ಪ್ರೊ.ಬಿ.ಜಯಪ್ರಕಾಶಗೌಡ
ಮಂಡ್ಯ ಜಿಲ್ಲೆಯ ಈ ಹೊತ್ತಿನ ರಾಜಕಾರಣದಲ್ಲಿ ಒಂದು ಪ್ರಮುಖವಾದ ಹೆಸರು ಬಿ.ರಾಮಕೃಷ್ಣ ಅವರದು. ಅವರು ಒಮ್ಮೆ ಸ್ಥಳೀಯ ಸಂಸ್ಥೆಗಳ ಪ್ರತಿನಿಽಯಾಗಿ ವಿಧಾನ ಪರಿಷತ್ತಿಗೆ ಆಯ್ಕೆಗೊಂಡಿದ್ದರು.
ಮದ್ದೂರು ತಾಲ್ಲೂಕಿನ ಕೆ. ಹೊನ್ನಲಗೆರೆ ಗ್ರಾಮದ ರೈತಾಪಿ ಕುಟುಂಬದಲ್ಲಿ ರಾಮಕೃಷ್ಣ ಜನಿಸಿದವರು. ಇವರ ತಂದೆ ಆ ಕಾಲದಲ್ಲಿ ಕೆಲವು ಹಳ್ಳಿಗಳ ಶ್ಯಾನುಭೋಗರಾಗಿದ್ದವರು. ಇದರ ಫಲವಾಗಿ ರಾಮಕೃಷ್ಣ ಲೆಕ್ಕಾಚಾರದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಯಿತು. ಪದವಿ ವ್ಯಾಸಂಗ ಮಾಡಿದ್ದರೂ, ಕಾರಣಾಂತರಗಳಿಂದ ಪದವಿಯನ್ನು ಪೂರೈಸಲಿಲ್ಲ. ಮದ್ದೂರಿನ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದು, ಅದು ಮುಚ್ಚಿದಾಗ ರಾಮಕೃಷ್ಣ, ಬೆಂಗಳೂರಿಗೆ ದೌಡಾಯಿಸಿ ಬದುಕನ್ನು ರೂಪಿಸಿಕೊಂಡರು.
ತಮ್ಮ ಸ್ನೇಹ, ವಿಶ್ವಾಸಗಳ ಮೂಲಕ ಬದುಕನ್ನು ಉತ್ತಮವಾಗಿಯೇ ಕಟ್ಟಿಕೊಂಡ ರಾಮಕೃಷ್ಣ, ಬೆಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡರು. ಸಂಪಾದನೆಯ ಆಂಶಿಕ ಭಾಗವನ್ನು ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗಿಸಿದರು. ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಿದ್ದಾರೆ. ಅವರೆಂದೂ ತಾವು ಕೊಟ್ಟಿರುವುದನ್ನು ದಾಖಲಿಸಿರುವುದಿರಲಿ ಬೇರೆಯವರಿಗೂ ತಿಳಿಸಿಲ್ಲ. ಮಾಡಿದ ದಾನ ಗುಟ್ಟಾಗಿರಬೇಕೆಂಬುದೇ ಅವರ ಆಶಯ. ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿಯನ್ನಿರಿಸಿಕೊಂಡು ಬಂದವರು. ಈಗಲೂ ಅನೇಕ ಸಂಘ ಸಂಸ್ಥೆಗಳಿಗೆ, ಸಾಹಿತ್ಯ ಕಾರ್ಯಕ್ರಮಗಳಿಗೆ ನಿರಂತರವಾಗಿ ದಾನ ಮಾಡುತ್ತಲೇ ಬಂದಿದ್ದಾರೆ. ಅವರ ಈ ತೆರನಾದ ಮನೋಭಾವಕ್ಕೆ ಮಂಡ್ಯದ ಕರ್ನಾಟಕ ಸಂಘದ ಬೆಳವಣಿಗೆ ಸಾಕ್ಷಿಯಾಗಿದೆ. ಅಲ್ಲಿ ಏರ್ಪಟ್ಟಿರುವ ಮಧ್ಯಾಹ್ನದ ಅನ್ನದಾಸೋಹ ಇಡೀ ರಾಜ್ಯದ ಸಾಂಸ್ಕೃತಿಕ ವಲಯದಲ್ಲಿ ಪರಿಚಿತವಾಗಿದೆ. ಕೊಟ್ಟ ಹಣಕ್ಕೆ ಅವರೆಂದೂ ಕೃತಜ್ಞತೆಯನ್ನು ನಿರೀಕ್ಷಿಸುವುದಿಲ್ಲ. ಅವರ ಜನಪ್ರಿಯತೆಯನ್ನು ಅರಿತ ಜಾತ್ಯತೀತ ಜನತಾದಳ ಪಕ್ಷವು ಒಮ್ಮೆ ಅವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಧಾನ ಪರಿಷತ್ ಪ್ರವೇಶಿಸಲು ಅನುವು ಮಾಡಿಕೊಟ್ಟಿತ್ತು. ಮತ್ತೆ ಅವರಿಗೆ ಟಿಕೆಟ್ ಸಿಗಲಿಲ್ಲ. ಇದಕ್ಕಾಗಿ ಅವರು ಬೇಸರಿಸಿದವರೂ ಅಲ್ಲ. ಓಸರಿಸಿದವರೂ ಅಲ್ಲ.
ರಾಮಕೃಷ್ಣ ಅವರು ತಮ್ಮ ಹುಟ್ಟೂರಾದ ಕೆ. ಹೊನ್ನಲಗೆರೆಯಲ್ಲಿ ಸುಮಾರು ೭೦-೮೦ ಎಕರೆ ಪ್ರದೇಶದ ಆವರಣದಲ್ಲಿ ಆರ್. ಕೆ. ಸಮೂಹ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಈಗ ಆ ಸಂಸ್ಥೆಯಲ್ಲಿ ಎಲ್‌ಕೆಜಿಯಿಂದ ಪದವಿ, ವಿವಿಧ ಡಿಪ್ಲೊಮಾ ತರಗತಿಗಳು ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್‌ಗಳ ವ್ಯಾಸಂಗಕ್ಕೆ ಅವಕಾಶ ಇದೆ. ಹೆಚ್ಚುವರಿಯಾಗಿ ವೃತ್ತಿಪರ ಕೋರ್ಸ್‌ಗಳನ್ನು ತೆರೆದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚು ಹೊರೆಯಾಗದಂತೆ ಶಿಕ್ಷಣವನ್ನು ನೀಡುತ್ತಿರುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
ಬಳಲಿ ಬಂದ ಬಡವರ ಮಕ್ಕಳನ್ನು ಅಪ್ಪಿಕೊಂಡು ಉಚಿತ ಶಿಕ್ಷಣವನ್ನು ನೀಡುವ ಪರಿಪಾಠವನ್ನು ಇರಿಸಿಕೊಂಡಿರುವ ಈ ಸಂಸ್ಥೆಯಲ್ಲಿ ಇಂದು ೨,೫೦೦ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ‘ಜಗುಲಿಯಿಂದ ಜಗತ್ತಿನವರೆಗೆ’ ಎಂಬ ಧ್ಯೇಯವನ್ನು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿರುವ ರಾಮಕೃಷ್ಣ, ಸರಳ, ಸಜ್ಜನಮೂರ್ತಿ, ನಿಗರ್ವಿ, ಸದಾ ಹಸನ್ಮುಖಿ ಇಂತಹ ವ್ಯಕ್ತಿ ಈಗ ೬೫ರ ವಸಂತ.
ಕರ್ನಾಟಕ ಸಂಘದಿಂದ ಅಭಿನಂದನಾ ಗ್ರಂಥ
ಮಂಡ್ಯದ ಕರ್ನಾಟಕ ಸಂಘವು ರಾಮಕೃಷ್ಣ ಅವರ ಗೌರವಾರ್ಥ ‘ಸ್ನೇಹಜೀವಿ’ ಎಂಬ ಜೀವನ ಚರಿತ್ರೆ ಹಾಗೂ ‘ಸಾಧನಾ ಪಥ’ ಎಂಬ ಅಭಿನಂದನಾ ಗ್ರಂಥವೊಂದನ್ನು ಹೊರತಂದಿದೆ.
