ಗುಣಮಟ್ಟದ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಸರ್ಕಾರ ನೀಡುತ್ತಿರುವ ಸಹಾಯಧನವನ್ನು ೨೦೨೬ನೇ ಸಾಲಿನಿಂದ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ ಎನ್ನುವುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಯಾವುದೇ ಕಾರಣಕ್ಕೂ ಸಹಾಯಧನ ಯೋಜನೆ ನಿಲ್ಲಿಸಕೂಡದು ಎಂದು ಈಗಾಗಲೇ ಸರ್ಕಾರವನ್ನು ಕೋರಿದೆ. ಮೊನ್ನೆ ತಮ್ಮ ‘ವೀರ ಕಂಬಳ’ ಚಿತ್ರದ ಬಿಡುಗಡೆ ಪೂರ್ವ ಸಮಾರಂಭದಲ್ಲಿ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ (ಬಾಬು) ಅವರು ಯಾರೋ ಮೂರ್ಖರ ಮಾತು ಕೇಳಿ ಸಹಾಯಧನ ನಿಲ್ಲಿಸಿದರೆ ಕನ್ನಡ ಚಿತ್ರರಂಗ ಬಾಗಿಲೆಳೆಯಬೆಕಾಗುತ್ತದೆ ಎನ್ನುವ ಅರ್ಥದ ಮಾತುಗಳನ್ನಾಡಿದರು ಮಾತ್ರವಲ್ಲ, ಕಾಸರವಳ್ಳಿ, ಶೇಷಾದ್ರಿಯಂತಹವರು ಚಿತ್ರ ಮಾಡಲು ಅಸಾಧ್ಯ ಎಂದೂ ಸೇರಿಸಿದರು.
ಹಾಗಾದರೆ ಈ ಸುದ್ದಿಯ ಹಿನ್ನೆಲೆ ಏನು? ಸಹಾಯಧನ ಯೋಜನೆ ೨೦೨೬ರಿಂದ ರದ್ದಾಗಲಿದೆಯೇ? ಪ್ರಶ್ನೆ ಸಹಜ. ಕಳೆದ ವರ್ಷ ೨೦೨೫ -೨೬ರ ಮುಂಗಡ ಪತ್ರದಲ್ಲಿ ಮುಖ್ಯಮಂತ್ರಿಗಳು, ಸಿನಿಮಾ ವಲಯಕ್ಕೆ ಉದ್ಯಮದ ಸ್ಥಾನಮಾನ ನೀಡಲಾಗುವುದು ಮತ್ತು ಕೈಗಾರಿಕಾ ನೀತಿಯ ಅಡಿಯಲ್ಲಿ ಒದಗಿಸಲಾದ ಸೌಲಭ್ಯಗಳನ್ನು ನಮ್ಮ ಸರ್ಕಾರವು ಸಿನಿಮಾ ಉದ್ಯಮಕ್ಕೆ ವಿಸ್ತರಿಸುತ್ತದೆ ಎಂದು ಪ್ರಕಟಿಸಿದ್ದರು.
