಸುವ ಮೂಲಕ ಅಸಾಧಾರಣ ಪ್ರದರ್ಶನವನ್ನು ನೀಡಿತು. ೧೭ನೇ ನಿಮಿಷದಲ್ಲಿ ಅಮಿತ್ ರೋಹಿದಾಸ್ ಅವರಿಗೆ ರೆಡ್ ಕಾರ್ಡ್ ನೀಡಿ ಆಟದಿಂದ ಹೊರಗಿರಿಸಲಾಯಿತು. ಇದನ್ನು ಸವಾಲಾಗಿ ಸ್ವೀಕರಿಸಿದ ಭಾರತದ ಹಾಕಿ ತಂಡವು ಗ್ರೇಟ್ ಬ್ರಿಟನ್ ವಿರುದ್ಧ ೧(೪)-೧(೨) ಸ್ಕೋರ್‌ನಲ್ಲಿ ಜಯಗಳಿಸಿತು.

ಏಷ್ಯನ್ ಮಹಿಳಾ ಟೇಬಲ್ ಟೆನಿಸ್:

ಭಾರತಕ್ಕೆ ಐತಿಹಾಸಿಕ ಪದಕ ಚೀನಾದಲ್ಲಿ ನಡೆದ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್ ಶಿಪ್‌ನಲ್ಲಿ ಭಾರತ ಮಹಿಳಾ ತಂಡವು (೩-೨) ದಕ್ಷಿಣ ಕೊರಿಯಾವನ್ನು ಸೋಲಿಸಿ ಕಂಚಿನ ಪದಕ ಗಳಿಸಿತು. ಆರಂಭಿಕ ಪಂದ್ಯದಲ್ಲಿ ವಿಶ್ವ ಶ್ರೇಯಾಂಕ – ೮ ಶಿನ್ ಯು- ಬಿನ್ ವಿರುದ್ಧ ಭಾರತದ ಅಯ್ದಿಕಾ ಮುಖರ್ಜಿ ಗೆಲುವು ಸಾಧಿಸಿದರು. ಅಂತಿಮವಾಗಿ – ೧೬ ರ ಶ್ರೇಯಾಂಕಿತ ಜಿಯೋನ್ ಜಿ-ಹೀ ಅವರನ್ನು ಮನಿಕಾ ಬಾತ್ರಾ ಸೋಲಿಸಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಭಾರತದ ಮಹಿಳಾ ತಂಡವು ಇತಿಹಾಸ ನಿರ್ಮಿಸಿತು.

ಧರಂಬೀರ್ ನೈನ್ ಚಿನ್ನದ ಪದಕ:

೨೦೨೪ರ ಪ್ಯಾರಿಸ್ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಧರಂಬೀರ್ ನೈನ್ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಪುರುಷರ ಕ್ಲಬ್ ಥ್ರೋ ಈ ೫೧ ಈವೆಂಟ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ೫ನೇ ಚಿನ್ನದ ಪದಕವಾಗಿ ಉಡುಗೊರೆ ನೀಡಿದರು. ಈ ಈವೆಂಟ್‌ನಲ್ಲಿ ೩೪.೯೨ ಮೀಟರ್ ಎಸೆಯುವ ಮೂಲಕ ಏಷ್ಯನ್ ದಾಖಲೆಯನ್ನು ನಿರ್ಮಿಸಿದರು

ದಾಖಲೆ ಬರೆದ ಕೊನೇರು ಹಂಪಿ: 

ಭಾರತದ ಗ್ರ್ಯಾಂಡ್ ಮಾಸ್ಟರ್ ಕೊನೇರು ಹಂಪಿ ಡಿ.೨೯ರಂದು ನ್ಯೂಯಾರ್ಕ್‌ನಲ್ಲಿ ನಡೆದ ಮಹಿಳಾ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್-೨೦೨೪ ಫೈನಲ್‌ನಲ್ಲಿ ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಸೋಲಿಸಿ ಚೆಸ್ ಇತಿಹಾಸ ಪುಟಗಳಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಚೀನಾದ ಜು ವೆನ್ಜುನ್ ಅವರ ನಂತರ ೩೭ ವರ್ಷದ ಹಂಪಿ, ಮಹಿಳೆಯ ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಈ ಪ್ರಶಸ್ತಿ ಜಯಿಸಿದ ಎರಡನೇ ಆಟಗಾರ್ತಿಯಾಗಿದ್ದಾರೆ. ಗೆಲುವಿನೊಂದಿಗೆ ವಿಶೇಷ ದಾಖಲೆಯನ್ನೂ ಬರೆದಿದ್ದಾರೆ. ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ೧೧ ಅಂಕಗಳ ಪೈಕಿ ಕೊನೇರು ೮.೫ ಅಂಕ ಗಳಿಸುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಡಿ.೨೯ರಂದು ನ್ಯೂಯಾರ್ಕ್‌ನಲ್ಲಿ ನಡೆದ ಮಹಿಳಾ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್-೨೦೨೪ ಫೈನಲ್‌ನಲ್ಲಿ ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಸೋಲಿಸಿದ ಹಂಪಿ ಅವರು ಅದ್ಭುತ ಸಾಧನೆಯೊಂದಿಗೆ ಚೆಸ್ ಇತಿಹಾಸ ಪುಟಗಳಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಐದು ವರ್ಷಗಳ ಬಳಿಕ ಭಾರತದ ನಂ.೧ ಆಟಗಾರ್ತಿ ೨ನೇ ಪ್ರಶಸ್ತಿ ಗೆದ್ದು ಬೀಗಿದ್ದಾರೆ.