ಪ್ರತಿವರ್ಷವೂ ವಿವಿಧ ಕ್ಷೇತ್ರಗಳ ಇಬ್ಬರು ಸಾಧಕರನ್ನು ಗುರುತಿಸಿ ಅವರ ಹೆಸರಿನಲ್ಲಿ ತಲಾ ೫೦,೦೦೦ ರೂ. ನಗದು ಹಾಗೂ ಪ್ರಶಸ್ತಿ ಫಲಕದೊಡನೆ ಗೌರವಿಸಲು ಸಂಘವು ಮುಂದಡಿ ಇಟ್ಟಿದೆ. ಪ್ರಸ್ತುತ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಓರ್ವ ವ್ಯಕ್ತಿಗೆ ‘ಬಿ. ರಾಮಕೃಷ್ಣ ಸಾಹಿತ್ಯ ಪ್ರಶಸ್ತಿ’ ಮತ್ತು ಸ್ವಾತಂತ್ರ್ಯಾ ನಂತರದ ಸಂದರ್ಭದಲ್ಲಿ ಶಿಕ್ಷಣ ಒಂದು ಸೇವೆ ಎಂದು ಪರಿಭಾವಿಸಿ ಗ್ರಾಮೀಣ ಪ್ರದೇಶದಲ್ಲಿ ಅಂದು ಪ್ರಾರಂಭ ಮಾಡಿದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ‘ಬಿ. ರಾಮಕೃಷ್ಣ ಶಿಕ್ಷಣ ಸಂಸ್ಥೆ ಪ್ರಶಸ್ತಿ’ ನೀಡಲು ಮುಂದಾಗಿದೆ. ಅದರಂತೆ ‘ಶ್ರೀ ಬಿ. ರಾಮಕೃಷ್ಣ ಸಾಹಿತ್ಯ ಪ್ರಶಸ್ತಿ’ಗೆ ತುಮಕೂರಿನ ಡಾ. ಚಿಕ್ಕಣ್ಣ ಯಣ್ಣೆಕಟ್ಟೆಯವರು ಆಯ್ಕೆಯಾಗಿದ್ದಾರೆ. ‘ಬಿ. ರಾಮಕೃಷ್ಣ ಶಿಕ್ಷಣ ಸಂಸ್ಥೆ ಪ್ರಶಸ್ತಿ’ಗೆ ಮಂಡ್ಯದ ಕೊತ್ತತ್ತಿ ಗ್ರಾಮದ ಶ್ರೀ ವಿದ್ಯಾಗಣಪತಿ ಪ್ರೌಢಶಾಲೆ ಭಾಜನವಾಗಿದೆ.
