Mysore
26
overcast clouds

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಬಾಬೂಜಿ ದೇಶದ ಹಸಿವು ನೀಗಿಸಿದ ಅಪ್ಪಟ ರಾಷ್ಟ್ರೀಯವಾದಿ

ಇಂದು ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಜಯಂತಿ
• ದಾಸನೂರು ಕೂಸಣ್ಣ, ಸಮುದಾಯ ಚಿಂತಕರು

ಬಿಹಾರ ವಿಹಾರಗಳ ನಾಡಾದರೂ ಅಲ್ಲಿಯೂ ಅಸ್ಪೃಶ್ಯತೆ ವಿಕೃತವಾಗಿ ನರ್ತಿಸುತ್ತಿತ್ತು. ಅದರ ನೋವುಂಡವರು ಡಾ.ಬಾಬು ಜಗಜೀವನ ರಾಮ್ ಅವರು. ಶೋಭಿರಾಮ ಮತ್ತು ವಸಂತದೇವಿ ದಂಪತಿ ಪುತ್ರ ಡಾ. ಬಾಬು ಜಗಜೀವನ ರಾಮ್ ಏಪ್ರಿಲ್ 5, 1908 ರಂದು ಚಂದ್ವಾ ಗ್ರಾಮದಲ್ಲಿ ಜನಿಸಿದರು. ವಿದ್ಯಾಭ್ಯಾಸದ ವೇಳೆ ಅನೇಕ ಅವಮಾನ, ಮೂದಲಿಕೆ ಮತ್ತು ನಿಂದನೆಗಳನ್ನು ನುಂಗಿ, ಕೊಲ್ಕತ್ತಾದಲ್ಲಿ ಉನ್ನತ ವ್ಯಾಸಂಗ ಮಾಡಿ ಕಮ್ಯೂನಿಸ್ಟರ ಪರಿಚಯವಿದ್ದರೂ ನಡೆನುಡಿಯಲ್ಲಿ ಕಾಂಗ್ರೆಸ್ಸಿಗರಾದವರು.

ಬಾಬೂಜಿ ಅವರು ಹುಟ್ಟಿನಿಂದ ಚಮ್ಮಾರ ಅನ್ನುವುದು ಜಾತಿ ಮೂಸೆಯ ಸಾಮಾಜಿಕ ತೀರ್ಮಾನಗಳು. ಆದರೆ ಅವರು ಹುಟ್ಟಿದ ಜಾತಿ ಸಂಕೋಲೆಗಳಿಂದಾಚೆ ನಿಂತು ದೇಶದ ಸಮಸ್ತ ಸಮಸ್ಯೆಗಳಿಗೆ ದನಿಯಾದ ಮೇರು ಸಂಸದೀಯ ಪಟು. ಸ್ವತಂತ್ರ ಚಳವಳಿಯಲ್ಲಿ ತಮ್ಮ ಛಾಪು ಮೂಡಿಸಿದವರು. ಅದೇ ಕಾಂಗ್ರೆಸ್ಸಿನ ಅಧ್ಯಕ್ಷರಾದವರು. ಬಿಹಾರದಿಂದ ಪುಟದು ಹೊಸದಿಲ್ಲಿಯ ಸಂಸತ್ತಿನಲ್ಲಿ ಸರಿಸಮಾರು 4 ದಶಕಗಳ ಕಾಲ ವಿವಿಧ ಖಾತೆಯ ಕೇಂದ್ರ ಮಂತ್ರಿಗಳಾಗಿ ಮತ್ತು ಉಪ ಪ್ರಧಾನಿಗಳಾಗಿ ತಮ್ಮ ಸಂಸದೀಯ ಘನತೆಯನ್ನು ಮೆರೆದಿರುವ ಅಪರೂಪದ ರಾಜಕಾರಣಿ.

ಡಾ.ಅಂಬೇಡ್ಕರ್ ವೈಸ್‌ರಾಯ್ ಮಂತ್ರಿ ಪರಿಷತ್ತಿನಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಹಾಕಿದ್ದ ಅಸ್ತಿಭಾರದ ಮೇಲೆ, ಮಧ್ಯಂತರ ಸರ್ಕಾರ (1945) ಹಾಗೂ ಸ್ವತಂತ್ರ ಸರ್ಕಾರದಲ್ಲಿ ಕಾರ್ಮಿಕಸಚಿವರಾಗಿದ್ದರು (1950), ಕಾರ್ಮಿಕ ಇಲಾಖೆಯನ್ನು ಸದೃಢ, ರಚನಾತ್ಮಕವಾಗಿ ಸಂಘಟಿಸಿ ಕಾರ್ಮಿಕರಿಗೆ ವಿವಿಧ ಸೌಲಭ್ಯ, ಕಾನೂನು ಕಟ್ಟಳೆಗಳನ್ನು ಪರಿಚಯಿಸುವಲ್ಲಿ ಮೇಲುಗೈ ಸಾಧಿಸಿದ ಧೀಮಂತ ಆಡಳಿತಗಾರರು. ದೇಶದಲ್ಲಿ ಅಂದು ಕಾರ್ಮಿಕರಿಗಾಗಿ ಶಾಶ್ವತ ವಿಮಾಯೋಜನೆ ಜಾರಿಗೊಳಿಸಿ, ಇಂದು ಕೋಟ್ಯಂತರ ಜನರ ಬಾಳಿಗೆ ಬೆಳಕಾದವರು. ಈ ನಿಟ್ಟಿನಲ್ಲಿ ಕಾರ್ಮಿಕ ಕಾಯಿದೆಗಳ ಶಿಲ್ಪಿಯಾದರು.

ಸಂಪರ್ಕ ಖಾತೆ ಸಚಿವರಾಗಿದ್ದಾಗ (1952) ಓಟದ ಅಂಚೆ ವ್ಯವಸ್ಥೆ ಸುಧಾರಣೆ ಮಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಅಧಿಕ ಅಂಚೆ ಕಚೇರಿಗಳನ್ನು ತೆರೆದು ಅವುಗಳ ಮೂಲಕ ಗ್ರಾಮೀಣ ರಾಷ್ಟ್ರೀಯ ಉಳಿತಾಯ ಯೋಜನೆಯನ್ನು ಪರಿಚಯಿಸಿದರು.

ವಿಮಾನಸಾರಿಗೆಯನ್ನು ರಾಷ್ಟ್ರೀಕರಣ ಮಾಡಿದ ಚತುರರು. ಸಾರ್ವಜನಿಕ ರೈಲ್ವೆ ಸಂಚಾರ ವ್ಯವಸ್ಥೆಯನ್ನು ಸುಧಾರಿಸಿ, ಅನೇಕ ಆವಿಷ್ಠಾರಗಳನ್ನು ಪರಿಚಯಿಸಿ, ತಾರತಮ್ಯರಹಿತ ಪ್ರಯಾಣಕ್ಕೆ ಇಂಬು ನೀಡಿದವರು. ಪ್ರಯಾಣಿಕರಿಗಾಗಿ ಅನೇಕ ಸೌಲಭ್ಯಗಳನ್ನು ದೊರಕಿಸಿದವರು. ಅವರ ಶ್ರಮದಿಂದ ರೈಲ್ವೆ ಇಂದು ರಾಷ್ಟ್ರೀಯ ಆದಾಯಕ್ಕೆ ಅಪಾರ ಕೊಡುಗೆ ನೀಡುತ್ತಿದೆ. ಉದ್ಯೋಗ, ವ್ಯಾಪಾರ ಉತ್ತೇಜಿಸಿದ ಸೂಕ್ಷ್ಮ ಆಡಳಿತಗಾರರು.

ಸ್ವಾತಂತ್ರ್ಯ ಪಡೆದಾಗ ದೇಶದ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆಗಳಿರಲಿಲ್ಲ. ವಿದೇಶಿ ಮಾರುಕಟ್ಟೆಗಳಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವಂತಹ ವಿಷಮ ಆರ್ಥಿಕತೆ ನಮ್ಮದಾಗಿತ್ತು. ಈ ಕಾರಣಗಳಿಗಾಗಿ ಹೆಚ್ಚಿನ ಸಂದಾಯ ತೆರಬೇಕಾಗಿತ್ತು. ಕೃಷಿ ಮತ್ತು ಆಹಾರ ಮಂತ್ರಿ ಗಳಾಗಿ ದೇಶದ ಕೃಷಿಗೆ ಆಧುನಿಕ ಸ್ಪರ್ಶ ನೀಡಿ, ಸುಧಾರಿಸಿದ ಅಧಿಕ ಇಳುವರಿ ಬೀಜಗಳ ಸಂಶೋಧನೆಗೆ ಭಾರತೀಯ ವಿಜ್ಞಾನಿ ಗಳನ್ನು ಅಣಿಗೊಳಿಸಿದರು. ಅದರಲ್ಲಿ ಯಶಸ್ವಿಯಾ ದರು. ನಿಧಾನವಾಗಿ ಭತ್ತ ಮತ್ತು ಗೋಧಿ ಬೆಳೆಗಳಲ್ಲಿ ಗಂಭೀರ ಸಾಧನೆ ಕಂಡರು.

ಜಗಜೀವನ ರಾಮ್ ಅವರು ದೇಶ ಹೈನುಗಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಕಾರಣವಾದವರು. ಹೊಸದಿಲ್ಲಿ ನಿವಾಸಿಗಳಿಗಾಗಿ ದೇಶದಲ್ಲೇ ಪ್ರಥಮವಾಗಿ ಮದರ್ ಡೇರಿ ಆರಂಭಿಸಿ ಮೆಚ್ಚುಗೆ ಪಡೆದರು. ಬಾಬೂಜಿಯವರು ಎರಡನೆಯ ಬಾರಿಗೆ ಕೃಷಿ ಮಂತ್ರಿಗಳಾಗುವ ವೇಳೆಗೆ ಭಾರತ ಆಹಾರ ಸ್ವಾಲಂಬನೆ ಸಾಧಿಸಿ ಹಸಿರು ಕ್ರಾಂತಿಯನ್ನು ಆಹಾರ ಸ್ವಾಲಂಬನೆ ಸಾಧಿಸಿ ಹಸಿರು ಕ್ರಾಂತಿಯನ್ನು ದಾಖಲಿಸಿತ್ತು. ಅಂದು ವಿದೇಶಿ ವಿನಿಮಯದಲ್ಲಿ ಆಹಾರ ಪದಾರ್ಥಗಳ ಖರೀದಿಗೆ ಸುರಿಯುತ್ತಿದ್ದ ದೇಶೀಯ ಆದಾಯ ಎಂದು ಬೇರೆ ಕ್ಷೇತ್ರಗಳಿಗೆ ಬಳಕೆ ಆಗುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಆರ್ಥಿಕತೆಗೆ ಒಂದು ಬಲಿಷ್ಠ ಬುನಾದಿ ಹಾಕಿದ ರಾಷ್ಟ್ರೀಯವಾದಿ. ಅವರ ಸಾಧನೆಗೆ ಅನ್ವರ್ಥವಾಗಿ “ಹಸಿರು ಕ್ರಾಂತಿ ಹರಿಕಾರ’ ಎಂದು ಜನಮಾನಸದಲ್ಲಿ ಪರಿಚಿತರಾದವರು.

ಸ್ವತಂತ್ರ ಭಾರತಕ್ಕೆ ದೇಶೀಯ ಸಂವಿಧಾನ ಅಳವಡಿಸುವ ಪ್ರಕ್ರಿಯೆ ಆರಂಭವಾಯಿತು, ಆಗ ಅಂಬೇಡ್ಕರ್ ಜತೆ ಬಾಬೂಜಿ ರಾಜ್ಯಾಂಗ ಸಭೆ ಪ್ರವೇಶಿಸಿದ್ದರು. ಬಾಬೂಜಿ 5 ಸಂವಿಧಾನ ಸ್ಥಾಯಿ ಸಮಿತಿಗಳಲ್ಲಿ ಸದಸ್ಯರಾಗಿದ್ದರು. ಹೆಚ್ಚು ಕಡಿಮೆ ಅಂಬೇಡ್ಕರರ ಸಮೀಪವರ್ತಿಯಾಗಿ ಶಾಸಕಾಂಗ ಸಭೆಯಲ್ಲಿ ದುಡಿದವರು. ಈ ಸಭೆಯ ಮುಂದೆ ಮೀಸಲಾತಿ ಸೌಲಭ್ಯವನ್ನು 40 ವರುಷಗಳ ಅವಧಿಗೆ ವಿಸ್ತರಿಸಲು ಬೇಡಿಕೆ ಮಂಡಿಸಿದಾಗ, ಅಂಬೇಡರ್‌ರ ಸೂಕ್ಷ್ಮತೆ ಅರಿತು ಹತ್ತು ವರುಷಕ್ಕೊಮ್ಮೆ ಪುನರ್ ಅಂಗೀಕರಿಸುವ ವ್ಯವಸ್ಥೆಗೆ ಸಮ್ಮತಿಸಿದ್ದರು. ಅಂಬೇಡ್ಕರ್ ಅವರಿಲ್ಲದ ಆಡಳಿತಾಂಗದಲ್ಲಿ ಸುದೀರ್ಘ ಸೇವೆಗಳ ಮೂಲಕ ಓರ್ವ ಪ್ರಜಾಪ್ರಭುತ್ವವಾದಿಯಾಗಿ ಸಂವಿಧಾನವನ್ನು ಜೋಪಾನ ಮಾಡಿದ ರಾಜಕೀಯ ನಿಪುಣ ಮತ್ತು ವಿನಮ್ರಕಾವಲುಗಾರ ಬಾಬೂಜಿ ಎಂದರೆ ತಪ್ಪಾಗಲಾರದು. ಇಪ್ಪತ್ತು ಅಂಶಗಳ ಜನಕರಾಗಿ, ಜೀತ ವಿಮುಕ್ತಿ ಕಾಯಿದೆ, ಋಣ ಮುಕ್ತ ಕಾಯಿದೆ ಜಾರಿಗೆ ತರುವಲ್ಲಿ ಶ್ರಮಿಸಿದವರು.

