Mysore
26
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಎಲ್ಲ ನಟರ ಅಭಿಮಾನಿಗಳು ಪೈರೆಸಿ ವಿರುದ್ಧ ಸಮರ ಸಾರುವಂತಾದರೆ!

ವೈಡ್‌ ಆಂಗಲ್‌ 

ಬಾ.ನಾ.ಸುಬ್ರಹ್ಮಣ್ಯ 

ವರ್ಷದ ಕೊನೆಯ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಮಾರ್ಕ್’. ಚಿತ್ರದ ಮುಖ್ಯ ಪಾತ್ರ ಮಾರ್ಕಾಂಡೇಯ ಹೆಸರಿನ ಸಂಕ್ಷಿಪ್ತ ರೂಪ ಅದು ಎನ್ನಲಾಗಿದೆ. ಚಿರಂಜೀವಿ ಮಾರ್ಕಾಂಡೇಯ. ಹುಬ್ಬಳ್ಳಿಯಲ್ಲಿ ಆ ಚಿತ್ರದ ಬಿಡುಗಡೆಪೂರ್ವ ಸಮಾರಂಭದ ವೇಳೆ ನಟ ಸುದೀಪ್ ಆಡಿದ ಮಾತುಗಳು ದರ್ಶನ್ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಇದಕ್ಕೆ ಪ್ರತಿಕ್ರಿಯಿಸಿ ಆಡಿದ ಮಾತುಗಳು ಕಾರಣವಾಯಿತು. ‘ಮಾರ್ಕ್’ಬಿಡುಗಡೆಯ ದಿನವೇ ತೆರೆಗೆ ಬರುವ ‘೪೫’ ಚಿತ್ರದ ಮುಖ್ಯಪಾತ್ರಧಾರಿಗಳಲ್ಲಿ ಒಬ್ಬರಾದ ಶಿವರಾಜಕುಮಾರ್ ಅಭಿಮಾನಿಗಳಲ್ಲಿ ಕೆಲವರೂ ಇದಕ್ಕೆ ಪ್ರತಿಕ್ರಿಯಿಸಿದರು.

ಕೆಲವು ಸಾಮಾಜಿಕ ಜಾಲ ತಾಣಗಳು, ಯುಟ್ಯೂಬ್ ವಾಹಿನಿಗಳು, ಸುದ್ದಿವಾಹಿನಿಗಳು ಸುದೀಪ್ ಮತ್ತು ದರ್ಶನ್ ನಡುವೆ ಬಿರುಕಿನ ತಿದಿಯೂದುವ ಕೆಲಸವನ್ನೂ ಮಾಡಿದವು. ಅವರವರ ಭಾವಕ್ಕೆ ಅವರವರ ಮೂಗಿನ ನೇರಕ್ಕೆ ಚರ್ಚೆಗಳಾದವು. ಜನಪ್ರಿಯ ನಟರ ನಡುವೆ ತಂದಿಕ್ಕುವ ಕೆಲಸ ಲಾಗಾಯ್ತಿನಿಂದ ಮಾಧ್ಯಮಗಳಿಂದ, ಆ ಮೂಲಕ ಅಭಿಮಾನಿಗಳಿಂದ ಆಗಿದೆ, ಈಗಲೂ ಆಗುತ್ತಿದೆ ಎನ್ನುವ ಮಾತಿಗೆ ಇತ್ತೀಚಿನ ದಿನಗಳು ಸಾಕ್ಷಿ ಆಗತೊಡಗಿವೆ. ಸಂಬಂಧಪಟ್ಟ ನಟರೇ ಅಭಿಮಾನಿ ಸಂಘಗಳನ್ನು ಸ್ಥಾಪಿಸಿ ಪೋಷಿಸುತ್ತಾರೆ ಎನ್ನುವ ಮಾತೂ ಇದೆ.

ರಾಜಕೀಯಕ್ಕೆ ಬರುವ ನೆರೆಯ ತಮಿಳುನಾಡಿನಲ್ಲಿ ಜನಪ್ರಿಯ ನಟರು ತಮ್ಮ ಅಭಿಮಾನಿ ಸಂಘಗಳನ್ನು ಪೋಷಿಸಿದ್ದಿದೆ. ಆದರೆ ಅದು ಕರ್ನಾಟಕದ ಸಂದರ್ಭದಲ್ಲಿ ಹಿಂದೆ ಇದ್ದಂತಿಲ್ಲ. ನಟ ರಾಜಕುಮಾರ್ ಅವರು, ತಮ್ಮ ಹೆಸರಿನಲ್ಲಿರುವ ಅಭಿಮಾನಿ ಸಂಘ ೧೭/೦೨/೧೯೮೯ರಂದು ನಡೆಸುವ ಪ್ರತಿಭಟನೆಯಲ್ಲಿ ರೈಲು ತಡೆಯುವ ಕಾರ್ಯಕ್ರಮ ಹಮ್ಮಿಕೊಂಡ ಸಂದರ್ಭದಲ್ಲಿ, ‘ಈ ಸಂಘದೊಡನೆ ನನಗಾಗಲೀ,ನನ್ನ ಕುಟುಂಬದ ಯಾರೊಬ್ಬ ಸದಸ್ಯರಿಗಾಗಲೀ ಯಾವುದೇ ರೀತಿಯ ಸಂಬಂಧವಿಲ್ಲ. ಹಾಗೂ ನನ್ನ ಒಪ್ಪಿಗೆ ಇಲ್ಲದೆ ಮತ್ತು ನನಗೆ ತಿಳಿಸದೆ ನನ್ನ ಹೆಸರು ಮತ್ತು ಭಾವ ಚಿತ್ರಗಳನ್ನು ಈ   ಸಂಘದವರು ಉಪಯೋಗಿಸುತ್ತಿದ್ದಾರೆ.’ ಎಂದು ವಿವರವಾದ ಪತ್ರಿಕಾ ಪ್ರಕಟಣೆಯನ್ನು ಎರಡು ದಿನಗಳ ಮೊದಲು ನೀಡಿದ್ದರು. ಅಷ್ಟೇ ಅಲ್ಲ, ೧೯೯೧ರ ಡಿಸೆಂಬರ್‌ನಲ್ಲಿ ನಡೆದ ಬೆಂಗಳೂರು ಬಂದ್ ವೇಳೆ ತಮಿಳರ ಮೇಲೆ ನಡೆದ ಹಿಂಸಾಚಾರದಲ್ಲಿ ರಾಜಕುಮಾರ್ ಹೆಸರು ಸಂಘಟನೆಯ ಕಾರಣ ಮುನ್ನೆಲೆಗೆ ಬಂದಿತ್ತು. ಅದನ್ನು ಅವರು ವಿರೋಧಿಸಿದ್ದರು.

ಅದರ ಪರಿಣಾಮವಾಗಿ, ಸಂಘದ ಗೌರವಾಧ್ಯಕ್ಷರು ಮತ್ತು ಅಧ್ಯಕ್ಷರು ಪತ್ರಿಕಾಗೋಷ್ಠಿ ಕರೆದು ‘ರಾಜಕುಮಾರ್ ಅವರ ಇಚ್ಛೆಗೆ ವಿರುದ್ಧವಾಗಿ ಯಾವುದೇ ಕೆಲಸ ಮಾಡುವುದಿಲ್ಲ, ಇನ್ನು ಮುಂದೆ ಅವರ ಹೆಸರಿನಲ್ಲಿ ಸಂಘ ಇರುವುದಿಲ್ಲ’ ಎಂದು ಪ್ರಕಟಿಸಿದ್ದರು. ಹಾಗಂತ ರಾಜಕುಮಾರ್ ಮತ್ತು ವಿಷ್ಣುವರ್ಧನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಚಿತ್ರಗಳು ತೆರೆಗೆ ಬಂದ ಸಂದರ್ಭದಲ್ಲಿ ಮತ್ತು ವಿರೋಧಿ ನಟರ ಚಿತ್ರ ತೆರೆಕಂಡ ಸಂದರ್ಭಗಳಲ್ಲಿ ಮಾಡಿದರು ಎಂದು ಸುದ್ದಿಯಾದ ಘಟನೆಗಳ ಸಂಖ್ಯೆ ಕಡಿಮೆ ಏನೂ ಅಲ್ಲ. ಜನಪ್ರಿಯ ನಟರ ನಡುವೆ ಪರಸ್ಪರ ಸ್ನೇಹ ವಿಶ್ವಾಸ ಇದ್ದರೂ ಅದನ್ನು ಅನುಮಾನದಿಂದಲೇ ನೋಡುವ ಪ್ರವೃತ್ತಿಗೆ ಇತ್ತೀಚಿನ ಉದಾಹರಣೆ ಎಂದರೆ ರಾಜ್- ರಿಷಭ್- ರಕ್ಷಿತ್ ಕುರಿತಂತೆ ಮಾಧ್ಯಮಗಳ ವಿಶೇಷ ಅಸಕ್ತಿ. ‘ಶೆಟ್ಟಿ ಗ್ಯಾಂಗ್ ಛಿದ್ರ ಛಿದ್ರ’ ಮೊದಲ್ಗೊಂಡು ತರಹಾವರಿ ತಲೆಬರಹಗಳ (ಟಿಆರ್‌ಪಿಗಾಗಿ) ಮೂಲಕ ಅವರ ನಡುವೆ ಏನೋ ನಡೆದಿದೆ; ಎಲ್ಲವೂ ಸರಿಯಾಗಿಲ್ಲ ಎನ್ನುವಂತೆ ಬಿಂಬಿಸತೊಡಗಿದ್ದನ್ನು ನೋಡಬಹುದು.

