Mysore
30
clear sky

Social Media

ಶುಕ್ರವಾರ, 06 ಮಾರ್ಚ್ 2026
Light
Dark

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಗಂಭೀರ ಸಮಸ್ಯೆ ಎದುರಿಸಲು ಒಟ್ಟಾದವರೂ ಸಿನಿಮಾ ಪ್ರಚಾರವೂ

sapthami gowda

ಚಿತ್ರರಂಗದಲ್ಲಿರುವ ಮಹಿಳೆಯರಾಗಿ, ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೋಗಳು ಮತ್ತು ಫೋಟೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ ನಮ್ಮ ಕಲೆಗಿಂತ ನಮ್ಮ ದೇಹವನ್ನು ಅನವಶ್ಯಕವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಘಟನೆಗಳು ಪುನಃ ಪುನಃ ನಡೆಯುತ್ತಿವೆ.

ಇಂತಹ ವರ್ತನೆ ಕೆಲವರಿಂದ ನಡೆಯುತ್ತಿವೆಯಾದರೂ, ಅದು ಅಸಭ್ಯ, ಅವಮಾನಕಾರಿ ಮತ್ತು ಅಸ್ವೀಕಾರ್ಹವಾಗಿದೆ. ನಾವು ಇಲ್ಲಿ ನಮ್ಮ ಕಲೆಗಾಗಿ ಬಂದಿದ್ದೇವೆ, ನಾವು ಇಲ್ಲಿ ನಮ್ಮ ಸಿನಿಮಾಕ್ಕಾಗಿ ಬಂದಿದ್ದೇವೆ. ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು ಮತ್ತು ಅಸಭ್ಯ ಕೋನಗಳಿಂದ ಬಳಸುವುದು ನಮ್ಮ ಗೌರವಕ್ಕೆ ಸ್ಪಷ್ಟ ಧಕ್ಕೆ. ಇದನ್ನು ಸಾಮಾನ್ಯವೆಂದು ಸ್ವೀಕರಿಸುವುದಿಲ್ಲ, ಸಹಿಸುವುದಿಲ್ಲ.

ಕಾರ್ಯಕ್ರಮಗಳನ್ನು ವರದಿ ಮಾಡುವವರು ವೃತ್ತಿಪರತೆ, ಮೂಲಭೂತ ಗೌರವ ಮತ್ತು ಶಿಸ್ತನ್ನು ಕಾಪಾಡಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಈ ಗಡಿರೇಖೆಯನ್ನು ನಾವು ಸ್ಪಷ್ಟವಾಗಿ ಎಳೆದು ನಾವು ಒಟ್ಟಾಗಿ ನಿಂತಿದ್ಧೇವೆ. ಇಂತಹ ಅನುಭವವನ್ನು ಎದುರಿಸಿದ ಪ್ರತಿಯೊಬ್ಬ ಮಹಿಳೆಯೊಂದಿಗೂ ನಾವು ಐಕ್ಯತೆಯಲ್ಲಿ ನಿಂತಿದ್ದೇವೆ. ಗೌರವವನ್ನು ಬೇಡುವ ನಮ್ಮ ಧ್ವನಿ ಮುಂದುವರಿಯುತ್ತದೆ.

-ನಟಿ ಸಪ್ತಮಿ ಗೌಡ ಅವರ ಇನ್ಸ್ಟಾಗ್ರಾಮ್‌ನ ಈ ಸಾಲುಗಳಿಗೆ ಸಾಕಷ್ಟು ಮಂದಿ ನಟಿಯರು ಸಹಮತ ವ್ಯಕ್ತಪಡಿಸಿದ್ದಾರೆ. ಇದನ್ನು ತಾವು ವಾಣಿಜ್ಯ ಮಂಡಳಿಯ ಅಧ್ಯಕ್ಷರ ಗಮನಕ್ಕೆ ತಂದಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾಗಿಯೂ ಆಕೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ ಮುದ್ರಣ, ದೃಶ್ಯ ಮತ್ತಿತರ ನವಮಾಧ್ಯಮಗಳನ್ನು ಚಿತ್ರೋದ್ಯಮ ಬಳಸಿಕೊಳ್ಳುತ್ತದೆ. ಅದಕ್ಕಾಗಿಯೇ ಪ್ರಚಾರಕರ್ತರನ್ನು ನೇಮಿಸಿಕೊಳ್ಳುತ್ತದೆ. ಸಿನಿಮಾ ಡಿಜಿಟಲ್‌ಗೆ ಹೊರಳಿದ ನಂತರ ಅದರ ಪ್ರಚಾರದ ಪರಿಯೇ ಬದಲಾಗಿದೆ. ಸಿನಿಮಾ ನಿರ್ಮಾಣಕ್ಕಿಂತ ಹೆಚ್ಚು ಮೊತ್ತ ಪ್ರಚಾರಕ್ಕೆ ಬಳಸುವವರೂ ಇದ್ದಾರೆ. ಕೆಲವೆಡೆ ಒತ್ತಾಯದಿಂದ ಹಾಗೆ ಮಾಡಲಾಗುತ್ತದೆ ಎನ್ನುವ ಮಾತೂ ಇದೆ.

ನವಮಾಧ್ಯಮಗಳು ಸಿನಿಮಾವನ್ನು ಪ್ರೇಕ್ಷಕರಿಗೆ ತಲಪಿಸುವಲ್ಲಿ ಎಷ್ಟು ಸಹಕಾರಿ ಎನ್ನುವುದು ಯಕ್ಷಪ್ರಶ್ನೆ. ಪತ್ರಿಕೆಗಳಲ್ಲಿ ಬರುವ ಜಾಹೀರಾತುಗಳು, ಭಿತ್ತಿಪತ್ರಗಳು, ಚಿತ್ರಮಂದಿರಗಳಲ್ಲಿ ಟ್ರೆ ಲರ್‌ಗಳು, ಸ್ಲೆ ಡ್‌ಗಳು, ಸೈಕಲಲ್ಲೋ, ಎತ್ತಿನ ಗಾಡಿಯಲ್ಲೋ ಮೈಕ್‌ನಲ್ಲಿ ‘ಬರುತ್ತದೆ’ ಎನ್ನುವ ಪ್ರಚಾರ ಇವೆಲ್ಲ ಈಗಲ್ಲ ಎನ್ನುವವರ ಸಂಖ್ಯೆ ಹೆಚ್ಚು. ಅದರ ಬದಲು ಇನ್‌ಫ್ಲುಯೆನ್ಸರ್‌ಗಳು, ಯುಟ್ಯೂಬ್ ವಾಹಿನಿಗಳ ಕಡೆಗೆ ನೋಡುವವರು ಹೆಚ್ಚಾಗತೊಡಗಿದ್ದಾರೆ.

ಈ ಬಳಗದಲ್ಲಿ ರೀಲ್‌ಗಳು, ಟ್ರೋಲ್‌ಗಳು ಸಂದರ್ಶನಗಳದೇ ಕಾರುಬಾರು. ಅದು ಅವರು ಅಭಿನಯಿಸಿದ ಚಿತ್ರಗಳ ಪ್ರಚಾರಕ್ಕೆ ಎಷ್ಟು ಪೂರಕಎನ್ನುವುದನ್ನು ಬಲ್ಲವರು ಹೇಳಬೇಕು. ಸಪ್ತಮಿ ಅವರೇ ಹೇಳುವಂತೆ, ‘ಇತ್ತೀಚೆಗೆ ಅಂತಹದೊಂದು ವಿಡಿಯೋವನ್ನು ೩೦ ಲಕ್ಷ ಮಂದಿ ನೋಡಿದ್ದರು. ಅದರಲ್ಲಿ ಅರ್ಧದಷ್ಟು ಮಂದಿ ಚಿತ್ರ ನೀಡಿರುತ್ತಿದ್ದರೂ ಅದು ಸೂಪರ್ ಹಿಟ್ ಆಗುತ್ತಿತ್ತು’!

ಆದರೆ ಇಂತಹ ಸತ್ಯಗಳು ನಿರ್ಮಾಪಕರ ಪಾಲಿಗೆ ಸಾಮಾನ್ಯವಾಗಿ ಕಹಿ ಆಗಿರುತ್ತವೆ. ಅಷ್ಟಕ್ಕೂ ಪತ್ರಿಕಾಗೋಷ್ಠಿಗಳಲ್ಲಿ ಪಾಲ್ಗೊಳ್ಳುವವರಲ್ಲಿ ವೃತ್ತಿಪರರ ಸಂಖ್ಯೆಯನ್ನೂ ಗಮನಿಸಬೇಕು. ಮೊಬೈಲ್ ಹಿಡಿದುಕೊಂಡು ಮಾಧ್ಯಮದ ಹೆಸರಲ್ಲಿ ಬರುವವವರು ಸಾಕಷ್ಟು ಮಂದಿ ಇದ್ದಾರೆ ಎನ್ನುವುದು ಪ್ರಚಾರಕರ್ತರ ಮಾತು. ಈ ನಡುವೆ ಪ್ರಚಾರಕರ್ತರಲ್ಲಿ ಕೆಲವರು ನಿರ್ಮಾಪಕರನ್ನು ಓಲೈಸಲೋ ಇನ್ನೇನೋ, ಸಾಕಷ್ಟು ಸಂಖ್ಯೆಯ ‘ಮಾಧ್ಯಮ’ ಮಂದಿಯನ್ನು ಕರೆಸಿಕೊಳ್ಳುವ ರೂಢಿ ಮಾಡಿದ್ದಾರೆ.

ಮುಂಬೈ ಚಿತ್ರರಂಗದಲ್ಲಿ ಇರುವಂತೆ ವಿಮಾನ ನಿಲ್ದಾಣದಲ್ಲಿ ಕಾದು ನಿಂತು ಜನಪ್ರಿಯ ನಟನಟಿಯರ ಫೋಟೋ ತೆಗೆದು ಜಾಲತಾಣಗಳಿಗೋ, ಆಸಕ್ತ ಪತ್ರಿಕೆಗಳಿಗೋ ನೀಡುವ ಪಾಪರಾಜಿಗಳ ಗಾಳಿ ಕನ್ನಡ ಚಿತ್ರರಂಗದ ನಟನಟಿಯರತ್ತ ಹೆಚ್ಚು ಬೀಸಿದಂತಿಲ್ಲ. ಮುಂಬೈಯಲ್ಲಿ ಅದೇ ಒಂದು ಉದ್ಯೋಗ ಆಗಿದೆ. ಅದು ಪರಸ್ಪರ ಕೂಡ. ಕೆಲವು ನಟನಟಿಯರು ತಮ್ಮ ಆಗಮನ/ನಿರ್ಗಮನದ ಮಾಹಿತಿಯನ್ನು ಮೊದಲೇ ಈ ಪಾಪರಾಜಿಗಳಿಗೆ ತಿಳಿಸುತ್ತಾರೆ ಎನ್ನುವುದು ಬಹಿರಂಗ ಗುಟ್ಟು. ತೀರಾ ಜನಪ್ರಿಯ ನಟನಟಿಯರಾದರೆ, ಅವರಿಗೂ ಈ ಗಳಿಕೆಯಲ್ಲಿ ಪಾಲಿದೆ ಎಂದೂ ಹೇಳಲಾಗುತ್ತಿದೆ. ಆದರೆ ಅಂತಹ ಬೆಳವಣಿಗೆ ಇಲ್ಲೂ ಆದರೆ ಆಶ್ಚರ್ಯವಿಲ್ಲ. ಕನ್ನಡದ ಕೆಲವು ಮಂದಿ ನಟನಟಿಯರು, ವಿಶೇಷವಾಗಿ ಹೊಸಬರು ತಮ್ಮ ಆತ್ಮೀಯ ಬಳಗಕ್ಕೆ ತಾವು ಪಾಲ್ಗೊಳ್ಳುವ ಕಾರ್ಯಕ್ರಮಗಳ ಬಗ್ಗೆ ಮೊದಲೇ ತಿಳಿಸಿಬಿಡುತ್ತಾರೆ; ಅವರು ಬಂದು ಇಳಿಯುವಲ್ಲಿಂದ ಮೊದಲ್ಗೊಂಡು ಅವರ ಚಲನವಲನಗಳ ಸೆರೆಹಿಡಿದು ಪ್ರಸಾರ ಮಾಡುವ ಕೆಲಸವನ್ನು ಮಾಡುತ್ತಾರೆ. ಸ್ವಯಂ ಆಸಕ್ತಿಯಿಂದ ತಮ್ಮ ಪ್ರಚಾರಕ್ಕೆ ಇಂತಹದನ್ನು ಯಾರೂ ವಿರೋಧಿಸುವುದಿಲ್ಲ.

ವೈಯಕ್ತಿಕವಾಗಿ ಸಂಬಂಧಪಟ್ಟವರ ಅನುಮತಿ ಇಲ್ಲದೆ, ಚಿತ್ರಿಸುವುದಾಗಲಿ, ಸಪ್ತಮಿ ಹೇಳಿದಂತೆ ಅಸಭ್ಯ ಕೋನಗಳ ಮೂಲಕ ಚಿತ್ರಿಸುವುದಾಗಲೀ ಸರಿಯಲ್ಲ. ಮರೆಯಲ್ಲಿ ನಿಂತು ಫೋಟೋ ತೆಗೆಯುವ ಪಾಪರಾಜಿಗಳ ವಿಷಯ ಬೇರೆ. ಪ್ರಚಾರದ ಹೆಸರಲ್ಲಿ ಬಂದು ಇಂತಹ ಕೆಲಸ ಕೂಡದು. ಹ್ಞಾಂ, ಈ ಪಾಪರಾಜಿ ಶಬ್ದ ಇಟಾಲಿಯನ್ ಮೂಲದ್ದು. ಫೆಡೆರಿಕೊ ಫೆಲ್ಲಿನಿ ಅವರ ೧೯೬೦ರ ಸಿನಿಮಾ ‘ಲಾ ಡೊಲ್ಸೆ ವಿಟಾ’ ದಲ್ಲಿನ ಪಾಪರಾಝೊ ಎಂಬ ಛಾಯಾಗ್ರಾಹಕನ ಪಾತ್ರದಿಂದ ಬಂದಿದೆ. ಇದು ಸೆಲೆಬ್ರಿಟಿಗಳ ಖಾಸಗಿ ಜೀವನದ ಫೋಟೋಗಳನ್ನು ಅತಿಕ್ರಮಣಕಾರಿಯಾಗಿ, ಅನಿರೀಕ್ಷಿತವಾಗಿ ತೆಗೆದು ಮಾರಾಟ ಮಾಡುವ ಆಕ್ರಮಣಕಾರಿ ಪತ್ರಿಕಾ ಛಾಯಾಗ್ರಾಹಕರನ್ನು ಸೂಚಿಸುತ್ತದೆ.

ಈ ಛಾಯಾಗ್ರಾಹಕರು ಪ್ರಸಿದ್ಧ ವ್ಯಕ್ತಿಗಳು, ನಟರು, ರಾಜಕಾರಣಿಗಳು ಅಥವಾ ಕ್ರೀಡಾಪಟುಗಳ ಖಾಸಗಿ ಜೀವನದ ಫೋಟೋಗಳನ್ನು ಅವರ ಅನುಮತಿಯಿಲ್ಲದೆ ತೆಗೆಯುವವರು. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಖಾಸಗಿ ಸ್ಥಳಗಳಲ್ಲಿ ಅಡಗಿದ್ದುಕೊಂಡು, ಅನಿರೀಕ್ಷಿತವಾಗಿ ತೆಗೆಯುವವರು. ಇವುಗಳನ್ನು ಹೆಚ್ಚಾಗಿ ಗಾಸಿಪ್ ನಿಯತಕಾಲಿಕೆಗಳು, ಟ್ಯಾಬ್ಲಾಯ್ಡ್‌ಗಳು ಅಥವಾ ಆನ್ಲೆ ನ್ ಸುದ್ದಿ ಸಂಸ್ಥೆಗಳಿಗೆ ನೀಡುತ್ತಾರೆ.

ಕನ್ನಡದ ಸಂದರ್ಭದಲ್ಲಿ ಪಾಪರಾಜಿಗಳು ಕಡಿಮೆ. ಇಲ್ಲ ಎಂದರೂ ತಪ್ಪಿಲ್ಲ. ಸಪ್ತಮಿ ಗೌಡ ಮತ್ತಿತರ ನಟಿಯರ ಆರೋಪ ಇರುವುದು ಮಾಧ್ಯಮ ಗೋಷ್ಠಿಗಳು, ಮತ್ತಿತರ ಸಿನಿಮಾ ಕಾರ್ಯಕ್ರಮಗಳನ್ನು ವರದಿ ಮಾಡಲು ಬಂದ ಕೆಲವು ಛಾಯಾಗ್ರಾಹಕರ ಮೇಲೆ. ಇಂತಹ ಪ್ರಸಂಗಗಳು ಬಹುಶಃ ಸೈಬರ್ ಅಪರಾಧದ ವ್ಯಾಪ್ತಿಗೆ ಬರುತ್ತವೆ. ಸಂಬಂಧಪಟ್ಟವರು, ನೊಂದವರು ಅಲ್ಲಿಗೆ ದೂರನ್ನು ನೀಡುವುದು ಒಂದು ದಾರಿ. ಸಿನಿಮಾ ಕಾರ್ಯಕ್ರಮಗಳಿಗೆ ಅಂತಹವರನ್ನು ಕರೆಯಬೇಕೇ ಬೇಡವೇ ಎನ್ನುವುದನ್ನು ಸಂಬಂಧಪಟ್ಟವರು ಯೋಚಿಸಬೇಕು.