ಇದರ ಮುಂದುವರಿದ ಭಾಗವಾಗಿ ಆರ್ಥಿಕ ಇಲಾಖೆಯು ಮುಂದೆ ಗುಣಾತ್ಮಕ ಚಲನಚಿತ್ರಗಳಿಗೆ ನೀಡಲಾಗುವ ಸಹಾಯಧನವನ್ನು ಸ್ಥಗಿತಗೊಳಿಸುವ ಬಗ್ಗೆ ಪರಿಶೀಲಿಸಿ, ಪ್ರಸ್ತಾವನೆಯನ್ನು ಸಲ್ಲಿಸಲು ವಾರ್ತಾ ಸಚಿವಾಲಯದ ಮೂಲಕ ಕೋರಿತ್ತು. ಇದಕ್ಕೆ ಸಂಬಂಽಸಿದಂತೆ ಕಳೆದ ಡಿಸೆಂಬರ್ ತಿಂಗಳಲ್ಲಿ ಬರೆದ ಪತ್ರದ ಪ್ರತಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ಚಿತ್ರರಂಗಕ್ಕೆ ಕೈಗಾರಿಕೆಯ ಸ್ಥಾನ ಲಭಿಸಿದಾಗ ಅದರಿಂದ ಪ್ರದರ್ಶಕರಿಗೆ ಮಾತ್ರ ಹೆಚ್ಚು ಅನುಕೂಲ, ನಿರ್ಮಾಪಕರಿಗಲ್ಲ ಎನ್ನುವ ಅಭಿಪ್ರಾಯ ಉದ್ಯಮದಲ್ಲಿದೆ. ಒಂದು ವೇಳೆ ಸಿಕ್ಕರೂ ಅದು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳಿಗೆ ಅನುಕೂಲವಾಗಬಹುದೇ ಹೊರತು, ಸಣ್ಣಪುಟ್ಟ ನಿರ್ಮಾಪಕರಿಗಲ್ಲ ಎನ್ನುವ ಮಾತೂ ಇದೆ. ಕಳೆದ ವರ್ಷದ ಮುಂಗಡ ಪತ್ರದಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಇದ್ದ ಪ್ರಸ್ತಾವನೆಗಳು ಆಮೆ ವೇಗದಲ್ಲಿ ಸಾಗಿವೆ.
ನಂದಿನಿ ಬಡಾವಣೆಯಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಒಡೆತನದ ೨.೫ ಎಕರೆ ಭೂಮಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿಯಲ್ಲಿ (ಪಿಪಿಪಿ) ಮಲ್ಟಿಪ್ಲೆಕ್ಸ್ (ಚಲನಚಿತ್ರ ಮಂದಿರ ಸಂಕೀರ್ಣ)ವನ್ನು ಅಭಿವೃದ್ಧಿಪಡಿಸುವುದು, ಸಾಮಾಜಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಚಿತ್ರಿಸುವ ಕನ್ನಡ ಚಲನಚಿತ್ರಗಳ ಸಂರಕ್ಷಣೆಯ ಉದ್ದೇಶದಿಂದ, ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ ಸ್ವರೂಪಗಳಲ್ಲಿ ಕನ್ನಡ ಚಲನಚಿತ್ರಗಳ ಭಂಡಾರವನ್ನು ನಿರ್ಮಿಸುವುದರ ಪೂರ್ವಭಾವಿ ಕೆಲಸಗಳು ಈಗಷ್ಟೇ ಆರಂಭವಾಗಿವೆ. ರಾಜ್ಯದ್ದೇ ಆದ ಒಟಿಟಿ ತಾಣ ಕೂಡ.
ಕರ್ನಾಟಕದಲ್ಲಿ ಸಹಾಯಧನ ಯೋಜನೆ ಆರಂಭವಾಗಿ ಅರವತ್ತು ವರ್ಷಗಳಾಗುತ್ತಿವೆ. ಮದರಾಸಿನಲ್ಲಿ (ಈಗ ಚೆನ್ನೈ) ನೆಲೆಯಾಗಿದ್ದ ಚಿತ್ರೋದ್ಯಮವನ್ನು ಕರ್ನಾಟಕಕ್ಕೆ (ಆಗ ಮೈಸೂರು) ಬರುವಂತೆ ಮಾಡುವಲ್ಲಿ ಇದು ಮಹತ್ತರ ಪಾತ್ರವಹಿಸಿತ್ತು. ಆರಂಭದಲ್ಲಿ ಇದು ಕನ್ನಡ ಚಿತ್ರಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಕರ್ನಾಟಕದಲ್ಲಿ ಚಿತ್ರೀಕರಣವಾದ ಕನ್ನಡೇತರ ಚಿತ್ರಗಳೂ ಸಹಾಯಧನ ಪಡೆಯಬಹುದಾಗಿತ್ತು. ಮುಂದೆ ಇದು ಕನ್ನಡ ಚಿತ್ರಗಳಿಗೆ ಸೀಮಿತವಾಯಿತು. ಇತರ ಪ್ರಾದೇಶಿಕ ಭಾಷಾ ಚಿತ್ರಗಳು ತಯಾರಾದಾಗ ಅವುಗಳಿಗೂ ವಿಸ್ತರಣೆ ಆಯಿತು. ಆರಂಭದಲ್ಲಿ ೩೦,೦೦೦ ರೂ. ವರೆಗೆ ಎಂದಿದ್ದು, ಒಂದೆರಡು ತಿಂಗಳಲ್ಲಿ ೫೦,೦೦೦ ರೂ.ಗಳಿಗೆ ಏರಿತು.
ಕಪ್ಪುಬಿಳುಪು ಮತ್ತು ವರ್ಣ ಚಿತ್ರಗಳಿಗೆ ಬೇರೆಬೇರೆ ಮೊತ್ತ, ಕರ್ನಾಟಕದಲ್ಲಿ ಸಂಪೂರ್ಣವಾಗಿ ತಯಾರಾಗಿರಬೇಕು ಎನ್ನುವ ಷರತ್ತು, ಕಲಾತ್ಮಕ ಚಿತ್ರಗಳಿಗೆ ಹೆಚ್ಚಿನ ಸಹಾಯಧನ ಹೀಗೆ ಈ ಯೋಜನೆ ೧೯೭೦ -೮೦ರ ದಶಕದಲ್ಲಿ ಕನ್ನಡ ಚಿತ್ರಗಳಿಗೆ ಒತ್ತಾಸೆಯಾಗಿ ನಿಂತಿತು. ಕಪ್ಪುಬಿಳುಪು ಚಿತ್ರಗಳ ಕಾಲ ಮುಗಿದ ಮೇಲೆ, ೪ ಲಕ್ಷ ರೂ. ಸಾಮಾನ್ಯ ಚಿತ್ರಗಳಿಗೆ, ೫ ಲಕ್ಷ ರೂ. ಕಲಾತ್ಮಕ ಚಿತ್ರಗಳಿಗೆ ನೀಡಲಾಗುತ್ತಿತ್ತು. ಚಿತ್ರಗಳ ಆಯ್ಕೆಗೆ ಆ ದಿನಗಳಲ್ಲಿ ಹೊರಗಿನವರೇ ಸಲಹಾ ಸಮಿತಿಯಲ್ಲಿ ಇರುತ್ತಿದ್ದರು. ಹೊಸ ಸಹಸ್ರಮಾನದ ಹೊಸ್ತಿಲಿಗೆ ಬರುವ ವೇಳೆ ಸಹಾಯಧನದ ಮೊತ್ತ ರೂ. ಹತ್ತು ಲಕ್ಷಕ್ಕೇರಿತು. ಉತ್ತಮ ಗುಣಮಟ್ಟದ ಚಿತ್ರಗಳ ಆಯ್ಕೆಯ ಜೊತೆಗೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಪಡೆದ ಚಿತ್ರಗಳು, ಮಾನ್ಯತೆ ಪಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಚಿತ್ರಗಳು ಮುಂತಾಗಿ ನೇರ ಸಹಾಯಧನಕ್ಕೆ ಅರ್ಹವಾದವು. ಆಯ್ಕೆ ಸಮಿತಿಯ ಮುಂದೆ ಬಾರದೆ ಅವು ಸಹಾಯಧನ ಪಡೆಯಬಹುದಾಗಿತ್ತು. ಕನ್ನಡ ಚಲನಚಿತ್ರ ನೀತಿ ೨೦೧೧’ ಚಿತ್ರೋದ್ಯಮಕ್ಕೆ ಕಾಯಕಲ್ಪವಾಗುವ ನಿಟ್ಟಿನಲ್ಲಿ ಆರಂಭವಾಯಿತು. ಈ ನೀತಿ ಐದು ವರ್ಷಗಳಿಗೆ ಎಂದಿದ್ದರೂ, ಈಗಲೂ ಅದೇ ಜಾರಿಯಲ್ಲಿದೆ. ಅದರ ಉದ್ದೇಶಗಳು ಹೀಗಿದ್ದವು:
* ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಪೂರಕವಾದ ಮೂಲಸೌಲಭ್ಯ ಮತ್ತು ಉತ್ತೇಜನ ನೀಡುವುದು
* ನಾಡಿನ ವಿವಿಧ ಪ್ರಾಂತ್ಯಗಳ ಕಲೆ, ನುಡಿ, ಸಂಸ್ಕೃತಿ, ನೈಸರ್ಗಿಕ ಮತ್ತು ಪ್ರವಾಸಿ ತಾಣಗಳ ಪರಿಚಯಕ್ಕೆ ನೆರವಾಗುವುದು
* ಕನ್ನಡದ ಕಥೆ, ಕಾದಂಬರಿ ಆಧರಿಸಿದ ಚಿತ್ರಗಳಿಗೆ ಪ್ರೋತ್ಸಾಹ ನೀಡುವುದು
* ಕನ್ನಡ ಚಲನಚಿತ್ರ ಸಾಹಿತ್ಯ ರಚನೆಗೆ ಪ್ರೋತ್ಸಾಹಕ ಪ್ರಶಸ್ತಿ ನೀಡುವುದು
* ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕೆ ನೆರವಾಗಲು ಮಿನಿ ಚಿತ್ರಮಂದಿರಗಳ ನಿರ್ಮಾಣಕ್ಕೆ ಒತ್ತಾಸೆಯಾಗುವುದು
* ಚಲನಚಿತ್ರ ಶೈಕ್ಷಣಿಕ ಮತ್ತು ತರಬೇತಿ ನೆಲೆಯನ್ನು ಸದೃಢಗೊಳಿಸವುದು
೨೦೧೧ರ ಚಲನಚಿತ್ರ ನೀತಿ ಸಮಗ್ರ ಆಗಿರಲಿಲ್ಲ. ಸೆಲ್ಯುಲಾಯ್ಡ್‌ನಿಂದ ಡಿಜಿಟಲ್‌ಗೆ ಸಿನಿಮಾ ಹೊರಳಿ, ಮನರಂಜನೋದ್ಯಮ ಹಲವು ಕವಲುಗಳನ್ನೊಡೆದ ಈ ಸಂದರ್ಭದಲ್ಲಿ ಸಮಗ್ರ ಚಲನಚಿತ್ರ ನೀತಿಯ ಅಗತ್ಯವಿದೆ. ಕೈಗಾರಿಕೆಯ ಸ್ಥಾನ ಚಿತ್ರರಂಗಕ್ಕೆ ಸಿಕ್ಕಾಗ ಮೂಲ ಸೌಲಭ್ಯಗಳನ್ನು ಸಾಕಷ್ಟು ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಯೋಚಿಸಬಹುದು. ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಿತ್ರಗಳ ಪ್ರದರ್ಶನ ಸುಗಮವಾಗಲು, ೧೫೦ -೨೦೦ ಆಸನ ಮಿತಿಯ ಮಿನಿ ಚಿತ್ರಮಂದಿರಗಳನ್ನು ಮಹಾನಗರಗಳ ಬಡಾವಣೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನಿರ್ಮಿಸಬಹುದು.