ಇಂದಿರಾ ಗಾಂಧಿಯವರು ಹೊಗಳುಭಟ್ಟರ ಮಧ್ಯೆ ಬಂದಿಯಾಗಿ ತುರ್ತು ಪರಿಸ್ಥಿತಿ ಹೇರಿದಾಗ, ಇರುವ ಕಾಯಿದೆ ಗಳ ಮೂಲಕ ಆಂತರಿಕ ಭದ್ರತೆ ಕಾಪಾಡಬಹುದೆಂದು ಸಲಹೆ ನೀಡಿದ್ದರು. ಆದರೆ ಇಂದಿರಾ ಮನಃಸ್ಥಿತಿ ಅಧೀರವಾಗಿದ್ದ ಕಾರಣ ಬಾಬೂಜಿಯವರ ಸಲಹೆ ರುಚಿಸಲಿಲ್ಲ. ಕೊನೆಗೆ ಬೇಸತ್ತು ಮಂತ್ರಿಮಂಡಲಕ್ಕೆ ರಾಜೀನಾಮೆ ನೀಡಿ ಹೊರ ಬಂದರು. ಹಾಗೆ ಬಂದವರೆ ಪ್ರಜಾಪ್ರಭುತ್ವವಾದಿ ಕಾಂಗ್ರೆಸ್ ಪಕ್ಷ ಸ್ಥಾಪಿಸಿ (ಸಿಎಫ್‌ಡಿ) ಜನತಾ ಮೈತ್ರಿ ರಂಗಕ್ಕೆ ಆನೆ ಬಲ ತುಂಬಿದರು. ರಾಷ್ಟ್ರೀಯ ಪರ್ಯಾಯ ರಾಜಕಾರಣಕ್ಕೆ ನಾಂದಿ ಹಾಡಿ, ಜಯಪ್ರಕಾಶ ನಾರಾಯಣರ ಕನಸು ನನಸು ಮಾಡಿದರು.

ಈ ಸಂದರ್ಭದಲ್ಲೇ ಪರಿಶಿಷ್ಟರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತ ಮತದಾರರನ್ನು ಕಾಂಗ್ರೆಸ್ಸೇತರರಾಗಿ ಸೃಜಿಸಿದರು, ರಾಜಕಾರಣಿಗಳೂ ಪರ್ಯಾಯ ರಾಜಕಾರಣಕ್ಕೆ ಒಗ್ಗಿಕೊಂಡರು.
1980ರ ಲೋಕಸಭಾ ಚುನಾವಣೆಯಲ್ಲಿ ಬಾಬೂಜಿಯೇ ಪ್ರಧಾನಿ ಅಭ್ಯರ್ಥಿ ಎಂದರೂ ಜನತಾ ರಂಗ ನೆಲಕಚ್ಚಿತು. ಆದಾಗ ಕಾಂಗ್ರೆಸ್ ಸೇರ್ಪಡೆಗೆ ಆಹ್ವಾನವಿದ್ದರೂ ಮರಳದೆ ತಮ್ಮ ರಾಜಕೀಯ ಬದ್ಧತೆಯನ್ನು ಸಾದರಪಡಿಸಿದ ಮೇರು ರಾಜಕಾರಣಿ ಅವರು.