ಸಿನಿಮಾ ಕಾರ್ಯಕ್ರಮದಾಚೆಗೆ ಕೂಡಾ, ಅದು ಸಿನಿಮಾ ಮಂದಿ ಇರಲಿ, ಬೇರೆ ಯಾರೇ ಇರಲಿ, ಖಾಸಗಿ ಸ್ಥಳಗಳಲ್ಲಿ ಅನುಮತಿ ಇಲ್ಲದೆ ಚಿತ್ರಿಸಕೂಡದು. ಅದಕ್ಕೆ ಭಾರತೀಯ ದಂಡ ಸಂಹಿತೆ (ಐಪಿಸಿ): ಸೆಕ್ಷನ್ ೩೫೪ಸಿ, ಸೆಕ್ಷನ್ ೫೦೭, ಸೆಕ್ಷನ್ ೨೬೮ ಮತ್ತು ೫೦೯ ಮೂಲಕ ವಿವಿಧ ಅವಧಿಯ ಜೈಲು ಶಿಕ್ಷೆಯೇ ಮೊದಲಾದ್ದಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ ೨೦೦೦ (ಐಟಿ ಆಕ್ಟ್): ಸೆಕ್ಷನ್ ೬೬ಇ ಕೂಡಾ ಖಾಸಗಿ ಚಿತ್ರಗಳ ಅನಧಿಕೃತ ಹಂಚಿಕೆಗೆ ಜೈಲು ಶಿಕ್ಷೆವಿಧಿಸಬಹುದು. ಸಾಮಾಜಿಕ ತಾಣಗಳಲ್ಲಿ ಏನು ಬೇಕಾದರೂ ಬರೆಯಬಹುದು, ಹೇಳಬಹುದು, ಪ್ರತಿಕ್ರಿಯೆ ಕೂಡ ಹೇಗೆ ಬೇಕಾದರೂ ನೀಡಬಹುದು ಎನ್ನುವ ವಾತಾವರಣ. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವ ಗುರಾಣಿ ಬೇರೆ. ಅದರಲ್ಲೂ ಚಿತ್ರನಟರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಹೊಗಳುವ ಭರಾಟೆಯಲ್ಲಿ ಇತರರನ್ನು ಹೇಳುವ ರೀತಿ. ಆದರೆ ಕಾನೂನಿನ ಮೂಲಕ ಅಂತಹ ಮಂದಿಗೆ ಪಾಠ ಕಲಿಸಬಹುದು ಎಂದು ಇತ್ತೀಚಿನ ಒಂದೆರಡು ಪ್ರಸಂಗಗಳು ಹೇಳಿವೆ. ನವಮಾಧ್ಯಮಗಳು ಖಂಡಿತವಾಗಿಯೂ ಮುಂದಿನ ದಿನಗಳ ಭರವಸೆ.

ಆದರೆ ಅಲ್ಲೊಂದು ಇಲ್ಲೊಂದು, ಅದರ ದುರುಪಯೋಗವೂ ಆಗುತ್ತಿರುವುದೂ ನಿಜ. ಅಂತಹ ಪ್ರಕರಣಗಳನ್ನು ನಿವಾರಿಸಿಕೊಂಡು ಮುಂದೆ ಹೋಗಬೇಕಾದ ಜವಾಬ್ದಾರಿ ಕೂಡ ಸಂಬಂಧಪಟ್ಟವರಿಗಿದೆ. ಮನರಂಜನಾ ಉದ್ಯಮದಂತೆಯೇ ಮಾಧ್ಯಮ ಕ್ಷೇತ್ರವೂ ಟಿಸಲೊಡೆಯುತ್ತಿದೆ. ಡಿಜಿಟಲ್ ಕ್ರಾಂತಿಯ ಮುಂದೆ, ಕೃತಕ ಬುದ್ಧಿಮತ್ತೆಯ ಕುರಿತ ಜಿಜ್ಞಾಸೆಯ ದಿನಗಳಿವು. ಚಿತ್ರಮಂದಿರದಿಂದ ಪ್ರೇಕ್ಷಕ ವಿಮುಖನಾಗುತ್ತಿದ್ದಾನೆ ಎನ್ನುವ ವಾದ ಒಂದೆಡೆಯಾರೆ, ಒಳ್ಳೆಯ ಚಿತ್ರಗಳನ್ನು ಆತ ಕೈಬಿಡುವುದಿಲ್ಲ ಎನ್ನುವುದು ಇನ್ನೊಂದೆಡೆ. ಒಳ್ಳೆಯದು ಎನ್ನುವುದು ಅವರವರ ಭಾವಕ್ಕೆ, ಅನುಭವಕ್ಕೆ, ತಿಳಿವಿಗೆ ಸೇರಿದ್ದು. ಈ ನಡುವೆ, ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಎಂದೋ, ‘ಮೊಬೈಲ್ ಬಿಡಿ, ಮೈದಾನಕ್ಕೆ ನಡಿ’ ಎಂದೋ ದನಿ ಏರತೊಡಗಿದೆ. ಮಕ್ಕಳ ಕೈಗೆ ಮೊಬೈಲ್ ಕೊಡುವುದನ್ನು ನಿಷೇಧಿಸುವ ಕುರಿತ ಚರ್ಚೆಗಳಾಗುತ್ತಿವೆ. ಒಂದೆರಡು ದೇಶಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿವೆ.

ಸರ್ಕಾರದ ವಿಷಯ ಬಂದರೆ, ಇಂದು ಕರ್ನಾಟಕದ ಮುಂಗಡ ಪತ್ರ. ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ ತಮ್ಮ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ. ಎಲ್ಲ ಕ್ಷೇತ್ರಗಳಂತೆ ಚಿತ್ರರಂಗ ಕೂಡ ಸಾಕಷ್ಟು ನಿರೀಕ್ಷೆಯಲ್ಲಿದೆ. ಕಳೆದ ವರ್ಷದಲ್ಲಿ ಘೋಷಿಸಿದ ಕೆಲವು ಯೋಜನೆಗಳು ಈಗ ನಿಧಾನವಾಗಿ ಆರಂಭವಾಗುತ್ತಿವೆ. ಚಿತ್ರನಗರಿಯ ಕೆಲಸ, ಸಿನಿಮಾ ಭಂಡಾರದ ಕೆಲಸ, ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿರುವ ಚಲನಚಿತ್ರ ಅಕಾಡೆಮಿ ಇರುವ ಜಾಗದಲ್ಲಿ ಚಲನಚಿತ್ರ ಸಂಕೀರ್ಣದ ಯೋಜನೆ ಮುಂತಾಗಿ ಕಳೆದ ವರ್ಷ ಹೇಳಲಾಗಿತ್ತು. ಈ ಬಾರಿ ಚಿತ್ರರಂಗಕ್ಕೆ ಏನು ನೀಡುತ್ತಾರೆ ಎನ್ನುವುದು ಇಂದು ತಿಳಿಯಲಿದೆ.

ʼ ನವಮಾಧ್ಯಮಗಳು ಖಂಡಿತವಾಗಿಯೂ ಮುಂದಿನ ದಿನಗಳ ಭರವಸೆ. ಆದರೆ ಅಲ್ಲೊಂದು ಇಲ್ಲೊಂದು, ಅದರ ದುರುಪಯೋಗವೂ ಆಗುತ್ತಿರುವುದೂ ನಿಜ. ಅಂತಹ ಪ್ರಕರಣಗಳನ್ನು ನಿವಾರಿಸಿಕೊಂಡು ಮುಂದೆ ಹೋಗಬೇಕಾದ ಜವಾಬ್ದಾರಿ ಕೂಡ ಸಂಬಂಧಪಟ್ಟವರಿಗಿದೆ.”

 

 

Tags:
error: Content is protected !!