ಚಲನಚಿತ್ರ ತರಬೇತಿ ಇಂದಿನ ಇನ್ನೊಂದು ಅಗತ್ಯ. ಈಗಾಗಲೇ ಈ ಅಂಕಣದಲ್ಲಿ ಹೇಳಿದಂತೆ, ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಿ, ಅಲ್ಲಿ ತರಬೇತಿ ನೀಡುವ ಕೆಲಸ ಆಗಬೇಕು. ಮೈಸೂರಿನಲ್ಲಿ ಚಿತ್ರನಗರಿಯ ಸ್ಥಾಪನೆಯ ಮಾತು. ಈಗಾಗಲೇ ಅಲ್ಲಿ ವಾರ್ತಾ ಇಲಾಖೆಯ ಅಧೀನಕ್ಕೆ ನೀಡಿರುವ ಜಾಗದ ಸುತ್ತ ಗೋಡೆ ಕಟ್ಟುವ ಕೆಲಸ ನಡೆಯುತ್ತಿರುವ ವರದಿ ಇದೆ. ಚಿತ್ರೋದ್ಯಮಕ್ಕೆ ಕೈಗಾರಿಕೆಯ ಸ್ಥಾನ ನೀಡಿದ ರಾಜ್ಯಗಳು ಸಹಾಯಧನ ನೀಡುವುದನ್ನು ನಿಲ್ಲಿಸಿಲ್ಲ. ಮಹಾರಾಷ್ಟ್ರ ಸರ್ಕಾರ ಮರಾಠಿ ಚಿತ್ರಗಳಲ್ಲಿ ‘ಎ’ ಶ್ರೇಣಿಯ ಚಿತ್ರಗಳಿಗೆ ರೂ.೪೦ ಲಕ್ಷ, ‘ಬಿ’ ಶ್ರೇಣಿಯ ಚಿತ್ರಗಳಿಗೆ ರೂ.೩೦ ಲಕ್ಷ ಮತ್ತು‘ಸಿ’ ಶ್ರೇಣಿಯ ಚಿತ್ರಗಳಿಗೆ ರೂ. ೧೦ ಲಕ್ಷ ಮೊತ್ತವನ್ನು ನೀಡುತ್ತಿದೆ. ಹಾಗಾಗಿ ಕೈಗಾರಿಕಾ ಸ್ಥಾನ ನೀಡಿದ ಕೂಡಲೇ ಸಹಾಯಧನ ರದ್ದು ಮಾಡಬಹುದು ಎನ್ನುವ ಸಲಹೆಯನ್ನು ಸರ್ಕಾರ ಒಪ್ಪಲೇಬೇಕೆಂದೇನಿಲ್ಲ. ಅಲ್ಲಿನ ಸೌಲಭ್ಯಗಳನ್ನು ಪಡೆದುಕೊಂಡು ಉದ್ಯಮವನ್ನು ಇನ್ನಷ್ಟು ಗಟ್ಟಿಯಾಗಿ ನೆಲೆಯೂರುವಂತೆ ಮಾಡುವ ಯೋಜನೆಗಳೂ ಅಗತ್ಯ. ಇಲ್ಲೂ ಸಹಾಯಧನ ರದ್ದಾಗುವ ಸಾಧ್ಯತೆ ಕಡಿಮೆ ಎಂದೇ ಹೇಳಬಹುದು. ಆದರೆ ಸಹಾಯಧನ ನೀಡುವ ಚಿತ್ರಗಳ ಸಂಖ್ಯೆ, ಅದರ ಆಯ್ಕೆಯ ವಿಧಾನದಲ್ಲಿ ತಲಸ್ಪರ್ಶಿ ಬದಲಾವಣೆ ಇದ್ದರೆ ಚೆನ್ನ ಎನ್ನುವ ಮಾತು ಅಲ್ಲಲ್ಲಿ ಕೇಳಿಬರುತ್ತಿದೆ. ಈಗಾಗಲೇ ಸಹಾಯಧನ ಆಯ್ಕೆಗೆ ಇರುವ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದರೂ, ಗುಣಮಟ್ಟದ ಚಿತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಅದರಲ್ಲಿ ಮುಖ್ಯವಾಗಿ, ಚಲನಚಿತ್ರವು ತಾಂತ್ರಿಕವಾಗಿ ಕೆಳಮಟ್ಟದಲ್ಲಿರಬಾರದು, ಹಾಗೂ ಚಲನಚಿತ್ರ ನಿರ್ಮಾಣದ ಮೂಲಪಾಠಗಳಿಗೆ ಅಪಚಾರವೆಸಗುವಂತೆ ಇರಬಾರದು ಎನ್ನುವುದು. ಮಾತ್ರವಲ್ಲ, ಚಲನಚಿತ್ರವು ಮಹಿಳೆಯರ ಮೇಲಿನ ಹಿಂಸೆ, ಅತ್ಯಾಚಾರ, ಲೈಂಗಿಕತೆ, ಕೀಳುಮಟ್ಟದ ಕಾಮ ಪ್ರಚೋದನೆಯಂತಹ ಕಥೆ, ಕ್ರೌರ್ಯ ದೃಶ್ಯಗಳನ್ನು ಅನವಶ್ಯಕವಾಗಿ ಒಳಗೊಂಡಿರಬಾರದು, ಕೀಳು ಅಭಿರುಚಿಯ ದ್ವಂದ್ವಾರ್ಥ ಸಂಭಾಷಣೆಗಳು ಚಲನಚಿತ್ರದಲ್ಲಿರಬಾರದು, ಚಲನಚಿತ್ರದಲ್ಲಿ ಅನವಶ್ಯಕ ಹೊಡೆದಾಟ, ಕ್ರೌರ್ಯ, ಹಿಂಸೆ, ಅಶ್ಲೀಲನೃತ್ಯ ಮುಂತಾದವುಗಳನ್ನು ವಿಜೃಂಭಿಸುವ ದೃಶ್ಯಗಳಿರಬಾರದು, ಸಮಾಜದ ಮೇಲೆ ವಿಶೇಷವಾಗಿ ವಿದ್ಯಾರ್ಥಿ/ಯುವ ಸಮುದಾಯದ ಮೇಲೆ ದುಷ್ಪರಿಣಾಮ ಬೀರುವ ಕಥೆ, ದೃಶ್ಯ, ನಿರೂಪಣೆ ಇರಬಾರದು. ಅಂತಹ ದೃಶ್ಯ, ಕಥೆ, ಸಂಭಾಷಣೆಯಿಂದ ಪ್ರಚೋದಿತರಾಗಿ ಅವುಗಳನ್ನು ನಿಜ ಜೀವನದಲ್ಲಿ ಅನುಸರಿಸುವಂತಹ ಕನಿಷ್ಠ ಪ್ರಚೋದನೆ ಇದ್ದರೂ ಅಂತಹ ಚಲನಚಿತ್ರಗಳು ಸಹಾಯಧನಕ್ಕೆ ಅನರ್ಹವಾಗುತ್ತವೆ ಎನ್ನುವುದು ನಿಯಮಾವಳಿಯಲ್ಲಿದೆ.
ಹ್ಞಾಂ, ಇನ್ನು ಚಿತ್ರರಂಗವನ್ನು ಕೈಗಾರಿಕೆಯಾಗಿ ಪರಿಗಣಿಸುವ ಕುರಿತಂತೆ ೨೦೦೨ರ ಆಗಸ್ಟ್ ೧ರಂದು ಲೋಕಸಭೆಯಲ್ಲಿ ಆಗ ಸಂಸದರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಪ್ರಶ್ನೆಯೊಂದನ್ನು ಕೇಳಿದ್ದರು. ಸಿನಿಮಾಕ್ಕೆ ಕೈಗಾರಿಕಾ ಸ್ಥಾನ ನೀಡಲಾಗಿದೆಯೇ? ಇದ್ದರೆ, ಅದರಿಂದ ಅನುಕೂಲ ಪಡೆದವರು ಯಾರು ಮುಂತಾಗಿ ಪೂರಕ ಪ್ರಶ್ನೆಗಳಿದ್ದವು.
ಅಂದಿನ ವಾರ್ತಾ ಸಚಿವರಾಗಿದ್ದ ಸುಷ್ಮಾ ಸ್ವರಾಜ್, ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಕಾಯ್ದೆ, ೧೯೬೪ ಸೆಕ್ಷನ್ ೨(ಸಿ)( qಜಿಜಿ) ರಂತೆ ಸಿನಿಮಾವನ್ನು ಕೈಗಾರಿಕೆಯಾಗಿ ಪರಿಗಣಿಸಿದ್ದನ್ನು ಹೇಳುತ್ತಾರೆ. ಮಾತ್ರವಲ್ಲ, ಈ ಬ್ಯಾಂಕಿಗೆ ಚಿತ್ರ ನಿರ್ಮಾಣಕ್ಕೆ ಬೇಕಾದ ಬಂಡವಾಳದ ಗರಿಷ್ಟ ಶೇ.೫೦ ಸಾಲ ನೀಡಲು ರಿಸರ್ವ್ ಬ್ಯಾಂಕ್ ಮೂಲಕ ಆದೇಶಿಸಿದ್ದಾಗಿ ಕೂಡ ತಮ್ಮ ಉತ್ತರದಲ್ಲಿ ಹೇಳುತ್ತಾರೆ.
ಇದರ ಬೆನ್ನಲ್ಲೇ ಕರ್ನಾಟಕದಲ್ಲೂ ಸಾಕಷ್ಟು ಮಂದಿ ನಿರ್ಮಾಪಕರು ಚಿತ್ರ ನಿರ್ಮಾಣಕ್ಕೆ ಈ ಬ್ಯಾಂಕ್ ಮೂಲಕ ಸಾಲಪಡೆಯುತ್ತಾರೆ. ಆದರೆ ಚಿತ್ರ ಬಿಡುಗಡೆಗೆ ಮೊದಲೇ ಬ್ಯಾಂಕಿನ ಸಾಲ ಮುಗಿಸಬೇಕು ಎನ್ನುವ ಷರತ್ತು ಪೂರೈಸಲು ಬಹಳಷ್ಟು ಮಂದಿಗೆ ಆಗುವುದಿಲ್ಲ. ಬ್ಯಾಂಕು ಕೂಡ ಕನ್ನಡ ಚಿತ್ರಗಳ ನಿರ್ಮಾಣಕ್ಕೆ ನೆರವಾಗುವುದನ್ನು ನಿಲ್ಲಿಸುತ್ತದೆ. ೨೦೨೨, ೨೦೨೩, ೨೦೨೪ ಮತ್ತು ೨೦೨೮ರ ಸಾಲಿನ ಸಹಾಯಧನ ಮತ್ತು ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಇನ್ನೂ ಕರೆ ಬಂದಿಲ್ಲ. ೨೦೨೦, ೨೦೨೧ರ ಸಾಲಿನ ಪ್ರಶಸ್ತಿಪ್ರದಾನ ಆಗಬೇಕಷ್ಟೇ. ಈ ಹಿಂದೆ ಪ್ರಕಟಿಸಿದಂತೆ, ರಾಜಕುಮಾರ್ ಅವರ ಜನ್ಮದಿನದಂದು ಅದು ನಡೆಯುವ ಸಾಧ್ಯತೆಯೂ ಇದೆ.
” ಸಿನಿಮಾ ವಲಯಕ್ಕೆ ಉದ್ಯಮದ ಸ್ಥಾನಮಾನ ನೀಡಿದ ಕೂಡಲೇ ಸಹಾಯಧನ ರದ್ದು ಮಾಡಬಹುದು ಎನ್ನುವ ಸಲಹೆಯನ್ನು ಸರ್ಕಾರ ಒಪ್ಪಲೇಬೇಕೆಂದೇನಿಲ್ಲ. ಅಲ್ಲಿನ ಸೌಲಭ್ಯಗಳನ್ನು ಪಡೆದುಕೊಂಡು ಉದ್ಯಮವನ್ನು ಇನ್ನಷ್ಟು ಗಟ್ಟಿಯಾಗಿ ನೆಲೆಯೂರುವಂತೆ ಮಾಡುವ ಯೋಜನೆಗಳೂ ಅಗತ್ಯ”