ಬಿ. ರಾಮಕೃಷ್ಣ ಸಾಹಿತ್ಯ ಪ್ರಶಸ್ತಿ ಪುರಸ್ಕೃತ – ಡಾ. ಚಿಕ್ಕಣ್ಣ ಯಣ್ಣೆಕಟ್ಟೆ
ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಅಪ್ಪಟ ಗ್ರಾಮೀಣ ಪ್ರತಿಭೆ. ತುಮಕೂರು ಜಿಲ್ಲೆಯ ಯಣ್ಣೆಕಟ್ಟೆ ಗ್ರಾಮದವರು. ಓದಿದ್ದು ಎಂ.ಎ. ಜೊತೆಗೆ ಪಡೆದದ್ದು ಪಿಎಚ್. ಡಿ. ಪದವಿ. ಸರ್ಕಾರಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆಯಿಂದ ನಿವೃತ್ತಿ. ಜಾನಪದ ಸಾಹಿತ್ಯ ಅವರ ಅಚ್ಚುಮೆಚ್ಚಿನ ಕ್ಷೇತ್ರ. ಜಾನಪದ ಪ್ರಕಾರದ ಮೂಡಲಪಾಯ ಯಕ್ಷಗಾನ, ಜುಂಜಪ್ಪನ ಕಾವ್ಯ ಮುಂತಾದ ಪ್ರಕಾರಗಳಲ್ಲಿ ಕೈಯಾಡಿಸಿರುವ ಚಿಕ್ಕಣ್ಣ ಅವರು ಸಾಹಿತ್ಯದ ವಿಮರ್ಶಾ ಕ್ಷೇತ್ರದಲ್ಲೂ ಹಲವಾರು ಪುಸ್ತಕಗಳನ್ನು ತಂದಿದ್ದಾರೆ. ನಮ್ಮ ನೆಲದ ಸಾಂಸ್ಕೃತಿಕ ನಾಯಕರಾದ ಮೈಲಾರಲಿಂಗ, ಜುಂಜಪ್ಪ ಅವರ ಬಗ್ಗೆ ಶಿಸ್ತೀಯವಾಗಿ ಅಧ್ಯಯನ ನಡೆಸಿದ್ದಾರೆ. ಶ್ರೀಯುತರಿಗೆ ‘ಉತ್ತಮ ನಾಟಕ ಪ್ರಶಸ್ತಿ’, ‘ಜಾನಪದ ಅಕಾಡೆಮಿ ಪ್ರಶಸ್ತಿ’, ‘ಗೊರೂರು ಪ್ರಶಸ್ತಿ’, ಸರ್ಕಾರದ ‘ಸರ್ವೋತ್ತಮ ಸೇವಾ ಪುರಸ್ಕಾರ’ ಮುಂತಾದ ಪ್ರಶಸ್ತಿಗಳು ಸಂದಿವೆ.
ಬಿ.ರಾಮಕೃಷ್ಣ ಶಿಕ್ಷಣ ಸಂಸ್ಥೆ ಪ್ರಶಸ್ತಿ ಪುರಸ್ಕೃತ
ಶ್ರೀ ವಿದ್ಯಾಗಣಪತಿ ಶಿಕ್ಷಣ ಸಂಸ್ಥೆ ಬಿ.ರಾಮಕೃಷ್ಣ ಶಿಕ್ಷಣ ಸಂಸ್ಥೆ ಪ್ರಶಸ್ತಿಗೆ ಭಾಜನವಾಗಿರುವ ಶ್ರೀ ವಿದ್ಯಾಗಣಪತಿ ಶಿಕ್ಷಣ ಸಂಸ್ಥೆ ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಗ್ರಾಮದಲ್ಲಿ ೧೯೬೨ರಲ್ಲಿ ಸ್ಥಾಪಿತವಾಗಿರುವ ಶಿಕ್ಷಣ ಸಂಸ್ಥೆ. ಕೊತ್ತತ್ತಿ ಮತ್ತು ಸುತ್ತಮುತ್ತಲ ಗ್ರಾಮಗಳ ಅನೇಕ ಹಿರಿಯರು ತಮ್ಮ ಪರಿಸರದಲ್ಲಿ ಶಿಕ್ಷಣದ ಪ್ರಸಾರಕ್ಕಾಗಿ ಪ್ರಾರಂಭ ಮಾಡಿದ ಸಂಸ್ಥೆ ಇದಾಗಿದ್ದು, ಇತ್ತೀಚಿನವರೆಗೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಜ್ಞಾನದಾಸೆಯನ್ನು ಪೂರೈಸುತ್ತಾ ಬರುತ್ತಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಶಿಕ್ಷಣಕ್ಕೆ ತನ್ನನ್ನು ಒಡ್ಡಿಕೊಂಡಿರುವ ಈ ಸಂಸ್ಥೆ, ವೃತ್ತಿಪರ ಶಿಕ್ಷಣ ಕೋರ್ಸ್‌ಗಳನ್ನು ತೆರೆದು ವಿದ್ಯಾರ್ಥಿಗಳಲ್ಲಿ ಕೌಶಲದ ಪ್ರಜ್ಞೆಯನ್ನು ಮೂಡಿಸುತ್ತಿದೆ.