ಜೊತೆಯಾಗಿ ಬಂದು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಅದ ಛಾಪು ಮೂಡಿಸಿರುವ ರಿಷಭ್ – ರಕ್ಷಿತ್ – ರಾಜ್ ಅವರಿಗೆ ಬಂದ ಹೊಸದರಲ್ಲಿ ಅಂತಹ ಸ್ವಾಗತವೇನೂ ಸಿಕ್ಕಿರಲಿಲ್ಲ. ಕನ್ನಡ ಚಿತ್ರರಂಗದತ್ತ ಇತರ ಭಾರತೀಯ ಭಾಷಾ ಚಿತ್ರರಂಗಗಳು ತಿರುಗಿ ನೋಡುವಂತಹ ಚಿತ್ರಗಳನ್ನು ನೀಡಿದರು ಈ ಶೆಟ್ಟಿ ತ್ರಯರು. ‘ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆ, ಕೊಡುಗೆ ರಾಮಣ್ಣ ರೈ’, ‘ಕಿರಿಕ್ ಪಾರ್ಟಿ’, ‘ಕಾಂತಾರ’, ‘ಒಂದು ಮೊಟ್ಟೆಯ ಕಥೆ’, ‘ಚಾರ್ಲಿ ೭೭೭’, ‘ಸು ಫ್ರಂ ಸೋ’ ಮುಂತಾದ ಚಿತ್ರಗಳ ಮೂಲಕ ಗಮನ ಸೆಳೆದವರು. ಅವರವರದೇ ಹಾದಿಯನ್ನು ನಿಚ್ಚಳವಾಗಿ ಕಂಡುಕೊಂಡವರು, ತಮ್ಮದೇ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ನಮ್ಮಲ್ಲಿ ಒಡಕೇನೂ ಇಲ್ಲ; ಜೊತೆಯಾಗಿ ಕೆಲಸ ಮಾಡುವ ಸಂದರ್ಭ ಬಂದಾಗ ಸೇರುತ್ತೇವೆ ಎಂದು ರಾಜ್ ಬಿ. ಶೆಟ್ಟಿ ಅವರು ‘೪೫’ರ ಸಮಾರಂಭದಲ್ಲಿ ಹೇಳಿದ್ದೂ ಇದೆ. ಅದರೆ ಅದು ಈ ಬಗ್ಗೆ ತಲೆಕೆಡಿಸಿಕೊಂಡ ಮಂದಿಗೆ ಅಪ್ರಿಯ ಸತ್ಯ! ಹಾಗಾಗಿ ಅಲ್ಲಲ್ಲಿ ಶೆಟ್ಟಿ ತ್ರಯರ ನಡುವೆ ಏನೋ ಇದೆ ಎಂದ ಮಂದಿ ಮತ್ತೆ ಏನನ್ನೋ ಹುಡುಕತೊಡಗಿದ್ದಾರೆ.

‘ಮಾರ್ಕ್’ ಚಿತ್ರದ ಬಿಡುಗಡೆಪೂರ್ವ ಸಮಾರಂಭವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿತ್ತು. ಸುದೀಪ್ ಪ್ರಕಾರ, ‘ಹುಬ್ಬಳ್ಳಿಗೆ ಬಂದು ಈ ಕಾರ್ಯಕ್ರಮ ಮಾಡೋದಕ್ಕೆ ಒಂದು ದೊಡ್ಡ ಕಾರಣ ಇದೆ. ಕೆಲವು ಮಾತು ಈ ಹುಬ್ಬಳ್ಳಿಗೆ ಬಂದು ವೇದಿಕೆ ಮೇಲೆ ಮಾತಾಡಿದರೆ ಇಡೀ ಕರ್ನಾಟಕಕ್ಕೆ ಎಲ್ಲಿ ತಟ್ಟಬೇಕೋ ತಟ್ಟುತ್ತೆ, ಹೇಗೆ ತಟ್ಟಬೇಕೋ ತಟ್ಟುತ್ತೆ. ಯಾವ ಭರ್ಜರಿಯಲ್ಲಿ ತಟ್ಟಬೇಕೋ ತಟ್ಟುತ್ತೆ’. ಅದಕ್ಕಾಗಿ ಅಲ್ಲಿ ಸಮಾರಂಭ. ಸುದೀಪ್ ಅವರ ಮುಂದಿನ ಮಾತುಗಳು ಬಹುತೇಕ ಮಾಧ್ಯಮಗಳಿಗೆ ಗ್ರಾಸವಾಯಿತು. ‘ಜುಲೈ ೫ರಂದು ಒಂದು ಪ್ರಾಮಿಸ್ ಮಾಡಿದ್ದೆ. ಡಿಸೆಂಬರ್ ೨೫ನೇ ತಾರೀಕು ಬಾಗಿಲು ತಟ್ಟುತ್ತೇನೆ ಅಂತ. ಜೋರಾಗಿ ತಟ್ಟುತ್ತಾ ಇದ್ದೇವೆ ನಾವು. ಈ ಜರ್ನಿಯಲ್ಲಿ ೨೫ಕ್ಕೆ ಥಿಯೇಟರ್ ನಲ್ಲಿ ಒಂದು ಸಿನಿಮಾ ಬಿಡುಗಡೆ ಆಗುತ್ತೆ. ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗುತ್ತಾ ಇದೆ. ಈ ವೇದಿಕೆ ಮೇಲಿಂದ ಹೇಳ್ತಾ ಇದ್ದೇನೆ. ಯುದ್ಧಕ್ಕೆ ಸಿದ್ಧ. ಏಕೆಂದರೆ ನಾವು ನಮ್ಮ ಮಾತಿಗೆ ಬದ್ಧ’.  ಸಹಜವಾಗಿಯೇ ಆ ಮಾತು, ಅವರವರ ನೆಲೆಯಲ್ಲಿ ಚರ್ಚೆಯಾಯಿತು.

ಮೊದಲೇ ಹೇಳಿದಂತೆ ದರ್ಶನ್ ಅಭಿಮಾನಿಗಳಲ್ಲಿ ಹಲವರು ತಮ್ಮನ್ನು ಈ ‘ಪಡೆ’ ಎಂದುಕೊಂಡರು. ಯಾವುದೇ ಎಗ್ಗಿಲ್ಲದೆ ಏನು ಬೇಕಾದರೂ ಹೇಳಬಲ್ಲ ಸಾಮಾಜಿಕ ತಾಣಗಳಲ್ಲಿ ಅದು ಕಾಣಿಸಿಕೊಂಡಿತು. ಸುದೀಪ್ ಮತ್ತೆ ಮಾಧ್ಯಮ ಮಂದಿಯ ಮುಂದೆ ಬಂದರು. ಒಂದು ಪಡೆ ತಮ್ಮ ಚಿತ್ರವನ್ನು ಪೈರೆಸಿ ಮಾಡಿ ಸೋಲಿಸುವ ಪ್ರಯತ್ನ ಮಾಡುತ್ತಿರುವ ವಿಷಯ ಗಮನಕ್ಕೆ ಬಂದದ್ದರಿಂದ ಅದರವಿರುದ್ಧ ತಾವು ಮಾತನಾಡಿದ್ದಾಗಿ ಹೇಳಿದರು. ಪೈರೆಸಿ ವಿರುದ್ಧ ಯುದ್ಧ ಎಂದು ಮೊದಲೇ ಹೇಳಿದ್ದರೆ, ಈ ಗೊಂದಲ ಇರಲಿಲ್ಲವಲ್ಲ, ಎಂದು ಕೇಳಿದರೆ, ಅದು ಯಾರಿಗೆ ತಟ್ಟಬೇಕಾಗಿತ್ತೋ ಅವರಿಗೆ ತಟ್ಟಲಿ ಎಂದು ಹಾಗೆ ಹೇಳಿದೆ ಎನ್ನುವುದಾಗಿತ್ತು ಅವರ ಉತ್ತರ. ಇದನ್ನು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು!

ಪೈರೆಸಿ ವಿರುದ್ಧದ ಸಮರ ನಡೆದೇ ಇದೆ. ಯಾವುದೇ ಚಿತ್ರ ತೆರೆಕಂಡ ಮಾರನೇ ದಿನವೇ ಪೈರೆಸಿ ಪ್ರತಿಗಳು ಸಿಗುತ್ತವೆ ಎನ್ನುವುದು ಈಗ ಬಹಿರಂಗ ಗುಟ್ಟು. ಟೆಲಿಗ್ರಾಂನಂತಹ ತಾಣಗಳ ಆಶ್ರಯದಲ್ಲಿ ನೂರಾರು ಪುಡಿ ಸಂಸ್ಥೆಗಳು ಇದನ್ನು ಮಾಡುತ್ತವೆ ಎಂದು ಹೇಳಲಾಗುತ್ತಿದೆ. ಕರ್ನಾಟಕ ಸಿನಿಮಾ ಪೈರೆಸಿಯನ್ನು ಗೂಂಡಾ ಕಾಯ್ದೆಯಡಿ ತಂದು ವರ್ಷಗಳೇ ಆಗಿವೆ. ಒಂದೆರಡು ಪ್ರಸಂಗಗಳ ಹೊರತಾಗಿ, ಈ ತನಕ ಶಿಕ್ಷೆ ಆದದ್ದಿಲ್ಲ ಎನ್ನುತ್ತಿವೆ ಮೂಲಗಳು. ಜನಪ್ರಿಯ ನಟರ ಅಭಿಮಾನಿಗಳು ಪೈರೆಸಿ ವಿರುದ್ಧ ಸಮರ ಸಾರಲು ಸಾಧ್ಯವೇ? ಆದರೆ, ಅದಕ್ಕಿಂತ ದೊಡ್ಡ ಕೊಡುಗೆ ಚಿತ್ರರಂಗಕ್ಕೆ ಇನ್ನೊಂದಿರಲಾರದು. ಸಮರ್ಥವಾಗಿ ಈ ಕೆಲಸ ಸಾಧ್ಯವಾದದ್ದೇ ಆದರೆ, ಕನ್ನಡ ಚಿತ್ರರಂಗ ತನ್ನ ಅಸ್ತಿತ್ವ, ಅಸ್ಮಿತೆಗಳನ್ನು ಉಳಿಸಿಕೊಳ್ಳಲು ಇದು ನೆರವಾಗಬಲ್ಲದು. ಇಚ್ಛಾಶಕ್ತಿ ಇದ್ದರೆ ಯಾವುದೂ ಅಸಾಧ್ಯವಲ್ಲ.

ಆದರೆ ಜನಪ್ರಿಯ ನಟರ, ಹೆಸರಾಂತ ಸಂಸ್ಥೆಗಳ ಪಾನ್ ಇಂಡಿಯಾ ಹೆಸರಿನ ವ್ಯವಹಾರ ಮೋಹ ಇನ್ನೊಂದೆಡೆ ಭಾಷಾ ಚಿತ್ರೋದ್ಯಮಗಳ ಅಸ್ತಿತ್ವವನ್ನು ಅಲುಗಾಡಿಸುವ ಕೆಲಸವನ್ನು ಮಾಡುತ್ತಲೇ ಇದೆ. ಸಂಸ್ಥೆಗಳಿಗೆ ತಮ್ಮ ವ್ಯವಹಾರ, ಗಳಿಕೆ, ಲಾಭಗಳತ್ತ ಗಮನವಾದರೆ, ನಟರಿಗೆ ತಮ್ಮ ವರ್ಚಸ್ಸಿನ ವ್ಯಾಪ್ತಿ ಹಿಗ್ಗುವುದು ಮುಖ್ಯವಾಗುತ್ತದೆ. ಆಗ ಅವರವರ ಭಾಷೆ, ನೆಲದ ಕಥೆಗಳು ಗೌಣವಾಗಿಬಿಡುತ್ತವೆ. ಇದಕ್ಕೆ ಅಲ್ಲೊಂದು, ಇಲ್ಲೊಂದು ಅಪವಾದಗಳಿರಬಹುದು; ‘ಕಾಂತಾರ’ದ ಹಾಗೆ. ಪೈರೆಸಿ ವಿರುದ್ಧ ಯುದ್ಧ ಮಾಡಿ ಗೆಲ್ಲುವುದು ಕಷ್ಟ ಎನ್ನುವ ಅಭಿಪ್ರಾಯವನ್ನು ರಾಜ್ಯ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧುಕೋಕಿಲ ವ್ಯಕ್ತಪಡಿಸಿದ್ದಾರೆ.

ವಿಶ್ವದಾದ್ಯಂತ ಹರಡಿರುವ ಪೈರೆಸಿ ಜಾಲದ ಹುಟ್ಟಡಗಿಸುವುದು ಚರ್ಚೆ, ವಿಚಾರಸಂಕಿರಣಗಳಿಗೆ ಸೀಮಿತವಾಗತೊಡಗಿದೆ. ಗೂಂಡಾ ಕಾಯ್ದೆಗೆ ಬಲ ಬರಬೇಕಾದರೆ, ಪೈರೆಸಿಯ ಮೂಲಗಳನ್ನು ಬೇರು ಸಹಿತ ಕಿತ್ತು ಹಾಕುವ ಕೆಲಸ ಆಗಬೇಕು. ಬೆಂಗಳೂರಿನಲ್ಲಿರುವ ಸಂಸ್ಥೆಯೊಂದು ಈ ಜಾಲಗಳ ಕೊಂಡಿಗಳನ್ನು ಹುಡುಕಿ, ಕಿತ್ತುಹಾಕುವ ಕೆಲಸವನ್ನು ಮಾಡುತ್ತಿದೆ. ತಮ್ಮ ನೆಚ್ಚಿನ ನಟರಪೈರೆಸಿ ಪ್ರತಿಗಳನ್ನು ನೋಡುವ ಅಭಿಮಾನಿಗಳ ಸಂಖ್ಯೆ ಕಡಿಮೆ ಏನೂ ಅಲ್ಲ ಎನ್ನುತ್ತವೆ ಮೂಲಗಳು. ಅದನ್ನು ನಿಲ್ಲಿಸಿ, ಅವುಗಳ ವಿರುದ್ಧ ನಿಲ್ಲಬೇಕು.

ಸುದೀಪ್ ‘ಮಾರ್ಕ್’ ಬಿಡುಗಡೆಯ ವೇಳೆ ಪೈರೆಸಿ ಮಾಡುವವರ ವಿರುದ್ಧ ಯುದ್ಧ ಸಾರಿದರೋ, ಅದನ್ನು ಉಳಿದವರು ಹೇಗೆ ತಿಳಿದುಕೊಂಡರೋ ಬೇರೆ ಮಾತು. ಹೊಸ ವರ್ಷ ಪೈರೆಸಿ ವಿರುದ್ಧ ಎಲ್ಲ ನಟರ ಅಭಿಮಾನಿಗಳು ಯುದ್ಧ ಸಾರುವಂತಾದರೆ ಅದಕ್ಕಿಂತ ದೊಡ್ಡ ಬೆಳವಣಿಗೆ ಇನ್ನೊಂದಿಲ್ಲ.

” ಜನಪ್ರಿಯ ನಟರ ಅಭಿಮಾನಿಗಳು ಪೈರೆಸಿ ವಿರುದ್ಧ ಸಮರ ಸಾರಲು ಸಾಧ್ಯವೇ? ಆದರೆ, ಅದಕ್ಕಿಂತ ದೊಡ್ಡ ಕೊಡುಗೆ ಚಿತ್ರರಂಗಕ್ಕೆ ಇನ್ನೊಂದಿರಲಾರದು. ಸಮರ್ಥವಾಗಿ ಈ ಕೆಲಸ ಸಾಧ್ಯವಾದದ್ದೇ ಆದರೆ, ಕನ್ನಡ ಚಿತ್ರರಂಗ ತನ್ನ ಅಸ್ತಿತ್ವ, ಅಸ್ಮಿತೆಗಳನ್ನು ಉಳಿಸಿಕೊಳ್ಳಲು ಇದು ನೆರವಾಗಬಲ್ಲದು. ಇಚ್ಛಾಶಕ್ತಿ ಇದ್ದರೆ ಯಾವುದೂ ಅಸಾಧ್ಯವಲ್ಲ.”

Tags:
error: Content is protected !!