ಬಾಬೂಜಿ ತಮ್ಮ ನೆಚ್ಚಿನ ರಾಜಕೀಯ ಮಾರ್ಗದರ್ಶಕ ರಾಗಿದ್ದ ಸಂಪೂರ್ಣಾನಂದರ ಪುತ್ತಳಿಯನ್ನು ಅನಾವರಣ ಮಾಡಿ ವಾಪಸ್ ಆಗುವ ಮೊದಲೇ ಅದನ್ನು ಗಂಗಾಜಲದಿಂದ ಶುದ್ಧಿಕರಿಸಿದ್ದನ್ನು ಕಂಡು ಮಮ್ಮಲ ಮರುಗಿದರು. ಇದು ಭಾರತದ ಜಾತಿವಾದ ಮನೋಧರ್ಮ ಎಂದು ಅಂತರಂಗ ದಲ್ಲಿ ದುಃಖಿಯಾದರು. ಚರಿತ್ರಾರ್ಹ ಬಾಂಗ್ಲಾದೇಶ ವಿಭಜನೆ ಯಲ್ಲಿ ತಾವೇ ನೇರವಾಗಿ ಯುದ್ಧ ಭೂಮಿಯಲ್ಲಿ ನಿಂತು ಸೈನಿಕರಿಗೆ ಧೈರ್ಯ ತುಂಬಿ ಸದೃಢ ಭಾರತ ಉದಯಕ್ಕೆ ಕಾರಣೀಭೂತರಾದರು.

ಬಾಬು ಜಗಜೀವನ ರಾಮ್, ಅವರ ತಲೆಮಾರಿನ ಕರ್ನಾಟಕ ರಾಜಕಾರಣಿಗಳಿಗೆ ಚಿರಪರಿಚಿತರು. ಅದರಲ್ಲೂ ಮಾಜಿ ಮಂತ್ರಿ ದಿ.ಎನ್.ರಾಚಯ್ಯ ಅವರ ಅಚ್ಚುಮೆಚ್ಚಿನ ಮಾರ್ಗದಾತರಾಗಿದ್ದರು. ಅವರ ಸಾಧನೆಗಳೆಲ್ಲವೂ ರಾಷ್ಟ್ರೀಯ ಗುಣಗಾನ ಮಾಡುವಂತೆ ಮಾಡಿವೆ. ಭೌತಿಕವಾಗಿ ಬಾಬೂಜಿ ಇಲ್ಲದಿದ್ದರೂ ಅವರ ತತ್ವ, ಆದರ್ಶಗಳು ದೇಶವಾಸಿಗಳನ್ನು ಎಚ್ಚರಿಸುತ್ತಿರುತ್ತವೆ.

” ಬಾಬೂಜಿ ಅವರಿಗೆ ಜನತಾರಂಗದಲ್ಲಿ ಪ್ರಧಾನಿ ಹುದ್ದೆಗೆ ಅವಕಾಶಗಳಿದ್ದವು. ಆದರೆ ಜಾತಿವಾದಿ ಮತ್ತು ಕೋಮುವಾದಿ ರಾಜಕಾರಣಿಗಳ ಸಂಚಿನಿಂದ ಅವರು ಸೆಂಟ್ರಲ್‌ ಹಾಲ್‌ಗೆ ಬರುವ ಮುನ್ನವೇ ಮೊರಾರ್ಜಿಯವರ ಹೆಸರನ್ನು ಘೋಷಣೆ ಮಾಡಿ ಅಪಮಾನಿಸಿದರು. ಜನತಾ ಮೈತ್ರಿಕೂಟ ವೈಯಕ್ತಿಕ ಕಿತ್ತಾಟದಿಂದ ಕುಸಿದಾಗಲೂ ಬಹುಸಂಖ್ಯಾತ ಸಂಸದರು ಬಾಬೂಜಿ ಬೆಂಬಲಕ್ಕಿದ್ದರೂ ರಾಷ್ಟ್ರಪತಿ ಸಂಜೀವರೆಡ್ಡಿಯವರು ಚರಣ್‌ಸಿಂಗ್‌ರನ್ನು ಅಂಗೀಕಾರ ಮಾಡಿದರು.”

 

Tags:
error: Content is protected !!