ಬ್ಯಾಡ್ಮಿಂಟನ್ ಮಹಿಳಾ ತಂಡದ ಚಿನ್ನದ ಪದಕ ಸಾಧನೆ: 

ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ತಂಡದ ಆಟಗಾರ್ತಿಯರು ಚಿನ್ನದ ಪದಕವನ್ನು ಪಡೆಯುವ ಮೂಲಕ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ. ಭಾರತವು ಗುಂಪು (ಲೀಗ್) ಹಂತದಲ್ಲಿ ಚೀನಾ ತಂಡವನ್ನು ಸೋಲಿಸಿತು. ಪಿವಿ ಸಿಂಧು, ಟ್ರೀಸಾ ಜಾಲಿ ಹಾಗೂ ಗಾಯಿತ್ರಿ ಗೋಪಿಚಂದ್ ಮತ್ತು ಅನ್ಮೋಲ್ ಖಾರ್ಬ್ ಅವರಿದ್ದ ತಂಡ ಚೀನಾ ತಂಡ ವನ್ನು ಸೋಲಿಸಿ ಗುಂಪು ಹಂತದಲ್ಲಿ ಅಗ್ರಸ್ಥಾನಕ್ಕೇರಿತು. ಕ್ವಾರ್ಟರ್ ಫೈನಲ್‌ನಲ್ಲಿ ಹಾಂಕಾಂಗ್ (೩-೦) ತಂಡವನ್ನು ಸೋಲಿಸಿ ಸೆಮಿಫೈನಲ್ ತಲುಪಿದರು. ನಂತರ ಸೆಮಿಫೈನಲ್‌ನಲ್ಲಿ ಜಪಾನ್‌ನ ವಿಶ್ವ ಶ್ರೇಯಾಂಕ – ೨೯ ರ ವಿರುದ್ಧ ಗೆದ್ದು ಫೈನಲ್ ತಲುಪಿದರು. ಥೈಲಾಂಡ್‌ನ ವಿಶ್ವ ಶ್ರೇಯಾಂಕ – ೪೫ರ ವಿರುದ್ಧ ಫೈನಲ್‌ನಲ್ಲಿ ಗೆಲ್ಲುವ ಮೂಲಕ ಭಾರತವು ಚಾಂಪಿಯನ್‌ಶಿಪ್ ಕಿರೀಟ ಧರಿಸಿತು.

ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಆದ ಡಿ.ಗುಕೇಶ್: 

ತಮ್ಮ ೧೮ನೇ ವಯಸ್ಸಿನಲ್ಲಿಯೇ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಡಿ.ಗುಕೇಶ್ ಚೆಸ್ ರಂಗದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಚೀನಾದ ಡಿಂಗ್ ಲಿರೆನ್ ವಿರುದ್ಧ ೭.೫-೬.೫ ಅಂಕಗಳೊಂದಿಗೆ ಗೆಲ್ಲುವ ಮೂಲಕ ಪ್ರತಿಷ್ಠಿತ ಐತಿಹಾಸಿಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಡಿ. ಗುಕೇಶ್ ಈ ಪ್ರಶಸ್ತಿಯನ್ನು ಗೆದ್ದ ೨ನೇ ಭಾರತೀಯ ಹಾಗೂ ವಿಶ್ವ ಚಾಂಪಿಯನ್ ಕಿರೀಟ ಅಲಂಕರಿಸಿದ ೧೮ನೇ ವ್ಯಕ್ತಿಯಾಗಿದ್ದಾರೆ.

ಎರಡನೇ ಬಾರಿಗೆ ಟಿ-೨೦ ಚಾಂಪಿಯನ್ಸ್ ಆದ ಭಾರತ:

ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ-೨೦ ವರ್ಲ್ಡ್ ಕಪ್ ೨೦೨೪ರಲ್ಲಿ ಭಾರತ ತಂಡವು ವಿಶ್ವ ಚಾಂಪಿಯನ್ ಆಗುವ ಮೂಲಕ ೧೧ ವರ್ಷಗಳ ನಂತರ ಐಸಿಸಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದೆ.

Tags: